ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿಗೂಢ ಬಯಲಿಗೆ

ಚರ್ಚೆ
Last Updated 23 ಮಾರ್ಚ್ 2015, 19:30 IST
ಅಕ್ಷರ ಗಾತ್ರ

‘ಜಾಗೃತರಾದ ಮತ್ತು ಮುಂದಾಲೋಚನೆಯುಳ್ಳ ಮೇಲ್ವರ್ಗದ ಅಲ್ಪಸಂಖ್ಯಾತ ಸಮುದಾಯಗಳು ಈ ಎರಡೂ ಇಲ್ಲದ, ಅಸಂಘಟಿತವಾದ ಬಹುಸಂಖ್ಯಾತ ತಳಸಮುದಾಯಗಳನ್ನು ತಮ್ಮ ಹಿತಾಸಕ್ತಿಗೆ ಪೂರಕವಾಗಿ ನಿಯಂತ್ರಿಸಲು ಯತ್ನಿಸುತ್ತವೆ’ ಎಂದು 1943ರಲ್ಲಿ ಬಿ.ಆರ್‌. ಅಂಬೇಡ್ಕರ್‌ ಹೇಳಿದ್ದ ಮಾತು ಇಂದಿಗೂ ಸತ್ಯವಾಗಿದೆ.

ದೇಶದ ಸಾರ್ವಜನಿಕ ನೀತಿಯನ್ನು ನೋಡಿದರೆ, ಅದು ಬಡವರು, ಅಂಚಿನಲ್ಲಿರುವ ಹಾಗೂ ಸುಲಭ ಭೇದ್ಯ ಸಮುದಾಯಗಳನ್ನು ಅಭಿವೃದ್ಧಿ ಪ್ರಕ್ರಿಯೆಯಿಂದ ಹೊರಗಿಡಲೆಂದೇ ವಿನ್ಯಾಸ ಮಾಡಿದಂತಿದೆ. ಒಟ್ಟಾರೆ ಜನಸಂಖ್ಯೆಯಲ್ಲಿ ಈ ಅವಕಾಶವಂಚಿತರ ಪ್ರಮಾಣ ಶೇ 85ರಷ್ಟಿದ್ದರೂ ಅವರ ಅಭಿವೃದ್ಧಿ  ಬಗ್ಗೆ ಯಾರೂ ಏನೂ ಹೇಳುತ್ತಿಲ್ಲ. ಅವರು ಪರಿಶಿಷ್ಟ ಜಾತಿ– ಪಂಗಡ, ಒಬಿಸಿ, ಧಾರ್ಮಿಕ ಅಲ್ಪಸಂಖ್ಯಾತರು, ಜಾತಿ ಮತ್ತು ವರ್ಗಾತೀತವಾಗಿ ಮಹಿಳೆಯರನ್ನು ಪ್ರತಿನಿಧಿಸುತ್ತಾರೆ. ಇಲ್ಲಿ ಎಲ್ಲದರ ನಡುವೆಯೂ ಗುಂಪುಗಳಿವೆ. ಅವು ಯಾವುದೇ ಜಾತಿ, ಧರ್ಮ, ಲಿಂಗ, ರಾಷ್ಟ್ರೀಯತೆಯನ್ನು ಮೀರಿದವು ಮತ್ತು ಅದರೊಳಗೇ ನಿತ್ಯ ಕ್ರಿಯಾಶೀಲವಾಗಿರುವ ಅಂಶಗಳು. ಉದಾಹರಣೆಗೆ: ಮಹಿಳೆ ಎಲ್ಲ ಕಾಲ, ಧರ್ಮ, ಜಾತಿ, ಉಪ ಜಾತಿಗಳನ್ನೆಲ್ಲ ಮೀರಿ ನಿತ್ಯ ಶೋಷಿತಳು.

ದೇಶದ ಅಭಿವೃದ್ಧಿ ತಜ್ಞರು ಯೋಜನೆಗಳನ್ನು ರೂಪಿಸುವಾಗ, ಐತಿಹಾಸಿಕವಾಗಿ ನಿರ್ಲಕ್ಷ್ಯಕ್ಕೆ ಒಳಗಾದ ಸಮುದಾಯಗಳನ್ನು ಪ್ರತ್ಯೇಕಿಸಿ, ಅವರ ನಿಜವಾದ ಅಗತ್ಯಗಳನ್ನು ಮರೆಮಾಚಿ ಬಿಡುತ್ತಾರೆ. ಜಾತಿ ಜನಗಣತಿಯ ವಿರುದ್ಧವಾಗಿರುವ ಪಟ್ಟಭದ್ರ ಹಿತಾಸಕ್ತಿಗಳ ಊಹಾತ್ಮಕ ಮತ್ತು ಉದ್ವೇಗದ ವಾದಗಳು ಇಂತಹವರ ಬದುಕನ್ನು ಇನ್ನಷ್ಟು ದುರ್ಬರಗೊಳಿಸಿ, ವಿನಾಶದತ್ತ ತಳ್ಳುವ ಉದ್ದೇಶವನ್ನು ಹೊಂದಿವೆ. ಈ ಮೂಲಕ, ಜಾಗೃತಗೊಂಡ ಮತ್ತು ಮುಂದಾಲೋಚನೆಯುಳ್ಳ ಮೇಲ್ವರ್ಗದ ಅಲ್ಪಸಂಖ್ಯಾತ ಸಮುದಾಯಗಳು ಯಥಾರೀತಿ ಅಬಾಧಿತವಾಗಿ ಉಳಿಯುತ್ತವೆ. ಇದರಿಂದ ಮತ್ತೊಮ್ಮೆ ಸಂವಿಧಾನದ ಸಮಾನತೆಯ ಆಶಯಗಳು ಮೂಲೆ ಹಿಡಿಯುತ್ತವೆ. ಹೀಗಾಗಿ ಶೇ 85ರಷ್ಟಿರುವ  ನಮ್ಮೆಲ್ಲರಿಗೂ ಆರೋಗ್ಯ, ಶಿಕ್ಷಣ, ಉದ್ಯೋಗಾವಕಾಶ, ಜೀವನೋಪಾಯ ಮತ್ತು ಸಂಪನ್ಮೂಲಗಳ ಸಮಾನ ಹಂಚಿಕೆಯ ಪ್ರಕ್ರಿಯೆಯನ್ನು ಕ್ರಮಬದ್ಧಗೊಳಿಸಲು ಜಾತಿಗಣತಿ ಒಂದು ಸುವರ್ಣ ಅವಕಾಶ.

ರಾಜ್ಯದಲ್ಲಿ 20ನೇ ಶತಮಾನದ ಆದಿಯಲ್ಲೇ ಶೋಷಿತ ಸಮುದಾಯಗಳ ಘನತೆಯನ್ನು ಎತ್ತಿ ಹಿಡಿಯಲು ಮೀಸಲಾತಿ ನೀತಿ ಜಾರಿಗೆ ಬಂತು. ಇದಕ್ಕೆ ಬಲವಾದ ಆಧಾರ ಒದಗಿಸಿದ್ದು ಅಂದಿನ ಜಾತಿಗಣತಿಯಿಂದ ಹೊರಬಂದ ಸತ್ಯಾಂಶಗಳು. ಆ ನಂತರ ನಮ್ಮಲ್ಲಿ ಅನೇಕ ಆಯೋಗಗಳು, ಸಮಿತಿಗಳ ವರದಿಗಳು, ಅಸಂಖ್ಯಾತ ಅಧ್ಯಯನಗಳು ಹೊರಬಂದಿವೆ. ಆದರೆ ಸೀಮಿತ ಪರಿಧಿಯ ಇವು ರಾಜ್ಯದ ಸಮಗ್ರ ಜನಮಾನಸದ ಹಿತಾಸಕ್ತಿಯನ್ನು ಹೊಂದಿರಲಿಲ್ಲ.

ಈಗಿನ ಉದ್ದೇಶಿತ ಜಾತಿಗಣತಿಯಲ್ಲಿರುವ ಮಾನವತಾವಾದಿ ಅಂಶಗಳನ್ನು ಪರಿಗಣಿಸುವುದಾದರೆ, ಇಲ್ಲಿ ಜಾತಿ, ಮತ, ಧರ್ಮಗಳ ಬಗ್ಗೆ ನಂಬಿಕೆ ಇಲ್ಲದವರು ಇವನ್ನೆಲ್ಲ ನಿರಾಕರಿಸಲು ಸಹ ಅವಕಾಶಗಳಿವೆ. ಹೀಗಾಗಿ ಯಾರು ಬೇಕಾದರೂ ತಮ್ಮನ್ನು ಜಾತ್ಯತೀತರು, ಧರ್ಮಾತೀತರು ಎಂದು ಸಹ ನಮೂದಿಸಬಹುದಾಗಿದೆ. ಆದ್ದರಿಂದ  ಒತ್ತಾಯರಹಿತವಾದ ಆರೋಗ್ಯಕರ ಸ್ಥಿತಿಯೊಂದು ಈ ಜಾತಿಗಣತಿಯಲ್ಲಿ ಹಾಸುಹೊಕ್ಕಾಗಿದೆ.

ದೇಶಕ್ಕೆ ಜಾತಿಗಣತಿ ಹೊಸದಲ್ಲ. 1931ರವರೆಗೂ ಇದು ನಡೆದಿತ್ತು. ಆ ನಂತರದಲ್ಲಿ ಇದನ್ನು ನಡೆಯದಂತೆ ನೋಡಿಕೊಳ್ಳಲಾಯಿತು. ಅಂಬೇಡ್ಕರ್ ಅವರು ಇದರ ವಿರುದ್ಧ ತಿರುಗಿ ಬಿದ್ದಿದ್ದರು ಮತ್ತು ಜಾತಿಗಣತಿಗೆ ಒತ್ತಾಯಿಸಿದ್ದರು. ಈ ಮೂಲಕವೇ ಜಾತಿ ನಿರ್ಮೂಲನೆ ಸಾಧ್ಯವೆಂದು ಹೇಳಿದ್ದರು. ನಮ್ಮ ಬಳಿ ಖಚಿತವಾದ ದತ್ತಾಂಶಗಳಿಲ್ಲದೇ ಹೋದಲ್ಲಿ ನಾವು ನಮ್ಮ ಹಕ್ಕುಗಳಿಗಾಗಲಿ, ಪ್ರಜಾತಾಂತ್ರಿಕ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವಿಕೆಯನ್ನಾಗಲಿ ಪ್ರತಿಪಾದಿಸಲಾಗದು ಎಂದಿದ್ದರು.

ಬೆಂಗಳೂರಿನ ರಾಷ್ಟ್ರೀಯ ಕಾನೂನು ಶಾಲೆಯ`‘ಸಾಮಾಜಿಕ ಪ್ರತ್ಯೇಕತೆ ಮತ್ತು ಒಳಗೊಳ್ಳುವಿಕೆ ನೀತಿ ಅಧ್ಯಯನ ಕೇಂದ್ರವು’ ಹೊರತಂದಿರುವ ಮಾನವ ಅಭಿವೃದ್ಧಿ ಸೂಚ್ಯಂಕಗಳನ್ನೊಳಗೊಂಡ (ಎಚ್.ಡಿ.ಐ) ವರದಿಯನ್ನು ಗಮನಿಸಬೇಕು. ಇಲ್ಲಿ ಪರಿಶಿಷ್ಟ ಜಾತಿಗಳ ಎಚ್.ಡಿ.ಐ 0.228 ಇದ್ದರೆ, ಪ.ಪಂಗಡಗಳದು 0.378, ಹಾಗೆಯೇ ಒಬಿಸಿಗಳ ಎಚ್.ಡಿ.ಐ 0.331. ಆದರೆ ಸಾಮಾನ್ಯ ವರ್ಗದ ಜನಸಂಖ್ಯೆಯ ಎಚ್.ಡಿ.ಐ 0.441 ಆಗಿದೆ. ಇದು ಮೂಲ ಸೌಲಭ್ಯಗಳಾದ ಆರೋಗ್ಯ ಮತ್ತು ಶಿಕ್ಷಣದಲ್ಲಾಗಿರುವ ವ್ಯತ್ಯಾಸವನ್ನು ಸ್ಪಷ್ಟವಾಗಿ ಹೇಳುತ್ತದೆ. ಹಾಗೆಯೇ ಒಬಿಸಿಗಳ ಮೇಲೆ ನಡೆದ ಅಧ್ಯಯನವು ರಾಜ್ಯದಲ್ಲಿ ಶೇ 40ರಷ್ಟಿರುವ ಒಬಿಸಿ ಸಮುದಾಯಗಳಿಗೆ ಆಯವ್ಯಯದಲ್ಲಿ ಶೇ 1ರಷ್ಟು ಪಾಲು ನೀಡಿರುವುದನ್ನು ಗುರುತಿಸಿದೆ. ದೇಶದ  ಒಟ್ಟು ಜನಸಂಖ್ಯೆಯಲ್ಲಿ ಶೇ 52ರಷ್ಟಿರುವ ಒಬಿಸಿಗಳಿಗೆ ಶೇ 27ರಷ್ಟು ಮೀಸಲಾತಿ ನೀಡಲಾಗಿದೆ. ಆದಿವಾಸಿಗಳು ಮತ್ತು ಧಾರ್ಮಿಕ ಅಲ್ಪಸಂಖ್ಯಾತರ ಆರೋಗ್ಯ, ಶೈಕ್ಷಣಿಕ ಸೂಚ್ಯಂಕಗಳು ತೀರಾ ಕಡಿಮೆ ಇದ್ದಾಗ್ಯೂ ಆಯವ್ಯಯದಲ್ಲಿ ಅವರಿಗೆ ನೀಡಿರುವ ಪಾಲು ತೀರಾ ಹೀನಾಯವಾಗಿದೆ. 

ಮಹಿಳೆಯರ ಲಿಂಗಾನುಪಾತದ ಸ್ಥಿತಿ ಸಹ ಮುಂದುವರಿದ ಜಾತಿಗಳಲ್ಲಿ ಆತಂಕಕಾರಿ ಸ್ಥಿತಿಯಲ್ಲಿರುವುದನ್ನು 1931ರ ಗಣತಿಯಲ್ಲಿಯೇ ಗುರುತಿಸಲಾಗಿದೆ. ಈ ನಡುವಿನ ಅವಧಿಯಲ್ಲಿ ಇದರಲ್ಲಿ ಮಹತ್ತರ ಬದಲಾವಣೆಯಾಗಿರುವ ಯಾವ ಸೂಚನೆಗಳೂ ನಮ್ಮ ಮುಂದಿಲ್ಲ. ಈಗಲೂ ಮಹಿಳೆಯರಲ್ಲಿ ಅದೇ ಅನಕ್ಷರತೆ, ನಿರುದ್ಯೋಗ, ಅಪೌಷ್ಟಿಕತೆ, ಅನಾರೋಗ್ಯ ಮುಂದುವರಿದಿದೆ. ಇದು ಇಷ್ಟೇ ಪ್ರಬಲವಾಗಿ ಧಾರ್ಮಿಕ ಅಲ್ಪಸಂಖ್ಯಾತರು, ಲೈಂಗಿಕ ಅಲ್ಪಸಂಖ್ಯಾತರನ್ನೂ ಕಾಡುತ್ತಿದೆ.

ಆಳವಾಗಿ ಬೇರೂರಿರುವ ಜಾತೀಯತೆಯ ಕಾರಣದಿಂದಾಗಿಯೇ ಈ`‘ಗುಂಪು ಅಸಮಾನತೆ’ ಸೃಷ್ಟಿಯಾಗಿ, ಸ್ಥಿರಗೊಂಡಿರುವುದನ್ನು ಯಾರೂ ನಿರಾಕರಿಸಲಾಗದು. ಏಕೆಂದರೆ ಭಾರತದಲ್ಲಿ ಜಾತಿ ಎಂಬುದು ಕಠೋರ ಸತ್ಯ. ಇದನ್ನೇ ರಾಮಮನೋಹರ ಲೋಹಿಯಾ, ‘ಭಾರತದಲ್ಲಿ ಜಾತಿ ಎಂಬುದು ಕಂತು ಪಾವತಿಸಬೇಕಾಗಿಲ್ಲದ ಜೀವವಿಮೆ’ ಎಂದಿದ್ದರು. ಈವರೆಗೂ ಈ ಜೀವವಿಮೆ ವ್ಯವಹಾರದಲ್ಲಿ ಯಾರ ಯಾರ ಕ್ಲೈಮುಗಳು ಎಷ್ಟೆಷ್ಟು ಮೊತ್ತಕ್ಕೆ ತೀರ್ಮಾನವಾಗಿವೆ ಎಂಬ ಲೆಕ್ಕಾಚಾರ ಈ ಕ್ಷಣಕ್ಕೆ ನಮ್ಮ ಮುಂದಿಲ್ಲ. ಇದನ್ನು ಈ ಜಗತ್ತಿನಲ್ಲಿ ಮುಂದೆ ಅನಾವರಣ ಗೊಳಿಸಬಹುದಾದ ಏಕೈಕ ಸಾಧನವೆಂದರೆ ಜಾತಿಗಣತಿ. ಅದನ್ನು ಮಾಡಲು ಬಿಟ್ಟರೆ ದೇಶಕ್ಕೆ ಆಗುವ ಅನಾಹುತಗಳೇನೂ ಇಲ್ಲ.  ಇರುವುದಾದರೆ ಸಣ್ಣ ಸಾಮಾಜಿಕ ನ್ಯಾಯ ದೇಶದ ಕನಿಷ್ಠ ಶೇ 85 ಭಾಗ ಜನಕ್ಕೆ ದೊರೆಯುವ ಪ್ರಶ್ನೆ. ಅದೂ ಸಿಗುತ್ತದೋ ಇಲ್ಲವೋ ಅದು ಬೇರೆ ಪ್ರಶ್ನೆ. ಆದರೆ ಅಂತಹ ಸಣ್ಣ ಕನಸೊಂದನ್ನು ಕೂಡ ಅವರಿಂದ ಕಸಿದುಕೊಳ್ಳುವುದು ಯಾಕೆ?

ಲೇಖಕರು ನಿರ್ದೇಶಕರು, ಸಾಮಾಜಿಕ ಪ್ರತ್ಯೇಕತೆ ಮತ್ತು ಒಳಗೊಳ್ಳುವಿಕೆ ನೀತಿ ಅಧ್ಯಯನ ಕೇಂದ್ರ, ರಾಷ್ಟ್ರೀಯ ಕಾನೂನು ಶಾಲೆ, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT