ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೇಪಾಳ: ಸಂವಿಧಾನ ಕರಡು ತ್ವರಿತಕ್ಕೆ ಮೋದಿ ಸಲಹೆ

Last Updated 25 ನವೆಂಬರ್ 2014, 19:30 IST
ಅಕ್ಷರ ಗಾತ್ರ

ಕಠ್ಮಂಡು (ಪಿಟಿಐ): ನೇಪಾಳದಲ್ಲಿ ಶೀಘ್ರವೇ ಹೊಸ ಸಂವಿಧಾನದ ಕರಡು ರಚನೆಗೆ ಕರೆ ನೀಡಿರುವ ಪ್ರಧಾನಿ ನರೇಂದ್ರ ಮೋದಿ, ಈ ಕೆಲಸ ಆಗದಿದ್ದಲ್ಲಿ ನೇಪಾಳವು ತೊಂದರೆಗೆ ಒಳಗಾಗಬಹುದು ಎಂದು ಎಚ್ಚರಿಸಿದ್ದಾರೆ.

‘ಮುಂದಿನ ವರ್ಷದ ಆರಂಭದ ಹೊತ್ತಿಗೆ ಈ ಕೆಲಸ ಆಗಬೇಕು ಎಂದು ನಾನು ಎಲ್ಲ ರಾಜಕೀಯ ಪಕ್ಷಗಳಿಗೆ  ಮನವಿ ಮಾಡಿಕೊಳ್ಳುತ್ತೇನೆ’ ಎಂದೂ ಅವರು ಹೇಳಿದ್ದಾರೆ.

ಕಠ್ಮಂಡುವಿನ ಬಿರ್‌ ಆಸ್ಪತ್ರೆಯಲ್ಲಿ ಭಾರತದ ನೆರವಿನೊಂದಿಗೆ ನಿರ್ಮಿಸಲಾದ ತುರ್ತು ಚಿಕಿತ್ಸಾ ಘಟಕವನ್ನು ಉದ್ಘಾಟಿಸಿ ಮಾತನಾಡಿದ ಮೋದಿ, ‘ಕರಡು ಸಂವಿಧಾನ ರಚನೆ ವಿಷಯದಲ್ಲಿ ಭಾರತ ಹಸ್ತಕ್ಷೇಪ ಮಾಡಲು ಇಷ್ಟಪಡುವುದಿಲ್ಲ’ ಎಂದರು.

ತುರ್ತು ಚಿಕಿತ್ಸಾ ಘಟಕವು 2009ರಲ್ಲಿಯೇ ಆರಂಭವಾಗಬೇಕಿತ್ತು. 200 ಹಾಸಿಗೆಯ ಈ ಕೇಂದ್ರವು ರೂ150 ಕೋಟಿ ವೆಚ್ಚದ ಯೋಜನೆಯಾಗಿದೆ.  1997ರಲ್ಲಿ ಆಗಿನ ಪ್ರಧಾನಿ ಐ.ಕೆ.ಗುಜ್ರಾಲ್‌ ಅವರು ಈ ಕೇಂದ್ರಕ್ಕೆ ಶಂಕುಸ್ಥಾಪನೆ ನೆರವೇರಿಸಿದ್ದರು.

ಲಘು ಹೆಲಿಕಾಪ್ಟರ್‌ ಹಸ್ತಾಂತರ: ಸೇನಾ ಕಾರ್ಯಾಚರಣೆಗೆ ಬಳಕೆ ಮಾಡುವ ಅತ್ಯಾಧುನಿಕ ಲಘು ಹೆಲಿಕಾಫ್ಟರ್‌­ವೊಂದನ್ನು (ಧ್ರುವ್‌ 3 ಶ್ರೇಣಿ) ಮೋದಿ ನೇಪಾಳಕ್ಕೆ ಹಸ್ತಾಂತರಿಸಿದರು. ಸಮಯದ ಕೊರತೆಯಿಂದಾಗಿ ಮೋದಿ ಅವರು ಉದ್ದೇಶಿತ ಜನಕಪುರ, ಲುಂಬಿಣಿ ಹಾಗೂ ಮುಕ್ತಿನಾಥ ಭೇಟಿಯನ್ನು ರದ್ದುಪಡಿಸಿದ್ದಾರೆ.

ಇಂದಿನಿಂದ ಸಾರ್ಕ್‌ ಶೃಂಗಸಭೆ

ಬುಧವಾರ (ನ.26) ಪ್ರಾರಂಭವಾಗಲಿರುವ ಎರಡು ದಿನದ 18ನೇ ಸಾರ್ಕ್‌ ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ನೇಪಾಳದ ರಾಜಧಾನಿ ಕಠ್ಮಂಡುವಿಗೆ ಮಂಗಳ­ವಾರ ಬಂದಿಳಿದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಭವ್ಯ ಸ್ವಾಗತ ಕೋರ­ಲಾಯಿತು. ಶ್ರೀಲಂಕಾ ಅಧ್ಯಕ್ಷ ಮಹಿಂದಾ ರಾಜಪಕ್ಸೆ  ಸೇರಿದಂತೆ ಸಾರ್ಕ್‌ ಸದಸ್ಯ ರಾಷ್ಟ್ರಗಳ  ಮುಖಂಡರು ಕಠ್ಮಂಡು ತಲುಪಿದ್ದಾರೆ.

10 ಒಪ್ಪಂದಗಳಿಗೆ ಸಹಿ: ರೂ100 ಕೋಟಿ ನೆರವು ಸೇರಿದಂತೆ 10 ಒಪ್ಪಂದಗಳಿಗೆ ಭಾರತ- ನೇಪಾಳ ಸೋಮವಾರ ಸಹಿ ಹಾಕಿವೆ.
ಇದಕ್ಕೂ ಮೊದಲು, ನೇಪಾಳ ಪ್ರಧಾನಿ ಸುಶೀಲ್‌ ಕೊಯಿರಾಲ ಮತ್ತು ಮೋದಿ ಅವರು ಮಾತುಕತೆ ನಡೆಸಿದರು. ದೆಹಲಿ– ಕಠ್ಮಂಡು ನಡುವಣ ‘ಪಶುಪತಿನಾಥ ಎಕ್ಸ್‌ಪ್ರೆಸ್‌’ ಬಸ್‌ ಸೇವೆಗೂ ಚಾಲನೆ ನೀಡಿದರು.

ರೂ25 ಸಾವಿರ ಮಿತಿವರೆಗೆ ರೂ500 ಹಾಗೂ  ರೂ1000 ಮುಖಬೆಲೆಯ ನೋಟು­ಗಳನ್ನು ಎರಡೂ ದೇಶಗಳಿಗೆ ಕೊಂಡೊಯ್ಯಲು ಭಾರತ ಹಾಗೂ ನೇಪಾಳ ನಿರ್ಧರಿಸಿವೆ. ಪ್ರಸ್ತುತ ರೂ100 ಮುಖ­ಬೆಲೆ ನೋಟುಗಳನ್ನು ಮಾತ್ರ ಭಾರತೀಯ ಪ್ರವಾಸಿಗರು ನೇಪಾಳಕ್ಕೆ ತೆಗೆದುಕೊಂಡು ಹೋಗಬಹುದಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT