ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರೀಕ್ಷೆ ಪಡಿಪಾಟಲು

Last Updated 4 ಮಾರ್ಚ್ 2015, 19:30 IST
ಅಕ್ಷರ ಗಾತ್ರ

ಶಾಲಾ ಕಾಲೇಜುಗಳಿಗೆ ಪರೀಕ್ಷೆ ಸೀಸನ್ ಇದು. ಈ ಪರೀಕ್ಷೆ ಭೂತದ ಜಾಡು ಹಿಡಿದೇ ‘ಕಾಮನಬಿಲ್ಲು’, ಪರೀಕ್ಷೆಗಳಲ್ಲಿ ನೀವು ಬರೆದ ಮೂರ್ಖ ಉತ್ತರಗಳನ್ನು ಮೆಲುಕು ಹಾಕಿ, ನಕ್ಕು ನಗಿಸುವ ‘ಪರೀಕ್ಷೆ ಪಡಿಪಾಟಲು’ ಪತ್ರ ಬರೆಯುವ ಅವಕಾಶವನ್ನು ಓದುಗರ ಮುಂದಿಟ್ಟಿತ್ತು. ನಗು ಉಕ್ಕಿಸುವ ನೂರಾರು ಪತ್ರಗಳು ಕೈ ಸೇರಿದವು. ಒಬ್ಬೊಬ್ಬರದ್ದೂ ಭಿನ್ನ ಉತ್ತರ. ಹಿರಿಯ ಕಿರಿಯರೆಲ್ಲರೂ ತಮ್ಮ ಮೂರ್ಖ ಉತ್ತರಗಳನ್ನು ಪ್ರಾಮಾಣಿಕವಾಗಿ ಒಪ್ಪಿಕೊಂಡು ನಕ್ಕಿದ್ದಾರೆ. ಜೊತೆಗೆ ತಮ್ಮ ವಿದ್ಯಾರ್ಥಿ ಜೀವನದ ಹಲವು ಸಂಗತಿಗಳನ್ನೂ ನೆನೆಸಿಕೊಂಡು ಸಂತಸವನ್ನೂ ಪಟ್ಟಿದ್ದಾರೆ. ಬನ್ನಿ, ಅಂಥ ಉತ್ತರ, ಪ್ರಸಂಗಗಳನ್ನು ನೋಡೋಣ...

ಅಸಗ ಕವಿ ಅಗಸ ಆದದ್ದು...
ಕೊಟ್ಟೂರಿನ ಕೊಟ್ಟೂರೇಶ್ವರ ಕಾಲೇಜಿನಲ್ಲಿ ಬಿ.ಎ. ಪ್ರಥಮ ವರ್ಷಕ್ಕೆ ಪ್ರವೇಶ ಪಡೆದ ನಾನು, ತರಗತಿಗಳು ಪ್ರಾರಂಭವಾಗಿ ಒಂದೂವರೆ ತಿಂಗಳಿನ ನಂತರ ಕಾಲೇಜಿಗೆ ಬಂದೆ. ಬಂದ ದಿನವೇ ಕನ್ನಡ ಸಾಹಿತ್ಯ ಚರಿತ್ರೆಯ ಕಿರು ಪರೀಕ್ಷೆ. ವಿಧಿಯಿಲ್ಲದೆ ಪರೀಕ್ಷೆ ಬರೆಯಲೇಬೇಕಾಯಿತು. ಮೂರ್‍ನಾಲ್ಕು ದಿನಗಳ ನಂತರ ಉತ್ತರ ಪತ್ರಿಕೆಗಳನ್ನು ಮೌಲ್ಯಮಾಪನ ಮಾಡಿದ ಉಪನ್ಯಾಸಕರು ಸಾಕ್ಷಾತ್ ಜಮದಗ್ನಿ ಮಹರ್ಷಿಯಂತಾಗಿದ್ದರು. ಬಂದವರೇ, ‘ಈ ಪೇಪರ್ ಯಾರದು? ದಯವಿಟ್ಟು ಸ್ವಲ್ಪ ಮೇಲೆ ಎದ್ದೇಳ್ತಿರಾ? ರಾಸ್ಕಲ್ಸ್, ಹೆಸರು ಇಲ್ಲ,  ನಂಬರ್ ಇಲ್ಲ. ಕನ್ನಡದ ಕಗ್ಗೊಲೆಯಾಗೋದು ಇಂಥವರಿಂದ ನೋಡ್ರಿ’ ಅಂತ ಜೋರಾಗಿ ಬೈದರೂ ನಾನು ಮಾತ್ರ ಮೇಲೇಳಲೇ ಇಲ್ಲ. ಎಲ್ಲ ವಿದ್ಯಾರ್ಥಿಗಳು ಒಬ್ಬರ ಮುಖ ಒಬ್ಬರು ನೋಡ ಹತ್ತಿದರೇ ಹೊರತು ಅವರಿಗೆ ತಳಬುಡ ಅರ್ಥವಾಗಲಿಲ್ಲ.

ಕಾರಣ ಇಷ್ಟೆ. ಪಂಪಪೂರ್ವ ಯುಗದ ಕವಿಗಳಲ್ಲಿ ಒಬ್ಬರಾದ ಅಸಗ ಕವಿಯ ಬಗ್ಗೆ ಟಿಪ್ಪಣಿ ಬರೆಯಲು ಕೊಟ್ಟಿದ್ದರು. ಅದಕ್ಕೆ ನಾನು, ಅಸಗನು ಹನ್ನೆರಡನೇ ಶತಮಾನದಲ್ಲಿ ಬಾಳಿ ಬದುಕಿದ ಕವಿ. ಅಸಗ ಎಂಬ ಪದದ ಮೂಲ ರೂಪ ಅಗಸ. ಇವನ ಮೊದಲ ಕೆಲಸ ಬಟ್ಟೆ ತೊಳೆಯುವುದು ಮತ್ತು ತೊಳೆದ ಬಟ್ಟೆಗಳನ್ನು ಮನೆ ಮನೆಗೆ ಕೊಟ್ಟು ಬರುವುದು. ಅಲ್ಲದೆ ಬಟ್ಟೆ ಕೊಡಲು ಹೋದಾಗ ಮನೆಯ ಒಡೆಯ-ಒಡತಿಯರು ಜಗಳವಾಡುತ್ತಿದ್ದರು. ಇದನ್ನೇ ವಿಷಯವಾಗಿಸಿಕೊಂಡು ಸಾಕಷ್ಟು ಕೃತಿಗಳನ್ನು ಬರೆದ ಮಹಾನ್ ಕವಿ ಎನ್ನಿಸಿಕೊಂಡ ಅಸಗ ಕನ್ನಡ ಸಾಹಿತ್ಯ ಲೋಕಕ್ಕೆ ಆಪಾರ ಕೊಡುಗೆಯನ್ನು ನೀಡಿದ್ದಾನೆ... ಎಂದು. ಎಲ್ಲರೂ ಈ ಉತ್ತರ ಕೇಳಿದ್ದೇ ನಗಲು ಆರಂಭಿಸಿದ್ದರು. ಈ ವಿಷಯವನ್ನು ಇಲ್ಲಿಯವರೆಗೆ ಯಾರೊಬ್ಬರಿಗೂ ಹೇಳಿರಲಿಲ್ಲ. ಈಗ ನಾನೊಬ್ಬ ಕನ್ನಡ ಶಿಕ್ಷಕ. ನನ್ನ ವಿದ್ಯಾರ್ಥಿಗಳು ಬರೆದ ಉತ್ತರಗಳನ್ನು ನೋಡಿ ಆ ಘಟನೆ ನೆನೆಸಿಕೊಂಡು ಒಬ್ಬನೇ ನಗುತ್ತೇನೆ.
–ವೀರೇಶ್.ಕೆ.ಟಿ, ಬಳ್ಳಾರಿ

***
ಸೂತ್ರವಿಲ್ಲದ ಉತ್ತರ
ಒಂದೊಂದೇ ದಿನ ಕಾಲಗರ್ಭದೊಳಗೆ ಸೇರುತಿದ್ದ ಹಾಗೆ ಬಿ.ಇಡಿ ಪ್ರಥಮ ಸೆಮಿಸ್ಟರಿನ ಪರೀಕ್ಷೆಗಳು ನಮಗೆ ಧುತ್ತೆಂದು ಹುಲಿಯ ಹಾಗೆ ಎರಗಿ ಬಂದಿದ್ದವು. ಸ್ವಲ್ಪವೂ ವಿಚಲಿತಗೊಳ್ಳದೆ ಪರೀಕ್ಷೆಯ ಹಿಂದಿನ ರಾತ್ರಿ ಗೆಳೆಯರಲ್ಲಿ ಕೇಳಿ ಕೆಲವೊಂದು ವ್ಯಾಖ್ಯೆ, ಅರ್ಥ, ಸ್ವರೂಪಗಳನ್ನು ಕಂಠಪಾಠ ಮಾಡಿಕೊಂಡಿದ್ದೆ, ಪಾಸಾಗಲು ಸಾಲದೆ ಹೋದರೆ ಕಣ್ಣಿಗೆ ಕೆಲಸ ಕೊಟ್ಟರೆ ಆಯಿತೆಂದು ಮಾನಸಿಕವಾಗಿ ಸಿದ್ಧನಾಗಿ ಪರೀಕ್ಷಾ ಕೊಠಡಿ ತಲುಪಿದೆ. ಆವತ್ತು ನಾನು ಬರೆದಿದ್ದು ಶೈಕ್ಷಣಿಕ ಮನೋವಿಜ್ಞಾನ. ಮೊದಲೆರಡು ಪ್ರಶ್ನೆಗಳನ್ನು ಚೆನ್ನಾಗಿ ಬರೆದೆ. ಆದರೆ ವೇಗವಾಗಿ ಸಾಗುತಿದ್ದ ನನ್ನುತ್ತರಕ್ಕೆ ತಡೆ ಬಿದ್ದದ್ದು ಮೂರನೇ ಪ್ರಶ್ನೆಗೆ. ಅದು, 8 ವರ್ಷದ ಬಾಲಕನ ಮಾನಸಿಕ ವಯಸ್ಸು 9 ವರ್ಷಗಳಾಗಿದ್ದರೆ, ಮತ್ತು 9 ವರ್ಷದ ಬಾಲಕನ ಮಾನಸಿಕ ವಯಸ್ಸು 8 ವರ್ಷಗಳಾಗಿದ್ದರೆ ಅವರ ಬುದ್ಧಿಶಕ್ತಿ ಸೂಚ್ಯಂಕ ಏನಾಗಿರುತ್ತದೆ? ಎಂಬುದಿತ್ತು.

ಹನುಮಂತನ ಬಾಲದಂತೆ ಉದ್ದವಿದ್ದ ಈ ಪ್ರಶ್ನೆಯನ್ನು ತಿರುಗಾ ಮುರುಗಾ ಓದಿದರೂ ಅರ್ಥವಾಗದೇ ಹೋಯಿತು. ಮುಂದಿನ ಹುಡುಗಿಯನ್ನು ಕೇಳಬೇಕೆಂದರೆ, ಅವಳು ಮೊದಲೇ ಸಟ್ರಾಸ ಗಿರಾಕಿ, ಒಂದಕ್ಷರ ಕಾಣದಂತೆ ಕರಿಗಲ್ಲು ಕುಂತ ಹಾಗೆ ಕುಳಿತಿದ್ದಳು.
ನಾನೇ ಉತ್ತರ ಬರೆದೆ- ಇಲ್ಲಿ ನಮಗೆ ವಯಸ್ಸಿನ ವ್ಯತ್ಯಾಸ ಕಂಡು ಬಂದರೂ ಇವರಲ್ಲಿ ಅನೇಕ ಭಿನ್ನತೆ ಇರುತ್ತದೆ. ಉದಾಹರಣೆಗೆ ನಮ್ಮನ್ನೆ ತಗೆದುಕೊಳ್ಳಿ. ನಾವು ಅತ್ಯಂತ ಸೃಜನಶೀಲರು, ಸನ್ನಿವೇಶದಲ್ಲಿ ಇರುವ ಮಾಹಿತಿಯನ್ನು ಸುಲಭವಾಗಿ ಗ್ರಹಿಸಿ ಅದು ಹೀಗೆಯೇ ಆಗುತ್ತದೆ ಅಂತ ಹೇಳುತ್ತೇವೆ. ನಮ್ಮಲ್ಲಿ ಮಾನಸಿಕ ವಯಸ್ಸು ಸುಮಾರು ಪಟ್ಟು ಇರುತ್ತದೆ. ಆದರೆ ಬುದ್ಧಿಮಾಂದ್ಯರಲ್ಲಿ ಈ ಶಕ್ತಿ ಇರುವುದಿಲ್ಲ, ಆದ್ದರಿಂದ ಅವರಿನ್ನೂ 8 ಮತ್ತು 9 ವರ್ಷದ ಮಕ್ಕಳು. ಅವರಿಗೆ ಬುದ್ಧಿಶಕ್ತಿಯೇ ಇರುವುದಿಲ್ಲ. ಅಂದ ಮೇಲೆ ಅವರ ಬುದ್ಧಿಶಕ್ತಿ ಸೂಚ್ಯಂಕ ಸೊನ್ನೆ ಆಗಿರುತ್ತದೆ. ಆದರೆ ಸ್ವಲ್ಪ ಬುದ್ಧಿಮಾಂದ್ಯರಿಗಿಂತ ಜ್ಞಾನವನ್ನು ಹೊಂದಿರುತ್ತಾರೆ. ಇಲ್ಲಿ ಮಂದಗತಿಯಲ್ಲಿ ಕಲಿಯುತ್ತಾರೆ. ನಮ್ಮ ವಯಸ್ಸಿಗೆ ಬಂದ ಮೇಲೆ ವೇಗವಾಗಿ ಕಲಿಯುತ್ತಾರೆ. ಹೀಗೆ ತಡೆ ರಹಿತ ಅಂತೆ ಕಂತೆಗಳ ನನ್ನುತ್ತರ ಮೂರು ಪುಟದವರೆಗೆ ಸಾಗಿ ನಿಂತಿತು.

ಆವತ್ತು ಏನೂ ಬರದ ಪ್ರಶ್ನೆಗೆ ಮೂರು ಪುಟದ ಉತ್ತರ ಬರೆದ ಬುದ್ಧಿಗೆ ಆದ ಸಂತೋಷಕ್ಕೆ ಪಾರವೇ ಇರಲಿಲ್ಲ. ಆದರೆ ಅದು ಬಹಳ ಹೊತ್ತು ಉಳಿಯಲಿಲ್ಲ. ಪರೀಕ್ಷಾ ಕೊಠಡಿಯಿಂದ ಹೊರ ಬಂದ ಗೆಳೆಯ ಮೂರನೇ ಪ್ರಶ್ನೆಗೆ ನಾ ಹೇಳಿದ ಹಾಗೆ ಸೂತ್ರ ಹಾಕಿ ಬರಿದಿದ್ದೀಯಾ ಅಂತ ಕೇಳಿದಾಗಲೇ ಗೊತ್ತಾಗಿದ್ದು; ಅವನು ಹೇಳಿದ ಮಾತು ನನಗೆನೋ ಕೇಳಿ ನಾನು ಮೂರ್ಖ ಉತ್ತರವನ್ನು ಬರೆದಿದ್ದಿನಿ ಅಂತ. ನಿಜವಾಗಿಯೂ ಈ ಪ್ರಶ್ನೆಗೆ. ಬುದ್ಧಿಶಕ್ತಿ ಸೂಚ್ಯಂಕ [IIQ] = ಮಾನಸಿಕ ವಯಸ್ಸು[MA]/ದೈಹಿಕ ವಯಸ್ಸು[CA]* 100 ಎಂಬ ಸೂತ್ರವನ್ನು ಬಳಸಿ ಲೆಕ್ಕ ಕಂಡು ಹಿಡಿಯುವುದಾಗಿತ್ತು. ಸೂತ್ರವಿಲ್ಲದ ನನ್ನುತ್ತರವನ್ನು ಯಾವ ಪುಣ್ಯಾತ್ಮ ನೋಡಿದರೋ ಅವರಿಗೆ ಅರ್ಥವಾಗಿರಬೇಕು ನನ್ನ ಬುದ್ಧಿಶಕ್ತಿ ಎಷ್ಟು ಅಂತ.
–ಪರಶುರಾಮ ತಳವಾರ, ಗದಗ

****
 ಬುದ್ಧಿ ಉಪಯೋಗಿಸಿ ಬರೆದದ್ದು
ಸುಮಾರು ನಲವತ್ತು ವರ್ಷಗಳ ಹಿಂದಿನ ಮಾತು. ನಮ್ಮ ತಾಯಿಯವರು ಮೆಟ್ರಿಕ್, ಅಂದರೆ ಇಂದಿನ ಎಸ್ಸೆಸ್ಸೆಲ್ಸಿವರೆಗೆ ಓದಿದ್ದರು. ಅವರು ನಮ್ಮ ಪರೀಕ್ಷೆ ಆದ ಮೇಲೆ ಮನೆಗೆ ಬಂದ ತಕ್ಷಣ ಪ್ರಶ್ನೆ ಪತ್ರಿಕೆಗಳನ್ನು ತೆಗೆದುಕೊಂಡು ಯಾವ ಯಾವ ಪ್ರಶ್ನೆಗಳಿಗೆ ಏನು ಉತ್ತರ ಬರೆದಿರುವಿರೆಂದು ಪ್ರಶ್ನಿಸುತ್ತಿದ್ದರು.

ನನ್ನ ತಂಗಿ ಸಾಗರದ ಸರ್ಕಾರಿ ಬಾಲಿಕಾ ಕನ್ನಡ ಮಾಧ್ಯಮದ ಶಾಲೆಯಲ್ಲಿ ಐದನೇ ತರಗತಿ ಓದುತ್ತಿದ್ದಳು. ಅಂದು ಅವಳು ಸಮಾಜ ಪರಿಚಯ ಪರೀಕ್ಷೆ ಮುಗಿಸಿಕೊಂಡು ಬಂದಳು. ಅವಳು ಕೈ ಕಾಲುಮುಖ ತೊಳೆದುಕೊಂಡು ಬಂದ ಕೂಡಲೇ, ನಮ್ಮ ತಾಯಿಯವರು ಅವಳನ್ನು ಕೂರಿಸಿಕೊಂಡು ಸಮಾಜ ಪರಿಚಯ ಪರೀಕ್ಷೆ ಪತ್ರಿಕೆಯಲ್ಲಿದ್ದ ಪ್ರಶ್ನಗಳಿಗೆ ಉತ್ತರಗಳನ್ನು ಕೇಳತೊಡಗಿದರು. ಪ್ರಶ್ನೆ ಕೇಳುತ್ತಿದ್ದಾಗ ನನ್ನ ತಂಗಿ ಉತ್ತರ ಕೊಡುತ್ತಾ ಇದ್ದಳು. ನಮ್ಮ ತಾಯಿಯವರು ಕೇಳಿದ ಮುಂದಿನ ಪ್ರಶ್ನೆ, ‘ಇವು ಏನು, ಎಲ್ಲಿವೆ’ ಎಂದು. ಈಗ ಹೇಳು ‘ಗೌರಿ ಶಂಕರ’ ಎಂದರು. ಆಗ ನನ್ನ ತಂಗಿ ಅದೇ ಉತ್ಸಾಹದಿಂದ, ಗಟ್ಟಿಯಾಗಿ, ‘ಗೌರಿ ಶಂಕರ, ಇದು ಒಂದು ಬಸ್ಸು. ಇದು ಪ್ರತಿ ದಿನವೂ ಸಾಗರದಿಂದ ಶಿವಮೊಗ್ಗಕ್ಕೆ ಓಡಾಡುತ್ತದೆ’ ಎಂದು ಹೇಳಬೇಕೆ? ಅಲ್ಲಿದ್ದ ನಾನು, ನನ್ನ ಅಕ್ಕ, ನಮ್ಮ ತಾಯಿ ಬಿದ್ದು ಬಿದ್ದು ನಕ್ಕೆವು. ಆಗ ಅವಳು, ‘ಯಾಕೆ, ನಿಮಗೆ ಗೌರಿಶಂಕರ ಬಸ್ಸು ಗೊತ್ತಿಲ್ಲವಾ? ಮೊನ್ನೆ ಮಾವನ ಮನೆಗೆ ಶಿವಮೊಗ್ಗಕ್ಕೆ ನಾವು ಅದರಲ್ಲೇ ಅಲ್ಲವಾ ಹೋಗಿದ್ದು’ ಎಂದು ಮುಗ್ಧಳಾಗಿ ಕೇಳಿದಾಗ ನಾವು ಸುಮ್ಮನಾದೆವು. ಅವಳ ಪುಸ್ತಕ ತೆಗೆದು, ‘ಗೌರಿ ಶಂಕರ, ಇದು ಒಂದು ಶಿಖರ. ಹಿಮಾಲಯ ಪರ್ವತ ಶ್ರೇಣಿಗಳಲ್ಲಿದೆ. ಹಿಮಾಲಯದ ಶ್ರೇಣಿಗಳಲ್ಲಿರುವ ಪರ್ವತಗಳಲ್ಲಿ ಇದು ಎರಡನೆಯ ಅತ್ಯಂತ ಎತ್ತರದ ಶಿಖರ’ ಎಂದು ತಾಯಿ ಹೇಳಿದರು. ಅವಳು ಅದಕ್ಕೆ ‘ಆ ಪಾಠ ಮಾಡಿದ ದಿನ ನನಗೆ ಜ್ವರ ಬಂದಿತ್ತು ಅಂತ ಕ್ಲಾಸಿಗೆ ಹೋಗಿರಲಿಲ್ಲ’ ಎಂದು ಮುಖ ಊದಿಸಿಕೊಂಡಳು.
–ಸು.ವಿಜಯಲಕ್ಷ್ಮಿ, ಶಿವಮೊಗ್ಗ.

***

ಬ್ಲೌಸ್‌ಗಳನ್ನು ಹೆಂಗಸರು ಮಾತ್ರ ತೊಡುತ್ತಾರೆ
ಆಗ ಬಿ ಫಾರ್ಮ ಓದುತ್ತಿದ್ದೆ. ನಮಗೆ 3 ಸೆಶನಲ್ಸ್ ಇರುತ್ತದೆ. ಅದರಲ್ಲಿ ಬೆಸ್ಟ್ ಆಫ್ ಟು ಮಾರ್ಕ್ಸ್ ಕೌಂಟ್ ಮಾಡುತ್ತಾರೆ. ನಾನು ಎರಡು ಸೆಶನಲ್ಸ್‌ನಲ್ಲಿ ಸಾಕಾದಷ್ಟು ಶೇಕಡ ಅಂಕಗಳನ್ನು ತೆಗೆದುಕೊಂಡಿರಲಿಲ್ಲ. ಹಾಗಾಗಿ ಮಾರ್ಕ್ಸ್‌ನ ಅತ್ಯವಶ್ಯಕತೆ ನನಗಿತ್ತು. ನಮ್ಮಲ್ಲಿ ಪ್ರಶ್ನೆ ಪತ್ರಿಕೆಯನ್ನು ಬರಹ ರೂಪದಲ್ಲಿ ಕೊಡುವುದಿಲ್ಲ. ಸೆಶನಲ್ಸ್‌ಗೆ ಬಾಯಿಯ ಮೂಲಕ ಹೇಳುತ್ತಾರೆ. ಸೆಶನಲ್ ಆದ ಮೂರನೇ ದಿನಕ್ಕೆ ಬಂದ ನಮ್ಮ ಲೆಕ್ಚರರ್ ನನಗೆ 3ನೇ ಪ್ರಶ್ನೆಗೆ ನಾನು ಬರೆದ ಉತ್ತರ ಓದಲು ಹೇಳಿದರು. ನಾನು ಬರೆದ ಉತ್ತರ ಅತ್ಯುತ್ಕೃಷ್ಟವಾಗಿದೆ ಎಂಬ ಹುಮ್ಮಸ್ಸು, ಗರ್ವದಿಂದ ಓದಲು ಶುರುವಾದೆ. ಎರಡು ಸಾಲು ಓದುವಷ್ಟರಲ್ಲಿ ಕ್ಲಾಸ್ ಎಲ್ಲ ನಗುವಿನಲೆಯಲ್ಲಿ ಬಿದ್ದಿತ್ತು. ಆತುರಗಾರನಿಗೆ ಬುದ್ಧಿಮಟ್ಟ ಎಂಬಂತೆ ಅವರು ‘ಗ್ಲೌಸ್’ ಬಗ್ಗೆ ಟಿಪ್ಪಣಿ ಬರೆಯಿರಿ ಎಂದರೆ ನಾನು ಬ್ಲೌಸ್ ಎಂದು ತಪ್ಪಾಗಿ ಕೇಳಿಸಿಕೊಂಡು ಉತ್ತರಿಸಿದ್ದೆ.

ನಾನು ಬರೆದ ಉತ್ತರ ಹೀಗಿತ್ತು. ಅದನ್ನು ಕನ್ನಡಕ್ಕೆ ಅನುವಾದಿಸಿದ್ದೇನೆ. ಓದಿ ಬಿದ್ದು ಬಿದ್ದು ನಕ್ಕರೆ ನಾನು ಜವಾಬ್ದಾರಳಲ್ಲ. ಸಾರಾಂಶ –ಬ್ಲೌಸ್‌ಗಳನ್ನು ಹೆಂಗಸರು ಮಾತ್ರ ತೊಡುತ್ತಾರೆ. ಇದಕ್ಕಾಗಿ ಹಲವಾರು ಗಾರ್ಮೆಂಟ್ಸ್‌ಗಳು ತಲೆ ಎತ್ತಿ ನಿಂತಿವೆ. ಇವುಗಳ ಉತ್ಪತ್ತಿಗೆ, ಮೂಲ ವಸ್ತುಗಳನ್ನು, ಸೌಲಭ್ಯಗಳನ್ನು ವಿದೇಶದಿಂದಲೂ ಆಮದು ಮಾಡಿಕೊಳ್ಳುತ್ತೇವೆ. ಇಂದು ಮಾರುಕಟ್ಟೆಗೆ ಹಲವಾರು ಬಗೆಯ ಬ್ಲೌಸ್‌ಗಳು ಲಗ್ಗೆ ಇಟ್ಟಿವೆ. ಇವು ಕಾಟನ್, ಪಾಲಿಸ್ಟರ್, ನೈಲಾನ್, ಸಿಲ್ಕ್ ಮುಂತಾದ ಬಗೆ ಬಗೆಯ ವೈವಿಧ್ಯದಲ್ಲೂ ದೊರೆಯುತ್ತದೆ. ಇವುಗಳಿಗೆ ಹಲವಾರು ವಿನ್ಯಾಸಗಳನ್ನು ನೀಡಿ ಹೆಚ್ಚು ಆಕರ್ಷಕವಾಗಿ ತಯಾರಿಸಬಹುದು. ಮಹಿಳೆಯರು ಇವುಗಳಿಗೆ ಆಭರಣ, ಮುತ್ತು, ಹವಳ, ಕಲ್ಲುಗಳನ್ನು ಹಾಕಿಸಿ ಮತ್ತಷ್ಟು ಆಕರ್ಷಣೆಗಳನ್ನು ಹೆಚ್ಚಿಸಿಕೊಳ್ಳಬಯಸುತ್ತಾರೆ’ ಎಂದು. ಅಂದಿನಿಂದ ನನ್ನ ಹೆಸರು ಗ್ಲೌಸ್ ಎಂದೇ ಪ್ರಖ್ಯಾತಿ– ಕ್ಷಮಿಸಿ ಬ್ಲೌಸ್ ಎಂದು.
–ಪಲ್ಲವಿ, ತುಮಕೂರು

****

 ನಾ ಬರೆದ ಪ್ರಬಂಧ
ನಾನಾಗ ಹೋಗುತ್ತಿದ್ದುದು ಕನ್ನಡ ಮಾಧ್ಯಮದ ಸರಕಾರಿ ಶಾಲೆಗೆ. ಆರನೇ ತರಗತಿಯಲ್ಲಿ ಓದುತ್ತಿದ್ದೆ. ವರ್ಷದ ಕೊನೆಯi ಪರೀಕ್ಷೆಗಳು ನಡೆಯುತ್ತಿದ್ದವು. ಇಂಗ್ಲೀಷ್ ಪರೀಕ್ಷೆ ಬರೆಯಲು ಸಿದ್ಧಳಾಗಿ ಹೋದೆ. ಪ್ರಶ್ನೆಪತ್ರಿಕೆ ಕೈಗೆ ಬಂದೊಡನೆ ಒಮ್ಮೆ ಕಣ್ಣಾಡಿಸಿದೆ. ಕೊನೆಯಲ್ಲಿ ಉಳಿದಿದ್ದು my father ಎನ್ನುವ ಪ್ರಬಂಧ. ಆದರೆ ತರಗತಿಯಲ್ಲಿ ಮೇಷ್ಟ್ರು ನಮಗೆ ಬರೆಸಿದ್ದು my friend ಎನ್ನುವ ಪ್ರಬಂಧವನ್ನು ಮಾತ್ರ. ಅದನ್ನೇ ಅಚ್ಚುಕಟ್ಟಾಗಿ ಕಂಠಪಾಠ ಮಾಡಿದ್ದೆ.  ಸ್ವಲ್ಪ ಹೊತ್ತು ಯೋಚಿಸಿದೆ. ಮೇಷ್ಟ್ರು ಬರೆಸಿದ my friend ಪ್ರಬಂಧವನ್ನು ಜ್ಞಾಪಿಸಿಕೊಂಡು friend ಎನ್ನುವ ಪದ ಇದ್ದ ಜಾಗದಲ್ಲಿ father ಎನ್ನುವ ಪದ ಬರೆದು ಪ್ರಬಂಧವನ್ನು ಪೂರ್ಣಗೊಳಿಸಿದ್ದೆ. ಹೇಗೆ ಅಂತೀರಾ?...

ಅಂದು ನಾ ಬರೆದ my father ಪ್ರಬಂಧ ಹೀಗಿತ್ತು . “I am very Fatherly person. I have lots of Fathers. Some of my Fathers are male and some are female. My mother is very close to many of my Fathers. My Uncle is also my Father. My true Father is my neighbour… and I love all my fathers… ಇನ್ನೂ  ಏನೇನು ಬರೆಯುತ್ತಿದ್ದೆನೋ? ಪುಣ್ಯಕ್ಕೆ ಸಮಯ ಮುಗಿದಿದ್ದರಿಂದ ನನ್ನ ಕೈಲಿದ್ದ ಉತ್ತರ ಪತ್ರಿಕೆ ಮೇಷ್ಟ್ರ ಕೈಸೇರಿತ್ತು. ಬಚಾವಾದೆ.
–ಛಾಯಾ ಪಿ.ಮಠ್, ಕಲಬುರಗಿ

***

 ಲೀವ್ ಲೆಟರ್ ಪ್ರಶ್ನೆಗೆ ಬರೆದೆ ಲವ್ ಲೆಟರ್!
ಎಸ್ಸೆಸ್ಸೆಲ್ಸಿಯಲ್ಲಿ ಇಂಗ್ಲಿಷ್ ವಿಷಯದಲ್ಲಿ ಜಸ್ಟ್ ಪಾಸಾದ ನನಗೆ ಉಳಿದೆಲ್ಲಾ ವಿಷಯಗಳಿಗಿಂತ ಸುಜಾತಾ ಮೇಡಮ್ ಅವರ ಇಂಗ್ಲಿಷ್ ಪೇಪರ್ ಹೇಗೆ ಪಾಸ್ ಮಾಡಬೇಕೆಂಬ ಪೀಕಲಾಟ, ತಳಮಳ, ಭಯಭೀತಿ. ಹಾಲ್ ಟಿಕೇಟು ಪಡೆದುಕೊಂಡು ವಾರ ಮುಗಿದರೂ ನಾನು ಏನನ್ನು ಓದದೆ ಪರೀಕ್ಷೆ ಬರೆಯಲು ಮನೆ ಬಿಟ್ಟೆ!

  ಕನ್ನಡ ಮಾತನಾಡಲು ಬಾರದ ಮಮತಾಜಳ ಪಕ್ಕಕ್ಕೆ ಹೋಗಿ ಕುಳಿತು ಪ್ರಶ್ನೆ ಪತ್ರಿಕೆ ತೆಗೆದು ನೋಡುತ್ತಿದ್ದೆ.  ಪಕ್ಕಕ್ಕಿದ್ದ ಗೆಳೆಯ ಗೆಳತಿಯರು ಪತ್ರಿಕೆಯ ಪ್ರಶ್ನೆಗೆ ಎಷ್ಟು ಅಂಕಗಳಿಗೆ ಉತ್ತರಿಸಬೇಕೆಂದು ಗುಸು ಗುಸು ಪಿಸುಪಿಸು ನಡೆಸುತ್ತಿದ್ದರು. ನಾನೊಬ್ಬನೇ ಕೇವಲ 30 ಅಂಕಗಳನ್ನು ತೆಗೆಯುವ ಪೀಕಲಾಟದಲ್ಲಿ ಒದ್ದಾಡುತ್ತಿದ್ದುದು. ಇರುವ ಮೂರು ಗಂಟೆಗಳಲ್ಲಿ ಅದೆಷ್ಟೋ ಬಾರಿ ತಲೆ ತಿಂದಿದ್ದೆ.

ಇಷ್ಟೆಲ್ಲ ರಗಳೆ ಜೊತೆಗೆ ಪರೀಕ್ಷೆ ಮುಗಿಯಲು ಇನ್ನು ಹದಿನೈದು ನಿಮಿಷ ಬಾಕಿ ಇರುವಾಗ ‘ರೈಟ್ ಎ ಲೀವ್ ಲೆಟರ್‌’ ಎಂಬ ಪ್ರಶ್ನೆಯನ್ನು ಮೂರ್ಖತನದಿಂದ ತಪ್ಪು ತಿಳಿದು ‘ಲವ್ ಲೆಟರ್’ ಅಂದುಕೊಂಡು ನೀಟಾಗಿ ಇಂಗ್ಲಿಷ್ ಲೆಟರು ಬರೆಯುವುದಕ್ಕೆ ಬಾರದ ಕಾರಣ ಕನ್ನಡದ ಪ್ರೇಮ ಪತ್ರವನ್ನು ಇಂಗ್ಲಿಷ್ ಶಬ್ದದಲ್ಲಿ ನನ್ನ ಪಕ್ಕದಲ್ಲಿಯೇ ಕುಳಿತಿದ್ದ ಮಮತಾಜಳ ಮೇಲೆ ಲವ್ ಲೆಟರ್ ಬರೆದೆ! ಕೊನೆಯ ಸಾಲುಗಳಲ್ಲಿ  ‘ಪ್ರಿಯೆ ಮಮತಾಜ, ನಾನು ಶಹಜಾನ್’ ಎಂದು ಬರೆದೆ.

ಅಂತೂ ಗೆಳೆಯನೊಬ್ಬನಿಂದ ಈ ನನ್ನ ಅಪ್ರಾಪ್ತ ಮನಸ್ಸಿಗೆ ಲೀವ್ ಮತ್ತು ಲವ್‌ಗೆ ವ್ಯತ್ಯಾಸ ತಿಳಿದು ತುಂಬ ಭಯಭೀತನಾದೆ. ಯಾಕೆಂದರೆ ಇಂಗ್ಲಿಷ್ ಪತ್ರಿಕೆ ಸುಜಾತಾ ಮೇಡಂ ಮೌಲ್ಯಮಾಪನ ಮಾಡುತ್ತಾರೆಂದು.  ಇದಕ್ಕಾಗಿ, ಸುಜಾತಾ ಮೇಡಂ ಎದುರಾದಾಗ ಅವರನ್ನೇ ಕೇಳಿದೆ. ಯಾರು ಇದರ ಮೌಲ್ಯ ಮಾಪನ ಮಾಡುವುದೆಂದು. ಆಗ ‘ನಾನು ಅಲ್ಲಪ್ಪಾ ಬೇರೆ ಸರ್ ಮೌಲ್ಯಮಾಪನ ಮಾಡುತ್ತಾರೆ’ ಎಂದು ಹೇಳಿದಾಗ
ನಿಟ್ಟುಸಿರು ಬಿಟ್ಟೆ... 
–ಎಂ.ಬಿ ನದಾಫ, ಧಾರವಾಡ

****

ಹಾಥ್ ತುರುಸ್ತಾ ಹೈ ...
ಕನ್ನಡ ಮಾಧ್ಯಮದ ಸರಕಾರಿ ಶಾಲೆಯಲ್ಲಿ ಓದಿದ ನಮಗೆ ಐದನೇ ತರಗತಿಯಿಂದ ಇಂಗ್ಲಿಷ್ ಹಾಗೂ ಆರನೇ ತರಗತಿಯಿಂದ ನಮ್ಮ ರಾಷ್ಟ್ರಭಾಷೆಗಳಲ್ಲೊಂದಾದ ಹಿಂದಿ ಕಲಿಕೆ ಆರಂಭವಾಗುತ್ತಿತ್ತು. ನಮ್ಮ ಉತ್ತರ ಕನ್ನಡ ಜಿಲ್ಲೆಯಲ್ಲಿ ಹಿಂದಿ ಭಾಷೆಯ ಸಂಪರ್ಕ ಮತ್ತು ಸಂವಹನ ಇಲ್ಲವೇ ಇಲ್ಲ ಎನ್ನಬಹುದಾದಷ್ಟು ಕಡಿಮೆ. ಹವ್ಯಕರು ಮತ್ತು ಕೊಂಕಣಿಗರು ಹೆಚ್ಚಿನ ಸಂಖ್ಯೆಯಲ್ಲಿರುವ ನಮ್ಮಲ್ಲಿ ಕೊಂಕಣಿಗರು ಹವ್ಯಕ ಭಾಷೆಯನ್ನು, ಹವ್ಯಕರು ಕೊಂಕಣಿ ಭಾಷೆಯನ್ನು ತಮ್ಮ ತಾಯ್ನುಡಿಯಂತೆ ಸಲೀಸಾಗಿ ಮಾತನಾಡುವುದು ವಿಶೇಷ ಅಲ್ಲವೇ ಅಲ್ಲ. ನನ್ನ ಮಿತ್ರವೃಂದದಲ್ಲಿ ಕೊಂಕಣಿಗರೇ ಹೆಚ್ಚಾಗಿದ್ದರಿಂದ ಕೊಂಕಣಿ ಭಾಷೆ ಒಂದು ರೀತಿಯಲ್ಲಿ ನನಗೆ ಚಿಕ್ಕಮ್ಮ.

ಐದನೇ ತರಗತಿಯ ಇಂಗ್ಲೀಷೇ ಇನ್ನೂ ಪೂರ್ತಿ ಅರಗದಿರುವಾಗ ಆರನೇ ತರಗತಿಯ ಹಿಂದಿ ನಮ್ಮ ಮಟ್ಟಿಗೆ ಅಕ್ಷರಶಃ ನೀರಿಳಿಯದ ಗಂಟಲಲ್ಲಿ ಕಡುಬು ತುರುಕಿದಂತೆ. ಆ ಭಾಷೆಯಲ್ಲಿ ವಿಶೇಷ ಪರಿಣತಿ ಇರುವ ಶಿಕ್ಷಕರೂ ಇಲ್ಲದ್ದರಿಂದ ಹಿಂದಿ ಎಂದರೆ ನಿದ್ದೆಯಲ್ಲೂ ಬೆಚ್ಚಿಬೀಳುವಂತಾಗುತ್ತಿತ್ತು. ಹಾಗೂ ಹೀಗೂ ಏಳನೇ ತರಗತಿಗೆ ಬಂದೆವು ಎನ್ನುವುದಕ್ಕಿಂತ ದಬ್ಬಿದರು ಎನ್ನುವುದೇ ಸರಿಯೆನೋ.

ಏಳನೇ ತರಗತಿಯಲ್ಲಿ ಮರಾಠಿ ಮನೆ ಮಾತಾಗಿರುವ ಹಿಂದಿ ಬಲ್ಲ ಶಿಕ್ಷಕಿ ನಮ್ಮ ಹಿಂದಿ ಜ್ಞಾನ ಕಂಡು ಕೆಂಡಾಮಂಡಲವಾಗಿ ಮೊದಲ ದಿನವೇ ಚೆನ್ನಾಗಿ ಬೈದು ಹಿಂದಿ ಕಾಗುಣಿತ ಪೂರ್ತಿ ಬರೆದು ತೋರಿಸಲು ಹೇಳಿದಾಗ ಅವಮಾನ ಎನಿಸಿದ್ದು ಸುಳ್ಳಲ್ಲ. ಆ ವರ್ಷಪೂರ ಏನು ಹಿಂದಿ ಕಲಿತೆವೋ, ಎಷ್ಟು ಕಲಿತೆವೋ ದೇವರಿಗೇ ಗೊತ್ತು. ಏಳನೇ ತರಗತಿಗೆ ಆ ವರ್ಷದಿಂದಲೇ ಪಬ್ಲಿಕ್ ಪರೀಕ್ಷೆ ಬೇರೆ. ಅಂತೂ ಇಂತೂ ಶೈಕ್ಷಣಿಕ ವರ್ಷ ಮುಗಿದು ವಾರ್ಷಿಕ ಪರೀಕ್ಷೆ ಧುತ್ತೆಂದು ಮುಂದೆ ನಿಂತಿತ್ತು.

ಹಿಂದಿ ವಿಷಯದ ಪರೀಕ್ಷೆಯ ದಿನ ಪ್ರಶ್ನೆಪತ್ರಿಕೆ ಕೈಗೆ ಬರುವಷ್ಟರಲ್ಲೇ ಎದೆಬಡಿತ ಲೆಕ್ಕ ತಪ್ಪಿತ್ತೋ ಅಥವಾ ನಿಂತೇ ಹೋಗಿತ್ತೋ ಹೇಳುವುದು ಕಷ್ಟ. ನಿಬಂಧದಲ್ಲೋ ಯಾ ಪ್ರಶ್ನೋತ್ತರದಲ್ಲೋ ಈಗ ಸರಿಯಾಗಿ ನೆನಪಾಗುತ್ತಿಲ್ಲ. ಹೊಟ್ಟೆ ಎನ್ನುವ ಕನ್ನಡ ಶಬ್ದಕ್ಕೆ ಹಿಂದಿ ಪರ್ಯಾಯ ಪದ ಎಷ್ಟು ಪ್ರಯತ್ನ ಪಟ್ಟರೂ ನೆನಪಿಗೆ ಬರುತ್ತಿಲ್ಲ. ಕೊನೆಯ ಹತ್ತೇ ನಿಮಿಷ. ಬರೆಯುತ್ತಿರುವ ಪ್ರಶ್ನೆಯ ಹೊರತಾಗಿ ಕನ್ನಡದ ವಾಕ್ಯಗಳನ್ನು ಹಿಂದಿಗೆ ಅನುವಾದ ಮಾಡುವ ಹತ್ತು ಅಂಕಗಳ ಪ್ರಶ್ನೆಯೊಂದು ಬಾಕಿ ಬೇರೆ ಇತ್ತು. ಗಾಬರಿಗೆ ಕೈಕಾಲು ಥರಗುಟ್ಟುತ್ತಿತ್ತು. ನೆನಪಿನ ಕಪ್ಪು ಹಲಗೆ ಖಾಲಿ ಖಾಲಿ. ಬೇರೆ ದಾರಿ ಕಾಣದೇ ಹಿಂದಿ ‘ಪೇಟ್’ ಎಂದು ಬರೆಯುವಲ್ಲಿ ಕೊಂಕಣಿ ಶಬ್ದ ‘ಪೋಟ’ ಎಂದು ಬರೆದು ನಿಟ್ಟುಸಿರಿಡುವಷ್ಟರಲ್ಲಿ ಮುಂದಿನ ಪ್ರಶ್ನೆ ವಾಕ್ಯಾನುವಾದದಲ್ಲಿ ಮತ್ತೆ ಅದೇ ಉಸಿರು ಕಟ್ಟಿದ ಸ್ಥಿತಿ.

ಒಂದು ವಾಕ್ಯದ ಕೊನೆಯಲ್ಲಿ ‘ಕೈ ತುರಿಸುತ್ತಿದೆ’ ಎನ್ನುವ ಕ್ರಿಯಾಪದವನ್ನು ಹಿಂದಿಗೆ ಅನುವಾದಿಸಿ ಬರೆಯಬೆಕಿತ್ತು. ಉಹುಂ... ನೆನಪಾಗುತ್ತಿಲ್ಲ. ಕೊನೆಯ ಗಂಟೆಯೂ ಮೊಳಗಿ ನಿರೀಕ್ಷಕರು ಉತ್ತರ ಪತ್ರಿಕೆ ತೆಗೆದುಕೊಳ್ಳಲು ಇನ್ನೇನು ನನ್ನ ಬಳಿ ಬಂದೇ ಬಿಟ್ಟರೆನ್ನುವಾಗ ‘ಹಾಥ್ ತುರಸ್ತಾ ಹೈ’ ಎಂದು ಬರೆದು ನಿರಾಳವಾಗಿಬಿಟ್ಟೆ! ನೆನೆಸಿಕೊಂಡರೆ ಈಗಲೂ ನಗು ಬರುತ್ತಿದೆ.

ಕಾಲಾಂತರದಲ್ಲಿ ಅದಾವ ಪುಣ್ಯಗಳಿಗೆಯಲ್ಲಿ ಹಿಂದಿ ಭಾಷೆಯ ಮೇಲೆ ಮೋಹ ಬೆಳೆಯಿತೋ ಅರಿಯೆ. ಮುಂದೆ ಹಿಂದಿ ಸಾಹಿತ್ಯರತ್ನ ಪ್ರಥಮ ದರ್ಜೆಯಲ್ಲಿ ಪಾಸಾಗಿ, ಬೆಂಗಳೂರು ವಿಶ್ವವಿದ್ಯಾಲಯದ ಎಂ.ಎ. ಬರೆದು, ಸ್ವರ್ಣಪದಕ ಗಳಿಸಿ, ನಾನು ಕರ್ನಾಟಕದವಳು,ಕನ್ನಡದವಳು ಎಂದರೆ ಉತ್ತರದವರು ಆಶ್ಚರ್ಯದಿಂದ ಹುಬ್ಬೇರಿಸುವ ಮಟ್ಟಿಗೆ ಹಿಂದಿ ಕಲಿತೆ.

ಇವತ್ತಿಗೂ ಪಾಠ ಮಾಡುವಾಗ, ತಪ್ಪಾದೀತೆಂದು, ಬೇರೆಯವರು ನಕ್ಕಾರೆಂದು ಮಾತನಾಡಲು, ಕೇಳಿದ ಪ್ರಶ್ನೆಗೆ ಉತ್ತರಿಸಲು ನಾಚುವ ಮಕ್ಕಳಿಗೆ ಅರಿಯದ ಭಾಷೆಯೆಂದು ಆಡಲು-ಬರೆಯಲು ಹಿಂಜರಿದರೆ ಕಲಿಯುವುದು ಅಸಾಧ್ಯ. ತಪ್ಪು ಮಾಡುತ್ತಾ, ತಿದ್ದಿಕೊಳ್ಳುತ್ತ, ತಪ್ಪಿನಿಂದಲೇ ಕಲಿಯುತ್ತಾ ಹೋಗುವುದೇ ಕಲಿಕೆ ಎಂದು ಧೈರ್ಯ ಹೇಳುತ್ತೇನೆ. ನನ್ನ ಅನುಭವದ ಈ ಘಟನೆ ಹೇಳಿ ನಾನೂ ಹೊಟ್ಟೆತುಂಬಾ ನಕ್ಕು ಅವರನ್ನೂ ನಗಿಸುತ್ತಿರುತ್ತೇನೆ.
–ಗಾಯತ್ರಿ ಹೆಗಡೆ, ಬೆಂಗಳೂರು

***
ಮದುವೆ ಮಾಡ್ತಾರೆ ಪ್ಲೀಸ್ ಪಾಸ್ ಮಾಡಿ
ಒಂದನೇ ತರಗತಿಯಿಂದ ಹತ್ತನೇ ತರಗತಿಯವರೆಗೆ, ಕೊನೆಗೆ ಸ್ನಾತಕೋತ್ತರ ಪದವಿವರೆಗೂ ಕನ್ನಡ ಮಾಧ್ಯಮದಲ್ಲಿಯೇ ಶಿಕ್ಷಣ ಪೂರೈಸಿದ ನನಗೆ ಇಂಗ್ಲಿಷ್ ಅಂದ್ರೆ ಅಷ್ಟಕ್ಕಷ್ಟೇ. ಸ್ಕೂಲ್‌ನಲ್ಲಿ ಅದೆಷ್ಟು ಸಾರಿ ಶಿಕ್ಷಕರ ಹತ್ತಿರ ಬಯಸ್ಕೊಂಡು, ಅಮ್ಮನವರೆಗೂ ದೂರು ಹೋಗಿ ಪೇರೆಂಟ್ಸ್ ಮೀಟಿಂಗ್‌ನಲ್ಲಿ ಬೈಸಿಕೊಂಡಿದ್ದೀನಿ,  ನನಗಂತೂ ಸಾಕಾಗಿ ಹೋಗಿತ್ತು. ಆದ್ರೆ ನಾನೇನು ಸುಧಾರಸಲೇ ಇಲ್ಲ.

ಕೇವಲ ಪಾಸಿಂಗ್ ಮಾರ್ಕ್ಸ್‌ನಲ್ಲೇ ಜೈ ಅಂತಾ ಬಂದಿದ್ದೆ. ಸ್ಕೂಲ್‌ನಲ್ಲಿ ಹೇಗೋ ಪಾರಾಗಿಬಂದಿದ್ದೆ. ಪಿಯುಸಿ ಬೋರ್ಡ್‌ ಎಕ್ಸಾಮ್ ಬಂತು ನೋಡಿ, ಫುಲ್ ಟೆನ್ಶನ್ನು. ಎಷ್ಟು ರಟ್ಟೆ ಹೊಡೆದ್ರೂ ತಲೇಲಿ ಎಲ್ಲ ಲೈನ್ಸ್‌ಗಳೂ ವಾಶೌಟು. ಕಾಪಿ ಮಾಡೋ ಭಂಡ ಧೈರ್ಯ ಕೂಡ ಇರಲಿಲ್ಲ. ಪರೀಕ್ಷಾ ದಿನ ಬಂದೇ ಬಿಡ್ತು. ಎಕ್ಸಾಮ್ ಹಾಲ್‌ನಲ್ಲಿ ಕುತ್ಕೊಂಡೆ. ಪ್ರಶ್ನೆಪತ್ರಿಕೆ ನೋಡೋ ಮುಂಚೆ ಇರೋ ಬರೋ ದೇವರುಗಳಿಗೆ ಬೇಡಿಕೊಂಡು, ಹರಕೆ ಹೊತ್ಕೊಂಡು ತುಂಬಾ ಈಸಿಯಾಗಿರಲಿ ಅಂತ ಶುರುಮಾಡ್ದೆ. ಅಬ್ಬಾ ನಾನಿದನ್ನು ಬರೀಬಹುದು, ಇದು ಓಕೆ, ಇದು ನಾಟ್ ಬ್ಯಾಡ್ ಅಂತ ಅನ್ನುವಷ್ಟರಲ್ಲೇ ಕೊನೆ ಕೊನೆಗೆ ಪ್ರಶ್ನೆ ಪತ್ರಿಕೆ ಕಗ್ಗಂಟಾಗಿತ್ತು. ಬರೋ ಉತ್ತರಗಳನ್ನು ಬರೆದಾದ ಮೇಲೆ ಎಷ್ಟು ಎಣಿಕೆ ಹಾಕಿದರೂ ಪಾಸಾಗೋ ಯಾವ ಲಕ್ಷಣಗಳೂ ಕಾಣಿಸಲಿಲ್ಲ.  ಪರೀಕ್ಷೇಲೀ ಪಾಸಾಗಿಲ್ಲ ಅಂದ್ರೆ ಮನೆ, ಮದುವೇನೆ ಗತಿ. ಬಚಾವಾಗಬೇಕಾದ್ರೆ ಜಸ್ಟ್ ಪಾಸಾದ್ರೂ ಆಗ್ಲೇಬೇಕಿತ್ತು.

ಟೆನ್ಶನಲ್ಲಿ ಟೈಮ್ ಬೇರೆ ಮುಗಿತಾ ಬಂದಿದ್ದು ಗಮನಕ್ಕಿರಲಿಲ್ಲ. ಇನ್ನೇನು 5 ನಿಮಿಷ ಉಳಿದಿತ್ತು. ಉತ್ತರ ಪತ್ರಿಕೆ ಕೊನೆಯ ಉತ್ತರ ನಂತರದಲ್ಲಿ ‘ನನಗೆ ಬರೋವಷ್ಟನ್ನೂ ಬರೆದಿರುವೆ, ಪ್ಲೀಸ್ ನನ್ನನ್ನು ಪಾಸ್ ಮಾಡಿ ಪುಣ್ಯ ಕಟ್ಕೊಳಿ, ಯಾಕೆಂದ್ರೆ ಫೇಲಾದ್ರೆ ನನ್ನ ಮನೇಲಿ ಮದ್ವೆ ಮಾಡ್ತಾರೆ’ ಅಂತ ಬರೆದಿಟ್ಟು ಬಂದಿದ್ದೆ. ರಿಸಲ್ಟ್ ಬಂದ ಮೇಲೆ ಇಂಗ್ಲಿಷ್‌ಗೆ 40 ಮಾರ್ಕ್ಸ್. ಯಪ್ಪಾ ಖುಷಿ ಅಂದ್ರೆ ಖುಷಿ. ಪುಣ್ಯಾತ್ಮನಿಗೆ ಕೋಟಿ ನಮಸ್ಕಾರವನ್ನು ಮನ್ಸಲ್ಲೇ ಹೇಳಿ ದೇವರ ಹರಕೆ  ಪೂರೈಸೋಕೆ ಮನೆ ದಾರಿ ಹಿಡಿದೆ.

–ಸುರೇಖಾ ಪಾಟೀಲ, ಹುಬ್ಬಳ್ಳಿ

****
 ಪಾಠ ಮಾಡಿಲ್ಲ ಎಂಬುದೇ ಉತ್ತರ
ನಾನಾಗ ಐದನೇ ತರಗತಿಯಲ್ಲಿ ಓದುತ್ತಿದ್ದೆ. ನಮ್ಮದು ಬೆಂಗಳೂರೇ ಆದರೂ ಇನ್ನೂ ನಗರೀಕರಣಗೊಂಡಿರಲಿಲ್ಲ. ದೂರದ ಊರುಗಳಿಂದ ಬಹಳಷ್ಟು ವಿದ್ಯಾರ್ಥಿಗಳು ನಮ್ಮ ಶಾಲೆಗೆ ಬರುತ್ತಿದ್ದರು. ಶಾಲೆ ಯಾವಾಗಲೂ ತುಂಬಿ ತುಳುಕುತ್ತಿತ್ತು. ಆದ್ದರಿಂದ ಶಿಕ್ಷಕರ ಕೊರತೆ ಸಾಮಾನ್ಯವಾಗಿತ್ತು. ಒಬ್ಬರೇ ಶಿಕ್ಷಕರು ಎರಡು ಮೂರು ವಿಷಯಗಳನ್ನು ಬೋಧಿಸಬೇಕಾಗಿತ್ತು. ತರಾತುರಿಯಲ್ಲಿ ಪರೀಕ್ಷೆಗಳೂ ಆರಂಭವಾಗಿಬಿಟ್ಟವು. ನಮಗೆ ಕನ್ನಡ ಎಂದರೆ ಬಲು ಇಷ್ಟ. ಉಳಿದ ವಿಷಯಗಳೆಂದರೆ ಅಷ್ಟಕಷ್ಟೆ. ಇಂಗ್ಲಿಷ್ ಎಕ್ಸಾಂ ಮುಗೀತು ಎನ್ನುವಷ್ಟರಲ್ಲಿ ಬಂದ ಪರೀಕ್ಷೆಯೇ ಸಮಾಜ ವಿಜ್ಞಾನ. ಪೂರ್ತಿ ಪಠ್ಯವನ್ನು ಶಿಕ್ಷಕರು ಮುಗಿಸಿರಲಿಲ್ಲ, ನಾವೂ ಸರಿಯಾಗಿ ಓದುತ್ತಿರಲಿಲ್ಲ.

ಹುಡುಗಾಟದ ವಯಸ್ಸು ಬೇರೆ. ಬಹಳಷ್ಟು ಪ್ರಶ್ನೆಗಳಿಗೆ ಉತ್ತರವೇ ಗೊತ್ತಿರಲಿಲ್ಲ. ಎಲ್ಲಾ ಹುಡುಗರು ಪ್ರಶ್ನೆಪತ್ರಿಕೆ ನೋಡಿ ಏನು ಉತ್ತರ ಬರೆಯುವುದು ಎಂದು ತಲೆ ಕೆರೆದುಕೊಂಡೆವು. ನಮ್ಮ ಗೆಳೆಯರಲ್ಲಿ ಒಬ್ಬ ಒಂದು ಅಸಾಧಾರಣ ಉಪಾಯ ಹೇಳಿಯೇ ಬಿಟ್ಟ. ‘ನಮಗೆ ಈ ಪಾಠ ಮಾಡಿಲ್ಲ. ಆದ್ದರಿಂದ ನನಗೆ ಉತ್ತರ ಗೊತ್ತಿಲ್ಲ’ ಎಂದು ಬರೆಯೋಣ ಎಂದು. ಬಹುತೇಕ ಎಲ್ಲಾ ಪ್ರಶ್ನೆಗಳಿಗೂ ಸುಮಾರು 30–35 ವಿದ್ಯಾರ್ಥಿಗಳು ಇದೇ ಉತ್ತರ ಬರೆದಿದ್ದೆವು. ಎಲ್ಲರ ಉತ್ತರ ಒಂದೇ ರೀತಿ ಇದ್ದರೂ ನಾವು ಮುಂದಿನ ತರಗತಿಗೆ ಉತ್ತೀರ್ಣರಾದದ್ದು ಆಶ್ಚರ್ಯವೇ ಸರಿ. ಶಿಕ್ಷಕರು ತರಗತಿಗೆ ಬಂದು ಎಲ್ಲರಿಗೂ ಛೀಮಾರಿ ಹಾಕಿದ್ದು ಇದುವರೆಗೂ ಮರೆಯಲಾಗದ ಸಂಗತಿ.
–ಅಂಕುಶ್.ಬಿ, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT