ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರಿಸರಸ್ನೇಹಿ ಮದುವೆ!

Last Updated 4 ಮೇ 2015, 19:30 IST
ಅಕ್ಷರ ಗಾತ್ರ

ಮದುವೆ ಎಂದರೆ  ಸಡಗರ, ಹೂವಿನ ಘಮಲು, ಸಂಗೀತ, ಸವಿಯೂಟ... ಎಲ್ಲವುಗಳ ಮೇಳ.

ಆದರೆ ಅತ್ತ ಮದುಮಕ್ಕಳು, ನೆಂಟರಿಷ್ಟರು ತೆರಳುತ್ತಿದ್ದಂತೆಯೇ, ಮದುವೆ ಮಂಟಪಗಳು ಮಾತ್ರ ಅಕ್ಷರಶಃ ಕಸದ ರಾಶಿಯ ಸ್ಥಳ. ಮಂಟಪದ ಕಳೇಬರಗಳು, ತಳಿರು ತೋರಣ, ರದ್ದಿಗಳು, ಕಾಲಿನ ಕಸವಾಗುವ ಹೂಗಳು, ಆಲಂಕಾರಿಕ ಸಾಮಗ್ರಿಗಳು, ಊಟದ ತಟ್ಟೆಗಳು, ನೀರಿನ ಬಾಟಲಿ, ಪ್ಲಾಸ್ಟಿಕ್‌...

ತಿಪ್ಪೆರಾಶಿಯೇ ಅಲ್ಲಿ ನಿರ್ಮಾಣವಾಗಿರುತ್ತದೆ. ಹೀಗೆ ಉತ್ಪಾದನೆಯಾಗುವ ಕಸ ಮಂಟಪದ ಆಚಿಗಿನ ಇಲ್ಲವೇ ನಗರದಾಚೆಗಿನ ಗುಂಡಿಗಳಿಗೆ ಬಿದ್ದು, ಅಲ್ಲಿನ ಜನ–ಜಾನುವಾರುಗಳು ನಾನಾ ಸಮಸ್ಯೆಗಳನ್ನು ಎದುರಿಸಲು ಕಾರಣವಾಗುತ್ತಿದೆ.

ಮದುವೆಯೆಂಬ ಶುಭ ಸಮಾರಂಭವೊಂದು ನಂತರ ಈ ಪರಿಯಲ್ಲಿ ಅನಾರೋಗ್ಯಕರ ವಾತಾ ವರಣ ನಿರ್ಮಿಸುವುದನ್ನು ತಪ್ಪಿಸುವ ಸಲುವಾಗಿ ಮದುವೆ ದಿನಗಳಲ್ಲಿ ವಿನೂತನ ಪ್ರಯೋಗ ಮಾಡುವ ಪಣ ತೊಟ್ಟಿದ್ದಾರೆ ಬೆಂಗಳೂರಿನ ಎನ್‌.ವಿಜೇತ. ಮದುವೆ, ಹುಟ್ಟುಹಬ್ಬ ಮುಂತಾದ ಶುಭ ಸಮಾರಂಭಗಳಲ್ಲಿ ‘ಹಸಿರು ಭಿತ್ತಿ’ ಅಲಂಕಾರ ಮಾಡುವ ಶೂನ್ಯ ತ್ಯಾಜ್ಯ ಮದುವೆ ಮಾಡುವುದು ಅವರ ಉದ್ದೇಶ.

ವಿಷ ಮುಕ್ತ ವಾತಾವರಣ
ಮದುವೆ ಮಂಟಪದ ಸುತ್ತ ಪ್ಲಾಸ್ಟಿಕ್‌ ಅಥವಾ ನರ್ಸರಿ ಹೂಗಳ ಬದಲು ಜೀವಂತ ಸಸ್ಯಗಳು, ಹೂಗಳು, ಕದಿರುಗಳು ಮುಂತಾದವುಗಳಿಂದ ಸುಂದರವಾದ ಸಸ್ಯಮಂಟಪ ನಿರ್ಮಿಸುತ್ತಾರೆ.

‘ಸಸ್ಯಗಳು ವಾತಾವರಣದ ವಿಷಗಾಳಿಯನ್ನು ಹೀರಿಕೊಂಡು, ಸ್ವಚ್ಛ ಗಾಳಿ ನೀಡುತ್ತವೆ. ಬಿಸಿಗಾಳಿಗೆ ತಂಪಿನ ಸಿಂಚನ ಮಾಡುತ್ತವೆ. ಈ ಹಿಂದೆ ಮದುವೆ ಮಂಟಪಗಳಿಗೆ ಮಾವು, ಬೇವು, ಬಾಳೆಗಿಡಗಳನ್ನು ಕಟ್ಟುತ್ತಿದ್ದುದರ ಹಿಂದೆ ಇದೇ ವೈಜ್ಞಾನಿಕ ಕಾರಣ ಅಡಗಿದೆ.   ನಾವು ಈ ಜೀವಂತ ಸಸ್ಯಭಿತ್ತಿಯನ್ನು ಕಳಚಿ ಮತ್ತೊಂದು ಮಂಟಪಕ್ಕೆ ಬಳಸುವುದರಿಂದ ಅಲ್ಲಿ ಸತ್ತ ಹೂಗಳು, ಕಸದ ರಾಶಿಯ ಲವಲೇಶವೂ ಇರುವುದಿಲ್ಲ’ ಎನ್ನುತ್ತಾರೆ ವಿಜೇತ.

ಹೂವಿನ ಅಲಂಕಾರದಿಂದಾಗಿ ಬೆಂಗಳೂರು ನಗರ ಒಂದರಲ್ಲಿಯೇ ಸಾವಿರಕ್ಕೂ ಹೆಚ್ಚು ಟನ್‌ ಕಸ ಉತ್ಪಾದನೆಯಾಗುತ್ತಿದೆ. ಹೂಗಳನ್ನು ಬೆಳೆಸಲು ರಾಸಾಯನಿಕ ಬಳಸುವುದರಿಂದ ಮಣ್ಣು ಮತ್ತು ಅಂತರ್ಜಲ ಕಲುಷಿತವಾಗುತ್ತಿದೆ. ಇದನ್ನು ತಪ್ಪಿಸು ವುದು ಇವರ ಉದ್ದೇಶ. ‘ನಾವು ಮಾಡುವ  ಕೆಲಸ ಪರಿಸರಸ್ನೇಹಿಯಾಗಿರಬೇಕು. ಇಲ್ಲದಿದ್ದಲ್ಲಿ ಮುಂದಿನ ಪೀಳಿಗೆ ನಾನಾ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ’ ಎನ್ನುವ ಕಳಕಳಿ ಅವರದ್ದು.

ರೈತನಿಗೂ ಲಾಭ
ಶೂನ್ಯ ತ್ಯಾಜ್ಯ ಮದುವೆ ನಮ್ಮ ಗುರಿ. ಅದಕ್ಕಾಗಿ ಕೇಟರಿಂಗ್‌ ಮಾಡುವವರಿಗೂ ಊಟಕ್ಕೆ ಪ್ಲಾಸ್ಟಿಕ್‌ ತಟ್ಟೆಗಳ ಬದಲು ಬಾಳೆ ಎಲೆಗಳನ್ನು ಬಳಸುವಂತೆ ಜಾಗೃತಿ ಮೂಡಿಸುತ್ತಿದ್ದೇವೆ. ಹೀಗೆ ಬಳಸುವ ಬಾಳೆ ಎಲೆಗಳನ್ನು ರೈತರಿಗೆ ಕಳುಹಿಸುತ್ತೇವೆ. ರೈತರು ಅದನ್ನು ಗೊಬ್ಬರ ಮಾಡಿ ಕೊಡುತ್ತಾರೆ. ಆ ಗೊಬ್ಬರವನ್ನು ಸಸ್ಯಗಳನ್ನು ಬೆಳೆಸಲು, ತಾರಸಿ ತೋಟದ ನಿರ್ಮಾಣಕ್ಕೆ ಬಳಸಿಕೊಳ್ಳುತ್ತೇವೆ. ಇದರಿಂದ ರೈತನಿಗೂ ಆದಾಯ ಸಿಗಲಿದೆ. ಕಸದ ನಿಯಂತ್ರಣವೂ ಸಾಧ್ಯವಾಗಲಿದೆ’ ಎಂಬುದು ವಿಜೇತ ಅವರ ಅನಿಸಿಕೆ.

ಮದುವೆ ತಾಂಬೂಲಕ್ಕೂ ಸಸ್ಯ
ಮದುವೆಗೆ ಬರುವವರಿಗೆ ಎಲೆ, ಅಡಿಕೆ, ತೆಂಗಿನ ಕಾಯಿಯನ್ನು ತಾಂಬೂಲವಾಗಿ ನೀಡುವುದು ವಾಡಿಕೆ.
ಆದರೆ ವಿಜೇತ ಅವರ ‘ಹಸಿರು ಭಿತ್ತಿ’ ಅಲಂಕಾರದ ಮದುವೆಗಳಲ್ಲಿ ಔಷಧೀಯ ಸಸ್ಯಗಳನ್ನೇ ತಾಂಬೂಲವಾಗಿ ನೀಡಲಾಗುತ್ತದೆ. ಸಸ್ಯಗಳ ಉಪಯೋಗ, ಬೆಳೆಸುವ ವಿಧಾನದ ಬಗ್ಗೆ ವಿಜೇತ ಅವರ ತಂಡ ಪ್ರತಿಯೊಬ್ಬರಿಗೂ ಮಾಹಿತಿ ನೀಡುತ್ತದೆ. ಮದುವೆ ಕಾರ್ಯಕ್ರಮಗಳಲ್ಲಿ ಇದುವರೆಗೆ ಆರು ಲಕ್ಷಕ್ಕೂ ಹೆಚ್ಚು ಸಸ್ಯಗಳನ್ನು ತಂಡ ನೀಡಿದೆ. ಈ ಮೂಲಕ ಪರಿಸರದ ಸಂರಕ್ಷಣೆ ಬಗ್ಗೆ ಜಾಗೃತಿ ಮೂಡಿಸುವುದೂ ತಂಡದ ಗುರಿ.

‘ಮರಗಳ ಕಡಿತದ ಬಗ್ಗೆ ಎಲ್ಲರೂ ಆಕ್ರೋಶ ವ್ಯಕ್ತಪಡಿಸುತ್ತಾರೆ. ಆದರೆ ವೈಯಕ್ತಿಕವಾಗಿ ನಾವು ಮಾಡಬೇಕಾದ ಕೆಲಸಗಳ ಬಗ್ಗೆ ಯಾರೂ ಯೋಚಿಸುವುದಿಲ್ಲ. ಪರಿಸರ ಸಂರಕ್ಷಣೆಯಾದರೇನೆ ಮಳೆ, ಬೆಳೆ ಎಲ್ಲ. ಈಗಾಗಲೇ ಹಲವೆಡೆ ನೀರಿಗಾಗಿ ಹಾಹಾಕಾರ ಎದ್ದಿರುವ ಕಾರಣ ಹೊಸದಾಗಿ ಮನೆ ಕಟ್ಟುವವರಿಗೆ ಮಳೆ ಕೊಯಿಲು ವ್ಯವಸ್ಥೆಯನ್ನು ತಪ್ಪದೇ ಸ್ಥಾಪಿಸಲು ಸಲಹೆ ನೀಡುತ್ತೇನೆ’ ಎನ್ನುತ್ತಾರೆ ವಿಜೇತ. ಇವರ ಸಂಪರ್ಕ ಸಂಖ್ಯೆ: 9036492587

ಮೂಲತಃ ಕೊಳ್ಳೇಗಾಲದವರಾದ ವಿಜೇತ ಅವರು ಬೆಳೆದಿದ್ದು, ಓದಿದ್ದೆಲ್ಲ ಬೆಂಗಳೂರಿನಲ್ಲಿ. ಬಿಬಿಎಂ ಪದವೀಧರರಾಗಿರುವ ಇವರು ಪರಿಸರದ ಬಗೆಗಿನ ಅಪಾರ ಆಸಕ್ತಿಯಿಂದಾಗಿ ಖಾಸಗಿ ಕಂಪೆನಿಯೊಂದರ ಕೆಲಸಕ್ಕೆ ರಾಜೀನಾಮೆ ನೀಡಿ, ಕಳೆದ ಐದು ವರ್ಷಗಳಿಂದ ಪರಿಸರ ಸಂಬಂಧಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಬೆಂಗಳೂರು, ಚಿಕ್ಕಮಗಳೂರು ಸೇರಿ ಹಲವೆಡೆ ಮದುವೆ ಮಂಟಪಗಳಿಗೆ ‘ಹಸಿರು ಭಿತ್ತಿ’ ಅಲಂಕಾರ ಮಾಡಿ ಮೆಚ್ಚುಗೆ ಗಳಿಸಿದ್ದಾರೆ. ಇವರೊಂದಿಗೆ ಮದನಗೋಪಾಲ್‌, ಹರ್ಷ ಕಾವಾ ಅವರು ಕೈಜೋಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT