ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಲಾಯನವಾದ ಪರಿಹಾರವಲ್ಲ

Last Updated 23 ಅಕ್ಟೋಬರ್ 2014, 19:30 IST
ಅಕ್ಷರ ಗಾತ್ರ

ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ವಿಧಾನಮಂಡಲದ ಚಳಿಗಾಲದ ಅಧಿವೇಶನ ನಡೆಸಲು ಸರ್ಕಾರ ಮೀನಮೇಷ ಎಣಿಸುತ್ತಿದೆ. ಕರ್ನಾಟಕ ಏಕೀಕರಣಗೊಂಡ 50 ವರ್ಷಗಳ ಸವಿನೆನಪಿಗಾಗಿ ಕುಂದಾನಗರಿ­ಯಲ್ಲಿ ರೂ 391 ಕೋಟಿ ವೆಚ್ಚದಲ್ಲಿ ಬೆಂಗಳೂರಿನ ವಿಧಾನ­ಸೌಧವನ್ನೇ ಹೋಲುವ ಭವ್ಯ ಸೌಧ ನಿರ್ಮಿಸಲಾಗಿದೆ. ಅದನ್ನು ಬರೀ  ಒಂದು ಸ್ಮಾರಕದ ರೂಪದಲ್ಲಿ  ಉಳಿಸಿಕೊಳ್ಳಲು ಬಯಸುವುದಾದರೆ  ಏನೂ ಪ್ರಯೋಜನ ಆಗಲಾರದು. ಬದಲಿಗೆ ಸರ್ಕಾರದ ಬೊಕ್ಕಸಕ್ಕೆ ಹೊರೆಯಾಗಿ ಪರಿಣಮಿ­ಸುತ್ತದೆ. ಅದು ಕೂಡ ಒಂದು ಆಡಳಿತ ಕೇಂದ್ರವಾಗಿ, ಹಿಂದುಳಿದ ಉತ್ತರ ಕರ್ನಾಟಕದ ಸಮಗ್ರ ಅಭಿವೃದ್ಧಿಗೆ ಪೂರಕವಾದರೆ ಅದಕ್ಕೂ ಸಾರ್ಥಕ್ಯ. ಈ ನಿಟ್ಟಿನಲ್ಲಿ ಅಧಿವೇಶನ ಕೂಡ ಚೋದಕ ಅಂಶ. 2012ರ ಅಕ್ಟೋಬರ್‌ನಲ್ಲಿ ಈ ಸೌಧ ಉದ್ಘಾಟನೆಗೊಂಡ ಬಳಿಕ ಅಲ್ಲಿ ಎರಡು ಬಾರಿ ಅಧಿವೇಶನ ನಡೆದಿದೆ. ಚಳಿಗಾಲದ ಅಧಿವೇಶನ ಬೆಳಗಾವಿಯಲ್ಲಿ ನಡೆಸಬೇಕು ಎಂಬುದು ಜನರ ಬಯಕೆ. ಸರ್ಕಾರದ ಬಯಕೆಯೂ ಇದೇ ಆಗಿದೆ ಎಂಬುದು ಅದರ ಮಾತಿನಿಂದ ಪದೇ ಪದೇ ವ್ಯಕ್ತವಾಗಿದೆ. ಹೀಗಿರುವಾಗ ಅಧಿವೇಶನ ನಡೆಸುವ ಕುರಿತು ಪ್ರತೀ ವರ್ಷ ಹೊಸದಾಗಿ ಚರ್ಚೆಗೆ ಅವಕಾಶ ಮಾಡಿಕೊಡುವುದು ತರವಲ್ಲ. ಈ ವಿಚಾರದಲ್ಲಿ ಸರ್ಕಾರಕ್ಕೆ ಸ್ಪಷ್ಟತೆ ಮತ್ತು ಬದ್ಧತೆ ಇರಬೇಕು. ಗೊಂದಲಕ್ಕೆ  ಶಾಶ್ವತವಾಗಿ ತೆರೆ ಬೀಳಬೇಕು.

ಕಳೆದ ಸಲ ಅಧಿವೇಶನದ ಸಂದರ್ಭದಲ್ಲಿ ಕಬ್ಬು ಬೆಲೆ ನಿಗದಿಗೆ ಒತ್ತಾಯಿಸಿ ನಡೆದ ಪ್ರತಿಭಟನೆ ವೇಳೆ ರೈತರೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದರಿಂದ ಸರ್ಕಾರ ಪೇಚಿಗೆ ಸಿಲುಕಬೇಕಾಯಿತು. ರೈತ ಸಂಘಟನೆಗಳ ಒತ್ತಾಯಕ್ಕೆ ಮಣಿದು ಸರ್ಕಾರ ಪ್ರತಿ ಟನ್‌ ಕಬ್ಬಿಗೆ ರೂ 150 ಬೆಂಬಲ ಬೆಲೆ ಸೇರಿ ರೂ 2,650 ದರ ಘೋಷಿಸಿತ್ತು. ಆದರೆ ಆ ದರ ಪೂರ್ಣಪ್ರಮಾಣದಲ್ಲಿ ಕಬ್ಬು ಬೆಳೆಗಾರರಿಗೆ ಇನ್ನೂ ಸಿಕ್ಕಿಲ್ಲ. ಇದರಿಂದ ಕುಪಿತರಾದ ರೈತರು ಈ ಬಾರಿ ಪುನಃ ಧರಣಿ, ಪ್ರತಿಭಟನೆಗೆ ಇಳಿಯಬಹುದು ಎಂದು ಭಾವಿಸಿ ಅಧಿವೇಶನ ನಡೆಸಲು ಸರ್ಕಾರ ಹಿಂದುಮುಂದು ನೋಡುತ್ತಿದೆ ಎಂಬ ಮಾತು ಕೇಳಿಬಂದಿದೆ. ಇದು ನಿಜವೇ ಆಗಿದ್ದರೆ ನಾಚಿಕೆಗೇಡು. ಬೆಂಗಳೂರಲ್ಲೂ ಅಧಿವೇಶನ ಕಾಲಕ್ಕೆ ನಿತ್ಯ ಧರಣಿ, ಪ್ರತಿಭಟನೆಗಳು ನಡೆಯುತ್ತವಲ್ಲ? ಆದ್ದರಿಂದ, ಸಮಸ್ಯೆಗಳನ್ನು ಧೈರ್ಯದಿಂದ ಎದುರಿಸಬೇಕೆ ಹೊರತು ಅವುಗಳಿಗೆ ಬೆನ್ನುತೋರಿಸಿ ಓಡಿಹೋಗಬಾರದು.

ಪಲಾಯನ  ಪರಿಹಾರ­ವಲ್ಲ. ಸರ್ಕಾರ ಕಣ್ಣು, ಕಿವಿ ಮುಚ್ಚಿಕೊಂಡಾಗ ಜನರು ಬೀದಿಗೆ ಇಳಿಯು­ತ್ತಾರೆ.  ಸರ್ಕಾರದ ಗಮನ ಸೆಳೆಯಲು ಶಾಂತಿಯುತ ಪ್ರತಿಭಟನೆ ಒಂದು ಅಸ್ತ್ರ. ಸಮಸ್ಯೆಗಳನ್ನು ಜನಪ್ರತಿನಿಧಿಗಳ ಮುಂದಲ್ಲದೆ ಬೇರೆ ಎಲ್ಲಿ ಹೇಳಿಕೊಳ್ಳಬೇಕು? ಸಮಸ್ಯೆಗಳಿಗೆ ಪರಿಹಾರೋಪಾಯ ಹುಡುಕು­ವುದು ಸರ್ಕಾರದ ಕರ್ತವ್ಯ. ಅದಕ್ಕೆ ಅಧಿವೇಶನಕ್ಕಿಂತ ಸೂಕ್ತ ವೇದಿಕೆ ಮತ್ತೊಂದು ಇರಲಾರದು. ಸುವರ್ಣ ವಿಧಾನಸೌಧದ ಸದ್ಬಳಕೆಗೂ ಸರ್ಕಾರ ನೀಲನಕ್ಷೆ ತಯಾರಿಸಬೇಕು. ಕೆಲವೊಂದು ಇಲಾಖೆಗಳ ಕಚೇರಿಗಳನ್ನು ಅಲ್ಲಿಗೆ ಸ್ಥಳಾಂತರಿಸಲು ಏನು ತೊಡಕಿದೆ? ತಂತ್ರಜ್ಞಾನ ಎಷ್ಟೊಂದು ಮುಂದು­ವರಿದಿದೆ. ಸಂಪರ್ಕಕ್ಕೆ ಈಗ ಏನೂ ಸಮಸ್ಯೆ ಇಲ್ಲ. ವಿಡಿಯೊ ಕಾನ್ಫರೆನ್ಸ್‌ನಂಥ ಅತ್ಯಾಧುನಿಕ ಸೌಲಭ್ಯಗಳನ್ನು ಬಳಸಿಕೊಂಡು ಆಡಳಿತ ನಡೆಸಬಹುದು. ಸುವರ್ಣ ವಿಧಾನಸೌಧವನ್ನು ಸಮಸ್ತ ಕರ್ನಾಟಕವನ್ನು ಭಾವನಾತ್ಮಕವಾಗಿ ಬೆಸೆಯುವ ಕೊಂಡಿಯಾಗಿಸಲು ಪ್ರಯತ್ನಿಸಬೇಕು. ಇದಕ್ಕೆಲ್ಲ ಇಚ್ಛಾಶಕ್ತಿ ಬೇಕು. ಅದಿಲ್ಲದಿರುವುದೇ ಎಲ್ಲ ಸಮಸ್ಯೆಗಳಿಗೂ ಕಾರಣ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT