ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿರ್ದೇಶನದ ಬಾಗಿಲಿನಲ್ಲಿ ಬಾದಲ್... ‌

Last Updated 21 ಡಿಸೆಂಬರ್ 2014, 19:30 IST
ಅಕ್ಷರ ಗಾತ್ರ

ಕೈಯಲ್ಲೊಂದಿಷ್ಟು ಬಣ್ಣದ ಕಡ್ಡಿಗಳಿದ್ದರೆ ಸಾಕು...ಸಮಸ್ಯೆಗಳನ್ನೇ ಕ್ಯಾನ್ವಾಸ್ ಮಾಡಿಕೊಂಡು ಪ್ರಭುತ್ವವನ್ನು ಎಚ್ಚರಿಸುವ ಕಲಾವಿದ ಬಾದಲ್‌. ಮೈಸೂರಿನ ಬಾದಲ್ ತಮ್ಮ ಕುಂಚವನ್ನು ಜನಪರವಾಗಿ ತೊಡಗಿಸಿರುವ ಕಾರಣಕ್ಕೆ ಕಲಾ ಸೀಮೆಯನ್ನು ದಾಟಿದ್ದಾರೆ. ಕಲೆಯ ಜತೆ ಜತೆಯಲ್ಲಿಯೇ ಸಾಮಾಜಿಕ ಮತ್ತು ಸಾಂಸ್ಕೃತಿಕ ಒಲವುಗಳನ್ನು ತೀವ್ರವಾಗಿರಿಸಿಕೊಂಡಿರುವ ಈ ಕಲಾಕಾರನಿಗೆ ಕಥೆಗಾರನ ಮುಖವೂ ಇದೆ.

ಇದೆಲ್ಲವೂ ಒಂದು ಮಗ್ಗಲು. ಈಗ ಬಾದಲ್‌ ಕ್ಯಾಮೆರಾ ಮುಂದೆ ನಿಂತು ನಿರ್ದೇಶಕನ ಟೋಪಿ ತೊಡಲು ಸಜ್ಜಾಗಿದ್ದಾರೆ. ಈಗಾಗಲೇ ಕಥೆ ಸಿದ್ಧಮಾಡಿಕೊಂಡಿದ್ದು, ಚಿತ್ರಕಥೆ ಅಂತಿಮ ರೂಪು ಪಡೆದುಕೊಳ್ಳುತ್ತಿದೆ. ಅಂದುಕೊಂಡಂತೆ ಆದರೆ ಫೆಬ್ರುವರಿ ಇಲ್ಲವೆ ಮಾರ್ಚ್‌ನಲ್ಲಿ ಬಾದಲ್ ನಿರ್ದೇಶನದ ಚಿತ್ರ ಸೆಟ್ಟೇರಲಿದೆ.

ಬಾದಲ್‌ಗೆ ಸಿನಿಮಾ ನಂಟು ಹೊಸದೇನೂ ಅಲ್ಲ. ‘ಪೊಲೀಸ್‌ ಕ್ವಾಟ್ರರ್ಸ್‌’ ಚಿತ್ರದಲ್ಲಿ ಕಲಾನಿರ್ದೇಶನದ ಜವಾಬ್ದಾರಿವಹಿಸಿಕೊಂಡೇ ಸಣ್ಣ ಪಾತ್ರಕ್ಕೆ ಬಣ್ಣ ಹಚ್ಚಿದ್ದರು. ಅದು ಅವರು ತೆರೆ ಮೇಲೆ ಕಾಣಿಸಿಕೊಂಡ ಮೊದಲ ಸಿನಿಮಾ. ‘ಲೂಸಿಯಾ’, ‘ಲೈಫು ಇಷ್ಟೇನೆ’, ‘ಡೈರೆಕ್ಟರ್ ಸ್ಪೆಷಲ್’ ಸೇರಿದಂತೆ ಹಲವು ಸಿನಿಮಾಗಳಿಗೆ ಕಲಾ ನಿರ್ದೇಶಕನಾಗಿ ಕೆಲಸ ಮಾಡಿದ್ದಾರೆ.

ಈ ಮುನ್ನ ಬಸವಲಿಂಗಯ್ಯ, ಚಿದಂಬರಾವ್ ಜಂಬೆ ಮತ್ತಿತರ ನಿರ್ದೇಶಕರೊಂದಿಗೆ ರಂಗಚಟುವಟಿಕೆಗಳಲ್ಲೂ ತೊಡಗಿಸಿಕೊಂಡಿದ್ದರಿಂದ ನಟನೆಯ ನಂಟು ಇತ್ತು. ‘ಎದೆಗಾರಿಕೆ’ ಚಿತ್ರದಲ್ಲಿ ನಟಿಸಿದ್ದ ಬಾದಲ್‌, ತೆರೆಯ ಮೇಲೆ ಹೆಚ್ಚು ಹೊತ್ತು ಕಾಣಿಸಿಕೊಂಡಿದ್ದು ‘ಚತುರ್ಭುಜ’ ಚಿತ್ರದಲ್ಲಿ. ಅಲ್ಲಿ ಖಳನ ಗೆಟಪ್ಪಿನಲ್ಲಿ ಭಿನ್ನವಾದ ಮ್ಯಾನರಿಸಂನಲ್ಲಿ ಅಬ್ಬರಿಸಿದ್ದರು.

ಏಳನೇ ಬೆಂಗಳೂರು ಅಂತರರಾಷ್ಟ್ರೀಯ ಚಿತ್ರೋತ್ಸವದಲ್ಲಿ ಪ್ರದರ್ಶನಗೊಂಡು ಮೆಚ್ಚುಗೆ ಗಳಿಸಿದ ಕನ್ನಡ ಚಿತ್ರ ‘ಪ್ರಕೃತಿ’ಯಲ್ಲಿ ಆಳುಮಗನ ಪಾತ್ರವನ್ನೂ ನಿರ್ವಹಿಸಿದ್ದರು. ತೆರೆಯ ಹಿಂದೆ– ಮುಂದೆ ಕಾಣಿಸಿಕೊಂಡಿದ್ದ ಬಾದಲ್‌ ತಮ್ಮ ಸೃಜನಶೀಲಯ ಟಿಸಿಲುಗಳು ಅನಾವರಣಗೊಳ್ಳುತ್ತಿರುವಾಗಲೇ ಚಿತ್ರ ನಿರ್ದೇಶನಕ್ಕೂ ಸೈ ಎಂದಿದ್ದಾರೆ.  

‘ನಾನು ಕಥೆ ಮಾಡಿಕೊಂಡಿದ್ದು ಚಿತ್ರಕಥೆಯನ್ನು ತಿದ್ದುತ್ತಿದ್ದೇನೆ. ಪ್ರತಿ ದೃಶ್ಯ ಮಜಾ ಕೊಡುತ್ತಿದೆ. ಇದು ಪಕ್ಕಾ ಒಂದು ಹಳ್ಳಿಯ ಕಥೆ. ಭಾವನೆಗಳ ಉಯ್ಯಾಲೆಯಲ್ಲಿ ಕಥೆ ಸಾಗುತ್ತದೆ. ಬಹುಪಾಲು ಕನ್ನಡ ಚಿತ್ರಗಳಲ್ಲಿ ತಳವರ್ಗದ ಜನರ ನೋವುಗಳನ್ನು ಮಾತ್ರ ಢಾಳಾಗಿ ಕಟ್ಟಿಕೊಡಲಾಗುತ್ತಿದೆ. ನಲಿವು–ಖುಷಿಗಳು ಕ್ಯಾಮೆರಾ ಕಣ್ಣಿಗೆ ಕಾಣಿಸುವುದೇ ಇಲ್ಲ.

ಆ ಹಿನ್ನೆಲೆಯಲ್ಲಿ ನೋಡುವುದಾದರೆ ನನ್ನ ಕಥೆಯಲ್ಲಿ ಹೊಸ ಮತ್ತು ಭಿನ್ನ ನಿರೂಪಣೆಯನ್ನು ನೋಡಬಹುದು. ಜೀವನಪ್ರೀತಿ ಕಾಣಲಿದೆ’ ಎಂದು ಹೊಸತನದ ತುಡಿತವನ್ನು ಉತ್ಸಾಹದಿಂದ ಹೊರ ಚೆಲ್ಲುತ್ತಾರೆ. ಬಾದಲ್ ತಳ ಸಮುದಾಯಗಳ ಬಗ್ಗೆ ಸಂವೇದನೆಯುಳ್ಳವರು. ಕಲಾಮಾಧ್ಯಮವನ್ನು ಅದಕ್ಕೆ ಸಮರ್ಥವಾಗಿ ಬಳಸಿಕೊಂಡಿದ್ದಾರೆ.

‘ಚಿತ್ರಕಥೆ ಸಶಕ್ತವಾಗಿದ್ದರೆ ಯಾರಾದರೂ ಹಣ ತೊಡಗಿಸಲು ಖಂಡಿತ ಮುಂದೆ ಬಂದೇ ಬರುತ್ತಾರೆ’ ಎನ್ನುವ ಅಚಲ ವಿಶ್ವಾಸ ಬಾದಲ್ ಅವರಿಗಿದೆ. ಈ ಪ್ರಯತ್ನಕ್ಕೆ ಕನ್ನಡದ ಸದಭಿರುಚಿಯ ನಿರ್ದೇಶಕರು ಹಣ ತೊಡಗಿಸುವ ಭರವಸೆ ಸದ್ಯಕ್ಕೆ ಸಿಕ್ಕಿದೆಯಂತೆ.
‘ನಾನು ಥಿಯೇಟರ್‌ನಲ್ಲಿ ಕೆಲಸ ಮಾಡಿದ್ದೇನೆ. ಅಲ್ಲಿನ ವ್ಯಾಕರಣದ ಅರಿವು ಇದೆ. ಒಳ್ಳೆಯ ಕಥೆ ಮಾಡಿಕೊಂಡರೆ ನಿರ್ದೇಶನ ಕಷ್ಟವಲ್ಲ.

ನಾನು ಒಬ್ಬ ಕಲಾವಿದ. ಅಲ್ಲಿನ ಸೂಕ್ಷ್ಮಗಳು ತಿಳಿದಿವೆ. ಸ್ಟಾರ್‌ ನಟರಿಗೆ ನಿರ್ದೇಶನ ಮಾಡುವುದು ನನಗೆ ತಿಳಿದಿಲ್ಲ. ಒಂದು ಅಚ್ಚುಕಟ್ಟಾದ ಕಥೆಯನ್ನು ಭಿನ್ನವಾಗಿ ಹೇಳುವೆ. ನಾಯಕ ನಟ ಒಂದು ಹಂತಕ್ಕೆ ಬೆಳೆದ ನಂತರ ಆತನನ್ನು ಹಿಂಬಾಲಿಸುವವರು ಬಹು ಮಂದಿ. ಆಗಲಾದರೂ ಸ್ಟಾರ್‌ ಹೊಸ ಬಗೆಯಲ್ಲಿ ತೊಡಗಿಸಿಕೊಂಡರೆ ಕನ್ನಡ ಚಿತ್ರರಂಗ ಮತ್ತಷ್ಟು ಉತ್ತಮಗೊಳ್ಳಲಿದೆ’ ಎನ್ನುವ ಅವರ ಮಾತುಗಳಲ್ಲಿ ಹೊಸ ಸಾಧ್ಯತೆಗಳನ್ನು ಹುಡುಕುವ ಹಂಬಲವಿದೆ.

ಯುವಕಥೆಗಾರ ಟಿ.ಕೆ. ದಯಾನಂದ್‌ ಕೂಡ ತಮ್ಮದೇ ಕಥೆಯನ್ನು ಆಧರಿಸಿದ ‘ಬೆಂಕಿಪಣ್ಣ’ ಸಿನಿಮಾ ನಿರ್ದೇಶಿಸಿ ತೆರೆಕಾಣಿಸಲು ಸಜ್ಜಾಗಿದ್ದಾರೆ. ತಳವರ್ಗದ ಖುಷಿಗಳನ್ನು ಬಿಂಬಿಸುವ ಚಿತ್ರಗಳು ಗೌಣವಾಗುತ್ತಿವೆ ಎನ್ನುವ ಆರೋಪ–ನಿರಾಶೆಗಳ ಈ ಹೊತ್ತಿನಲ್ಲಿ ಈ ಹೊಸ ಕಲಾಕಾರರ ಅಕ್ಷರಗಳು ಸಿನಿಮಾ ರೂಪದಲ್ಲಿ ಒಡಮೂಡುತ್ತಿರುವುದು ಕನ್ನಡ ಚಿತ್ರರಂಗದ ಆಶಾದಾಯಕ ಬೆಳವಣಿಗೆಯಂತೂ ಹೌದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT