ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿರ್ದೇಶಕ ಎಸ್‌.ನಾರಾಯಣ್ ‘ಸ್ಕ್ರಿಪ್ಟ್‌’ ಕಳವು

Last Updated 29 ಜುಲೈ 2015, 19:37 IST
ಅಕ್ಷರ ಗಾತ್ರ

ಬೆಂಗಳೂರು: ₨ 10ರ ನೋಟುಗಳನ್ನು ಎಸೆದು ಚಲನಚಿತ್ರ ನಿರ್ದೇಶಕ ಎಸ್‌.ನಾರಾಯಣ್ ಅವರ ಕಾರು ಚಾಲಕನ ಗಮನ ಬೇರೆಡೆ ಸೆಳೆದ ದುಷ್ಕರ್ಮಿಗಳು, 3.80 ಲಕ್ಷ ನಗದು ಹಾಗೂ 12 ಚಿತ್ರಕತೆಗಳನ್ನು (ಸ್ಕ್ರಿಪ್ಟ್‌) ದೋಚಿದ ಘಟನೆ ವಿಜಯನಗರದ ಮಾರುತಿ ಮಂದಿರ ಸಮೀಪ ಬುಧವಾರ ನಡೆದಿದೆ.

ಎಸ್‌.ನಾರಾಯಣ್ ಅವರು ಕೆಲಸದ ನಿಮಿತ್ತ ಬೆಳಿಗ್ಗೆ 11.30ರ ಸುಮಾರಿಗೆ ಮಾರುತಿ ಮಂದಿರ ಸಮೀಪದ ಫೆಡರಲ್‌ ಬ್ಯಾಂಕ್‌ ಶಾಖೆಗೆ ಬಂದಿದ್ದರು. ಅವರು ಬ್ಯಾಂಕ್‌ಗೆ ಹೋದಾಗ ಚಾಲಕ ನಾಗೇಶ್, ಸಮೀಪದ ಸರ್ವಿಸ್ ರಸ್ತೆಯಲ್ಲಿ ಕಾರು ನಿಲ್ಲಿಸಿದ್ದರು. ಈ ವೇಳೆ ಬೈಕ್‌ನಲ್ಲಿ ಬಂದ ಇಬ್ಬರು ಅಪರಿಚಿತರು, ಆ ಕಾರನ್ನು ಮುಟ್ಟಿದಾಗ ‘ಸೈರನ್’ ಶಬ್ದ ಹೊರಹೊಮ್ಮಿದೆ. ಆಗ ಕಾರಿನಿಂದ ಸ್ವಲ್ಪ ದೂರದಲ್ಲಿದ್ದ ಚಾಲಕ, ಸೈರನ್ ಸದ್ದು ಕೇಳುತ್ತಿದ್ದಂತೆಯೇ ವಾಹನದ ಬಳಿ ಬಂದಿದ್ದಾರೆ. ಆಗ, ‘ಹೀಗೆ ಸರ್ವಿಸ್ ರಸ್ತೆಯಲ್ಲಿ ಕಾರು ನಿಲ್ಲಿಸಿದರೆ, ಇತರೆ ವಾಹನಗಳ ಸಂಚಾರಕ್ಕೆ ತೊಂದರೆ ಆಗುತ್ತದೆ’ ಎಂದು ಆ ಇಬ್ಬರು ಚಾಲಕನ ಜತೆ ಮಾತಿಗೆ ಇಳಿದಿದ್ದಾರೆ.

ಅವರ ಮಾತಿನಂತೆ ಚಾಲಕ, ಕಾರನ್ನು ಬೇರೆಡೆ ನಿಲ್ಲಿಸಲು ಬಾಗಿಲು ತೆಗೆದಿದ್ದಾರೆ. ಈ ಹಂತದಲ್ಲಿ ₨ 10ರ ನಾಲ್ಕೈದು ನೋಟುಗಳನ್ನು ಚೆಲ್ಲಾಪಿಲ್ಲಿಯಾಗಿ ಕೆಳಗೆ ಎಸೆದ ಆರೋಪಿಗಳು, ‘ನಿಮ್ಮ ಜೇಬಿನಿಂದ ಹಣ ಬಿದ್ದಿದೆ’ ಎಂದು ಚಾಲಕನಿಗೆ ಹೇಳಿದ್ದಾರೆ. ಆತ ಕೆಳಗೆ ಬಾಗಿ ನೋಟುಗಳನ್ನು ಆರಿಸಿಕೊಳ್ಳುತ್ತಿದ್ದಾಗ ಕಾರಿನಲ್ಲಿದ್ದ ಸೂಟ್‌ಕೇಸ್ ಎಗರಿಸಿ ಪರಾರಿಯಾಗಿದ್ದಾರೆ.

‘ಘಟನೆ ಸಂಬಂಧ ವಿಜಯನಗರ ಠಾಣೆಯಲ್ಲಿ ದೂರು ದಾಖಲಾಗಿದೆ. ಮಾರುತಿ ಮಂದಿರ ಸುತ್ತಮುತ್ತಲ ರಸ್ತೆಗಳಲ್ಲಿರುವ ಸಿ.ಸಿ ಟಿ.ವಿ ಕ್ಯಾಮೆರಾಗಳನ್ನು ಪರಿಶೀಲಿಸಲಾಗಿದ್ದು, ಆರೋಪಿಗಳ ಸುಳಿವು ಲಭ್ಯವಾಗಿದೆ’ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ. ಮತ್ತೊಂದು ಪ್ರಕರಣ: ಇದಾದ ಒಂದೂವರೆ ತಾಸಿನಲ್ಲಿ ದುಷ್ಕರ್ಮಿಗಳು ಆರ್‌ಎಂಸಿ ಯಾರ್ಡ್‌ ಸಮೀಪದ ಎಫ್‌ಟಿಐ ವೃತ್ತದಲ್ಲಿ  ಸಿವಿಲ್ ಎಂಜಿನಿಯರ್ ಲಿಂಗರಾಜು ಅವರ ಗಮನ ಬೇರೆಡೆ ಸೆಳೆದು ₨ 3 ಲಕ್ಷ ದೋಚಿದ್ದಾರೆ.

ನೆಲಗೆದರಹಳ್ಳಿ ನಿವಾಸಿಯಾದ ಲಿಂಗರಾಜು, ಬ್ಯಾಂಕ್‌ ಆಫ್‌ ಇಂಡಿಯಾದ ರಾಜಗೋಪಾಲನಗರ ಶಾಖೆಯಿಂದ ಹಣ ಡ್ರಾ ಮಾಡಿಕೊಂಡು ಸ್ಕೂಟರ್‌ನಲ್ಲಿ ಸುಬ್ರಹ್ಮಣ್ಯನಗರ ಕಡೆಗೆ ಹೋಗುತ್ತಿದ್ದರು. ಈ ವೇಳೆ ಹಿಂದಿನಿಂದ ಬಂದ ಇಬ್ಬರು, ‘ನಿಮ್ಮ ಅಂಗಿಯ ಮೇಲೆ ಗಲೀಜು ಬಿದ್ದಿದೆ. ಸ್ವಚ್ಛಗೊಳಿಸಿಕೊಳ್ಳಿ’ ಎಂದಿದ್ದಾರೆ.

ಅವರ  ಮಾತನ್ನು ನಂಬಿದ ಲಿಂಗರಾಜು, ಎಫ್ಟ್‌ಟಿಐ ವೃತ್ತದ ಹೋಟೆಲ್ ಬಳಿ ಸ್ಕೂಟರ್ ನಿಲ್ಲಿಸಿದ್ದಾರೆ. ಆಗ ಒಬ್ಬಾತ ಅವರಿಗೆ ನೆರವಾಗುವ ನೆಪದಲ್ಲಿ ಹತ್ತಿರ ಹೋದರೆ, ಮತ್ತೊಬ್ಬ ಸೀಟಿನ ಕೆಳಗಿದ್ದ ಹಣದ ಬ್ಯಾಗ್ ಎಗರಿಸಿದ್ದಾನೆ. ಸ್ವಲ್ಪ ಸಮಯದ ನಂತರ ಲಿಂಗರಾಜು ಸ್ಕೂಟರ್ ಬಳಿ ಬಂದಾಗ ಪ್ರಕರಣ ಬೆಳಕಿಗೆ ಬಂದಿದೆ. ಎರಡೂ ಕಡೆ ಒಂದೇ ತಂಡದ ಸದಸ್ಯರು ಕೃತ್ಯ ಎಸಗಿರುವ ಬಗ್ಗೆ ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ.

‘ಕಷ್ಟ ಪಟ್ಟು ಸಿದ್ಧಪಡಿಸಿದ್ದೆ’
‘ಹಣ ಕಳೆದುಕೊಂಡಿದ್ದಕ್ಕಿಂತ ಸ್ಕ್ರಿಪ್ಟ್‌ ಕಳವಾಗಿರುವುದು ನೋವುಂಟು ಮಾಡಿದೆ. ತುಂಬಾ ಆಸಕ್ತಿ ವಹಿಸಿ ಸಿದ್ಧಪಡಿಸಿದ್ದ ಸ್ಕ್ರಿಪ್ಟ್‌ಗಳವು. ಹೊರಗೆ ಪ್ರಯಾಣಿಸುವಾಗಲೂ ಅವುಗಳನ್ನು ಜತೆಯಲ್ಲೇ ಇಟ್ಟುಕೊಂಡು, ಆಗಾಗ ಓದಿ ಬದಲಾವಣೆ ಮಾಡುತ್ತಿದ್ದೆ’ ಎಂದು ಎಸ್‌.ನಾರಾಯಣ್ ಬೇಸರ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT