ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೀಯಾ ಮಾಸಿ...

Last Updated 25 ಜೂನ್ 2016, 19:30 IST
ಅಕ್ಷರ ಗಾತ್ರ

ಗದಗ ನಿಲ್ದಾಣದಲ್ಲಿ ಬಸ್ಸು ನಿಂತಾಗ, “ನಿಮ್ಮ ಟೂಥ್ ಪೇಸ್ಟಿನಲ್ಲಿ ಉಪ್ಪಿದೆಯೇ?” ಎಂದು ಹಳದಿ ಬಣ್ಣದ ಗೋಡೆಯ ಮೇಲೆ ನೀಲಿ ಅಕ್ಷರಗಳಲ್ಲಿ ಪೇಂಟು ಬಳಿಯುತ್ತಾ ನಿಂತ, ಬೆನ್ನ ಮೇಲೆ ಉದ್ದಕೆ ಹರಿದಿದ್ದ ಮಾಸಲು ಕೆಂಪು ಶರ್ಟನ್ನು ಹಾಗೇ ಉದ್ದಕೆ ಹೊರಗೆ ಕಾಣುವ ಹಾಗೆ ಹೊಲಿಗೆ ಹಾಕಿಕೊಂಡಿದ್ದ ಆ ವಿಸ್ಮಯ ಮನುಷ್ಯನ ಕೈಲಿದ್ದ ಹಳದೀ ಹಿಡಿಕೆಯ ದೊಡ್ಡ ಬ್ರಶ್ಶು ನೋಡುತ್ತಲೇ ಅನುಷಾಳಿಗೆ ಗಡಿಬಿಡಿಯಲ್ಲಿ ಹೆಗಲಿಗೆ ಹಾಕಿಕೊಂಡು ಬಂದ ಬ್ಯಾಗಿನಲ್ಲಿ ಟೂಥ್ ಬ್ರಶ್ಶು ಇಲ್ಲದ್ದು ಗಮನಕ್ಕೆ ಬಂತು. “ಥಥ್ ನಿನ್ನ” ಎಂದು ತನ್ನನ್ನೇ ತಾನು ಹಳಿದುಕೊಂಡು ಹಾವೇರಿಯಲ್ಲಿ ಇಳಿದ ತಕ್ಷಣವೇ ಟೂಥ್ ಬ್ರಶ್ಶು ಒಂದನ್ನು ಕೊಂಡುಕೊಳ್ಳಲೇಬೇಕು ಎಂದುಕೊಂಡಳು.

“ಗಾಣಗೇರಹಳ್ಳಿಯಾಗ ನಾನಿದ್ದಾಗಂತೂ ಯಾವ ದೊಡ್ಡ ಅಂಗಡೀನೂ ಇರಲಿಲ್ಲ. ಈಗ ಪರಿಸ್ಥಿತಿ ಹೆಂಗದ ಯಾರಿಗ್ಗೊತ್ತು” ಅಂತ ಅವಳಿಗೆ ಚಿಂತೆಯಾಯಿತು. ಹಾವೇರಿ ತಲುಪುತ್ತಲೇ ತಾನಂತೂ ಇದನ್ನು ಮರೆತೇ ಮರೆಯುತ್ತೇನೆ ಎಂದು ಗೊತ್ತಿದ್ದ ಅನುಷಾ, ನಲವತ್ತೈದು ನಿಮಿಷದ ನಂತರ ಅಲಾರಾಂ ಆಗುವ ಹಾಗೆ “ಟೂಥ್ ಬ್ರಶ್ಶು” ಅಂತ ತನ್ನ ಮೊಬೈಲಿನಲ್ಲಿ ರಿಮೈಂಡರ್ ಹಾಕಿಕೊಂಡಳು. ನಿಮಿಷಗಳುರುಳಿದಂತೆ ಆ ಪಟ್ಟಿಗೆ ಸೋಪು, ಟೂಥ್ ಪೇಸ್ಟು, ಪುಟ್ಟ ಪೌಡರು ಡಬ್ಬ, ಬಿಸ್ಲರಿ ಬಾಟಲ್ಲು, ವಿಸ್ಪರ್ ಚಾಯ್ಸ್– ಎಲ್ಲ ಸೇರಿಕೊಳ್ಳುತ್ತ ಹೋದವು.

ಈಗೆರಡು ವರುಷಗಳಲ್ಲಂತೂ ಅವಳಿಗೆ ನೆನಪಿರುವಂತೆ ಅನುಷಾ ಒಬ್ಬಳೇ ಎಲ್ಲಿಗೂ ಪ್ರಯಾಣ ಮಾಡಿಲ್ಲ. ಇಬ್ಬರಿಗೂ ರಜೆ ಸಿಕ್ಕಿದಾಗ ಅಸ್ಮಾಳನ್ನು ಕರೆದುಕೊಂಡು ಚೆನ್ನೈ – ಹೈದರಾಬಾದು ಅಂತೆಲ್ಲ ಅವಳು ಸುತ್ತಾಡಿ ಬರುವುದಿದೆ. “ಅಸ್ಮಾನೂ ಬಂದಿದ್ದರ ಅದೂ ಇದೂ ಮರ್ತು ಬರೋ ರಗಳೆ ಒಂದ ಇರಂಗಿಲ್ಲ ನೋಡ. ಎಲ್ಲಾನೂ ತಪ್ಪದ ಪ್ಯಾಕು ಮಾಡತಾಳ ಆಕಿ” ಅಂತ ನೆಚ್ಚಿ ಅವಳನ್ನೊಮ್ಮೆ ನೆನೆಸಿಕೊಂಡಳು. ಮರುಕ್ಷಣವೇ ಅಸ್ಮಾಳ ನಿನ್ನೆಯ ರೌದ್ರ ಸ್ವರೂಪ ಕಣ್ಮುಂದೆಯೇ ಎರಚಿದಂತಾಗಿ ಇಂಥ ಸಮಯದಲ್ಲಿ ಮನುಷ್ಯ ಮಾತ್ರಳಾದ ನಾನು ಅವಳನ್ನು ಕಹಿಯಿಲ್ಲದ ಬೇರೆ ಯಾವುದಾದರೂ ಕಾರಣಕ್ಕೆ ಮೆಚ್ಚಬಹುದೇ ಇಲ್ಲವೇ ಎಂದು ತಬ್ಬಿಬ್ಬಾದಳು.

ನಿನ್ನೆ ರಾತ್ರಿ ಮನೆಯಲ್ಲಿ ನಡೆದ ಮನಸ್ತಾಪದಲ್ಲಿ ತನ್ನ ಕೊಡುಗೆಯೆಷ್ಟು, ಅಸ್ಮಾಳ ಪಾಲೆಷ್ಟು ಎಂಬುದು ಕಣ್ಣೆದುರಿಗೆ ತಂದುಕೊಳ್ಳುವುದಕ್ಕೂ ಅನುಷಾಳಿಗೆ ಆಯಾಸವೆನಿಸಿತು. “ನನಗಿಂತ ಹೆಚ್ಚು ರೊಕ್ಕಾ ದುಡೀತಾಳ ಅನ್ನೋ ಒಂದ ಕಾರಣಕ್ಕ ಹೆಂಗ ಬೇಕೋ ಹಾಂಗ ಸವಾರಿ ಮಾಡತಾಳ. ಇಕೀ ಸಲುವಾಗ ಅಲ್ಲೇನ ನಾನು ಬೆಂಗಳೂರಿನ್ಯಾಗ ಸಿಕ್ಕಿದ್ದ ಅಷ್ಟು ದೊಡ್ಡ ಕಂಪನಿಯ ಅಷ್ಟು ಚೊಲೋ ಕೆಲಸಾ ಬಿಟ್ಟ ಬಂದಿದ್ದು. ಏನ್ ಇಕೀನ್ನ ಬಿಟ್ಟರ ನನಗ ಜನಾನ ಇಲ್ಲಾ ಅಂದ್ಕೊಂಡಾಳೇನೋ” ಎಂದು ಕೋಪದಲ್ಲಿ ಅಂದುಕೊಂಡರೂ ಮನಸ್ಸು ಭಾರವಾಗಿತ್ತು. ಕಣ್ಣಿನಿಂದ ಅವಳಿಗರಿವಿಲ್ಲದೇ ಎರಡು ಹನಿ ಜಾರುವುದರಲ್ಲಿತ್ತು.

ಸಿನಿಮಾ ಹಿರೋಯಿನ್ ರೀತಿಯಲ್ಲಿ ಅದನ್ನು ಕಣ್ಣಲ್ಲೇ ತುಳುಕಿಸುತ್ತ ಒಂದೆರಡು ನಿಮಿಷ ಬ್ಯಾಲೆನ್ಸ್ ಮಾಡಿದಳು. ಆಮೇಲೆ ತನ್ನ ಕುರಿತು ತನಗೇ ನಾಚಿಗೆಯಾಗಿ ಹ್ಯಾಂಡ್ ಬ್ಯಾಗಿನಿಂದ ತುದಿಯಲ್ಲಿ ಎರಡು ಬಣ್ಣದ ಹೂವುಗಳ ಕಸೂತಿಯಿದ್ದ ಚೌಕಳಿ ಕರ್ಚೀಫು ತೆಗೆದು ಕಣ್ಣುಗಳಿಗೆ ಒತ್ತಿಕೊಂಡು ಒರೆಸಿಕೊಂಡಳು. ಹಾಗೆ ಒರೆಸಿಕೊಳ್ಳುವಾಗಲೇ ಆಯ ತಪ್ಪಿ ಎರಡು ಹನಿ ಅವಳು ತೊಟ್ಟ ತುಸು ಸಡಿಲವಾಗಿಯೇ ಇರುವ ಕಪ್ಪು ಬಿಳಿ ಚೆಕ್ಸ್‌ಗಳಿರುವ ಕುರ್ತಾದ ಎದೆಯ ಭಾಗದ ಮೇಲೆ ಬಿದ್ದು ಚರ್ಮ ತಂಪಾಯಿತು. ಮುಖ ಸಿಂಡರಿಸಿ “ಹತ್ತರಿಕೆ” ಎಂದುಕೊಂಡಳು. 

ಬೆಳಿಗ್ಗೆ ಆರಕ್ಕೇ ಎದ್ದು ಇನ್ನೂ ಹಾಲುನಿದ್ದೆಯಲ್ಲಿದ್ದ ಅಸ್ಮಾಳಿಗೆ ಒಂದು ಮಾತನ್ನೂ ಹೇಳದೇ ಬ್ಯಾಗಿನಲ್ಲಿ ಒಂದು ಜೀನ್ಸು, ಎರಡು ಟಾಪು ಹಾಕಿಕೊಂಡು ಬಂದುಬಿಟ್ಟಿದ್ದಳು. ಕೋಪದಲ್ಲಿ ಒಳ ಉಡುಪುಗಳನ್ನೂ ಪ್ಯಾಕು ಮಾಡುವುದ ಮರೆತಿದ್ದಳು. ಮನೆ ಬಿಡುವ ಮೊದಲು ಆ ವಾತಾವರಣದಿಂದ ಮೊದಲು ಹೊರಬರುವುದು ಮಾತ್ರ ಈ ಪ್ರವಾಸದ ಏಕಮೇವ ಉದ್ದೇಶವಾಗಿತ್ತು. ಬೆಂಗಳೂರಿಗೆ ಹೋಗಿ ಒಂದೆರಡು ದಿನ ಯಾವುದಾರರೂ ಪೀಜಿಯಲ್ಲಿ ಇದ್ದು ಬಂದುಬಿಡಲೇ ಅಂತ ಒಂದು ಭಯಂಕರ ಯೋಚನೆ ಒಮ್ಮೆ ತಲೆಯಲ್ಲಿ ಮಿಂಚಿ ಮರೆಯಾಯಿತು. ಆದರೆ ಮನಸ್ಸಿಗೆ ಶಾಂತಿ ಬೇಕಾದ ಈ ಸಂದರ್ಭದಲ್ಲಿ ಆ ಬೃಹತ್ ನಗರದ ಜನಜಂಗುಳಿಯಲ್ಲಿ ಸೇರಿಹೋಗುವುದು ಅಷ್ಟೇನೂ ಪ್ರಾಕ್ಟಿಕಲ್ ಅನ್ನಿಸಲಿಲ್ಲ. ಬದಲಿಗೆ ಹಾವೇರಿಯ ತನ್ನೂರು ಗಾಣಗೇರಹಳ್ಳಿಗೆ ತೆರಳುವುದು ಅಂತ ಎಣಿಸಿದಳು.

ಹೇಗೂ ಮನೆಗೆ ಹೋಗದೇ ಹತ್ತಿರ ಹತ್ತಿರ ನಾಲ್ಕು ವರ್ಷಗಳಾಗುತ್ತ ಬಂದಿತ್ತು. ಮೂರು ತಿಂಗಳಿಗೊಮ್ಮೆ ಹುಬ್ಬಳ್ಳಿಯಲ್ಲಿ ನೆಲೆಸಿರುವ ತಮ್ಮ ಸಂಬಂಧಿಕರ ಮನೆಗಳಿಗೆ ಹಾವೇರಿಯ ಗಾಣಗೇರಹಳ್ಳಿಯಿಂದ ಆರ್.ಡಿ. ವಸೂಲಿಗೆಂದು ಬರುವ ಆಯಿಯೇ ಮನೆಗೆ ಬಂದು ತನ್ನಿಷ್ಟದ ಅತ್ರಾಸಿನ ಡಬ್ಬ ಕೊಟ್ಟು ಹೋಗುತ್ತಿದ್ದಳು. ಮಜಾ ಅಂದರೆ ಆಯಿಯ ಬಳಿ ಒಂದೇ ಬಗೆಯಲ್ಲಿ ಕಾಣುವ ಎರಡು ಡಬ್ಬಿಗಳಿದ್ದವು. ಆ ಎರಡರಲ್ಲಿ ಒಂದು ಯಾವತ್ತೂ ಅನುಷಾಳ ಬಳಿಯೇ ಇರುತ್ತಿತ್ತು. ಮೂರು ತಿಂಗಳ ಬಳಿಕ ಆಯಿ ಆ ಇನ್ನೊಂದು ಡಬ್ಬಿಯಲ್ಲಿ ಅತ್ರಾಸು ತುಂಬಿಕೊಂಡು ಬಂದು ಈ ಡಬ್ಬಿಯನ್ನು ತೆಗೆದುಕೊಂಡು ಹೋಗುತ್ತಿದ್ದಳು.

ಅನುಷಾ ಮತ್ತು ಅವಳ ತಂಗಿ ಗೀತಾ ಊರಿನಲ್ಲಿ ಪ್ರಾಥಮಿಕ ಶಾಲೆಗೆ ಹೋಗುವಾಗ ದಿನವೂ ಟಿಫಿನ್ ಕ್ಯಾರಿಯರ್‌ಗಳಾಗಿ ಬಳಕೆಯಾಗುತ್ತಿದ್ದ ಗುಂಡನೆಯ ಸ್ಟೀಲು ಡಬ್ಬಗಳವು. ಈಗ ಅನುಷಾ ವಾರಪತ್ರಿಕೆಯೊಂದರಲ್ಲಿ ಕೆಲಸ ಮಾಡಲು ಹುಬ್ಬಳ್ಳಿ ಮತ್ತು ಅವಳ ತಂಗಿ ಗೀತಾ ಸಾಫ್ಟ್‍ವೇರಿಗಳಾಗಿ ಬೆಂಗಳೂರು ಸೇರಿಕೊಂಡ ಮೇಲೆ ಆ ಎರಡೂ ಡಬ್ಬಿಗಳೂ ಆಯಿಯ ಮನೆಯಲ್ಲಿಯೇ ಉಳಿದಿದ್ದವು. ಅಸ್ಮಾ ಯಾವಾಗಲೂ ಅದನ್ನು ‘ಅತ್ರಾಸು ಕ್ಯಾರಿಯರ್ ಸರ್ವಿಸಸ್’ ಅಂತ ಮನಃಪೂರ್ವಕ ಹಾಸ್ಯ ಮಾಡುತ್ತಾಳೆ. ಆಯಿ ಬಂದಾಗ ಆದಷ್ಟು ತನ್ನ ಮತ್ತು ಅಸ್ಮಾಳ ಬಟ್ಟೆಗಳನ್ನೂ ಒಳ ಉಡುಪುಗಳನ್ನೂ ಬೇರೆ ಬೇರೆ ಇಡುವುದರಲ್ಲಿಯೇ ಹೈರಾಣಾಗುವ ಅನುಷಾ ಅವಳ ಜೋಕುಗಳಿಗೆ ಕಷ್ಟದಿಂದ ನಗುತ್ತಾಳೆ.

ಆಯಿ ಬಂದಾಗೊಮ್ಮೆ ಅಸ್ಮಾಳ ಹತ್ತಿರ ಪಟ್ಟಾಂಗ ಹಚ್ಚಿಯೇ ಹಚ್ಚಿರುತ್ತಾಳೆ. “ಅಲ್ಲಾ ನಮ್ಮ ಗೀತೀನ್ನ ನೋಡವಾ, ಕಂಪ್ಯೂಟರ್ ಕಲತು ಬೆಂಗಳೂರು ಸೇರಿಕೊಂಡು ಉದ್ಧಾರಾದಳು. ನೀನೂ ಬ್ಯಾಂಕಿನ್ಯಾಗ ಕೆಲಸಾ ಮಾಡತಿ, ಇಂದಲ್ಲ ನಾಳೆ ಬೆಂಗಳೂರು ಸೇರಿಕೋತಿ. ಆದ್ರ ನೋಡಬೇ ಇಕೀನ್ನ, ಹಟಾ ಮಾಡಿ ಅದ್ಯಾವುದೋ ಸುಡುಗಾಡು ಕೋರ್ಸು ಮಾಡ್ಕೊಂಡಾಳ. ಪೇಪರಿನಾಗ ಕೆಲಸಾ ಮಾಡತಾಳಂತ. ಈಕಿದೊಂದು ಜೀವನಾ ಹಿಂಗಾಗಿ ಹೋತು ನೋಡು” ಎನ್ನುತ್ತಾಳೆ. ಅವ್ವನ ಪ್ರಕಾರ ಉದ್ಧಾರ ಆಗುವುದೆಂದರೆ ಬೆಂಗಳೂರು ಸೇರಿಕೊಳ್ಳುವುದು. ತನ್ನ ಮಾತಿನಲ್ಲಿ ಐದು ನಿಮಿಷಕ್ಕೊಮ್ಮೆಯಾದರೂ ಬೆಂಗಳೂರಿನ ವಿಷಯ ಎತ್ತದಿದ್ದರೆ ಅವ್ವನಿಗೆ ಸಮಾಧಾನವೇ ಆಗುವುದಿಲ್ಲ.

ಆಗೆಲ್ಲ ಅನುಷಾ “ಅವ್ವಾ, ನಾನೂ ಪತ್ರಿಕೆ ಕೆಲಸಾನ್ನ ಕಂಪ್ಯೂಟರಿನ್ಯಾಗನ ಮಾಡೂದ ಬೇ” ಎಂದು ನಗುತ್ತಾಳೆ. ಅದಕ್ಕೆ ಆಯಿ ಇನ್ನಷ್ಟು ರೇಗಿ ತನ್ನ ವರಸೆ ಬದಲಿಸುತ್ತಾಳೆ. “ನಮ್ಮ ಗೀತೀಗ ಈಗನ ಗಂಡು ಬರಾಕ ಶುರು ಆಗ್ಯಾವು. ಅಲ್ಲಾ ಅಕ್ಕನ ಮದವಿ ಆಗದ ತಂಗೀಗ ಹ್ಯಾಂಗ ಗಂಡು ನೋಡಲಿ ಹೇಳವಾ. ಮದವಿ ವಿಷಯಾ ತಗದರ ಸುಡುಸುಡು ಅಂತಾಳ. ನೀನರ ಹೇಳು ನಿನ್ನ ಈ ಗೆಳತೀಗೆ” ಎಂದು ಆಯಿ ಹೇಳುವಾಗ ಅಸ್ಮಾ ಆ ಮಾತುಗಳನ್ನೂ ಅತ್ರಾಸಿನ ಚೂರಿನ ಜೊತೆಗೆ ಅಗಿಯದೇ ನುಂಗಿ ಬಿಡುವಳು. ಅತ್ತ ಆಯಿ ಬೆಳಕಿರುವಾಗಲೇ ಹಾವೇರಿಯ ಕೊನೆಯ ಬಸ್ಸಿಗೆ ಗಾಣಗೇರಹಳ್ಳಿಗೆ ತೆರಳಿದ ನಂತರ ಅಸ್ಮಾ “ನಿಮ್ಮ ಆಯೀಗೆ ಹೇಳಿಬಿಡೂದ ಸರೀ ಅನ್ನಿಸತೇತಿ. ಯಾಕೋ ಅವರಿಗೆ ಮೋಸಾ ಮಾಡಾತ್ತೇವೇನೋ ಅನ್ನಿಸಾತ್ತೇತಿ ನನಗ” ಅಂತ ಅನುಷಾಳಿಗೆ ಗಂಟು ಬೀಳುವಳು.

ಇಂಟರ್ನೆಟ್ಟಿನಲ್ಲಿ ಅಮೇರಿಕಾದ ವಿದ್ಯಮಾನಗಳ ಕುರಿತು ಓದುವಾಗ ಅಲ್ಲೆಲ್ಲೋ ಕಾಣದ ದೇಶದಲ್ಲಿ ಮದುವೆಯಾಗಿ ಮುತ್ತಿಕ್ಕುತ್ತಿರುವ ಸಲಿಂಗ ಸಖಿಯರನ್ನು ನೋಡುತ್ತ ಒಂದು ಕ್ಷಣ ಇಬ್ಬರೂ ಮೈಮರೆಯುವರು, ಕೂತಲ್ಲೇ ಸ್ವಪ್ನ ಕಾಣುವರು. “ಅಲ್ಲಾ, ಯಾವ್ದೋ ಕಾಲದಾಗ ಆರನೆತ್ತಾ ತನಕಾ ಮಾತ್ರ ಕಲತು, ನಲವತ್ತಕ್ಕನ ಗಂಡನ್ನ ಕಳಕೊಂಡು, ಕಡೀಕ ಮ್ಯಾಣದ ಬತ್ತೀ ಫ್ಯಾಕ್ಟರಿಯಾಗ ಕೆಲಸಕ್ಕ ಸೇರಿ ಹೊಟ್ಟಿ ಬಟ್ಟಿ ಕಟ್ಟಿ ನನ್ನನ್ನೂ ಗೀತೀನ್ನೂ ಬೆಳೆಸಿದ ಆಯೀಗ ಇಂಥಾ ಸೂಕ್ಷ್ಮ ವಿಷಯಾನ ಎಂದರ ನಾ ಹೇಳಾಕ ಸಾಧ್ಯಾ ಐತೇನ?” ಬಸ್ಸು ಗದಗ ದಾಟುತ್ತಿದ್ದಂತೆ ನೀರಿಲ್ಲದೇ ಬಿರುಕುಬಿಟ್ಟ ಜೋಳದ ಗದ್ದೆಗಳನ್ನು ನೋಡುತ್ತ ಅನುಷಾ ಯೋಚಿಸಿದಳು.

ಹುಬ್ಬಳ್ಳಿಯಲ್ಲಿ ಬಸ್ಸು ಹತ್ತಿದಾಗಿನಿಂದ ಪಕ್ಕದಲ್ಲಿ ತಾಯಿಯ ತೊಡೆಯ ಮೇಲೆ ನಿದ್ದೆಹೋದ ಗುಲಾಬಿ ಫ್ರಾಕಿನ ಪುಟ್ಟ ಮಗುವೊಂದು ಆಗಷ್ಟೇ ಎಚ್ಚರವಾಗಿತ್ತು. ಎದ್ದದ್ದೇ ಕಿಟಕಿಯ ಹೊರಗೆ ಕಣ್ಣು ನೆಟ್ಟು ಶೂನ್ಯ ದಿಟ್ಟಿಸುತ್ತ ಕೂತ ಅನುಷಾಳ ತೊಡೆಯ ಮೇಲೆ ತನ್ನ ಪುಟ್ಟ ಕೈಯನ್ನಿಟ್ಟಿತು. ತಟ್ಟನೆ ಎಚ್ಚೆತ್ತ ಅನುಷಾ ಆ ಮಗುವನ್ನು ನೋಡಿ ಹಾರ್ದಿಕವಾಗಿ ನಕ್ಕಳು. ಆ ಮಗು ಇನ್ನೂ ಹತ್ತಿರಕ್ಕೆ ಬಂದು ಅವಳ ಮೇಲೆ ಪೂರ್ತಿ ತನ್ನ ಭಾರ ಹಾಕಿ ಕೂತು ಅವಳ ಮುಖಕ್ಕೆ ತುಂಬ ಹತ್ತಿರ ಬಂದು ಕೆನ್ನೆ ಮುಟ್ಟಿ “ನೀಯಾ ಮಾಸಿ” ಅಂದಿತು. ಎಷ್ಟೋ ವರ್ಷಗಳಿಂದ ಪುಟ್ಟ ಮಗುವೊಂದನ್ನು ಅಷ್ಟೊಂದು ಹತ್ತಿರದಿಂದ ನೋಡದ ಅನುಷಾಳಿಗೆ ಒಳಗಿನಿಂದೇನೋ ಉಕ್ಕಿ ಬಂದಂತಾಗಿ ಕಣ್ಣಾಲಿಗಳು ತುಂಬಿ ನಿಂತವು.

ಅದನ್ನು ಕರ್ಚೀಫಿನಲ್ಲಿ ಒರೆಸಿಕೊಳ್ಳುತ್ತಲೇ “ಏನ್ ಪುಟ್ಟಾ” ಎಂದು ಅದರ ಕೆನ್ನೆ ಮುಟ್ಟಿ ಅಂದಳು. ಅದಕ್ಕೆ ಆ ಮಗು ಸೀಟಿನ ಮೇಲೆ ಹತ್ತಿ ನಿಂತು ಆಸರೆಗಾಗಿ ಅನುಷಾಳ ಹೆಗಲು ಹಿಡಿದು ಅವಳ ಮೂಗು ಮುಟ್ಟುತ್ತ, ಮೂಗಿನಂಚಿನಲ್ಲಿದ್ದ ರಿಂಗು ಎಳೆಯುತ್ತ ಮತ್ತೆ “ನೀಯಾ ಮಾಸಿ” ಅಂದಿತು. ಹಾಗಂದು ಅದು ತನ್ನ ದೊಡ್ಡ ಕಣ್ಣುಗಳನ್ನು ಮಿಂಚಿಸುತ್ತ ಮುಂದಿನ ಎರಡೇ ಹಲ್ಲುಗಳನ್ನು ತೆಗೆದು ಕೇಕೆ ಹಾಕಿ ನಕ್ಕಿತು. ಆ ಸದ್ದಿಗೆ ಪಕ್ಕದಲ್ಲಿ ಕೂತಿದ್ದ ಅವರಮ್ಮನಿಗೆ ಎಚ್ಚರಾಗಿ ಅವಳು ಆ ಮಗುವನ್ನು ಬಲವಂತದಿಂದ ತನ್ನೆಡೆಗೆ ಎಳೆದುಕೊಂಡಳು. ಅನುಷಾಳತ್ತ ತಿರುಗಿ “ಅಯ್ಯೊ ಸಾರಿ ರೀ” ಎಂದು ನಕ್ಕಳು. “ಹಾಂಗೇನಿಲ್ಲಾ ಬಿಡರಿ. ಭಾಳ ಕ್ಯೂಟ್ ಅದಾಳ ನಿಮ್ಮ ಮಗಳು.

ಏನ್ ಹೆಸರಿಟ್ಟೀರಿ” ಅಂದ ಅನುಷಾಳನ್ನು ನೋಡುತ್ತಾ ಆ ಮಗು ಮತ್ತೆ ಮುಂಚಿನಂತೇ ನಕ್ಕಿತು. ಒಂದು ಕ್ಷಣ ಅನುಷಾಗೆ ತಾನು ಹಾಗೆ ಅಷ್ಟು ಮುಗ್ಧವಾಗಿ ನಗುವುದು ಏಕಾಂತದಲ್ಲಾದರೂ ಸಾಧ್ಯವಿದೆಯೇ ಅಂತನಿಸಿ ಖೇದವಾಯಿತು. “ನನ್ನ ತಂಗಿ ನೀಲಾ ಅಂತ ಮುಂಬೈದಾಗ ಕೆಲಸಾ ಮಾಡ್ತಾಳ. ಆಕೀನ್ನ ನೀಲಾ ಮಾಸಿ ಅಂತ ಹಚ್ಚಿಕೊಂಡೇತಿ ಇದು. ನಿಮ್ಮನ್ನ ಆಕೀ ಅಂತನ ತಿಳಿದಾಳ ಅನ್ನಿಸತೇತಿ” ಅಂತ ಮಗುವಿನ ಕಂಕುಳಿಗೆ ಕೈಹಾಕಿ ಹಿಡಿದು ಅದರ ಕುತ್ತಿಗೆ ಕೆನ್ನೆಗೆ ಮುತ್ತು ಕೊಟ್ಟು ಮುದ್ದುಗರೆಯುತ್ತ ಆ ಹೆಂಗಸು ಹೇಳಿದಳು. 

ಆ ಮಗು ಸಂಭ್ರಮದಿಂದ ಅವರಮ್ಮನ ಕಾಲ ಮೇಲೇ ನಿಂತು ಜಿಗಿದಾಡಲು ಶುರುಮಾಡಿತು. “ಸತ್ಯಾನಾಸ್” ಎನ್ನುತ್ತ ನಕ್ಕು ಆ ಹೆಂಗಸು ಮಗುವನ್ನು ಮತ್ತೆ ಬಸ್ಸಿನ ನೀಲಿ ರೆಗ್ಸಿನ್ ಸೀಟಿನ ಮೇಲೆ ಇಡುತ್ತ “ಹೆಸರ್ ಹೇಳೂ ಪುಟ್ಟಾ ಆಂಟೀಗೆ” ಎಂದಳು. ಅದಕ್ಕೆ ಆ ಮಗು ಏನೂ ಪ್ರತಿಕ್ರಿಯೆ ಕೊಡದೇ ಅನುಷಾಳ ಕುರ್ತಾದ ಜರ್ದೋಸಿ ಡಿಸೈನಿನ ಕನ್ನಡಿಯ ಜೊತೆ ಆಟವಾಡುವುದರಲ್ಲಿ ಮಗ್ನವಾಗಿತ್ತು. ಅವರಮ್ಮ ಮತ್ತೆ “ವಾಟ್ ಈಜ್ ಯುವರ್ ನೇಮ್” ಅನ್ನುತ್ತಲೇ ಅದು ತನ್ನ ಅಮ್ಮನ ಹತ್ತಿರ ತಿರುಗಿದಂತೆ ಮಾಡಿ “ಶೇಯಾ” ಎಂದು ಮತ್ತೆ ತನ್ನ ಆಟದಲ್ಲಿ ಮಗ್ನವಾಯಿತು.

ಇಂಗ್ಲೀಷು ಪ್ರಶ್ನೆಗೆ ಮಾತ್ರ ಉತ್ತರಿಸಿದ ಮಗಳನ್ನು ನೋಡಿ ಆ ಹೆಂಗಸು ವಿಚಿತ್ರ ಹೆಮ್ಮೆಯಿಂದ ನಕ್ಕು “ಶ್ರೇಯಾ ಅಂತಿಟ್ಟೇವ್ರೀ” ಅಂದಳು. “ಒಂದ ವರ್ಷಾ ಇರಬೇಕಲ್ರೀ” ಎಂದು ಆ ಮಗುವಿನ ಪುಟ್ಟ ಪುಟ್ಟ ಬೆರಳುಗಳನ್ನು ಮುಟ್ಟುತ್ತಾ ಅನುಷಾ ಕೇಳಿದಳು. “ಇಲ್ಲರೀಪ್ಪಾ, ಈ ತಿಂಗಳು ಎರಡು ತುಂಬತೇತಿ” ಅಂದ ಆ ಹೆಂಗಸು ಇವಳ ಅಜ್ಞಾನಕ್ಕಾಗಿ ತನ್ನ ಕಣ್ಣನ್ನು ಒಂದು ನಮೂನೆ ಮಾಡಿ ನಕ್ಕಳು. ಯಾವ ವರ್ಷದಲ್ಲಿ ಮಕ್ಕಳು ಎಷ್ಟು ಬೆಳವಣಿಗೆ ಹೊಂದಿರುತ್ತಾರೆ ಎಂಬ ಬಗ್ಗೆ ಚೂರೂ ಜ್ಞಾನವಿರದ ಅನುಷಾ “ಓಹ್” ಎಂದು ತಾನೂ ಸಣ್ಣಗೆ ಮುಗುಳ್ನಕ್ಕಳು.

***
ಪರಿಚಯವಾದ ದಿನಗಳಿಂದಲೂ “ಒಂದ ಮಾತಾಡಿದ್ರ ಕಮ್ಮಿ ಎರಡ ಮಾತಾಡಿದ್ರ ಹೆಚ್ಚು” ಎಂಬಂತೆ ಮಿತಭಾಷಿಯಾಗಿ ಯಾವ ತಪ್ಪು ಮಾತುಗಳನ್ನೂ ಆಡದ, ಅವಳೇ ಹೇಳಿಕೊಳ್ಳುವಂತೆ ಆಡುವ ಪ್ರತೀ ಮಾತನ್ನೂ ಹತ್ತು ಸಾರಿ ಯೋಚಿಸಿಯೇ ಆಡುವ ಅಸ್ಮಾ ನಿನ್ನೆ ಮಾತ್ರ ಬಾಯಿಗೆ ಬಂದಂತೆ ಕೂಗಾಡಿದ್ದಳು. ಸರಿಯಾದ ಕಾರಣಗಳೇ ಇಲ್ಲದ ಅವಳ ರೋಷ, ಕೋಪತಾಪಗಳೆಲ್ಲ ಯಾರ ಮೇಲೆ ಎಂಬುದು ಸ್ವತಃ ಅವಳಿಗೇ ಗೊತ್ತಿದೆಯೋ ಇಲ್ಲವೋ ಎಂಬಂತಿತ್ತು ಅವಳ ವರಸೆ. ಏನೇನೋ ಅಂದಾದ ಮೇಲೆ ಕೊನೆಗೆ “ನನ್ನ ಜೊತೆ ಮಲಗ್ತೀ ಅನ್ನೋ ಒಂದ ಕಾರಣಕ್ಕ ನನಗ ದೊಡ್ಡ ಉಪಕಾರ ಮಾಡಿದ ಹಾಂಗ ಮಾಡಬ್ಯಾಡಾ.

ಸುಟ್ಟು ಸುಟ್ಟು ಕರಕಲಾದ ಜೀವದಾಗಿನ ಜ್ವಾಲಾಮುಖಿ ನಿನಗೇನ ತಿಳೀತದ ಹೇಳು. ಆರಾಮ ಫೋನಿನ್ಯಾಗ ಪಂಟು ಹೊಡಕೊಂತ ಟೀವಿ ನೋಡಿಕೋತ ಕುಂದರತಿ. ಮನೀ ಕೆಲಸಾ ಜವಾಬ್ದಾರಿ ಎಲ್ಲಾ ನಂದ ಅಂತ ಬರದು ಕೊಟ್ಟೇನೇನು” ಅಂತ ಕೂಗಾಡಿದಾಗಲಂತೂ ಅವಳ ಮಾತುಗಳ ಮೊದಲರ್ಧದ ತೀಕ್ಷ್ಣತೆಗೆ ಅನುಷಾ ಮೂಕವಾಗಿಬಿಟ್ಟಿದ್ದಳು. “ಇಬ್ಬರೂ ನಿರ್ಧಾರ ಮಾಡೀನ ಅಲ್ಲೇನು ಈ ಬದುಕನ್ನ ಆರ್ಸಿಕೊಂಡಿದ್ದು. ಯಾರ ಮ್ಯಾಲೂ ಯಾರೂ ಒತ್ತಡ ಹಾಕಿ ಜೊತೆಗಿದ್ದದ್ದು ಅಲ್ಲ ಅಲ್ಲೇನು” ಅಂತ ಅನುಷಾ ಮತ್ತೆ ಕಿಟಕಿಯ ಹೊರಗೆ ಕಣ್ಣು ನೆಟ್ಟು ಯೋಚಿಸಲು ತೊಡಗಿದಳು.

ಒಂದೊಂದು ಬಾರಿಯಂತೂ ಅಸ್ಮಾ ಅವಳಿಗೆ ಬಿಡಿಸಲಾರದ ಕಗ್ಗಂಟಿನಂತೆ ಕಾಣುತ್ತಾಳೆ. ಸರಿಯಾಗಿ ಮಾತನಾಡುತ್ತ ನಗುತ್ತ ಇರುವವಳೇ ಒಮ್ಮೆಲೇ ಗಂಭೀರಳಾಗಿ ಬಿಡುತ್ತಾಳೆ. ಆಗೆಲ್ಲ ಅನುಷಾಳೇ ಅವಳ ಬಳಿಗೆ ಹೋಗಿ “ಏನಾತಲೇ, ಈಗರ ಸರೀ ಇದ್ದ್ಯಲಾ” ಅಂತ ಕುಶಾಲು ಮಾಡಿದರೆ, ತಲೆ ಹಣಕಿಕೊಂಡು ಏನೋ ಕೆಲಸ ಮಾಡುತ್ತಿದ್ದವಳು ಒಮ್ಮೆಲೇ ತಲೆ ಎತ್ತಿ– “ಏನೂ ಇಲ್ಲಲ್ಲಾ, ಸರೀನ ಅದೇನಿ” ಎನ್ನುತ್ತಾಳೆ. ಆಗ ಅವಳ ಕಣ್ಣುಗಳಲ್ಲಿ ಅನುಷಾಳಿಗೆ ಉಧ್ವಸ್ಥಗೊಂಡ ಬೇರೆಯದೇ ಲೋಕ ಕಾಣುವುದು. ದಣಿದಿದ್ದಾಳೆ ಅನ್ನಿಸುವುದು. ಆ ಕಣ್ಣುಗಳಲ್ಲಿನ ಭಾವ ತನ್ನ ಅಮ್ಮನದ್ದೋ ಅಜ್ಜಿಯದೋ ಕಣ್ಣುಗಳಿಗೆ ಹೋಲುತ್ತದೆ ಅಲ್ಲವೇ ಅನ್ನಿಸುವುದು.

ಆಗೆಲ್ಲ ಅನುಷಾಳಿಗೆ ಜೀವಂತವಾಗಿ ದೊರಕಿದ್ದ ಆತ್ಮದ ಗೆಳತಿಯನ್ನು ನಿರಾಯಾಸವಾಗಿ ಸಂಸಾರ ಕೂಪಕ್ಕೆ ತಳ್ಳಿ ತಪ್ಪು ಮಾಡಿಬಿಟ್ಟೆನೇನೋ ಅನ್ನಿಸುವುದು. ವರ್ಷಗಳು ಉರುಳಿದಂತೆ ಅದೇ ಸಾಂಬಾರಿನ ಅದೇ ಒಗ್ಗರಣೆ, ತಾಟಿಟ್ಟಲ್ಲಿ ಮಾತ್ರ ಗೋಲವಾಗಿ ಬಣ್ಣಗೆಟ್ಟ ಡೈನಿಂಗು ಟೇಬಲ್ಲಿನ ಮೇಲೆ ಹಾಸಿದ್ದ ಚಚೌಕ ಡಿಸೈನಿನ ಟೇಬಲ್ ಕ್ಲಾಥು, ಅಡುಗೆಮನೆಯ ಸಿಂಕಿನ ಪಕ್ಕದಲ್ಲಿ ಸುಂಬೆದ್ದು ಇದ್ದುದಕಿಂತ ಗಲೀಜಾಗಿ ಕಾಣುವ ಪಾತ್ರೆ ತೊಳೆಯುವ ಸ್ಕ್ರಬ್ಬರು, ಫ್ಯಾನಿನ ಮೇಲೆ ಪದರು ಪದರುಗಳಲ್ಲಿ ಕೂರುವ ಮಣಗಟ್ಟಲೇ ದೂಳು, ಚಪ್ಪಲಿಯ ಕೆಳಗಿನ ಡಿಸೈನಿನಲ್ಲಿ ಎಂದೋ ಸಿಕ್ಕಿಹಾಕಿಕೊಂಡ ಎಂಥದೋ ವಾಸನೆಯ ಎಲೆ,

ದಿನವೂ ಕೈಯಿಟ್ಟಲ್ಲಿ ಮಾತ್ರ ಬಣ್ಣಗೆಟ್ಟ ಚಪ್ಪಟೆ ಗೋಡೆಗಳು, ನೆಲಕ್ಕೆ ಹಾಸಿದ ಎರಡು ಟೈಲಿಗಳ ಮಧ್ಯದ ಸಣ್ಣ ರಂಧ್ರಗಳಿಂದ ಎದ್ದು ಧುತ್ತೆಂದು ಮನೆ ತುಂಬ ಹಬ್ಬಿಕೊಳ್ಳುವ ಇರುವೆಗಳ ರಾಶಿ, ಮುಚ್ಚಿದಲ್ಲೇ ಹಳಸುವ ಅನ್ನ, ಇಟ್ಟಲ್ಲೇ ಕೊಳೆಯುವ ಹಣ್ಣು– ಎಲ್ಲ ಅನುಷಾಳಿಗೆ ಎಂಥದೋ ಹೇವರಿಕೆ ಹುಟ್ಟಿಸುತ್ತಿತ್ತು. ತುಂಬಾ ಇಷ್ಟಪಟ್ಟು ಕೊಂಡ ಹೊಸ ಡ್ರೆಸ್ಸೊಂದನ್ನು ಮನೆಯಲ್ಲಿ ಹಾಕಿ ಹಾಕಿ ಹಳೆ ಮಾಡಿದಂತೆ, ಇನ್ನೆಂದೂ ಅದು ತನ್ನ ಮೊದಲಿನ ಬಣ್ಣ ಪಡೆಯುವುದೇ ಇಲ್ಲವೇನೋ ಎಂಬಂತೆ ಈ ಸಂಬಂಧದ ಬಗ್ಗೆ ಅವಳಿಗೆ ಭಾಸವಾಗಿದೆ. ಆದರೆ ಆ ಉಪಮೆಯೇ ತಪ್ಪೆಂದು ಕೂಡ ತುಂಬ ಸಲ ಅನ್ನಿಸಿದೆ.

ಆಗೆಲ್ಲ ಇರುವ ಸಂಬಂಧವನ್ನು ಹೊಸತು ಮಾಡಿಕೊಳ್ಳಲು ಅಸ್ಮಾಳನ್ನು ಕರೆದುಕೊಂಡು ದೂರದ ಊರುಗಳಿಗೆ ಟ್ರಿಪ್ಪು ಹೋಗಿ ಬಂದಿದ್ದಾಳೆ. ಆ ಮೂಲಕ ತಾವು ಹೊಸಬರಾದೆವೆಂದು ಭಾವಿಸುತ್ತಾಳೆ. ಒಂದೆರಡು ದಿನದ ನಂತರ ಪ್ರವಾಸದಿಂದ ಕಟ್ಟಿಕೊಂಡು ಬಂದ ಹೊಸತನವನ್ನೆಲ್ಲವನ್ನೂ ದೈನಿಕ ಸದ್ದಿಲ್ಲದೇ ತಿಂದು ಹಾಕುವುದನ್ನೂ ಮನಗಂಡಿದ್ದಾಳೆ.ಇಬ್ಬರೂ ಎಷ್ಟೇ ತಾಳ್ಮೆಯಿಂದ ಇದ್ದರೂ ಇಬ್ಬರಿಗೂ ಗೊತ್ತೇ ಆಗದಂತೆ ಯಾವುದೋ ಒಂದು ಕ್ಷಣದಲ್ಲಿ ಅಕಾರಣ ಅಹಂಕಾರ ನುಸುಳಿಯೇ ಬಿಡುವುದು. ತನ್ನೀ ಮಾನಸಿಕ ವ್ಯಸನಗಳಿಂದ ತನಗೆ ಮುಕ್ತಿಯೇ ಇಲ್ಲವೇನೋ ಅನ್ನಿಸಲು ಶುರುವಾಗಿದೆ ಅವಳಿಗೆ. “ಎಲ್ಲಾರಿಗೂ ಹೀಂಗ ಆಗೂದು.

ಎಲ್ಲಾರೂ ಇದನ್ನ ಫೇಸ್ ಮಾಡತಿರತಾರ. ಇದನ್ನ ಮೀರಬೇಕು. ಗಟ್ಟಿಯಾಗಬೇಕು. ಗಟ್ಟಿಯಾಗಿ ನಿಲ್ಲಬೇಕು. ಬೇರಿಗೆ ಕಚ್ಚಿಕೊಳ್ಳಬೇಕು” ಅಂದುಕೊಂಡಳು. “ಈ ಆಯ್ಕೆ ನಂದ ಅಲ್ಲೇನು, ಇದ್ಯಾವುದಕ್ಕೂ ಬ್ಯಾರೆ ಯಾರೂ ಕಾರಣ ಆಗಾಕ ಸಾಧ್ಯಾನ ಇಲ್ಲ” ಅಂತ ಯೋಚಿಸುತ್ತಲೇ ಅವಳಿಗೆ ಒಳಗಿಂದೇನೋ ಬವಳಿ ಬಂದಂತಾಯಿತು. ಬೇರೆ ಯಾರನ್ನಾದರೂ ಇವೆಲ್ಲದಕ್ಕೂ ಜವಾಬ್ದಾರರನ್ನಾಗಿ ಮಾಡಬೇಕು. ಚಿಕ್ಕ ಮಕ್ಕಳಂತೆ ಅವರನ್ನು ಮನಸುಪೂರ್ತಿ ಬೈಯಬೇಕು ಅಂತ ತೀವ್ರವಾಗಿ ಆಸೆಯಾಯಿತು. 

ಅದೇಕೋ ದಿನ ಕಳೆದಂತೆ ಒಳಗೆ ಮೃದುವಾಗಿ ಮಿಡಿಯುವುದೇನೋ ಮೊದಮೊದಲು ಬಾಡಿ ಹೋದ ಹಾಗೆ, ಕ್ರಮೇಣ ಸುಟ್ಟು ಕರಕಲಾದ ಹಾಗೆ ಇನ್ನೆಂದೂ ತನಗೆ ಮೊದಲಿನಂತೆ ಪ್ರೇಮಿಸಲು, ಯಾವುದೋ ಪ್ರೇಮಗೀತೆಯ ಸಾಲಿಗೆ ಹುಚ್ಚಿಯಂತೆ ಬಿಕ್ಕಲು ಸಾಧ್ಯವೇ ಇಲ್ಲವೇನೋ ಅಂತ ಅನ್ನಿಸಲು ಶುರುವಾಗಿತ್ತು. ಈಗೆಲ್ಲ ವಿವಿಧಭಾರತಿಯಲ್ಲಿ ಪ್ರೇಮಗೀತೆಗಳ ಕಾರ್ಯಕ್ರಮ ‘ಸಿಂಚನ’ ಪ್ರಸಾರವಾಗುವಾಗ ತೆಪ್ಪಗೆ ಅದನ್ನು ಬಿಬಿಸಿ ನ್ಯೂಸ್‌ಗೆ ಅವಳು ಬದಲಾಯಿಸಿ ಬಿಡುತ್ತಾಳೆ. ಒಳಗೆ, ತುಂಬ ತುಂಬ ಆಳದಲ್ಲಿ ಏನೋ ಸಂಕಟ. ನೋವು. ಹಿಂಸೆ. ಇನ್ನೂ ಏನೇನೋ.

ಪಕ್ಕದಲ್ಲಿ ತುಂಬ ಹೊತ್ತಿನಿಂದ ಅನುಷಾಳ ಕುರ್ತಾದ ಜರ್ದೋಸಿ ಡಿಸೈನಿನ ಜೊತೆಗೆ ಆಡುತ್ತ ಕುಳಿತ ಮಗು ಒಮ್ಮೆಲೇ ಮುಖ ಕಿವುಚಿದ್ದನ್ನು ನೋಡುತ್ತಲೇ ಅನುಷಾ “ಏನ್ ಪುಟ್ಟಾ” ಅಂತ ಮಗುವಿನ ಕೆನ್ನೆ ಮುಟ್ಟಿದಳು. ಅದೊಮ್ಮೆ ಕೇಕೆ ಹಾಕಿ ನಕ್ಕು ಹಲ್ಲಿಲ್ಲದ ದವಡೆಯಲ್ಲಿ ಏನೋ ಜಗಿಯುವಾಗ ಅದರ ಕಣ್ಣಲ್ಲಿ ನೀರು ತುಂಬಿಕೊಂಡಿತು. ಅನುಷಾ ತನ್ನ ಬ್ಯಾಗಿನಲ್ಲಿ ಯಾವಾಗಲೂ ಇರುವ ಚಾಕಲೇಟು ತೆಗೆಯಲು ಬಗ್ಗಿದವಳೇ ತನ್ನ ಕುರ್ತಾದ ಅಂಚು ನೋಡಿ ಒಮ್ಮೆಲೇ ಹೌಹಾರಿದಳು. ಮಗು ಕೈ ಹಾಕಿ ಎಳೆಯುತ್ತ ಆಟವಾಡಿದ ಅವಳ ಡ್ರೆಸ್ಸಿನ ಒಂದು ಬದಿಯಲ್ಲಿ ದಾರವೆಲ್ಲ ಎದ್ದು ಆ ಡಿಸೈನಿನ ನಡುವಿದ್ದ ಪುಟ್ಟ ಗೋಲ ಕನ್ನಡಿ ಮಾಯವಾಗಿತ್ತು. ಒಮ್ಮೆಲೇ ಅನುಷಾಳಿಗೆ ಮಗು ದವಡೆಯಲ್ಲಿ ಜವುಡುತ್ತಿದ್ದುದು ಆ ಕನ್ನಡಿಯೇ ಅನ್ನಿಸಿಬಿಟ್ಟಿತ್ತು.

***
ಕನ್ನಡದ ಯುವಕವಿಗಳಲ್ಲಿ ಕಾವ್ಯಾ ಕಡಮೆ ನಾಗರಕಟ್ಟೆ ಅವರದು ಗಮನಸೆಳೆಯುವ ಹೆಸರು. ಕೇಂದ್ರ ಸಾಹಿತ್ಯ ಅಕಾಡೆಮಿಯ ‘ಯುವ ಪುರಸ್ಕಾರ’ ಪಡೆದ ‘ಧ್ಯಾನಕ್ಕೆ ತಾರೀಖಿನ ಹಂಗಿಲ್ಲ’ (2014) ಸಂಕಲನದ ಕವಿತೆಗಳ ಮೂಲಕ ಸಹೃದಯರ ಗಮನಸೆಳೆದ ಕಾವ್ಯಾ ಪ್ರಸ್ತುತ ಚೊಚ್ಚಿಲ ಕಾದಂಬರಿಯ ಪುಲಕದಲ್ಲಿದ್ದಾರೆ. ಸಂಕೀರ್ಣ ವಸ್ತುವನ್ನು ಅತ್ಯಂತ ಸೂಕ್ಷ್ಮವಾಗಿ ನಿಭಾಯಿಸಿರುವ ಅವರ ‘ಪುನರಪಿ’ ಕಾದಂಬರಿ ಸದ್ಯದಲ್ಲೇ ಪುಸ್ತಕಪೇಟೆಗೆ ಬರಲಿದೆ. ಅಚ್ಚಿನ ಮನೆಯಲ್ಲಿರುವ ಕಾದಂಬರಿಯ ಒಂದು ತಾಜಾ ಅಧ್ಯಾಯ ಇಲ್ಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT