ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೊಬೆಲ್ ಸ್ತ್ರೀ ಮುತ್ತುಗಳು

ಹೊಸ ಓದು
Last Updated 25 ಜುಲೈ 2015, 19:30 IST
ಅಕ್ಷರ ಗಾತ್ರ

ನೊಬೆಲ್ ಸ್ತ್ರೀ ಮುತ್ತುಗಳು
ಲೇ: ಪ್ರೊ. ಸಿ.ಡಿ. ಪಾಟೀಲ್
ಪ್ರ: ಸೌಜನ್ಯ ಪ್ರಕಾಶನ
ನಂ. 6-2-68/102 ಡಾ. ಅಮರ್‌ಖೇಡ್ ಬಡಾವಣೆ, ರಾಯಚೂರು

ವಿಜ್ಞಾನಿಗಳನ್ನು ಮಹಿಳೆಯರು ಮತ್ತು ಪುರುಷರು ಎಂದು ವರ್ಗೀಕರಿಸಬೇಕೇ ಅಥವಾ ವಿಜ್ಞಾನಿಗಳು ಎಂದರೆ ಅವರ ಬುದ್ಧಿಮತ್ತೆಯೂ ಇದರಲ್ಲಿ ಸೇರುವುದಿಲ್ಲವೇ ಎಂಬುದು ಆಗಾಗ ಚರ್ಚೆಗೊಳಗಾಗುವ ಸಂಗತಿ. ಈ ವರ್ಗಿಕರಣ ಸರಿಯಲ್ಲ ಎಂದು ಪ್ರಗತಿಪರ ಮಹಿಳೆಯರೇ ಹೇಳಿದ ಸಂದರ್ಭಗಳಿವೆ. ಆದರೆ ಮಹಿಳೆಯರಿಗೆ, ಪುರುಷಪ್ರಧಾನ ಸಮಾಜದಿಂದ ಆಗಿರುವ ತುಳಿತವನ್ನು ಪರಿಗಣಿಸಿದರೆ, ಹೀಗೊಂದು ವರ್ಗೀಕರಣ ಮಾಡುವ ಉದ್ದೇಶ ಸಮಾನತೆ ಸಾಧಿಸಲಷ್ಟೇ ಎಂಬುದು ಸ್ಪಷ್ಟವಾಗುತ್ತದೆ.

ಇದನ್ನು ಸಮರ್ಥಿಸಲು ಇದುವರೆಗೆ ನೊಬೆಲ್ ಪ್ರಶಸ್ತಿ ಪಡೆದವರ ಇಡೀ ಪಟ್ಟಿ ನೋಡಿದರೆ ಸಾಕು, ಎಲ್ಲಿ ಮಹಿಳೆಯರಿಗೆ ಅನ್ಯಾಯವಾಗಿದೆ ಎಂಬುದು ನಿಚ್ಚಳವಾಗಿ ಕಾಣುತ್ತದೆ. ನೊಬೆಲ್ ಪ್ರಶಸ್ತಿ ನೀಡುವ ಸಂಸ್ಥೆಯೇ ಘೋಷಿಸಿರುವಂತೆ ಈವರೆಗೆ ವಿಜ್ಞಾನ, ಅರ್ಥಶಾಸ್ತ್ರವೂ ಸೇರಿದಂತೆ ಬೇರೆ ಬೇರೆ ಕ್ಷೇತ್ರಗಳಲ್ಲಿ ಈ ಪ್ರಶಸ್ತಿಗೆ ಪಾತ್ರರಾದವರ ಸಂಖ್ಯೆ 1901ರಿಂದ ತೊಡಗಿ 2014ರವರೆಗೆ ೮೬೪ನ್ನು ತಲುಪಿದೆ (25 ಸಂಸ್ಥೆಗಳನ್ನು ಹೊರತುಪಡಿಸಿ). ಈ ಪೈಕಿ ಪುರಸ್ಕೃತರಾಗಿರುವ ಮಹಿಳೆಯರು ೪೫ ಮಂದಿ ಮಾತ್ರ. ವಿಜ್ಞಾನ ಕ್ಷೇತ್ರಕ್ಕೆ ಬಂದಾಗ, ಈ ಸಂಖ್ಯೆ ಇನ್ನಷ್ಟು ಇಳಿಕೆಯಾಗಿ 16ಕ್ಕೆ ನಿಲ್ಲುತ್ತದೆ. ಮೇಡಂ ಕ್ಯೂರಿಯಿಂದ ತೊಡಗಿ, ಮೇ-ಬ್ರಿಟ್ ಮೋಸರ್‌ವರೆಗೆ.

ಈ ದೃಷ್ಟಿಯಿಂದ ‘ನೊಬೆಲ್ ಸ್ತ್ರೀ ಮುತ್ತುಗಳು’ ಕೃತಿಯಲ್ಲಿ ವಿಜ್ಞಾನ ಕ್ಷೇತ್ರದಲ್ಲಿ ನೊಬೆಲ್ ಪ್ರಶಸ್ತಿ ಪಡೆದ ಹದಿನಾರು ಮಂದಿ ಸಾಧಕಿಯರನ್ನು ಪರಿಚಯಿಸಿರುವುದು ಯುಕ್ತವಾಗಿದೆ. ಅನುಭವೀ ಪ್ರಾಧ್ಯಾಪಕ ಪ್ರೊ. ಸಿ.ಡಿ. ಪಾಟೀಲ್, ಕೃತಿಗೆ ಪುಟ್ಟ ಹಿನ್ನೆಲೆ ಒದಗಿಸಿದ್ದಾರೆ. ಜೊತೆಗೆ ನೊಬೆಲ್ ಪ್ರಶಸ್ತಿಯನ್ನು ಸ್ಥಾಪಿಸಲು ಕಾರಣನಾದ ಆಲ್ಫ್ರೆಡ್ ನೊಬೆಲ್‌ನ ಉಯಿಲನ್ನೂ ಪಡಿಮೂಡಿಸಿದ್ದಾರೆ. ಎಲ್ಲಕ್ಕಿಂತ ಮುಖ್ಯವಾಗಿ ವಿಜ್ಞಾನದಲ್ಲಿ ನೊಬೆಲ್ ಪ್ರಶಸ್ತಿಗೆ ಭಾಜನರಾದ ಮಹಿಳೆಯರ ಬದುಕಿನ ಏರಿಳಿತಗಳನ್ನು ಬಿಂಬಿಸುವಾಗಲೇ, ಅವರ ಸಾಧನೆಯನ್ನೂ ವೈಜ್ಞಾನಿಕ ಸಂಶೋಧನೆಯ ಹಿನ್ನೆಲೆಯಲ್ಲಿ ಅರ್ಥಪೂರ್ಣವಾಗಿ ದಾಖಲಿಸಿದ್ದಾರೆ. ವಿಜ್ಞಾನಿಗಳ ಸಹಿಯ ಮಾದರಿ, ಅವರ ಜೀವನದ ಧ್ಯೇಯ, ಉಕ್ತಿಗಳು, ನೊಬೆಲ್ ಪ್ರಶಸ್ತಿ ಪಡೆದಾಗ ಅವರು ನೀಡಿದ ಪ್ರತಿಕ್ರಿಯೆಗಳು ಇವೇ ಮುಂತಾದ ವಿಶೇಷ ಸಂಗತಿಗಳು ಗಮನ ಸೆಳೆಯುತ್ತವೆ.

ಕನ್ನಡದಲ್ಲಿ ವ್ಯಕ್ತಿ ನಾಮಗಳ ಉಚ್ಚಾರಣೆ ವ್ಯತ್ಯಯವಾಗುವುದುಂಟು. ಈ ಬಗೆಯ ಗೊಂದಲ ನಿವಾರಿಸಲು ಇಂಗ್ಲಿಷ್‌ನಲ್ಲೂ ಹೆಸರುಗಳನ್ನು ನೀಡಿದ್ದಾರೆ. ಮಕ್ಕಳಿಗೆ ಗಣಿತ ಪಾಠವನ್ನು ಹೇಳಿ, ಅದರಿಂದ ಬಂದ ಹಣದಲ್ಲಿ ಫೀ ಕಟ್ಟಿ ಮುಂದೆ ಉನ್ನತ ಅಧ್ಯಯನ ಮಾಡಿ ಜಗತ್ತಿನ ಶ್ರೇಷ್ಠ ವಿಜ್ಞಾನಿಗಳ ಸಾಲಿಗೆ ಸೇರಿದ, ರೈಬೋಸೋಮ್ ಕುರಿತು ಸಂಶೋಧನೆ ಮಾಡಿ ನೊಬೆಲ್ ಪ್ರಶಸ್ತಿಗೆ ಭಾಜನಳಾದ ಇಸ್ರೇಲಿನ ಅದಾ ಇ ಯೋನಾಟ್ ಹೇಳಿದ ಮಾತುಗಳಿವು: ‘‘ನನ್ನ ಬಡತನದ ಮುಂದೆ ಮೇರಿ ಕ್ಯೂರಿಯ ಬಡತನ ಏನೂ ಅಲ್ಲ’’. ಇಂಥ ಅನೇಕ ಹೊಸ ಸಂಗತಿಗಳು ಈ ಪುಟ್ಟ ಕೃತಿಯಲ್ಲಿ ಸೇರಿವೆ.

ಉನ್ನತ ಗುರಿ ಇಟ್ಟುಕೊಂಡರೆ ಹೇಗೆ ಸಾಧನೆ ಮಾಡಬಹುದು ಎಂದು ತಿಳಿಯಬಯಸುವವರಿಗೆ ಈ ಕೃತಿ ಸೂಚಿಯಾಗುತ್ತದೆ. ಕೋಟ್ಯಾಂತರ, ಕ್ಷ-ಕಿರಣ, ಸ್ಫಟಕ ಇಂಥ ಪದಪ್ರಯೋಗಗಳನ್ನು ಮುಂದಿನ ಆವೃತ್ತಿಯಲ್ಲಿ ನಿವಾರಿಸಿದರೆ ಭಾಷಾ ದೃಷ್ಟಿಯಿಂದಲೂ ಕೃತಿ ಮತ್ತಷ್ಟು ಆಪ್ತವಾಗುತ್ತದೆ. ಈ ಕೃತಿಗೆ ಅಂತಾರಾಷ್ಟ್ರೀಯ ಖ್ಯಾತಿಯ ಬಾಹ್ಯಾಕಾಶ ವಿಜ್ಞಾನಿ ಪ್ರೊ. ಯು.ಆರ್. ರಾವ್ ಅವರು ಅತ್ಯಂತ ಯುಕ್ತ ಮುನ್ನುಡಿ ಬರೆದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT