ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೈಟ್‌ ರೈಡರ್ಸ್‌ಗೆ ಮಣಿದ ಆರ್‌ಸಿಬಿ

ಅದ್ಭುತ ಕ್ಯಾಚ್‌ ಮೂಲಕ ಮಿಂಚಿದ ಕ್ರಿಸ್‌ ಲಿನ್‌; ಕೊಹ್ಲಿ ಬಳಗಕ್ಕೆ 2 ರನ್‌ ಸೋಲು
Last Updated 24 ಏಪ್ರಿಲ್ 2014, 20:01 IST
ಅಕ್ಷರ ಗಾತ್ರ

ಶಾರ್ಜಾ (ಪಿಟಿಐ): ಕ್ರಿಸ್‌ ಲಿನ್‌ ಪಡೆದ ಅದ್ಭುತ ಕ್ಯಾಚ್‌ ಹಾಗೂ ಬೌಲರ್‌ಗಳ ಶಿಸ್ತಿನ ದಾಳಿಯ ನೆರವಿನಿಂದ ಕೋಲ್ಕತ್ತ ನೈಟ್‌ ರೈಡರ್ಸ್‌ ತಂಡ ಐಪಿಎಲ್‌ ಟೂರ್ನಿಯಲ್ಲಿ ರೋಚಕ ಜಯ ಸಾಧಿಸಿತು. ಶಾರ್ಜಾ ಕ್ರಿಕೆಟ್‌ ಕ್ರೀಡಾಂಗಣದಲ್ಲಿ ಗುರುವಾರ ರಾತ್ರಿ ನಡೆದ ಪಂದ್ಯದಲ್ಲಿ ಗೌತಮ್‌ ಗಂಭೀರ್‌ ಬಳಗ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (ಆರ್‌ಸಿಬಿ) ತಂಡವನ್ನು ಎರಡು ರನ್‌ಗಳಿಂದ ಸೋಲಿಸಿತು.

ಮೊದಲು ಬ್ಯಾಟ್‌ ಮಾಡಿದ ನೈಟ್‌ ರೈಡರ್ಸ್‌ ತಂಡದವರು 20 ಓವರ್‌ಗಳಲ್ಲಿ 7 ವಿಕೆಟ್‌ ಕಳೆದುಕೊಂಡು 150 ರನ್‌ ಗಳಿಸಿದರೆ, ಆರ್‌ಸಿಬಿ ನಿಗದಿತ ಓವರ್‌ಗಳಲ್ಲಿ 5 ವಿಕೆಟ್‌ಗೆ 148 ರನ್‌ ಗಳಿಸಿ ಗೆಲುವಿನ ದಡದಲ್ಲಿ ಎಡವಿತು. ಕೊಹ್ಲಿ ಬಳಗಕ್ಕೆ ಟೂರ್ನಿಯಲ್ಲಿ ಎದುರಾದ ಮೊದಲ ಸೋಲು ಇದು.

ಟಾಸ್‌ ಗೆದ್ದು ಮೊದಲು ಬೌಲ್‌ ಮಾಡಲು ಮುಂದಾದ ರಾಯಲ್‌ ಚಾಲೆಂಜರ್ಸ್‌ಗೆ ಉತ್ತಮ ಆರಂಭ ಲಭಿಸಿತು. ಮೊದಲ ಓವರ್‌ನ ಮೂರನೇ ಎಸೆತದಲ್ಲಿಯೇ ನೈಟ್‌ ರೈಡರ್ಸ್‌ ನಾಯಕ ಗೌತಮ್‌ ಗಂಭೀರ್‌ ಎಲ್‌ಬಿಡಬ್ಲ್ಯು ಬಲೆಗೆ ಬಿದ್ದರು. ಆ ವಿಕೆಟ್‌ ಪಡೆದಿದ್ದು ಮಿಷೆಲ್ ಸ್ಟಾರ್ಕ್‌. ನಂತರದ ಓವರ್‌ನಲ್ಲಿ ಮನೀಷ್‌ ಪಾಂಡೆ ಅವರ ವಿಕೆಟ್‌ ಕಬಳಿಸಿದ್ದು ಅಲ್ಬಿ ಮಾರ್ಕೆಲ್‌.

ಕೇವಲ 10 ರನ್‌ಗಳಿಗೆ 2 ವಿಕೆಟ್‌ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದ ರೈಡರ್ಸ್‌ಗೆ ಆಸರೆಯಾಗಿದ್ದು ಜಾಕ್‌ ಕಾಲಿಸ್‌ ಹಾಗೂ ಕ್ರಿಸ್‌ ಲಿನ್‌. ಬಿರುಸಿನ ಆಟಕ್ಕಿಳಿದ ಇವರಿಬ್ಬರು ಮೂರನೇ ವಿಕೆಟ್‌ಗೆ 80 ರನ್‌ ಸೇರಿಸಿದರು. ಅದಕ್ಕೆ ತೆಗೆದುಕೊಂಡ ಎಸೆತಗಳು ಕೇವಲ 61.
ಕಾಲಿಸ್ (43; 42 ಎಸೆತ, 2 ಬೌಂ., 1 ಸಿ.) ಹಾಗೂ ಲಿನ್‌ ಒಂದು ಹಂತದಲ್ಲಿ ಆರ್‌ಸಿಬಿ ತಂಡದಲ್ಲಿ ಆತಂಕ ಸೃಷ್ಟಿಸಿದ್ದು ನಿಜ. ಅದರಲ್ಲೂ ಆಸ್ಟ್ರೇಲಿಯಾದ ಲಿನ್‌ 31 ಎಸೆತಗಳಲ್ಲಿ 45 ರನ್‌ ಗಳಿಸಿದರು. ಅವರ ಈ ಇನಿಂಗ್ಸ್‌ನಲ್ಲಿ ಮೂರು ಸಿಕ್ಸರ್‌ ಹಾಗೂ ಮೂರು ಬೌಂಡರಿಗಳಿದ್ದವು.

ಆದರೆ 12ನೇ ಓವರ್‌ ಆರ್‌ಸಿಬಿ ತಂಡದ ಅದೃಷ್ಟ ಬದಲಾಯಿಸಿತು. ಆ ಓವರ್‌ ಮಾಡಿದ ವೇಗಿ ವರುಣ್‌ ಆ್ಯರನ್‌ (16ಕ್ಕೆ 3) ಈ ಜೊತೆಯಾಟವನ್ನು ತುಂಡರಿಸಿದರು. ಅವರು ಲಿನ್‌ ವಿಕೆಟ್‌ ಪಡೆದರು. ಅದೇ ಓವರ್‌ನಲ್ಲಿ ಯೂಸುಫ್‌ ಪಠಾಣ್‌ ವಿಕೆಟ್‌ ಕಬಳಿಸಿದರು.

ಕಾಲಿಸ್ ಹಾಗೂ ರಾಬಿನ್‌ ಉತ್ತಪ್ಪ ತಂಡವನ್ನು ಅಪಾಯದಿಂದ ಪಾರು ಮಾಡಲು ಯತ್ನಿಸಿದರು. ಆದರೆ ಯಜುವೇಂದ್ರ ಚಹಾಲ್ ಅವರು ಕಾಲಿಸ್‌ ವಿಕೆಟ್‌ ಪಡೆದರು. ಒಮ್ಮೆಲೇ ನೈಟ್‌ ರೈಡರ್ಸ್‌ ರನ್‌ವೇಗಕ್ಕೆ ಕಡಿವಾಣ ಬಿತ್ತು. ಉತ್ತಪ್ಪ (22; 18 ಎ,. 1 ಸಿ.) ತಂಡದ ಸ್ಕೋರ್‌ ಹೆಚ್ಚಿಸಲು ಪ್ರಯತ್ನಿಸಿದರು. ಕೊನೆಯಲ್ಲಿ ಸೂರ್ಯಕುಮಾರ್‌ (ಔಟಾಗದೆ 24; 18 ಎ., 1 ಬೌಂ., 1 ಸಿ.,) ಅವರ ನೆರವಿನಿಂದ ತಂಡ 150 ರನ್‌ ಕಲೆಹಾಕಿತು.

ಉತ್ತಮ ಆರಂಭ: ಸಾಧಾರಣ ಗುರಿ ಬೆನ್ನಟ್ಟಿದ ಆರ್‌ಸಿಬಿಗೆ ಉತ್ತಮ ಆರಂಭ ಲಭಿಸಿತು. ಪಾರ್ಥಿವ್‌ ಪಟೇಲ್‌ (21, 19 ಎಸೆತ) ಮತ್ತು ಯೋಗೇಶ್‌ ಟಕವಾಲೆ (40, 28 ಎಸೆತ, 8 ಬೌಂ) ಮೊದಲ ವಿಕೆಟ್‌ಗೆ 67 ರನ್‌ ಸೇರಿಸಿದರು. ಆದರೆ ಇಬ್ಬರೂ ಅದೇ ಮೊತ್ತಕ್ಕೆ ಔಟಾದರು.

ಬಳಿಕ ಜೊತೆಯಾದ ವಿರಾಟ್‌ ಕೊಹ್ಲಿ (31, 23 ಎಸೆತ, 4 ಬೌಂ) ಮತ್ತು ಯುವರಾಜ್‌ ಸಿಂಗ್‌ (31, 34 ಎಸೆತ, 2 ಬೌಂ, 1 ಸಿಕ್ಸರ್‌) ಮೂರನೇ ವಿಕೆಟ್‌ಗೆ 55 ರನ್‌ ಸೇರಿಸಿದರು. ಕೊನೆಯ 10 ಓವರ್‌ಗಳಲ್ಲಿ ಆರ್‌ಸಿಬಿ ಗೆಲುವಿಗೆ 74 ರನ್‌ಗಳು ಬೇಕಿದ್ದವು. ಕೈಯಲ್ಲಿ ಎಂಟು ವಿಕೆಟ್‌ಗಳಿದ್ದವು. ಆ ಬಳಿಕ ನೈಟ್‌ ರೈಡರ್ಸ್‌ ಬೌಲರ್‌ಗಳು ಶಿಸ್ತಿನ ದಾಳಿ ನಡೆಸಿದರು.

ಕೊಹ್ಲಿ ಮತ್ತು ಯುವರಾಜ್‌ ಪ್ರಮುಖ ಘಟ್ಟದಲ್ಲಿ ಔಟಾದ ಕಾರಣ ಆರ್‌ಸಿಬಿ ಒತ್ತಡಕ್ಕೆ ಒಳಗಾಯಿತು. ಅಂತಿಮ ಓವರ್‌ನಲ್ಲಿ ತಂಡಕ್ಕೆ 9 ರನ್‌ಗಳು ಬೇಕಿದ್ದವು. ಎಬಿ ಡಿವಿಲಿಯರ್ಸ್‌ ಮತ್ತು ಅಲ್ಬಿ ಮಾರ್ಕೆಲ್‌ ಕ್ರೀಸ್‌ನಲ್ಲಿದ್ದ ಕಾರಣ ಆರ್‌ಸಿಬಿ ಗೆಲುವಿನ ಉತ್ತಮ ಅವಕಾಶವಿತ್ತು.
ಅದ್ಭುತ ಕ್ಯಾಚ್‌: ಅಂತಿಮ ಓವರ್‌ ಬೌಲ್‌ ಮಾಡಿದ್ದು ಆರ್. ವಿನಯ್‌ ಕುಮಾರ್‌. ಮೊದಲ ಮೂರು ಎಸೆತಗಳಲ್ಲಿ ತಲಾ ಒಂದು ರನ್‌ಗಳು ಬಂದವು. ನಾಲ್ಕನೇ ಎಸೆತದಲ್ಲಿ ಎಬಿ ಡಿವಿಲಿಯರ್ಸ್‌ ಚೆಂಡನ್ನು ಬಲವಾಗಿ ಹೊಡೆದರು.

ಅದು ಸಿಕ್ಸರ್‌ ಎಂದೇ ಭಾವಿಸಲಾಗಿತ್ತು. ಆದರೆ ಡೀಪ್‌ ಮಿಡ್‌ವಿಕೆಟ್‌ ಬಳಿ ಫೀಲ್ಡಿಂಗ್‌ ಮಾಡುತ್ತಿದ್ದ ಕ್ರಿಸ್‌ ಲಿನ್‌ ಬೌಂಡರಿ ಗೆರೆ ಬಳಿ ಅಮೋಘ ರೀತಿಯಲ್ಲಿ ಚೆಂಡನ್ನು ಹಿಡಿತಕ್ಕೆ ಪಡೆದರು. ಕ್ಯಾಚ್‌ ಪಡೆಯಲು ಓಡುವ ವೇಳೆ ಲಿನ್‌ ಜಾರಿಬಿದ್ದರು. ಆದರೂ ಎದ್ದು ಕುಳಿತು ದೇಹದ ಸಮತೋಲನ ಕಾಪಾಡಿಕೊಂಡು ಚಂಗನೆ ಹಿಂದಕ್ಕೆ ನೆಗೆದು ಚೆಂಡನ್ನು ಹಿಡಿದುಕೊಂಡರು.

ಕೊನೆಯ ಎರಡು ಎಸೆತಗಳಲ್ಲಿ ಆರ್‌ಸಿಬಿಗೆ ಆರು ರನ್‌ಗಳ ಅವಶ್ಯಕತೆಯಿತ್ತು. ಐದನೇ ಎಸೆತದಲ್ಲಿ ಎರಡು ರನ್‌ ಗಳಿಸಿದ ಮಾರ್ಕೆಲ್‌ ಕೊನೆಯ ಎಸೆತದಲ್ಲಿ ಗಳಿಸಿದ್ದು ಒಂದು ರನ್‌ ಮಾತ್ರ. ಅಂತಿಮ ಓವರ್‌ ಬೌಲ್‌ ಮಾಡಿದ ವಿನಯ್‌ ಹಾಗೂ ಅಮೋಘ ಕ್ಯಾಚ್‌ ಪಡೆದ ಲಿನ್‌ ನೈಟ್‌ ರೈಡರ್ಸ್‌ನ ಗೆಲುವಿನ ರೂವಾರಿ ಎನಿಸಿಕೊಂಡರು.

ಸ್ಕೋರ್ ವಿವರ:

ಕೋಲ್ಕತ್ತ ನೈಟ್‌ ರೈಡರ್ಸ್‌ 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 150, ಜಾಕ್‌ ಕಾಲಿಸ್‌ ಸಿ ಟಕವಾಲೆ ಬಿ ಯಜುವೇಂದ್ರ ಚಹಾಲ್‌  43
ಗೌತಮ್‌ ಗಂಭೀರ್‌ ಎಲ್‌ಬಿಡಬ್ಲ್ಯು ಬಿ ಮಿಷೆಲ್‌ ಸ್ಟಾರ್ಕ್‌  00 ಮನೀಷ್‌ ಪಾಂಡೆ ಸಿ ವಿರಾಟ್‌ ಕೊಹ್ಲಿ ಬಿ ಅಲ್ಬಿ ಮಾರ್ಕೆಲ್‌  05 ಕ್ರಿಸ್‌ ಲಿನ್‌ ಸಿ ಎಬಿ ಡಿವಿಲಿಯರ್ಸ್‌ ಬಿ ವರುಣ್‌ ಆ್ಯರನ್‌  45  ಯೂಸುಫ್‌ ಪಠಾಣ್‌ ಸಿ ವಿರಾಟ್‌ ಕೊಹ್ಲಿ ಬಿ ವರುಣ್‌ ಆ್ಯರನ್‌ 00 ರಾಬಿನ್‌ ಉತ್ತಪ್ಪ ಸಿ ಮಿಷೆಲ್‌ ಸ್ಟಾರ್ಕ್‌ ಬಿ ವರುಣ್‌ ಆ್ಯರನ್‌  22 ಸೂರ್ಯಕುಮಾರ್‌ ಯಾದವ್‌ ಔಟಾಗದೆ  24 ಆರ್‌.ವಿನಯ್‌ ಕುಮಾರ್‌ ಸಿ ಮಾರ್ಕೆಲ್‌ ಬಿ ಮಿಷೆಲ್‌ ಸ್ಟಾರ್ಕ್‌  04 ಇತರೆ (ಬೈ–1, ಲೆಗ್‌ಬೈ–2, ವೈಡ್‌–4)  07 
ವಿಕೆಟ್‌ ಪತನ: 1–1 (ಗಂಭೀರ್‌; 0.3); 2–10 (ಮನೀಷ್‌; 1.2); 3–90 (ಲಿನ್‌; 11.3); 4–90 (ಯೂಸುಫ್‌; 11.5); 5–107 (ಕಾಲಿಸ್‌; 15.2); 6–129 (ಉತ್ತಪ್ಪ; 17.1); 7–150 (ವಿನಯ್‌; 19.6) 
ಬೌಲಿಂಗ್‌: ಮಿಷೆಲ್‌ ಸ್ಟಾರ್ಕ್‌ 4–0–33–2 (ವೈಡ್‌–1), ಅಲ್ಬಿ ಮಾರ್ಕೆಲ್‌ 2–0–21–1 (ವೈಡ್‌–1), ವರುಣ್‌ ಆ್ಯರನ್‌         4–0–16–3 (ವೈಡ್‌–1), ಮುತ್ತಯ್ಯ ಮುರಳೀಧರನ್‌ 2–0–25–0, ಯಜುವೇಂದ್ರ ಚಹಾಲ್‌ 4–0–26–1, ಅಶೋಕ್‌ ದಿಂಡಾ 4–0–26–0 (ವೈಡ್‌–1)
ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು: 20 ಓವರ್‌ಗಳಲ್ಲಿ 5 ವಿಕೆಟ್‌ಗೆ 148 ಪಾರ್ಥಿವ್‌ ಪಟೇಲ್‌ ಸಿ ಲಿನ್‌ ಬಿ ವಿನಯ್‌ ಕುಮಾರ್‌  21 ಯೋಗೇಶ್‌ ಟಕವಾಲೆ ಎಲ್‌ಬಿಡಬ್ಲ್ಯು ಬಿ ಜಾಕ್‌ ಕಾಲಿಸ್‌  40 ವಿರಾಟ್‌ ಕೊಹ್ಲಿ ಬಿ ಸುನಿಲ್‌ ನಾರಾಯಣ  31 ಯುವರಾಜ್‌ ಸಿಂಗ್‌ ಸಿ ಪಠಾಣ್‌ ಬಿ ಉಮೇಶ್‌ ಯಾದವ್‌  31 ಎಬಿ ಡಿವಿಲಿಯರ್ಸ್‌ ಸಿ ಲಿನ್‌ ಬಿ ವಿನಯ್‌ ಕುಮಾರ್‌  11 ಅಲ್ಬಿ ಮಾರ್ಕೆಲ್‌ ಔಟಾಗದೆ  06 ಮಿಷೆಲ್‌ ಸ್ಟಾರ್ಕ್‌ ಔಟಾಗದೆ  00 ಇತರೆ: (ಲೆಗ್‌ಬೈ-5, ವೈಡ್‌-2, ನೋಬಾಲ್‌-1)  08 
ವಿಕೆಟ್‌ ಪತನ: 1-67 (ಟಕವಾಲೆ; 7.4), 2-67 (ಪಟೇಲ್‌; 8.1), 3-122 (ಕೊಹ್ಲಿ; 15.5), 4-141 (ಯುವರಾಜ್‌; 18.4), 5-145 (ಡಿವಿಲಿಯರ್ಸ್‌; 19.4) ಬೌಲಿಂಗ್‌: ಉಮೇಶ್‌ ಯಾದವ್‌ 4-0-40-1, ಮಾರ್ನ್‌ ಮಾರ್ಕೆಲ್‌ 4-0-34-0, ಸುನಿಲ್‌ ನಾರಾಯಣ 4-0-17-1, ಆರ್‌. ವಿನಯ್‌ ಕುಮಾರ್‌ 4-0-26-2, ಜಾಕ್‌ ಕಾಲಿಸ್‌  4-0-26-1
ಫಲಿತಾಂಶ: ಕೋಲ್ಕತ್ತ ನೈಟ್‌ ರೈಡರ್ಸ್‌ಗೆ 2 ರನ್‌ ಗೆಲುವು, ಪಂದ್ಯಶ್ರೇಷ್ಠ: ಕ್ರಿಸ್‌ ಲಿನ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT