ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಶ್ಚಿಮ ಕಾರ್ಡ್‌ ರಸ್ತೆ: ಸೇತುವೆಗಳ ನಿರ್ಮಾಣಕ್ಕೆ ಚಾಲನೆ

ಮಂಜುನಾಥನಗರ ಮುಖ್ಯ ರಸ್ತೆ 232 ಮೀಟರ್‌ ಉದ್ದದ ನಾಲ್ಕು ಪಥಗಳ ಮೇಲ್ಸೇತುವೆ
Last Updated 30 ಏಪ್ರಿಲ್ 2016, 19:36 IST
ಅಕ್ಷರ ಗಾತ್ರ

ಬೆಂಗಳೂರು: ಪಶ್ಚಿಮ ಕಾರ್ಡ್‌ ರಸ್ತೆಯ ನಾಲ್ಕು ಜಂಕ್ಷನ್‌ಗಳಲ್ಲಿ ಮೇಲ್ಸೇತುವೆ ಹಾಗೂ ಕೆಳ ಸೇತುವೆಗಳ ನಿರ್ಮಾಣಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಶನಿವಾರ ಶಂಕುಸ್ಥಾಪನೆ ನೆರವೇರಿಸಿದರು.

ಮಂಜುನಾಥನಗರ ಮುಖ್ಯ ರಸ್ತೆಯಲ್ಲಿ 232 ಮೀಟರ್‌ ಉದ್ದದ ನಾಲ್ಕು ಪಥದ (ದ್ವಿಮುಖ ಸಂಚಾರದ) ಮೇಲ್ಸೇತುವೆ, ಶಿವನಗರ ಒಂದನೇ ಹಾಗೂ ಎಂಟನೇ ಮುಖ್ಯರಸ್ತೆ ಕೂಡು ಸ್ಥಳಗಳಲ್ಲಿ 630 ಮೀಟರ್‌ ಉದ್ದದ ಇಂಟಿಗ್ರೇಟೆಡ್‌ ಕೆಳಸೇತುವೆ ನಿರ್ಮಾಣ ಮಾಡಲಾಗುತ್ತದೆ.

ಬಸವೇಶ್ವರನಗರದ ಒಂದನೇ ಮುಖ್ಯರಸ್ತೆಯ ಕೂಡು ಸ್ಥಳದಲ್ಲಿ 388 ಮೀಟರ್‌ ಉದ್ದದ ಏಕಮುಖ ಸಂಚಾರದ ಮೇಲ್ಸೇತುವೆ ನಿರ್ಮಾಣವಾಗಲಿದೆ. ಮುಖ್ಯಮಂತ್ರಿಗಳ ನಗರೋತ್ಥಾನ ಅನುದಾನದಲ್ಲಿ ಇದಕ್ಕೆ ₹89.86 ಕೋಟಿ ವೆಚ್ಚ ಮಾಡಲಾಗುತ್ತದೆ.

ಈ ಯೋಜನೆಯ ಅನುಷ್ಠಾನದ ಬಳಿಕ ಪಶ್ಚಿಮ ಕಾರ್ಡ್‌ ರಸ್ತೆಯ ನಾಲ್ಕು ಜಂಕ್ಷನ್‌ಗಳಲ್ಲಿ ಸಿಗ್ನಲ್‌ ಮುಕ್ತ ವಾಹನ ಸಂಚಾರ ಆರಂಭವಾಗಲಿದೆ. ಯೋಜನೆಯನ್ನು 18 ತಿಂಗಳಲ್ಲಿ ಪೂರ್ಣಗೊಳಿಸಲು ಉದ್ದೇಶಿಸಲಾಗಿದೆ.

ಮೇಲ್ಸೇತುವೆ ಉದ್ಘಾಟನೆ:  ಇದೇ ಸಂದರ್ಭದಲ್ಲಿ ರಾಜಾಜಿನಗರ ಒಂದನೇ ಬ್ಲಾಕ್‌, ಪಶ್ಚಿಮ ಕಾರ್ಡ್‌ ರಸ್ತೆ ಹಾಗೂ 10ನೇ ಅಡ್ಡರಸ್ತೆಯ ಕೂಡು ಸ್ಥಳದಲ್ಲಿ ನಿರ್ಮಿಸಿರುವ ಮೇಲ್ಸೇತುವೆಯನ್ನು ಮುಖ್ಯಮಂತ್ರಿ ಉದ್ಘಾಟಿಸಿದರು. ಇದು 360 ಮೀಟರ್‌ ಉದ್ದದ ಮೇಲ್ಸೇತುವೆ. ಒಟ್ಟು ನಾಲ್ಕು ಪಥವಿದೆ. 
2014ರ ಜೂನ್‌ನಲ್ಲಿ ಕಾಮಗಾರಿ ಆರಂಭವಾಗಿತ್ತು. ಯೋಜನೆಯ ವೆಚ್ಚ ₹25 ಕೋಟಿ.

ಉದ್ಘಾಟನೆಗೆ ಮುನ್ನವೇ ವಾಹನ ಸಂಚಾರ :  ‘ಮೇಲ್ಸೇತುವೆ ತಿಂಗಳ ಹಿಂದೆ ಸಿದ್ಧವಾಗಿತ್ತು. ಯುಗಾದಿ ಸಂದರ್ಭದಲ್ಲಿ ಉದ್ಘಾಟಿಸಲು ಯೋಜಿಸಲಾಗಿತ್ತು. ಆದರೆ, ಕೆಲವು ಕಾರಣಗಳಿಂದ ಉದ್ಘಾಟನೆ ವಿಳಂಬವಾಯಿತು. ಹಾಗಾಗಿ ಉದ್ಘಾಟನೆಗೆ ಮುನ್ನವೇ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಾಗಿತ್ತು’ ಎಂದು ಮಹಾಲಕ್ಷ್ಮಿ ಬಡಾವಣೆಯ ಶಾಸಕ ಕೆ. ಗೋಪಾಲಯ್ಯ ಮಾಹಿತಿ ನೀಡಿದರು.

‘ಕ್ಷೇತ್ರದಲ್ಲಿ ಒಂದು ತಿಂಗಳಲ್ಲಿ ₹50 ಕೋಟಿ ವೆಚ್ಚದ ಕಾಮಗಾರಿಗೆ ಚಾಲನೆ ನೀಡಲಾಗುತ್ತದೆ’ ಎಂದು ಪ್ರಕಟಿಸಿದರು.  ಶಾಸಕ ಎಸ್‌. ಸುರೇಶ್‌ ಕುಮಾರ್‌ ಮಾತನಾಡಿ, ‘ನಗರದಲ್ಲಿ ದಿನದಿಂದ ದಿನಕ್ಕೆ ವಾಹನ ದಟ್ಟಣೆ ಹೆಚ್ಚುತ್ತಿದೆ. ಸಾರ್ವಜನಿಕ ಸಾರಿಗೆ ಬಳಸಲು ಜನರಿಗೆ ಉತ್ತೇಜನ ನೀಡಬೇಕು’ ಎಂದರು.

ಬಿಬಿಎಂಪಿ ವಿಭಜನೆ
‘ಬಿಬಿಎಂಪಿಯನ್ನು ವಿಭಜನೆ ಮಾಡುವುದೇ ಸೂಕ್ತ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪುನರುಚ್ಚರಿಸಿದರು. ‘110 ಹಳ್ಳಿಗಳನ್ನು ಬಿಬಿಎಂಪಿಗೆ ಸೇರಿಸಿದ್ದೇ ತಪ್ಪು. ಈ ಗ್ರಾಮಗಳಿಗೆ ಅಗತ್ಯ ಮೂಲಸೌಕರ್ಯ ಕಲ್ಪಿಸಲು ಸಾಧ್ಯವಾಗುತ್ತಿಲ್ಲ. ನಗರಕ್ಕೆ ಈಗ 19 ಟಿಎಂಸಿ ಅಡಿ ಕಾವೇರಿ ನೀರು ಪೂರೈಕೆ ಮಾಡುತ್ತಿದ್ದೇವೆ. 30 ಟಿಎಂಸಿ ಅಡಿ ನೀರು ಪೂರೈಸಿದರೂ ನಗರದ ದಾಹ ನೀಗಿಸುವುದು ಕಷ್ಟ. ಅಂತಹ ಸ್ಥಿತಿ ಇದೆ’ ಎಂದು ಹೇಳಿದರು. ‘ಬಿಬಿಎಂಪಿಗೆ ಆಸ್ತಿ ತೆರಿಗೆಯಿಂದ ಬರುತ್ತಿರುವ ಆದಾಯ ₹1900 ಕೋಟಿ. ಬಿಬಿಎಂಪಿ ಬಜೆಟ್‌ ₹9 ಸಾವಿರ ಕೋಟಿ ಇದೆ. ಈ ಅಂತರವನ್ನು ನೀಗಿಸಲು ಆಸ್ತಿ ತೆರಿಗೆ ಹೆಚ್ಚಳ ಅನಿವಾರ್ಯ. ತೆರಿಗೆ ವಿಧಿಸದೆ ನಾವೇನು ನೋಟು ಪ್ರಿಂಟ್‌ ಮಾಡಲಿಕ್ಕೆ ಆಗುತ್ತದೆಯೇ’ ಎಂದು ಪ್ರಶ್ನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT