ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೆನಪುಗಳ ಹೆದ್ದಾರಿಗೆ

ಬಾರೋ ಸಾಧನ ಕೇರಿಗೆ...
Last Updated 27 ಜೂನ್ 2016, 19:30 IST
ಅಕ್ಷರ ಗಾತ್ರ

ಹೌದು, ಕೆಲವೊಂದು ಸ್ಥಳಗಳೇ ಹಾಗೆ. ಸುಮ್ಮನಿದ್ದವನನ್ನು ಸುಖಾಸುಮ್ಮನೆ ಚಿಂತನೆಗೆ ಒಡ್ಡುತ್ತವೆ. ಮತ್ತೆ ಕೆಲವು ಹೊಸತನದ ಆವಿಷ್ಕಾರಕ್ಕೆ ನಾಂದಿಯಾಗುತ್ತವೆ. ಮತ್ತೆ ಕೆಲವು ಅದ್ಭುತಗಳನ್ನು ಹುಟ್ಟು ಹಾಕುತ್ತವೆ.

ಕಾಣದ ಭಾವನೆಗಳನ್ನು ಕವನವಾಗಿ ರೂಪಿಸುವ ಕವಿಯನ್ನು ಸೃಷ್ಟಿಸಿಬಿಡುತ್ತವೆ. ಆ ರೀತಿ ಸೃಷ್ಟಿಯಾದ ಕನ್ನಡದ ಅದ್ಭುತ ಪದಮಾಂತ್ರಿಕ ಎಂದರೆ ಅವರೇ ನಮ್ಮ ದ.ರಾ.ಬೇಂದ್ರೆ. ಕುವೆಂಪು ಅವರಿಗೆ ಕವಿತೆ ಬರೆಯಲು ಸ್ಫೂರ್ತಿಯಾಗಿದ್ದು ಕುಪ್ಪಳ್ಳಿಯ ಕವಿಶೈಲ ಬೆಟ್ಟ. ಹಾಗೆ ನಮ್ಮ ಬೇಂದ್ರೆ ಮಾಸ್ತರಿಗೆ ಸ್ಫೂರ್ತಿಯಾಗಿದ್ದು ನಮ್ಮ ಸಾಧನಕೇರಿ.

‘ಬಾರೋ ಸಾಧನಕೇರಿಗೆ ಮರಳಿ ನಿನ್ನೀ ಊರಿಗೆ’ ಎಂದು ಧಾರವಾಡದ ಸಾಧನಕೇರಿಯ ಏರಿಯ ಮೇಲೆ ಕುಳಿತು; ಮನದಲ್ಲಿ ಮೂಡುತ್ತಿದ್ದ ಭಾವನೆಗಳಿಗೆ ಅಕ್ಷರ ರೂಪ ಕೊಟ್ಟು; ಕವಿತೆ ರಚಿಸಿ; ಕನ್ನಡಕ್ಕೊಂದು ಜ್ಞಾನಪೀಠ ಪ್ರಶಸ್ತಿ ನೀಡಿದ ಸಾಧನಕೇರಿಯ ಸರದಾರ, ಕನ್ನಡದ ವರಕವಿ ದತ್ತಾತ್ರೆಯ ರಾಮಚಂದ್ರ ಬೇಂದ್ರೆ ಅವರಿಗೆ ಸ್ಫೂರ್ತಿಯ ಸೆಲೆಯೇ ಅವರ ನೆಚ್ಚಿನ ಸಾಧನಕೇರಿ.

ಕೆರೆಯ ಏರಿಯ ಮೇಲೆ ಒಂದು ಬಾರಿ ಕುಳಿತು ಕೈಲಿದ್ದ ಲೇಖನಿಯನ್ನು ಅತ್ತಿತ್ತ ಹೊರಳಿಸಿದಾಗ ಸಾಹಿತ್ಯ ವೀಣೆಯಲಿ ‘ನಾಕುತಂತಿ’ ಮೀಟಿತ್ತು ‘ನಾದಲೀಲೆ’ ಹರಿದಿತ್ತು. ‘ಘಮಘಮ ಘಮ್ಮಾಡಸ್ತಾವ ಮಲ್ಲಿಗಿ ನೀ ಹೊಂಟಿದ್ದಿಗ ಎಲ್ಲಿಗಿ’ ಎಂದು ಕೇಳಿದರೆ ಸಾಕು ಮನದ ಮುಗಿಲಲ್ಲಿನ ಕಾವ್ಯದ ಹಕ್ಕಿ ‘ಗರಿ’ ಬಿಚ್ಚಿತ್ತು.

‘ಪಾತರಗಿತ್ತಿ ಪಕ್ಕಾ, ನೋಡಿದೇನ ಅಕ್ಕ’, ‘ಇನ್ನು ಯಾಕ ಬರಲಿಲ್ಲವ್ವಾ ಹುಬ್ಬಳಿಯಂವಾ, ವಾರದಾಗ ಮೂರು ಸಾರಿ ಬಂದು ಹೋಗಂವಾ’ ಎನ್ನುವ ಪ್ರಶ್ನೆ ಮೂಡಿತ್ತು. ಸೊಂಪು ತುಂಬಿದ ಮರಗಳ ಮಧ್ಯೆ, ಕಂಪು ಬೀರುವ ಹೂಗಳ ನಡುವೆ ಎಲ್ಲಿಂದಲೋ ತಂಪಾಗಿ ಬೀಸುವ ಗಾಳಿಯನು ಕಂಡು ‘ಉತ್ತರ ಧ್ರುವದಿಂ ದಕ್ಷಿಣ ಧ್ರುವಕು ಚುಂಬಕ ಗಾಳಿಯೂ ಬೀಸುತಿದೆ’ ಎನ್ನುವ ಅಮೋಘ ಕಲ್ಪನೆ ಮೂಡಿತ್ತು.

ಇವೆಲ್ಲವುಗಳನ್ನು ಮನದಲ್ಲಿ ನೆನೆಸಿಕೊಳ್ಳುವಾಗ ‘ಅಂತರಂಗದಾ ಮೃದಂಗ ಅಂತು ತೊಂತನಾನಾ’ ಎಂದು ಕಲ್ಪನೆಯ ಮೃದಂಗ ಮಾರ್ದನಿಸಿತ್ತು. ಒಟ್ಟಿನಲ್ಲಿ ಬೇಂದ್ರೆ ಮಾಸ್ತರರ ಭಾವಲತೆಯಲ್ಲಿ ಇಂಥ ಕಾವ್ಯ ಕುಸುಮಗಳು ಅರಳಲು ಕಾರಣವಾಗಿದ್ದೇ ಈ ಸಾಧನಕೇರಿ.

ನಾನು ಆರಾಧಿಸುವ ಆ ಭಾವಜೀವಿಯನ್ನು ನೇರವಾಗಿ ನನ್ನಿಂದ ನೋಡಲು ಸಾಧ್ಯವಾಗಲಿಲ್ಲ. ಆದರೆ ಧಾರವಾಡಕ್ಕೆ ಹೋದಾಗ ಒಂದು ಬಾರಿಯಾದರೂ ಆ ಮಹನೀಯನಿಗೆ ಸ್ಫೂರ್ತಿ ತುಂಬಿದ ಸಾಧನಕೇರಿಯ ದಂಡೆಯ ಮೇಲೆ ಕೆಲಹೊತ್ತು ಕುಳಿತುಕೊಂಡು ಮೈ ಮರೆಯುತ್ತೇನೆ.

ಸುಂದರ ಪ್ರಕೃತಿಯ ಮಡಿಲಲ್ಲಿ ಕ್ಷಣಕಾಲ ನನ್ನನ್ನೇ ಮರೆತಿರುತ್ತೇನೆ. ಆಗ ನನ್ನ ಮನಸೇ ಒಂದು ಕವನವಾಗಿದಂತೆ ಅನ್ನಿಸುತ್ತದೆ. ಅದಕ್ಕೆ ಆ ಕವಿ ಹೇಳಿದ ಮಾತು ನಿಜವೇನೋ ಎನ್ನುವ ಭಾವ ನನ್ನಲ್ಲಿ ಆವರಿಸುವುದು. ಅದೇ ‘ಬಾರೊ ಸಾಧನಕೇರಿಗೆ ಮರಳಿ ನಿನ್ನಿ ಊರಿಗೆ’ ಎಂಬುದು.

ಸದ್ಯ ಸಾಧನಕೇರಿಯನ್ನು ಅಭಿವೃದ್ಧಿಪಡಿಸಿ ಕೆರೆಯ ಸುತ್ತ ಉದ್ಯಾನವನ್ನು ನಿರ್ಮಾಣ ಮಾಡಿ ಸಾರ್ವಜನಿಕರ ವೀಕ್ಷಣೆಗೆ ಅವಕಾಶ ಕಲ್ಪಿಸಿದ್ದಾರೆ.

ಅಲ್ಲಿ ನಿರ್ಮಿಸಲಾಗಿರುವ ಕಲಾಕೃತಿಗಳು, ಸುಂದರವಾದ ಪುಷ್ಪರಾಶಿ, ಹಸಿರು ತುಂಬಿದ ವನರಾಶಿ, ಅಲ್ಲಲ್ಲಿ ಬೇಂದ್ರೆಯವರ ಕಲ್ಪನೆಯಲ್ಲಿ ಮೂಡಿ ಬಂದಿರುವ ಸುಂದರವಾದ ಕವನಗಳ ಸಾಲುಗಳು, ಬೇಸತ್ತು ಹೋದ ಮನಸ್ಸಿಗೂ ಮುದ ನೀಡುವ ಹಕ್ಕಿಗಳ ಕಲರವ, ಕಲ್ಲನ್ನು ಕೂಡ ಕಲೆಮಾಡಬಲ್ಲ ಆ ಶಾಂತ ಪರಿಸರ, ಎಷ್ಟು ನೋಡಿದರು ಮತ್ತೆ ನೊಡಬೇಕೆನಿಸುವ ಬೇಂದ್ರೆ ಮಾಸ್ತರರ ಮೂರ್ತಿ, ನಡೆದಷ್ಟು ಮುಗಿಯದ ಉದ್ಯಾನದ ಹುಲ್ಲು ಹಾಸು, ಕೆರೆಯ ಎದುರಿಗೆ ಬೇಂದ್ರೆಯವರು ಬಾಳಿ ಬದುಕಿದ ನೆನಪಿನರಮನೆ, ಸುಮ್ಮನೆ ಹಾಗೇ ಯೋಚಿಸುತ್ತ ನಡೆದರೆ ಬೇಂದ್ರೆಯವರು ನಡೆದ ದಾರಿಯಲ್ಲಿ ನಾವು ಹೋಗುತ್ತಿರುವುದಕ್ಕೆ ಮನಸ್ಸಿನಲ್ಲಿ ಒಂದು ತರಹದ ಮಿಂಚಿನ ಸಂಚಾರ.

ಜೊತೆಯಲ್ಲಿಯೇ ಮನವೆಂಬ ಗ್ರಾಮಾಫೋನಿನಲ್ಲಿ ಬೇಂದ್ರೆಯವರ ಎಂದೂ ಮರೆಯದ ‘ನಾನು ಬಡವಿ ಆತ ಬಡವ ಒಲವೇ ನಮ್ಮ ಬದುಕು’ ಕವನ. ಒಟ್ಟಿನಲ್ಲಿ ಸಾಧನಕೇರಿಯಲ್ಲಿ ಸಮಯ ಕಳೆಯುವುದೇ ಒಂದು ರೋಮಾಂಚನ.

ಈ ಬಾರಿಯ ಬೇಸಿಗೆಯ ಹೊಡೆತಕ್ಕೆ ಸಾಧನಕೇರಿಯು ಅರ್ಧಕ್ಕಿಂತ ಹೆಚ್ಚು ಬತ್ತಿ ಬರಿದಾಗಿದೆ. ಆದರೆ ಆ ಸಾಧನಕೇರಿಯ ತಟದಲ್ಲಿ ನೆನಪುಗಳ ಹೂಚೆಲ್ಲಿ ಹೋದ ನಮ್ಮ ಬೇಂದ್ರೆಯವರು ನಮಗಾಗಿ ಬಿಟ್ಟು ಹೋದ ಆ ಕವನದ ಸಾಲು ಮತ್ತೆ ಮತ್ತೆ ನೆನಪಾಗುತ್ತಿದೆ. ಮತ್ತೆ ಮತ್ತೆ ಅಲ್ಲಿಗೆ ಹೋಗಬೇಕೆನಿಸುತ್ತಿದೆ. ಅದೇ ‘ಬಾರೋ ಸಾಧನಕೇರಿಗೆ ಮರಳಿ ನಿನ್ನೀ ಊರಿಗೆ’... ಹಾಡು ಅನುರಣಿಸುತ್ತಿದೆ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT