ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನುಣುಚಿಕೊಳ್ಳುತ್ತಿರುವ ಮುಲಾಯಂ

ವಿವಾದಾತ್ಮಕ ಹೇಳಿಕೆ: ಮಹಿಳಾ ಆಯೋಗದಿಂದ ನೋಟಿಸ್‌
Last Updated 11 ಏಪ್ರಿಲ್ 2014, 19:30 IST
ಅಕ್ಷರ ಗಾತ್ರ

ನವದೆಹಲಿ,ಸಂಭಾಲ (ಪಿಟಿಐ/­ಐಎಎನ್‌ಎಸ್‌): ಅತ್ಯಾಚಾ­ರಿ­­ಗಳನ್ನು ಗಲ್ಲಿಗೇರಿಸಬಾರದು ಎಂದು ಸಮಾಜ­ವಾದಿ ಪಕ್ಷದ ವರಿಷ್ಠ ಮುಲಾಯಂ ಸಿಂಗ್‌ ಯಾದವ್‌ ನೀಡಿ­ರುವ ಹೇಳಿಕೆ ದೇಶದಾದ್ಯಂತ ವಿವಾದ ಸೃಷ್ಟಿಸಿದೆ.

ಈ ಹೇಳಿಕೆ­ಯನ್ನು ಮುಲಾಯಂ ಸಿಂಗ್‌ಯಾದವ್‌ ಹಿಂದಕ್ಕೆ ಪಡೆಯ­ಬೇಕು ಮತ್ತು ಕ್ಷಮೆ ಯಾಚಿಸ­ಬೇಕು ಎಂದು ಕಾಂಗ್ರೆಸ್‌ ಮತ್ತು ಬಿಜೆಪಿ ಪಟ್ಟು ಹಿಡಿದಿವೆ. ಈ ಮಧ್ಯೆ ಅತ್ಯಾಚಾರದ ಕುರಿತು ನೀಡಿರುವ ವಿವಾದಾತ್ಮಕ ಹೇಳಿಕೆಯಿಂದ ನುಣುಚಿಕೊಳ್ಳಲು ಯತ್ನಿಸು­ತ್ತಿರುವ ಮುಲಾಯಂ ಸಿಂಗ್‌ ಯಾದವ್‌ ‘ ಸಮಾಜವಾದಿ ಪಕ್ಷ ಮಹಿಳೆಯರಿಗೆ ಗೌರವ ನೀಡಿದಷ್ಟು ಬೇರೆ ಯಾರೂ ನೀಡುತ್ತಿಲ್ಲ’ ಎಂದಿದ್ದಾರೆ.
ಆದರೆ, ಅತ್ಯಾಚಾರಿಗಳಿಗೆ ಗಲ್ಲು ಶಿಕ್ಷೆ ನೀಡ­ಬೇಕು ಎನ್ನುವ ಕಾನೂನಿಗೆ ತಿದ್ದು­ಪಡಿ ತರಬೇಕು. ತಪ್ಪು ಕಾಯಿದೆ  ಮುಂದು­­ವರಿ­ಯಲು ಅವಕಾಶ ಕೊಡು­ವುದಿಲ್ಲ’ ಎನ್ನುವ ತಮ್ಮ ವಾದವನ್ನು ಅವರು ಪುನರುಚ್ಚಿಸಿದ್ದಾರೆ. 

‘ಮರಣದಂಡನೆ ಶಿಕ್ಷೆ ಕುರಿತು ಜಗತ್ತಿ­ನಾ­ದ್ಯಂತ ಚರ್ಚೆಗಳು ನಡೆಯುತ್ತಿವೆ. ಕೆಲವು ರಾಷ್ಟ್ರಗಳು ಈ ಶಿಕ್ಷೆಯ ಮೇಲೆ ನಿಷೇಧ ಹೇರಿವೆ’ ಎಂದು ಮುಲಾಯಂ  ಹೇಳಿದ್ದಾರೆ. ‘ಅತ್ಯಾಚಾರ ಪ್ರಕರಣಗಳ ವಿರುದ್ಧ ಉಗ್ರ ಶಿಕ್ಷೆ ಕೈಗೊಳ್ಳಬೇಕು. ಆದರೆ,  ಮಗ್ಧ­­ರಿಗೆ ಶಿಕ್ಷೆಯಾಗಬಾರದು’ ಎಂದು ಅವರು ತಿಳಿಸಿದ್ದಾರೆ.

‘ನಾನು ಹೇಳಿರುವುದರಲ್ಲಿ ತಪ್ಪೇ­ನಿದೆ.  ನಾನು ನೀಡಿರುವ ಹೇಳಿಕೆಯ ಮೇಲೆ ದೇಶದಾದ್ಯಂತ ಚರ್ಚೆ­ಗಳು ನಡೆ­ಯು­­ತ್ತಿವೆ. ಈ ಹೇಳಿಕೆಗೆ ಸಂಬಂಧಿಸಿ­ದಂತೆ ಜನರು ನನ್ನ ವಾದವನ್ನು ಸಮರ್ಥಿಸಿ­ಕೊಂಡು ಮಾತನಾಡುತ್ತಿ­ದ್ದಾರೆ’ ಎಂದು ಮುಲಾಯಂ ಸಿಂಗ್‌  ಪಕ್ಷದ ಕಾರ್ಯಕ್ರಮವೊಂದರಲ್ಲಿ ನುಡಿದಿದ್ದಾರೆ.

ಮಹಿಳೆಯರ ಬಗ್ಗೆ ಅಗೌರವ– ಕಾಂಗ್ರೆಸ್‌: ‘ಒಬ್ಬ ಹಿರಿಯ ನಾಯಕ ನೀಡಿರುವ ಹೇಳಿಕೆ ಆಕ್ಷೇಪಾರ್ಹ ಅಷ್ಟೇ ಅಲ್ಲ. ಇದು ದುಃಖಕರ ಮತ್ತು ಅವ­ಮಾನ­ಕರ. ಮುಲಾಯಂ ಸಿಂಗ್‌ ಮಹಿಳೆ­­­ಯರ ಬಗ್ಗೆ ಎಷ್ಟು ಗೌರವ ಹೊಂದಿ­­ದ್ದಾರೆ ಎನ್ನು­ವುದಕ್ಕೆ ಈ ಹೇಳಿಕೆ­ಯೇ ಸಾಕ್ಷಿ’ ಎಂದು ಕಾಂಗ್ರೆಸ್‌ ನಾಯಕ  ಮೀಮ್‌ ಅಫ್ಜಲ್‌ ಹೇಳಿದ್ದಾರೆ. 

ಅಸಹ್ಯಕರ– ಬಿಜೆಪಿ: ಮುಲಾಯಂ ಸಿಂಗ್‌ ನೀಡಿರುವ ಹೇಳಿಕೆ ‘ಅಸಹ್ಯಕರ’ ಮತ್ತು ‘ಆಘಾತಕಾರಿ’. ಇದರಿಂದ ರಾಜ್ಯಕ್ಕೆ ತಪ್ಪು ಸಂದೇಶ ರವಾನೆ­ಯಾಗಲಿದೆ  ಎಂದು ಬಿಜೆಪಿ ಹೇಳಿದೆ. ‘ಯುಪಿಎ ಅಂಗ ಪಕ್ಷಗಳಲ್ಲಿ ಒಂದಾ­ಗಿ­­ರುವ ಸಮಾಜವಾದಿ ಪಕ್ಷದ ನಾಯಕ ನೀಡಿರುವ ಹೇಳಿಕೆ ಕುರಿತು ಕಾಂಗ್ರೆಸ್‌ ತನ್ನ ನಿಲುವು ಸ್ಪಷ್ಟಪಡಿ­ಸಬೇಕು’ ಎಂದು ಬಿಜೆಪಿ ಆಗ್ರಹಿಸಿದೆ. ‘ಮುಲಾಯಂ ಸಿಂಗ್‌ ಇಂತಹ ಹೇಳಿಕೆ ನೀಡಿರುವುದು ನಾಚಿಕೆಗೇಡು. ಅವರು ಕ್ಷಮೆ ಕೇಳಲೇ­ಬೇಕು’ ಎಂದು ಬಿಜೆಪಿ ನಾಯಕ ಮುಕ್ತಾರ್‌ ಅಬ್ಬಾಸ್‌ ನಕ್ವಿ ಸಿಂಗ್‌ ಅವರನ್ನು ತರಾಟೆಗೆ ತೆಗೆದು­ಕೊಂಡಿದ್ದಾರೆ.

‘ಅತಿ ಸೂಕ್ಷ್ಮವಾದ ವಿಷಯಗಳನ್ನು ಹಿಡಿದುಕೊಂಡು ಸಮಾಜವಾದಿ ಪಕ್ಷದ ನಾಯಕ ರಾಜಕೀಯ ಮಾಡುತ್ತಿದ್ದಾರೆ.  ಇಂತಹ ನಡವಳಿಕೆಯುಳ್ಳ ನಾಯಕ­ರನ್ನು ದೇಶದ ಜನ ಸ್ವೀಕರಿಸುವುದಿಲ್ಲ’ ಎಂದು ಅವರು ಹೇಳಿದ್ದಾರೆ. ‘ಯಾವುದೇ ಸಂದರ್ಭದಲ್ಲಿ ಮುಲಾಯಂ ಸಿಂಗ್‌ ಅವರಿಂದ ಕೇಂದ್ರ­ದಲ್ಲಿ ಸರ್ಕಾರ ರಚನೆ ಸಾಧ್ಯವಿಲ್ಲ’ ಬಿಜೆಪಿ ಇನ್ನೊಬ್ಬ ನಾಯಕಿ ಸ್ಮೃತಿ ಇರಾನಿ ಹೇಳಿದ್ದಾರೆ.

‘ಅತ್ಯಾಚಾರ ಪ್ರಕರಣದಲ್ಲಿ ಗಲ್ಲು ಶಿಕ್ಷೆ ನೀಡುವ ಕಾನೂನಿಗೆ ತಿದ್ದುಪಡಿ ತರು­­ವುದಕ್ಕೆ ನನ್ನಂತಹ ಮಹಿಳೆಯರ ವಿರೋಧ­ವಿದೆ ಎನ್ನುವುದನ್ನು ಮುಲಾಯಂ ­­ಸಿಂಗ್‌ ಅವರಿಗೆ ಹೇಳಲು ಇಚ್ಛಿಸು­ತ್ತೇನೆ’ ಎಂದು ಅಮೇಠಿ ಲೋಕ­ಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸ್ಮೃತಿ ಹೇಳಿದ್ದಾರೆ. ಮುಲಾಯಂ ಸಿಂಗ್‌ ಯಾದವ್‌ ಮಾನಸಿಕ ಸ್ಥಿಮಿತ ಕಳೆದು­ಕೊಂಡಿದ್ದಾರೆ ಎಂದು ಆರ್‌ಜೆಡಿ ಪಕ್ಷದ ವರಿಷ್ಠ ಲಾಲೂ ಪ್ರಸಾದ್ ಟೀಕಿಸಿದ್ದಾರೆ.

ಆಜ್ಮಿ ವಿವಾದಿತ ಹೇಳಿಕೆ
ಲಖನೌ: ಸಮಾಜವಾದಿ ಪಕ್ಷದ ನಾಯ­ಕರು ಒಬ್ಬರಾದ ಮೇಲೆ ಇನ್ನೊ­ಬ್ಬ­ರಂತೆ ಅಚ್ಚರಿಯ ಹೇಳಿಕೆ­ಗಳನ್ನು ನೀಡುತ್ತಾ, ಪರಸ್ಪರ ಮೀರಿ­ಸಲು ಯತ್ನಿಸುತ್ತಿದ್ದಾರೆ. ಅತ್ಯಾ­ಚಾರಿ­ಗಳಿಗೆ ಮರಣದಂಡನೆ ಸಲ್ಲ ಎಂದು ಪಕ್ಷದ ಮುಖ್ಯಸ್ಥ ಮುಲಾಯಂ ಸಿಂಗ್‌ ಯಾದವ್‌  ಹೇಳಿ­ರುವ ಬೆನ್ನಲ್ಲೇ, ಪಕ್ಷದ ಮಹಾ­ರಾಷ್ಟ್ರ ಘಟ­ಕ ಅಧ್ಯಕ್ಷ ಅಬು ಆಜ್ಮಿ, ಅತ್ಯಾ­ಚಾ­ರಕ್ಕೆ ಒಳ­ಗಾದ­ವರು ಸೇರಿ­ದಂತೆ ವಿವಾ­ಹ­ಯೇತರ, ವಿವಾಹ­ಪೂರ್ವ ಲೈಂಗಿಕತೆ­­ಯಲ್ಲಿ ತೊಡಗಿದ ಮಹಿಳೆ­ಯ­ರನ್ನು ಗಲ್ಲಿ­ಗೇರಿಸ­ಬೇಕು ಎಂದಿ­ದ್ದಾರೆ. ಆದರೆ ಆಜ್ಮಿ ಸೊಸೆ, ಬಾಲಿ­­ವುಡ್‌ ನಟಿ ಆಯೇಶಾ ಟಾಕಿಯಾ  ಅವರು ಮಾವನ ಈ ಹೇಳಿಕೆಗೆ ಆಕ್ಷೇಪ ವ್ಯಕ್ತ­ಪಡಿ­ಸಿದ್ದು, ಇದ­ರಿಂದ ತನಗೆ ಮತ್ತು ಪತಿ ಫರ್ಹಾನ್‌ಗೆ ಮುಜುಗರ­ವಾ­ಗಿದೆ ಎಂದು ಟ್ವೀಟ್‌ ಮಾಡಿ­ದ್ದಾರೆ.

ಈ ಹೇಳಿಕೆ ಮಹಿಳೆಗೆ ತೋರಿದ ಅಗೌರ­ವ­­­ವಾಗಿದ್ದು, ಇದು ನಿಜ­ವಾ­ದಲ್ಲಿ ಖೇದ­ಕರ ಎಂದು ತಿಳಿಸಿದ್ದಾರೆ. ಮುಂಬೈ ಉತ್ತರ ಕೇಂದ್ರೀಯ ಲೋಕ­ಸಭಾ ಕ್ಷೇತ್ರದ ಸಮಾಜವಾದಿ ಪಕ್ಷ ಅಭ್ಯರ್ಥಿ ಫರ್ಹಾನ್‌ ಸಹ ತಂದೆಯ ಹೇಳಿ­ಕೆಗೆ ವಿರೋಧ ಸೂಚಿ­ಸಿದ್ದು, ಅತ್ಯಾ­ಚಾರಿ­ಗಳಿಗೆ ಗಲ್ಲುಶಿಕ್ಷೆ ಸೂಕ್ತ ಎಂದೂ ಟ್ವೀಟ್‌ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT