ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಂಕಜ್‌ ಮುಡಿಗೆ ವಿಶ್ವ ಬಿಲಿಯರ್ಡ್ಸ್‌ ಕಿರೀಟ

ಇತಿಹಾಸ ಬರೆದ ಬೆಂಗಳೂರಿನ ಆಟಗಾರ; ಅಡ್ವಾಣಿಗೆ 12ನೇ ವಿಶ್ವ ಪ್ರಶಸ್ತಿ
Last Updated 30 ಅಕ್ಟೋಬರ್ 2014, 19:30 IST
ಅಕ್ಷರ ಗಾತ್ರ

ಲೀಡ್ಸ್‌, ಬ್ರಿಟನ್‌ (ಪಿಟಿಐ/ಐಎಎನ್‌ಎಸ್‌): ಫೈನಲ್‌ ಪಂದ್ಯದಲ್ಲಿ ಅಪೂರ್ವ ಆಟವಾಡಿದ ಪಂಕಜ್‌ ಅಡ್ವಾಣಿ ವಿಶ್ವ ಬಿಲಿಯರ್ಡ್ಸ್‌ ಚಾಂಪಿಯನ್‌ಷಿಪ್‌ನ ‘ಟೈಮ್‌’ ಮಾದರಿಯಲ್ಲಿ ಪ್ರಶಸ್ತಿ ಗೆದ್ದುಕೊಂಡಿದ್ದಾರೆ. ಒಂದು ವಾರದ ಅಂತರದಲ್ಲಿ ಬೆಂಗಳೂರಿನ ಪಂಕಜ್‌ ಜಯಿಸಿದ ಎರಡನೇ ವಿಶ್ವ ಪ್ರಶಸ್ತಿ ಇದು.

ಆರಂಭದಲ್ಲಿ ಸಾಕಷ್ಟು ಹೋರಾಟ ಕಂಡು ಬಂದ ಪ್ರಶಸ್ತಿ ಸುತ್ತಿನ ಪಂದ್ಯವು ಐದು ಗಂಟೆಗಳ ಕಾಲ ನಡೆಯಿತು. ಪಂಕಜ್‌ 1928–893ರಲ್ಲಿ ಸ್ಥಳೀಯ ಆಟಗಾರ ರಾಬೆರ್ಟ್‌ ಹಾಲ್ ಎದುರು ಜಯಭೇರಿ ಮೊಳಗಿಸಿ ತಮ್ಮ ತಾಯಿ ಕಾಜಲ್‌ ಅವರಿಗೆ ಜನ್ಮದಿನದ ಉಡುಗೊರೆ ನೀಡಿದರು.

ಹೋದ ವಾರ ಲೀಡ್ಸ್‌ನಲ್ಲಿಯೇ  ವಿಶ್ವ ಬಿಲಿಯರ್ಡ್ಸ್‌ನ ಪಾಯಿಂಟ್‌ ಮಾದರಿಯಲ್ಲಿ ಪ್ರಶಸ್ತಿ ಗೆದ್ದಿದ್ದರು. ಆಗ ಸಿಂಗಪುರದ ಪೀಟರ್‌ ಗಿಲ್‌ಕ್ರಿಸ್ಟ್‌ ಅವರನ್ನು ಮಣಿಸಿದ್ದರು. ಪಂಕಜ್‌ ಗೆದ್ದ 12ನೇ ವಿಶ್ವ ಪ್ರಶಸ್ತಿ ಇದು.

2014ರಲ್ಲಿ ಪಂಕಜ್‌ ಗೆದ್ದ ಪ್ರಶಸ್ತಿಗಳು
* ಐಬಿಎಸ್‌ಎಫ್‌ 6 ರೆಡ್‌ ಸ್ನೂಕರ್‌ ಚಾಂಪಿಯನ್‌ಷಿಪ್‌ (ಈಜಿಪ್ಟ್‌).
* ವಿಶ್ವ ಬಿಲಿಯರ್ಡ್ಸ್‌ ಚಾಂಪಿಯನ್‌ಷಿಪ್‌ ತಂಡ ವಿಭಾಗ   (ಗ್ಲಾಸ್ಗೊ, ಸ್ಕಾಟ್ಲೆಂಡ್‌).
* ವಿಶ್ವ ಬಿಲಿಯರ್ಡ್ಸ್‌ ಚಾಂಪಿಯನ್‌ಷಿಪ್‌ ಪಾಯಿಂಟ್ ಮತ್ತು ಟೈಮ್ಡ್‌ ಮಾದರಿ (ಲೀಡ್ಸ್‌).

ಸ್ನೂಕರ್‌ ವಿಭಾಗದಲ್ಲಿ  ಗಮನ ಕೇಂದ್ರೀಕರಿಸುವ ಸಲುವಾಗಿ ಪಂಕಜ್‌ ಎರಡು ವರ್ಷಗಳಿಂದ ಪ್ರಮುಖ ಬಿಲಿಯರ್ಡ್ಸ್‌ ಚಾಂಪಿಯನ್‌ಷಿಪ್‌ಗಳಲ್ಲಿ ಪಾಲ್ಗೊಂಡಿರಲಿಲ್ಲ. ಈಗ ಎರಡು ಪ್ರಶಸ್ತಿಗಳನ್ನು ಜಯಿಸುವ ಮೂಲಕ ಸಾಮರ್ಥ್ಯ ಸಾಬೀತು ಮಾಡಿದ್ದಾರೆ. ಫೈನಲ್‌ನ ಒಂದು ಹಂತದಲ್ಲಿ  ಪಂಕಜ್ 701 ಪಾಯಿಂಟ್‌ಗಳನ್ನು ಹೊಂದಿದ್ದರೆ, ಹಾಲ್‌ ಖಾತೆಯಲ್ಲಿ 575 ಪಾಯಿಂಟ್‌ಗಳಿದ್ದವು.

ಆದ್ದರಿಂದ ಆರಂಭದ ಕೆಲ ಗಂಟೆ ಪ್ರಬಲ ಪೈಪೋಟಿ ಏರ್ಪಟ್ಟಿತ್ತು. ಆರಂಭದಲ್ಲಿ ಸವಾಲು ಒಡ್ಡಿದ್ದ ಬ್ರಿಟನ್‌ ಆಟಗಾರ ನಂತರದಲ್ಲಿ ಮಂಕಾದರು. ಆದ ಕಾರಣ ಪಂಕಜ್‌ಗೆ 1035 ಪಾಯಿಂಟ್‌ಗಳ ಅಂತರದಿಂದ ಗೆಲುವು ಪಡೆಯಲು ಸಾಧ್ಯವಾಯಿತು. ‘2008ರಲ್ಲಿ ಬೆಂಗಳೂರಿನಲ್ಲಿ ನಡೆದ ಚಾಂಪಿಯನ್‌ಷಿಪ್‌ನಲ್ಲಿ ಎರಡು ಪ್ರಶಸ್ತಿ ಜಯಿಸಿದ್ದೆ. ಈಗ ಮತ್ತೆ ಅಂಥದ್ದೇ ಸಾಧನೆ ಮಾಡಿದ್ದೇನೆ.

ತವರೂರಿಗಿಂತ ವಿದೇಶದಲ್ಲಿ ಪ್ರಶಸ್ತಿ ಗೆದ್ದಿದ್ದು ಹೆಚ್ಚು ಖುಷಿ ನೀಡಿದೆ. ಇಲ್ಲಿ ಉತ್ತಮ ಸಾಮರ್ಥ್ಯ ತೋರಬೇಕೆನ್ನುವ ಕಾರಣಕ್ಕಾಗಿ ಕಠಿಣ ಅಭ್ಯಾಸ ನಡೆಸಿದ್ದೆ’ ಎಂದು 29 ವರ್ಷದ ಪಂಕಜ್‌ ನುಡಿದರು.

ಈ ಸಾಧನೆ ಮಾಡಿದ ಮೊದಲ ಆಟಗಾರ
ಪಾಯಿಂಟ್‌ ಮತ್ತು ಟೈಮ್‌ ಎರಡೂ ಮಾದರಿಗಳಲ್ಲಿ ಮೂರು ಬಾರಿ ಪ್ರಶಸ್ತಿ ಗೆದ್ದ ಮೊದಲ ಆಟಗಾರ ಎನ್ನುವ ಕೀರ್ತಿ ಪಂಕಜ್‌ ಪಾಲಾಯಿತು. 2005ರಲ್ಲಿ ಮಾಲ್ಟಾ ಗಣರಾಜ್ಯ­ದಲ್ಲಿ ಮತ್ತು 2008ರಲ್ಲಿ ಬೆಂಗಳೂರಿನಲ್ಲಿ ನಡೆದ ಚಾಂಪಿ­ಯನ್‌ಷಿಪ್‌ನಲ್ಲಿ ಪಂಕಜ್‌ ಎರಡೂ ಮಾದರಿಗಳಲ್ಲಿ ಪ್ರಶಸ್ತಿ ಜಯಿ­ಸಿದ್ದರು.

ಇಂಗ್ಲೆಂಡ್‌ನ ಮೈಕ್‌ ರಸೆಲ್‌ ಎರಡೂ ಮಾದರಿಗಳಲ್ಲಿ 2 ಬಾರಿ (2010 ಮತ್ತು 2011) ಪ್ರಶಸ್ತಿ ಜಯಿಸಿದ್ದ ದಾಖಲೆ­ಯನ್ನು ಪಂಕಜ್‌ ಲೀಡ್ಸ್‌­ನಲ್ಲಿ ಅಳಿಸಿ ಹಾಕಿದರು. ಮಾಜಿ ರಾಷ್ಟ್ರೀಯ ಸ್ನೂಕರ್‌ ಚಾಂಪಿಯನ್‌ ಅರವಿಂದ್ ಸವೂರ್ ಅವರು  ಪಂಕಜ್‌ ಅವರ ಕೋಚ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT