ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿರ್ವಹಣಾ ಭತ್ಯೆ ಏರಿಕೆಗೆ ಆಗ್ರಹ

Last Updated 24 ಜುಲೈ 2014, 4:37 IST
ಅಕ್ಷರ ಗಾತ್ರ

ಉಡುಪಿ: ‘ಅಂಗವಿಕಲರಿಗೆ ಮಾಸಿಕ ಕನಿಷ್ಠ ಮೂರು ಸಾವಿರ ರೂಪಾಯಿ ನಿರ್ವಹಣಾ ಭತ್ಯೆ ನೀಡಬೇಕು’ ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ಅಂಗವಿಕಲರ ಹಾಗೂ ಪಾಲಕರ ಒಕ್ಕೂಟದ ಉಡುಪಿ ಜಿಲ್ಲಾ ಸಮಿತಿ ಸದಸ್ಯರು ಮಣಿಪಾಲದಲ್ಲಿರುವ ಜಿಲ್ಲಾಧಿಕಾರಿ ಕಚೇರಿ ಎದುರು ಬುಧವಾರ ಪ್ರತಿಭಟನೆ ನಡೆಸಿದರು.

ಅವಲಂಬಿತರಾಗಿ ಬದುಕುತ್ತಿರುವ ಅಂಗವಿಕಲರು ಸಂಕಷ್ಟದಿಂದ ಜೀವನ ನಡೆಸುತ್ತಿದ್ದಾರೆ. ಭದ್ರತೆ ಇಲ್ಲದ ಕಾರಣ ಆತಂಕದಲ್ಲಿ ಬದುಕುವಂತಾಗಿದೆ. ನೆರವಿಗೆ ಬರಬೇಕಾದ ಸರ್ಕಾರ ಸಂಪೂರ್ಣ ನಿರ್ಲಕ್ಷ್ಯ ವಹಿಸಿ ರುವುದರಿಂದ ನಮ್ಮ ಕೂಗು ಕೇಳುವವರು ಯಾರೂ ಇಲ್ಲದಂತಾಗಿದ್ದಾರೆ. ಯೋಜನೆಗಳನ್ನು ರೂಪಿಸುವಾಗ ಕರೆದು ಸಲಹೆ ಕೇಳುತ್ತಿಲ್ಲ. ಸರ್ಕಾರದ ಯೋಜನೆಗಳ ಲಾಭ ಅರ್ಹರಿಗೆ ಸರಿಯಾಗಿ ತಲುಪುತ್ತಿಲ್ಲ ಎಂದು ಪ್ರತಿಭಟನಾಕಾರರು ಆರೋಪಿಸಿದರು.

‘ಶೇ 40ರಿಂದ 75ರಷ್ಟು ಅಂಗವಿಕಲತೆ ಇರುವವರಿಗೆ ಕನಿಷ್ಠ ಮೂರು ಸಾವಿರ ರೂಪಾಯಿ, ಶೇ 75ಕ್ಕಿಂತ ಮೇಲ್ಪಟ್ಟು ಅಂಗವಿಕಲತೆ ಇರುವವರಿಗೆ ಕನಿಷ್ಠ ಐದು ಸಾವಿರ ರೂಪಾಯಿ ನಿರ್ವಹಣಾ ಭತ್ಯೆ ನೀಡಲು ಈ ಕೂಡಲೇ ಕ್ರಮ ಕೈಗೊಳ್ಳಬೇಕು. ಎಲ್ಲ ಅಂಗವಿಕಲರಿಗೂ ಒಂದೇ ಮಾದರಿಯ ಗುರುತಿನ ಚೀಟಿ ನೀಡಬೇಕು. ಈ ಗುರುತಿನ ಚೀಟಿಯನ್ನೇ ಬಳಸಿ ಬಸ್ಸು ಮತ್ತು ರೈಲುಗಳಲ್ಲಿ ಪ್ರಯಾಣ ಮಾಡಲು ಅವಕಾಶ ಮಾಡಿಕೊಡಬೇಕು’ ಎಂದು ಸಂಘದ ಗೌರವಾಧ್ಯಕ್ಷ ವೆಂಕಟೇಶ್‌ ಕೋಣಿ ಆಗ್ರಹಿಸಿದರು.

‘ಕಠಿಣ ನಿಯಮಗಳು ಇರುವುದರಿಂದ ಸರ್ಕಾರದ ಯೋಜನೆಗಳ ಲಾಭ ಪಡೆಯಲು ಹರಸಾಹಸ ಮಾಡಬೇಕಾದ ಸ್ಥಿತಿ ಇದೆ. ಆದ್ದರಿಂದ ಯೋಜನೆಯ ನಿಯಮಗಳನ್ನು ಸರಳ ಮಾಡಿ ಎಲ್ಲರೂ ಅದರ ಉಪಯೋಗ ಪಡೆದುಕೊಳ್ಳುವಂತಹ ವಾತಾವರಣ ನಿರ್ಮಾಣ ಮಾಡಬೇಕು. ಅಂಗವಿಕಲರು ಗೌರವ ದಿಂದ ಬದುಕಬೇಕಾದರೆ ಸ್ವತಃ ದುಡಿಯುವಂತಾ ಗಬೇಕು. ಸ್ವ ಉದ್ಯೋಗ ಮಾಡುವವರಿಗೆ ಎಲ್ಲ ರೀತಿಯ ಪ್ರೋತ್ಸಾಹ ನೀಡಬೇಕು’ ಎಂದು ಒತ್ತಾಯಿಸಿದರು.

‘ತಿಂಗಳಿಗೆ ₨ 1,200 ನಿರ್ವಹಣಾ ಭತ್ಯೆ ಸಿಗುತ್ತಿದೆ. ಈ ಅಲ್ಪ ಮೊತ್ತದಿಂದ ಜೀವನ ಸಾಗಿಸುವುದು ಕಷ್ಟವಾಗಿದೆ. ನನಗೆ ಎಪಿಎಲ್‌ ಕಾರ್ಡ್‌ ನೀಡಿದ್ದಾರೆ. ಇದನ್ನು ಬಿಪಿಎಲ್‌ಗೆ ಮಾರ್ಪಡಿಸಿದರೆ ದಿನಸಿ ಪಡೆಯಲು ಅನುಕೂಲವಾಗಲಿದೆ’ ಎಂದು ಬೈಂದೂರಿನ ಮೂಕಾಂಬು ಮನವಿ ಮಾಡಿದರು.

ಜಿಲ್ಲಾಧಿಕಾರಿಗೆ ಪ್ರತಿಭಟನಾಕಾರರು ಮನವಿ ಪತ್ರ ಸಲ್ಲಿಸಿದರು. ಸಂಘಟನೆಯ ಅಧ್ಯಕ್ಷ ಬಿ. ಮಂಜುನಾಥ ಹೆಬ್ಬಾರ್‌, ಕಾರ್ಯದರ್ಶಿ ಕೃಷ್ಣ ಪೂಜಾರಿ, ಕೋಶಾಧಿಕಾರಿ ಬಾಬು ದೇವಾಡಿಗ ಮತ್ತಿತರರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT