ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಂಚಪೀಠಗಳ ವಿರೋಧ ಕಾರಣವಾಯ್ತೇ?

ತಾತ್ವಿಕ ಸಿದ್ಧಾಂತ ಸಂಘರ್ಷ: ತನಿಖೆಯ ಪ್ರಮುಖ ಅಂಶ
Last Updated 3 ಸೆಪ್ಟೆಂಬರ್ 2015, 19:27 IST
ಅಕ್ಷರ ಗಾತ್ರ

ಬೆಂಗಳೂರು: ಲಿಂಗಾಯತರು ವೀರಶೈವರಲ್ಲ ಎಂದು ಗಟ್ಟಿಯಾಗಿ ಪ್ರತಿಪಾದಿಸುತ್ತಿದ್ದ ಧೋರಣೆ ಹಾಗೂ ಈ ಬಗೆಗಿನ ಸಂಶೋಧನೆಗಳು ಹಿರಿಯ ಸಂಶೋಧಕ ಡಾ. ಎಂ.ಎಂ. ಕಲಬುರ್ಗಿ ಅವರ ಹತ್ಯೆಗೆ ಕಾರಣವಾದುವೇ..?

‘ಇಂತಹುದೊಂದು ತಾತ್ವಿಕ ಸಿದ್ಧಾಂತದ ಸಂಘರ್ಷ ಏನಾದರೂ ಕಲಬುರ್ಗಿ ಅವರ ಕೊಲೆಗೆ ಕಾರಣವಾಗಿದೆಯೇ?  ಈ  ಪ್ರಶ್ನೆಯೂ ಈಗ  ತನಿಖೆಯ ಒಂದು ಪ್ರಮುಖ ಅಂಶವಾಗಿದೆ’ ಎನ್ನುತ್ತಾರೆ ಹತ್ಯೆಯ  ತನಿಖೆ ನಡೆಸುತ್ತಿರುವ ಸಿಐಡಿ ಅಧಿಕಾರಿಗಳು.

ಈ ಸಂಬಂಧ ಗುರುವಾರ  ‘ಪ್ರಜಾವಾಣಿ’ ಜೊತೆ ಮಾತನಾಡಿದ ಹೆಸರು ಹೇಳಲು ಇಚ್ಛಿಸದ ಅಧಿಕಾರಿಯೊಬ್ಬರು, ‘ಪಂಚಪೀಠದ ಕೆಲವು ಮೂಲಭೂತವಾದಿಗಳು ಏನಾದರೂ ಇಂತಹ ಕೃತ್ಯಕ್ಕೆ ಮುಂದಾಗಿರಬಹುದೇ ಎಂಬ ಬಗ್ಗೆ ನಾವು ಗಂಭೀರವಾಗಿ ಗಮನಹರಿಸಿದ್ದೇವೆ’ ಎಂದು ಹೇಳಿದರು.

‘ಲಿಂಗಾಯತ ಧರ್ಮ ನಾಶವಾಗಿದ್ದು ಹೇಗೆ ಮತ್ತು ಏಕೆ ಹಾಗೂ ಯಾರಿಂದ’ ಎಂಬ ವಿಷಯಗಳ ಬಗ್ಗೆ ಕಲಬುರ್ಗಿಯವರು ಕಳೆದ ಆರು ತಿಂಗಳಿನಿಂದ ಗಹನ ಸಂಶೋಧನೆಯಲ್ಲಿ ತೊಡಗಿದ್ದರು. ಈ ವಿಷಯ ಕುರಿತಂತೆ ಕಲಬುರ್ಗಿಯವರು ಕಳೆದ ಹಲವು ದಶಕಗಳಲ್ಲಿ ಅನೇಕರು ಸಂಗತಿಗಳನ್ನು ಪ್ರಸ್ತುತಪಡಿಸಿಯೂ ಇದ್ದರು. ಆದರೂ ಈಗಿನ ಈ ಸಂಶೋಧನೆ ಪಂಚಪೀಠದ ಅಸ್ತಿತ್ವಕ್ಕೆ ಪೆಟ್ಟು ನೀಡಬಹುದು. ಇದು ನಮ್ಮ ಪೌರೋಹಿತ್ಯದ ಅಸ್ತಿತ್ವಕ್ಕೆ ಧಕ್ಕೆ ತರಬಹುದು ಎಂಬುದು ಮೂಲಭೂತವಾದಿಗಳ ಸಿಟ್ಟಿಗೆ ಕಾರಣವಾಗಿತ್ತು ಎಂಬ  ಅಂಶಗಳತ್ತ ನಾವೀಗ ದೃಷ್ಟಿ ಹರಿಸಿದ್ದೇವೆ’ ಎಂದು ಪೊಲೀಸ್‌ ಅಧಿಕಾರಿ ವಿವರಿಸಿದರು.

ಶತಮಾನಗಳ ತಗಾದೆ: ‘ಶ್ರೀಶೈಲದ ಸೂರ್ಯಸಿಂಹಾಸನ ಪೀಠ, ರಂಭಾಪುರಿಯ ವೀರಸಿಂಹಾಸನ ಪೀಠ, ಉಜ್ಜಯಿನಿಯ ಸದ್ಧರ್ಮ ಪೀಠ, ಕೇದಾರದ ವೈರಾಗ್ಯ ಪೀಠ ಹಾಗೂ ಕಾಶಿಯ ಜ್ಞಾನ ಸಿಂಹಾಸನ ಪೀಠಗಳು ಲಿಂಗಾಯತ ಧರ್ಮವನ್ನು ಹಾಳುಗಡೆವಿ ಶೋಷಣೆ ಮಾಡುತ್ತಿವೆ’ ಎಂಬುದು ಕಲಬುರ್ಗಿಯವರ ನಿಲುವಾಗಿತ್ತು.

‘ಲಿಂಗಾಯತರು ಬಸವ ತತ್ವದ ಪ್ರತಿಪಾದಕರಾಗಿರಬೇಕೆ ಹೊರತು ಪೌರೋಹಿತ್ಯಕ್ಕಾಗಿ ಪಂಚಪೀಠಗಳನ್ನು ಆಶ್ರಯಿಸಬಾರದು ಎಂದು ಅವರು ಹೇಳುತ್ತಿದ್ದರು. ಈ ಕುರಿತಂತೆ ಜನರ ಕಣ್ತೆರೆಸುವಲ್ಲಿ  ಪ್ರಖರವಾದ ಭಾಷಣ, ಲೇಖನಗಳನ್ನು  ಅನೇಕ ವಿರಕ್ತ ಮಠಾಧೀಶರ ಮೂಲಕ ಅವರು ನಡೆಸುತ್ತಲೇ ಬಂದಿದ್ದರು. ಈ ಪ್ರಯತ್ನದ ಭಾಗವಾಗಿಯೇ ಅವರು, ಗದಗಿನ ತೋಂಟದಾರ್ಯ ಮಠದ ವೀರಶೈವ ಅಧ್ಯಯನ ಸಂಸ್ಥೆಯ ಹೆಸರನ್ನು, ಲಿಂಗಾಯತ ಅಧ್ಯಯನ ಸಂಸ್ಥೆ ಎಂದು ಬದಲಾಗುವಂತೆ  ನೋಡಿಕೊಂಡಿದ್ದರು ಎಂಬೆಲ್ಲಾ ಅಂಶಗಳನ್ನು ನಾವು ಗಮನದಲ್ಲಿ ಇಟ್ಟುಕೊಂಡಿದ್ದೇವೆ’ ಎಂಬುದು ಅಧಿಕಾರಿಯ ವಿವರಣೆ.

ಇಳಕಲ್‌ ಮಠದ ಸಂಘರ್ಷ: ಇಳಕಲ್‌ನ ವಿಜಯ ಮಹಾಂತ ಪೀಠದ ಉತ್ತರಾಧಿಕಾರಿಯಾಗಿ ಭಕ್ತ ಪರಂಪರೆಯ ಶಿವಸಿಂಪಿ ಸಮಾಜದ ಗುರುಮಹಾಂತ ಸ್ವಾಮಿ ಅವರನ್ನು 2004ರ ಸೆಪ್ಟೆಂಬರ್‌ 12ರಂದು ನೇಮಕ ಮಾಡಲಾಗಿತ್ತು.  ಇದಾದ ಇಪ್ಪತ್ತು ದಿನಗಳ ನಂತರ ಇಳಕಲ್‌ನಲ್ಲಿ ನಡೆದ ವಿರಕ್ತ ಸ್ವಾಮೀಜಿಗಳ ಸಭೆಯಲ್ಲಿ ದೊಡ್ಡ  ರಾದ್ದಾಂತವೇ ನಡೆದಿತ್ತು. ಹಲವು ಸ್ವಾಮಿಗಳ ಮೇಲೆ ದೈಹಿಕ ಹಲ್ಲೆಯನ್ನೂ ನಡೆಸಲಾಗಿತ್ತು.
‘ಈ ಚಟುವಟಿಕೆಗಳ ಹಿಂದೆ ಪಂಚಪೀಠಗಳ ಪ್ರಭುತ್ವ ಸ್ಥಾಪಿಸುವ ಶಕ್ತಿಗಳೇ ಕೆಲಸ ಮಾಡಿದ್ದವೆಂದು’  ಆಗ ಆರೋಪಿಸಲಾಗಿತ್ತು.

ಈ ಸಂದರ್ಭದಲ್ಲಿ ಕಲಬುರ್ಗಿಯವರು ಗುರುಮಹಾಂತ ಸ್ವಾಮಿಗಳೇ ಉತ್ತರಾಧಿಕಾರಿಯಾಗಿ ನೇಮಕಗೊಳ್ಳುವಂತೆ ಬಹಿರಂಗ ಬೆಂಬಲ ವ್ಯಕ್ತಪಡಿಸಿದ್ದರು.  ಹಿರಿಯರಾದ ಚೆನ್ನವೀರ ಕಣವಿ, ಎಲ್ಲ ಬಸವ ಕೇಂದ್ರಗಳು, ಅಶೋಕ ಬರಗುಂಡಿ, ಜಿ.ಬಿ.ಹಳ್ಯಾಳ, ಸಿದ್ದಣ್ಣ ಲಂಗೋಟಿಯವರಂತಹ ತತ್ವನಿಷ್ಠರ ಜೊತೆಗೂಡಿ ಇಳಕಲ್‌ ಮಹಾಂತ ಅಪ್ಪಗಳ ಬಸವತತ್ವ ಆಚರಣೆಗೆ ಬೆಂಬಲ ನೀಡಿದ್ದರು.

‘ಈ ರೀತಿಯ ಅನೇಕ ಘಟನೆಗಳು ಪಂಚಪೀಠಗಳ ಭಕ್ತರ ಕೆಲವು ಮೂಲಭೂತವಾದಿಗಳ ಕೆಂಗಣ್ಣಿಗೆ ಗುರಿಯಾಗುತ್ತಲೇ ಬಂದಿದ್ದವು. ಹೀಗಾಗಿ ಈ ದಿಸೆಯಲ್ಲಿಯೂ ಕಲಬುರ್ಗಿ ಅವರ ಕೊಲೆಗೆ ಏನಾದರೂ ಸಂಚು ನಡೆದಿರಬಹುದೇ ಎಂಬುದೀಗ ನಮ್ಮ ಬಲವಾದ ಅನುಮಾನ’ ಎಂದು  ಸಿಐಡಿ ಅಧಿಕಾರಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT