ಒಂದು ಪ್ರತ್ಯೇಕ ಉಪಸಾಂಸ್ಕೃತಿಕ ಜಾಗವೆಂದು ಮಹಿಳಾ ಬರಹವನ್ನು ಕಾಣಲು ತೊಡಗಿದಂದಿನಿಂದ ಪರಂಪರೆಯ ಜೊತೆಗಿನ ಈ ಬರಹದ ಸಂಬಂಧ ಎನ್ನುವುದು ಒಂದು ಸದಾ ಆತಂಕದ ಮೂಲವಾಗುತ್ತದೆ. ಏಕೆಂದರೆ ಯಾವೆಲ್ಲಾ ಕಾರಣಗಳಿಗಾಗಿ ಈ ಬರಹವು ಅಮುಖ್ಯವೆಂದು ಒತ್ತರಿಸಲ್ಪಟ್ಟಿತ್ತೋ ಅವೇ ಕಾರಣಗಳನ್ನು ಅದು ತನ್ನ ಅಸ್ತಿತ್ವಕ್ಕೆ ಮತ್ತು ಅಸ್ಮಿತೆಗೂ ತಳಹಾಸನ್ನಾಗಿ ಮಾಡಿಕೊಂಡು ತನ್ನದೇ ನೆಲೆಯೊಂದರೊಳಗೆ ಸ್ಥಾಪಿಸಿಕೊಂಡಿರುತ್ತದೆ. ಆದರೆ ಇಂಥ ಉಪಸಾಂಸ್ಕೃತಿಕ ಲಕ್ಷಣವು ಹೋಗಿ ಒಟ್ಟು ಪರಂಪರೆಯು ಎಂದು ಒಪ್ಪಿಗೆಯಿಂದ ತಲೆಯಾಡಿಸೀತು ಎಂದು ಕಾಯುತ್ತಲೂ ಇರುತ್ತದೆ. ಈ ಉಪ ಸಾಂಸ್ಕೃತಿಕ ನೆಲೆಯನ್ನು ಮಹಿಳಾ ಸಾಹಿತ್ಯ ಕಟ್ಟಿಕೊಂಡಿದ್ದರಿಂದ ಪರ್ಯಾಯ ಚಿಂತನೆಯನ್ನೂ ಬೆಳೆಸಲು ಅದಕ್ಕೆ ಸಾಧ್ಯವಾಗಿದೆಯೆ ಎನ್ನುವುದನ್ನು ಹಂತ ಹಂತವಾಗಿ ಮುಂದೆ ಪರಿಶೀಲಿಸಬಹುದು.

ಇಪ್ಪತ್ತನೆಯ ಶತಮಾನದ ವಿಮರ್ಶನಾ ಚಿಂತನೆ ಜನಪ್ರಿಯತೆ ಎನ್ನುವುದನ್ನು ಕಳಪೆ ಬೆಳೆಯ ಜೊತೆ, ಭಾವನಾಶೀಲತೆಯನ್ನು ಪ್ರಜ್ಞಾವಂತಿಕೆಯ ಅಭಾವದ ಜೊತೆ, ಧಾರ್ಮಿಕತೆಯನ್ನು ಆಷಾಢಭೂತಿತನದ ಜೊತೆಗೆ ಹಾಗೂ ಗೃಹ-ಪ್ರೇಮವನ್ನು ಕ್ಷುಲ್ಲಕತೆಯ ಜೊತೆಗೆ ಸಮೀಕರಿಸುವುದನ್ನು ಸಾಹಿತ್ಯದ ವಿದ್ಯಾರ್ಥಿಗಳಿಗೆ ಬೋಧಿಸಿತು. ನವ್ಯವೆನ್ನುವ ವೈಚಾರಿಕತೆಯಲ್ಲಿ ಸಾಂಪ್ರದಾಯಿಕ ಬದುಕಿನ ಕ್ರಮವನ್ನು ಪ್ರಶ್ನಿಸುವ, ಅದರ ವಿರುದ್ಧ ಬಂಡೇಳುವ ಮತ್ತು ವ್ಯಕ್ತಿಯ ಅಸ್ತಿತ್ವದ ಅರ್ಥವನ್ನು 'ಅವನ' ಖಾಸಗಿ ಅನುಭವಗಳ ಮೂಲಕ ಶೋಧಿಸುವ ಯತ್ನಗಳಲ್ಲಿ ಈ ಮೇಲೆ ಹೇಳಿದ ಸಮೀಕರಣದ ದೃಷ್ಟಿಯೂ ಇತ್ತು. ಹೀಗೆ ಅವಹೇಳನಗೊಂಡ ಅಂಶಗಳು ಸೂಚ್ಯವಾಗಿ ಸ್ತ್ರೀಸಂಬಂಧಿತ ಕೀಳುಭಾವನೆಗೂ ಅಂದಿನ ಯುವ ಪೀಳಿಗೆಯವರಲ್ಲಿ ಆಸ್ಪದ ನೀಡಿತು.

ಉದಾಹರಣೆಗೆ, ಭೋಜ್ಯ-ಭೋಜಕ ಸಂಬಂಧಗಳಲ್ಲಿ ಹೆಣ್ಣು-ಗಂಡನ್ನು ಸ್ಥಿರೀಕರಿಸಿರುವ ವ್ಯವಸ್ಥೆಯನ್ನು ಅದರ ಸಮಗ್ರತೆಯಲ್ಲಿ ಗ್ರಹಿಸುವ ಬದಲು ಜಾತಿ,ಧರ್ಮ ಎಂದು ಬಿಡಿಯಾದ ಸಂಸ್ಥೆಗಳ ಮೂಲಕ ಪ್ರವೇಶಿಸಿ ಪರಿಹಾರ ಅರಸಲು ಹೊರಟ ಬಗೆಯನ್ನೇ ಗಮನಿಸಬಹುದು. ಆ ಹೊತ್ತಿನಲ್ಲಿ ಇಂಥ ಹುಡುಕಾಟಕ್ಕೆ ಜಾತಿವ್ಯವಸ್ಥೆಯನ್ನು ಬುಡಮೇಲು ಮಾಡಲು ಎರಡು ಸಾಧ್ಯತೆಗಳು ಕಾಣಿಸಿಕೊಳ್ಳುತ್ತವೆ. ಮೇಲು ಜಾತಿಯ ಗಂಡು ಮತ್ತು ಕೆಳಜಾತಿಯ ಹೆಣ್ಣು ಸೇರಬಹುದು ಎನ್ನುವ ಅನುಲೋಮ ಲೈಂಗಿಕತೆ ಒಂದು ದೃಷ್ಟಿಗೆ ಪರಿಹಾರ ಅನ್ನಿಸಿದರೆ, ಅದೇ ತಿರುವು ಮುರುವಾಗಿ ಕೆಳ ಜಾತಿಯ ಗಂಡು ಮತ್ತು ಮೇಲುಜಾತಿಯ ಹೆಣ್ಣು ಕೂಡುವುದು ಎನ್ನುವ ಪ್ರತಿಲೋಮ ಸಂಬಂಧವೇ ಜಾತಿಪದ್ಧತಿಗೆ ಸರಿಯಾದ ಉತ್ತರ ಎಂದು ಇನ್ನೊಂದು ದೃಷ್ಟಿಗೆ ತೋರಬಹುದು. ನವ್ಯ ಸಾಹಿತ್ಯ ಇಂಥ ಎರಡೂ ಮಾದರಿಗಳ ಪ್ರಯೋಗ ಮಾಡಿರುತ್ತದೆ. ಈ ಎರಡೂ ಮಾರ್ಗಗಳು ಬಹುಶಃ ಅಂದು ಪ್ರಭಾವಕಾರಿಯೆನಿಸಿದ್ದ ಲೋಹಿಯಾ ಅವರ ಜಾತಿವಿನಾಶದ ತಾತ್ವಿಕತೆಯ ಅರೆಬರೆ ವ್ಯಾಖ್ಯಾನವೂ ಆಗಿರುವುದು ಸಾಧ್ಯ.

ಆದರೆ ಇಲ್ಲಿನ ವ್ಯಂಗ್ಯವೆಂದರೆ, ಈ ಎರಡು ದಿಕ್ಕುಗಳೂ ಹೆಣ್ಣನ್ನು ನಿರ್ವ್ಯಕ್ತೀಕರಿಸಿ ವಸ್ತುವಾಗಿ ಇಲ್ಲವೆ ಗಂಡಿನ ನೋಟದ ಅಪೇಕ್ಷಿತ ಸ್ತ್ರೀ ಮಾದರಿಯಾಗಿ ನಿಲ್ಲಿಸಿರುವಂಥವು. ಇಂಥ ಚಿತ್ರಣಗಳ ವಿರುದ್ಧ ಬಂಡೆದ್ದು `ಅವಳ' ಅಸ್ತಿತ್ವ ಮತ್ತು ಇಚ್ಛಾಶಕ್ತಿಗಳನ್ನು ವ್ಯಕ್ತಿಯ ನೆಲೆಯಿಂದ ದೃಢವಾಗಿ ಅಭಿವ್ಯಕ್ತಿಸಲು ವೀಣಾ ಶಾಂತೇಶ್ವರರಂಥವರು ಬರಬೇಕಾಯಿತು. ನವ್ಯವಾದದ ತಾತ್ವಿಕತೆಯ ಒಳಗೇ ಮೈಗೂಡಿದ್ದ ಜೆಂಡರ್ ವ್ಯವಸ್ಥೆಯ ಧೋರಣೆಗಳನ್ನೂ ಅದರ ವಿರುದ್ಧ ಧ್ವನಿಯೆತ್ತಿದ ಸ್ತ್ರೀವಾದದ ತಾತ್ವಿಕತೆಯನ್ನೂ ತಮ್ಮದೇ ರೀತಿಯಿಂದ ಪ್ರತಿಭಟಿಸಲು ನವ್ಯ ಲೇಖಕಿಯರಿಗೆ ಚಾರಿತ್ರಿಕವಾದ ಅನಿವಾರ್ಯತೆ ಇತ್ತು. ಸ್ತ್ರೀ ತನ್ನೊಳಗಿನ ಅಭಿವ್ಯಕ್ತಿಯನ್ನು ಸಶಕ್ತಗೊಳಿಸಿಕೊಳ್ಳದೆ ಹೋದರೆ ಬಾಹ್ಯವಾಗಿ ಸಾಂಸ್ಕೃತಿಕ ಮಾನ್ಯತೆಗಾಗಿ ಎಷ್ಟೆಷ್ಟು ವಾದ ಹೂಡಿದರೂ ಅದು ಮೀಸಲಾತಿಯ ಮಾದರಿಯ ಒತ್ತಾಯ ಆಗಬಹುದೇ ಹೊರತು ನಿಜವಾದ ಅಂತಃಸತ್ವದ ಬೆಳವಣಿಗೆ ಆಗಲಾರದು ಎನ್ನುವ ಸ್ವತ್ವ ಸ್ಥಾಪನೆಯು ಅವರ ಒಟ್ಟು ತಾತ್ವಿಕ ನಿಲುವಾಯಿತು.

ಕಳೆದ ನಾಲ್ಕು ದಶಕಗಳಲ್ಲಿ ಕನ್ನಡದಲ್ಲಿ ವ್ಯವಸ್ಥೆಯ ಅಂಚಿನ ನೆಲೆಯಲ್ಲಿದ್ದ ಎಷ್ಟೆಷ್ಟೋ ಜನರ ಅನುಭವಗಳು ಅಭಿವ್ಯಕ್ತಿಗೊಂಡು ಸಾಹಿತ್ಯಕವಾಗಿ ಮಾನ್ಯವೂ ಆಗಿರುತ್ತವೆ. ಒಟ್ಟು ಸಾಹಿತ್ಯ ಪರಂಪರೆ ಯಾವೆಲ್ಲ ಲಕ್ಷಣಗಳನ್ನು ಪ್ರಮಾಣವಲ್ಲವೆಂದು ಬದಿಗಿಟ್ಟಿತ್ತೋ ಅಂಥ ಅನೇಕ ಲಕ್ಷಣಗಳು ಪ್ರಬಲಗೊಂಡು ಅದೇ ಪರಂಪರೆಯ ಒಳಸೇರಿರುತ್ತವೆ. ತಿರಸ್ಕಾರಕ್ಕೆ ಬಲಿಯಾಗಿರುವ ಗುಣ, ಲಕ್ಷಣಗಳನ್ನೇ ಪ್ರಬಲಗೊಳಿಸುವುದು ಆಧುನಿಕೋತ್ತರ ಅಭಿವ್ಯಕ್ತಿಯ ತಂತ್ರಗಳಲ್ಲಿ ಒಂದು. ಇದರಿಂದ ಅವಹೇಳನದ್ದೆನ್ನುವುದು ಆ ಹೀನತೆಯ ಭಾವದಿಂದ ಹೊರಬಂದಿರುತ್ತದೆ ಎನ್ನುವುದು ಅದರ ಹಿಂದಿರುವ ರಾಜಕೀಯ ಗ್ರಹಿಕೆ. ಹೀಗಿದ್ದರೂ ಮೂಲಭೂತವಾಗಿ ಒಂದು ಆತಂಕ, ಹೀಗೆ ಕೇಂದ್ರಕ್ಕೆ ಬರುವಂತಾದ ಬರಹಗಾರಿಕೆಗೆ ಇನ್ನೂ ತಪ್ಪಿಲ್ಲ. ಈಗ ತನ್ನ ಅಸ್ಮಿತೆಯ ನೆಲೆಯನ್ನು ಎಲ್ಲಿ ಹಿಡಿದಿಡಬೇಕು? ವಿಶಾಲವಾದ ಬೃಹತ್ತಾಗಿ ತೋರುವ ಬೇರಾವುದೋ ಲೋಕದ ಹಾಗಿರುವ ಈ ಪರಂಪರೆಯಲ್ಲಿ ತನ್ನದಾದ ಅಸ್ಮಿತೆಯನ್ನು ಉಳಿಸಿಕೊಳ್ಳುವ ಬಗೆಗಿನ ಆತಂಕ. ವಿವಿಧ ಸಾಮೂಹಿಕ ಚಳವಳಿಗಳೊಂದಿಗೆ ಹೊಮ್ಮಿಬಂದ ಸ್ವಾಭಿಮಾನದ ಸಾಹಿತ್ಯವು ವ್ಯವಸ್ಥೆಯನ್ನು ಬದಲಾಯಿಸುವುದು ಎನ್ನುವ ಅಂದಿನ ಪ್ರಗತಿಪರ ಆಶಯವು ನಿಜವಾಗಿ ಈಡೇರಿದೆಯೆ?ಸಾಂಸ್ಕೃತಿಕ ಜೀವನವಾಗಲೀ ಯಾಜಮಾನ್ಯ ವ್ಯವಸ್ಥೆಯ ಆಲೋಚನಾಕ್ರಮವಿರಲೀ ಈ ಹೊಸ ಸಾಹಿತ್ಯದ ಹೊಮ್ಮುವಿಕೆಯಿಂದ ಚಲಿಸಲು ಆರಂಭವಾಗಿದೆಯೆ? ಕೊನೆಯ ಪಕ್ಷ ಪರಸ್ಪರ ಅನುಭೂತಿಯಿಂದ ಕಾಣುವಷ್ಟಾದರೂ ಸಾಂಸ್ಕೃತಿಕ ಮೌಲ್ಯಗಳು ಚಲಿಸಿವೆಯೇ? ಎನ್ನುವುದನ್ನು ಈಗ ಹೊರಳಿ ನೋಡುವುದು ಅವಶ್ಯಕ.

ಹೊಸ ಆಶ್ವಾಸನೆಗಳೊಂದಿಗೆ ಹುಟ್ಟಿಕೊಂಡ ಬರಹವೂ ತನಗೆ ಅನ್ಯ ಅಥವಾ ಪರಕೀಯವಾದದ್ದನ್ನು ತನ್ನ ದೃಷ್ಟಿಗೆ ಹೊರಗಿನದು ಎಂತಲೋ ಅಥವಾ ತನ್ನದಕ್ಕಿಂತ ಕಡಿಮೆ ಜೀವಪರವೆಂತಲೋ ಚಿತ್ರಿಸುವಷ್ಟಕ್ಕೇ ಸೀಮಿತವಾದರೆ ಪೂರ್ಣ ಮಾನವೀಯ ದೃಷ್ಟಿ ಎನ್ನುವುದು ಪುನಃ ಮರೀಚಿಕೆಯೇ ಆಗುತ್ತಾ ಇರುತ್ತದೆ. ಬಂಡಾಯದ ಆಶಯದ ದಾರಿಯಲ್ಲಿ ಸಾಗಲು ಸಂಪ್ರದಾಯವನ್ನು ಬದಿಗಿಡುವ ಹೆಸರಿನಲ್ಲಿ ಆಂತರಿಕವಾಗಿ ತಾರತಮ್ಯವನ್ನೇ ಇನ್ನೊಂದು ರೀತಿಯಲ್ಲಿ ಉಳಿಸಿಕೊಳ್ಳುವಂಥ ಅಭಿವ್ಯಕ್ತಿಯು ಹೆಚ್ಚುದೂರಕ್ಕೆ ಒಯ್ಯಲಾರದು. ಲಿಂಗತಾರತಮ್ಯವನ್ನು ಒಡೆಯಲು ಹುಟ್ಟಿಕೊಂಡ ಮಹಿಳಾ ಸಾಹಿತ್ಯಕ್ಕೂ ಇದೇ ಮಾತು ಅನ್ವಯಿಸುತ್ತದೆ.

ಮಹಿಳಾ ಸಾಹಿತ್ಯವೆಂದು ಕರೆಸಿಕೊಳ್ಳುವ ವಿದ್ಯಮಾನವೇ ಒಟ್ಟು ಸಾಹಿತ್ಯದ ಅಂಚಿನಲ್ಲೇ ತನ್ನನ್ನು ಗುರುತಿಸಿಕೊಳ್ಳುವುದೇ ಆಗಿರುತ್ತದೆಯೆ? ಮಹಿಳೆಯರು ತಮ್ಮದೇ ಲಿಂಗ ಸಮುದಾಯಕ್ಕಾಗಿ ಮಹಿಳಾ ಸಂಸ್ಕೃತಿಯ ಒಳಗೇ ಬರೆಯುತ್ತಾ ಅದಕ್ಕೆ ಉಪಸಾಂಸ್ಕೃತಿಕ ಲಕ್ಷಣವನ್ನು ಕೊಡುತ್ತಿರುವುದು ನಿಜ. ಇದರಿಂದ ಜನಪ್ರಿಯ ಮಹಿಳಾ ಕಥನವೆಂದು ಹೀನೈಸಲ್ಪಡುತ್ತಿದ್ದ ಸಾಹಿತ್ಯಮಾದರಿಗಳಿಗೆ ಚಾರಿತ್ರಿಕವಾಗಿ ಸ್ಥಾನವೂ ಸಿಕ್ಕಿರುತ್ತದೆ. ಮತ್ತು ಈ ಸಾಹಿತ್ಯಕ್ಕೆ ಹೊಸ ವಿಶಾಲವಾದ ಓದುಗವರ್ಗವೂ ಹುಟ್ಟಿಕೊಂಡಿರುತ್ತದೆ. ಮಹಿಳೆ ಪರಂಪರೆಯೊಳಗೇ ನಿಂತು ಬರೆಯುವುದರ ಮೂಲಕ ಮಹಿಳಾ ಬರಹಗಾರರು ತಮ್ಮ ಓದುಗರ ಆಸಕ್ತಿಗಳನ್ನು ರೂಪಿಸಲು ಯತ್ನಿಸಿರುತ್ತಾರೆ. ಮಹಿಳೆಯರಿಗೆ ಸಿಕ್ಕಿರುವ ಈ ಅವಕಾಶವು ಧನಾತ್ಮಕ ಎನ್ನುವುದನ್ನು ಒಪ್ಪಿಯೂ ಸಮಾನಂತರವಾಗಿ ಈ ಹೊಸ ಪರಂಪರೆ ಕೂಡ ಉಸಿರುಗಟ್ಟಿಸುವಂಥ ಬೇಲಿಗಳನ್ನು ಉತ್ಪಾದಿಸುವುದಿಲ್ಲವೆ? ಸ್ತ್ರೀತ್ವಸಾರ ಎನ್ನಲಾಗುವ ಪಾರಂಪಾರಿಕ ಲಕ್ಷಣಕ್ಕೆ ಹೊಂದಲೊಲ್ಲದ ಸಾಹಿತ್ಯ ಮಾದರಿಗಳನ್ನು, ತನ್ನ ಚೌಕಟ್ಟಿಗೆ ಸೇರಲಾರದ್ದನ್ನು ಇದು ಒಳಗೊಳ್ಳಬಲ್ಲದೆ? ಉದಾಹರಣೆಗೆ, ಇಂದಿನ ದಿನಗಳಲ್ಲಿ ವೈಭವೀಕರಣಕ್ಕೆ ಒಳಗಾಗುತ್ತಿರುವ ತಾಯಿಎನ್ನುವ ಸ್ತ್ರೀತ್ವದ ಮಾದರಿಗೆ ಹೊಂದದ ಅಥವಾ ಅದನ್ನು ಒಲ್ಲದ. ಅದನ್ನೇ ಅಮಾನವೀಯ ಎನ್ನುವಂಥ ತೃತೀಯ ಲಿಂಗದ ಅನುಭವದ ಅಭಿವ್ಯಕ್ತಿ 'ಮಹಿಳಾ ಸಾಹಿತ್ಯ'ಕ್ಕೂ ಬಹುಲೈಂಗಿಕ ಸಂಬಂಧವನ್ನೇ ಮಾನದಂಡವಾಗಿ ಹೊಂದಿರುವ ಒಟ್ಟು ಸಾಹಿತ್ಯಕ್ಕೂ ಒಮ್ಮೆಗೇ ಸಮಸ್ಯೆಯಾಗಿ ಎದುರಾಗಲಾರದೇ? ಮತ್ತು ಸದಾ ಅನ್ಯಲಿಂಗ ಸಂಬಂಧಿತ ತಾರತಮ್ಯದತ್ತಲೇ ಮುಖಮಾಡಿ ಬೆಳೆದುಕೊಂದು ಬಂದಿರುವ ಮತ್ತು ಗಂಡಿನ ಮೂಲಕವೇ ಶೋಷಣೆಯನ್ನು ವ್ಯಾಖ್ಯಾನಿಸುತ್ತ ಬಂದಿರುವ ಮಹಿಳಾ ಸಾಹಿತ್ಯವೆನ್ನುವ ಉಪಸಾಂಸ್ಕೃತಿಕ ಜಾಗವು ಜೆಂಡರ್ ಪ್ರಶ್ನೆಯ ಈ ಅನ್ಯ ಮಾದರಿಯನ್ನು ನಿಜವಾಗಿ ಹೇಗೆ ಭರಿಸುತ್ತದೆ? ಆಮೂಲಾಗ್ರವಾಗಿ ಜೆಂಡರ್ ಪ್ರಶ್ನೆಯನ್ನು ಎದುರಿಸಲಾರದ ಅಥವಾ ಅದಕ್ಕೆ ಸಿದ್ಧವಿಲ್ಲದ ಆದರೆ ಯಥಾಸ್ಥಿತಿವಾದಿ ವ್ಯವಸ್ಥೆಯಲ್ಲೆ ತನ್ನ ಪ್ರತ್ಯೇಕ ಅಸ್ಮಿತೆಗೆ ಅನುಮೋದನೆ ಸಿಕ್ಕಲೆಂದು ಕಾಯುವುದು ಅದೇ ವ್ಯವಸ್ಥೆಯಿಂದ ಪೋಷಿತಭಾವದ ಒಂದು ಜಾಗವಾಗಿರುತ್ತದೆ.

ಒಂದು ವಿಚಾರ ಅಥವಾ ಪ್ರಭಾವವು ಕೆಲವು ಸಲ ಹೇರಿಕೊಂಡು ಬಂದು ಒಂದು ಪರಂಪರೆಯನ್ನು ನೇಯಲು ತೊಡಗುತ್ತದೆ.ಅದರ ಉದ್ದೇಶಿತ ಗುರಿಯಾಗಿರುವ ಸಾರ್ವಜನಿಕರು ಆ ವಿಚಾರವನ್ನು ಒಪ್ಪುತ್ತಾ, ಅದನ್ನು ಮುನ್ನಡೆಸಲು ಅದನ್ನು ಕೈಗೆತ್ತಿಕೊಂದು ಸ್ವೀಕರಿಸಬೇಕಿರುತ್ತದೆ. ಒಂದೇ ಗುಂಪಿನ ಶೇಷ್ಠತೆ, ಆಳ್ತನ, ಅಧಿಕಾರಗಳನ್ನು ದಮನಕಾರಿ ಎಂದು ಗುರುತಿಸಲು ಮಾನಸಿಕವಾಗಿ ಸಿದ್ಧವಾಗಬೇಕಿರುತ್ತದೆ. ಹೀಗೆ ಆಗಲು ಒಮ್ಮೆ ಉಪಸಾಂಸ್ಕೃತಿಕ ಜಾಗವನ್ನು ಕಟ್ಟಿಕೊಂಡು ಕ್ಷೇಮವಾಗಿ ಕಾಯ್ದರೆ ಸಾಕಾಗುವುದಿಲ್ಲ. ಒಂದು ಪರಂಪರೆಯ ಒಳಗಿದ್ದುಕೊಂಡು ಬರೆಯುವುದಕ್ಕೂ, ಅದರ ನಿರೀಕ್ಷೆಗಳಿಂದ ಹೊರಬಂದು ಅದು ಹೇರುವಂಥ ನಿರ್ಬಂಧಗಳಿಂದ ಮುಕ್ತವಾಗಿ ಆ ಪರಂಪರೆ ಎನ್ನುವ ಗ್ರಹಿಕೆಯನ್ನೇ ಪ್ರಶ್ನಿಸುವಂತೆ ಬರೆಯುವುದಕ್ಕೂ ಇರುವ ಅಂತರ ನಮಗೆ ಸ್ಪಷ್ಟವಾಗಬೇಕು. ಪರಂಪರೆ ನಮ್ಮ ಅಸ್ಮಿತೆಯೊಡನೆ, ಆ ಅಸ್ಮಿತೆ ವೈಯ್ಯಕ್ತಿಕವಿರಲಿ, ಸಾಮೂಹಿಕವಿರಲಿ,ಬೇರ್ಪಡಿಸಲಾಗದ ಹಾಗೆ ಬೆಸೆದುಕೊಂಡಿರುತ್ತದೆ. ನಾವು ಯಾರು ಎಂದು ಅರಿತುಕೊಳ್ಳುವುದು ಕೆಲಮಟ್ಟಿಗೆ ನಮ್ಮ ಹಿಂದಿನ ಪರಂಪರೆಯತ್ತ ನೋಡುವುದೂ ಆಗಿರುತ್ತದೆ. ನಮ್ಮ ಅಸ್ಮಿತೆಯನ್ನು ಆ ಹಿಂದಿನ ಪರಂಪರೆಯಿಂದ ಸಾರಸಂಗ್ರಹಿಸಿಕೊಳ್ಳುವುದಕ್ಕೂ ಅದೇ ಒಂದು ಪರಾಮರ್ಶನ ಬಿಂದು. ಗಂಡಾಳ್ತನದ ಸಾಹಿತ್ಯಸಮುದಾಯವು ಕಟ್ಟಿರುವ ಶ್ರೇಣ್ಯ ಸಾಹಿತ್ಯದ ಅಳತೆಯ ಮಾನದಂಡಗಳಲ್ಲಿ ಆ ವ್ಯವಸ್ಥೆಯು ತನ್ನನ್ನೇ ಅಧಿಕಾರದಲ್ಲಿ ಕಾಯ್ದುಕೊಳ್ಳಲು ಬಾಗಿಲು ಕಾಯುವ ಕೆಲಸವನ್ನೂ ಮಾಡುತ್ತಿರುತ್ತದೆ. ಈ ಸಾಹಿತ್ಯಕ ಅಧಿಕಾರವನ್ನು ಗುರುತಿಸಿ, ಯಾವುದಾದರೊಂದು ರೀತಿಯಲ್ಲಿ ಅದಕ್ಕೇ ತಲೆಬಾಗಿದವರಿಗೆ ಶ್ರೇಣಿ ತಲೆದೂಗಿ ಒಳಬರಲು ಒಪ್ಪಿಗೆ ನೀಡಬಹುದು. ಈ ಒಪ್ಪಿಗೆ ಯಾವಾಗಲೂ ಹೊಸ ಮೌಲ್ಯಕ್ಕೆ ಸಿಕ್ಕಿರುತ್ತದೆ ಎಂದೇನೂ ಇಲ್ಲ. ರಾಜಿ ಮಾಡಿಕೊಂದಾಗ ಕಷ್ಟವಿಲ್ಲದೆಯೂ ಅಂಥ ಒಪ್ಪಿಗೆ ಲಭ್ಯವೇ ಇರುತ್ತದೆ.ಹೀಗಾಗಿ ಪ್ರಾತಿಭಟಿಕರಾಗಿ ಉಳಿದೂ ತಮ್ಮದೊಂದು ಅಸ್ಮಿತೆಗೆ ಮಾನ್ಯತೆ ಸಿಕ್ಕಲೆಂದು ಕಾಯದೆ, ದಮನಕಾರಿ ಮೌಲ್ಯಗಳೊಂದಿಗೆ ಸದಾ ಸಂಘರ್ಷಕ ಜಾಗದಲ್ಲೇ ಉಳಿದು ಬರೆಯುವುದು ಕತ್ತಿಯಂಚಿನ ದಾರಿಯೇ ಸರಿ.

ಪರಂಪರೆಯ ಮೌಲಿಕತೆಯನ್ನು ನಾವು ಹೇಗೆ ಒಪ್ಪುತ್ತಿದ್ದೇವೆ ಎನ್ನುವ ಬಗ್ಗೆ ಅಥವಾ ಅದನ್ನು ನಾವು ಅರಗಿಸಿ ಅಂತಸ್ಥವಾಗಿಸಿಕೊಳ್ಳುತ್ತಿರುವ ಬಗ್ಗೆ ನಾವು ಸದಾ ಎಚ್ಚರವಾಗಿಯೇ ಇದ್ದೇವೆ ಎಂದು ಅನ್ನಿಸುವುದಿಲ್ಲ. ಅಷ್ಟೊಂದು ಎಚ್ಚರದಲ್ಲಿದ್ದೂ ಸೃಜನಶೀಲವಾಗಿ ಬರೆಯುವುದು ಎನ್ನುವುದೂ ಒಂದು ಪ್ರಶ್ನೆಯೇ. ಅದನ್ನು ಎತ್ತಿ ಹಿಡಿದಷ್ಟೂ ಅದನ್ನು ನ್ಯಾಯಯುತವಾಗಿಸುವಲ್ಲಿ ಅದರ ಪ್ರಮೇಯಗಳ ಜೊತೆ ಕೈಗೂಡಿಸುತ್ತಿರುತ್ತೇವೆ. ವ್ಯವಸ್ಥೆಯ ವಿರುದ್ಧ ಪ್ರತಿರೋಧ ತೋರುವ ಬದಲು ಉಪಸಾಂಸ್ಕೃತಿಕ ಜಾಗವೊಂದನ್ನು ಕಟ್ಟಿಕೊಳ್ಳುವುದರಲ್ಲಿಯೇ ವ್ಯಂಗ್ಯವಿರುತ್ತದೆ.

ಸಾಂಸ್ಕೃತಿಕ ಆಳ್ತನದಲ್ಲಿ ಕಡಿಮೆ ಅವಕಾಶ ಪಡೆದಂಥ ಗುಂಪು ತನ್ನ ಸೀಮಾಂತತೆಯನ್ನು ಒಪ್ಪುತ್ತಲೇ ಪರಂಪರೆಯ ತಥಾಕಥಿತ ಸತ್ಯಗಳನ್ನು ಮೂಕವಾಗಿ ಅನುಮೋದಿಸುತ್ತಲೂ ಉಳಿದಿರುತ್ತದೆ.ಒಬ್ಬರು ಪರಂಪರೆಯ ಸಂವೇದನೆಯೇ ಇಲ್ಲದವರ ಹಾಗೆ,ಬರೆಯಲು, ವಿಚಾರ ಮಾಡಲು. ಬೋಧಿಸಲು ಕೊನೆಗೆ ಓದಲೂ ಹೊರಟರೆ ಏನಾಗುತ್ತದೆ? ಹೆರಾಲ್ಡ್ ಬ್ಲೂಮ್ ಎಂಬಾತ ಈ ಪ್ರಶ್ನೆ ಕೇಳುತ್ತಾನೆ. ಅವನೇ ಹೇಳುವಹಾಗೆ, ಏನೂ ಆಗುವುದಿಲ್ಲ. ಏಕೆಂದರೆ ಪರಂಪರೆ ಎನ್ನುವುದರ ಜೊತೆಗಿನ ನಮ್ಮ ಸಂಬಂಧ ಇದೆ ಎನ್ನುವುದನ್ನು ಸೂಚಿಸುವ ಸಂಗತಿ ಯಾವುದೋ ಅದು ಇದ್ದೇ ಇರುತ್ತದೆ.ಪರಂಪರೆ ಎಂದರೇನೇ ಹಿಂದಿನ ಒಂದು ತಲೆಮಾರನ್ನು, ಅದರ ಪ್ರಭಾವವನ್ನು ಮುಂದುವರೆಸುವಿಕೆ. ಈಗಿರುವ ಸಮಸ್ಯೆ ಎಂದರೆ ನಾವು ಎತ್ತಿಹಿಡಿಯದೆ, ಬಲಪಡಿಸದೆ ಅದರ ನಿರೀಕ್ಷೆಗಳಿಗೆ ಜಗ್ಗದೆಯೇ ಸ್ವಾಯತ್ತವಾಗಿ ಉಳಿದು ಬರೆಯುವುದು ಹೇಗೆ ಎನ್ನುವುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.