ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರಿಶಿಷ್ಟರ ಪಟ್ಟಿಗೆ ಮತ್ತಷ್ಟು ಜಾತಿಗಳು

ಸಂವಿಧಾನ ತಿದ್ದುಪಡಿ ಮಸೂದೆಗೆ ಲೋಕಸಭೆ ಧ್ವನಿಮತದ ಅಂಗೀಕಾರ
Last Updated 27 ನವೆಂಬರ್ 2014, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಪರಿಶಿಷ್ಟರ ಪಟ್ಟಿಗೆ  ಮತ್ತಷ್ಟು ಜಾತಿಯನ್ನು ಸೇರಿ­ಸುವ ಸಂವಿಧಾನ ತಿದ್ದುಪಡಿ ಮಸೂದೆಗೆ ಗುರು­ವಾರ ಲೋಕಸಭೆಯಲ್ಲಿ ಧ್ವನಿಮತದ ಅನುಮೋದನೆ ದೊರೆಯಿತು. ಆದರೆ, ಕ್ರೈಸ್ತ ಹಾಗೂ ಮುಸ್ಲಿಂ ಧರ್ಮಕ್ಕೆ ಮತಾಂತರ­ಗೊಂಡ ದಲಿ­ತರಿಗೂ ಪರಿಶಿಷ್ಟ ಜಾತಿ ಸೌಲಭ್ಯ ವಿಸ್ತರಿಸುವಂತೆ ವಿರೋಧ ಪಕ್ಷಗಳು ಮಾಡಿಕೊಂಡ ಮನವಿಯನ್ನು ಬಿಜೆಪಿ ನೇತೃತ್ವದ ಕೇಂದ್ರ ಎನ್‌ಡಿಎ ಸರ್ಕಾರ ಸ್ಪಷ್ಟವಾಗಿ ತಳ್ಳಿ ಹಾಕಿತು.

ಸಂವಿಧಾನ (ಪರಿಶಿಷ್ಟ ಜಾತಿ) ಆದೇಶ ತಿದ್ದುಪಡಿ ಮಸೂದೆಗೆ (20­14) ಧ್ವನಿಮತದ ಅಂಗೀಕಾರ ದೊರೆ­ಯಿತು. ಬಹುತೇಕ ಎಲ್ಲ ಪಕ್ಷ­ಗಳೂ ಈ ಮಸೂದೆಗೆ ಬೆಂಬಲ ಸೂಚಿಸಿ­ದವು. ಮಧ್ಯಪ್ರದೇಶ, ಕೇರಳ, ಒಡಿಶಾ ಮತ್ತು ತ್ರಿಪುರಾ ರಾಜ್ಯಗಳ ಹಲವಾರು ಜಾತಿಗಳು ಹೊಸದಾಗಿ ಪರಿಶಿಷ್ಟ ಜಾತಿ ಪಟ್ಟಿಗೆ ಸೇರ್ಪಡೆ­ಯಾಗಲಿವೆ. ಇದೇ ವೇಳೆ ಸಿಕ್ಕಿಂ ರಾಜ್ಯದ ಒಂದು ಜಾತಿ­ಯನ್ನು ಪರಿಶಿಷ್ಟ ಜಾತಿ ಪಟ್ಟಿಯಿಂದ ತೆಗೆದು ಹಾಕಲಾಗಿದೆ.

ಕ್ರೈಸ್ತ ಮತ್ತು ಮುಸ್ಲಿಂ ಧರ್ಮಕ್ಕೆ ಮತಾ­ಂ­ತ­ರಗೊಂಡ ದಲಿತರನ್ನೂ ಪರಿಶಿಷ್ಟ ಜಾತಿಗೆ ಸೇರಿಸುವಂತೆ ಎಐಎ­ಡಿಎಂಕೆ ಸಂಸದ ಆರ್‌. ಗೋಪಾಲಕೃಷ್ಣನ್‌ ಹಾಗೂ ಎಐಎಂಐಎಂ ಸಂಸದ ಅಸಾ­ದುದ್ದೀನ್‌ ಓವೈಸಿ ಒತ್ತಾಯಿಸಿದರು.

ಆದರೆ, ವಿರೋಧ ಪಕ್ಷಗಳ ಈ ಬೇಡಿ­ಕೆಯನ್ನು ಸ್ಪಷ್ಟವಾಗಿ ತಳ್ಳಿ ಹಾಕಿ­ದ ಸಾಮಾಜಿಕ ನ್ಯಾಯ ಮತ್ತು ಸಬಲೀಕ­ರಣ ಸಚಿವ ಥಾವರ್ ಚಂದ್ ಗೆಹ್ಲೋಟ್‌, ವಿರೋಧ ಪಕ್ಷಗಳ ಬೇಡಿಕೆ  ಸಂವಿಧಾನ ಬಾಹಿರ­ವಾದ ಕಾರಣ  ಅದನ್ನು ಪರಿಗಣಿಸಲು ಸಾಧ್ಯವಿಲ್ಲ ಎಂದರು.
ಮೇಲಾಗಿ ಕ್ರೈಸ್ತ ಮತ್ತು ಮುಸ್ಲಿಂ ದಲಿ­ತರಿಗೆ ಮೀಸಲಾತಿ ಸೌಲಭ್ಯ ನೀಡುವ ವಿಷಯ ಸುಪ್ರೀಂಕೋರ್ಟ್‌­ನಲ್ಲಿರುವ  ಕಾರಣ ಸರ್ಕಾರ ಈ ವಿಷ­ಯ­­ದಲ್ಲಿ ಮಧ್ಯಪ್ರವೇಶಿಸುವುದಿಲ್ಲ ಎಂದರು.

‘ದಲಿತರಿಗೆ ನೀಡಿದ ಮೀಸಲಾತಿ ಪ್ರಮಾಣ ಹೆಚ್ಚದಿದ್ದರೂ ಮತಬ್ಯಾಂಕ್ ರಾಜಕೀಯ ಮಾಡುತ್ತಿರುವ ರಾಜ್ಯ ಸರ್ಕಾರಗಳು ಪೈಪೋಟಿ ಮೇಲೆ ಹೆಚ್ಚು, ಹೆಚ್ಚು ಜಾತಿಗಳನ್ನು ಪರಿಶಿಷ್ಟ ಜಾತಿಗೆ ಸೇರಿಸುವಂತೆ ಶಿಫಾರಸು ಮಾಡುತ್ತಿವೆ’ ಎಂದು  ಕಾಂಗ್ರೆಸ್‌ನ ಕೆ. ಸುರೇಶ್‌ ಸೇರಿ­ದಂತೆ ಹಲವಾರು ಸಂಸದರು ಆರೋಪಿಸಿದರು.

ರಾಜ್ಯ ಸರ್ಕಾರಗಳ ಶಿಫಾರಸಿನ ಬಗ್ಗೆ ಕೇಂದ್ರ ಸರ್ಕಾರ ಕೂಲಂಕಷ ತಪಾಸಣೆ ನಡೆಸಿದ ನಂತರ ತೀರ್ಮಾನ ತೆಗೆದುಕೊಳ್ಳಬೇಕು ಎಂದು ಸುರೇಶ್‌ ಮನವಿ ಮಾಡಿದರು.  ಉತ್ತರ ಪ್ರದೇಶದ 17 ಜಾತಿಗಳನ್ನು ಪರಿಶಿಷ್ಟ ಜಾತಿ ಪಟ್ಟಿಗೆ ಸೇರಿಸುವಂತೆ ಸಮಾಜವಾದಿ ಪಕ್ಷದ ಧುರೀಣ ಹಾಗೂ ಸಂಸದ ಮುಲಾಯಂಸಿಂಗ್ ಯಾದವ್‌ ಮನವಿ ಮಾಡಿದರು. ಉತ್ತರ ಪ್ರದೇಶ ಸರ್ಕಾರ ಈ ಪ್ರಸ್ತಾವ­ವನ್ನು ಹಿಂತೆಗೆದುಕೊಂಡಿದೆ ಎಂಬುದನ್ನು ಗೆಹ್ಲೋಟ್‌ ಅವರು ಮುಲಾಯಂ ಗಮನಕ್ಕೆ ತಂದರು.

ಪ್ರಸ್ತಾವವನ್ನು ಹಿಂತೆಗದುಕೊಂಡಿದ್ದು ಹಿಂದಿನ ಸರ್ಕಾರವೇ ಹೊರತು ಸಮಾಜ­ವಾದಿ ಪಕ್ಷದ ಸದ್ಯದ ಸರ್ಕಾರವಲ್ಲ ಎಂದು ಮುಲಾಯಂ ಸ್ಪಷ್ಟಪಡಿಸಿದರು.

ಸಿಪಿಎಂ ಸಂಸದ ಶಂಕರ್‌ ಪ್ರಸಾದ್‌ ದತ್ತ ಅವರು ಖಾಸಗಿ ವಲಯದಲ್ಲೂ ದಲಿತರಿಗೆ ಮೀಸಲಾತಿ ನೀಡಬೇಕು ಎಂದು  ಒತ್ತಾಯಿಸಿದರು.
2012ರಲ್ಲಿಯೇ ಸಂವಿಧಾನ (ಪರಿಶಿಷ್ಟ ಜಾತಿ) ಆದೇಶ ತಿದ್ದುಪಡಿ ಮಸೂದೆ­ಯನ್ನು ಮೊದಲ ಬಾರಿಗೆ ಲೋಕಸಭೆ­ಯಲ್ಲಿ ಇಡಲಾಗಿತ್ತು. ಲೋಕಸಭೆ ವಿಸರ್ಜನೆಯಾದ ಕಾರಣ ಈ ಮಸೂದೆ ಬಾಕಿ ಉಳಿದಿತ್ತು. ಬಿಜೆಪಿ ಸರ್ಕಾರ ಇದೇ ಆಗಸ್ಟ್‌ನಲ್ಲಿ ಮತ್ತೊಮ್ಮೆ ಈ ಮಸೂದೆಯನ್ನು ಲೋಕಸಭೆಯಲ್ಲಿ ಮಂಡಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT