ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನ್ಯಾಯಾಂಗ ನಿಂದನೆ ಕೈಬಿಟ್ಟ ಹೈಕೋರ್ಟ್‌

2 ಪತ್ರಿಕೆಗಳ ವಿರುದ್ಧದ ಪ್ರಕರಣ ದಾಖಲಿಸುವ ಪ್ರಕ್ರಿಯೆ
Last Updated 26 ನವೆಂಬರ್ 2015, 19:59 IST
ಅಕ್ಷರ ಗಾತ್ರ

ಬೆಂಗಳೂರು: ‘ಕನ್ನಡಪ್ರಭ’ ಮತ್ತು ‘ಹೊಸದಿಗಂತ’  ದಿನಪತ್ರಿಕೆಗಳ ವಿರುದ್ಧ  ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸುವ ಪ್ರಕ್ರಿಯೆಯನ್ನು ಹೈಕೋರ್ಟ್‌ ಕೈಬಿಟ್ಟಿದೆ.

ಈ ಸಂಬಂಧ ನ್ಯಾಯಮೂರ್ತಿ ರಾಮಮೋಹನ ರೆಡ್ಡಿ ಅವರಿದ್ದ ಏಕಸದಸ್ಯ ಪೀಠವು ಗುರುವಾರ, ‘ಎರಡೂ ಪತ್ರಿಕೆಗಳ ಸಂಪಾದಕರು ಈ ಸಂಬಂಧದ ಬೇಷರತ್‌ ಕ್ಷಮೆ ಯಾಚನೆಯನ್ನು ಮುಖಪುಟದಲ್ಲಿ ಪ್ರಕಟಿಸುತ್ತೇವೆ ಎಂದು ಪ್ರಮಾಣಪತ್ರ ಸಲ್ಲಿಸಿದ ಹಿನ್ನೆಲೆಯಲ್ಲಿ ವಿಚಾರಣೆ ಕೈಬಿಡಲಾಗಿದೆ’ ಎಂದು ಪ್ರಕಟಿಸಿತು.

ಈ ಕುರಿತಂತೆ ನ್ಯಾಯಮೂರ್ತಿಗಳು ಸುದೀರ್ಘ ಆದೇಶ ನೀಡಿ ‘ಪತ್ರಕರ್ತರು ತಮ್ಮ ಕರ್ತವ್ಯದಲ್ಲಿ ಹೇಗಿರಬೇಕು’ ಎಂಬ ಬಗ್ಗೆ ಹಲವು ತೀರ್ಪುಗಳ ವಿವರವನ್ನು ಆದೇಶದಲ್ಲಿ ಉಲ್ಲೇಖಿಸಿದರು.

‘ನ್ಯಾಯಾಂಗವು ನಂಬಿಕೆಯ ಬುನಾದಿಯ ಮೇಲೆ ನಿಂತಿದೆ. ಇದನ್ನು ಅಲುಗಾಡಿಸುವುದು ಸರಿಯಲ್ಲ. ಪತ್ರಕರ್ತರು ಗರಿಷ್ಠ ಅಭಿವ್ಯಕ್ತಿ  ಸ್ವಾತಂತ್ರ್ಯವನ್ನೇನೂ ಹೊಂದಿಲ್ಲ. ಹಾಗೊಂದು ವೇಳೆ ಮಿತಿಯಿಲ್ಲದ ಸ್ವಾತಂತ್ರ್ಯ ಪ್ರದರ್ಶನ ಮಾಡಿದರೆ ಅದು ಸಮಾಜದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ ಮತ್ತು ಅರಾಜಕತೆಗೆ ಎಡೆ ಮಾಡಿಕೊಡುತ್ತದೆ’ ಎಂದರು.

‘ಭಾರತೀಯ ಪತ್ರಿಕಾ ಮಂಡಳಿ ಸೂಚಿಸಿರುವ ನೀತಿ ಸಂಹಿತೆಗಳನ್ನು ಪತ್ರಕರ್ತರು ನಿತ್ಯ ಜೀವನದಲ್ಲಿ ಅಳವಡಿಸಿಕೊಳ್ಳಬೇಕು’ ಎಂದು ಹೇಳಿದರು.
‘ಯಾರೇ ಆಗಲಿ ನ್ಯಾಯಾಂಗದ ಮೇಲೆ  ದಾಳಿ ಮಾಡುವುದರಿಂದ ನ್ಯಾಯಮೂರ್ತಿಗಳ ಪ್ರಾಮಾಣಿಕತೆ ಮತ್ತು ಕರ್ತವ್ಯಕ್ಕೆ ಮುಜುಗುರ ಉಂಟು ಮಾಡಿದಂತಾಗುತ್ತದೆ. ಪತ್ರಕರ್ತರು ಅಣುಶಕ್ತಿ ಇದ್ದಂತೆ. ಅವರು ಏನನ್ನಾದರೂ ವರದಿ ಮಾಡುವ ಮುನ್ನ ಮತ್ತು ಸುದ್ದಿ ಪ್ರಕಟಣೆಗೆ ಹೋಗುವ ಮುನ್ನ ಸಮಗ್ರವಾಗಿ ಆಲೋಚಿಸಬೇಕು. ಅವರು ತಮ್ಮ ಶಕ್ತಿಯನ್ನು ಸೃಜನಶೀಲವಾಗಿ ಬಳಸಿಕೊಳ್ಳಲು ಮುಂದಾಗಬೇಕು’ ಎಂದು ಆದೇಶದಲ್ಲಿ ವಿವರಿಸಿದರು.

ಬೆಂಗಳೂರು ಗ್ರಾಮಾಂತರ ಪ್ರದೇಶದ ಪಟ್ಟಂದೂರು ಅಗ್ರಹಾರ ವ್ಯಾಪ್ತಿಯಲ್ಲಿನ  3 ಎಕರೆ 23 ಗುಂಟೆ ಜಮೀನನ್ನು ಜಾಯ್‌ ಐಸ್‌ ಕ್ರೀಂ ಕಂಪೆನಿಯು ಪ್ರೆಸ್ಟೀಜ್‌ ಕಂಪೆನಿಗೆ ಪರಭಾರೆ ಮಾಡಿದ ಪ್ರಕರಣದಲ್ಲಿ, ಸಮಾಜ ಪರಿವರ್ತನಾ ಸಮುದಾಯದ (ಎಸ್‌ಪಿಎಸ್‌) ಸಂಸ್ಥಾಪಕ ಎಸ್.ಆರ್‌.ಹಿರೇಮಠ ಅವರು ನ್ಯಾಯಮೂರ್ತಿಗಳ ವಿರುದ್ಧ ಆಡಿದ್ದರೆನ್ನಲಾದ ಪತ್ರಿಕಾಗೋಷ್ಠಿ ವಿವರಗಳನ್ನು ಪ್ರಕಟಿಸಿದ್ದಕ್ಕಾಗಿ ಈ ಪತ್ರಿಕೆಗಳ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಲು ಹೈಕೋರ್ಟ್‌ ಮುಂದಾಗಿತ್ತು.

ಎಸ್‌ಪಿಎಸ್ ಪ್ರತಿವಾದಿ: ‘ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ (ಕೆಐಎಡಿಬಿ) ವತಿಯಿಂದ ಪಡೆಯಲಾಗಿದ್ದ ಜಮೀನನ್ನು ಕಾನೂನು ಬಾಹಿರವಾಗಿ ಪರಭಾರೆ ಮಾಡಲಾಗಿದೆ. ಇದು ಮೂಲತಃ ಇದು ಗೋಮಾಳದ ಜಮೀನು’ ಎಂದು ಎಸ್‌ಪಿಎಸ್‌ ಈ ಪ್ರಕರಣದಲ್ಲಿ ಪ್ರತಿವಾದಿಯಾಗಿದೆ.

‘ನ್ಯಾಯಮೂರ್ತಿ ರಾಮಮೋಹನ ರೆಡ್ಡಿ ಅವರು ಈ ಪ್ರಕರಣದಿಂದ ಹಿಂದೆ ಸರಿಯಬೇಕು’ ಎಂದು ಹಿರೇಮಠ ಅವರು ಸಲ್ಲಿಸಿರುವ ಜ್ಞಾಪನಾ ಪತ್ರದ ವಿಚಾರಣೆಯನ್ನು ಡಿಸೆಂಬರ್‌ 10ಕ್ಕೆ  ಮುಂದೂಡಲಾಗಿದೆ.

ಮನವಿ ತಿರಸ್ಕೃತ: ಇದೇ ವೇಳೆ, ಪ್ರಕರಣದಲ್ಲಿ ತನ್ನನ್ನೂ ಪ್ರತಿವಾದಿಯಾಗಿ ಸೇರ್ಪಡೆ ಮಾಡಿಕೊಳ್ಳಬೇಕು ಎಂದು ‘ಕರ್ನಾಟಕ ಪ್ರಜಾರಾಜ್ಯ ವೇದಿಕೆ’ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿಗಳು ತಿರಸ್ಕರಿಸಿದರು.
*
ವರದಿಗಾರಿಕೆಯು ಪೂರ್ವಗ್ರಹ ಪೀಡಿತವಾಗಿರದೆ, ಸಭ್ಯ ರೀತಿಯಲ್ಲಿ ಇರಬೇಕು. ಲೇಖನಿಯನ್ನು ಶಾಯಿಯಲ್ಲಿ ಅದ್ದಬೇಕೇ ವಿನಾ ವಿಷದಲ್ಲಿ ಅದ್ದಿ ಬರೆಯಬಾರದು.
- ನ್ಯಾಯಮೂರ್ತಿ ರಾಮಮೋಹನ ರೆಡ್ಡಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT