ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೂರು ದಿನಕ್ಕೆ ಹತ್ತು ಆದ್ಯತೆ

ಆಡಳಿತಕ್ಕೆ ಚುರುಕು: ಸಹೋದ್ಯೋಗಿಗಳಿಗೆ ಮೋದಿ ತಾಕೀತು
Last Updated 29 ಮೇ 2014, 19:30 IST
ಅಕ್ಷರ ಗಾತ್ರ

ನವದೆಹಲಿ: ಕೇವಲ ಮೂರು ದಿನ ಹಳೆಯದಾದ ಸರ್ಕಾರಕ್ಕೆ ‘ನೂರು ದಿನಗಳ ದಿಕ್ಸೂಚಿ’ ನೀಡಿರುವ ಪ್ರಧಾನಿ ನರೇಂದ್ರ ಮೋದಿ, 10 ಅಂಶಗಳ ಕಾರ್ಯ­ಸೂಚಿ ಸಿದ್ಧಪಡಿ­ಸಿದ್ದಾರೆ.ಜಡ­ವಾಗಿ­ರುವ ಆಡಳಿತ ವ್ಯವಸ್ಥೆ ಚುರುಕುಗೊ­ಳಿಸಲು ನಿಗದಿತ ಅವಧಿಯೊಳಗೆ ಗುರಿ ಮುಟ್ಟುವಂತೆ ಸಂಪುಟ  ಸಹೋದ್ಯೋಗಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಪ್ರಧಾನಿ, ಸರ್ಕಾರದ ಹತ್ತು ಅಂಶಗಳ ಕಾರ್ಯ­ಸೂಚಿ­ಯನ್ನು ಸಹೋದ್ಯೋಗಿಗಳಿಗೆ ವಿವರಿಸಿದರು. ಎಲ್ಲ ಸಚಿವರು ಇದೇ ಹಾದಿ ತುಳಿದು ಉತ್ತಮ ಆಡಳಿತಕ್ಕೆ ಒತ್ತು ನೀಡುವಂತೆ ಸಲಹೆ ಮಾಡಿದರು. ಬಂಡವಾಳ ಹೂಡಿಕೆ ಹೆಚ್ಚಳ, ನಿಗದಿತ ಕಾಲ­ಮಿತಿಯಲ್ಲಿ ಮೂಲ ಸೌಲಭ್ಯ ಯೋಜನೆಗಳ ಪೂರ್ಣ-­ಗೊಳಿಸುವಿಕೆ ಮತ್ತು ದೇಶದ ಪ್ರಗತಿಗೆ ನೈಸರ್ಗಿಕ ಸಂಪನ್ಮೂಲದ ಬಳಕೆ ಸೇರಿದಂತೆ ಅನೇಕ ಮಹತ್ವದ ಅಂಶಗಳು ಮೋದಿ ಅವರ ನೂರು ದಿನಗಳ ಕಾರ್ಯಸೂಚಿ­ಯಲ್ಲಿವೆ.

10 ಅಂಶಗಳ ಸೂತ್ರಗಳು: ಆರ್ಥಿಕ ಪ್ರಗತಿಗೆ ಇರುವ ಅಡಚಣೆಗಳ ನಿವಾರಣೆ. ಶಿಕ್ಷಣ, ಇಂಧನ ಮತ್ತು ನೀರಿಗೆ ಆದ್ಯತೆ. ಜನಪರ ಆಡಳಿತ. ಸರ್ಕಾರಿ ಟೆಂಡರ್‌­ಗಳ ಇ–ಹರಾಜು, ಕಾಲಮಿತಿಯಲ್ಲಿ ನೀತಿ–ಯೋಜನೆ­ಗಳ ಜಾರಿ. ಅಂತರ ಸಚಿವಾಲಯ ನಡುವಣ ಸಹ­ಕಾರ ಸುಧಾರಣೆ, ಅಧಿಕಾರಶಾಹಿಗೆ ಮುಕ್ತ ಸ್ವಾತಂತ್ರ್ಯ – ಇವು ಪ್ರಧಾನಿ ಸಿದ್ಧಪಡಿಸಿ­ರುವ ಹತ್ತು ಅಂಶದ ಸೂತ್ರಗಳು.

ದೇಶದ ಅಭಿವೃದ್ಧಿಯಲ್ಲಿ ರಾಜ್ಯಗಳ ಪಾತ್ರ ಮಹತ್ವದ್ದು ಎಂದಿರುವ ಮೋದಿ, ವಿವಿಧ ರಾಜ್ಯ­ಗಳು ಮತ್ತು ಸಂಸದರ ಅಗತ್ಯಗಳಿಗೆ ಸ್ಪಂದಿಸುವಂತೆ ಸಹೋದ್ಯೋಗಿ­ಗಳಿಗೆ ಸಲಹೆ ಮಾಡಿದ್ದಾರೆ. ಸರ್ಕಾರದ ಮುಂದಿನ ದಿಕ್ಕುದೆಸೆ ಕುರಿತು ಪ್ರಧಾನಿ ಜೂನ್‌ 4ರಿಂದ 11ರವರೆಗೆ ನಡೆಯುವ ಒಂದು ವಾರದ ಸಂಸತ್ ಅಧಿವೇಶನದ ಬಳಿಕ ರಾಷ್ಟ್ರವನ್ನು ಉದ್ದೇಶಿಸಿ ಭಾಷಣ ಮಾಡುವ ಸಾಧ್ಯತೆಯಿದೆ.

ಪ್ರತಿಯೊಂದು ಇಲಾಖೆಯ ಮೊದಲ ನೂರು ದಿನದ ಆದ್ಯತೆಗಳನ್ನು ಪಟ್ಟಿ ಮಾಡಿ ಕಾಲಮಿತಿ­ಯೊಳಗೆ ಅನುಷ್ಠಾನ­ಗೊಳಿಸಲು ಪ್ರಧಾನಿ ಸೂಚಿಸಿ­ದ್ದಾ­ರೆಂದು ಸಂಸದೀಯ ವ್ಯವಹಾರಗಳ ಸಚಿವ ವೆಂಕಯ್ಯ ನಾಯ್ಡು ಸಂಪುಟ ಸಭೆಯ ಬಳಿಕ ಮಾಧ್ಯಮ ಪ್ರತಿನಿಧಿ­ಗಳಿಗೆ ತಿಳಿಸಿದರು. ದಕ್ಷ– ಪರಿ­ಣಾ­ಮಕಾರಿ ಆಡಳಿತಕ್ಕೆ ಮಹತ್ವ ನೀಡಿ, ಸರ್ಕಾರದ ಯೋಜನೆಗಳು, ಕಾರ್ಯ­ಕ್ರಮ­ಗಳನ್ನು ಜನರಿಗೆ ತಲು­ಪಿಸುವಂತೆ ಕಿವಿಮಾತು ಹೇಳಿದ್ದಾರೆ ಎಂದರು.

ಸಂಪುಟ ಸಚಿವರು ರಾಜ್ಯ ಸಚಿವ­ರಿಗೂ ಜವಾ­ಬ್ದಾರಿ ಹಂಚಿಕೆ ಮಾಡ­ಬೇಕು. ನಾವೂ ಆಡಳಿತ­ದಲ್ಲಿ ಭಾಗಿ­ಯಾಗಿದ್ದೇವೆ ಎಂಬ ಭಾವನೆ­ಯನ್ನು ಅವರಲ್ಲಿ ಮೂಡಿಸಬೇಕು ಎಂದು ಮನವಿ ಮಾಡಿ­ದ್ದಾರೆ. ಮುಂದಿನ ಎರಡು ದಿನದಲ್ಲಿ ಪ್ರಧಾನಿ ಎರಡನೇ ಸಭೆ ನಡೆಸಲಿದ್ದಾರೆ.
ಸಚಿವರು– ಇಲಾಖೆ ಕಾರ್ಯದರ್ಶಿ­ಗಳನ್ನು ಮೇಲಿಂದ ಮೇಲೆ ಕರೆದು ಚರ್ಚಿಸಲಿ­ದ್ದಾರೆಂದು ವೆಂಕಯ್ಯ ನಾಯ್ಡು ವಿವರಿಸಿದರು.

ನ್‌ಡಿಎ ಸರ್ಕಾರದ ಆದ್ಯತೆ: ಜನಸಾಮಾನ್ಯರಿಗೆ ನುಂಗಲಾರದ ತುತ್ತಾಗಿರುವ ಬೆಲೆ ಏರಿಕೆ, ಮಹಿಳಾ ಭದ್ರತೆ ಹಾಗೂ ಕೃಷಿ ಕ್ಷೇತ್ರದ ಅಭಿವೃದ್ಧಿ ಸಹಜವಾಗಿಯೇ ಎನ್‌ಡಿಎ ಸರ್ಕಾರದ ಆದ್ಯತೆ. ಜನರ ನಿರೀಕ್ಷೆಗಳು ಬೆಟ್ಟದಷ್ಟಿವೆ. ಅವರ ನಿರೀಕ್ಷೆಗಳಿಗೆ ಸರ್ಕಾರ ಸ್ಪಂದಿಸಲಿದೆ ಎಂದು ಭರವಸೆ ನೀಡಿದರು.

‘ನಮ್ಮದು ಒಕ್ಕೂಟ ವ್ಯವಸ್ಥೆ. ರಾಜ್ಯಗಳ ಅಗತ್ಯಗಳಿಗೆ ಸ್ಪಂದಿಸುವುದು ಸರ್ಕಾರದ ಗುಣ ಧರ್ಮ ಆಗಬೇಕು ಎನ್ನುವುದು ಪ್ರಧಾನಿ ಅವರ ನಂಬಿಕೆ’ ಎಂದು ಸಂಸದೀಯ ಸಚಿವರು ನುಡಿದರು.

ಮೋದಿ ಗುಜರಾತ್‌ ಮುಖ್ಯಮಂತ್ರಿ ಆಗಿದ್ದವರು. ರಾಜ್ಯಗಳು ಎಷ್ಟು ಮುಖ್ಯವೆನ್ನುವುದು ಅವರಿಗೆ ಗೊತ್ತಿದೆ. ಈ ಹಿನ್ನೆಲೆಯಲ್ಲಿ ರಾಜ್ಯಗಳ ಬೇಡಿಕೆಗಳಿಗೆ ಮಹತ್ವವಿರಬೇಕೆಂದು ಬಯಸುತ್ತಾರೆ ಎಂದು ನಾಯ್ಡು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT