ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಂಚಾಯತ್ ರಾಜ್- ಸರಪಂಚ್ ‘ಪತಿ’?

ಅತಿಥಿ ಸಂಪಾದಕರ ಮಾತು
Last Updated 7 ಮಾರ್ಚ್ 2016, 20:20 IST
ಅಕ್ಷರ ಗಾತ್ರ

ನಮ್ಮ ರಾಜ್ಯದಲ್ಲಿ ಕಳೆದ ತಿಂಗಳು ಜಿಲ್ಲಾ ಮತ್ತು ತಾಲ್ಲೂಕು ಪಂಚಾಯ್ತಿಗಳ ಚುನಾವಣೆ ನಡೆದಿತ್ತು.  ಇದಕ್ಕೂ ಸ್ವಲ್ಪ ಮೊದಲು ಗ್ರಾಮ ಪಂಚಾಯ್ತಿಗಳ ಚುನಾವಣೆಯಾಗಿತ್ತು. ಈ ಎಲ್ಲ ಹಂತದ ಪಂಚಾಯತ್‌ರಾಜ್‌ ಸಂಸ್ಥೆಗಳಲ್ಲಿ ಮಹಿಳೆಯರಿಗೆ ಶೇ 50 ಸ್ಥಾನಗಳನ್ನು  ಮೀಸಲಿಡಲಾಗಿದೆ.  ಇದರಲ್ಲಿಯೇ ಪರಿಶಿಷ್ಟರು, ಹಿಂದುಳಿದವರಿಗೂ ಮೀಸಲಾತಿ ಇದೆ. 

ಅಂದರೆ ಈಗ ರಾಜ್ಯದ ಪಂಚಾಯ್ತಿ ಸಂಸ್ಥೆಗಳ ಚುನಾಯಿತ ಸದಸ್ಯರಲ್ಲಿ ಅರ್ಧದಷ್ಟು ಮಹಿಳೆಯರು. ಇವರಲ್ಲಿ ಎಲ್ಲ ವರ್ಗದವರೂ ಇದ್ದಾರೆ. ಆದರೆ ಈ ಪೈಕಿ ಎಷ್ಟು ಮಹಿಳೆಯರಿಗೆ ನಿಜವಾಗಿಯೂ ಅಧಿಕಾರ ಚಲಾಯಿಸಲು ಅವಕಾಶ ಸಿಗುತ್ತಿದೆ? ಗಂಡ, ಮಕ್ಕಳು, ಸಂಬಂಧಿಗಳು ಹೀಗೆ ಪುರುಷರೇ ಆಕೆಯ ಹೆಸರಿನಲ್ಲಿ ಅಧಿಕಾರದ ಲಗಾಮು ಹಿಡಿದಿದ್ದಾರೆ. ಆಕೆಗೆ ಸ್ವತಂತ್ರವಾಗಿ ಕೆಲಸ ಮಾಡಲು ಬಿಡುತ್ತಿಲ್ಲ. 

ಎಂತಹ ವಿಪರ್ಯಾಸ ಅಲ್ಲವೇ? ಪಂಚಾಯತ್ ರಾಜ್ ಸೃಷ್ಟಿಯಾದದ್ದೇ ಆಡಳಿತದ ವಿಕೇಂದ್ರೀಕರಣ ಹಾಗೂ ಕೆಳ  ವರ್ಗದವರೂ ಸಮಾಜದಲ್ಲಿ  ಮೇಲಿನ ಸ್ತರಕ್ಕೆ ಬರಬೇಕು ಎನ್ನುವ ಉದ್ದೇಶದಿಂದ. ಆ ಜನಕ್ಕೆ ತಂತಮ್ಮ ಸುತ್ತಲಿನ ಜನರ, ತಮ್ಮ ಸಮುದಾಯದ ಕಷ್ಟ ಸುಖಗಳ ಅರಿವಿದ್ದು, ಅಂಥವರು ತಮ್ಮ ಹಳ್ಳಿಗಳ ಬೇಕು-ಬೇಡಗಳ ಬಗ್ಗೆ ಹಕ್ಕಿನಿಂದ ಕೇಳಿ ಪಡೆಯುವ ಸೂಕ್ಷ್ಮತೆಯನ್ನು ಬೆಳೆಸಿಕೊಂಡರೆ ಒಂದು ಹಳ್ಳಿಯ ಸಂಪೂರ್ಣ ಉದ್ಧಾರ ಸಾಧ್ಯವಿದೆ ಎನ್ನುವ ಉನ್ನತ ಆಲೋಚನೆಯಿಂದ.

ಜನ ಉದ್ಧಾರವಾದರೆ ಒಂದು ಹಳ್ಳಿ ಉದ್ಧಾರವಾಗುತ್ತದೆ, ಹಳ್ಳಿ ಉದ್ಧಾರವಾದರೆ ದೇಶದ ಉದ್ಧಾರ  ಎಂದು ಹೇಳಿದ ಗಾಂಧೀಜಿಯವರ ಮಾತನ್ನು ಸಾಕಾರಗೊಳಿಸಲೆಂದೇ ಹುಟ್ಟಿದ್ದು ‘ಗ್ರಾಮ ಸ್ವರಾಜ್’. ನಮ್ಮ ರಾಜ್ಯದಲ್ಲಿನ ಪಂಚಾಯತ್ ರಾಜ್ ವ್ಯವಸ್ಥೆಗೆ ಅನೇಕ ದಶಕಗಳ ಇತಿಹಾಸವೇ ಇದೆ. ಗ್ರಾಮ ಪಂಚಾಯ್ತಿ ಮತ್ತು ಸ್ಥಳೀಯ ಸರ್ಕಾರಗಳ ಕಾನೂನು ಮೊಟ್ಟಮೊದಲು ಜಾರಿಗೆ ಬಂದದ್ದು 1959ರಲ್ಲಿ. ಆದರೆ 1983ರಲ್ಲಿ  ಆಗಿನ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ  ಹಾಗೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರಾಗಿದ್ದ  ಅಬ್ದುಲ್ ನಜೀರ್ ಸಾಬ್ ಅವರ ಕಾಳಜಿ, ಬದ್ಧತೆಯ ಫಲವಾಗಿ ಪಂಚಾಯತ್‌ ರಾಜ್‌ ಸಂಸ್ಥೆಗಳಿಗೆ ಹೆಚ್ಚು ಅಧಿಕಾರ, ಅನುದಾನ ನೀಡುವ ಮತ್ತೊಂದು ಕಾಯ್ದೆ ಜಾರಿಗೊಂಡಿತು.

ಇದೇ ಅವಧಿಯಲ್ಲಿ ಆದ ಇನ್ನೊಂದು ಮಹತ್ತರ ಬದಲಾವಣೆ ಎಂದರೆ ಶೇ 25ರ ಮಹಿಳಾ ಮೀಸಲಾತಿ ಜಾರಿ. ಒಬ್ಬ ಪುರುಷ ವಿದ್ಯಾವಂತನಾದರೆ ಅವನೊಬ್ಬನೇ ಬೆಳೆಯುತ್ತಾನೆ. ಅದೇ ಒಬ್ಬ ಮಹಿಳೆ ವಿದ್ಯಾವಂತಳಾದರೆ? ಒಂದು ಕುಟುಂಬ, ಒಂದು ಹಳ್ಳಿ, ಒಂದು ಊರು, ಸಮಾಜ – ಇವೆಲ್ಲವೂ ಬೆಳೆಯುತ್ತವೆ. ನಮ್ಮಲ್ಲಿ ‘ವಿದ್ಯಾವಂತ ಅಶಿಕ್ಷಿತರು’ ಹೆಚ್ಚಿರುವುದರಿಂದ  ಈ ಮಾತನ್ನು ಸಂಪೂರ್ಣವಾಗಿ ಒಪ್ಪಲು ಕಷ್ಟವಾಗುತ್ತದೆ.

ಒಂದು ಕುಟುಂಬದ ಒಳಿತನ್ನು ಸದಾ ಮನಸ್ಸಿನಲ್ಲಿ ಇಟ್ಟುಕೊಂಡೇ ಕೆಲಸ ಮಾಡುವ, ನಿರ್ಧಾರಗಳನ್ನು ತೆಗೆದುಕೊಳ್ಳುವ ಮಹಿಳೆಗೆ ಹೊರ ಜಗತ್ತು ನಿಭಾಯಿಸಲು ಏಕೆ ಸಾಧ್ಯವಾಗುತ್ತಿಲ್ಲ ಎನ್ನುವ ಪ್ರಶ್ನೆ ಬೃಹದಾಕಾರವಾಗಿ ಬೆಳೆದಿದೆ. ಈ ಮಾತನ್ನು ಹೇಳುವಾಗ ಹಳ್ಳಿಯ ಮಟ್ಟದ ಮುಗ್ದ ಹೆಣ್ಣು ಮಕ್ಕಳೇ ಕಣ್ಣ ಮುಂದೆ ಬರುತ್ತಾರೆ.

ಇಂಥಾ ಪ್ರಶ್ನೆಗೆ ಸಮರ್ಥವಾದ ಉತ್ತರ ನೀಡಿದ್ದು – ಶಿಕ್ಷಣದಿಂದ ವಂಚಿತಳಾದರೂ ಜೀವನದ ಅನುಭವವನ್ನೇ ಮಹಾ ಅಸ್ತ್ರವನ್ನಾಗಿಸಿಕೊಂಡು ಪಂಚಾಯ್ತಿ ಅಧ್ಯಕ್ಷ ಸ್ಥಾನಕ್ಕೆ ನಿಂತು ಗೆದ್ದು ಬಂದದ್ದಲ್ಲದೆ ತನ್ನ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಿ ತನ್ನನ್ನು ಆರಿಸಿದವರ ಆಯ್ಕೆಗೆ ಗೌರವ ತಂದ (ಶಿವಮೊಗ್ಗ) ಶಿವಮ್ಮ.

ಇಂಥದ್ದೇ ಇನ್ನೊಂದು ಉದಾಹರಣೆ ಎಂದರೆ ಮೈಸೂರು ಜಿಲ್ಲಾ ಪಂಚಾಯ್ತಿ  ಅಧ್ಯಕ್ಷೆಯಾಗಿದ್ದ ಡಾ. ಪುಷ್ಪಲತಾ ಅಮರನಾಥ್. ಇವರು ವಿದ್ಯಾವಂತೆ. ಪಂಚಾಯತ್ ರಾಜ್ ವ್ಯವಸ್ಥೆಯಲ್ಲಿ ಇದ್ದು ಸೇವೆ ಸಲ್ಲಿಸಿ ಜನರ ನಂಬಿಕೆಯನ್ನು ಉಳಿಸಿಕೊಂಡವರು. ದೇಶದಾದ್ಯಂತ ಅಸಂಖ್ಯಾತ ಮಹಿಳೆಯರು ತಮಗೆ ಸಿಕ್ಕ ಅವಕಾಶದ ಜವಾಬ್ದಾರಿಯನ್ನು ಬಹಳ ಸಮರ್ಥವಾಗಿ ನಿರ್ವಹಿಸಿದ್ದಾರೆ. ಇಷ್ಟು ಒಳ್ಳೆಯ ಸುದ್ದಿಗಳ ನಡುವೆ ಕೆಲವೊಮ್ಮೆ ಮನೋಬಲ ಕಡಿಮೆಯಾಗುವಂಥಾ ವಿಷಯಗಳೂ ಕಣ್ಣಮುಂದೆ ಬರುತ್ತವೆ. ‘ನಾವು ಯಾಕೆ ಹೀಗೆ’ ಎನ್ನಿಸಿಬಿಡುತ್ತದೆ.

ಮಾತಿಗೆ ಹೇಳುವುದಾದರೆ, ಪಂಚಾಯತ್ ರಾಜ್ ವ್ಯವಸ್ಥೆಯಲ್ಲಿ ಮಹಿಳೆಯರ ಸ್ಥಾನ ಬಲಗೊಳ್ಳಬೇಕೆಂಬ ಹಂಬಲದಿಂದ ಮಾಡಿರುವ ಮೀಸಲಾತಿ ಅವರ ಗಂಡಂದಿರಿಗೆ ಅಥವಾ ಮನೆಯ ಯಾವುದೇ ಪುರುಷನಿಗೆ ಲಾಭ ತರುವ ಅವಕಾಶವೂ ಹೌದು. ಉತ್ತರ ಭಾರತದಲ್ಲಂತೂ ಈ ವಿಷಯ ಬಹಳ ಬಹಿರಂಗವಾಗಿಯೇ ಇದೆ. ಅದಕ್ಕಾಗೇ ಅಲ್ಲಿ ಚಾಲ್ತಿಗೆ ಬಂದಿದೆ ‘ಸರಪಂಚ ಪತಿ’.

ಇದು ಮಹಿಳೆಯರಷ್ಟೇ ಅಲ್ಲ, ಪುರುಷರೂ ತಲೆ ತಗ್ಗಿಸಬೇಕಾದಂಥ ವಿಷಯ. ಒಬ್ಬ ಮಹಿಳೆ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾದರೆ ಆ ಸ್ಥಾನವನ್ನು ಅಕ್ರಮವಾಗಿ ಅಲಂಕರಿಸಿ, ಸಭೆಗಳನ್ನು ನಡೆಸುವವನು, ತೀರ್ಮಾನಗಳನ್ನು ತೆಗೆದುಕೊಳ್ಳುವವನು ಆಕೆಯ ಗಂಡನಾಗಿರುತ್ತಾನೆ. ಹೀಗೆ ‘ಅಪಹರಿಸಿದ’ ಸ್ಥಾನಕ್ಕೆ ತಾನೇ ಒಂದು ಸಮರ್ಥವಾದ ಬಿರುದನ್ನೂ ಕೊಟ್ಟುಕೊಂಡು ರಾಜಾರೋಷವಾಗಿ ಆಳುವ ಪತಿ ಪರದೈವವೇ ‘ಸರಪಂಚ ಪತಿ’.

ಇಲ್ಲಿ ಮಹಿಳೆಗೆ ತನ್ನ ಕುಟುಂಬದ ಒತ್ತಡ, ವಿದ್ಯೆ ಮತ್ತು ಅನುಭವದ ಅಭಾವ, ಹಿಂಸೆ, ಬೆದರಿಕೆ ಇತ್ಯಾದಿ ಕಿತ್ತು ತಿನ್ನುತ್ತವೆ. ಆಗ ಆಕೆ ತನ್ನ ವ್ಯಕ್ತಿತ್ವದ ಬಗ್ಗೆ ವಿಶ್ವಾಸ ಕಳೆದುಕೊಂಡು ತುಳಿತಕ್ಕೆ ಒಳಗಾಗುವುದನ್ನು ನೋಡುತ್ತಲೇ ಬಂದಿದ್ದೇವೆ. ಈ ಶೋಷಣೆ ಉತ್ತರ ಭಾರತದಲ್ಲಷ್ಟೇ ಇದೆ ಎನ್ನುವಂತಿಲ್ಲ. ನಮ್ಮ ರಾಜ್ಯದಲ್ಲೂ ಎಷ್ಟೋ ಕಡೆ  ಈ ತೆರನ ನಡವಳಿಕೆ ಬಹಿರಂಗವಾಗಿಯೇ ಪ್ರದರ್ಶನವಾಗಿದೆ. ಮಹಿಳೆಯರಿಗೆ ಇದು ಹೆಮ್ಮೆಯ ಮಾತು ಖಂಡಿತಾ ಅಲ್ಲ.

ಒಂದು ಊರಿನ ಜಿಲ್ಲಾ ಪಂಚಾಯ್ತಿಯ ಅಧ್ಯಕ್ಷಿಣಿ ಮತ್ತು ಸದಸ್ಯರೆಲ್ಲ ಸೇರಿಕೊಂಡು ಅಧಿಕಾರಿಗಳಿಗೆ ಹಾಕಿದ ಷರತ್ತೆಂದರೆ–  ಕಾರ್ಯಕ್ರಮ, ಸಭೆ ಮತ್ತು ಪಂಚಾಯ್ತಿ ಮೀಟಿಂಗುಗಳಿಗೆ ಅವರ ಗಂಡಂದಿರನ್ನೂ ಅಧಿಕೃತವಾಗೇ ಕರೆಯಬೇಕು ಎಂದು. ಇಲ್ಲವಾದಲ್ಲಿ ತಾವೂ ಬರುವುದಿಲ್ಲ ಎನ್ನುವ ಬೆದರಿಕೆ ಕೂಡ ಇತ್ತು. ಈ ರೀತಿಯ ಹಟಕ್ಕಿಂತ ಒಂದು ವೇಳೆ ಇದೇ ಮಹಿಳೆಯರು ‘ನಮ್ಮ ಕುಟುಂಬದ ಯಾರನ್ನೂ ಕಾರ್ಯಕ್ರಮಗಳಿಗಾಗಲೀ, ಮೀಟೀಂಗಿಗಾಗಲೀ ಕರೆಯಕೂಡದು ಅಥವಾ ಅವರು ಭಾಗವಹಿಸುವುದು ಬೇಡ’ ಎಂದು ಒಕ್ಕೊರಲಿನಿಂದ ಕೂಗು ಹಾಕಿದ್ದರೆ? ಮಹಿಳಾ ಹೋರಾಟಕ್ಕೆ ಎಂಥಾ ಅದ್ಭುತ ಆಯಾಮ ದೊರೆಯುತ್ತಿತ್ತು ಅಲ್ಲವೇ?

ಇಂತಹ ಘಟನೆಗಳು ಕೇವಲ ಉತ್ತರ ಭಾರತ ಅಥವಾ ಕರ್ನಾಟಕಕ್ಕೆ ಸೀಮಿತವಲ್ಲ. ಪ್ರಪಂಚದ ಹಲವೆಡೆ ನಡೆಯುತ್ತಿವೆ ಎನ್ನುವುದು ಸತ್ಯ. ಕೆಲವು ಕಡೆ ಹೇಳಿಕೊಂಡು ಆಳಿದರೆ, ಇನ್ನೂ ಕೆಲವು ಕಡೆ ಅದು ಅಲಿಖಿತ ಕಾನೂನೇ ಆಗಿರುತ್ತದೆ. ಆದರೆ ಇಲ್ಲಿ ಮುಖ್ಯವಾಗಿ ಏಳುವ ಪ್ರಶ್ನೆಯೆಂದರೆ, ಮಹಿಳೆಯರು ಹೀಗೆ ಒತ್ತಾಯಿಸಲು ಕಾರಣ ಅವರ ದುರ್ಬಲ ಮನಃಸ್ಥಿತಿಯೋ, ಸಾಮಾಜಿಕ ಒತ್ತಡವೋ ಅಥವಾ ಸ್ವಂತ ನಿರ್ಧಾರವೋ? ಒಂದು ವೇಳೆ ಕುಟುಂಬದಿಂದಲೇ ಯಾರೋ ಒತ್ತಡ ಹೇರಿದ್ದರು ಎಂದಿಟ್ಟುಕೊಂಡರೂ, ಅಂತಹ ಸತ್ಯವನ್ನು ಬೆನ್ನಿಗೆ ಇಟ್ಟುಕೊಂಡು ಚುನಾವಣೆಗೆ ಯಾಕೆ ನಿಲ್ಲಬೇಕು?

ನಮ್ಮ ಜನರಿಗೆ ಸೇರಿದ ಅಧಿಕಾರವನ್ನು ಪ್ರಜಾಪ್ರಭುತ್ವದ ವ್ಯವಸ್ಥೆಯೊಳಗಿನಿಂದ ನಮ್ಮ ಕೈಗೆ ತೆಗೆದುಕೊಳ್ಳುವಾಗ, ‘ನಮ್ಮ ಮಕ್ಕಳನ್ನು ಸಾಕಿದ ಹಾಗೆ ಅಲ್ಲವೇ ಈ ಜವಾಬ್ದಾರಿ’ ಎಂದು ಎನಿಸುವುದಿಲ್ಲ ನಮ್ಮ ಹೆಣ್ಣುಮಕ್ಕಳಿಗೆ? ಮಕ್ಕಳನ್ನು ನಾವು ಹೇಗೆ ಮುಚ್ಚಟೆಯಾಗಿ, ಅತ್ಯಂತ ಜಾಗರೂಕತೆಯಿಂದ ನೋಡಿಕೊಳ್ಳುತ್ತೇವೋ ಹಾಗೇ ಅಧಿಕಾರವನ್ನೂ ಅಷ್ಟೇ ನಿಷ್ಠೆಯಿಂದ ನಿರ್ವಹಿಸಬೇಕು ಎನ್ನುವುದನ್ನು ನಾವು ಮನಗಾಣಬೇಕಿದೆ. ಪುರುಷ ಯಾವತ್ತೂ ಕುಟುಂಬದ ಮುಖ್ಯಸ್ಥ. ಆತ ಪದವಿಪ್ರಿಯ.

ಆದರೆ ಕಟ್ಟುವ ಕೆಲಸ ಮಹಿಳೆಯದ್ದು. ಅದನ್ನೂ ಜೀವನದ ಎಲ್ಲ ಜವಾಬ್ದಾರಿಗಳಿಗೂ ಅನ್ವಯಿಸಬೇಕಿದೆ. ಅಧಿಕಾರದ ಮಾತಿಗೆ ಬಂದರೆ ಮಹಿಳೆಯರ ಸ್ಥಿತಿ ಶೂನ್ಯದ (ಜೀರೋ) ಪಕ್ಕ ಎಳೆಯುವ ಗೆರೆ. ಆ ಗೆರೆ ಬಲಕ್ಕೆ ಮೂಡುತ್ತದೋ ಎಡಕ್ಕೆ ಮೂಡುತ್ತದೋ ಅದರ ಮೇಲೆ ನಮ್ಮ ಭವಿಷ್ಯ ನಿರ್ಧಾರಿತವಾಗಿದೆ. ‘ನಿಮ್ಮ ಮುಡಿಗೆ ಹೂವ ತರುವೆನಲ್ಲದೆ ಹುಲ್ಲ ತಾರೆನು’ ಎಂಬಂತೆ ಮಹಿಳೆಯರು ಕುಟುಂಬಮುಖಿಯಾಗಷ್ಟೇ ಅಲ್ಲ, ಸಮಾಜ ಮುಖಿಯಾಗಿಯೂ ಬದುಕಬೇಕಿದೆ. ಕೌಟುಂಬಿಕ ಜೀವನ ಹಾಗೂ ಸಾಮಾಜಿಕ ವ್ಯಕ್ತಿತ್ವ ಎರಡೂ ಬೇರೆ. ಎರಡನ್ನೂ ಯಾವ ಕಾರಣಕ್ಕೂ ಕಲಸಬಾರದು. ಅಂತರ ಕಾಯ್ದುಕೊಂಡು ಜವಾಬ್ದಾರಿಯನ್ನು ಸುಗಮವಾಗಿ ನಿರ್ವಹಿಸುವ ಧೈರ್ಯ ನಮ್ಮ ಹೆಣ್ಣು ಮಕ್ಕಳಿಗೆ ಬರಬೇಕು.

ಅದಕ್ಕೆ ಪೂರಕವಾಗಿ ವ್ಯವಸ್ಥೆಯೂ ಅವರಿಗೆ ಅವಶ್ಯಕವಿರುವ ಮನೋಬಲವನ್ನು ಕಟ್ಟಿಕೊಡುವ ಕೆಲಸ ಮಾಡಬೇಕು. ಪಂಚಾಯತ್ ವ್ಯವಸ್ಥೆಯಲ್ಲಿ ಮಹಿಳಾ ಮೀಸಲಾತಿ ಉಳಿಸಿಕೊಳ್ಳುವುದರ ಜೊತೆಗೆ, ಅಧಿಕಾರ ಮತ್ತು ಕರ್ತವ್ಯವನ್ನು ಸಮರ್ಥವಾಗಿ ನಿರ್ವಹಣೆ ಮಾಡಲು ಸಾಧ್ಯವಾಗುವಂಥ ಬೆಂಬಲವನ್ನು ಅವರಿಗೆ ನೀಡಬೇಕು. ತಮ್ಮ ಜವಾಬ್ದಾರಿಯ ಬಗ್ಗೆ ತರಬೇತಿ, ತಿಳಿವಳಿಕೆ, ಹೆಚ್ಚಿನ ಮಾಹಿತಿ ಎಲ್ಲವನ್ನೂ ನೀಡುವ ವ್ಯವಸ್ಥೆಯಾಗಬೇಕು.

ಅಂಥಾ ಮಹಿಳೆಯರ ಬೆನ್ನಿಗೆ ಅನುಭವವುಳ್ಳವರು, ಮುಖ್ಯವಾಗಿ ಅವರ ಕುಟುಂಬದಲ್ಲಿನ ಪುರುಷರೂ ನಿಲ್ಲಬೇಕು. ಆಗಲೇ ಮಹಿಳಾ ಅಸ್ತಿತ್ವಕ್ಕೆ ಹೊಸ ಆಯಾಮ ದೊರೆಯಲು ಸಾಧ್ಯ. ಇಲ್ಲದಿದ್ದರೆ ಮೀಸಲಾತಿ ಎನ್ನುವುದು ಮಹಿಳಾಪರ ಹೋರಾಟಕ್ಕೆ ಒಂದು ದುರ್ಬಲ ಪರ್ಯಾಯ ಉತ್ತರವಾದೀತಷ್ಟೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT