ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರಿವರ್ತನೆ ಆಗಲಿದೆ ಪರಿವರ್ತಕ!

ಬೆಂಗಳೂರು ವಿದ್ಯುತ್ ಸರಬರಾಜು ಕಂಪೆನಿಯಿಂದ ಪಾದಚಾರಿ ಸ್ನೇಹಿ ನಡೆ
Last Updated 6 ಮೇ 2015, 20:31 IST
ಅಕ್ಷರ ಗಾತ್ರ

ಬೆಂಗಳೂರು: ಹೈಕೋರ್ಟ್‌ ಚಾಟಿಯ ನಂತರ ಎಚ್ಚೆತ್ತ ಬೆಂಗಳೂರು ವಿದ್ಯುತ್ ಸರಬರಾಜು ಕಂಪೆನಿಯು (ಬೆಸ್ಕಾಂ) ಟ್ರಾನ್ಸ್‌ಫಾರ್ಮರ್‌ಗಳ ವಿನ್ಯಾಸವನ್ನು ಬದಲಿಸಲು ಮುಂದಾಗಿದೆ. ಕೆಲವೇ ದಿನಗಳಲ್ಲಿ ಪ್ರಾಯೋಗಿಕವಾಗಿ ಹೊಸ ವಿನ್ಯಾಸದ ಪರಿವರ್ತಕಗಳನ್ನು ಅಳವಡಿಸಲಿದೆ.

2013ರ ಮೇ ತಿಂಗಳಲ್ಲಿ ನಗರದ ಚರ್ಚ್‌ಸ್ಟ್ರೀಟ್‌ ಪಾದಚಾರಿ ಮಾರ್ಗ­ದಲ್ಲಿ ಪರಿವರ್ತಕದ ವಿದ್ಯುತ್‌ ಪ್ರವಹಿಸಿ ಮನೋಜ್‌ ಕುಮಾರ್‌ ಪಾಟೀಲ್‌ ಎಂಬವರು ಮೃತಪಟ್ಟಿದ್ದರು. ಬೆಸ್ಕಾಂ ನಿರ್ಲಕ್ಷ್ಯದಿಂದಾಗಿ ಈ ದುರಂತ ಸಂಭವಿಸಿದ್ದು, ಪರಿಹಾರ ನೀಡಬೇಕು ಎಂದು ಆಗ್ರಹಿಸಿ ಕುಟುಂಬ ಸದಸ್ಯರು ಹೈಕೋರ್ಟ್‌ ಮೆಟ್ಟಿಲೇರಿದ್ದರು. ಪಾದ­ಚಾರಿ ಮಾರ್ಗದಲ್ಲಿರುವ ಪರಿ­ವರ್ತ­ಕಗಳ ಸಮೀಕ್ಷೆ ನಡೆಸಿ, ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸುವಂತೆ ಬೆಸ್ಕಾಂಗೆ ಹೈಕೋರ್ಟ್‌ ನಿರ್ದೇಶನ ನೀಡಿತ್ತು.

ಬಳಿಕ ಪಾದಚಾರಿ ಮಾರ್ಗದಲ್ಲಿರುವ ವಿದ್ಯುತ್‌ ಪರಿವರ್ತಕಗಳ ಸಮೀಕ್ಷೆ ಯನ್ನು ಬೆಸ್ಕಾಂ ನಡೆಸಿತ್ತು. ಇದಾದ ಬಳಿಕ ವಿದ್ಯುತ್‌ ಪರಿವರ್ತಕಗಳ  ವಿನ್ಯಾಸ ಬದಲಿಸಲು ಟೆಂಡರ್‌ ಆಹ್ವಾನಿಸಿತ್ತು. ಪರಿವರ್ತಕಕ್ಕೆ ಅತ್ಯುತ್ತಮ ವಿನ್ಯಾಸವನ್ನು ಸೂಚಿಸಿದವರಿಗೆ ₨5 ಲಕ್ಷ ಬಹುಮಾನ ನೀಡುವುದಾಗಿ ಘೋಷಿಸಿತ್ತು. ಇದರ ಪರಿಶೀಲನೆಗೆ ಬೆಸ್ಕಾಂ ಅಧಿಕಾರಿಗಳು, ಬಿಬಿಎಂಪಿ ಅಧಿಕಾರಿಗಳು, ಸಿಪಿಆರ್‌ಐ  ಹಾಗೂ ತಜ್ಞರನ್ನು ಒಳಗೊಂಡ ತಾಂತ್ರಿಕ ಸಮಿತಿಯನ್ನು ರಚಿಸಿತ್ತು.

ಮೂರು ಕಂಪೆನಿಗಳಿಂದ ವಿನ್ಯಾಸ: ಬೆಂಗಳೂರಿನ ಎರಡು ಕಂಪೆನಿಗಳು, ಹೈದರಾಬಾದ್‌ ಮೂಲದ ಕಂಪೆನಿ ಟೆಂಡರ್‌ ಪ್ರಕ್ರಿಯೆಯಲ್ಲಿ ಭಾಗವಹಿಸಿ ದ್ದವು.   ಕಳೆದ ವಾರ ಸಭೆ ಸೇರಿದ್ದ ತಾಂತ್ರಿಕ ಸಮಿತಿಯು ಮೂರು ಕಂಪೆನಿ ಗಳ ವಿನ್ಯಾಸಗಳನ್ನು ಪರಿಶೀಲನೆ ನಡೆಸಿತು. ‘ಬೆಂಗಳೂರಿನ ಕಂಪೆನಿಗಳ ವಿನ್ಯಾಸಗಳು ದುಬಾರಿ ಹಾಗೂ ಅನುಷ್ಠಾನ ಕಷ್ಟ. ಹೈದರಾಬಾದ್ ಕಂಪೆ ನಿಯ ವಿನ್ಯಾಸ ಚೆನ್ನಾಗಿದೆ. ಅದನ್ನು ಕೆಲವು ಮಾರ್ಪಾಡುಗಳೊಂದಿಗೆ ಅಳವಡಿಸಿಕೊಳ್ಳ ಬಹುದು’ ಎಂದು ತಜ್ಞರ ಸಮಿತಿಯು ಅಭಿಪ್ರಾಯಪಟ್ಟಿದೆ.

ಹೀಗಿರಲಿದೆ ಪರಿವರ್ತಕ: ‘ಈಗಿರುವ ಪರಿವರ್ತಕಗಳು ಪಾದಚಾರಿಗಳ ಸುಗಮ ಸಂಚಾರಕ್ಕೆ ಅಡ್ಡಿಯಾಗಿವೆ. ಅವುಗಳು ಅಪಾಯವನ್ನು ಆಹ್ವಾನಿಸುತ್ತಿವೆ. ಹೊಸ ವಿನ್ಯಾಸದಲ್ಲಿ ಪಾದಚಾರಿ ಸುರಕ್ಷತೆಗೆ  ಮೊದಲ ಆದ್ಯತೆ ನೀಡಲಾಗಿದೆ. ಈಗ ಟ್ರಾನ್ಸ್‌ಫಾರ್ಮರ್‌ ಯಂತ್ರಗಳು ನೆಲ ಮಟ್ಟದಿಂದ 3–4 ಅಡಿ ಎತ್ತರದಲ್ಲಿ ಇವೆ. ಹೊಸ ವಿನ್ಯಾಸದಲ್ಲಿ 10 ಎತ್ತರದಲ್ಲಿ ಇರಲಿವೆ. ದುರಸ್ತಿ ಕೆಲಸ ಮಾಡಲು ಯಂತ್ರದ ಪಕ್ಕದಲ್ಲಿ 1.5 ಅಡಿ ಜಾಗ ಬಿಡಲಾಗುತ್ತದೆ. ಸಿಬ್ಬಂದಿ ಹತ್ತಿ ಇಳಿಯಲು ಎಲೆಕ್ಟ್ರಿಕ್‌ ಏಣಿ ವ್ಯವಸ್ಥೆ ಇರಲಿದೆ’ ಎಂದು  ಹೈದರಾಬಾದ್‌ ಕಂಪೆನಿ ತಿಳಿಸಿದೆ.

‘ಟ್ರಾನ್ಸ್‌ಫಾರ್ಮರ್‌ಗಳ ಸುತ್ತಮುತ್ತ ಸಾಕಷ್ಟು ಮಂದಿ ಕಸ ಎಸೆಯುತ್ತಾರೆ. ಇದಕ್ಕೆ ಕಡಿವಾಣ ಹಾಕುವುದು ಬೆಸ್ಕಾಂಗೆ ದೊಡ್ಡ ಸವಾಲು. ಹೊಸ ವಿನ್ಯಾಸದಲ್ಲಿ ಸಾಕಷ್ಟು ಖಾಲಿ ಜಾಗ ಇರಲಿದೆ. ಇಲ್ಲಿ ಕಸದ ಬುಟ್ಟಿಗಳನ್ನು ಇಡಬಹುದು’ ಎಂದು ಕಂಪೆನಿ ಸಲಹೆ ನೀಡಿದೆ.

ಮೇ 13ಕ್ಕೆ ತೀರ್ಮಾನ: ‘ಬೆಸ್ಕಾಂ ಕಚೇರಿಯಲ್ಲಿ ಇದೇ 13ರಂದು ಹಿರಿಯ ಅಧಿಕಾರಿಗಳ ಸಭೆ ನಡೆಯಲಿದೆ. ಹೊಸ ವಿನ್ಯಾಸದ ಪರಿವರ್ತಕಗಳ ಅಳವಡಿಕೆ ಬಗ್ಗೆ ಚರ್ಚೆ ನಡೆಯಲಿದೆ. ಟ್ರಾನ್ಸ್‌ಫಾರ್ಮರ್‌ಗಳ ಹೆಚ್ಚು ಸಮಸ್ಯೆ ಇರುವ ಪ್ರದೇಶದಲ್ಲಿ ಪ್ರಾಯೋಗಿಕವಾಗಿ ಇದನ್ನು ಜಾರಿಗೊಳಿಸಲು ಉದ್ದೇಶಿಸಲಾಗಿದೆ’ ಎಂದು ಬೆಸ್ಕಾಂ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.

‘ಹೊಸ ವಿನ್ಯಾಸದ ಪ್ರತಿ ಪರಿವರ್ತಕಕ್ಕೆ ₹1.5 ಲಕ್ಷ ವೆಚ್ಚ ತಗುಲಲಿದೆ. ಆರಂಭಿಕ ಹಂತದಲ್ಲಿ 4–5 ಟ್ರಾನ್ಸ್‌ಫಾರ್ಮರ್‌ಗಳ ವಿನ್ಯಾಸ ಬದಲಿಸಲಾಗುವುದು. ಯಶಸ್ಸು ನೋಡಿಕೊಂಡು ಉಳಿದ ಟ್ರಾನ್ಸ್‌ಫಾರ್ಮರ್‌ಗಳ ವಿನ್ಯಾಸ ಬದಲಿಸಲಾಗುವುದು’ ಎಂದು ಅವರು ತಿಳಿಸಿದರು.

ಟ್ರಾನ್ಸ್‌ಫಾರ್ಮರ್‌ಗಳ ಸ್ಥಳಾಂತರ: ‘ನಗರದ 12 ರಸ್ತೆಗಳಲ್ಲಿ ಟೆಂಡರ್ ಶ್ಯೂರ್‌ ಕಾಮಗಾರಿಗಳು ನಡೆಯು­ತ್ತಿದ್ದು, ಇಲ್ಲಿ ಪಾದಚಾರಿ ಮಾರ್ಗಗಳ­ಲ್ಲಿರುವ ಪರಿವರ್ತಕಗಳನ್ನು ಸ್ಥಳಾಂತರ ಪ್ರಕ್ರಿಯೆ ಆರಂಭವಾಗಿದೆ. ಈಗಾಗಲೇ 10  ಪರಿವರ್ತಕಗಳನ್ನು ಸ್ಥಳಾಂತರಿಸಲಾ­ಗಿದೆ. ಒಂದೆರಡು ತಿಂಗಳಲ್ಲಿ 19 ಪರಿವರ್ತಕಗಳು ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರ ಆಗಲಿವೆ’ ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT