ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿರೀಕ್ಷೆಯ ಭಾರಕ್ಕೆ ನಲುಗಿದ ಕೃತಿ

Last Updated 22 ಜುಲೈ 2016, 11:04 IST
ಅಕ್ಷರ ಗಾತ್ರ

ಚಿತ್ರ: ಕಬಾಲಿ (ತಮಿಳು)
ನಿರ್ಮಾಣ: ಕಲೈಪುಲಿ ಎಸ್‌. ಥಾನು
ನಿರ್ದೇಶನ: ಪಾ. ರಂಜಿತ್‌
ತಾರಾಗಣ: ರಜನಿಕಾಂತ್‌, ರಾಧಿಕಾ ಆಪ್ಟೆ, ಕಿಶೋರ್‌, ಧನ್ಸಿಕಾ, ವಿನ್‌ಸ್ಟನ್‌ ಚಾವೊ

ಜೈಲಿನಿಂದ ಬಿಡುಗಡೆಯಾಗಿ ಹೊರಬರುವ ಹೊತ್ತಿನಲ್ಲಿ ರಜನಿಕಾಂತ್‌ ತಣ್ಣಗೆ ಕುಳಿತು ಪುಸ್ತಕವೊಂದನ್ನು ಓದುತ್ತಿರುತ್ತಾರೆ. ಕೈದಿಯಾಗಿ ತೊಟ್ಟಿದ್ದ ಸಮವಸ್ತ್ರ ಕಳಚಿ ಅವರು ಸೂಟು, ಪಾಲಿಷ್‌ ಹಾಕಿದ ಬೂಟು ತೊಟ್ಟು ಐಷಾರಾಮಿ ಕಾರು ಹತ್ತುತ್ತಾರೆ. ಅವರನ್ನು ಇದಿರುಗೊಳ್ಳಲು ಬೆರಳೆಣಿಕೆಯಷ್ಟು ವಂಧಿಮಾಗಧರು. ಸಂತೋಷ್‌ ನಾರಾಯಣ್‌ ‘ರಾಕ್‌ ಬೀಟ್‌’ಗಳ ಹಿನ್ನೆಲೆ ಸಂಗೀತ.

ದೇಸಿ ಶೈಲಿಯಲ್ಲಿ ಸೂಪರ್‌ಸ್ಟಾರ್‌ಗಿರಿ ಪ್ರಕಟಪಡಿಸುವ ಮೂಲಕವೇ ದಶಕಗಳಿಂದ ಛಾಪು ಮೂಡಿಸಿರುವ ರಜನಿಕಾಂತ್‌ ‘ಕಬಾಲಿ’ ಸಿನಿಮಾದಲ್ಲಿ ನಿರ್ದೇಶಕರಿಗೆ ತಮ್ಮನ್ನು ಸಂಪೂರ್ಣವಾಗಿ ಅರ್ಪಿಸಿಕೊಂಡಿದ್ದಾರೆ. ಈ ಸಿನಿಮಾದಲ್ಲಿ ಅವರ ಹಳೆಯ ಶೈಲಿಯ ದೇಸಿ ‘ಖದರ್‌’ ನಾಪತ್ತೆ. ಸೂಟು–ಬೂಟುಗಳ ನಾಜೂಕು ಗ್ಯಾಂಗ್‌ಸ್ಟರ್‌ ಆಗಿ ಅವರು ಇಡೀ ಸಿನಿಮಾವನ್ನು ತಣ್ಣಗೆ ಆವರಿಸಿಕೊಂಡಿದ್ದಾರೆ. ಅವರ ಕಟ್ಟಾ ಅಭಿಮಾನಿಗಳಿಗೆ ಇಂಥ ಅತಿ ನಾಜೂಕು ಪೋಷಾಕು, ವ್ಯಕ್ತಿತ್ವವನ್ನು ಜೀರ್ಣಿಸಿಕೊಳ್ಳುವುದು ಕಷ್ಟವಾದೀತು. ಇದನ್ನು ಕೊರತೆ ಎಂದು ಮನಗಂಡಂತೆ ಆಗೀಗ ಸಂಭಾಷಣೆಯ ಚಾಟಿ ಏಟನ್ನು ರಜನಿಕಾಂತ್‌ ಕೈಯಿಂದ ಕೊಡಿಸಿದ್ದಾರೆ. ಅದನ್ನೇ ಮನರಂಜನೆ ಎಂದು ಭಾವಿಸಬೇಕು.

‘ಅಟ್ಟಕತ್ತಿ’, ‘ಮದ್ರಾಸ್‌’ ತಮಿಳು ಸಿನಿಮಾಗಳ ಮೂಲಕ ನಿರ್ದೇಶಕರಾಗಿ ತಮ್ಮತನದ ಛಾಪು ಮೂಡಿಸಿದ್ದವರು ಪಾ. ರಂಜಿತ್‌. ‘ಕಬಾಲಿ’ ಚಿತ್ರಕಥೆ ಹೆಣೆಯುವಲ್ಲಿ ರಜನಿ ಉಪಸ್ಥಿತಿಯೇ ಅವರು ಅನೇಕ ಸಂಗತಿಗಳಲ್ಲಿ ರಾಜಿಯಾಗಲು ಕಾರಣವಾಗಿರುವ ಸಾಧ್ಯತೆ ಇದೆ.

‘ಕಬಾಲಿ’ ಗ್ಯಾಂಗ್‌ಸ್ಟರ್‌ ಒಬ್ಬನ ಕಥೆ. ಅದರಲ್ಲಿ ಸಿಟ್ಟು–ಸೆಡವು, ಪ್ರೀತಿ, ಕಕ್ಕುಲತೆ, ಮಮಕಾರ, ಸ್ವಾಮಿಭಕ್ತಿ, ಸಮಾಜ ಸೇವೆ, ಸೈದ್ಧಾಂತಿಕ ಸಂಘರ್ಷ ಎಲ್ಲವನ್ನೂ ಇಡುಕಿರಿಯುವ ಉಮೇದಿಗೆ ನಿರ್ದೇಶಕರು ಬಿದ್ದಿದ್ದಾರೆ. ಹಾಡುಗಳ ಹಂಗೂ ಬೇಕು, ಹೊಡೆದಾಟಗಳಲ್ಲಿ ಅಸಲೀತನ ಇರಬೇಕು; ಇಡೀ ಸಿನಿಮಾ ಸ್ಟೈಲಿಶ್‌ ಆಗಿಯೇ ವ್ಯಕ್ತಗೊಳ್ಳಬೇಕು, ರಜನಿಕಾಂತ್‌ ಕಾಣಿಸಿಕೊಳ್ಳುವ ಬಹುತೇಕ ದೃಶ್ಯಗಳು ನಿಧಾನಗತಿಯ ದರ್ಶನದ (ಸ್ಲೋಮೋಷನ್‌) ತಂತ್ರಕ್ಕೆ ಜೋತುಬೀಳಬೇಕು – ತಾಂತ್ರಿಕ ಅಚ್ಚುಕಟ್ಟುತನ ನೆಚ್ಚಿಕೊಂಡು ರಂಜಿತ್‌ ಇವೆಲ್ಲವನ್ನು ಕಟ್ಟಿಕೊಟ್ಟಿದ್ದಾರೆ. ಜಿ. ಮುರಳಿ ಛಾಯಾಗ್ರಹಣ ಕೌಶಲ, ಪ್ರವೀಣ್‌ ಕೆ.ಎಲ್‌. ಸಂಕಲನ ಕೂಡ ಅವರ ಉದ್ದೇಶಕ್ಕೆ ಹದವರಿತು ಸ್ಪಂದಿಸಿವೆ.

ಮನರಂಜನೆ, ಗತ್ತು ಪ್ರದರ್ಶನ ಹಾಗೂ ಹಳೆಯದಾದರೂ ಬಲುಗಟ್ಟಿಯಾದ ಪ್ರೇಮಕಥೆಯ ಕಲಸುಮೇಲೋಗರವನ್ನು ಬಡಿಸಲು ರಂಜಿತ್‌ ಸಾಕಷ್ಟು ತಿಣುಕಾಡಿದ್ದಾರೆ. ಈಗ ಅನೇಕ ನಿರ್ದೇಶಕರು ಬೆನ್ನು ಮಾಡಿರುವ ಫ್ಲ್ಯಾಷ್‌ಬ್ಯಾಕ್‌ ತಂತ್ರದ ಮೋಹದಿಂದ ಬಿಡಿಸಿಕೊಳ್ಳುವುದು ಕೂಡ ಅವರಿಗೆ ಸಾಧ್ಯವಾಗಿಲ್ಲ. ಹೊರಾಂಗಣದ ಅತಿ ಕಡಿಮೆ ಬಳಕೆ ಕೂಡ ಪ್ರಶ್ನೆಯನ್ನು ಉಳಿಸುತ್ತದೆ.

ರಜನಿಕಾಂತ್‌ ಇದುವರೆಗೆ ಅಭಿನಯಿಸಿಲ್ಲದ ಶೈಲಿಯ ಪಾತ್ರ ಇದೆಂದು ನಿಸ್ಸಂಶಯವಾಗಿ ಹೇಳಬಹುದು. ಆದರೆ, ‘ಭಾಷಾ’ ಚಿತ್ರದ ಪೋಷಾಕನ್ನು ಅಲ್ಲಲ್ಲಿ ಅವರ ಸೂಟು–ಬೂಟು ನೆನಪಿಸುತ್ತದೆ. ಅವರಿಗೆ ಒದಗಿಬಂದಿರುವ ವಯೋಸಹಜ ಪಾತ್ರವಿದು ಎನ್ನುವುದು ಕೂಡ ವಿಶೇಷವೇ. ಇತ್ತೀಚೆಗೆ ತಮ್ಮ ಮಿತಿಯನ್ನೂ ಅರಿತು ಅವರು ಪಾತ್ರಪ್ರೀತಿಗೆ ತಲೆಬಾಗುತ್ತಿರುವುದರ ಲಕ್ಷಣವೂ ಇದಾಗಿರಬಹುದು.

ಸೂಪರ್‌ಸ್ಟಾರ್‌ಗೆ ಇರಬೇಕಾದ ಗತ್ತಿನ ವಿಷಯದಲ್ಲಂತೂ ಅವರಿಗೆ ಮುಪ್ಪಾಗಿಲ್ಲ. ತಣ್ಣಗಿನ ಅಭಿನಯದಲ್ಲಿಯೂ ಅಲ್ಲಲ್ಲಿ ಶಿಳ್ಳೆ ಗಿಟ್ಟಿಸುವ ತೀವ್ರತೆಯನ್ನು ಅವರು ತೋರಿದ್ದಾರೆ. ರಾಧಿಕಾ ಆಪ್ಟೆ ಕಡಿಮೆ ಅವಕಾಶದಲ್ಲಿಯೇ ಗುರುತಾಗುತ್ತಾರೆ. ಕನ್ನಡದ ಕಿಶೋರ್‌ಗೆ ಪ್ರಮುಖ ಖಳನಾಯಕನ ಪಾತ್ರದ ಅವಕಾಶ ದೊರಕಿದ್ದು, ಅದಕ್ಕೆ ಅವರು ನ್ಯಾಯ ಸಲ್ಲಿಸಿದ್ದಾರೆ. ಗ್ಲಾಮರಸ್‌ ಆಗಿ ಕಾಣುತ್ತಲೇ ಸಾಹಸ ದೃಶ್ಯಗಳ ಮೂಲಕ ಧನ್ಸಿಕಾ ಛಾಪು ಮೂಡಿಸಿದ್ದಾರೆ.

ರಜನೀಕಾಂತ್‌ ಸಾಯುವರೋ ಬದುಕುವರೋ ಎಂಬ ಜಿಜ್ಞಾಸೆಯಲ್ಲಿಯೇ ಸಿನಿಮಾ ಅಂತ್ಯಗೊಳ್ಳುತ್ತದೆ. ನಡುವೆ ಕಂಡು, ಕೇಳುವ ಘಟನೆಗಳ್ಯಾವುವೂ ಕಾಡುವುದೇ ಇಲ್ಲ. ನಿರೀಕ್ಷೆಯ ಭಾರಕ್ಕೆ ನಲುಗಿದ ಕೃತಿ ಎಂದೂ ಇದನ್ನು ಭಾವಿಸಬಹುದು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT