ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಕ್ಷಿಕಾಶಿ

ಕನ್ನಡ ಕಾವ್ಯ ಪರಂಪರೆಯ ಪಕ್ಷಿನೋಟ
Last Updated 26 ಅಕ್ಟೋಬರ್ 2013, 19:30 IST
ಅಕ್ಷರ ಗಾತ್ರ

ಬೆಂಗಳೂರಿನ ಮಡಿವಾಳ ಕೆರೆಯಲ್ಲಿ ಮಿಂಚುಳ್ಳಿ ಹಕ್ಕಿಯ ಶಿಕಾರಿ ನಡೆದಿತ್ತು. ಅದು ಮೀನೊಂದನ್ನು ಹಿಡಿಯುವುದನ್ನು ನೋಡಿದಾಗ ರನ್ನನ ‘ಗದಾಯುದ್ಧ’ ಕಾವ್ಯ ನೆನಪಿಗೆ ಬಂತು. ಬಂಧುಮಿತ್ರರನ್ನು ಕಳೆದುಕೊಂಡು ದಿಕ್ಕೆಟ್ಟ ದುರ್ಯೋಧನ, ಭೀಷ್ಮನ ಸೂಚನೆಯ ಮೇರೆಗೆ ವೈಶಂಪಾಯನ ಸರೋವರದಲ್ಲಿ ಬಚ್ಚಿಟ್ಟುಕೊಳ್ಳಲು ಬರುತ್ತಾನೆ. ಈ ಸರೋವರದ ಸುತ್ತ ರನ್ನ ಕವಿ ಒಂದು ಸುಂದರವಾದ ಕಥೆ ಹೆಣೆದಿದ್ದಾನೆ.

ಸರೋವರದಲ್ಲಿ ಇಳಿಯುವ ಮುಂಚೆ ಅಲ್ಲಿಯ ಹಂಸ, ಆಮೆ, ಮೀನುಗಳನ್ನು ನೋಡಿ, ಅವುಗಳ ಗಂಭೀರ ಧ್ವನಿಯನ್ನು ಕೇಳಿ, ಜಲಮಂತ್ರವನ್ನು ಹೇಳಿ ದುರ್ಯೋಧನ ಸರೋವರಕ್ಕೆ ಇಳಿಯುತ್ತಾನೆ. ರನ್ನ ಆಗ ದುರ್ಯೋಧನನ ಬಗ್ಗೆ ವರ್ಣಿಸುತ್ತಾ ‘ಕುರುಕುಲವೆಂಬ ಸರೋವರದ ರಾಜಹಂಸ, ಸಮಸ್ತ ಭೂಮಂಡಲವನ್ನು ಹೊತ್ತ ಆಮೆ, ಮೀನಿನಂತೆ ಕಣ್ಣುಳ್ಳವನು’ ಎನ್ನುವಲ್ಲಿ, ‘ನೀವು ಹೆದರುವ ಅಗತ್ಯವಿಲ್ಲ, ದುರ್ಯೋಧನ ನಿಮ್ಮ ಜಾತಿಯವನೆ’ ಎಂದು ಕವಿ ಸರೋವರದ ಪ್ರಾಣಿಪಕ್ಷಿಗಳಿಗೆ ಸಮಾಧಾನ ಹೇಳಿದಂತಿದೆ.

ಆ ಕ್ಷಣದಲ್ಲಿ ಪಕ್ಷಿಗಳ ಪ್ರತಿಕ್ರಿಯೆ ನೋಡಿ: ‘ಹೇ ದುರ್ಯೋಧನ, ನೀನು ಹೊಕ್ಕ ನದಿಗಳು ಬತ್ತಿ ಹೋಗುವವು, ನಿನ್ನಂತಹ ಖಳ ಹಾಗೂ ದುರಾತ್ಮನನ್ನು ಒಳಕ್ಕೆ ಬಿಟ್ಟುಕೊಂಡರೆ, ಭೀಮನು ಈ ಸರೋವರವನ್ನು ಕದಡಿಬಿಡುತ್ತಾನೆ. ಆದ್ದರಿಂದ ಇಲ್ಲಿಗೆ ಬರಬೇಡ, ತೊಲಗು’ ಎಂದು ಬಕ, ರಾಜಹಂಸ ಮತ್ತು ಮಿಕ್ಕ ಜಲಪಕ್ಷಿಗಳು ಒಟ್ಟಿಗೆ ದನಿ ಮಾಡಿದವು.

ಭೀಮ ಸರೋವರದ ಬಳಿಗೆ ಬಂದಾಗ ‘ಬಕ’ ಪಕ್ಷಿಗಳೆಲ್ಲ ಹೆದರಿ ಹಾರಿಹೋಗುತ್ತವೆ. ಕಾರಣ ಸರಳವಾದುದು. ‘ಬಕಾಸುರನ ವೈರಿ ಭೀಮನು ಬಂದನು, ಬಕ ಎಂಬ ಹೆಸರಿಗೆ ಮುನಿದು ನಮ್ಮನ್ನು ಕೊಂದನು’ (ಬಂದಂ  ಬಕಾಂತಕಂ ಪೋಕೊಂದಂ ಬಕವಸರ್ಗೆ ಮುನಿದು ನಮ್ಮುಮನಿನ್ನೆಂ ಬಂದದೊಳೆ ಪಾರೆ ಪೋದವು ನಿಂದಿರದುರವಣಿಸಿ ಬಕನಿಕಾಯಕಮದರೊಳ್) ಎಂದು ಅಂಜಿದ ಅವು ಹಿಂಡು ಹಿಂಡಾಗಿ ಹಾರಿಹೋದವು.

ಭೀಮ ಸರೋವರದಲ್ಲಿ ದುರ್ಯೋಧನನ್ನು ಹುಡುಕುತ್ತಿದ್ದಾಗ, ಮಿಂಚುಳ್ಳಿ ಹಕ್ಕಿ ಅಡಗುತಾಣದ ಸುಳಿವನ್ನು ಕೊಡುತ್ತದೆ. ಮಿಂಚುಳ್ಳಿ ಹಕ್ಕಿ ಮೀನನ್ನು  ಹಿಡಿಯಲು ನೀರಿಗೆ ಎರಗುವ ನೆಪದಲ್ಲಿ ನೀರಿಗೆ ಧುಮುಕಿ, ‘ನೋಡು ಇಲ್ಲಿ ಇರುವನು’ ಎಂದು ತೋರಿಸಿತಂತೆ.

ಪದ್ಯ:
ಮೀಂಗುಲಿಗವಕ್ಕಿ ಕೊಳನೊಳ್
ಮೀಂಗೆಳಗುವ ತೆರದಿನೆರಗಿ ನೋಡಿಲ್ಲಿರ್ದಂ
ಪಿಂಗಾಕ್ಷನೆಂದು ಪವನಸು
ತಂಗರೆಪುವ ತೆರದಿ ಸೊಗಯಿಸಿತೋ

ಮಿಂಚುಳ್ಳಿ ಹಕ್ಕಿಯಲ್ಲಿ ಎರಡು ಪ್ರಭೇದಗಳು ಇವೆ. ಒಂದು ಕಾಮನಬಿಲ್ಲಿನ ಬಣ್ಣದ ಮಿಂಚುಳ್ಳಿ, ಇನ್ನೊಂದು ಕಪ್ಪುಬಿಳುಪಿನ ಮಿಂಚುಳ್ಳಿ. ಎರಡನೆಯದು ಹೆಲಿಕಾಪ್ಟರ್‌ನಂತೆ ನೀರಿಗೆ ಧುಮುಕಿ ಮೀನನ್ನು ಹಿಡಿಯುವ ದೃಶ್ಯ ಅದ್ಭುತ. ಬಹುಶಃ ರನ್ನ ಬಣ್ಣಿಸಿದ್ದು ಕಪ್ಪುಬಿಳುಪಿನ ಮಿಂಚುಳ್ಳಿಯೇ ಇರಬೇಕು. ಸರಿ, ರನ್ನನಿಂದ ಮುಂದಕ್ಕೆ ಹೋಗೋಣ.

ಲಕ್ಷ್ಮೀಶನ ಪಕ್ಷಿಗಳು
ಲಕ್ಷ್ಮೀಶ ಕವಿಯ ‘ಜೈಮಿನಿ ಭಾರತ’ ವಿಶೇಷ ಇರುವುದು ಕೃಷ್ಣ ಭಕ್ತರ ವೀರ್ಯ ಮತ್ತು ತ್ಯಾಗ ತುಂಬಿದ ಚೈತನ್ಯ ಜೀವನದ ಕತೆಗಳನ್ನು ಹೇಳುವ ಶೈಲಿಯಲ್ಲಿ. ಸಾಮಾನ್ಯವಾಗಿ ಭಕ್ತಿ ಸಂಸ್ಕೃತಿ ಸಂನ್ಯಾಸದೊಂದಿಗೆ ಮೆಲುಕು ಹಾಕಿಕೊಂಡು ದೈನ್ಯ ಮತ್ತು ಮರುಕ ಹುಟ್ಟಿಸುವ ಚೈತನ್ಯ ಹೀನ ಸ್ಥಿತಿಯನ್ನು ಭಕ್ತಿ ಎಂದು ತೋರಿಕೊಂಡು ಬಂದಿರುವುದೇ ಹೆಚ್ಚು. ಆದರೆ ಲಕ್ಷ್ಮೀಶನ ಕಾವ್ಯ ಇದಕ್ಕೆ ಭಿನ್ನವಾದ ಚಿತ್ರಗಳನ್ನು ಹೊಂದಿದೆ. ಶ್ರೀಕೃಷ್ಣ ತನ್ನ ಭಕ್ತರ ಗುಣಗಳನ್ನು ಹೇಳುತ್ತಾ ಗೀತೆಯಲ್ಲಿ, ‘ಭಯಾಶೂನ್ಯತೆ, ಸತ್ಯಪ್ರಿಯತೆ, ತ್ಯಾಗಿ’ ಇತ್ಯಾದಿ ಗುಣಗಳನ್ನು ಪಟ್ಟಿ ಮಾಡುತ್ತಾನೆ.

ಈ ಎಲ್ಲಾ ಗುಣಗಳ ಝಲಕ್ ತೋರಿಸುವುದಕ್ಕೆ ಲಕ್ಷ್ಮೀಶ ಈ ಕಾವ್ಯವನ್ನು ಬರೆದಿದ್ದಾನೆ. ಆತನ ಈ ಕಾವ್ಯದಲ್ಲಿ ಎಲ್ಲಿಯೂ ದೈನ್ಯವಿಲ್ಲ. ಯಾವ ಭಕ್ತನೂ ಬಡವನಲ್ಲ ಅಥವಾ ಸಂನ್ಯಾಸಿಯಲ್ಲ. ಎಲ್ಲರೂ ಇಬ್ಬರು ಮೂವರು ರಾಣಿಯರನ್ನು ಹೊಂದಿದ ಧೀರ ಅರಸುಗಳೇ. ಈ ಕಾವ್ಯದಲ್ಲಿ ಬರುವ ಒಬ್ಬ ವೀರ ಚಂದ್ರಹಾಸ. ರಾಜಪುತ್ರನಾದರೂ ಹುಟ್ಟಿನಿಂದಲೆ ತಬ್ಬಲಿ. ಅವನ ತಂದೆ ತಾಯಂದಿರನ್ನು ರಾಜಕೀಯ ಕಾರಣದಿಂದ ಕೊಲ್ಲಲಾಗುತ್ತದೆ.

ದಾದಿಯೊಬ್ಬಳು ಚಂದ್ರಹಾಸನನ್ನು ಪಾರು ಮಾಡಿ ಬೆಳೆಸುತ್ತಾಳೆ. ದುರ್ಬುದ್ಧಿಯೆಂಬ ಮಂತ್ರಿ ಈ ಮಗುವನ್ನು ಕೊಲ್ಲುವಂತೆ ಚಂಡಾಲರಿಗೆ ಆಜ್ಞೆ ಮಾಡುತ್ತಾನೆ. ಚಂಡಾಲರು ಅವನನ್ನು ಕೊಲ್ಲದೆ ಕಾಲಿನ ಬೆರಳನ್ನು ಕತ್ತರಿಸಿ ‘ಬಲಿಕಾರ್ಯ ಮುಗಿಸಿದೆವು’ ಎನ್ನುತ್ತಾರೆ. ಕಾಡಿನಲ್ಲಿ ಚಂದ್ರಹಾಸ ಒಬ್ಬನೇ ಇರುವಂತಹ ಸಂದರ್ಭದಲ್ಲಿ ಲಕ್ಷ್ಮೀಶ ಪಕ್ಷಿಗಳು ಹೇಗೆ ವ್ಯವಹರಿಸಿದವು ಅನ್ನುವುದರ ಚಿತ್ರಣ ಆರ್ದ್ರವಾಗಿದೆ.

ರಕ್ತ ಬಸಿಯುತ್ತಿದ್ದು, ಚಂದ್ರಹಾಸ ಹರಿ ಸ್ಮರಣೆಯನ್ನು ಮಾಡುತ್ತಿದ್ದಾನೆ. ಆಗ ಮೃಗ-ಪಕ್ಷಿಗಳು ಹಸಿವು ನೀರಡಿಕೆಯನ್ನು ತೊರೆದು ಆ ಶಿಶುವನ್ನು ಉಪಚರಿಸುತ್ತಿದ್ದವು. ನವಿಲುಗಳು ಗರಿ ಗೆದರಿ ಬಿಸಿಲು ಬೀಳದಂತೆ ನೋಡಿಕೊಂಡವು. ಸಾರಸ ಪಕ್ಷಿಗಳು ನೀರಿನಲ್ಲಿ ಮುಳುಗಿ ಮಗುವಿಗೆ ತುಂತುರು ಹನಿಗಳನ್ನು ಸಿಂಪಡಿಸಿದವು. ಗಿಳಿಗಳು ಮೃದುವಾದ ಮಾತುಗಳನ್ನಾಡಿ ಉಪಚರಿಸಿದವು. ಅಳುವ ಬಾಲಕನೊಡನೆ ತಾವೂ ಅಳುವಂತೆ ದುಂಬಿಗಳು ಝೇಂಕಾರವನ್ನು ಮಾಡಿದವು. ಬಾಲಕನ ರೋದನದೊಂದಿಗೆ ಬನದೇವಿಯರು ಗಾಳಿಗೆ ಭೋರೆಂದು ಸದ್ದು ಮಾಡುವ ಮರಗಿಡಗಳೊಡನೆ ಗೋಳಾಡಿದರು...

ಗರಿಗೆದರಿ ಕೊಡೆವಿಡಿದು ನಿಂದುವು ಬಿಸಿಲ್ಗೆ ನವಿ
ಲೆರಕೆಯಂ ಬೀಸಿ ಬಿಜ್ಜಣವಿಕ್ಕಿತಂಚೆ ತುಂ
ತುರ ನಿದಿರ್ಚಿತು ಸಾರಸಂ ಸಲಿಲ ದೊಳ್ನನೆದ ಪಕ್ಕಂಗಳಂ ಬಿದಿರ್ಚಿ
ಮರುಗಿ ಮೆಲ್ನುಡಿಯೊಳುಪಚರಿಸಿದವು ಗಿಳಿಗಳ
ಕ್ಕರಳಳಿಗಳರ್ಭಕನ ರೋದನದ ಕೊಡಳುವ
ತೆರದೊಳ್ಮೊರೆದುವಲ್ಲಿ ಕರುಬರಿದ್ದೂರಿಂದೆ ಕಾಡೊಳ್ಳಿ ತೆನಿಸುವಂತೆ

ಲಕ್ಷ್ಮೀಶ ಕವಿಯ ಕಾವ್ಯದಲ್ಲಿ ಪಕ್ಷಿಗಳು ಮನುಷ್ಯರ ಕಷ್ಟವನ್ನು ಅರ್ಥ ಮಾಡಿಕೊಳ್ಳುವಷ್ಟು ಹೃದಯವುಳ್ಳ ಜೀವಿಗಳಾಗಿವೆ. ಚಂದ್ರಹಾಸನ ಕಾಲಿನಿಂದ ರಕ್ತ ಹರಿಯುವಾಗ ಜಿಂಕೆಗಳು ಬಂದು ಆ ರಕ್ತವನ್ನು ನೆಕ್ಕಿ ಅವನಿಗೆ ಸಮಾಧಾನ ಹೇಳುತ್ತವೆ. 

ಕಾವ್ಯದಲ್ಲಿ ಪ್ರಾಣಿಗಳಿಗೆ ತೀವ್ರ ಭಾವ ತುಂಬಿ ಕಥೆಗೆ ಹೃದಯತುಂಬುವ ತಂತ್ರ ವಾಲ್ಮೀಕಿ ಮತ್ತು ವ್ಯಾಸ ಸಂಪ್ರದಾಯವಷ್ಟೆ. ಸೀತೆಯನ್ನು ರಾಮ ಕಳೆದುಕೊಂಡಾಗ ಸಂಪತ್ತಿ ವಾನರರಿಗೆ ಹಾದಿ ತೋರುತ್ತದೆ, ವಾನರರು ರಕ್ಕಸರನ್ನು ಸದೆ ಬಡೆಯುತ್ತಾರೆ. ಈ ರೀತಿ ಜೀವ ಸಂಕುಲ, ನಿಸರ್ಗ ಮತ್ತು  ಪ್ರಾಣಿ-ಪಕ್ಷಿ ಸಾಮರಸ್ಯವನ್ನು ಸೃಷ್ಟಿಸುವ ಮಹಾಕವಿ ಸಮಷ್ಟಿ ಹಿತದ ಹಾದಿಯನ್ನು ತೋರಿದ್ದಾರೆ. ‘ವಿಧಿಯಿಂದ ಬರುವ ಕಷ್ಟಗಳನ್ನು ಎದುರಿಸಲು ಪ್ರಾಣಿ-ಪಕ್ಷಿಗಳು ಸಹ ದಯೆ ಧರ್ಮವನ್ನು ಅವಲಂಬಿಸಿ ಬದುಕಿರುವಾಗ ಮನುಷ್ಯರು ಕಷ್ಟದಲ್ಲಿರುವವನನ್ನು ನೋಡಿ ಮರುಗದವನು ಪಾಪಿಯಲ್ಲವೆ?’ ಎಂದು ಕವಿ ಕೇಳುತ್ತಾನೆ..

ಹಂಪಿಯ ರಾಘವಾಂಕ
ಚಿಂತಕ ಜಿಡ್ಡೂ ಕೃಷ್ಣಮೂರ್ತಿ ‘ಕೇಳಿಸಿಕೊಳ್ಳುವ ಕಲೆಯೆ ಬಿಡುಗಡೆಯ ಕಲೆ’ ಎನ್ನುತ್ತಾರೆ. ಕೇಳಿಸಿಕೊಳ್ಳುವುದು ಬಹಳ ಕಷ್ಟ. ಏನನ್ನಾದರು ಕೇಳಬೇಕಾದರೆ ಮನಸ್ಸು ಶಾಂತವಾಗಿರಬೇಕು. ಕೇಳುವುದು ಅಂದರೆ ಸುಮ್ಮನೆ ಕೇಳುವುದು. ಕೇಳುವ ಕ್ರಿಯೆಯೊಂದು ಪರಿಪೂರ್ಣ ಕ್ರಿಯೆ. ನಿಜವಾಗಿ ಕೇಳಿಸಿಕೊಂಡಾಗ ಮಾತ್ರ ಶಬ್ದಗಳ ಸಂಗೀತವನ್ನು ಆಲಿಸುತ್ತೇವೆ. ಹಂಪಿಯ ರಾಘವಾಂಕ ಕವಿ ಹೊಸದಾಗಿ ಜಗವನ್ನು ನೋಡುವ ಬಗೆ ಮತ್ತು ಈ ದನಿಯನ್ನು ಆಲಿಸುವ ರೀತಿಯನ್ನು ತನ್ನ ಕಾವ್ಯದಲ್ಲಿ ಬಿಂಬಿಸಿದ್ದಾನೆ. ಕೇಳುವಿಕೆಯ ಕಲೆಯ ಚೆಲುವನ್ನು ಬಿಂಬಿಸುವ ಆತನ ಒಂದು ಪದ್ಯ ಸೊಗಸಾಗಿದೆ.

‘ನಡೆವ ದನಿ, ಹರಿವ ದನಿ, ಕರೆವ ದನಿ, ಬಿಲ್ಲ ಜೇವೊಡೆದ ದನಿಯೆಸುವ ದನಿ, ಬೈವ ದನಿ, ಕೂಗಿ ಬೊಬ್ಬಿಡುವ ದನಿಯಿರೆವ ದನಿ, ಮುರೆವ ದನಿ, ತರೆವ ದನಿ, ಬೇಗಯುರಿವ ತುಡುಕು ದನಿ, ತಿತ್ತಿರಿಯ ದನಿ, ಹರೆಯ ದನಿ, ಸನ್ನೆಗೊಡುವ ದನಿ, ಖಗಮೃಗದ ಗರ್ಜನೆಯ ದನಿಯೊಳಲಿ ಕೆಡೆವ ದನಿಗಳು ಬೆರಸಿ ಬೆಳೆಯ ಘೋರಾರಣ್ಯವತಿಭಯಂಕರವಾದುದು’.

ರಾಘವಾಂಕ ಎಲ್ಲ ದನಿಗಳನ್ನು ಆಲಿಸಿ ಕೂಡಿಸಿ ಕಾವ್ಯ ದನಿಯನ್ನಾಗಿ ಮಾಡಿ ಶಬ್ದ ಸಂಗೀತವನ್ನೇ ರಚಿಸಿದ್ದಾನೆ. ಬೇಟೆಗಾರರು ಬಲೆಯನ್ನು ಬೀಸಿದಾಗ ಅವರ ಕೈಗೆ ಸಿಕ್ಕ ಪಕ್ಷಿಗಳನ್ನು ಕವಿ ಈ ರೀತಿಯಾಗಿ ಪಟ್ಟಿ ಮಾಡುತ್ತಾನೆ:

ಕಾಗೆ ನವಿಲಿಬ್ಬಾಯ ಗುಬ್ಬಿ ಪಾರಿವ ಕೊಂಚೆ
ಗೂಗೆ ಕುಕಿಲಿಳೆವ ಗಂಟಿಗ ಕಿರುಬ ಗೊರವ ಗಿಳಿ
ಜಾಗರಿಗ ಹರಡೆ ಹಸುಬಂ ಹಿಸುಣ ಹೆಬ್ಬಕ್ಕಿ ಗಿಡುಗ ಹೊಳೆಸೊರೆವ ಶಕುನಿ
ಮೂಗನು ರಿಗಣ್ಣ ಬೆಳ್ಳಕ್ಕಿ ವಲಿಯಂ ಚಿಟ್ಟಿ
ಜೂಗ ಹದ್ದೆಂಬಿವಂ ಸಾಳುವಂಗಳು ನೆಗೆದು
ತಾಗಿ ಹೊಡೆ ಹೊಡೆದಿಳೆಯೊಳಿಕ್ಕಿದಡೆ ಹಕ್ಕಿಗಳ ಮಳೆಗಳೆಯುವಂತಾದುದು

ಒಂದೇ ಪದ್ಯದಲ್ಲಿ ಕವಿ 27 ಪ್ರಭೇದಗಳನ್ನು ಹೆಸರಿಸಿದ್ದಾನೆ. (ಹೀಗೆ ಇನ್ನೆರಡು ಪದ್ಯ ಬರೆದಿದ್ದರೆ ನೂರು ಹಕ್ಕಿಗಳು ನಮ್ಮ ಸ್ಮೃತಿಯಲ್ಲಿ ಇರುತ್ತಿದ್ದವು!). ಈ ಹಕ್ಕಿಗಳನ್ನೆಲ್ಲ ತೋರಿಸಿ ಮುಂದೆ ಆತ ನೀರಿನಲ್ಲಿರುವ ಮೀನುಗಳನ್ನು ನೀರಿನಲ್ಲಿ ಮುಳುಗಿ ತೋರಿಸುತ್ತಾನೆ. ಈ ಪಟ್ಟಿಯನ್ನು ನೋಡಿದರೆ ಈ ಕವಿ ಮೀನು ತಿನ್ನುವ ‘ಬಂಗಾಲಿ’ ಬ್ರಾಹ್ಮಣ ಆಗಿರಬೇಕು ಅನ್ನಿಸುತ್ತದೆ.

ಕೊಳುವ ಸೀಗುಡಿ ಗೆಂಡೆ ಕುಚ್ಚು ಹಣ್ಣಲು ಬಸಿಗ
ಗಿಳೆಲು ಬಂಗಡೆ ಹಾವು ಜಳಬಾಳೆ ಕುಕಿಲು ಹೆ
ಗ್ಗಳೆ ಗಣೆ ಮಣಿಗಣ್ಣ ತೂತು ತೆಂತಲು ಸಿಸಿಲು ಬೊಂಪು ಸವಿವಾಯ ಗೊದಳೆ
ಗಳೆಮೆಳುವ ಕಾಗೆಂಡೆಯಯರೆಗ ದೊಂಡಿ ಕೆಂಗ
ಹರಳು ಹಾರುವಂ ಹಿರಿಯ ಷಡುಸಕ್ಕರಿಗ
ನಿಳಳು ಹಂದೆನನಾನೆ ಮೊಗನೆಂಬ ಪರಿಪರಿಯ ಮೀನ್ಗಳಂ ಗುದಿಗೆಯ್ದರು    

ಬಿಳಿಚ ಚಿಪ್ಪಲು ಮಲಗು ಹೆಮ್ಮಲಗು ಬಿಳಿಯಾನೆ
ಮಳಲಿ ಕೂಡಿಲು ಚಕ್ರಗೆಂಡೆಯಾವೆಗ ನವಿಲು
ಯಿಳಿಯಂಬು ಕುಳೆದಲೆಗ ಹೆಮ್ಮಿನು ಕೆಮ್ಮಿನು ಮುಕ್ಕಣ್ಣನಾರೆ ನಿಳೆಲು
ಕುಳಿಚು ಸೂಜಿಗ ನಗಲು ಹೆಲ್ಲರಂ ಬಂಕರುಂ
ಹಳಲೆ ಕಪ್ಪೆಗಳೊಳಲೆ ಬೋಟೆ ಗಿಳೆಲುಗಳೆಂಬ
ಹೊಳೆವಳಿಯ ಮಿನ್ಗಳಂ ತವಿಸುತಿಹ ಬೇಡರಂ ನೋಡಿದಂ ಭೂಪಾಲನು.

ರಾಘವಾಂಕನಿಗೆ ಪಕ್ಷಿಗಳಿಗಿಂತಲೂ ಮೀನೆಂದರೆ ಹೆಚ್ಚು ಇಷ್ಟವಿರಬಹುದು. ಆತ ಪ್ರಸ್ತಾಪಿಸಿ ಕೆಲವು ಮೀನುಗಳು ಮತ್ತು ಅವುಗಳ ವೈಜ್ಞಾನಿಕ ಹೆಸರುಗಳು ಹೀಗಿವೆ: ಸೀಗುಡಿ (Prawns), ಗೆಂಡೆ (Tor khudree, Mahseers), ಕುಚ್ಚು (Heteropneustes fossilis), ಗಿಳೆಲು (Mystus cavesius), ಬಂಗಡೆ-(Mackerel), ಹೆಮ್ಮಲಗು -( Anguilla bengalensis), ಬಿಳಿಚ (Pseudambasis ranga), ಕಾಗೆಂಡೆ (Tor khudree) ಗೊದಳೆ-( Ompok bimaculatus), ಮಣಿಗಣ್ಣ- (Aplocheilus lineatus), ಹಾವು  (Mastacembelus armatus), ಜಳಬಾಳೆ (Wallago attu) ಸಿಸಿಲು (-Rasbora daniconius/Danio aequipinnatus).

ರಾಘವಂಕನ ಕಾವ್ಯದಲ್ಲಿ ಬರುವ ನವಿಲು, ಗುಬ್ಬಿ, ಪಾರಿವಾಳ, ಗಿಳಿ, ಬೆಳ್ಳಕ್ಕಿ, ಗೂಗೆ, ಗಿಡುಗ, ಹದ್ದು -ಸಾಮಾನ್ಯವಾಗಿ ತಿಳಿದಿರುವ ಹಕ್ಕಿಗಳೇ. ಆದರೆ ಕುಕಿಲಿಳೆವ, ಗಂಟಿಗ, ಗೊರವ, ಜಾಗರಿಗ, ಹರಡೆ, ಹಿಸುಣ, ರಿಗಣ್ಣ– ಈ ಹೆಸರುಗಳು ಬಳಕೆಯಲ್ಲಿ ಇಲ್ಲವಾಗಿವೆ, ಅವು ಯಾವ ಪಕ್ಷಿಯೆಂದು ಎಷ್ಟೋ ತಜ್ಞರಲ್ಲಿ ಕೇಳಿದರೂ ಉತ್ತರ ಸಿಗಲಿಲ್ಲ.

ನಾವು ಇಂದು ಎದುರಿಸುತ್ತಿರುವ ಸವಾಲೆಂದರೆ ಕನ್ನಡ ಪಕ್ಷಿಗಳು ಹೆಸರಿಲ್ಲದಂತಾಗುವುದು. ಉದಾಹರಣೆಗೆ ಬೆಂಗಳೂರಿನಲ್ಲಿ ಗುಬ್ಬಿಗಳು ಮಾಯವಾದಂತೆ! ಗುಬ್ಬಿಯನ್ನು ಕಂಡಾಗ ಅದನ್ನು ಗುಬ್ಬಿ ಎನ್ನದೆ ‘ಸ್ಪ್ಯಾರೋ’ ಎಂದು ಕರೆಯುವುದು. ಎರಡೂ ಸಂದರ್ಭದಲ್ಲಿ ‘ಗುಬ್ಬಿ’ ಹೆಸರಿಲ್ಲದಂತಾಗುವ ಕ್ರಿಯೆ ನಾವು ಕಾಣಬಹುದು. ಮೊದಲನೇ ಸಂದರ್ಭದಲ್ಲಿ ಪಕ್ಷಿಯೇ ಮಾಯ, ಎರಡನೇ ಸಂದರ್ಭದಲ್ಲಿ ಪಕ್ಷಿಯ ಹೆಸರೇ ಮಾಯ. ಉದಾಹರಣೆಗೆ ಬೆಂಗಳೂರಿನಲ್ಲಿ ಹಲವಾರು ಪಕ್ಷಿಗಳು ನೋಡಲು ಸಿಗುವುದಿಲ್ಲ ಅಥವಾ ಸಿಕ್ಕರೂ ಅದರ ಕನ್ನಡ ಹೆಸರು ತಿಳಿದಿರುವುದಿಲ್ಲ.

ಕುಮಾರವ್ಯಾಸನ ಪಕ್ಷಿಪ್ರೀತಿ
ಕುಮಾರವ್ಯಾಸನ ಕಾವ್ಯ ಅಂದರೆ ವೇಗ ಮತ್ತು ಸಂಕ್ಷಿಪ್ತತೆ. ಇದಕ್ಕೆ ನಿದರ್ಶನವಾಗಿ ಆತ ಖಾಂಡವದಹನ ಪ್ರಕರಣದಲ್ಲಿ ಒಟ್ಟಿಗೆ ಐವತ್ತು ಜಾತಿಯ ಹಕ್ಕಿಗಳನ್ನು ಪಟ್ಟಿ ಮಾಡಿದ್ದಾನೆ.

ಶಂಕ ಮರಾಳ ಮಯೂರ ಟಿಟ್ಟಿಭ
ಪಿಕ ಚಕೋರ ಕಪೋತ ವಾಯಸ
ಬಕ ಪದಾಯುಧ ಚಕ್ರವಾಕ ಕಳಿಂಗ ಕಲವಿಂಕ
ಕುಕಿಲ ಸಾರಸ ಕಾಕರಿಪು
ಚಾತಕ ಭರದ್ವಾಜಾದಿ ಪಕ್ಷಿ
ಪ್ರಕರ ಬಿದ್ದುದು ಬಿಗಿದ ಕೇಸುರಿ ಕಣ್ಣಿವಲೆಗಳಲಿ.

ಹರಡೆ ಗೀಜುಗ ಮರಗೊಡಲೆ ಕಾ
ಬುರುಲೆ ಲಾವುಗೆ ಗೌಜು ಪಾರಿವ
ನಿರಿಲೆ ಸಾಳುವ ಚಿಲಿಮಿಲಿಗ ಚೆಂಬೋತ  ಮೀನ್ಬುಲಿಗ
ಮರಕುಟಿಗ ಕಬ್ಬಕ್ಕಿ ಕೊಟ್ಟುಗ
ವರಲೆ ಕೊಂಚೆ ಕಪಿಂಜ ಗಿಂಚಲು
ಗರಿಗ ಮೊದಲಾದಖಿಳ ಖಗಕುಲ ಬಿದ್ದುದುರಿಯೊಳಗೆ

ಇವುಗಳಲ್ಲಿ ಕೆಲವನ್ನು ಚಿತ್ರದ ಜೊತೆಗೆ ಗುರುತಿಸುವ ಪ್ರಯತ್ನವನ್ನು ಮಾಡಿರುವೆ: ಮರಾಳ (Flamingo), ಮಯೂರ (Peacock), ಟಿಟ್ಟಿಭ (red wagtailed lapwing), ಪಿಕ (bulbul), ಚಕೋರ (lapwing), ಕಪೋತ (dove), ವಾಯಸ (crow), ಬಕ (pond heron), ಕಳಿಂಗ (shrike), ಕುಕಿಲ (asian coel), ಸಾರಸ (sarus crane), ಕಾಕರಿಪು (cuckoo), ಚಾತಕ (pied crested cuckoo), ಭರದ್ವಾಜಾದಿ ಪಕ್ಷಿ (lark), ಗೀಜಗ (weaver), ಲಾವುಗೆ (quail), ಪಾರಿವಾಳ (pigeon), ಚಿಲಿಮಿಲಿಗ (lapwing), ಕಲವಿಂಕ (Syke's Crested Lark), ಗೌಜು (Grey Francolin), ಕೊಟ್ಟುಗ (barbet), ಮೀನ್ಬುಲಿಗ (King Fisher), ಮರಕುಟಿಗ (wood pecker), ಕಬ್ಬಕ್ಕಿ (rosy pastor). ಪದಾಯುಧ, ಹರಡೆ, ಮರಗೊಡಲೆ, ಕಾಬುರುಲೆ, ನಿರಿಲೆ, ಸಾಳುವ, ಕಪಿಂಜ, ಗಿಂಚಲು, ಗರಿಗ  ಹೆಸರುಳ್ಳ ಹಕ್ಕಿಗಳನ್ನು ಗುರುತಿಸಲಾಗಲಿಲ್ಲ. ಒಟ್ಟಿನಲ್ಲಿ ಕುಮಾರವ್ಯಾಸನನ್ನು ಪಕ್ಷಿ ವೀಕ್ಷಣೆಯಲ್ಲಿ  ಮೀರಿಸುವ ಕವಿ ಕನ್ನಡದಲ್ಲಿ ಮತ್ತೊಬ್ಬನಿಲ್ಲ. 

ಅಗ್ರಜ ಪಂಪ
‘ಹುಟ್ಟಿದರೆ ಬನವಾಸಿಯಲ್ಲಿ ಕೋಗಿಲೆಯಾಗಿ ಹುಟ್ಟಬೇಕು’ ಎನ್ನುವ ಪಂಪನ ಮಾತು ಎಲ್ಲರಿಗೂ ತಿಳಿದಿದೆ. ಪಂಪ ತನ್ನ ಕಾವ್ಯದಲ್ಲಿ ಮತ್ಸ್ಯಗಂಧಿಯ ಜನ್ಮಕಥೆಯನ್ನು ಹೇಳಬೇಕಾದರೆ ಪಕ್ಷಿಗಳನ್ನು ತಂದಿದ್ದಾನೆ. ಋಷಿಯು ತನ್ನ ರೇತಸ್ಸನ್ನು ತೆಗೆದುಕೊಂಡೂ ಹೋಗಲು ಗಿಳಿಗೆ ಹೇಳುತ್ತಾನೆ. ಆ ಗಿಳಿಯನ್ನು ಗಿಡುಗ ಅಡ್ಡಗಟ್ಟಿ ರೇತಸ್ಸನ್ನು ಕೆಳಗೆ ಬೀಳಿಸುತ್ತದೆ. ಕೆಳಗೆ ಹರಿಯುವ ಯಮುನಾ ನದಿಯಲ್ಲಿ ಮೀನು ಆ ರೇತಸ್ಸನ್ನು ತನ್ನ ಗರ್ಭದಲ್ಲಿ ಧರಿಸಿ ಮತ್ಸ್ಯಗಂಧಿಯನ್ನು ಪಡೆಯುತ್ತದೆ. ಹೀಗೆ ಮಹಾಭಾರತದ ಕತೆಯ ಬೀಜಾಂಕುರವಾಗುವುದು ಪಕ್ಷಿ ಮತ್ತು ಮೀನುಗಳಿಂದ.

ಮಹಾಭಾರತದ ಕತೆಗೆ ಗೊಬ್ಬರವಾಗಿ ಪಾಂಡುವಿನ ಮರಣ ಸನ್ನಿವೇಶವಿದೆ. ಪಾಂಡು ರಾಜ ಕಾಡಿಗೆ ಬೇಟೆಯಾಡುವುದಕ್ಕೆ ಹೋಗಿದ್ದಾಗ ಕಾಮಿಸುತ್ತಿರುವ ಜಿಂಕೆಗಳನ್ನು ಕೊಲ್ಲುತ್ತಾನೆ. ನಂತರ ಶಾಪದ ಫಲವಾಗಿ ಅರಮನೆಯನ್ನು ತೊರೆದು ಕಾಡಿಗೆ ತಪವನ್ನು ಆಚರಿಸಲು ಶತಶೃಂಗ ಪರ್ವತಕ್ಕೆ ಬರುತ್ತಾನೆ. ಆಗ ಶತಶೃಂಗ ಪರ್ವತವನ್ನು ಕವಿ ಬಣ್ಣಿಸುವುದು ಹೀಗೆ:

ಸಾಮವೇದದ ದನಿಯನ್ನು ದುಂಬಿಗಳು, ‘ಪುಗಿಲ್ ಪುಗಿಲೆಂದಿತ್ತ ಬನ್ನಿಮಿರಿಮೆಂಬ’ ಪೊಂಬಣ್ಣದ ಕೋಗಿಲೆಗಳು, ‘ಮುನಿಕುಮಾರರೋದುವ ವೇದವೇದಾಂಗಂಗಳಂ ತಪ್ಪುವಿಡಿದು ಜಡಿದು ಬಗ್ಗಿಸುವ’ ಪದುಮರಾಗದ ಬಣ್ಣದರಗಿಳಿಗಳು, ಹೋಮಾಗ್ನಿಯು ನಂದಿ ಹೋಗದಂತೆ ತಮ್ಮ ರೆಕ್ಕೆಯ ಗಾಳಿಯಿಂದ ಬೀಸಿ ಉರಿಸುತ್ತಿರುವ ರಾಜಹಂಸಗಳನ್ನು ನೋಡಿ ಈ ತಪಸ್ವಿಗಳ ಪ್ರಭಾವಕ್ಕೆ ಅಚ್ಚರಿಗೊಂಡನು.

ಈ ಸಾಲುಗಳು ಬಾಣಭಟ್ಟನ ‘ಕಾದಂಬರಿ’ ಕೃತಿಯಿಂದ ಪ್ರೇರಿತವಾಗಿದೆ. ಇದರಿಂದ ಸಂಸ್ಕೃತ ಕಾವ್ಯದಲ್ಲಿ ಹಕ್ಕಿಗಳ ಸ್ಥಾನ ಮಾನದ ಬಗ್ಗೆ  ಓದುವ ಅವಕಾಶ ದೊರಕಿತು. ಡಾವೆ ಅವರು Birds in Sanskrit literature ಎನ್ನುವ ಪುಸ್ತಕದಲ್ಲಿ ಸಂಸ್ಕೃತ ಕಾವ್ಯದಲ್ಲಿ ಪಕ್ಷಿಗಳ ವರ್ಣನೆಗಳ ಬಗ್ಗೆ ಸಂಶೋಧಿಸಿ ಸಮಗ್ರ ಸಂಸ್ಕೃತ ಸಾಹಿತ್ಯದ ದರ್ಶನವನ್ನು ಮಾಡಿಸಿದ್ದಾರೆ. ಈ  ಪುಸ್ತಕವನ್ನು ಓದಿ ನಾನಂತೂ ‘ಹೀಗೂ ಉಂಟೆ’ ಎಂದು ತುಟಿಯ ಮೇಲೆ ಬೆರಳಿಟ್ಟುಕೊಂಡೆ.

ಖಾಂಡವದಹನ ಪ್ರಸಂಗದಲ್ಲೊಂದು ಸರೋವರದ ಚಿತ್ರಣವಿದೆ. ಅಲೆಗಳ ಸಮೂಹವು ಕುದುರೆಗಳಂತಿರೆ, ಕಳಹಂಸವು ಚಾಮರದಂತಿರೆ, ಬಿಳಿಯ ನೊರೆ ಶ್ವೇತಚ್ಛತ್ರಿಯಂತಿರಲು ದುಂಬಿಯ ಮರಿಗಳು ಗಾಯಕ ಗೋಷ್ಠಿಯಂತಿರಲು, ಹೆಣ್ಣುಗಿಳಿಯು ಸಖಿಯಂತಿರಲು, ಅಲ್ಲಿಯ ಕೊಳವು ಅರಮನೆಯಂತಿರಲು, ತಾವರೆಗಳು ತಾವೇ ಅರಸರಾಗಿರುವಂತೆ ಪ್ರಕಾಶಿಸುತ್ತಿದ್ದವು ಎಂದು ತಾವರೆಯನ್ನು ಕವಿ ಹೊಗಳುತ್ತಾನೆ. ಕನ್ನಡ ಕಾವ್ಯದ ಸ್ವರೂಪ ಹೇಗಿರಬೇಕು ಅನ್ನುವುದನ್ನು ಪಂಪ ಸೊಗಸಾಗಿ ಹೇಳಿದ್ದಾನೆ.

ಬಗೆ ಪೊಸತಪ್ಪುದಾಗಿ ಮೃದುಬಂಧ ದೊಳೊಂದುವುದೊಂದಿ ದೇಸಿಯೊಳ್
ಪುಗುವುದು ಪೊಕ್ಕ ಮಾರ್ಗದೊಳೆ ತಳ್ವುದು ತಳ್ತೊಡೆ ಕಾವ್ಯ ಬಂಧಮೊ
ಪ್ಪುಗುಮೆಳಮಾವು ಕೆಂದಳಿರ ಪೂವಿನ ಬಿಣ್ಪೋರಿಯಂ ಬಳಳು ತುಂ
ಬಿಗಳಿನೆ ತುಂಬಿ ಕೋಗಿಲೆಯ ಬಗ್ಗಿಸೆ ಸುಗ್ಗಿಯೊಳೊಪ್ಪುವಂತೆವೋಲ್.

ಇದರ ಸಾರಾಂಶವಿಷ್ಟೆ -ಕನ್ನಡ ದೇಸಿ ಸಂಪ್ರದಾಯದ ಹಾದಿಯಲ್ಲಿ ಕಾವ್ಯ ರಚಿಸಬೇಕು ಮತ್ತು ಸಂಸ್ಕೃತದ ಕಾವ್ಯ ಮಾರ್ಗದೊಡನೆಯು ಹೊಂದಾಣಿಕೆಯನ್ನು ಮಾಡಿಕೊಂಡಿರಬೇಕು. ಆಗ ವಸಂತಮಾಸದಲ್ಲಿನ ಮಾಮಾರದ ಕೋಗಿಲೆಯ ಇಂಪಾದ ಉಯಿಲಿನಂತೆ ಕಾವ್ಯ ಪ್ರಕಾಶಿಸುತ್ತದೆ. ಕನ್ನಡ ದೇಶಿ ಸಂಸ್ಕೃತಿ ಮತ್ತೊಂದು ಹಿರಿಯದಾದ ಸಂಸ್ಕೃತಿಯೊಂದಿಗೆ ತನ್ನ ಸ್ವಂತಿಕೆಯನ್ನು ಬಿಡದೆ ಮೈತ್ರಿಯನ್ನು ಸಾಧಿಸಬೇಕು ಅಂದಿದ್ದಾನೆ.

***
ಪ್ರಸ್ತುತ ನಮ್ಮ ದೇಶದ ನಗರಗಳು ಬೆಳೆಯುತ್ತಾ ಪರಿಸರ ಪಕ್ಷಿ, ಪ್ರಾಣಿ ಸಂಕುಲ ಆತಂಕ ಎದುರಿಸುತ್ತಿವೆ. ಇಂತಹ ಪರಿಸ್ಥಿತಿಯಲ್ಲಿ ಪಂಪನ ಕಾವ್ಯ ನಮಗೆ ‘ಅಭಿವೃದ್ಧಿಯ’ ಸರಿದಾರಿಯನ್ನು  ಸೂಚಿಸುವಂತಿದೆ.

ಈ ಹೊತ್ತು ನಮ್ಮ ನಾಡಿನಲ್ಲಿ ಆಕಾಶದಲ್ಲಿ ಹಕ್ಕಿಗಳು ಕಾಣಿಸುವುದು ಕಷ್ಟ. ರಾಘವಾಂಕನಂತಹ ಕವಿಯನ್ನು ಕಾಣುವುದೂ ದುರ್ಲಭ. ಕನ್ನಡವಂತೂ ಮೂಲೆಗುಂಪಾಗಿ ‘ಕರ್ನಾಟಕ ಸರ್ಕಾರ’ ಮಾತ್ರ ಇದೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಆಧುನಿಕತೆ ಮತ್ತು ಪ್ರಜಾಪ್ರಭುತ್ವವು ಒಡ್ಡಿರುವ ಸವಾಲುಗಳನ್ನು ಸಮರ್ಪಕವಾಗಿ ಎದುರಿಸಲು ನಮ್ಮ ಮುಂದಿರುವುದು ಪಂಪನ ‘ದೇಶಿ’ಮಾರ್ಗ.

ಸಮಕಾಲೀನ ಕನ್ನಡ ಕಾವ್ಯದಲ್ಲಿ ಛಂದ ಮತ್ತು ಛಂದಸ್ಸು ಕ್ಷೀಣಿಸುತ್ತಿರುವ ಸಂದರ್ಭದಲ್ಲಿ ಕಾವ್ಯಪ್ರೇಮಿ ಕನ್ನಡಿಗರಿಗೆ ಪಿತೃಪಿತಾಮಹ ಸ್ವರೂಪಿ ಮಹಾಕವಿಗಳ ಕಾವ್ಯದ ಪಾರಾಯಣ ಆಪ್ಯಾಯಮಾನ ಎನ್ನಿಸುತ್ತದೆ. ಈ ಓದಿಗೆ ನಮ್ಮ ಕಾವ್ಯದ ಹೊಸ ದಾರಿಗಳನ್ನು ಕಾಣಿಸುವ ಶಕ್ತಿಯೂ ಇದೆ. ಕನ್ನಡ ಪರಂಪರೆಯ ಕಾವ್ಯದ ಹಕ್ಕಿಯ ಕಲರವ ಅನುರಣಿಸುತ್ತಲೇ ಇದೆ. ಅದನ್ನು ಕೇಳಿಸಿಕೊಳ್ಳುವ ವ್ಯವಧಾನ ನಮಗೆ ಬೇಕಷ್ಟೇ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT