ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರಂಪರೆಯ ಅಚ್ಚಿನಲ್ಲಿ ಸುಸ್ಥಿರ ಉಡುಪು

Last Updated 22 ಜುಲೈ 2016, 19:30 IST
ಅಕ್ಷರ ಗಾತ್ರ

ಸಾಂಪ್ರದಾಯಿಕ ಧಾಟಿಯಲ್ಲೇ ಬಟ್ಟೆ ನೇಯ್ದು ಅದಕ್ಕೆ ಆಧುನಿಕ ವಿನ್ಯಾಸ ಕೊಟ್ಟು ವಸ್ತ್ರ ಪರಂಪರೆಯನ್ನು ಮುಂದುವರೆಸುವ ಸಿದ್ಧಾಂತ ಅನುಸರಿಸುತ್ತಿದ್ದಾರೆ ವಿನ್ಯಾಸಕಿ ಜೂಲಿ ಬೆಂಡ್‌ ಖಾಲೆ. ಕೈಮಗ್ಗಕ್ಕೇ ಆದ್ಯತೆ ನೀಡಿ ‘ನೈಸರ್ಗಿಕ ಬಟ್ಟೆ’ ವಿನ್ಯಾಸ ಮಾಡುತ್ತಾ ಆ ಮೂಲಕ ರೈತರು, ನೇಕಾರರಿಗೂ ನೆರವಾಗುವ ಹಂಬಲ ಅವರಿಗಿದೆ.

ಮಹಾರಾಷ್ಟ್ರ ಮೂಲದ ವಿನ್ಯಾಸಕಿ ಜೂಲಿ ಬೆಂಡ್‌ ಖಾಲೆ ವಿನ್ಯಾಸ ಕ್ಷೇತ್ರದಲ್ಲಿ ತಮ್ಮ ಗುರುತು ಉಳಿಸಲು ಆರಿಸಿಕೊಂಡಿದ್ದು ‘ಸುಸ್ಥಿರ’ ಹಾದಿಯನ್ನು. ಬಟ್ಟೆ ನೇಯುವ  ಪುರಾತನ ಸಂಪ್ರದಾಯವನ್ನು ಹಾಗೆಯೇ ಉಳಿಸಿಕೊಂಡು ಅದನ್ನು ಆಧುನೀಕತೆಗೆ ಒಗ್ಗಿಸಿಕೊಳ್ಳುವ ಪ್ರಯತ್ನದ ಫಲವಾಗಿ ಹಲವು ಸುಸ್ಥಿರ ವಿನ್ಯಾಸಗಳ ಸಂಗ್ರಹವನ್ನು ಹೊರ ತಂದಿದ್ದಾರೆ.

ನೈಸರ್ಗಿಕ ಉತ್ಪನ್ನಗಳಿಂದಲೇ ಸಾಕಷ್ಟು ಫ್ಯಾಷನ್‌ ಶೋಗಳಲ್ಲಿ ಮೆಚ್ಚುಗೆ ಪಡೆದಿರುವ ಅವರು ಬೆಂಗಳೂರಿನಲ್ಲೂ ತಮ್ಮ ಸಂಗ್ರಹದ ಮೊದಲ ಪ್ರದರ್ಶನ ಹಮ್ಮಿಕೊಂಡಿದ್ದಾರೆ. ‘ಝೂಲೀ’  ಬ್ರಾಂಡ್‌ ಹೆಸರಿನಡಿಯಲ್ಲಿ ಪ್ರದರ್ಶನವನ್ನು ಜುಲೈ 22 ಹಾಗೂ 23ರಂದು ಹಮ್ಮಿಕೊಳ್ಳಲಾಗಿದೆ.

ಬೆಂಗಳೂರು ವಸ್ತ್ರ ವಿನ್ಯಾಸ ಕ್ಷೇತ್ರದಲ್ಲಿ ಸಾಕಷ್ಟು ಮುಂದಿದೆ ಎನ್ನುವುದು ಜೂಲಿ ಅಭಿಪ್ರಾಯ. ‘ಇಲ್ಲಿ  ಖಾದಿ ಹಾಗೂ ರೇಷ್ಮೆಯಂಥ ಕೈಮಗ್ಗಕ್ಕೆ ಮಹತ್ವ ಕೊಡುವ ಮಂದಿ ಹೆಚ್ಚಿದ್ದಾರೆ, ಗುಣಮಟ್ಟ, ಶೈಲಿಗೆ ಯಾವತ್ತೂ ಬೆಲೆ ಇದೆ’ ಎಂದು ಶ್ಲಾಘಿಸುತ್ತಾರೆ.

ಜೂಲಿ ವಸ್ತ್ರವಿನ್ಯಾಸ ಕ್ಷೇತ್ರವನ್ನು ಅತಿ ಪ್ರೀತಿಯಿಂದ ನೆಚ್ಚಿಕೊಂಡವರು. ಯಾವುದೇ ಪ್ರಕಾರದ ಕಲೆಯನ್ನೂ ಗೌರವಿಸುವ ಅವರಿಗೆ, ವಸ್ತ್ರವಿನ್ಯಾಸ ಕ್ಷೇತ್ರ ಸೆಳೆದದ್ದು ಆಕಸ್ಮಿಕವೇನಲ್ಲ. ವಿನ್ಯಾಸ ಎಂಬುದು ಅವರಿಗೆ ಸ್ವಾಭಾವಿಕವಾಗೇ ಒಲಿದಿತ್ತು. ಶಾಲೆ ನಂತರ ಅಪಾರೆಲ್ ಡಿಸೈನಿಂಗ್‌ ಕಲಿತು ನೇರ ಈ ಕ್ಷೇತ್ರಕ್ಕೇ ಬಂದವರು.

ಆದರೆ ಎಲ್ಲರೊಳಗೊಂದಾಗದೇ ತಮ್ಮದೇ ಶೈಲಿಯಿಂದ ಗುರುತಿಸಿಕೊಳ್ಳಬೇಕೆಂಬ ಅವರ ಹಂಬಲಕ್ಕೆ ನೀರೆರೆದಿದ್ದು ಸುಸ್ಥಿರ ಹಾದಿ, ಜೊತೆಗೆ ಸಾಮಾಜಿಕ ಕಾಳಜಿ. ಅದನ್ನೇ ತಮ್ಮ ಮಾಧ್ಯಮವಾಗಿಸಿಕೊಂಡರು.

‘ಬ್ರಿಟಿಷರು ಬರುವ ಮುನ್ನ ನೇಯ್ದ ಖಾದಿಯನ್ನೇ ಬಳಸುತ್ತಿರಲಿಲ್ಲವೇ? ಕೈಗಾರೀಕರಣದ ನಂತರ ಬಟ್ಟೆ ಉತ್ಪಾದನೆ ಪ್ರಕ್ರಿಯೆಯೂ ಬದಲಾಯಿತು, ಗುಣಮಟ್ಟವೂ ಕುಂದಿತು. ಸಾಮಾಜಿಕ ಸಮತೋಲನ ತಪ್ಪಿತು’ ಎಂದು ಬೇಸರಿಸುತ್ತಾರೆ. ಒಳ್ಳೆಯದನ್ನು ಬಿಟ್ಟುಕೊಡಬಾರದು ಎಂಬ ಉದ್ದೇಶಕ್ಕೆ ಗಟ್ಟಿಯಾಗಿ ಅಂಟಿಕೊಂಡು ಖಾದಿಯನ್ನು ತಮ್ಮದಾಗಿಸಿಕೊಂಡಿದ್ದಾರೆ.

ವಸ್ತ್ರ ವಿನ್ಯಾಸ ಎಂಬುದು ಒಬ್ಬರ ಕ್ರಿಯಾಶೀಲತೆಯಲ್ಲ ಎನ್ನುವ ಅವರು, ರೈತರಿಂದ ಹತ್ತಿಯನ್ನು ತರಿಸಿಕೊಳ್ಳುತ್ತಾರೆ. ಮಳೆ ಆಧಾರಿತ ಸಾವಯವ ಹತ್ತಿ. ಜೊತೆಗೆ ತಲತಲಾಂತರದಿಂದ ನೇಯ್ಗೆಯನ್ನೇ ಕುಲಕಸುಬಾಗಿ ಮುಂದುವರೆಸಿಕೊಂಡು ಬಂದ ಗ್ರಾಮೀಣ ನೇಕಾರರು, ನೂಲುವವರನ್ನು, ಕಲಾಕಾರರನ್ನು ವಿನ್ಯಾಸಕ್ಕೆ ಒಳಗೊಂಡಿದ್ದಾರೆ.

ವಸ್ತ್ರ ತಯಾರಿಕೆ ಪ್ರಕ್ರಿಯೆ ಸಾಂಪ್ರದಾಯಿಕ ವಾಗಿಯೇ ನಡೆಯುತ್ತದೆ.  ನಂತರದ್ದು ಅದನ್ನು ಸಮಕಾಲೀನ  ಶೈಲಿಗೆ ಒಗ್ಗಿಸಿಕೊಳ್ಳುವ ಕಸರತ್ತು.  ‘ಸಂಪ್ರದಾಯ ನಿರಂತರ’ ಎಂಬ ಧ್ಯೇಯ ಸಾರುವ ಪ್ರಯತ್ನ ಇವರದ್ದು.

‘ನನ್ನ ಶೈಲಿ, ನನ್ನ ಆಲೋಚನೆಗಳನ್ನೇ ನನ್ನ ವಿನ್ಯಾಸಗಳೂ ಬಿಂಬಿಸುತ್ತವೆ’ ಹೇಳಿಕೊಳ್ಳುವ ಜೂಲಿ ಅವರಿಗೆ ಈ ಕ್ಷೇತ್ರ ಬದುಕಿಗೆ ಖುಷಿ, ಸಾರ್ಥಕತೆಯನ್ನೂ ಕೊಟ್ಟಿದೆ. ‘ನನ್ನ ಕೆಲಸದ ಸಲುವಾಗಿ ನೇಕಾರರು, ಕಲಾಕಾರರು ಇರುವ ಗ್ರಾಮಗಳಿಗೆ ಹೋದಾಗ ಆ ಪಯಣ, ಅವರ ಮನೆಯಲ್ಲಿನ ವಾಸ, ಅಲ್ಲಿನ ಜೀವನಶೈಲಿ ಎಲ್ಲವೂ ಖುಷಿ ನೀಡಿದೆ. ಅದನ್ನು ಮನಸಾರೆ ಆಸ್ವಾದಿಸುತ್ತೇನೆ’ ಎಂದು ಖುಷಿಯಿಂದ ಹೇಳಿಕೊಳ್ಳುತ್ತಾರೆ.

‘ವಿನ್ಯಾಸ ಕ್ಷೇತ್ರದಲ್ಲಿ ಎಲ್ಲವೂ ನಿರಾಳವಾಗಿ ಸಾಗುತ್ತದೆ ಎನ್ನುವಂತಿಲ್ಲ. ಇಲ್ಲೂ ಕೆಲವು ಸವಾಲುಗಳಿವೆ. ಅದರಲ್ಲೂ ಸಾವಯವ ಬಟ್ಟೆಯಲ್ಲಿ ಇನ್ನಷ್ಟು ಹೆಚ್ಚು.
ವಸ್ತ್ರ ವಿನ್ಯಾಸ ಮಾಡುವಾಗ ಅಂತರರಾಷ್ಟ್ರೀಯ ಬ್ರಾಂಡ್‌ಗಳನ್ನಷ್ಟೇ ಗಮನಿಸುವ ಗ್ರಾಹಕರಿಗೆ ಖಾದಿಯನ್ನೂ ಆಕರ್ಷಕವಾಗಿ ತೋರಿಸಬೇಕು. ನಮ್ಮ ಸಂಪ್ರದಾಯಕ್ಕೆ ಅಂತರರಾಷ್ಟ್ರೀಯ ಮಾನ್ಯತೆ ಸಿಗುವಂತೆ ಮಾಡಬೇಕು. ಜೊತೆಗೆ ವೃತ್ತಿಪರತೆ,  ಸಮಯ ನಿರ್ವಹಣೆ... ಹೀಗೆ ಚಿಕ್ಕ ಚಿಕ್ಕ ವಿಷಯಗಳೂ ಒಂದೊಂದು ಹೆಜ್ಜೆಯಾಗುತ್ತವೆ. ಎಲ್ಲೂ ತಪ್ಪುವಂತಿಲ್ಲ’ ಎನ್ನುತ್ತಾರೆ.

ಬೇರೆಯವರ ಟ್ರೆಂಡ್ ಅನುಸರಿಸುವ ಬದಲು ತಮ್ಮದೇ ಹೊಸ ಪ್ರಯೋಗಗಳನ್ನು ಮಾಡುತ್ತಾ ಗ್ರಾಹಕರಿಗೆ ಹೊಸತು ನೀಡುವುದರಲ್ಲೇ ಇವರಿಗೆ ನಂಬಿಕೆಯಂತೆ. ಇದಕ್ಕಾಗಿ ಯಾವುದೇ ಪ್ರದೇಶದ ವಿಶೇಷ ಕಲೆಯನ್ನು ವಿನ್ಯಾಸದಲ್ಲಿ ಅಳವಡಿಸಿಕೊಳ್ಳುತ್ತಾರೆ. ಮಹಾರಾಷ್ಟ್ರದ ಪೈಥಾನ್ ಕಲೆ, ಆಂಧ್ರದ ಇಕ್ಕತ್, ಜೊತೆಗೆ ಕರ್ನಾಟಕದ ಕಸೂತಿ ಕಲೆಯಲ್ಲೂ ಪ್ರಯೋಗಗಳನ್ನು ಮಾಡಿದ್ದಾರೆ. 

ರೇಷ್ಮೆಯೊಂದಿಗೆ ಖಾದಿ ಬೆರೆಸುವ ಇವರ ಪ್ರಯತ್ನ ಹೆಚ್ಚು ಸಫಲವಾಗಿದೆಯಂತೆ. ನೋಡಲು ಹೊಸತು ಎನಿಸುವ  ಕಲೆ, ವಿನ್ಯಾಸದಿಂದ ರೈತರಿಗೂ ಅನುಕೂಲವಾಗಬೇಕು ಎಂಬ ಕಳಕಳಿಯೂ ಇದರೊಂದಿಗಿದೆ.‘ಇಂಥ ಉತ್ಪನ್ನಕ್ಕೆ ಬೇಡಿಕೆ ಹೆಚ್ಚಿದರೆ, ರೈತರ ಆರ್ಥಿಕ ಸ್ಥಿತಿಗತಿ ಬದಲಾಗುತ್ತದೆ.

ನೇಕಾರರಿಗೆ ಜೀವ ಬಂದ ಹಾಗಾಗುತ್ತದೆ. ಪರಿಸರ ಸ್ನೇಹಿಯೂ ಆಗಿರುವ ಈ ವಸ್ತ್ರಕ್ಕೆ ಹೆಚ್ಚಿನ ಮಾನ್ಯತೆ ಸಿಗಬೇಕು. ಪುಟ್ಟ ಪುಟ್ಟ ದಾರಿಗಳಿಂದ ದೊಡ್ಡ ಬದಲಾವಣೆ ಸಾಧ್ಯ. ಆದರೆ  ‘ಮತ್ತೆ ಹಿಂದಕ್ಕೆ ಹೋದರೆ’ ಮಾತ್ರ ಸಾಧ್ಯ ಎಂದು ಭರವಸೆ ವ್ಯಕ್ತಪಡಿಸುತ್ತಾರೆ.

ವಸ್ತ್ರ ಸಂಗ್ರಹ ಪ್ರದರ್ಶನ
ಜೂಲಿ ಬೆಂಡ್‌ಖಾಲೆ ವಿನ್ಯಾಸ ಮಾಡಿರುವ ವಸ್ತ್ರಗಳ ಪ್ರದರ್ಶನ ಸ್ಯಾಂಕಿ ರಸ್ತೆಯ ಐಟಿಸಿ ವಿಂಡ್ಸರ್‌ ಎದುರಿನ  ರೈನ್‌ಟ್ರೀಯಲ್ಲಿ  ನಡೆಯುತ್ತಿದೆ. ಇಂದು (ಜುಲೈ 23) ಕೊನೆಯ ದಿನ. ಸಮಯ– ಬೆಳಿಗ್ಗೆ 10ರಿಂದ ಸಂಜೆ7. (₹1,500ರಿಂದ ಬೆಲೆ ಆರಂಭ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT