ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಕ್ಷದಲ್ಲಿನ ಭಿನ್ನಮತ ನೋವು ತಂದಿದೆ- ಕೇಜ್ರಿವಾಲ್‌

ಭುಗಿಲೆದ್ದ ಎಎಪಿ ಆಂತರಿಕ ಕಲಹ , ಕ್ಷುಲ್ಲಕ ಕಲಹಕ್ಕೆ ಎಳೆಯದಿರಲು ಮನವಿ
Last Updated 4 ಮಾರ್ಚ್ 2015, 8:58 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಪಕ್ಷ­ದಲ್ಲಿ ಭುಗಿ­ಲೆದ್ದಿರುವ ಆಂತರಿಕ ಭಿನ್ನಮತ ಮತ್ತು ಇತ್ತೀಚಿನ ಬೆಳವಣಿಗೆ ತಮಗೆ ‘ತುಂಬಾ ಬೇಸರ ಹಾಗೂ ನೋವು ತಂದಿದೆ’ ಎಂದು  ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಮಂಗಳವಾರ ಪ್ರತಿಕ್ರಿಯಿಸಿದ್ದಾರೆ. ಪಕ್ಷದಲ್ಲಿನ ಆಂತರಿಕ ಕಚ್ಚಾಟವನ್ನು  ‘ಕ್ಷುಲ್ಲಕ ಕಲಹ’ ಎಂದು ಬಣ್ಣಿಸಿ­ದ ಅವರು, ದಯವಿಟ್ಟು ತಮ್ಮನ್ನು ಇದ­ರಲ್ಲಿ  ಎಳೆಯದಂತೆ ಮನವಿ ಮಾಡಿದ್ದಾರೆ.

‘ಪಕ್ಷದಲ್ಲಿಯ ಆಂತರಿಕ ಬೆಳವಣಿಗೆಯಿಂದ ನನಗೆ ತುಂಬಾ ನೋವಾಗಿದೆ. ನಿಜಕ್ಕೂ ಈ ಕೆಸರೆ­ರಚಾಟ­ದಲ್ಲಿ ನನಗೆ ಎಳ್ಳಷ್ಟೂ ಆಸಕ್ತಿ ಇಲ್ಲ.  ನಮ್ಮ ಮೇಲೆ ಅಪಾರ  ಭರವಸೆ ಇಟ್ಟು ಆಯ್ಕೆ ಮಾಡಿದ ದೆಹಲಿ ಜನರಿಗೆ ಇದು ದ್ರೋಹ  ಬಗೆದಂತೆ’ ಎಂದು ಕೇಜ್ರಿವಾಲ್‌ ಹೇಳಿದ್ದಾರೆ.
‘ಯಾವುದೇ ಕಾರಣಕ್ಕೂ ದೆಹಲಿ ಜನತೆ ನಮ್ಮ ಮೇಲೆ ಇಟ್ಟ ನಂಬಿಕೆಗೆ ದ್ರೋಹ­ವಾಗಲು ಬಿಡುವುದಿಲ್ಲ. ಪಕ್ಷದ ಕಚ್ಚಾಟ­ದಿಂದ ದೂರ ಉಳಿದು ದೆಹಲಿ ಆಡಳಿತ ಮತ್ತು ಅಭಿವೃದ್ಧಿಯತ್ತ ಮಾತ್ರ ಗಮನ ಹರಿಸುತ್ತೇನೆ’  ಎಂದು ಅವರು ಟ್ವೀಟ್‌ ಮಾಡಿದ್ದಾರೆ.

ಆಮ್‌ ಆದ್ಮಿ ಪಕ್ಷದ (ಎಎಪಿ) ರಾಷ್ಟ್ರೀಯ ಸಂಚಾಲಕ ಸ್ಥಾನ­ದಿಂದ ಕೇಜ್ರಿವಾಲ್‌ ಅವರನ್ನು ಪದ­ಚ್ಯುತಿಗೊಳಿಸಲು ಹಿರಿಯ ನಾಯಕ­ರಾದ ಪ್ರಶಾಂತ್‌ ಭೂಷಣ್‌ ಮತ್ತು ಯೋಗೇಂದ್ರ ಯಾದವ್‌ ಸಂಚು ನಡೆ­ಸಿದ್ದಾರೆ ಎಂಬ ವದಂತಿ ಎಲ್ಲ ಸಮಸ್ಯೆಗೆ ಕಾರಣ ಎನ್ನಲಾಗಿದೆ.
ಆಮ್‌ ಆದ್ಮಿ ‘ಏಕ ವ್ಯಕ್ತಿ ಕೇಂದ್ರಿತ’ ಪಕ್ಷವಾಗುವ ಅಪಾಯವಿದೆ ಎಂದು ಟೀಕಿಸಿ ಇಬ್ಬರೂ ನಾಯಕರು ಬರೆದ ಪತ್ರ ಮಾಧ್ಯಮಗಳಿಗೆ ಸೋರಿ­ಕೆ­­ಯಾ­ದ ನಂತರ ಪಕ್ಷದೊಳಗಿನ ಭಿನ್ನಮತ ಬೀದಿಗೆ ಬಂದಿದೆ.

ಕೇಜ್ರಿವಾಲ್‌ ಗುರಿಯಾಗಿಸಿ­ಕೊಂಡು ಇಬ್ಬರೂ ನಾಯಕರು ದಾಳಿ ನಡೆಸಿರು­ವುದು ಈ ಪತ್ರದಿಂದ ಜಗಜ್ಜಾಹೀರಾ­ಗಿದೆ.  ವಿಶೇಷವೆಂದರೆ ವಿವಾದದ ಕೇಂದ್ರ ಬಿಂದುಗಳಾಗಿರುವ ಯಾದವ್‌, ಪ್ರಶಾಂತ್ ಭೂಷಣ್‌ ಮತ್ತು ಕೇಜ್ರಿ­ವಾಲ್‌ ಪಕ್ಷ­ದೊಳಗಿನ  ಬೆಳವಣಿಗೆಗ­ಳನ್ನು ನಿರಾಕರಿಸಿಲ್ಲ.

‘ಭೂಷಣ್‌ ಕುಟುಂಬದ ಸಂಚು‘
ಈ ನಡುವೆ ‘ಶಾಂತಿಭೂಷಣ್‌ ಮತ್ತು ಅವರ ಮಕ್ಕಳಾದ ಪ್ರಶಾಂತ್‌ ಭೂಷಣ್‌ ಹಾಗೂ ಶಾಲಿನಿ ಪಕ್ಷದ ಮೇಲೆ ಹಿಡಿತ ಸಾಧಿಸಲು ಹವಣಿಸುತ್ತಿದ್ದಾರೆ’ ಎಂದು ಎಎಪಿ ಪ್ರಮುಖ ಸದಸ್ಯ ಆಶಿಶ್‌ ಖೇತಾನ್‌  ಆರೋಪಿಸಿದ್ದಾರೆ. ಎಎಪಿ ವ್ಯಕ್ತಿ ಕೇಂದ್ರೀತ  ಪಕ್ಷವಾಗುತ್ತಿದೆ ಎಂದು ಕೇಜ್ರಿವಾಲ್‌ ವಿರುದ್ಧ ಅಪಸ್ವರ ಎತ್ತಿರುವ ತಂದೆ, ಮಕ್ಕಳು ಪಕ್ಷವನ್ನು ತಮ್ಮ ಕುಟುಂಬದ ತೆಕ್ಕೆಗೆ ತೆಗೆದು­ಕೊಳ್ಳಲು ಹೊಂಚು ಹಾಕುತ್ತಿದ್ದಾರೆ  ಎಂದು  ಅವರು ನೇರವಾಗಿ ಆಪಾದಿ­ಸಿದ್ದಾರೆ.

‘ಪಕ್ಷದೊಳಗೆ ಹೆಚ್ಚುತ್ತಿರುವ ವ್ಯಕ್ತಿಗತ ಸಂಘರ್ಷ ಮತ್ತು ಪಕ್ಷ ಏಕವ್ಯಕ್ತಿ ಕೇಂದ್ರಿತ­ವಾಗುವ ಅಪಾಯ­ವಿದೆ ಎಂದು ಪ್ರಶಾಂತ್ ಭೂಷಣ್‌  ಬಹಿರಂಗ­ವಾಗಿ ಆರೋಪಿಸುವ ಮೂಲಕ ಪಕ್ಷವನ್ನು ಮುಜು­ಗರಕ್ಕೆ ಸಿಲುಕಿಸಿದ್ದಾರೆ. ಅದರ ಬದಲು ಪಕ್ಷದ ವೇದಿಕೆಯಲ್ಲಿ ತಮ್ಮ ಅಭಿಪ್ರಾಯ ಮಂಡಿಸ­ಬಹು­ದಿತ್ತು’ ಎಂದು ಮತ್ತೊಬ್ಬ ನಾಯಕ ಅಶುತೋಷ್‌ ರಾಣಾ  ಟ್ವೀಟ್‌ ಮಾಡಿದ್ದಾರೆ.

ತರಾತುರಿಯಲ್ಲಿ ಇಂದು ಸಭೆ:  ಪಕ್ಷದೊಳಗಿನ ಅಸಮಾಧಾನ ಬಹಿರಂಗ­ವಾಗುತ್ತಲೇ ಎಲ್ಲ ಬೆಳ ವಣಿಗೆ ಕುರಿತು ಚರ್ಚಿಸಲು ಬುಧ­ವಾರ ತರಾತುರಿ­ಯಲ್ಲಿ ಎಎಪಿ ರಾಷ್ಟ್ರೀಯ ಕಾರ್ಯಕಾರಿ ಸಭೆ ಕರೆಯಲಾಗಿದೆ.  ಕಾರ್ಯಕಾರಿ ಸಭೆಯ ಮೇಲೆ ಎಲ್ಲರ ಕುತೂಹಲ ನೆಟ್ಟಿದ್ದು ಸಭೆಯಲ್ಲಿ ಈ ಇಬ್ಬರ ವಿರುದ್ಧ ಕಠಿಣ ಕ್ರಮ ಜರುಗಿಸುವ ಸಾಧ್ಯತೆ ಇದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ರಾಜ­ಕೀಯ  ವ್ಯವಹಾರಗಳ ಸಮಿತಿಯ ಪ್ರಮುಖ ಹುದ್ದೆ ಹೊಂದಿರುವ ಯಾದವ್‌ ಮತ್ತು ಭೂಷಣ್ ಅವರನ್ನು ಈ ಸ್ಥಾನಗಳಿಂದ ಕೆಳಗಿಳಿಸಿ, ಅಷ್ಟೇನೂ ಮಹತ್ವವಲ್ಲದ ಜವಾಬ್ದಾರಿ ನೀಡುವ ಸಾಧ್ಯತೆ ಇದೆ ಎನ್ನಲಾಗಿದೆ.

ದ್ರೋಹವಾಗಲು ಬಿಡೆನು
ಪಕ್ಷದಲ್ಲಿಯ ಆಂತರಿಕ ಬೆಳವಣಿಗೆ ತುಂಬಾ ನೋವು ತಂದಿದೆ. ಇದರಿಂದ ದೆಹಲಿ ಜನರು ನಮ್ಮ ಮೇಲಿಟ್ಟಿರುವ ವಿಶ್ವಾಸ ಮತ್ತು ನಂಬುಗೆಗೆ ದ್ರೋಹ­ವಾಗಿದೆ. ಯಾವುದೇ ಕಾರಣಕ್ಕೂ ಅವರಿಗೆ ದ್ರೋಹವಾಗಲು  ಬಿಡುವುದಿಲ್ಲ – ಅರವಿಂದ್‌ ಕೇಜ್ರಿವಾಲ್‌, ದೆಹಲಿ ಮುಖ್ಯಮಂತ್ರಿ    (ಟ್ವಿಟರ್‌ನಲ್ಲಿ)

ಚಿಕಿತ್ಸೆಗಾಗಿ ಕೇಜ್ರಿವಾಲ್‌ ಗುರುವಾರ ಬೆಂಗಳೂರಿಗೆ
ನವದೆಹಲಿ :
ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಅವರು ಈ ವಾರ ನ್ಯಾಚುರೋಪಥಿ ಚಿಕಿತ್ಸೆಗಾಗಿ ಬೆಂಗಳೂರಿಗೆ ಭೇಟಿ ನೀಡಲಿದ್ದಾರೆ. ಇದೇ ಐದರಂದು (ಗುರುವಾರ) ಬೆಂಗಳೂರಿಗೆ ಹೋಗುವ ಅವರು ಅಲ್ಲಿ 10 ದಿನಗಳ ಕಾಲ ಚಿಕಿತ್ಸೆ ಪಡೆಯಲಿದ್ದಾರೆ.

ಇತ್ತೀಚೆಗೆ ದೆಹಲಿಯಲ್ಲಿ ನಡೆದ ದೆಹಲಿ ಪೊಲೀಸ್‌ ಇಲಾಖೆಯ ‘ಅಟ್‌ ಹೋಮ್‌’ ಕಾರ್ಯಕ್ರಮದಲ್ಲಿ ಕೇಜ್ರಿವಾಲ್‌ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿದ್ದರು. ಈ ಸಂದರ್ಭದಲ್ಲಿ ಬೆಂಗಳೂರಿನಲ್ಲಿ ನ್ಯಾಚುರೋಪಥಿ ಚಿಕಿತ್ಸೆ ಪಡೆಯುವಂತೆ ಪ್ರಧಾನಿ ಸಲಹೆ ನೀಡಿದ್ದರು.

ಕೇಜ್ರಿವಾಲ್‌ ಅವರ ಅನುಪಸ್ಥಿತಿಯ ಸಂದರ್ಭದಲ್ಲಿ ಉಪ ಮುಖ್ಯಮಂತ್ರಿ ಮನೀಶ್‌ ಸಿಸೋಡಿಯ ಅವರು ಸೆಹಲಿ ಸರ್ಕಾರದ ದೈನಂದಿನ ವ್ಯವಹಾರಗಳನ್ನು ನೋಡಿಕೊಳ್ಳಲಿದ್ದಾರೆ.  ಕೇಜ್ರಿವಾಲ್‌ ಅವರು ಅತಿಯಾದ ಸಕ್ಕರೆ ಕಾಯಿಲೆ ಮತ್ತು ನಿರಂತರ ಕೆಮ್ಮಿನಿಂದ ಬಳಲುತ್ತಿದ್ದಾರೆ. ಕಳೆದ ಹತ್ತು ದಿನಗಳಲ್ಲಿ ಕೇಜ್ರಿವಾಲ್‌ ಅವರ ಸಕ್ಕರೆ ಪ್ರಮಾಣ ತೀವ್ರವಾಗಿ ಏರಿಕೆಯಾಗಿದೆ. ಸಕ್ಕರೆ ಕಾಯಿಲೆ ನಿಯಂತ್ರಣಕ್ಕಾಗಿ ಅವರಿಗೆ ನೀಡಲಾಗುತ್ತಿರುವ ಇನ್ಸುಲಿನ್‌ ಪ್ರಮಾಣವನ್ನು ಮೂರು ಪಟ್ಟು ಹೆಚ್ಚಿಸಲಾಗಿದೆ. ಇತರ ಔಷಧಗಳ ಪ್ರಮಾಣವನ್ನು ಎರಡು ಪಟ್ಟು ಹೆಚ್ಚಿಸಲಾಗಿದೆ. ಹಾಗಿದ್ದರೂ ಸಕ್ಕರೆ ಕಾಯಿಲೆ ಮತ್ತು ಕೆಮ್ಮು ನಿಯಂತ್ರಣಕ್ಕೆ ಬಂದಿಲ್ಲ ಎಂದು ಮೂಲಗಳು ತಿಳಿಸಿವೆ. 

ದೆಹಲಿ ವಿಧಾನಸಭೆಗೆ ಇತ್ತೀಚೆಗೆ ನಡೆದ ಚುನಾವಣೆಗೆ ಮುಂಚಿನ ಪ್ರಚಾರದ ವೇಳೆ ಕೇಜ್ರಿವಾಲ್‌ ಅವರ ಕೆಮ್ಮು ಜಾಸ್ತಿಯಾಗಿತ್ತು. 110ಕ್ಕೂ ಹೆಚ್ಚು ಜನಸಭಾಗಳಲ್ಲಿ ಅವರು ಭಾಷಣ ಮಾಡಿದ್ದರು. ದೂಳು ಮತ್ತು ಇತರ ಮಾಲಿನ್ಯದಿಂದಾಗಿ ಕೆಮ್ಮು ನಿಯಂತ್ರಣಕ್ಕೆ ಬರಲೇ ಇಲ್ಲ ಎಂದು ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT