ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೆಹರೂ ಚಹರೆ ಬದಲಾಗಿದೆಯೇ?

Last Updated 19 ನವೆಂಬರ್ 2014, 19:39 IST
ಅಕ್ಷರ ಗಾತ್ರ

ರಾಷ್ಟ್ರನಾಯಕರ ಜನ್ಮದಿನ ಮತ್ತು ಪುಣ್ಯ­ತಿಥಿಗಳ ಆಚರಣೆ ಒಂದು ಸಂಪ್ರದಾ­ಯವಾಗಿ ನಡೆದುಕೊಂಡು ಬಂದಿದೆ. ಅದರಲ್ಲೂ ಗಾಂಧಿ, ನೆಹರೂ ಮತ್ತು ಡಾ.ರಾಧಾಕೃಷ್ಣನ್ ಅವರ ಜನ್ಮದಿನಗಳು ಪ್ರಮುಖ ಸರ್ಕಾರಿ ದಿನಾಚರಣೆಗಳಾಗಿವೆ. ಈ ಬಾರಿಯ ನೆಹರೂ ಜನ್ಮದಿನಾಚರಣೆ ಎರಡು ಕಾರಣಗಳಿಂದ ವಿಶೇಷ ಎನಿಸಿದೆ. ಒಂದು, ಇದು 125ನೇ ಜನ್ಮದಿನಾ­ಚ­ರಣೆ ಎಂಬ ಸಂಖ್ಯೆ ಒದಗಿಸಿರುವ ಮಹತ್ವ. ಮತ್ತೊಂದು, ಬಹುಮತದ ಕಾಂಗ್ರೆಸ್ಸೇತರ ಸರ್ಕಾರ ಆಡಳಿತದಲ್ಲಿರುವ, ಕಾಂಗ್ರೆಸ್ ಕಳೆ­ಗುಂದು­ತ್ತಿರುವ ಕಾಲಘಟ್ಟದಲ್ಲಿ ನೆಹರೂ ಅವ­ರನ್ನು ನೆನಪಿಸಿಕೊಳ್ಳುವ ದಿನ ಒದಗಿ­ಬಂದಿರುವುದು.

‘ಅನೇಕರು ನನ್ನನ್ನು ಹೊಗಳಿರಬಹುದು, ಹಲ­ವರು ವಿಧೇಯತೆಯಿಂದ ನಡೆದುಕೊಂಡಿರಬ­ಹುದು. ಆದರೆ ಭಾರತದ ಅಸಂಖ್ಯ ಜನರ ಪ್ರೀತಿ, ವಿಶ್ವಾಸ ನನ್ನ ಪಾಲಿಗೆ ದೊರೆತಿದೆ ಎಂಬುದೇ ನನ್ನನ್ನು ಭಾವಪರವಶನನ್ನಾಗಿ ಮಾಡುತ್ತದೆ’ ಇದು ಜವಾಹರಲಾಲ್ ನೆಹರೂ ತಮ್ಮ ಕೊನೆಯ ದಿನಗಳಲ್ಲಿ ಆಡಿದ ಮಾತು. ಅತಿಹೆಚ್ಚು ಅವಧಿಗೆ ಭಾರತವನ್ನು ಮುನ್ನಡೆಸಿದ ನೇತಾರ, ಭಾರತದ ಪ್ರಥಮ ಪ್ರಧಾನಿ, ಆಧುನಿಕ ಭಾರ­ತದ ಶಿಲ್ಪಿ, ಮಕ್ಕಳ ಬಗ್ಗೆ ಅಪಾರ ಪ್ರೀತಿ ತೋರು­ತ್ತಿದ್ದ ಚಾಚಾ, ವಿಶ್ವಶಾಂತಿಗೆ ಪ್ರಯತ್ನಿಸಿದ ಮುತ್ಸದ್ದಿ ಎಂಬೆಲ್ಲಾ ವಿಶೇಷಣಗಳಿದ್ದರೂ ನೆಹರೂ ವ್ಯಕ್ತಿತ್ವದ ವರ್ಚಸ್ಸು ಇಂದು ಅವರ 125ನೇ ಜನ್ಮದಿನದ ಸಂದರ್ಭದಲ್ಲಿ, ಪೀಳಿಗೆಯ ಅಂತರದ ನಡುವೆ ಯುವಮನಗಳಲ್ಲಿ ಎಷ್ಟು ಮತ್ತು ಹೇಗೆ ಉಳಿದಿದೆ ಎಂಬ ಪ್ರಶ್ನೆಗೂ ಉತ್ತರ ಕಂಡುಕೊಳ್ಳಬೇಕಿದೆ.

ಭಾರತದ ಮಟ್ಟಿಗೆ ಅತಿಹೆಚ್ಚು ಜನಪ್ರಿಯತೆ­ಯನ್ನು ಹೊಂದಿದವರು, ಒಂದು ಕಾಲಘಟ್ಟ­ವನ್ನು ಪ್ರಭಾವಿಸಿದವರು ಎಂದರೆ ಮಹಾತ್ಮ  ಗಾಂಧಿ ಮತ್ತು ನೆಹರೂ. ಜಗತ್ತಿನ ಅನೇಕ ರಾಷ್ಟ್ರ­ಗಳಲ್ಲಿ ಇಂದಿಗೂ ಹೆಚ್ಚು ಪರಿಚಯವಿರುವ ಭಾರತದ ನಾಯಕರ ಹೆಸರುಗಳು ಎಂದರೆ ಬಹುಶಃ  ಇವೆರಡೇ. 1920 ಮತ್ತು 30ರ ದಶಕ ಸಂಪೂರ್ಣ ಗಾಂಧೀಜಿಯದ್ದಾಗಿತ್ತು. ನಂತರ 1940 ಮತ್ತು 50ರ ದಶಕ ನೆಹರೂ­ಮಯವಾಯಿತು. ಅದನ್ನು ‘ನೆಹರೂ ಯುಗ’­ವೆಂದೇ ಕರೆಯಲಾಯಿತು. ಈ ಇಬ್ಬರೂ ಜನರ ಮನಸ್ಸನ್ನು ಆವರಿಸಿಕೊಂಡವರು. ಆಲೋಚನೆ­ಗಳ ದಿಕ್ಕು ಬದಲಿಸಿದವರು. ಒಂದು ಪೀಳಿಗೆ­ಯನ್ನು ಮುನ್ನಡೆಸಿದವರು. ಜೊತೆಗೆ ಅನೇಕ ಅಪ­ವಾದ, ಮೂದಲಿಕೆಗಳನ್ನು ಎದುರಿಸಿದವರು.

ಸಾಮಾನ್ಯವಾಗಿ ಭಾರತದ ಪರಂಪರೆ, ಇತಿಹಾಸದ ಬಗ್ಗೆ ಮಾತನಾಡುತ್ತ ವೈಭವವನ್ನು ಕೊಂಡಾಡುವಾಗ, ಮಾತಿನ ಕೊನೆಯಲ್ಲಿ ಕೆಲವು ಪ್ರಶ್ನೆಗಳು ಎದುರಾಗುತ್ತವೆ. ಭಾರತ ಕಳೆ­ಗುಂದಿದ್ದು ಹೇಗೆ? ದೇಶದ ಇಂದಿನ ಪರಿಸ್ಥಿತಿಗೆ ಕಾರಣಗಳೇನು? ಇಂದು ಕಾಡುತ್ತಿರುವ ಅನೇಕ ಸಮಸ್ಯೆಗಳು ಹುಟ್ಟಿಕೊಂಡಿದ್ದಾದರೂ ಹೇಗೆ? ಈ ಎಲ್ಲ ಪ್ರಶ್ನೆಗಳಿಗೆ ಸುಲಭ ಉತ್ತರವಾಗಿ ಕಾಣುತ್ತಿ­ರು­ವುದು ಪಂಡಿತ್ ನೆಹರೂ. ಅವರ ಪಾಶ್ಚಿ­ಮಾತ್ಯ ಪ್ರೇರಿತ ಚಿಂತನೆಗಳು ಮತ್ತು ಅವರು ರೂಪಿಸಿದ ಯೋಜನೆಗಳು ಭಾರತವನ್ನು ಇಂದಿನ ಸ್ಥಿತಿಗೆ ತಂದು ನಿಲ್ಲಿಸಿದವು ಎಂಬುದು ನವ ಪೀಳಿಗೆಯ ಯುವಕರ ಉತ್ತರವಾಗಿರುತ್ತದೆ.  ಕಾಂಗ್ರೆಸ್ ಇಂದು ಯುವಕರನ್ನು ಸೆಳೆಯುವಲ್ಲಿ ಸೋಲುತ್ತಿದ್ದರೆ ಅದಕ್ಕೆ ಗಾಂಧಿ–-ನೆಹರೂರ ಬಗ್ಗೆ ಕಾಲಾಂತರದಲ್ಲಿ ಯುವಕರ ಮನದಲ್ಲಿ ಬೆಳೆದ ಅಸಮಾಧಾನವೂ ಕಾರಣ.

ವ್ಯಕ್ತಿ, ವಿಷಯಗಳ ಅಪಮೌಲ್ಯೀಕರಣ, ಮರು­ಮೌಲ್ಯಮಾಪನ ಇತಿಹಾಸದ ಚಿರಂತನ ಪ್ರಕ್ರಿಯೆ. ಈ ಪ್ರಕ್ರಿಯೆಯಲ್ಲಿ ಗಾಂಧೀಜಿ ಮತ್ತು ನೆಹರೂ ಹೆಚ್ಚು ಹಾದುಹೋದರು. ಎರಡು ಪೀಳಿಗೆಯ ಹಿಂದೆ ಯುವಕರನ್ನು ಮೋಡಿ ಮಾಡಿದ್ದ, ಅವರ ಮನದಲ್ಲಿ ಆದರ್ಶವಾಗಿ ನಿಂತಿದ್ದ ಹೊಳೆವ ಕಣ್ಣಿನ ಕನಸುಗಾರ, ಚಾಣಾಕ್ಷ ಮತ್ತು ಸ್ಫುರದ್ರೂಪಿ ನೆಹರೂ ಅವರ ಚಿತ್ರ, ಹೊಸ ತಲೆಮಾರಿನ ತರುಣರಲ್ಲಿ ಮಸುಕಾ­ಗಿಯೂ ಹಾಗೆಯೇ ಉಳಿದಿಲ್ಲ. ಲೋಲು­ಪ­ತೆಯ, ಆಪಾದನೆಗಳ ಭಾರ ಹೊತ್ತ, ಕಳೆ­ಗುಂದಿದ ನೆಹರೂ ಅವರ ಹೊಸಚಿತ್ರ ಈಗಿನ ಯುವಕರನ್ನು ಕೆಣಕಿದ್ದೇ ಹೆಚ್ಚು.

ಇಂದು ದೇಶದ ರಾಜಕೀಯ ದಿಕ್ಕು ಬದಲಿ­ಸಿದೆ. ಏಕೈಕ ದೊಡ್ಡ ಪಕ್ಷವಾಗಿ ಸುಮಾರು 60 ವರ್ಷಗಳ ಕಾಲ ದೇಶವನ್ನು ಆಳಿದ ಕಾಂಗ್ರೆಸ್ ಶಕ್ತಿ ಕಳೆದುಕೊಂಡಿದೆ. ‘ಕುಟುಂಬ ರಾಜ­ಕಾರಣ’ದ ಅಪವಾದ ಹೊತ್ತ ನೆಹರೂ ಮನೆತನ ಭಾರತದ ರಾಜಕೀಯದ ಮೇಲಿನ ಹಿಡಿತವನ್ನು ಉಳಿಸಿಕೊಳ್ಳುವಲ್ಲಿ ಸೋತಿದೆ. ಪರ್ಯಾಯ­ವಾಗಿ ನರೇಂದ್ರ ಮೋದಿ ಜನಪ್ರಿಯತೆಯ ಉತ್ತುಂಗ­ದಲ್ಲಿದ್ದಾರೆ. ಹಿನ್ನೆಲೆ ಮತ್ತು ವ್ಯಕ್ತಿತ್ವ­ದಲ್ಲಿ ನೆಹರೂ ಮತ್ತು ಮೋದಿ ಅವರಿಗೆ ಸಾಮ್ಯ­ವಿಲ್ಲದಿದ್ದರೂ ವೈಖರಿಯಲ್ಲಿ ಹೋಲಿಕೆ­ಯಿದೆ. ನೆಹರೂ ಅವರಂತೆಯೇ ಮೋದಿ ತಮ್ಮ ವಾಕ್ಚಾತುರ್ಯದಿಂದ ಜನರಲ್ಲಿ ಕನಸು ತುಂಬುತ್ತಿದ್ದಾರೆ. ನೆಹರೂ ಜಾಕೆಟ್ ಹಳತಾಗಿ, ಮೋದಿ ಕುರ್ತಾ ಗಮನ ಸೆಳೆಯುತ್ತಿದೆ. ಸಂಪು­ಟದ ಮೇಲಿರುವ ಹಿಡಿತದಲ್ಲೂ ಸಾದೃಶ್ಯವಿದೆ.

‘ವಿಜ್ಞಾನಕ್ಕೆ ಆದ್ಯತೆ ಕೊಡುವುದೇ ಅಭಿವೃದ್ಧಿ­ಯೆಡೆಗಿನ ಪ್ರಥಮ ಹೆಜ್ಜೆ’ ಎಂದು ನಂಬಿದ್ದವರು ನೆಹರೂ. ಹೋಮಿ ಜಹಂಗೀರ್ ಬಾಬಾ, ವಿಕ್ರಂ ಸಾರಾಬಾಯಿ ಮತ್ತಿತರ ವಿಜ್ಞಾನಿಗಳ ಬೆನ್ನಿಗೆ ನಿಂತು ಅನೇಕ ಯೋಜನೆಗಳನ್ನು ರೂಪಿಸಿದ, ಸುಸಜ್ಜಿತ ಪ್ರಯೋಗಾಲಯಗಳು, ಶ್ರೇಷ್ಠ ಶಿಕ್ಷಣ ಸಂಸ್ಥೆಗಳನ್ನು ಆರಂಭಿಸಿದ ಕೀರ್ತಿ ಕೂಡ ನೆಹರೂ ಪಾಲಿಗಿದೆ. ವೈಜ್ಞಾನಿಕ ಮನೋಭಾವ ರೂಢಿಸಿ­ಕೊಳ್ಳಬೇಕಾದ ಅನಿವಾರ್ಯದ ಬಗ್ಗೆ ಹೆಚ್ಚು ಮಾತನಾಡಿದ ರಾಜಕಾರಣಿ ಎಂದರೆ ಅದು ನೆಹರೂ ಮಾತ್ರ. ಇಂದು ಮೋದಿ ಕೂಡ ವಿಜ್ಞಾನ ಮತ್ತು ತಂತ್ರಜ್ಞಾನವನ್ನು ಅಭಿವೃದ್ಧಿಗೆ ಪೂರಕವಾಗಿ ಬಳಸಿಕೊಳ್ಳುವ ಮಾತನಾಡುತ್ತಿದ್ದಾರೆ.

ಜವಾಹರಲಾಲರ ಅಸಾಧಾರಣ ಶಕ್ತಿ ಎಂದರೆ ಜಗತ್ತಿನ ವಿದ್ಯಮಾನಗಳ ಬಗ್ಗೆ ಅವರಿಗಿದ್ದ ಕುತೂ­ಹಲ ಮತ್ತು ಅರಿವಿನ ವಿಸ್ತಾರ. ಅದನ್ನು ಅವರು ತಮ್ಮ ಬರಹ ಮತ್ತು ಭಾಷಣಗಳ ಮೂಲಕ ಜನರಿಗೆ ವರ್ಗಾಯಿಸಲು ಪ್ರಯತ್ನಿಸಿದರು. ‘ಗ್ಲಿಂಪ್ಸಸ್ ಆಫ್ ವರ್ಲ್ಡ್ ಹಿಸ್ಟರಿ’, ‘ಡಿಸ್ಕವರಿ ಆಫ್ ಇಂಡಿಯಾ’ ಮೂಲಕ ಜಗತ್ತನ್ನು ಅನ್ವೇಷಿ­ಸಿ­ದರು. ಮುಖ್ಯಮಂತ್ರಿಗಳಿಗೆ ನಿರಂತರವಾಗಿ 15 ದಿನಗಳಿಗೊಮ್ಮೆ ಬರೆಯುತ್ತಿದ್ದ ಪತ್ರಗಳ ಮೂಲಕ ತಮ್ಮ ಚಿಂತನೆಗಳನ್ನು, ಕನಸುಗಳನ್ನು ರಾಜ್ಯಗಳಿಗೆ ಹರಡಿದರು. ಸಂಸತ್ತಿನ ಕಲಾಪಗಳಿಗೆ ವಿಶಿಷ್ಟ ಮೆರುಗು, ಘನತೆ ತಂದರು. ಈ ವಿಷಯ­ಗಳಲ್ಲಿ ನೆಹರೂ ಅವರಿಗೆ ಸಾಟಿಯಿಲ್ಲ.


ಬಿಜೆಪಿ ಮಟ್ಟಿಗೆ ಎ.ಬಿ.ವಾಜಪೇಯಿ ಅವರನ್ನು ಬಿಟ್ಟರೆ ನೆಹರೂರನ್ನು ಮೆಚ್ಚಿದ ಇನ್ನೊಬ್ಬ ನಾಯಕ ಕಾಣುವುದಿಲ್ಲ. ನೆಹರೂ ಅವರಿಗೆ ಪರ್ಯಾಯವಾಗಿ ಪಟೇಲರನ್ನು ನೋಡುತ್ತಾ ಬಂದಿರುವುದು ಬಿಜೆಪಿಯ ವಾಡಿಕೆ. ‘ಕನಸುಗಾರ ನೆಹರೂ ಬದಲಾಗಿ ವಾಸ್ತವವಾದಿ ಸರ್ದಾರ್ ಪಟೇಲ್ ಸ್ವಾತಂತ್ರ್ಯೋತ್ತರ ಭಾರತವನ್ನು ಮುನ್ನಡೆ­ಸಿದ್ದರೆ ಅನೇಕ ಸಮಸ್ಯೆಗಳು ಇಲ್ಲವಾ­ಗು­ತ್ತಿದ್ದವು’ ಎಂಬ ಮಾತನ್ನು ಮೋದಿ ಚುನಾವಣಾ ಸಂದರ್ಭದಲ್ಲಿ ಅನೇಕ ಬಾರಿ ಹೇಳಿದ್ದರು. ಅವರು ಕೈಗೆತ್ತಿಕೊಂಡ ಪಟೇಲ್ ಪ್ರತಿಮೆಯ ಯೋಜನೆ, ಪಟೇಲರ ಜನ್ಮದಿನಕ್ಕೆ ನೀಡಿದ ವಿಶೇಷ ಆದ್ಯತೆ, ಮೋದಿ ಅವರಿಗೆ ಕಾಂಗ್ರೆಸ್ಸಿನ ಬಲಪಂಥೀಯ, ಗುಜರಾತಿ ಸರ್ದಾರ್ ಪಟೇಲರೇ ಅಚ್ಚುಮೆಚ್ಚು ಎನ್ನುವುದನ್ನು ಸೂಚಿಸಿ­ದ್ದವು. ಹಾಗಾಗಿ ಹದಿನೈದನೆಯ ಪ್ರಧಾನಿ ಮೋದಿ, ಪ್ರಥಮ ಪ್ರಧಾನಿಗೆ ಎಷ್ಟು ಮಹತ್ವ ಕೊಡಬಹುದು? ಎಂಬುದು ಚರ್ಚಾ ವಿಷಯವಾಗಿದೆ.

ನೆಹರೂ ಪ್ರತಿಪಾದಿಸಿದ ಸಮಾಜವಾದ ಇಂದು ನೆಲೆ ಕಳೆದುಕೊಂಡಿದೆ, ಕಾಂಗ್ರೆಸ್ ಪಕ್ಷ ಮಾತುಮರೆತು ಕೂತಿದೆ. ನೆಹರೂ ಒತ್ತುಕೊಟ್ಟು ಮೆರೆಸಿದ ‘ಜಾತ್ಯತೀತವಾದ’ ಕ್ಲೀಷೆಯಾಗಿ ಎಲ್ಲ ಪಕ್ಷಗಳ ಪ್ರಣಾಳಿಕೆಯ ಸರಕಾಗಿದೆ. ತಾವು ಅಧಿಕಾರ ವಹಿಸಿಕೊಂಡಾಗ ನೆಹರೂ ಆಡಿದ್ದ ‘ಅಧಿಕಾರವೆಂಬುದು ಹೊಣೆಗಾರಿಕೆ, ಪ್ರಧಾನಿ ಎಂದರೆ ದೇಶದ ಮೊದಲ ಸೇವಕ’ ಎಂಬ ಮಾತು ಮೋದಿ ಅವರ ಮೂಲಕ ಹೊಸದಾಗಿ ಕೇಳಿಸುತ್ತಿದೆ.

ಅಂದಿನಿಂದ ಇಂದಿನವರೆಗೂ ನೆಹರೂ­ರನ್ನು ಒಪ್ಪದೆಯೂ ಅವರ ಪಥ ತುಳಿದ­ವರು, ಅನುಕರಿಸಿದವರು ಸಾಕಷ್ಟು ಮಂದಿ. ಅಂದು ಚರ್ಚಿಲ್, ನೆಹರೂ ಅವರನ್ನು ‘ಏಷ್ಯಾದ ಬೆಳಕು’ ಎಂದು ಕರೆದಿದ್ದರು. ವಿಪರ್ಯಾಸ­ವೆಂ­ದರೆ ಕಾಲ ಉರುಳಿದಂತೆ ನೆಹರೂ ಮೌಲ್ಯ­ಮಾಪನ ಅವರ ತಪ್ಪುಗಳಿಗಷ್ಟೇ ಸೀಮಿತವಾಗು­ತ್ತಿದೆ. ಒಳ್ಳೆಯದನ್ನು ಸ್ಮರಿಸುವುದು, ತಪ್ಪುಹೆಜ್ಜೆ­ಗಳನ್ನು ಅವಲೋಕಿಸುವುದು, ಸಮಚಿತ್ತದಿಂದ ನೆಹರೂ ಅವರತ್ತ ನೋಡುವುದು ಇಂದಿನ ಜರೂರು. ಆ ಮೂಲಕವಷ್ಟೇ ನೂರಿಪ್ಪತ್ತೈದರ ಆಧುನಿಕ ಭಾರತದ ನಿರ್ಮಾತೃವಿಗೆ ಗೌರವ ಸಲ್ಲಿಸಬಹುದು ಎನಿಸುತ್ತದೆ.

(ಅನಿವಾರ್ಯ ಕಾರಣಗಳಿಂದ ‘ಗುಹಾಂಕಣ’ ಪ್ರಕಟವಾಗಿಲ್ಲ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT