ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರಮಾಧಿಕಾರ ಕೈವಶ ಮಾಡಿಕೊಳ್ಳುವ ವರಸೆ

Last Updated 30 ಜುಲೈ 2016, 14:10 IST
ಅಕ್ಷರ ಗಾತ್ರ

ಕಳೆದ ಮೂರು ಶತಮಾನಗಳಲ್ಲಿ ಈ ಭೂಮಿಯ ಮೇಲೆ ಬೇರೆ ಬೇರೆ ದೇಶಗಳನ್ನು ಸುಮಾರು 210 ಸರ್ವಾಧಿಕಾರಿಗಳು ಆಳಿದ್ದಾರೆ. ಇವರಲ್ಲಿ ಕೆಲವರು ತಾವು ಶಾಶ್ವತ ನಿರಂಕುಶ ಪ್ರಭುಗಳು ಎಂದು ಕೂಡ ಘೋಷಿಸಿಕೊಂಡಿದ್ದಾರೆ. ಈ ಭೂಮಿಯ ಮೇಲೆ ಯಾರೂ ಶಾಶ್ವತ ಅಲ್ಲ, ಪರಮಾಧಿಕಾರವೆಂಬುದು ಯಾವ ಸ್ವರೂಪದ್ದೇ ಆಗಿರಲಿ, ಅದು ಅಂತ್ಯವಿಲ್ಲದ ಅಧಿಕಾರವಾಗಿರಲು ಸಾಧ್ಯವಿಲ್ಲ ಎಂಬ ವಿಚಾರ ಯಾವ ಸರ್ವಾಧಿಕಾರಿಯ ತಲೆಯಲ್ಲಿಯೂ ಇರಲಿಲ್ಲ.

ಇಂಥ ವಿಚಾರಹೀನತೆ ಸರ್ವಾಧಿಕಾರಿ ಮನಸ್ಸಿನ ಮುಖ್ಯ ಗುಣವೇ ಆಗಿರುತ್ತದೆ. ಬಹುತೇಕ ಎಲ್ಲ ಸರ್ವಾಧಿಕಾರಿಗಳು ಬೇರೆ ಬೇರೆ ವಿಧಾನದಲ್ಲಿ ಹತ್ಯೆಗೀಡಾಗಿಯೇ ಕೊನೆಯಾದರು. ಈ 210 ಸರ್ವಾಧಿಕಾರಿಗಳಲ್ಲಿ ಸ್ವಾಭಾವಿಕವಾದ ರೀತಿಯಲ್ಲಿ ಸತ್ತವರು ಬಹುತೇಕ ಯಾರೂ ಇಲ್ಲವೆಂದೇ ಹೇಳಬಹುದು.     

ಒಂದು ದೇಶದ ನಿರಂಕುಶ ಪ್ರಭು ಅಥವಾ ಸರ್ವಾಧಿಕಾರಿ ಆಗುವುದು ಹೇಗೆ ಎಂಬುದಕ್ಕೆ ಇತಿಹಾಸದಲ್ಲಿ ಅನೇಕ ಉದಾಹರಣೆಗಳು ಸಿಗುತ್ತವೆ.  ಸಾವಿರಾರು ಮಂದಿಯನ್ನು ಕೊಂದು ಸರ್ವಾಧಿಕಾರಿಯಾದವರು ಅಧಿಕಾರಕ್ಕೆ ಬರುವುದಕ್ಕಾಗಿ ಅಧಿಕಾರದ ‘ಪಟ್ಟ’ಕ್ಕೆ ಏರುವ ಮೊದಲು ಸಾವಿರಾರು ಅಥವಾ ಲಕ್ಷಾಂತರ ಮಂದಿಯನ್ನು ಹತ್ಯೆಗೈದಿರುತ್ತಾರೆ ಮತ್ತು ‘ಪಟ್ಟ’ದಲ್ಲಿ ಕುಳಿತು ಸಾವಿರಾರು ಅಥವಾ ಲಕ್ಷಾಂತರ ಮಂದಿಯನ್ನು ಹತ್ಯೆಗೈದಿರುತ್ತಾರೆ. ಪ್ರಜೆಗಳು ತನ್ನನ್ನು ಆರಾಧಿಸುವಂತೆ ಮಾಡಿ ವಿಲಕ್ಷಣ ಕಾನೂನು ನೀತಿ ನಿಯಮಗಳನ್ನು ಸೃಷ್ಟಿಸಿ ಜನರನ್ನು ಕುರಿಗಳನ್ನು ಕೊಲ್ಲುವಂತೆ ಕೊಂದವರೇ ಹೆಚ್ಚು. 

ಒಬ್ಬೊಬ್ಬ ಸರ್ವಾಧಿಕಾರಿ ಒಂದೊಂದು ವಿಧದಲ್ಲಿ ಪರಮಾಧಿಕಾರವನ್ನು ಕೈವಶ ಮಾಡಿಕೊಂಡಿರುವುದನ್ನು ಇತಿಹಾಸ ವಿವರವಾಗಿ ಹೇಳುತ್ತದೆ. ಅಂಥ ನಿರಂಕುಶ ಪ್ರಭುತ್ವ ಈಗಲೂ ಇದೆ ಎನ್ನುವುದಕ್ಕೆ ಕೆಲವು ದೇಶಗಳಲ್ಲಿ ಅಧ್ಯಕ್ಷ ಅಥವಾ ಪ್ರಧಾನ ಮಂತ್ರಿ ಎಂಬ ಅಭಿದಾನದಲ್ಲಿ ಆಳುತ್ತಿರುವವರನ್ನು ಹೆಸರಿಸಬಹುದು.

ಅವುಗಳಲ್ಲಿ ಕೆಲವು ಮೇಲ್ನೋಟಕ್ಕೆ ಮಾತ್ರ ಪ್ರಜಾಪ್ರಭುತ್ವವಾಗಿರುವ ದೇಶಗಳಾಗಿವೆ. ವಾಸ್ತವದಲ್ಲಿ ಅವನ್ನು ಆಳುತ್ತಿರುವ ನಿರಂಕುಶ ಪ್ರಭು ಮತಿವಿಕಲನೂ ಅತ್ಯಂತ ಕ್ರೂರಿಯೂ ಆಗಿರುವುದಕ್ಕೆ ಈ ಹೊತ್ತು ಕೂಡ ಸಾಕಷ್ಟು ಉದಾಹರಣೆಗಳು ಇವೆ. ಅಂಥ ಪ್ರಭುತ್ವದಲ್ಲಿ ಪ್ರಜೆಗಳು ನರಿ ನಾಯಿಗಳಂತಲ್ಲ, ಹುಳಹುಪ್ಪಡಿಗಳಂತೆ ಬದುಕುತ್ತಿರುವುದನ್ನು ಕಂಡರೆ ಮನುಷ್ಯ ಹೀಗೆ ಕೂಡ ಜೀವದಿಂದಿರಲು ಸಾಧ್ಯವೆ, ಜೀವದ ಆಸೆ ಇಷ್ಟು ಬಲವಾದುದೆ ಎಂಬ ವಿಚಾರ ಅತ್ಯಂತ ಸುಂದರವಾದ ಆಡಳಿತ ವಿಧಾನವಾಗಿರುವ ಪ್ರಜಾಸತ್ತೆಯಲ್ಲಿ ಬದುಕುತ್ತಿರುವ ನಮ್ಮ ತಲೆಯಲ್ಲಿ ಸ್ವಾಭಾವಿಕವಾಗಿಯೇ ಉಂಟಾಗಬಹುದು.  

ಯಾವುದೇ ಪ್ರಜಾಪ್ರಭುತ್ವವಾಗಿರುವ ಚುನಾಯಿತ ಪ್ರಧಾನಮಂತ್ರಿ ಅಥವಾ ಚುನಾಯಿತ ಅಧ್ಯಕ್ಷನಿಗೆ ಸರ್ವಾಧಿಕಾರಿಯಾಗಬೇಕು ಎಂದನಿಸಿದರೆ ಇವತ್ತು ಅದು ಸುಲಭಸಾಧ್ಯವಲ್ಲ. ಸರ್ವಾಧಿಕಾರಿಯಾಗಲು ಪ್ರಯತ್ನಿಸಿದರೆ ಇಡೀ ದೇಶವೇ ಜಾಗೃತವಾಗಿ ಅಂಥ ಆಡಳಿತವನ್ನು ಕೊನೆಗೊಳಿಸುತ್ತದೆ. ಅದೇ ಪ್ರಜಾಪ್ರಭುತ್ವದ ಶಕ್ತಿ.  

ಆದರೆ ರಾಷ್ಟ್ರದ ಅಂಗವಾಗಿರುವ ಒಂದು ರಾಜ್ಯದ ಮುಖ್ಯ ಅಮಾತ್ಯನಿಗೆ ಸರ್ವಾಧಿಕಾರಿ ಆಗದಿದ್ದರೂ ಸರ್ವಾಧಿಕಾರಿಯಂತೆ ಮೆರೆಯಲು ಮತ್ತು ಬಹುಮಟ್ಟಿಗೆ ಸರ್ವಾಧಿಕಾರಿಯಂತೆ ಅಧಿಕಾರ ಚಲಾಯಿಸಲು ಸಾಧ್ಯವಿದೆ. ಅದು ಸುಲಭವೂ ಹೌದು. ಯಾಕೆಂದರೆ, ಪ್ರಜೆಗಳು ವೋಟು ಹಾಕಿ ತಮ್ಮ ಕೆಲಸ ಮುಗಿಯಿತು ಎಂದು ಸುಮ್ಮನಿರುತ್ತಾರೆ. ಹೆಚ್ಚೆಂದರೆ, ಒಮ್ಮೊಮ್ಮೆ ಯಾವ್ಯಾವುದೋ ಕಾರಣಕ್ಕೆ ಬೀದಿಗಿಳಿದು ಕೂಗಾಡಿ ಪ್ರತಿಭಟನೆಯನ್ನು  ‘ಸೂಚಿಸಿ ಸುಮ್ಮನಾಗು’ವುದರ ಹೊರತು ಅವರಿಂದ ಬೇರೇನೂ ಮಾಡಲು ಸಾಧ್ಯವಿಲ್ಲ ಎಂದು ರಾಜ್ಯದ ‘ಸರ್ವಾಧಿಕಾರಿ ಅಮಾತ್ಯ’ನಿಗೆ ಗೊತ್ತಿರುತ್ತದೆ.

ಆ ಪ್ರತಿಭಟನೆ ಎಷ್ಟು ತೀವ್ರವಾದರೂ ಅದರಿಂದ ಎಷ್ಟು ಜನ ಸತ್ತರೂ ಎಷ್ಟು ಜನರ ಆಸ್ತಿ ಪಾಸ್ತಿ ಹಾಗೂ ಸರ್ಕಾರದ ಸೊತ್ತು ನಷ್ಟವಾದರೂ ವೈಕುಂಠವಾಸಿ ಭಗವಂತನಂತೆ ಅಧಿಕಾರವನ್ನು ‘ಎಂಜಾಯ್’ ಮಾಡುತ್ತಿರುವ ರಾಜ್ಯದ ‘ಸರ್ವಾಧಿಕಾರಿ ಅಮಾತ್ಯ’ನಿಗೆ  ಅದರ ನೋವು ನಷ್ಟ ತಟ್ಟುವುದಿಲ್ಲ. ಏನು ನಡೆಯುತ್ತಿದೆ ಎಂದು ತನಗೆ ತಿಳಿದಿಲ್ಲ ಎಂದು ನಟಿಸುವ ಕಲೆಯಲ್ಲಿ ಅವನು ಬಹಳ ಕಾಲ ಪಳಗಿರುವುದರಿಂದಲೇ ಆತನಿಗೆ ಅಥವಾ ಆಕೆಗೆ ಈ ಪಟ್ಟದ ಮೇಲೆ ಕುಳಿತು ಕಾಲ ತಳ್ಳುವುದು ಸಾಧ್ಯವಾಗುತ್ತದೆ. ಪ್ರಧಾನ ಮಂತ್ರಿಗೆ ಜೀವಕ್ಕೆ ಅಪಾಯ ಇರುತ್ತದೆ.

ರಾಜ್ಯದ ಅಮಾತ್ಯನಿಗೆ ಆ ಭಯ ಇರುವುದಿಲ್ಲ. ಅವನ ಅಂಗರಕ್ಷಕರು ಕೇವಲ ಅಲಂಕಾರಕ್ಕಾಗಿರುತ್ತಾರೆ. ಅಷ್ಟೇ ಅಲ್ಲದೆ, ಹೆಚ್ಚು ಅಲಂಕಾರಕ್ಕಾಗಿ ಆತನಿಗೆ/ಆಕೆಗೆ ಗ್ರಾಮಸಿಂಹಗಳಂಥ ಚೇಲರು ಗೂಂಡಾಗಳು ಕೂಡ ಇರುತ್ತಾರೆ. ಈ ವರಸೆಯ ಮುಖ್ಯ ಅಮಾತ್ಯರ ಜೀವಕ್ಕಂತಿರಲಿ, ಅಧಿಕಾರಕ್ಕೆ ಸಹ ಅಪಾಯ ಇಲ್ಲ.

ದೇಶವನ್ನು ಆಳುವ ಸರ್ವಾಧಿಕಾರಿಯ ಆಡಳಿತದ ಕಾಲದಲ್ಲಿ ಅವನ ಅಧಿಕಾರದ ಜೊತೆಗೇ ಅವನ ಪುತ್ರರು ತಮಗಿಷ್ಟ ಬಂದಂತೆ ದರ್ಬಾರು-ಕಾರ್ಬಾರು ನಡೆಸಿದ ನಿದರ್ಶನಗಳು ಬಹಳ ಕಡಿಮೆ. ಆತನ ಹೆಂಡಂದಿರು ಮತ್ತು ಮಕ್ಕಳು ತೆರೆಯ ಹಿಂದೆ ಕತ್ತೆಕಿರುಬ ಶೈಲಿಯಲ್ಲಿ ಸ್ವಂತಕ್ಕೆ ಬೇಕಾದ್ದು ಮಾಡಿಕೊಂಡಿರುವುದಿದೆ. ಆದರೆ ಎಗ್ಗಿಲ್ಲದೆ ಡಾಣಡಂಗುರವಾಗಿ ವ್ಯಾಘ್ರಗಳಂತೆ ನಡೆದುಕೊಂಡದ್ದು ಇಲ್ಲ.

ರಾಷ್ಟ್ರದ ಪ್ರಧಾನಮಂತ್ರಿ ಅಥವಾ ಅಧ್ಯಕ್ಷನಾದವನಿಗೆ ಆಳ್ವಿಕೆ ಅಷ್ಟು ಸುಲಭದ ಕೆಲಸವೇನೂ ಅಲ್ಲ ಎಂದು ಕೆಲವೇ ವರ್ಷಗಳೊಳಗೆ ವೇದ್ಯವಾಗಬಹುದು. ಆದರೆ ನಿರಂಕುಶ ಪ್ರಭುವಾದಾತನಿಗೆ ಅದನ್ನು ಸ್ವೇಚ್ಛೆಯಿಂದ ತೊರೆಯಲು ಸಾಧ್ಯವಾಗುವುದಿಲ್ಲ. ಅಂಥ ಬಂಧನ ಅದು! ಬೇಡವೆಂದು ಹೊರನಡೆಯಲು ಅವಕಾಶವೇ ಇಲ್ಲದ ‘ಮಹಾ ಅಧಿಕಾರ ಪಟ್ಟ’ ಅಥವಾ ‘ಶಾಶ್ವತ ಕೈದಿ ಪಟ್ಟ’ ಅದು! ಎಲ್ಲಾ ನಿರಂಕುಶಾಧಿಕಾರಿಗಳು ಮುಸೊಲಿನಿ ಹಿಟ್ಲರ್‌ನಂತೆಯೇ ಸಾಯಬೇಕು ಎಂಬುದೇ ಮಾನವ ದೈವೇಚ್ಛೆ ಎನ್ನುವುದು ‘ಮಹಾ ಸತ್ಯ’!

ಯಾವುದೇ ಪ್ರಜಾಪ್ರಭುತ್ವದಲ್ಲಿ ನಿರಂಕುಶ ಪ್ರಭುತ್ವದ ಶೈಲಿಯಲ್ಲಿ ಆಡಳಿತ ನಡೆಸುವ ‘ಮುಖ್ಯ ಅಮಾತ್ಯ’ನ ಅಂತರಾಳದಲ್ಲಿ ಮುಸೊಲಿನಿ ಹಿಟ್ಲರ್‌ನಂತೆ ಸಾಯುವ ಭಯ ಇರುವುದಿಲ್ಲ. ಆದ್ದರಿಂದ ಅವನು ಹುಲಿಯಂತೆ ಜನರ ಕತ್ತು ಹಿಸುಕಲಿಕ್ಕಾಗುವುದಿಲ್ಲ. ಆದ್ದರಿಂದ ಅವನು ಒಂದು ರೀತಿಯ ‘ಕತ್ತೆಕಿರುಬ ಸರ್ವಾಧಿಕಾರಿ’ಯಂತೆ ಕೆಲಸ ಮಾಡುತ್ತಾನೆ. ಜನರನ್ನು ನಿರ್ವೀರ್ಯರನ್ನಾಗಿಸುವ ವಿವಿಧ ವಿಧಾನಗಳನ್ನು ಅನುಸರಿಸುತ್ತಾನೆ. ದ್ರವ್ಯದಾಹಿಗಳಾದ ಅಸಮರ್ಥರಿಗೆ ಆಡಳಿತದ ಪಾರುಪತ್ಯ ವಹಿಸಿ ಸಮರ್ಥರನ್ನು ಬೇರೆ ಬೇರೆ ರೀತಿಯಲ್ಲಿ ದುರ್ಬಲರಾಗಿಸುತ್ತಾನೆ. ಅಸಮರ್ಥರು ಮುಖ್ಯವಾಗಿ ಹಣದ ಆಸೆಯಿಂದ ‘ಕತ್ತೆಕಿರುಬ’ ಶೈಲಿಯಲ್ಲಿ ಆಡಳಿತ ನಡೆಸುತ್ತಾರೆ.

ಸಾಮಾನ್ಯ ಪ್ರಜೆಗಳು ಏನೂ ಮಾಡಲಾರರು ಎಂದು ಅವರಿಗೆ ಗೊತ್ತಿದೆ. ಅಮಾತ್ಯ ಮಂಡಲದಲ್ಲಿ ಯಾರಿಂದ ತನಗೆ ತೊಂದರೆಯಾಗಬಹುದು ಎಂದು ಅವನು ಭಾವಿಸುತ್ತಾನೋ ಅವರಿಗೆ  ಉಡುಗೊರೆಯಂಥ ‘ಅಧಿಕಾರ’ ಗಳನ್ನು ನೀಡುತ್ತಾನೆ. ‘ಭಿಕ್ಷುಕ ಮನಸ್ಸಿನ’ ಪ್ರಜೆಗಳಿಗೆ ಆಕರ್ಷಕ ದಿನಬಳಕೆಯ ‘ವಸ್ತು’ಗಳನ್ನು   ಮತ್ತು ಅವರು ಆಸೆಪಡುವ ಆಧುನಿಕ ಸಾಧನ ಸಾಮಗ್ರಿಗಳನ್ನು ನೀಡುತ್ತಾನೆ. ಅವನ ಮುಷ್ಟಿಯಲ್ಲಿರುವ ರಾಜ್ಯ ‘ಭಿಕ್ಷುಕ ದೇಶ’ವಾಗುತ್ತದೆ. ಎಲ್ಲರೂ ಭಿಕ್ಷುಕರಾಗಿರುವುದರಲ್ಲಿ ಸುಖ ಸಂತೋಷ ಕಾಣುತ್ತಾರೆ. ಈ ರೀತಿ ಕ್ರಿಯಾಶೀಲತೆಯನ್ನು ಕಳೆದುಕೊಂಡಿರುವ ಜನರನ್ನು ಹೇಗೆ ಬೇಕಾದರೂ ಆಳಬಹುದು.

ಬಡವರಿಗೆ ಮಾತ್ರವಲ್ಲ, ಬಡತನದ ರೇಖೆಯಿಂದ ತುಸು ಮೇಲೆ ಇರುವ ಸೋಮಾರಿಗಳಿಗೆ, ಶ್ರಮದ್ವೇಷಿಗಳಿಗೆ ಮತ್ತು ನಿಷ್ಕ್ರಿಯ ಮನಸ್ಸಿನವರಿಗೆ  ಅವರ ಅಗತ್ಯದ ದಿನಬಳಕೆಯ ಸಾಮಗ್ರಿಗಳನ್ನು ಉಚಿತವಾಗಿ ಅಥವಾ ಅತ್ಯಂತ ಕಡಿಮೆ ಬೆಲೆಗೆ ಸಿಗುವಂತೆ ಮಾಡಿದರೆ ಅವರ ಕ್ರಿಯಾಶೀಲತೆ ಮತ್ತು ಶ್ರಮಪಡುವ ಗುಣ ದುರ್ಬಲವಾಗುತ್ತದೆ. ಅವರೆಲ್ಲ ಕಣ್ಣುಮುಚ್ಚಿ ಮುಖ್ಯ ಅಮಾತ್ಯನ ಪಕ್ಷಕ್ಕೆ ವೋಟು ಹಾಕುತ್ತಾರೆ. ಅವನೇ ಮತ್ತೆ ಮತ್ತೆ ಅಧಿಕಾರಕ್ಕೆ ಬರಲಿ ಎಂದು ಬಯಸುತ್ತಾರೆ. ಅವನ ಗುಣಗಾನ ಮಾಡುತ್ತಾರೆ. ಅವನ ಕುರಿತು ಹಾಡು ಹೊಸೆದು ಬೀದಿಯಲ್ಲಿ ಮತಿಗೆಟ್ಟವರಂತೆ ನರ್ತಿಸುತ್ತಾರೆ. ಒಟ್ಟಿನಲ್ಲಿ ‘ಮುಖ್ಯ ಅಮಾತ್ಯ’ ಆನಂದವಾಗಿರುತ್ತಾನೆ.

ಇಂಥ ರಾಜಕೀಯ ಮತ್ತು ಸಾಮಾಜಿಕ ಪರಿಸರದಲ್ಲಿ ಬೆಳೆದು ಅರ್ಧಂಬರ್ಧ ಓದಿದ ಮುಂದಿನ ತಲೆಮಾರಿನ ಯುವಕ ಯುವತಿಯರು ಆಲಸಿಗಳು ಮತ್ತು ಅಜ್ಞಾನಿಗಳು ಮತ್ತು ವಿಚಾರಹೀನರು ಆಗುತ್ತಾರೆ. ಆಗ ಪ್ರಜಾಪ್ರಭುತ್ವ ಸಾಯುತ್ತದೆ. ಆನಂತರ ಅವರನ್ನು ತನಗೆ ಬೇಕಾದಂಥ ಮನುಷ್ಯರಾಗಿಸಲು ಒಬ್ಬ ಸರ್ವಾಧಿಕಾರಿಯೇ ಬರಬೇಕಾಗುತ್ತದೆ.

ಹಿಟ್ಲರ್ ನಾಜ಼ಿಗಳನ್ನು ತಯಾರು ಮಾಡಿದ್ದು  ಹೀಗೆಯೇ. ಜನರನ್ನು ಪ್ರತಿದಿನ ದಿನದಲ್ಲಿ ಒಂದಷ್ಟು ಹೊತ್ತು ಸಾಲುಗಟ್ಟಿ ಶಿಸ್ತಿನಿಂದ ನಡೆಯುವ ಗೊಂಬೆಗಳನ್ನಾಗಿ ಮಾಡಿದ. ಆ ಗೊಂಬೆಗಳ ತಲೆಯಲ್ಲಿ ಮತ್ತು ನಾಲಿಗೆಯಲ್ಲಿ ಇದ್ದುದು ‘ನಾವು ಜಗತ್ತಿನ ಶ್ರೇಷ್ಠ ಜನಾಂಗ. ಈ ಜಗತ್ತನ್ನು ಆಳುವವರು ನಾವು’ ಎಂಬ ಘೋಷವಾಕ್ಯ ಮಾತ್ರ! ಪ್ರಜಾಪ್ರಭುತ್ವದ ಅಜ್ಞಾನಿ ಗೊಂಬೆಗಳಾಗಿರುವ ಮತದಾರರಿಗೆ ಬೇಕಾಗಿರುವುದು ತಮ್ಮನ್ನು ಕುರಿಗಳನ್ನು ಸಾಕುವಂತೆ ಸಾಕುವ ‘ಮುಖ್ಯ ಅಮಾತ್ಯ’ನ ಶಾಶ್ವತ ಆಡಳಿತ ಮಾತ್ರ! ಪ್ರಜ್ಞಾವಂತರಾಗಿರುವ ಅಲ್ಪಸಂಖ್ಯಾತರು ಅಯ್ಯೊ ಬದುಕಬೇಕಲ್ಲ ಎಂದುಕೊಂಡು ಬದುಕುತ್ತಾರೆ. 

ಇಂಥ ಸ್ಥಿತಿಯಲ್ಲಿ ಚೆನ್ನಾಗಿ ನಡೆಯುವ ಪ್ರಜಾಸತ್ತೆ ಬಂಡವಾಳಶಾಹಿಯ ಕಾಲಡಿಯಲ್ಲಿರುತ್ತದೆ. ದಿನದಿಂದ ದಿನಕ್ಕೆ ನಾನಾ ರೀತಿಯಿಂದ ಬಂಡವಾಳ ಸಂಗ್ರಹಿಸಿಕೊಂಡು ಮೇಲಕ್ಕೆದ್ದ ದುಷ್ಟರು ಭ್ರಷ್ಟರೆನಿಸಿಕೊಳ್ಳಲು ನಾಚುವವರಾಗಿರುವುದಿಲ್ಲ. ಎಲ್ಲಿಯವರೆಗೆ ಅವರ ಬಳಿ ಅಪಾರ ಹಣ ಮತ್ತು ಆಸ್ತಿಪಾಸ್ತಿ ಇರುತ್ತದೆಯೋ ಅಲ್ಲಿವರೆಗೆ ಅವರು ಸಂಪೂರ್ಣ ಸುರಕ್ಷಿತರಾಗಿರುತ್ತಾರೆ. ಅವರಿಗೆ ಕೋಟಿಗಟ್ಟಲೆ ಹಣ ಸಂಪಾದಿಸುವುದೊಂದೇ ಧ್ಯೇಯವಾಗಿರುತ್ತದೆ. ಅದಕ್ಕೆ ಅವಕಾಶ ನೀಡುವ ನೂರಾರು ದಾರಿಗಳು ಅವರಿಗೆ ತಾವಾಗಿಯೇ ತೆರೆದುಕೊಳ್ಳುತ್ತವೆ. ‘ಮುಖ್ಯ ಅಮಾತ್ಯ’ ಸುಭದ್ರವಾಗಿರಲು ಅಮಾತ್ಯಮಂಡಲದಲ್ಲಿರುವವರಿಗೆ ಮತ್ತು ಹಣ ಮಾಡುವ ಏಕಮಾತ್ರ ಉದ್ದೇಶದಿಂದ ಬದುಕುವ ಪ್ರಜಾಪ್ರತಿನಿಧಿಗಳಿಗೆ ಎತ್ತರದ ಸಂಪತ್ತಿನ ಹಾಸಿಗೆಯಲ್ಲಿ ಮಲಗುವ ಮತ್ತು ತಮಗಿಚ್ಛೆ ಬಂದಂತೆ ನಡೆದುಕೊಳ್ಳುವ ಪ್ರಜಾಪ್ರಭುತ್ವ ಸಿಗುತ್ತದೆ.  

ಇಂಥ ಸ್ಥಿತಿಯಲ್ಲಿ ‘ಸರ್ವಾಧಿಕಾರಿ ಮುಖ್ಯ ಅಮಾತ್ಯ’ ಸುರಕ್ಷಿತವಾಗಿರುತ್ತಾನೆ. ಅವನ ವಿಶಿಷ್ಟ ಪ್ರಜಾಪ್ರಭುತ್ವದಲ್ಲಿ ಸೈನ್ಯ ಇಲ್ಲ. ಕೇವಲ ಪೊಲೀಸು ಇರುತ್ತದೆ. ಪೊಲೀಸನ್ನು ಗುಲಾಮರಂತೆಯೂ ಅಂಗರಕ್ಷಕರಂತೆಯೂ ಬಳಸುವುದು ಹೇಗೆಂದು ‘ಮುಖ್ಯ ಅಮಾತ್ಯ’ನಿಗೆ ತಿಳಿದಿರುತ್ತದೆ. ವಾಸ್ತವದಲ್ಲಿ, ಈ ಅಂಗರಕ್ಷಕರಿಗೆ ಬದುಕಿರಬೇಕಾದರೆ ಮುಖ್ಯ ಅಮಾತ್ಯ ಮತ್ತು ಇತರ ಅಮಾತ್ಯರ ‘ಸಾಕುಪ್ರಾಣಿ’ಗಳಾಗಿರಬೇಕಾಗುತ್ತದೆ. ಆಡಳಿತಕ್ಕೆ ಅನಿವಾರ್ಯವಾಗಿರುವ ಮೇಲು ದರ್ಜೆಯ ಅಧಿಕಾರಿಗಳನ್ನು ತಮ್ಮ ಗುಲಾಮರಾಗಿಸುವ ವಿವಿಧ  ಅಸ್ತ್ರಗಳು ‘ಮುಖ್ಯ ಅಮಾತ್ಯ’ನ ಬಳಿ ಮಾತ್ರವಲ್ಲ, ಅಮಾತ್ಯ ಮಂಡಲದಲ್ಲಿರುವ ಎಲ್ಲರ ಬಳಿಯೂ ಇರುತ್ತವೆ.

ಈ ಅಸ್ತ್ರಗಳು ಪ್ರಜಾಪ್ರಭುತ್ವದ ಮಾರಕಾಸ್ತ್ರಗಳೇ ಆಗಿರುತ್ತವೆ. ಪ್ರಜಾಪ್ರಭುತ್ವದಲ್ಲಿ, ರಾಜ್ಯದ ಪ್ರಧಾನ ಅಮಾತ್ಯನಿಂದಲೂ ಅವನ ಅಮಾತ್ಯ ಮಂಡಲದಿಂದಲೂ, ರಾಷ್ಟ್ರಪ್ರಧಾನಿಯಿಂದಲೂ ರಾಷ್ಟ್ರದ ಅಮಾತ್ಯಮಂಡಲದಿಂದಲೂ ಈ ಅಸ್ತ್ರಗಳ ಪ್ರಯೋಗ ನಿರಂತರವಾಗಿ ನಡೆಯುತ್ತಿರುತ್ತದೆ. ಗುಲಾಮರಾಗಲು ಇಷ್ಟವಿಲ್ಲದವರು ಮತ್ತು ಅಸ್ತ್ರಗಳಿಂದ ತೀವ್ರವಾಗಿ ಗಾಸಿಗೊಂಡವರು ಅಧಿಕಾರ ಸನ್ಯಾಸದ ದಾರಿ ನೋಡಬೇಕಾಗುತ್ತದೆ. ಆ ಧೈರ್ಯ ಇಲ್ಲದವರಿಗೆ ಆತ್ಮಹತ್ಯೆ ಎಂಬ ಅಮೃತ ಇದ್ದೇ ಇರುತ್ತದೆ.

editpagefeedback@prajavani.co.in

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT