ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಂಪ್‌ಸೆಟ್‌ ಮೀಟರ್‌: ಅನುದಾನಕ್ಕೆ ಷರತ್ತು

Last Updated 22 ನವೆಂಬರ್ 2014, 19:30 IST
ಅಕ್ಷರ ಗಾತ್ರ

ನವದೆಹಲಿ: ವಿದ್ಯುತ್‌ ಸೋರಿಕೆ, ಕಳವು ತಡೆಯಲು ಮನೆಗಳು ಹಾಗೂ ಕೃಷಿ ಪಂಪ್‌ಸೆಟ್‌ಗಳಿಗೆ ಮೀಟರ್‌ ಅಳವಡಿಕೆಯನ್ನು ಇನ್ನು ಮುಂದೆ ಕಡ್ಡಾಯಗೊಳಿಸಲು ಕೇಂದ್ರ ಸರ್ಕಾರ  ನಿರ್ಧರಿಸಿದೆ.

ವಿದ್ಯುತ್‌ ಕಳವು ಮತ್ತು ಸೋರಿಕೆ ತಡೆಯಲು ವಿದ್ಯುತ್‌ ಸರಬರಾಜು ಟ್ರಾನ್ಸ್‌ಫಾರ್ಮರ್‌ಗಳು, ಫೀಡರ್‌, ಗ್ರಾಹಕರು ಮತ್ತು ಕೃಷಿ ಪಂಪ್‌ಸೆಟ್‌ಗಳಿಗೆ ಕಡ್ಡಾಯವಾಗಿ ಮೀಟರ್‌ ಅಳವಡಿಸಬೇಕು. ಇದನ್ನು ಪಾಲಿಸಿದರೆ ಮಾತ್ರ ಅನುದಾನ ನೀಡಲಾಗುವುದು ಎಂದು ಕೇಂದ್ರ ಸರ್ಕಾರ ಹೇಳಿದೆ.  

ವಿದ್ಯುತ್‌ ಬಳಕೆಯ ಪ್ರತಿ ಯೂನಿಟ್ ಕೂಡ ಲೆಕ್ಕಕ್ಕೆ ಸಿಗಬೇಕು ಎನ್ನುವುದು ಈ ನಿರ್ಧಾರದ ಹಿಂದಿರುವ ಉದ್ದೇಶ ಎನ್ನಲಾಗಿದೆ.
ಗ್ರಾಮಾಂತರ ಪ್ರದೇಶಗಳಿಗೆ ನಿರಂತರ ವಿದ್ಯುತ್‌ ಸಂಪರ್ಕ ಕಲ್ಪಿಸುವ 75,645 ಕೋಟಿ ರೂಪಾಯಿ ವೆಚ್ಚದ ಐಪಿಡಿಎಸ್‌ ಹಾಗೂ ಡಿಡಿಯುಜಿಜೆವೈ ಎಂಬ ಎರಡು ಯೋಜನೆಗಳಿಗೆ ಕೇಂದ್ರ ಸಂಪುಟ ಗುರುವಾರ ಅನುಮೋದನೆ ನೀಡಿದೆ.

ಈ ಎರಡು ಯೋಜನೆಗಳಡಿ ಕೇಂದ್ರ ಸರ್ಕಾರವು ವಿದ್ಯುತ್‌ ಕ್ಷೇತ್ರದಲ್ಲಿಯ ವಾಣಿಜ್ಯಕ–ತಾಂತ್ರಿಕ ಹಾನಿಗಳನ್ನು ಕಡಿತಗೊಳಿಸಿ ವಿದ್ಯುತ್‌ ಸರಬರಾಜು ಮತ್ತು ಪೂರೈಕೆ ಜಾಲದ  ಬಲವರ್ಧನೆಗೆ  ರಾಜ್ಯಗಳಿಗೆ ಹೆಚ್ಚುವರಿ ಅನುದಾನ ನೀಡಲಿದೆ. ಆದರೆ, ಈ ಅನುದಾನ ನೀಡಲು ಕೇಂದ್ರ ಸರ್ಕಾರ ಕಡ್ಡಾಯ ಮೀಟರ್‌ ಅಳವಡಿಕೆ ಸೇರಿದಂತೆ ಕೆಲವು ಷರತ್ತುಗಳನ್ನು ವಿಧಿಸಿದೆ.

ಬಿಜೆಪಿ ತನ್ನ ಚುನಾವಣೆ ಪ್ರಣಾಳಿಕೆಯಲ್ಲಿ ನೀಡಿದ್ದ ವಾಗ್ದಾನದಂತೆ, ವಿದ್ಯುತ್‌ ವಿತರಣಾ ವ್ಯವಸ್ಥೆಯಲ್ಲಿ ಗಣನೀಯ ಬದಲಾವಣೆ ತರುವ ನಿಟ್ಟಿನಲ್ಲಿ ಗುಜರಾತ್‌ ಮಾದರಿಯ ವ್ಯವಸ್ಥೆಯನ್ನು ದೇಶದಾದ್ಯಂತ ಜಾರಿಗೊಳಿಸಲು ಪ್ರಧಾನಿ ನರೇಂದ್ರ ಮೋದಿ ಮುಂದಾಗಿದ್ದಾರೆ.

ಗುಜರಾತ್‌ ಮುಖ್ಯಮಂತ್ರಿಯಾಗಿದ್ದಾಗ ಮೋದಿ ಅವರು ವಿದ್ಯುತ್ ಸೋರಿಕೆ ಹಾಗೂ ಕಳವು ತಡೆಗಟ್ಟಿ ವಿದ್ಯುತ್‌ ವಿತರಣಾ ಜಾಲವನ್ನು ಸರಿದಾರಿಗೆ ತಂದಿದ್ದರು.

ಇದರಿಂದ ಗ್ರಾಮೀಣ ಪ್ರದೇಶಗಳ ಗ್ರಾಹಕರು ಮತ್ತು ಕೃಷಿ ಚಟುವಟಿಕೆಗಳಿಗೆ ನಿರಂತರ ಹಾಗೂ ಉತ್ತಮ ಗುಣಮಟ್ಟದ  ವಿದ್ಯುತ್‌ ಪೂರೈಕೆ ಸಾಧ್ಯವಾಗುತ್ತದೆ ಎನ್ನುವುದು ಸರ್ಕಾರದ ಸಮರ್ಥನೆ.

ಈ ಎರಡು ಹೊಸ ಯೋಜನೆಗಳಿಂದ ವಿದ್ಯುತ್‌ ಪೋಲು ಹಾಗೂ ಹಾನಿ ಶೇ 27ರಿಂದ ಶೇ 5ಕ್ಕೆ ಇಳಿಯುತ್ತದೆ ಎಂದು ಇಂಧನ ಸಚಿವಾಲಯದ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

ಈಗ ಕೆಲವು ರಾಜ್ಯಗಳಲ್ಲಿ ಬಳಕೆಯಾಗುವ ಶೇ 40ರಷ್ಟು ವಿದ್ಯುತ್‌ಗೆ ಗ್ರಾಹಕರು  ಶುಲ್ಕ ಪಾವತಿಸುತ್ತಿಲ್ಲ. ಇದರಿಂದ ವಿದ್ಯುತ್‌ ಕ್ಷೇತ್ರ 1.75 ಲಕ್ಷ ಕೋಟಿ ರೂಪಾಯಿ ನಷ್ಟ ಅನುಭವಿಸುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT