ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿಮ್ಮ ಸ್ವರ್ಗ ನಿಮ್ಮಲ್ಲೇ

Last Updated 19 ಜುಲೈ 2016, 19:30 IST
ಅಕ್ಷರ ಗಾತ್ರ

ತುಂಬ ಜನರು ಒಂದು ಅರ್ಧ ಘಂಟೆ ಧ್ಯಾನ ಮಾಡಿ ಅನಂತರ ನಿತ್ಯದ ಜೀವನಕ್ಕೆ ಮರಳುತ್ತಾರೆ. ಆದರೆ ಇಡಿಯ ಆ ದಿನದಲ್ಲಿ ಧ್ಯಾನಶೀಲತೆಯಾಗಲೀ ಪ್ರಾರ್ಥನಶೀಲತೆಯಾಗಲೀ ಇರುವುದಿಲ್ಲ. ಸೊರಗಿರುವ, ಸಪ್ಪೆಯಾಗಿರುವ ಆ ಜೀವನವನ್ನು ತಾಜಾತನವ್ನನಾಗಿಸಿಕೊಳ್ಳಲು ಧ್ಯಾನವನ್ನು ಇಡಿಯ ದಿನದ ಕಲಾಪವನ್ನಾಗಿಸಿಕೊಳ್ಳಿ. ಯಾವುದೇ ‘ಐಡಿಯಾ’ – ಕಲ್ಪನೆಯನ್ನು ಉಪೇಕ್ಷಿಸಬೇಡಿ.

ಜನರು ಸಾಮಾನ್ಯವಾಗಿ ಅವರಿಗೆ ಸ್ಫುರಿಸುವ ಕಲ್ಪನೆಯ ಬಗ್ಗೆ ಕೀಳಾಗಿ ಕಾಣುತ್ತಾರೆ. ಏಕೆಂದರೆ ಅದು ಅವರಿಗೆ ಸರಿಯಾಗಿ ಅರ್ಥವಾಗಿರುವುದಿಲ್ಲ.  ‘ಏನು ಇದೆಲ್ಲ, ಅರ್ಥವಿಲ್ಲದ್ದು’ ಎಂದು ನಮ್ಮ ಅಹಂ ಅದನ್ನು ನಿರಾಕರಿಸುತ್ತಿರುತ್ತದೆ. ನಿಮ್ಮ ಋಣಾತ್ಮಕತೆಯ ಸಂಗತಿಗಳಾದ ಗೊಂದಲ, ವಿಷಾದ, ಖಿನ್ನತೆ, ನಿರಾಸಕ್ತಿ, ಸಂದೇಹ, ಮೋಹ, ದ್ವೇಷ – ಮುಂತಾದವುಗಳನ್ನು ಬೆಳೆಸುವುದಕ್ಕೆ ನಿಮ್ಮ ಅಹಂಗೆ ಅವಕಾಶ ಕೊಡಬೇಡಿ.

ನಿಮ್ಮ ಅಹಂಅನ್ನು ಸುಮ್ಮನಾಗಿಸಿ. ಧ್ಯಾನದ ಆನಂದದಲ್ಲಿ ಇಡಿಯ ದಿನವನ್ನು ನಿಮ್ಮದಾಗಿಸಿಕೊಳ್ಳಿ; ಧ್ಯಾನದ ಮೌನದಲ್ಲಿ ನಿದ್ರೆ ಮಾಡಿರಿ. ಋಣಾತ್ಮಕವಾದ ಎಲ್ಲ ಭಾವನೆಗಳೂ ಅಸಹಜವಾದಂಥವು. ನಿಮ್ಮ ಆನಂದವಷ್ಟೆ ಸತ್ಯವಾದುದು. ನೀವು ಸತ್ಯವನ್ನು ಉಪೇಕ್ಷಿಸಬಹುದು; ಆದರೆ ಅದನ್ನು ಬದಲಾಯಿಸಲು ಸಾಧ್ಯವಿಲ್ಲ.

ಸತ್ಯ ಶಾಶ್ವತವಾದುದು; ಅದು ಹಿಮಾಲಯದ ನೀರಿನ ಚಿಲುಮೆಯಂತೆ ಸ್ಚಚ್ಛವಾದುದು ಮತ್ತು ಮಧುರವಾದುದು. ನಿಮ್ಮೊಳಗೆ ಏಳುವಂಥ ಉದ್ವೇಗದ ಕ್ಷಣಗಳು ಅವು ನಿಮ್ಮದೇ ಅರ್ಥದಿಂದು ಹುಟ್ಟಿಕೊಂಡ ಕ್ಷಣಿಕವಾದ ಸಂಗತಿಗಳಷ್ಟೆ.

ನಿಮ್ಮಲ್ಲಿ ಯಾವುದೋ ಒಂದು ಅಹಿತಕರವಾದ ಭಾವವೊಂದು ಉಂಟಾಗಿದೆ ಎಂದರೆ ನೀವು ‘ನಾನೇ ಆನಂದ’ ಎಂಬ ಸತ್ಯವನ್ನು ಮರೆತಿದ್ದೀರಿ ಎಂದೇ ಅರ್ಥ. ನೀವಿದನ್ನು ಪದೇ ಪದೇ ಜ್ಞಾಪಿಸಿಕೊಳ್ಳುತ್ತಿರಿ. ಉದ್ವೇಗದಲ್ಲಿ ನಿಮ್ಮ ತುಟಿ ಬಿಗಿಯಾದಾಗ, ಕೋಪ ನಿಮ್ಮತ್ತ ನುಗ್ಗಿ ಬಂದಾಗ, ನಿರಾಶೆಯು ಕವಿದಾಗ, ಭಯ ಆವರಿಸಿದಾಗ, ಸಮಾಧಾನವನ್ನು ತಾಳಿ, ಮೂರು ಸಲ ದೀರ್ಘವಾದ ಉಸಿರನ್ನು ಎಳೆದುಕೊಳ್ಳಿ, ಐದು ಸಲ ‘ನಾನು ಆನಂದ’ ಎನ್ನುವುದನ್ನು ಮನನ ಮಾಡಿ. ‘ನಾನು ಆನಂದ’ ಎನ್ನುವುದರ ಕಡೆಗೆ ಹೆಚ್ಚಿನ ಗಮನವನ್ನು ಕೊಡಿ.

ನೀವು ಇಂಥ ಏಕಾಗ್ರತೆಯನ್ನು ಸಾಧಿಸಿದ್ದೇ ಆದರೆ ಹಲವು ಅಪೂರ್ವ ಕನಸುಗಳು ನಿಮ್ಮಲ್ಲಿ ಹುಟ್ಟುತ್ತವೆ, ಕಾವ್ಯಮನೋಧರ್ಮವೂ ನಿಮ್ಮದಾಗುತ್ತದೆ. ಜೀವನದ ಹಲವು ಸಂದರ್ಭಗಳೊಂದಿಗೆ ನೀವು ತಾದಾತ್ಮ್ಯವನ್ನು ಹೊಂದಬಲ್ಲಿರಿ. ನಿಮ್ಮ ನೋವುಗಳು, ನಿಮ್ಮ ಸಂಕಟಗಳು ಕೊನೆಯಾಗುತ್ತವೆ. ಜೀವನದ ಉಜ್ವಲತೆಯೊಂದಿಗೆ ನೀವು ಸಮನ್ವಯ ಸಾಧಿಸಿದಂತೆಲ್ಲ – ಆ ಅಮೂಲ್ಯ ಕ್ಷಣಗಳು – ನಿಮ್ಮ ಪರಿಪೂರ್ಣ ಆರೋಗ್ಯಕ್ಕೂ ಕಾರಣವಾಗುತ್ತವೆ.

ನಿಮ್ಮಲ್ಲಿರುವ ಪ್ರತಿಯೊಂದು – ಒಂದೊಂದು ಜೀವಕಣ, ಅಂಗಗಳೂ – ಕೂಡ ಈ ತಾದಾತ್ಮ್ಯ ಮತ್ತು ಸಮನ್ವಯಕ್ಕೆ ಪೂರಕವಾಗಿಯೇ ಇರುವಂಥವು. ಇವುಗಳ ಈ ವಿನ್ಯಾಸ ಶ್ರುತಿಬದ್ಧ ಸಂಗೀತದಂತೆ ಸಾಮರಸ್ಯದಿಂದ ಕೂಡಿರುತ್ತದೆ. ಇದೇ ಏಕಾಗ್ರತೆಯ ಶಕ್ತಿ.

ಈ ಕ್ಷಣದಿಂದ ಪ್ರತಿಯೊಂದು ಒಳಿತಿಗೂ ಸಂತೋಷಕ್ಕೂ ಆನಂದಕ್ಕೂ ನಿಮ್ಮನ್ನು ನೀವು ಶ್ರುತಿಗೊಳಿಸಿಕೊಳ್ಳುವಂಥ ಎಚ್ಚರ ನಿಮ್ಮದಾಗಲಿ. ಜೀವನದೊಂದಿಗೆ ಇಂಥದೊಂದು ಸಾಮರಸ್ಯಸ್ಥಿತಿ ನಿಮ್ಮಲ್ಲಿ ಸಿದ್ಧಿಸಿದರೆ ಆಗ ನಿಮ್ಮ ಗ್ರಹಿಕೆಗಳನ್ನು ಬದಲಾಯಿಸಿಕೊಳ್ಳಬಹುದು; ಸತ್ಯದೊಂದಿಗೆ ಎಂದೂ ಮುರಿಯದ ನಂಟನ್ನು ಹೊಂದಿ ಸ್ವರ್ಗಸದೃಶವಾದ ಶಾಂತಿಯನ್ನೂ ಸಂತೋಷವನ್ನೂ ಪಡೆಯಬಹುದು.

ಸ್ವರ್ಗ ಎನ್ನುವುದು ಬೇರೆ ಎಲ್ಲೋ ದೂರದಲ್ಲಿರುವುದು, ಸತ್ತ ಮೇಲಷ್ಟೆ ಅಲ್ಲಿಗೆ ಹೋಗಲಾದೀತು ಎಂಬ ಮಾತು ಸುಳ್ಳು ಎಂಬುದು ಆಗ ನಿಮಗೆ ಮನವರಿಕೆಯಾಗುತ್ತದೆ. ಸಾವಿನ ಮಾತನ್ನೇ ನೀವು ಆಡುವುದಿಲ್ಲವೆನ್ನಿ!

ಋಣಾತ್ಮಕವಾದ ಆಲೊಚನೆಗಳೆಲ್ಲವೂ ನಿಮ್ಮಿಂದ ದೂರವಾಗಲಿ. ನಿಮ್ಮ ಆನಂದವನ್ನು ನೀವು ಸವಿಯಬಲ್ಲಂಥ ಎಚ್ಚರವನ್ನು ಸಾಧಿಸಿ. ನಿಮ್ಮ ನಡಿಗೆ, ನೀವು ಕುಳಿತ ಭಂಗಿ, ನಿಮ್ಮ ಮಾತು–ನೋಟ–ಊಟ – ಎಲ್ಲವೂ ಎಷ್ಟೊಂದು ಸಹಜವಾದುದು ಎನ್ನುವುದನ್ನು ಅರಿತು ಅನುಭವಿಸಿ.

ಆಕಾಶದ ಸೊಗಸಿನಲ್ಲಿ. ನಮ್ಮ ಕಚೇರಿಯ ವ್ಯವಸ್ಥೆಯಲ್ಲಿ, ಅಂಗಡಿಯ ವ್ಯವಹಾರದಲ್ಲಿ, ಕೆಂಪುದೀಪಕ್ಕೆ ನಿಲ್ಲುವ ಟ್ರಾಫಿಕ್ಕಿನ ಕ್ರಮದಲ್ಲಿ, ನಾವು ಓಡಿಸುವ ವಾಹನದ ವೈಜ್ಞಾನಿಕತೆಯಲ್ಲಿ, ರಿಮೋಟಿನ ಒತ್ತುಗಂಡಿಗೆ ನರ್ತಿಸುವ ಟಿವಿಯಲ್ಲಿ ಇಡಿಯ ದಿನವನ್ನು ಕೃತಜ್ಞತೆಯ ಭಾವದೊಂದಿಗೆ ಸಂತಸದಿಂದ ಕಳೆಯಿರಿ.

ಜೀವನದಲ್ಲಿ ಯಾವುದೋ ಒಂದೆರಡು ಸಂಗತಿಗಳು ಭಯಾನಕವಾಗಿರಬಹುದು, ಗೊಂದಲಮಯವಾಗಿರಬಹುದು; ಆದರೆ ಸಾವಿರಾರು ಸಂಗತಿಗಳು ತುಂಬ ಸರಳವಾಗಿಯೂ ಸುಲಭವಾಗಿಯೂ ನಡೆಯುತ್ತಿರುತ್ತವೆ ಎನ್ನುವುದನ್ನೂ ಗಮನಿಸಿ. ನಿಮ್ಮಲ್ಲಿ ತೋರಿಕೊಳ್ಳುವ ಋಣಾತ್ಮಕವಾದ ಆಲೋಚನೆಗಳನ್ನು ಕತ್ತಲನ್ನು ಬೆಳಕು ಹೇಗೆ ದೂರಮಾಡುವುದೋ ಹಾಗೆ ದೂರ ಮಾಡಿ. ಆಗ ನಿಮ್ಮಳೊಗಿನ ಆನಂದ ಹೆಚ್ಚಾಗುತ್ತಹೋಗುತ್ತದೆ.

ಒಂದು ದಿನ ನೀವು ಸ್ವರ್ಗವನ್ನೂ, ಸ್ವರ್ಗ ನಿಮ್ಮನ್ನೂ ಸ್ಪರ್ಶಿಸುತ್ತದೆ. ವಿಯೆಟ್ನಾಂನ ಬೌದ್ಧಸನ್ಯಾಸಿ ಥಿಕ್‌ ನಾಹ್‌ ಹಾನ್ ಅವರು ತಾಯ್ನೆಲದಿಂದ ಪಾಶ್ಚಾತ್ಯದೇಶಕ್ಕೆ ಶಾಂತಿಸಂದೇಶವನ್ನು ಸಾರಲು ಹೋದರು. ಅಲ್ಲಿಂದ ಹಿಂದಿರುಗಲು ಬಯಸಿದ ಅವರಿಗೆ ಅವರ ಮಾತೃದೇಶ ಅವಕಾಶವನ್ನು ನಿರಾಕರಿಸಿತು. ಆ ಸಂದರ್ಭದ ಬಗ್ಗೆ ಅವರು ಬರೆಯುತ್ತಾರೆ: ‘ನಾನು ಯೂರೋಪನ್ನೇ ನನ್ನ ಮನೆಯಾಗಿ ಸ್ವೀಕರಿಸಿದೆ. ಯೂರೋಪಿನಲ್ಲಿ ಪ್ರತಿಯೊಂದೂ  ಮರಗಳು, ಹಣ್ಣು, ಪಕ್ಷಿಗಳು, ಜನರು – ಭಿನ್ನ.

ನನ್ನ ಸುತ್ತಲಿನ ಜಗತ್ತಿನ ವಿಸ್ಮಯಗಳನ್ನು ಆಸ್ವಾದಿಸುವುದನ್ನು ನಾನು ಅಭ್ಯಸಿಸತೊಡಗಿದೆ. ಫ್ರೆಂಚ್‌ ಮತ್ತು ಜರ್ಮನ್‌ ಮಕ್ಕಳೊಂದಿಗೆ ಆಟವಾಡಿದೆ. ಕ್ಯಾಥೋಲಿಕ್‌, ಪ್ರೊಟೆಸ್ಟಂಟ್‌ ಮಂತ್ರಿಗಳ ಸ್ನೇಹ ಸಂಪಾದಿಸಿದೆ. ಪಾಶ್ಚಾತ್ಯ ಆಹಾರವನ್ನು – ಅನ್ನಕ್ಕೆ ಬದಲಿಗೆ ಬ್ರೆಡ್‌ ತಿಂದೆ. ಅಲ್ಲಿಯ ಬೆಟ್ಟಗಳು, ನದಿಗಳು, ಜನರು, ಮಕ್ಕಳು ಎಷ್ಟೊಂದು ಸುಂದರ ಎಂಬುದನ್ನು ಕಂಡುಕೊಂಡೆ.’ ಥಿಕ್‌ ನಾಹ್‌ ಹಾಣ್‌ ಅಲ್ಲಿ ನಿರ್ಮಿಸಿದ ಹಳ್ಳಿ ಧರೆಗಿಳಿದ ಸ್ವರ್ಗವಾಯಿತು.

ಒಳಿತಾದ ಆಲೋಚನೆಯಲ್ಲಿಯೇ ಯಾವಾಗಲೂ ಮುಳುಗಿರಿ, ಪ್ರತಿಯೊಂದನ್ನೂ ಕಾಣ್ಕೆಯಾಗಿ ನೋಡಿ; ಎಲ್ಲರೂ ಸುಂದರವಾಗಿ ಪರಸ್ಪರ ಸಾಮರಸ್ಯದಿಂದ ಇರುವುದನ್ನು ಅನುಭವಿಸಿ; ಆಗ ನೋಡಿ – ನಿಮ್ಮ ಜಗತ್ತು ಎಷ್ಟೊಂದು ಬದಲಾವಣೆಗೊಂಡಿರುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT