ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೀರಿನ ಸಮಸ್ಯೆ ನಿವಾರಣೆಗೆ ಯೋಜನೆ: ಡಿ.ಸಿ.

ಹಮಾರಾ ಜಲ್ ಹಮಾರಾ ಜೀವನ್ ಸಪ್ತಾಹಕ್ಕೆ ಚಾಲನೆ
Last Updated 29 ಜನವರಿ 2015, 5:56 IST
ಅಕ್ಷರ ಗಾತ್ರ

ವಿಜಯಪುರ: ಜನಸಂಖ್ಯೆ ಹೆಚ್ಚಳ, ನಗರೀಕರಣದಿಂದ ನೀರಿನ ಅಭಾವ ತೀವ್ರಗೊಂಡಿದ್ದು, ಈ ಸಮಸ್ಯೆ ನಿವಾರಣೆಗೆ ನೀರಿನ ಬಳಕೆ, ನಿರ್ವಹಣೆ ಕುರಿತಂತೆ ಪ್ರತ್ಯೇಕವಾಗಿ ಜಿಲ್ಲಾ ನೀರು ಬಳಕೆ ನಿರ್ವಹಣೆ ಯೋಜನೆಯೊಂದನ್ನು ರೂಪಿಸಲಾಗುವುದು ಎಂದು ಜಿಲ್ಲಾಧಿಕಾರಿ ಡಿ.ರಂದೀಪ್ ಹೇಳಿದರು.

ನಗರ ನೀರು ಸರಬರಾಜು ಮಂಡಳಿ ವತಿಯಿಂದ ಬುಧವಾರ ಜಿ.ಪಂ. ಸಭಾಂಗಣದಲ್ಲಿ ಆಯೋಜಿಸಿದ್ದ ‘ಹಮಾರಾ ಜಲ್ ಹಮಾರಾ ಜೀವನ್’ ಸಪ್ತಾಹ ಉದ್ಘಾಟಿಸಿ ಮಾತನಾಡಿದ ಅವರು, ನೀರಿನ ಲಭ್ಯತೆ ಹಾಗೂ ಕೊರತೆ ದಿನೇ ದಿನೇ ತೀವ್ರಗೊಳ್ಳುತ್ತಿದೆ ಎಂದರು.
ಯೋಜಿತವಾಗಿ ನೀರನ್ನು ಬಳಕೆ ಮಾಡುವುದು ಇಂದಿನ ತುರ್ತು ಅಗತ್ಯ.

ಕಲುಷಿತ ನೀರಿನ ಪುನರ್ಬಳಕೆ, ಅಂತರ ಜಲಮಟ್ಟ ಕಾಪಾಡಿಕೊಳ್ಳುವುದು, ಮಿತವಾಗಿ ನೀರನ್ನು ಬಳಸಿಕೊಳ್ಳುವುದು, ಕೃಷಿ, ಕೈಗಾರಿಕೆ ಒಳಗೊಂಡಂತೆ ನೀರಿನ ನಿರ್ವಹಣೆ ಕುರಿತಂತೆ ಪ್ರತಿ ಜಿಲ್ಲೆಯಲ್ಲೂ ಯೋಜಿತ ನೀರಿನ ನಿರ್ವಹಣೆಯ ಯೋಜನೆ ತಯಾರಿಸುವ ಅಗತ್ಯತೆ ಹಿನ್ನಲೆಯಲ್ಲಿ ವಿವಿಧ ತಜ್ಞರೊಂದಿಗೆ ಸಮಾಲೋಚಿಸಿ ಜಿಲ್ಲಾ ಹಂತದಲ್ಲಿ ಯೋಜನೆಯೊಂದನ್ನು ತಯಾರಿಸಲಾಗು­ವುದು ಎಂದು ಹೇಳಿದರು.

ನೀರಾವರಿ ಯೋಜನೆಗಳಿಗೆ ನೀರು ನಿರ್ವಹಣೆ ಕುರಿತಂತೆ ಕೃಷಿ ವಿ.ವಿ. ಪ್ರಾಧ್ಯಾಪಕ ಎಸ್.ಎಸ್.­ಶಿರಹಟ್ಟಿ ಮಾತನಾಡಿ, ಅಚ್ಚುಕಟ್ಟು ಪ್ರದೇಶದಲ್ಲಿ ಕೊನೆ ಹಂತದವರೆಗೆ ನೀರನ್ನು ಸಮರ್ಪಕವಾಗಿ ಬಳಸುವುದು ಹಾಗೂ ಕೃಷಿಯಲ್ಲಿ ವೈಜ್ಞಾನಿಕ ಮಾದರಿಯಲ್ಲಿ ಮಿತ ನೀರು ಬಳಕೆ ಕುರಿತಂತೆ ರೈತ ಜಲಸಂಗಾತಿ ಯೋಜನೆಯೊಂದನ್ನು ರೂಪಿಸಲಾಗಿದೆ. ಕೃಷಿಯಲ್ಲಿ ವೈಜ್ಞಾನಿಕ ಮಿತ ನೀರು ಬಳಕೆ ಕುರಿತಂತೆ ಕ್ರೈವಾರ್ ಎಂಬ ಮಾಪನ ಸಹ ತಯಾರಿಸಲಾಗಿದೆ.

ಬೆಳೆಯ ಬೇರುಗಳ ಹಂತಕ್ಕೆ ನೀರಿನ ಪ್ರಮಾಣ ಹಾಗೂ ಭೂಮಿಗೆ ಅಗತ್ಯವಿರುವ ನೀರಿನ ಕುರಿತಂತೆ ಅತ್ಯಂತ ವೈಜ್ಞಾನಿಕವಾಗಿ ಲೆಕ್ಕಾಚಾರ ಸಹಿತವಾಗಿ ಈ ಮಾಪನ ಮಾಹಿತಿ ಒದಗಿಸಲಿದೆ. ಈ ಕುರಿತಂತೆ ವಿ.ವಿ.ಯನ್ನು ಸಂಪರ್ಕಿಸಿದರೆ ರೈತರಿಗೆ ಈ ಕುರಿತಂತೆ ಮಾಹಿತಿ ನೀಡಲಾಗುವುದು ಎಂದು ಹೇಳಿದರು.

ನಿಡಗುಂದಿ ತೋಟಗಾರಿಕಾ ಸಂಶೋಧನಾ ಕೇಂದ್ರ ಮುಖ್ಯಸ್ಥ ಎಚ್.ಬಿ.ಪಾಟೀಲ, ಕೃಷಿ ಇಲಾಖೆ ಜಂಟಿ ನಿರ್ದೇಶಕ ಮಂಜುನಾಥ್, ಪ್ರೊ.ಮಹೇಶ ಶೆಟ್ಟಿ, ಮಲ್ಲಿಕಾರ್ಜುನ ಗುಳೇದಗುಡ್ಡ, ಪೀಟರ್ ಅಲೆಕ್ಸಾಂಡರ್, ಇತರರು ನೀರಿನ ಬಳಕೆ ಕುರಿತಂತೆ ಮಾತನಾಡಿದರು.
ಹೆಚ್ಚುವರಿ ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ, ಮಹಾನಗರ ಪಾಲಿಕೆ ಆಯುಕ್ತ ರಾಜ­ಶೇಖರ ಉಪಸ್ಥಿತರಿದ್ದರು. ಕಾರ್ಯ ನಿರ್ವಾಹಕ ಎಂಜಿ­ನಿ­ಯರ್ ಬಿ.ಜಿ.ವಸ್ತ್ರದ ಸ್ವಾಗತಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT