ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೋಡಬನ್ನಿ... ಟಿಪ್ಪುವಿನ ಹುಟ್ಟೂರು

ಸುತ್ತಾಣ
Last Updated 1 ಆಗಸ್ಟ್ 2014, 19:30 IST
ಅಕ್ಷರ ಗಾತ್ರ

ರಾಜಧಾನಿ ಬೆಂಗಳೂರಿನ ಉತ್ತರ ದಿಕ್ಕಿಗೆ 35 ಕಿ.ಮೀ ದೂರದಲ್ಲಿರುವ ದೇವನಹಳ್ಳಿ ಮೈಸೂರು ಹುಲಿ ಟಿಪ್ಪು ಸುಲ್ತಾನನ ಹುಟ್ಟೂರು. ವಾರದ ರಜೆ ಕಳೆಯಲು ದೂರದ ಊರುಗಳಿಗೆ ತೆರಳುವ ಬೆಂಗಳೂರಿಗರು ಹತ್ತಿರದಲ್ಲೇ ಇರುವ ದೇವನಹಳ್ಳಿಯ ಕೆಲ ಸ್ಥಳಗಳನ್ನು ನೋಡಲು ಒಂದು ದಿನ ಮೀಸಲಿಡಬಹುದು.

ಹಲವು ಪ್ರಥಮಗಳನ್ನು ಹೊಂದಿರುವ ಈ ದೇವನಹಳ್ಳಿಯು ರಾಜಧಾನಿಗೆ ಹತ್ತಿರವಿರುವ ಕಾರಣದಿಂದಾಗಿಯೇ ಬೆಂಗಳೂರಿಗೆ ಸರಿಸಮವಾಗಿ ಬೆಳೆದು ನಿಂತಿದೆ. ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಈ ಉಪನಗರಕ್ಕೆ ಒಂದು ಮುಕುಟದಂತಾಗಿದೆ. ಹಲವಾರು ಪ್ರೇಕ್ಷಣೀಯ ಸ್ಥಳಗಳು ಇಲ್ಲಿ ಉಂಟು.

ಟಿಪ್ಪು ಹುಟ್ಟಿದ ಸ್ಥಳ
ಟಿಪ್ಪುವಿನ ತಾಯಿಯನ್ನು ತವರಿಗೆ ಕರೆದೊಯ್ಯುತ್ತಿದ್ದ ವೇಳೆ ಪ್ರಸವ ವೇದನೆ ಉಂಟಾಗಿ ಮಾರ್ಗಮಧ್ಯೆ ಹೆರಿಗೆಯಾದ ಸ್ಥಳವೇ ಟಿಪ್ಪುವಿನ ಜನ್ಮಸ್ಥಳ. ಇದರ ಹತ್ತಿರದಲ್ಲೇ ಇರುವ ದೇವನಹಳ್ಳಿಯ ಕೋಟೆ ಮತ್ತೊಂದು ಆಕರ್ಷಣೀಯ ಸ್ಥಳ. ಕ್ರಿ.ಶ.1501ರಲ್ಲಿ ಪುಟ್ಟ ಊರಾದ ಈ ಹಳ್ಳಿಯ ಸುತ್ತಲೂ ರಕ್ಷಣೆಗಾಗಿ ಕೋಟೆ ಕಟ್ಟಿಸಲಾಗಿತ್ತು. ವಿಜಯನಗರ ಅರಸರ ಆಳ್ವಿಕೆಯ ಕಾಲದಲ್ಲಿ ಸಾಮಂತ ರಾಜ ಇದನ್ನು ಕಟ್ಟಿಸಿದನು. ಹಲವಾರು ರಾಜಮನೆತನಗಳ ವಶವಾಗಿದ್ದ ಇದು ಕ್ರಿ.ಶ 1747ರಲ್ಲಿ ಮೈಸೂರು ಒಡೆಯರ ಅಧೀನಕ್ಕೆ ಒಳಪಟ್ಟಿತು ಎಂದು ಹೇಳುತ್ತದೆ ದೇವನಹಳ್ಳಿಯ ಇತಿಹಾಸ.

ಕಲೆ, ದೇಗುಲ
ಇಲ್ಲಿನ ಬಸ್‌ ನಿಲ್ದಾಣದ ಪಕ್ಕದಲ್ಲೇ ಪ್ರಸಿದ್ಧ ಪುರಾತನ ಚಿತ್ರಕಲಾ ಶಾಲೆಯೊಂದಿದ್ದು, ಪದ್ಮಾಸನ ಹಾಕಿ ಧ್ಯಾನಾಸಕ್ತರಾಗಿ ಕಣ್ಮುಚ್ಚಿ ಕುಳಿತಿರುವ ಭಗವಾನ್‌ ಬುದ್ಧನ ಮೂರ್ತಿ, ನಿಲುವಂಗಿಯ ಬಿಳಿ ಕೂದಲಿನ ಗಡ್ಡದಾರಿ ವಯೋವೃದ್ಧ ರವೀಂದ್ರನಾಥ ಟ್ಯಾಗೋರ್‌ ಹಾಗೂ ಹಲವಾರು ಜೈನ ತೀರ್ಥಂಕರರ ಚಿತ್ರಗಳು ಇಲ್ಲಿವೆ. ಕಲಾರಾಧಕ ಎ.ಸಿ.ಹನುಮಂತಾಚಾರ್ಯರು ಸ್ಥಾಪಿಸಿದ ಈ ಶಾಲೆ ರಾಜ್ಯಮಟ್ಟದಲ್ಲಿ ಹೆಸರು ಪಡೆದಿದೆ. ಇಲ್ಲಿಗೆ ಇಂಗ್ಲೆಂಡ್‌ ರಾಣಿ ಎಲಿಜಬೆತ್‌, ಅಂದಿನ ಪ್ರಧಾನಿ ದಿವಂಗತ ಜವಾಹರಲಾಲ್‌ ನೆಹರೂ, ವಿಜಯಲಕ್ಷ್ಮಿ ಪಂಡಿತ್‌, ಕಮಲಾದೇವಿ ಚಟ್ಟೋ­ಪಾಧ್ಯಾಯ, ಮೈಸೂರು ದಿವಾನ ಸರ್‌.ಎಂ.ವಿಶ್ವೇಶ್ವರಯ್ಯ ಭೇಟಿ ನೀಡಿದ ಪ್ರಮುಖರಾಗಿದ್ದಾರೆ.  

ಊರಿನ ಒಳಭಾಗದಲ್ಲಿರುವ ಶ್ರೀ ವೇಣುಗೋಪಾಲಸ್ವಾಮಿ ದೇವಾಲಯ ಅತ್ಯಂತ ಪ್ರಸಿದ್ಧ ದೇವಾಲಯಗಳ­ಲ್ಲೊಂದು. ದ್ರಾವಿಡ ಶೈಲಿಯಲ್ಲಿ ಕಟ್ಟಿರುವ ಈ ದೇವಾಲಯ ಕಣ್ಣಿ­ಗೊಂದು ಹಬ್ಬ. ದೇವಸ್ಥಾನದ ಹೊರಗೋಡೆಗಳ ಮೇಲೆ ರಾಮಾಯಣದ ಕತೆಯನ್ನು ಕೆತ್ತಲಾಗಿದೆ. (ಪುತ್ರಕಾಮೇಷ್ಟಿ ಯಾಗಕ್ಕಾಗಿ ಋಷ್ಯಶೃಂಗಾ ಮಹರ್ಷಿ ಚಿತ್ರ, ವಿಶ್ವಾಮಿತ್ರ ಯಾಗಕ್ಕಾಗಿ ರಾಮಲಕ್ಷ್ನಣರನ್ನು ಕರೆತರುತ್ತಿರುವ ಚಿತ್ರಗಳನ್ನು ಸೊಗಸಾಗಿ ಚಿತ್ರಿಸಲಾಗಿದೆ. ಕೆಲವು ನರ್ತಕ, ನರ್ತಕಿಯರ ಚಿತ್ರಗಳನ್ನು ಕಲಾಪೂರ್ಣವಾಗಿ ಕಡೆಯಲಾಗಿದೆ. ಇಲ್ಲಿ ವರ್ಷಕ್ಕೊಮ್ಮೆ ನಡೆಯುವ ಲಕ್ಷ ದೀಪೋತ್ಸವ ಸುತ್ತಮುತ್ತಲಿನ ಪ್ರದೇಶದ ಜನರನ್ನು ಆಕರ್ಷಿಸುತ್ತದೆ. 

ಗಮನಹರಿಸದ ಪುರಾತತ್ವ ಇಲಾಖೆ
ಭವ್ಯ ಸ್ಮಾರಕವಾದ ದೇವನಹಳ್ಳಿ ಕೋಟೆ ಸೂಕ್ತ ನಿರ್ವಹಣೆ ಇಲ್ಲದೇ ಸೊರಗುತ್ತಿದೆ. ಕೋಟೆಯ ಹಿಂಭಾಗದ ಗೋಡೆ ಕುಸಿಯುತ್ತಿದ್ದು,  ಗೋಡೆಗಳ ಹಾಕಿರುವ ಕಲ್ಲುಗಳು ಕಳಚಿ ಬೀಳುತ್ತಿವೆ ಎಂದು ದೂರುತ್ತಾರೆ ಇಲ್ಲಿನ ಸ್ಥಳೀಯರು.

ಇಲ್ಲಿನ ಹೈದರಾಬಾದ್‌ ರಾಷ್ಟ್ರೀಯ ಹೆದ್ದಾರಿ–7ರ ಎಡಭಾಗದಲ್ಲಿರುವ ಗುಡ್ಡದ ಮೇಲೊಂದು ಜೈನ ದೇವಾಲಯ­ವಿದ್ದು, ಇಲ್ಲಿಗೂ ಭೇಟಿ ನೀಡಬಹುದು. ಅಲ್ಲದೇ ದೇವನಹಳ್ಳಿಗೆ ಭೇಟಿ ನೀಡಿದ ನಂತರ ಮುಂದೆ ತೆರಳಿದರೆ 15–20 ಕಿ.ಮೀ ದೂರದಲ್ಲಿರುವ ನಂದಿಬೆಟ್ಟ ಪ್ರಸಿದ್ಧ ಗಿರಿಧಾಮ. ಅರ್ಕಾವತಿ, ಪಾಲಾರ್, ಪೆನ್ನಾರ್ ನದಿಗಳ ಉಗಮ ಸ್ಥಳವಾದ ಇದು ಪ್ರವಾಸಿಗರಿಗೆ ಹೇಳಿ ಮಾಡಿಸಿದ ಸ್ಥಳ.

ದೇವನಹಳ್ಳಿ ಕಡೆ ಪ್ರಯಾಣ ಬೆಳೆಸಿದರೆ ಟಿಪ್ಪು ಸುಲ್ತಾನನ ಬೇಸಿಗೆ ಅರಮನೆ, ಮಹಾತ್ಮಗಾಂಧಿ ತಂಗಿದ್ದ ಗಾಂಧಿ ಹೌಸ್, ನೆಹರು ಉಳಿದುಕೊಂಡಿದ್ದ ನೆಹರು ನಿಲಯ, ದ್ರಾವಿಡ ಶೈಲಿಯ ಭೋಗನಂದೀಶ್ವರ ದೇವಾಲಯ...- ಏನುಂಟು ಏನಿಲ್ಲ ಇಲ್ಲಿ! ನೋಡಲು ಮರೆಯಬಾರದ ಸ್ಥಳ ಎದೆ ಝಲ್ಲೆನ್ನಿಸುವ ಟಿಪ್ಪು ಡ್ರಾಪ್ ಮೇಲೆ ನಿಂತು ದೂರದ ಬೆಂಗಳೂರು, ಅಕ್ಕಪಕ್ಕದ ಬೆಟ್ಟ ಗುಡ್ಡಗಳನ್ನು ಸವಿಯುವುದರ ಜತೆಗೆ ಉತ್ತಮ ಹವೆಯನ್ನೂ ಸೇವಿಸಬಹುದು.
 
ದೇವನಹಳ್ಳಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಉತ್ತರಕ್ಕೆ ದೇವನಹಳ್ಳಿ- ಸೂಲಿಬೆಲೆ ರಸ್ತೆಯಲ್ಲಿರುವ ನಲ್ಲೂರು ಗ್ರಾಮದಲ್ಲಿರುವ ಪಾರಂಪರಿಕ ವೃಕ್ಷ ಸಮೂಹವಾದ ಹುಣಸೆ ತೋಪನ್ನು ನೋಡಬಹುದು. ಐವತ್ತನಾಲ್ಕು ಎಕರೆ ಪ್ರದೇಶದಲ್ಲಿರುವ ಹನ್ನೆರಡು ಬಗೆಯ 300 ಹುಣಸೆ ಮರಗಳು 155ರಿಂದ 410 ವರ್ಷಗಳಷ್ಟು ಹಳೆಯವು. ಅಂಕುಡೊಂಕಾದ ಈ ಮರಗಳು ನೋಡಲು ಆಕರ್ಷಕವಾಗಿವೆ. ಈ  ಪಾರಂಪರಿಕ ವೃಕ್ಷ ಸಮೂಹ ದೇವರ ಬನ ಎಂಬ ನಂಬಿಕೆ ಜನರಲ್ಲಿದೆ. ಈ ಪ್ರದೇಶದಲ್ಲಿ ಚೋಳರ ಕಾಲದ ಎರಡು ದೇವಸ್ಥಾನಗಳಿವೆ. ಅವುಗಳಲ್ಲಿ ಒಂದು ಗಂಗಮ್ಮದೇವಿ ದೇವಸ್ಥಾನ. ಇನ್ನೊಂದು ದೇವಸ್ಥಾನ ಗೋಪಾಲ ಸ್ವಾಮಿಯದು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT