ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೇಮಕದಲ್ಲಿ ಸಾಮಾಜಿಕ ನ್ಯಾಯ ಅಗತ್ಯ

‘ರಾಷ್ಟ್ರೀಯ ನ್ಯಾಯಾಂಗ ನೇಮಕಾತಿ ಆಯೋಗ ಮಸೂದೆ–2014’ ವಿಚಾರ ಸಂಕಿರಣ
Last Updated 28 ಆಗಸ್ಟ್ 2014, 19:30 IST
ಅಕ್ಷರ ಗಾತ್ರ

ಬೆಂಗಳೂರು: ‘ಸುಪ್ರೀಂ ಕೋರ್ಟ್‌ ಪೀಠ­ದಲ್ಲಿ ಸದ್ಯ ಪರಿಶಿಷ್ಟ ಜಾತಿ ಹಾಗೂ ಪರಿ­ಶಿಷ್ಟ ಪಂಗಡಕ್ಕೆ ಸೇರಿದ ಒಬ್ಬ ನ್ಯಾಯ­ಮೂರ್ತಿಯೂ ಇಲ್ಲ. ಮಹಿಳೆಯರು ಹಾಗೂ ಹಿಂದುಳಿದ ವರ್ಗದವರ ಪರಿಸ್ಥಿತಿ ಕೂಡ ಇದಕ್ಕಿಂತ ಭಿನ್ನವೇನಾ­ಗಿಲ್ಲ.  ಹೈಕೋರ್ಟ್‌ಗಳಲ್ಲೂ ಇದೇ ಪರಿಸ್ಥಿತಿ ಇದೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಿಷಾದಿಸಿದರು.

ನಗರದ ರಾಷ್ಟ್ರೀಯ ಕಾನೂನು ಮಹಾವಿದ್ಯಾಲಯದ ಸಹಯೋಗದಲ್ಲಿ ಲಾಯರ್ಸ್‌ ಫೋರಂ ಫಾರ್‌ ಸೋಷಿ­ಯಲ್‌ ಜಸ್ಟೀಸ್‌ ಗುರುವಾರ ಆಯೋಜಿ­ಸಿದ್ದ ‘ರಾಷ್ಟ್ರೀಯ ನ್ಯಾಯಾಂಗ ನೇಮ­ಕಾತಿ ಆಯೋಗ ಮಸೂದೆ –2014’ ಕುರಿತ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.

‘21 ವರ್ಷಗಳಷ್ಟು ಹಳೆಯ­ದಾದ ನ್ಯಾಯ­­ಮೂರ್ತಿಗಳ ನೇಮಕಾತಿ ಶಿಫಾ­ರಸು ಸಮಿತಿ (ಕೊಲಿಜಿಯಂ) ವ್ಯವಸ್ಥೆ ಬಗ್ಗೆ ಒಳ್ಳೆಯ ಅಭಿಪ್ರಾಯ ಇಲ್ಲ. ಈ ವ್ಯವಸ್ಥೆಯ ವೈಫಲ್ಯವನ್ನು ಎಲ್ಲರೂ ಒಪ್ಪಿಕೊಂಡಿದ್ದಾರೆ’ ಎಂದು ಅವರು ಹೇಳಿದರು.

‘ಸದ್ಯದ ನೇಮಕಾತಿ ವಿಧಾನದಲ್ಲಿ ಪಾರ­ದರ್ಶಕತೆ ಕೂಡ ಇಲ್ಲ. ಹಾಗಾಗಿ ಈ ವ್ಯವಸ್ಥೆ ಬದಲಾಯಿಸಿ ರಾಷ್ಟ್ರೀಯ ನ್ಯಾಯಾಂಗ ನೇಮಕಾತಿ ಆಯೋಗ ರಚಿ­ಸಲು ಹಿಂದಿನಿಂದ ಪ್ರಯತ್ನ ನಡೆದಿದೆ. ಈ ನಿಟ್ಟಿನಲ್ಲಿ ಸಲಹೆ ಸೂಚನೆ ನೀಡಿ ಸೂಕ್ತ ಪರಿಹಾರ ಕಂಡುಕೊಳ್ಳಲು ವಿಚಾರ ಸಂಕಿರಣದಲ್ಲಿ ಚರ್ಚೆ ನಡೆ­ಯ­ಬೇಕು. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗ, ಅಲ್ಪ ಸಂಖ್ಯಾಂ­ತರು ಹಾಗೂ ಮಹಿಳೆಯರಿಗೆ ಸೂಕ್ತ ಪ್ರಾತಿನಿಧ್ಯ ಒದಗಿಸಿಕೊಡಲು ಪ್ರಯತ್ನ ನಡೆಯಬೇಕು’ ಎಂದು ಅಭಿಪ್ರಾಯಪಟ್ಟರು.

ಅಡ್ವೊಕೇಟ್‌ ಜನರಲ್‌ ಪ್ರೊ. ರವಿವರ್ಮ ಕುಮಾರ್‌ ಮಾತನಾಡಿ, ‘ನ್ಯಾಯಾಧೀಶರ ನೇಮಕದಲ್ಲಿ ಪಾರ­ದರ್ಶ­ಕತೆ ಇರಬೇಕು. ಕೆಳ ಸಮುದಾಯ­ವರಿಗೂ ಸೂಕ್ತ ಪ್ರಾತಿನಿಧ್ಯ ಸಿಗಬೇಕು. ಸರಿ­ಯಾದ ಪ್ರಾತಿನಿಧ್ಯ ಸಿಗದಿದ್ದಾಗ ಅದನ್ನು ಪ್ರಶ್ನಿಸುವ ಹಕ್ಕು ಜನರಿಗಿದೆ. ಅದಕ್ಕಾಗಿ ಸದ್ಯದ ವ್ಯವಸ್ಥೆ ಬದಲಾಗ­ಬೇಕು. ಆದರೆ, ಚರ್ಚೆ, ಸಂವಾದ ಇಲ್ಲದೆ ಆಯೋಗ ರಚನೆಯಾಗುತ್ತಿದೆ’ ಎಂದರು.

ಅಮೆರಿಕದ ವ್ಯವಸ್ಥೆ ಮಾದರಿಯಾಗ­ಬೇಕು: ‘ಕೊಲಿಯಂ ವ್ಯವಸ್ಥೆಗೆ ಮುನ್ನ 43 ವರ್ಷಗಳಲ್ಲಿ 111 ನ್ಯಾಯ­ಮೂರ್ತಿ ಹಾಗೂ 30 ಮುಖ್ಯ ನ್ಯಾಯ­ಮೂರ್ತಿಗಳ ನೇಮಕ ಮಾಡಲಾಗಿದೆ. ಕೊಲಿಜಿಯಂ ವ್ಯವಸ್ಥೆ ಜಾರಿಗೆ ಬಂದ ಮೇಲೆ  21 ವರ್ಷಗಳಲ್ಲಿ 107 ನ್ಯಾಯ­ಮೂರ್ತಿ ಹಾಗೂ 11 ಮುಖ್ಯ ನ್ಯಾಯ­ಮೂರ್ತಿಗಳ ನೇಮಕಾತಿ ನಡೆ­ದಿದೆ. ಸುಪ್ರೀಂ ಕೋರ್ಟ್‌ನಲ್ಲಿ ಸದ್ಯ ಶೇ 86ರಷ್ಟು ಹಿಂದೂಗಳು ಇದ್ದಾರೆ. ಹೆಚ್ಚಿ­ನವರು ಸಾಮಾನ್ಯ ವರ್ಗಕ್ಕೆ ಸೇರಿದ­ವರು. ಈಗಿರುವ ನ್ಯಾಯಾಧೀಶರಲ್ಲಿ ಶೇ 50ರಷ್ಟು ನ್ಯಾಯಮೂರ್ತಿಗಳು ಹಾಗೂ ವಕೀಲರ ಮಕ್ಕಳೇ ಇದ್ದಾರೆ. ಇದನ್ನು ಗಮನಿಸಿದರೆ ಎಲ್ಲಾ ವರ್ಗಕ್ಕೆ ಸೂಕ್ತ ಪ್ರಾತಿನಿಧ್ಯ ಸಿಕ್ಕಿದೆ ಎನಿಸುವುದಿಲ್ಲ’ ಎಂದು ರಾಜೀವ್ ಗಾಂಧಿ ಸಮಕಾಲೀನ ಅಧ್ಯಯನ ಸಂಸ್ಥೆ (ನವದೆಹಲಿ) ನಿರ್ದೇಶಕ ಪ್ರೊ. ಜಿ. ಮೋಹನ್‌ ಗೋಪಾಲ್‌ ಅವರು ವಿಶ್ಲೇಷಿಸಿದರು.

‘ಅಮೆರಿಕ ಸುಪ್ರೀಂ ಕೋರ್ಟ್‌ನಲ್ಲಿ 9 ನ್ಯಾಯಮೂರ್ತಿಗಳು ಇದ್ದಾರೆ. ಅವ­ರಲ್ಲಿ ಎಲ್ಲರೂ ಅಲ್ಪಸಂಖ್ಯಾತ ಸಮುದಾ­ಯಕ್ಕೆ ಸೇರಿದವರು. ಮೂವರು ಮಹಿಳೆ­ಯರು ಇದ್ದಾರೆ. ಆ ದೇಶದಲ್ಲಿ ರಾಜ­ಕೀಯ ನೇಮಕಾತಿ ವ್ಯವಸ್ಥೆ ಇದೆ. ಅದು ಪಾರದರ್ಶಕವಾಗಿ ನಡೆಯುತ್ತಿದೆ. ಈ ವ್ಯವಸ್ಥೆಯನ್ನು ಮಾದರಿಯಾಗಿ­ಟ್ಟು­ಕೊಳ್ಳ­ಬಹುದು’ ಎಂದು ಉದಾಹರಣೆ ಸಹಿತ ವಿವರಿಸಿದರು.

ನಿವೃತ್ತ ಮುಖ್ಯ ನ್ಯಾಯಮೂರ್ತಿ ಎಂ. ರಾಮಾ ಜೋಯಿಸ್‌, ‘ನ್ಯಾಯಾ­ಧೀ­­ಶರು ಹೇಗೆ ಇರಬೇಕು ಎಂಬ ಪರಿ­ಕಲ್ಪನೆ ಶತಮಾನಗಳಿಂದಲೂ ಇದೆ. ಮಹಾ­ಭಾರತದಲ್ಲೂ ಈ ಬಗ್ಗೆ ಪ್ರಸ್ತಾ­ಪ­ವಿದೆ. ನನ್ನ ಪ್ರಕಾರ ನ್ಯಾಯಾಧೀ­ಶ­ರನ್ನು ನೇಮಕ ಮಾಡುವ ವ್ಯಕ್ತಿಯೂ ನ್ಯಾಯಾ­ಧೀಶರಿಗೆ ಇರುವ ಅರ್ಹತೆ ಹೊಂದಿ­ರಬೇಕು’ ಎಂದು ಅಭಿಪ್ರಾಯಪಟ್ಟರು.

ಕಾರ್ಯಕ್ರಮದಲ್ಲಿ ನಿವೃತ್ತ ಮುಖ್ಯ ನ್ಯಾಯಮೂರ್ತಿಗಳಾದ ವಿ.ಎಸ್‌. ಮಳಿಮಠ, ಎಂ.ಎನ್‌.ರಾವ್‌, ಮಾಜಿ ಅಡ್ವೊಕೇಟ್ ಜನರಲ್ ಬಿ.ವಿ.ಆಚಾರ್ಯ, ಹಿರಿಯ ವಕೀಲ­ರಾದ ಎಸ್‌.ಎಸ್‌.ನಾಗಾನಂದ, ಜಯ­ಕುಮಾರ್‌ ಎಸ್‌.ಪಾಟೀಲ್‌, ರಾಷ್ಟ್ರೀಯ ಕಾನೂನು ಮಹಾವಿದ್ಯಾಲ­ಯದ ಸಿಎಸ್‌ಎಸ್‌­ಇಐಪಿ ನಿರ್ದೇಶಕ ಪ್ರೊ.ಎಸ್‌.ಜಾಫೆಟ್‌ ಹಾಗೂ ವಿವಿಧ ಕಾಲೇಜುಗಳ ಕಾನೂನು ವಿದ್ಯಾರ್ಥಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT