ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರಂಪರೆಯ ಸತ್ವದಲ್ಲಿ ಬೆಳೆದ ಕಲಾ ಚೇತನ

Last Updated 25 ನವೆಂಬರ್ 2014, 19:30 IST
ಅಕ್ಷರ ಗಾತ್ರ

ಪೂರ್ವಿಕರು ಮಾಡುತ್ತಿದ್ದ ಕುಂಬಾರಿಕೆಯ ಕಸುಬಿನಿಂದ ಪ್ರೇರಣೆ ಪಡೆದು ಟೆರ್ರಾಕೋಟಾ (ಅರೆ ಉಬ್ಬು ಶಿಲ್ಪ) ಕಲಾವಿದನಾಗಿ ಬದಲಾದವರು ಶಿವಮೊಗ್ಗದ ಹಾರನಹಳ್ಳಿಯ ಎನ್‌.ಬಿ. ಚೇತನ್‌ ಕುಮಾರ್‌.

ತಾತ, ಮುತ್ತಾತನಿಂದ ಬಳುವಳಿಯಾಗಿ ಬಂದ ಕುಂಬಾರಿಕೆಯ ವೃತ್ತಿಯನ್ನು ಚೇತನ್‌ ಕುಮಾರ್‌ ಅವರ  ತಂದೆ ಕೂಡ ಮುಂದುವರೆಸಿಕೊಂಡು ಬಂದಿದ್ದರು. ಇದೇ ಅವರ ಉಪಜೀವನಕ್ಕೆ ಮೂಲವಾಗಿದ್ದರಿಂದ ಬೇರೆ ದಾರಿ ಇರಲಿಲ್ಲ. ತಾತ ಹಾಗೂ ತಂದೆ ಮಡಿಕೆ ಮಾಡುತ್ತಿದ್ದುದ್ದನ್ನು ಬಾಲ್ಯದಿಂದಲೇ ಸೂಕ್ಷ್ಮವಾಗಿ ಗಮನಿಸುತ್ತಿದ್ದ ಚೇತನ್‌ ದಿನ ಕಳೆದಂತೆ ಮಡಿಕೆ ತಯಾರಿಕೆಗೆ ಮುಂದಾದರು.

ಇದರಲ್ಲೇ ಹೆಚ್ಚಿನ ಆಸ್ಥೆ ವಹಿಸಲು ಶುರು ಮಾಡಿದರು. ಮಡಿಕೆಗಳಿಗೆ ಹೊಸ ವಿನ್ಯಾಸ ಕೊಡುತ್ತ ವಿನೂತನವಾದ ಪ್ರಯೋಗಗಳಿಗೆ ಕೈ ಹಾಕಿದರು. ಇದರಲ್ಲೇ ಬದುಕು ಕಂಡುಕೊಳ್ಳಬೇಕೆಂದು ನಿರ್ಧರಿಸಿ ಪ್ರೌಢ ಶಿಕ್ಷಣವನ್ನು ಪೂರ್ಣಗೊಳಿಸಿದ ಬಳಿಕ ಬೆಂಗಳೂರಿನಲ್ಲಿ ಆರು ತಿಂಗಳ ಡಿಪ್ಲೊಮಾ ಇನ್‌ ಸೆರಾಮಿಕ್ಸ್‌ ಕೋರ್ಸ್‌ ಮುಗಿಸಿದರು. ಇದರಿಂದ ಟೆರ್ರಾಕೋಟಾ ಕಲೆಯ ಆಳ–ಅಗಲ ತಿಳಿದುಕೊಳ್ಳಲು ಸಹಾಯವಾಯಿತು.

‘ಮಾಲ್ಗುಡಿ ಡೇಸ್‌’ಗೆ ಸೆಟ್‌ ವರ್ಕ್‌
ಪರಿಚಿತರ ಮೂಲಕ ‘ಮಾಲ್ಗುಡಿ ಡೇಸ್‌’ ಧಾರಾವಾಹಿಯಲ್ಲಿ ಸೆಟ್‌ವರ್ಕ್‌ ಕೆಲಸ ಮಾಡುವ ಅವಕಾಶ ಒಲಿದು ಬಂತು. ಈ ಕೆಲಸ ಅನೇಕರ ಮೆಚ್ಚುಗೆಗೆ ಕಾರಣವಾಯಿತು. ಅಲ್ಲದೇ ನಟ ಶಂಕರನಾಗ್‌ ಅವರೊಂದಿಗೆ ಸಖ್ಯವೂ ಬೆಳೆಯಿತು. ಬಳಿಕ ‘ಮುತ್ತಿನಹಾರ’ ಚಿತ್ರಕ್ಕೆ ಆಸ್ಪತ್ರೆಯ ಸೆಟ್‌ ಮತ್ತು ‘ಯುಗಪುರುಷ’ ಚಿತ್ರಕ್ಕಾಗಿ ಕಾಳಿ ವಿಗ್ರಹವನ್ನು ತಯಾರಿಸಿಕೊಟ್ಟರು. ನಂತರ ಸಾಲು ಸಾಲು ಚಿತ್ರಗಳಲ್ಲಿ ಸೆಟ್‌ ಸೇರಿದಂತೆ ಇತರ ಕಲಾಕೃತಿಗಳನ್ನು ಮಾಡಿಕೊಟ್ಟರು. ಹೀಗೆ ಎಲ್ಲೆಡೆ ಅವರ ಕೀರ್ತಿ ಹರಡುತ್ತ, ಒಂದೊಂದಾಗಿ ಅವಕಾಶಗಳ ಬಾಗಿಲು ತೆರೆದುಕೊಳ್ಳಲಾರಂಭಿಸಿದವು.

ಐಷಾರಾಮಿ ಹೋಟೆಲ್‌ಗಳಲ್ಲೂ ಕೈಚಳಕ
ಬೆಂಗಳೂರಿನಲ್ಲಿ ನಡೆದ ಸಮಾರಂಭವೊಂದರಲ್ಲಿ ಚೇತನ್‌ ಕುಮಾರ್‌ ಅವರ ಕಲೆಯನ್ನು ಮೆಚ್ಚಿ ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆಯವರು ಅವರ ಬೆನ್ನು ತಟ್ಟಿದ್ದರು. ಇವರ ಕೆಲಸದಿಂದ ಪ್ರಭಾವಿತರಾಗಿ ಬೆಂಗಳೂರಿನ ಹಲವು ಪ್ರತಿಷ್ಠಿತ ಐಷಾರಾಮಿ ಹೋಟೆಲ್‌ಗಳು, ಶ್ರೀಮಂತರು ಅವರ ಮನೆಗಳ ಗೋಡೆಗಳ ಮೇಲೆ ಚೇತನ್‌ ಕುಮಾರ್‌ ಅವರಿಂದ ಅರೆ ಉಬ್ಬು ಶಿಲ್ಪದ ಪ್ರತಿಕೃತಿಗಳನ್ನು ಮಾಡಿಸಿಕೊಂಡಿದ್ದಾರೆ. ಬುದ್ಧನ ಧ್ಯಾನದ ಭಂಗಿ, ರಾಧಾಕೃಷ್ಣ ಜೋಕಾಲಿ ಆಡುತ್ತಿರುವುದು, ಕೃಷ್ಣನ ಬಾಲ್ಯ ಅವತಾರ ಇವುಗಳಲ್ಲಿ ಪ್ರಮುಖವಾಗಿವೆ. ಅರೆ ಉಬ್ಬು ಶಿಲ್ಪಕ್ಕಾಗಿ ಬೇಡಿಕೆ ಸಲ್ಲಿಸುವವರ ಪಟ್ಟಿ ದಿನದಿಂದ ದಿನಕ್ಕೆ ಬೆಳೆಯುತ್ತಲೇ ಇದೆ.

ಹೊಸನಗರದ ರಾಮಚಂದ್ರಾಪುರ ಮಠದಲ್ಲಿ ‘ಆಚಾರ್ಯ ವನ’, ‘ದೀಪದ ಮಂಟಪ’ ಸೇರಿದಂತೆ ಬಹುತೇಕ ಮಠ ಮಂದಿರಗಳಲ್ಲಿ ದೇವರ ಪ್ರತಿಮೆ, ಉದ್ಯಾನಗಳಲ್ಲಿ ಅರೆ ಉಬ್ಬು ಶಿಲ್ಪದಲ್ಲಿ ಕಲಾಕೃತಿಗಳನ್ನು ನಿರ್ಮಿಸಿಕೊಟ್ಟಿದ್ದಾರೆ. ಚೇತನ್‌ ಅವರಿಗೆ ಈಗ ಕೈತುಂಬಾ ಕೆಲಸ. ೩೫ ವರ್ಷಗಳ ಹಿಂದೆ ಆರಂಭಿಸಿದ ಅವರ ಕಾರ್ಯಕ್ಕೆ ಈಗ ಫಲ ಸಿಗುತ್ತಿದೆ. ಇದರ ಜೊತೆ ಜೊತೆಗೆ ನವದೆಹಲಿ, ಮುಂಬೈ ಸೇರಿದಂತೆ ದೇಶದ ಅನೇಕ ಕಡೆಗಳಲ್ಲಿ ಆಯೋಜಿಸಿದ್ದ ಕಲಾ ಮೇಳಗಳಲ್ಲಿ ತಮ್ಮ ಕಲೆಯನ್ನು ಪರಿಚಯಿಸಿಕೊಟ್ಟಿದ್ದಾರೆ. ಪ್ರತಿವರ್ಷ ಚಿತ್ರಕಲಾ ಪರಿಷತ್‌ನಲ್ಲಿ ನಡೆಯುವ ಚಿತ್ರಸಂತೆಯಲ್ಲೂ ಇವರು ತಪ್ಪದೇ ಭಾಗವಹಿಸಿ ಕಲೆಯನ್ನು ಪ್ರದರ್ಶಿಸುತ್ತಾರೆ.

ಎಲೆಮರೆಕಾಯಿಯಂತೆ ತಮ್ಮ ಪಾಡಿಗೆ ತಾವು ಕೆಲಸ ಮಾಡುತ್ತಿರುವ ಚೇತನ್‌ ಕುಮಾರ್‌ ಅವರು ಎಂದಿಗೂ ಪ್ರಚಾರಕ್ಕೆ ಹಾತೊರೆದಿಲ್ಲ.
ನಗರದ ಚಿತ್ರಕಲಾ ಪರಿಷತ್‌ನಲ್ಲಿ ಮೊದಲ ಬಾರಿಗೆ ವಿವಿಧ ವಿನ್ಯಾಸದ ಅಲಂಕೃತ ಮಡಿಕೆ ಪ್ರದರ್ಶಿಸಿದ (ಪಾಟ್ರಿ ವರ್ಕ್‌ ಷೋ) ಹೆಗ್ಗಳಿಕೆ ಇವರದು. ೧೯೯೨ರಲ್ಲಿ ನಡೆದ ಆ ಪ್ರದರ್ಶನದಲ್ಲಿ ಹರಪ್ಪ ಮೆಹೆಂಜೊದಾರೊ ಸಂಸ್ಕೃತಿಯನ್ನು ಪರಿಚಯಿಸಿಕೊಟ್ಟಿದ್ದರು.

ಜೇಡಿಮಣ್ಣಿನ ಜೊತೆಗೆ ಕೆಂಪು ಮಣ್ಣು, ಬಿಳಿ ಮಣ್ಣನ್ನು ಸೇರಿಸಿ ಅರೆ ಉಬ್ಬು ಶಿಲ್ಪ ರಚಿಸುವ ಚೇತನ್‌ ಕುಮಾರ್‌ ಅವರು ಈ ಕ್ಷೇತ್ರದಲ್ಲಿ ತೊಡಗಿಸಿಕೊಂಡು ೩೫ ವರ್ಷಗಳಾಗಿವೆ.  ಒಳವಿನ್ಯಾಸಕ್ಕೆ ಹೊಂದುವ ಆಕರ್ಷಕ ವಿನ್ಯಾಸದ ಮಡಿಕೆಗಳು, ಭಿತ್ತಿಫಲಕಗಳು, ಕಾರ್ನರ್‌ ಸ್ಟ್ಯಾಂಡ್‌, ಗೋಡೆ ವಿನ್ಯಾಸ ಮಾಡುವ ಮೂಲಕ ಈಗ ಹೊಸತನಕ್ಕೂ ತೆರೆದುಕೊಂಡಿದ್ದಾರೆ.

ಇದಕ್ಕೆ ನಿಮಗೆ ಪ್ರೇರಣೆ ಯಾರು ಎಂದು ಚೇತನ್‌ ಕುಮಾರ್‌ ಅವರನ್ನು ಪ್ರಶ್ನಿಸಿದರೆ, ‘ಮನೆಯಲ್ಲಿ ನನ್ನ ತಾತ, ತಂದೆ ಮಾಡುತ್ತಿದ್ದ ಮಡಿಕೆ ಕೆಲಸವೇ ನಾನು ಈ ಕ್ಷೇತ್ರಕ್ಕೆ ಬರಲು ಪ್ರಮುಖ ಕಾರಣ. ಕಾಲಕ್ಕೆ ತಕ್ಕಂತೆ ಹೊಸದನ್ನು ಕೊಡಲು ಪ್ರಯತ್ನಿಸುತ್ತೇನೆ. ಜನರಿಗೂ ಅದು ಇಷ್ಟವಾಗುತ್ತದೆ’ ಎನ್ನುತ್ತಾರೆ.

ಚೇತನ್‌ ಕುಮಾರ್‌ ಅವರ ಕೆಲಸವನ್ನು ನೋಡಿ ಚಿತ್ರದುರ್ಗದ ಮುರುಘಾಮಠ, ಸುತ್ತೂರಿನ ಜೆ.ಎಸ್‌.ಎಸ್‌. ಮಠ, ದಾವಣಗೆರೆ ಪಾಲಿಕೆ, ಶಿವಮೊಗ್ಗ ಜಿಲ್ಲಾ ಆಡಳಿತ ಸೇರಿದಂತೆ ಹಲವು ಸಂಘ ಸಂಸ್ಥೆಗಳು ಅವರನ್ನು ಸನ್ಮಾನಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT