ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿಯಮ ಬೇಕಿಲ್ಲ; ಲಗಾಮಿಗೆ ಜಗ್ಗಲ್ಲ!

ಸಂಚಾರ ನಿಯಮ ಉಲ್ಲಂಘನೆಯಲ್ಲಿ ಬಿಎಂಟಿಸಿ ಮುಂದು!
Last Updated 31 ಜುಲೈ 2015, 20:30 IST
ಅಕ್ಷರ ಗಾತ್ರ

ಬೆಂಗಳೂರು:  ನಗರದಲ್ಲಿ ಸಂಚಾರ ನಿಯಮ ಉಲ್ಲಂಘನೆಯಲ್ಲಿ ಬಿಎಂಟಿಸಿ ಬಸ್‌ಗಳು ಮುಂದು ಎಂಬುದು ಸಂಚಾರ ಪೊಲೀಸರ ಅಂಕಿ ಅಂಶಗಳಿಂದ ಸಾಬೀತಾಗಿದೆ.

ಸಂಚಾರ ನಿಯಮ ಉಲ್ಲಂಘನೆ ಸಂಬಂಧ ಬಿಎಂಟಿಸಿ ಬಸ್‌ಗಳ ವಿರುದ್ಧ ಕಳೆದ ಆರು ತಿಂಗಳಲ್ಲಿ 38,710 ಪ್ರಕರಣ ದಾಖಲಾಗಿವೆ.
‘ಉತ್ತಮ ಸೇವೆ ಮೂಲಕ ಬಿಎಂಟಿಸಿ ರಾಷ್ಟ್ರಮಟ್ಟದಲ್ಲಿ ಹೆಸರು ಪಡೆದಿದೆ ನಿಜ. ಆದರೆ, ಪ್ರಯಾಣಿಕರ ಸುರಕ್ಷತೆಗೆ ಇನ್ನಷ್ಟು ಆದ್ಯತೆ ನೀಡಬೇಕಿದೆ. ಬಿಎಂಟಿಸಿ ಚಾಲಕರಿಂದ ಸಂಚಾರ ನಿಯಮ ಉಲ್ಲಂಘನೆ ಆಗುತ್ತಿರುವುದು ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದೆ. ಇದನ್ನು ಸಂಸ್ಥೆಯ ಗಮನಕ್ಕೂ ತರಲಾಗುತ್ತಿದೆ. ಆದರೆ, ಚಾಲಕರು ಮಾಡುತ್ತಿರುವ ತಪ್ಪುಗಳನ್ನು ಸಂಸ್ಥೆ ಗಂಭೀರವಾಗಿ ಪರಿಗಣಿಸುತ್ತಿಲ್ಲ. ಹೀಗಾಗಿ ಬಿಎಂಟಿಸಿ ಬಸ್‌ಗಳಿಂದ ಆಗುತ್ತಿರುವ ಉಲ್ಲಂಘನೆಗಳು ಹಾಗೂ ಅಪಘಾತಗಳು ಹೆಚ್ಚಾಗುತ್ತಿವೆ’ ಎನ್ನುತ್ತಾರೆ ಸಂಚಾರ ಪೊಲೀಸರು.

ಇದಕ್ಕೆ ಪ್ರತಿಕ್ರಿಯಿಸಿರುವ ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕಿ ಏಕ್‌ರೂಪ್ ಕೌರ್ ‘ಸುರಕ್ಷಿತ ಚಾಲನೆ ಹಾಗೂ ಸಂಚಾರ ನಿಯಮ ಪಾಲನೆ ಬಗ್ಗೆ ತರಬೇತಿ ಕೊಟ್ಟು ಚಾಲಕರನ್ನು ಸೇವೆಗೆ ಕಳುಹಿಸಲಾಗುತ್ತದೆ. ಚಾಲಕನ ಲೋಪ ಸಾಬೀತಾದರೆ, ತಕ್ಷಣವೇ ಸೇವೆಯಿಂದ ಅಮಾನತು ಮಾಡಲಾಗುತ್ತಿದೆ. ಸಂಚಾರ ಪೊಲೀಸರಿಂದ ಅಂಕಿ–ಅಂಶ ತರಿಸಿಕೊಂಡು ಮತ್ತೊಮ್ಮೆ ಪರಿಶೀಲಿಸಲಾಗುವುದು’ ಎಂದು  ಹೇಳಿದರು.

ಮೊಬೈಲ್ ಬಳಕೆ, 1,102 ಪ್ರಕರಣ: ಕರ್ತವ್ಯದ ವೇಳೆ ಚಾಲಕ ಪ್ರಯಾಣಿಕರ ಜತೆ ಮಾತನಾಡಬಾರದು, ಮೊಬೈಲ್ ಸಂಭಾಷಣೆ ನಡೆಸಬಾರದೆಂದು ಸಾರಿಗೆ ಇಲಾಖೆಯ ನಿಯಮವಿದೆ. ಆದರೆ, ಮೊಬೈಲ್ ಸಂಭಾಷಣೆ ನಡೆಸುವ ಬಸ್‌ ಚಾಲಕರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಈ ಸಂಬಂಧ ಆರು ತಿಂಗಳಲ್ಲಿ 1,102 ಪ್ರಕರಣಗಳು ದಾಖಲಾಗಿವೆ. ಕೆಲವರು ಇಯರ್ ಫೋನ್‌ ಹಾಕಿಕೊಂಡು ಸಂಗೀತ ಆಲಿಸಿದರೆ, ಸ್ವಂತ ಕಾಸಿನಲ್ಲಿ ಬಸ್‌ನಲ್ಲಿ ಎಫ್‌ಎಂ ಹಾಕಿಸಿಕೊಂಡಿರುವ ಚಾಲಕರೂ ಇದ್ದಾರೆ ಎನ್ನುತ್ತಾರೆ ಪೊಲೀಸರು.

‘ಕೆಎಸ್‌ಆರ್‌ಟಿಸಿ ಹಾಗೂ ಬಿಎಂಟಿಸಿ ಚಾಲಕರ ಪರವಾನಗಿಗಳು (ಡಿಎಲ್) ಆಯಾ ಸಂಸ್ಥೆಗಳ ವಶದಲ್ಲೇ ಇರುತ್ತವೆ. ಹೀಗಾಗಿ ನಿಯಮ ಉಲ್ಲಂಘಿಸಿ ಸಿಕ್ಕಿಬೀಳುವ ಚಾಲಕನಿಂದ ಸ್ಥಳದಲ್ಲೇ ಡಿಎಲ್ ಜಪ್ತಿ ಮಾಡಲು ಆಗುವುದಿಲ್ಲ. ಸಂಸ್ಥೆಗೆ ನೋಟಿಸ್ ಕಳುಹಿಸಿ, ನಂತರ ಪರವಾನಗಿಯನ್ನು ವಶಕ್ಕೆ ಪಡೆದು ಅಮಾನತಿಗೆ ಕಳುಹಿಸಲಾಗುತ್ತಿದೆ’ ಎಂದು ಪೊಲೀಸರು ಮಾಹಿತಿ ನೀಡಿದರು.

 44 ಲಕ್ಷ ದಂಡ ಬಾಕಿ
‘ಸಂಚಾರ ನಿಯಮ ಉಲ್ಲಂಘನೆ ಸಂಬಂಧ ಬಿಎಂಟಿಸಿ ಈ ವರ್ಷ ₨ 1.19 ಲಕ್ಷ ದಂಡ ಕಟ್ಟಿದೆ. ಹಿಂದಿನ ಎರಡು ವರ್ಷಗಳ ₨ 44 ಲಕ್ಷ ದಂಡ ಬಾಕಿ ಉಳಿಸಿಕೊಂಡಿದೆ. ಬಾಕಿ ಮೊತ್ತವನ್ನು ಆದಷ್ಟು ಬೇಗ ಪಾವತಿಸುವಂತೆ ಸಂಬಂಧಪಟ್ಟ ಡಿಪೊ ವ್ಯವಸ್ಥಾಪಕರಿಗೆ ನೋಟಿಸ್ ಕಳುಹಿಸಲಾಗಿದೆ’ ಎಂದು ಸಂಚಾರ ವಿಭಾಗದ ಹೆಚ್ಚುವರಿ ಪೊಲೀಸ್ ಕಮಿಷನರ್ ಎಂ.ಎ.ಸಲೀಂ ತಿಳಿಸಿದರು.

ಒಂದು ಬಸ್, 64 ಪ್ರಕರಣ!
‘ಸರ್ಕಾರಿ ಸ್ವಾಮ್ಯದ ವಾಹನ ಎಂಬ ಕಾರಣಕ್ಕೆ ಬಿಎಂಟಿಸಿ ಹಾಗೂ ಕೆಎಸ್‌ಆರ್‌ಟಿಸಿ ಬಸ್‌ಗಳ ದಾಖಲೆ ಪರಿಶೀಲಿಸುವುದು ಕಡಿಮೆ. ಆದರೆ, ಪ್ರಯಾಣಿಕರ ಸುರಕ್ಷತೆ ದೃಷ್ಟಿಯಿಂದ ಈಗ ಮುಲಾಜಿಲ್ಲದೆ ಕ್ರಮ ಜರುಗಿಸಲಾಗುತ್ತಿದೆ’ ಎಂದು ಅಧಿಕಾರಿಗಳು ಹೇಳುತ್ತಾರೆ.  ಇದೇ ಜುಲೈ 15ರಂದು ಎಲೆಕ್ಟ್ರಾನಿಕ್ ಸಿಟಿಯಿಂದ ಮೆಜೆಸ್ಟಿಕ್ ಕಡೆಗೆ ಹೋಗುತ್ತಿದ್ದ ಬಿಎಂಟಿಸಿ ಬಸ್ಸನ್ನು (ಕೆಎ 01 ಎಫ್‌–9393) ತಡೆದು ಪರಿಶೀಲಿಸಿದಾಗ ಅದರ ಚಾಲಕ ಚಂದ್ರಪ್ಪನ ವಿರುದ್ಧ 64 ಪ್ರಕರಣಗಳು ದಾಖಲಾಗಿದ್ದವು ಎಂದು ಅವರು ಮಾಹಿತಿ ನೀಡುತ್ತಾರೆ.

ಯಾವುದೇ ವಾಹನಗಳು ಸಂಚಾರ ನಿಯಮ ಉಲ್ಲಂಘಿಸಿದರೆ ಸಾರ್ವಜನಿಕರು ಫೋಟೊ ತೆಗೆದು bangaloretrafficpolice.gov.inಗೆ ಪೋಸ್ಟ್ ಮಾಡಬಹುದು- ಸಂಚಾರ ಪೊಲೀಸರು

ಖಾಸಗಿ ಬಸ್‌ಗಳ ಹಾವಳಿ
ನಗರದಲ್ಲಿ ಸಂಚಾರ ನಿಯಮ ಉಲ್ಲಂಘನೆ ಮಾಡುವಲ್ಲಿ ಎರಡನೇ ಸ್ಥಾನ ಖಾಸಗಿ ಬಸ್‌ಗಳಿಗೆ ಸೇರುತ್ತದೆ. ಆರು ತಿಂಗಳಲ್ಲಿ ಪೊಲೀಸರು ಖಾಸಗಿ ಬಸ್‌ಗಳ ವಿರುದ್ಧ 33,402 ಪ್ರಕರಣ ದಾಖಲಿಸಿದ್ದಾರೆ. ಅದೇ ರೀತಿ ಕೆಎಸ್‌ಆರ್‌ಟಿಸಿ  ಬಸ್‌ಗಳ‌ ವಿರುದ್ಧ 102, ಕಾರ್ಖಾನೆ ಬಸ್‌ಗಳು ವಿರುದ್ಧ 233 ಪ್ರಕರಣಗಳು ದಾಖಲಾಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT