ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನ್ಯಾ. ಅಡಿ ಪದಚ್ಯುತಿ ನಿರ್ಣಯದಿಂದ ತಪ್ಪು ಸಂದೇಶ

ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್‌ ಹೆಗ್ಡೆ ಅಭಿಪ್ರಾಯ
Last Updated 24 ನವೆಂಬರ್ 2015, 19:34 IST
ಅಕ್ಷರ ಗಾತ್ರ

ಶಿವಮೊಗ್ಗ: ‘ಲೋಕಾಯುಕ್ತ ನ್ಯಾಯಮೂರ್ತಿ ವೈ.ಭಾಸ್ಕರ ರಾವ್‌ ಪದಚ್ಯುತಿಗೆ ನಿರ್ಣಯ ಮಂಡಿಸಿರುವುದೇನೊ ಸರಿ. ಆದರೆ, ಉಪ ಲೋಕಾಯುಕ್ತರ ಪದಚ್ಯುತಿಗೂ ಪ್ರಯತ್ನ ನಡೆದಿರುವುದು ಜನರಿಗೆ ತಪ್ಪು ಸಂದೇಶ ರವಾನಿಸಿದಂತೆ ಆಗುತ್ತದೆ’ ಎಂದು ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಎನ್‌.ಸಂತೋಷ್‌ ಹೆಗ್ಡೆ ಅಭಿಪ್ರಾಯಪಟ್ಟರು.

ನಗರದ ಕರ್ನಾಟಕ ಸಂಘ ಭವನದಲ್ಲಿ ಮಂಗಳವಾರ ನಡೆದ ತಿಂಗಳ ಅತಿಥಿ ಕಾರ್ಯಕ್ರಮದಲ್ಲಿ ಅವರು ಸಾರ್ವಜನಿಕರ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದರು. ‘33 ವರ್ಷಗಳಿಂದ ಕಾಪಾಡಿಕೊಂಡು ಬಂದ ಲೋಕಾಯುಕ್ತದ ಘನತೆ ಒಬ್ಬರಿಂದಾಗಿ ಹಾಳಾಗಿದೆ. ಅವರ ವಿರುದ್ಧದ ಭ್ರಷ್ಟಾಚಾರ ಆರೋಪಕ್ಕೆ ಸಾಕಷ್ಟು ಪುರಾವೆಗಳು ಲಭಿಸಿವೆ.

ಹಾಗಾಗಿ, ಅವರ ಪದಚ್ಯುತಿ ಸರಿಯಾದ ಕ್ರಮ. ಇದೇ ಸಂದರ್ಭದಲ್ಲಿ ಉಪ ಲೋಕಾಯುಕ್ತರ ವಿರುದ್ಧ ಕ್ರಮ ಸರಿಯಲ್ಲ. ಇರುವ ಇಬ್ಬರನ್ನೂ ಹೊರಗಿಟ್ಟರೆ ಅಲ್ಲಿ ಕೆಲಸ ಮಾಡುವವರು ಯಾರು? ಲೋಕಾಯುಕ್ತ ಸಂಸ್ಥೆಯೇ ಬೇಡ ಎನ್ನುವ ಜನಪ್ರತಿನಿಧಿಗಳ ಧೋರಣೆಗೆ ಇದು ಕನ್ನಡಿ’ ಎಂದು ಬೇಸರ ವ್ಯಕ್ತಪಡಿಸಿದರು.

ಹಿಂದೆ ಲೋಕಾಯುಕ್ತದಲ್ಲಿ ಭ್ರಷ್ಟಾಚಾರ ಇರಲಿಲ್ಲ ಎಂದಲ್ಲ. ಆಗಲೂ ಇತ್ತು. ಸಂಸ್ಥೆಗೆ ಬಂದ ಅಧಿಕಾರಿಗಳು ಸರ್ಕಾರಿ ವ್ಯವಸ್ಥೆಯಿಂದಲೇ ಬರುತ್ತಾರೆ. ಭ್ರಷ್ಟಾಚಾರಕ್ಕೆ ಸಂಪೂರ್ಣ ಕಡಿವಾಣ ಹಾಕಲು ಸಾಧ್ಯವಾಗಿರಲಿಲ್ಲ ಎಂದು ಹೇಳಿದರು. ಆದರೆ, ನ್ಯಾಯಮೂರ್ತಿಗಳೇ ಇಂತಹ ಪ್ರಕರಣದಲ್ಲಿ ಭಾಗಿಯಾಗಿರುವುದು ಇದೇ ಮೊದಲು ಎಂದು ಅಭಿಪ್ರಾಯಪಟ್ಟರು.

ಇಂದು ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ ಹಾಗೂ ಮಾಧ್ಯಮದಲ್ಲೂ ಮೌಲ್ಯಗಳು ಕುಸಿದಿವೆ. ಭ್ರಷ್ಟಾಚಾರ ಮೇಲುಗೈ ಪಡೆದಿದೆ. ಆತ್ಮಹತ್ಯೆ ಮಾಡಿಕೊಂಡ ರೈತರಿಗೆ ಪರಿಹಾರ ನೀಡಲೂ ಹಣ ಇಲ್ಲ ಎನ್ನುವ ಸರ್ಕಾರ, ಸರ್ಕಾರಿ ಬಂಗಲೆಗಳ ನವೀಕರಣಕ್ಕೆ, ಒಂದು ರಾತ್ರಿಯ ಗ್ರಾಮ ವಾಸ್ತವ್ಯಕ್ಕೆ ಕೋಟಿ, ಲಕ್ಷ ರೂಪಾಯಿ ಖರ್ಚು ಮಾಡುತ್ತಿದೆ ಎಂದು ಕುಟುಕಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT