ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೀತಿ ಸಂಹಿತೆ ಉಲ್ಲಂಘಿಸಿ ನೇಮಕಾತಿ!

ಕರ್ನಾಟಕ ವಿಶ್ವವಿದ್ಯಾಲಯ ಕುಲಪತಿ ಭ್ರಷ್ಟಾಚಾರ (ನ್ಯಾ.ಬಿ.ಪದ್ಮರಾಜ್‌ ಸಮಿತಿ ವರದಿ-3)
Last Updated 10 ಅಕ್ಟೋಬರ್ 2014, 19:30 IST
ಅಕ್ಷರ ಗಾತ್ರ

ಬೆಂಗಳೂರು: ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿದ್ದರೂ ಕರ್ನಾಟಕ ವಿಶ್ವವಿದ್ಯಾಲಯದ ಕುಲಪತಿಯವರು ತರಾತುರಿಯಲ್ಲಿ ನೇಮಕಾತಿ ಮಾಡಿ­ದ್ದಾರೆ ಎಂಬ ಆರೋಪದಲ್ಲೂ ಹುರು­ಳಿದೆ ಎಂದು ನ್ಯಾಯಮೂರ್ತಿ ಪದ್ಮ­ರಾಜ್‌ ಸಮಿತಿ  ಅಭಿಪ್ರಾಯ­ಪಟ್ಟಿದೆ. ವಿಧಾನ ಪರಿಷತ್‌ನ ಪದವೀಧರರ ಮತ್ತು ಶಿಕ್ಷಕರ ಕ್ಷೇತ್ರದ ಚುನಾವಣಾ ಪ್ರಕ್ರಿಯೆ ನಡೆಯುತ್ತಿರುವಾಗಲೇ ಕುಲ­ಪತಿ ಅವರು ವಿವಿಧ ವಿಭಾಗಗಳ ಸಹಾ­ಯಕ ಪ್ರಾಧ್ಯಾಪಕ ಹುದ್ದೆಗಳಿಗೆ 2014ರ ಮೇ 22 ಮತ್ತು 23ರಂದು ಸಂದ­ರ್ಶನ ನಡೆಸಿ ಮೇ 24ರ ಮಧ್ಯ­ರಾತ್ರಿಯೇ ನೇಮಕಾತಿ ಆದೇಶವನ್ನೂ ನೀಡಿ­­ದ್ದಾರೆ ಎಂದು ಆರೋಪಿಸ­ಲಾ­ಗಿತ್ತು.

ಈ ಬಗ್ಗೆ ವಿಚಾರಣೆ ನಡೆಸಿದ ಆಯೋಗ, ಕುಲಪತಿ ಅವರು ಚುನಾ­ವಣಾ ನೀತಿ ಸಂಹಿತೆ ಉಲ್ಲಂಘಿಸಿದ್ದು ನಿಜ ಎಂದು ಹೇಳಿದೆ. 2014ರ ಮೇ 20ರಿಂದಲೇ ಚುನಾ­ವಣಾ ನೀತಿ ಸಂಹಿತೆ ಜಾರಿಗೆ ಬಂದಿತ್ತು. 2014ರ ಜೂನ್‌ 28ರ ವರೆಗೂ ಜಾರಿ­ಯಲ್ಲಿತ್ತು. ಈ ಅವಧಿಯಲ್ಲೇ ಅನೇಕ ಹುದ್ದೆಗಳಿಗೆ ಅಧಿಸೂಚನೆ ಹೊರಡಿಸ­ಲಾ­ಗಿದೆ. ಅಲ್ಲದೆ ನೇಮಕಾತಿಯನ್ನೂ ಮಾಡಿಕೊಳ್ಳಲಾಗಿದೆ.

ಸಲಹೆಗೆ ಸಿಗದ ಗೌರವ: 2014ರ ಜೂನ್‌ 6ರಂದು ಕರ್ನಾಟಕ ಪಶ್ಚಿಮ ಪದ­ವೀ­ಧರ ಕ್ಷೇತ್ರದ ಚುನಾವಣಾಧಿ­ಕಾರಿ ಮತ್ತು ಬೆಳಗಾವಿ

ವಿಭಾಗದ ಪ್ರಾದೇ­­­ಶಿಕ ಆಯುಕ್ತರು ವಿಶ್ವ­ವಿದ್ಯಾ­ಲ­ಯದ ಕುಲಸಚಿವರಿಗೆ ಪತ್ರ ಬರೆದು, ‘ಚುನಾ­­­­­ವಣಾ ನೀತಿ ಸಂಹಿತೆ ಜಾರಿಯ­ಲ್ಲಿ­­­­ರು­ವಾಗ ನೇಮಕಾತಿ ಪ್ರಕ್ರಿಯೆ ನಡೆ­ಸು­ವುದು ಸರಿಯಲ್ಲ’ ಎಂದು ತಿಳಿಸಿ­ದ್ದಾರೆ. ಇಷ್ಟಾ­ದರೂ ನೇಮಕಾತಿ ಪ್ರಕ್ರಿಯೆ ನಡೆ­ಸ­­ಲಾಗಿದೆ ಎಂದು ಸಮಿತಿ ಅಭಿ­ಪ್ರಾ­ಯ­ಪಟ್ಟಿದೆ.

ನೀತಿ ಸಂಹಿತೆ ಜಾರಿಯಲ್ಲಿರುವಾ­ಗಲೇ 2014ರ ಜೂನ್‌ 23ರಂದು 15 ಸಹಾ­ಯಕ ಗ್ರಂಥಪಾಲಕರ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ. 2010ರ ಮಾರ್ಚ್ 23ರಂದು 26 ಸಹಾಯಕ ಗ್ರಂಥ­­ಪಾಲಕರ ಹುದ್ದೆಗೆ ಅರ್ಜಿ ಕರೆಯ­ಲಾ­­ಗಿತ್ತು. ಅದರಲ್ಲಿ ಮೀಸಲಾತಿ­ಯನ್ನೂ ನಿಗದಿ ಮಾಡಲಾಗಿತ್ತು. ಅಲ್ಲದೆ ಅಭ್ಯ­ರ್ಥಿ­ಗಳ ಅನುಭವದ ಬಗ್ಗೆ ಏನೂ ಪ್ರಸ್ತಾಪ ಇರ­ಲಿಲ್ಲ. ಆದರೆ 2014ರ ಜೂನ್‌ 23ರಂದು ಹೊರಡಿ­ಸ­­ಲಾದ ಅಧಿ­ಸೂಚ­ನೆ­­­ಯಲ್ಲಿ ಅತಿಥಿ ಗ್ರಂಥ­­ಪಾಲಕರೂ ಸೇರಿ­ದಂತೆ ತಾತ್ಕಾಲಿಕ ಅಥವಾ ಅರೆಕಾಲಿಕ ಗ್ರಂಥಪಾಲಕರಾಗಿ ಕೆಲಸ ಮಾಡಿದವರ ಅನುಭವವನ್ನು ಪರಿ­­ಗ­ಣಿ­ಸುವುದಿಲ್ಲ ಎಂದು ಹೇಳ­ಲಾ­ಗಿದೆ. 

ಆ ಮೂಲಕ ಅರ್ಹ ಮತ್ತು ಪರಿ­ಣತ ಅಭ್ಯರ್ಥಿಗಳ ಹಕ್ಕನ್ನು ಮೊಟಕು­ಗೊ­ಳಿ­ಸಲಾಗಿದೆ. ವಿಶ್ವ­ವಿದ್ಯಾ­ಲ­ಯದ ಹಲ­ವಾರು ವಿಭಾಗ­ಗ­ಳಲ್ಲಿ ಅತಿಥಿ ಸಿಬ್ಬಂದಿ­ಗಳನ್ನು ನೇಮಕ ಮಾಡಿ­ಕೊ­ಳ್ಳುವ ಪದ್ಧತಿ ಹಲವಾರು ವರ್ಷ­ಗ­ಳಿಂದ ನಡೆದು­ಕೊಂಡು ಬಂದಿದೆ. ಅಂತಹ ಅಭ್ಯರ್ಥಿ­ಗಳು ಪಡೆದ ಅನುಭ­ವ­ವನ್ನು ನೇಮ­ಕಾತಿ ಸಂದರ್ಭದಲ್ಲಿ ಪರಿ­ಗಣಿಸು-ವು­ದಿಲ್ಲ ಎಂದು ಹೇಳುವುದು ಸರಿ­ಯಲ್ಲ.

ಇದ­ರಿಂದ ಅಧಿಸೂಚನೆ ಹೊರ­ಡಿ­ಸು­ವು­ದ­ರಲ್ಲಿಯೇ ತಪ್ಪಾಗಿದೆ. ಇದು ಇದೇ ವಿಶ್ವ­ವಿದ್ಯಾಲಯದಲ್ಲಿ ಅತಿಥಿ ಸಿಬ್ಬಂದಿ­ಯಾಗಿ ಅನುಭವ ಪಡೆದವರ ಹಕ್ಕನ್ನು ಕಸಿದು­ಕೊಂಡಂತೆ ಆಗುತ್ತದೆ. ಹೀಗೆ ಮಾಡು­ವುದು ಸರಿಯಲ್ಲ ಎಂದೂ ಸಮಿತಿ ಹೇಳಿದೆ.

ತಾರ್ಕಿಕ ಮನಸ್ಸು ಅಗತ್ಯ: ಕುಲಪತಿ
ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ನಡೆದಿರುವ ಅಕ್ರಮಗಳನ್ನು ವಿಚಾರಣೆ ಮಾಡಲು ಪ್ರಸಿದ್ಧ ಪತ್ತೇದಾರ ಶರ್ಲಾಕ್‌ ಹೋಮ್ಸ್‌ ಅಗತ್ಯವಿಲ್ಲ ಎಂದು ನ್ಯಾಯ­ಮೂರ್ತಿ ಬಿ.ಪದ್ಮರಾಜ್‌ ತಮ್ಮ ವರದಿಯಲ್ಲಿ ಹೇಳಿರುವುದಕ್ಕೆ ಕುಲಪತಿ ಡಾ.ಎಚ್‌.ಬಿ. ವಾಲಿಕಾರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಕೇವಲ ನಾಲ್ಕು ಮಂದಿ ನೀಡಿದ ದೂರಿನ ಹಿನ್ನೆಲೆಯಲ್ಲಿ ನಡೆಸಿದ ವಿಚಾರಣೆ ಹಾಗೂ ತಮ್ಮ ವಿರುದ್ಧ ಹಲವಾರು ದಿನಗಳಿಂದ ನಡೆಯುತ್ತಿರುವ ವ್ಯವಸ್ಥಿತ ಪಿತೂ­ರಿಯನ್ನು ಅರಿಯಲೂ ಶರ್ಲಾಕ್‌ ಹೋಮ್ಸ್‌ ಅಗತ್ಯವಿಲ್ಲ. ತಾರ್ಕಿಕವಾದ ಮನಸ್ಸು ಇದ್ದರೆ ಸಾಕು ಎಂದು ಅವರು ಹೇಳಿದ್ದಾರೆ.

ಕೆ.ಎಸ್‌.ಜಯಂತ್‌, ಈರೇಶ ಅಂಚಟಗೇರಿ, ಅರುಣ ಜೋಶಿ, ಡಾ.ರಘು ಅಕ­ಮಂಚಿ ಅವರು ಸಲ್ಲಿಸಿದ ದೂರು ಹಾಗೂ ಇದರ ಹಿಂದೆ ಯಾರಿದ್ದಾರೆ ಎಂದು ತಿಳಿ­ಯಲೂ ತಾರ್ಕಿಕ ಮನಸ್ಸು ಇದ್ದರೆ ಸಾಕು ಎಂದೂ ಅವರು ಹೇಳಿದ್ದಾರೆ.
(ಮುಂದುವರಿಯುವುದು)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT