ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾಂಡವರಂತೆ ನ್ಯಾಯಯುತ ಹೋರಾಟ

ಮೊದಲ ಭಾಷಣದಲ್ಲಿ ಮನಗೆದ್ದ ಮಲ್ಲಿಕಾರ್ಜುನ ಖರ್ಗೆ
Last Updated 10 ಜೂನ್ 2014, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಲೋಕಸಭೆ­ಯಲ್ಲಿ ಆಡಳಿತ ಪಕ್ಷ ಮತ್ತು ಪ್ರತಿಪಕ್ಷದ ಬಲಾಬಲವನ್ನು ಕೌರವರು– ಪಾಂಡವರ ಸಂಖ್ಯೆಗೆ ಹೋಲಿಸಿದ ಕಾಂಗ್ರೆಸ್‌ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು, ತಮ್ಮ ಪಕ್ಷದ ಸದಸ್ಯರ ಸಂಖ್ಯೆ ಕಡಿಮೆ ಇದ್ದರೂ ಪಾಂಡವರ ರೀತಿಯಲ್ಲಿ ನ್ಯಾಯಕ್ಕಾಗಿ ಹೋರಾಡುವ ಮಾತುಗಳನ್ನು ಆಡಿ ಗಮನ ಸೆಳೆದರು.

ರಾಷ್ಟ್ರಪತಿಯವರು ಜಂಟಿ ಸದನ ಉದ್ದೇಶಿಸಿ ಮಾಡಿದ ಭಾಷಣಕ್ಕೆ ವಂದನೆ ಸಲ್ಲಿಸುವ ನಿರ್ಣಯ ಕುರಿತು ಮಂಗಳ­ವಾರ ನಡೆದ ಚರ್ಚೆ ವೇಳೆ ಆಡಳಿತ ಪಕ್ಷವು ಕಾಂಗ್ರೆಸ್‌ ಕಾಲೆಳೆದಿದ್ದಕ್ಕೆ ಪ್ರತಿಕ್ರಿಯಿಸಿ ಖರ್ಗೆ ಹೀಗೆ ಹೇಳಿದರು.

‘ಮಹಾಭಾರತದಲ್ಲಿ ಪಾಂಡ­ವರ ಸಂಖ್ಯೆ ಕಡಿಮೆ ಇದ್ದರೂ ಕೌರವರಿಗೆ ಅವರನ್ನು ಸೋಲಿ­ಸಲು ಆಗಲಿಲ್ಲ. ಅದೇ ರೀತಿ, ನಾವು ಸಂಖ್ಯೆಯಲ್ಲಿ ಕಡಿಮೆ ಇದ್ದರೂ ಜನಪರ ಕಾರ್ಯಕ್ರ­ಮಗಳ ಅನುಷ್ಠಾನಕ್ಕಾಗಿ ಒತ್ತಡ ಹೇರುವ ಕಾರ್ಯ­ವನ್ನು ಸಮರ್ಥವಾಗಿ ನಿರ್ವಹಿಸಲಿದ್ದೇವೆ’ ಎಂದರು.

ಖರ್ಗೆ ಅವರು ಹೀಗೆ ಹೇಳುತ್ತಿ­ದ್ದಂತೆಯೇ ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ಸೇರಿದಂತೆ ಪಕ್ಷದ ಸದಸ್ಯರೆಲ್ಲರೂ ಮೇಜು ಕುಟ್ಟಿ ಸ್ವಾಗತಿಸಿ­ದರು. ಇದರ ನಡುವೆಯೇ ಖರ್ಗೆ ಅವರು, ‘ಪಕ್ಷವು ಮರಳಿ ಅಧಿ­ಕಾರ ಹಿಡಿಯಲಿದೆ.

ಎನ್‌ಡಿಎ, ಕಾಯಂ ಅಧಿಕಾರ­ದಲ್ಲಿ ಇರುತ್ತೇನೆಂಬ ಭ್ರಮೆ­ಯಲ್ಲಿ ಮುಳುಗಬಾರದು’ ಎಂದರು.

ರಾಷ್ಟ್ರಪತಿ ಪ್ರಣವ್‌ ಮುಖರ್ಜಿ ಅವರು ಜಂಟಿ ಸದನ ಉದ್ದೇಶಿಸಿ ಪ್ರಸ್ತಾಪಿಸಿದ ಸರ್ಕಾರದ ಕಾರ್ಯ­ಸೂಚಿ­ಯಲ್ಲಿ ಹೊಸದೇನೂ ಇಲ್ಲ. ಇದು ಯುಪಿಎ ಸರ್ಕಾರದ ಯೋಜನೆಗಳನ್ನೇ ಹೊಸದಾಗಿ ಕಟ್ಟಿದ ಕಂತೆ. ಈ ಭರವಸೆಗಳನ್ನು ಮೋದಿ ಅವರ ಸರ್ಕಾರವು ಯಾವುದೇ ಬಡಾಯಿ ಕೊಚ್ಚಿಕೊಳ್ಳದೆ ಹಾಗೂ ಅಹಂ ಇಲ್ಲದೆ ಅನುಷ್ಠಾನಗೊಳಿಸಬೇಕು ಎಂದು ಖರ್ಗೆ ಹೇಳಿದರು.

ಹೊಸ ಸರ್ಕಾರದ ಕಾರ್ಯಸೂಚಿ­ಯನ್ನು ಎಳೆ ಎಳೆಯಾಗಿ ಟೀಕಿಸಿದ ಅವರು, ಕಳೆದ 10 ವರ್ಷಗಳಲ್ಲಿ ಯುಪಿಎ ಸರ್ಕಾರದ ಸಾಧನೆಗಳ ಬಗ್ಗೆಯೂ ಪ್ರಸ್ತಾಪಿಸಿದರು.

‘ಹೊಸ ಸರ್ಕಾರದ ಕಾರ್ಯಸೂಚಿ­ಯಲ್ಲಿ ಗಮನ ಸೆಳೆಯುವಂತದ್ದು ಏನೂ ಇಲ್ಲ. ಹಿಂದಿನ ಸರ್ಕಾರ ಏನೆಲ್ಲಾ ಮಾಡಿದೆಯೋ ಅದನ್ನೇ ಮೋದಿ ಅವರ ಹೆಸರಿನಲ್ಲಿ ಹೊಸದಾಗಿ ಪ್ಯಾಕೇಜ್‌ ಮಾಡಲಾಗಿದೆ ಅಷ್ಟೆ. ಆದರೆ ನೀವು (ಬಿಜೆಪಿಯವರು) ಒಳ್ಳೆ ಪ್ರಚಾರಕರು. ಯಾರೇ ಆಗಲಿ ಮಾರುಕಟ್ಟೆ ಕೌಶಲ­ಗಳನ್ನು ಬಿಜೆಪಿಯವರಿಂದ ಕಲಿಯ­ಬೇಕು... ಆದರೆ, ಮಾರುಕಟ್ಟೆ ಸೃಷ್ಟಿಸುವಿಕೆ ಮತ್ತು ಪ್ಯಾಕೇಜಿಂಗ್‌­ಮಾದರಿಯಲ್ಲಿ ದೇಶ ಮುನ್ನಡೆಸಲು ಸಾಧ್ಯವಿಲ್ಲ’ ಎಂದು ಖರ್ಗೆ   ಕುಟುಕಿದರು.

ಸರ್ಕಾರಕ್ಕೆ ಅಹಂ ತೊರೆಯಲು ತಾಕೀತು ಮಾಡಿದ ಅವರು, ‘ರಾಷ್ಟ್ರದಲ್ಲಿ ಚುನಾವಣೆಯಲ್ಲಿ ಚಲಾ­ವಣೆ­ಯಾದ ಮತಗಳಲ್ಲಿ ಬಿಜೆಪಿ ಗಳಿಸಿರುವುದು ಶೇ 31ರಷ್ಟು ಮತ­ಗಳನ್ನು ಮಾತ್ರ. ಅಂದರೆ, ಇದರ ಅರ್ಥ ಶೇ 69ರಷ್ಟು ಮತದಾರರು ನಿಮ್ಮ (ಬಿಜೆಪಿ) ಸಿದ್ಧಾಂತಕ್ಕೆ ವಿರುದ್ಧವಾ­ಗಿದ್ದಾರೆ. ಹೀಗಾಗಿ ಲೋಕಸಭೆಯಲ್ಲಿ ಅತಿ ದೊಡ್ಡ ಪಕ್ಷವಾಗಿ ಹೊರಹೊ­ಮ್ಮಿರು­ವುದಕ್ಕೆ ಬಿಜೆಪಿ ಬೀಗುವ ಅಗತ್ಯವಿಲ್ಲ. ಜನರು ನಿಮಗೆ ಬಹುಮತ ಕೊಟ್ಟು ಚುನಾಯಿಸಿದ್ದಾರೆ. ಈಗ ನೀವು ದೊಡ್ಡದಾಗಿ ಬಡಾಯಿ ಕೊಚ್ಚಿಕೊಂಡರೆ ಸಾಲದು. ನಿಜವಾಗಿಯೂ ಜನರ ಸೇವೆ ಮಾಡಬೇಕು’ ಎಂದರು.

‘ಯುಪಿಎ ಸರ್ಕಾರವು ಆಹಾರ ಭದ್ರತಾ ಕಾಯ್ದೆ ಸೇರಿದಂತೆ ಹಲವು ಯೋಜನೆಗಳನ್ನು ಜಾರಿಗೊಳಿಸಿದೆ. ಆದರೂ ಬಿಜೆಪಿ, ಕಳೆದ 65 ವರ್ಷಗಳಲ್ಲಿ ಕಾಂಗ್ರೆಸ್‌ ಏನು ಸಾಧನೆ ಮಾಡಿದೆ ಎಂದು ಕೇಳುತ್ತಿರುವುದು ಆಶ್ಚರ್ಯಕರ. ರಾಷ್ಟ್ರದಲ್ಲಿ ಹಸಿರು ಕ್ರಾಂತಿ ಆಗಲು ಕಾಂಗ್ರೆಸ್‌ ಕಾರಣ. ಅದೇ ರೀತಿ, ಗುಜರಾತ್‌ನಲ್ಲಿ ಕ್ಷೀರಕ್ರಾಂತಿ ಆಗಲು ಕಾಂಗ್ರೆಸ್‌ ಕಾರಣವೇ ಹೊರತು ಮೋದಿ ಅವರಲ್ಲ’ ಎಂದು ಖರ್ಗೆ ವಿವರಿಸಿದರು.

ರಾಜಸ್ತಾನದಲ್ಲಿ ಹೆಚ್ಚು ಬಂಡವಾಳ ಸೆಳೆಯುವುದಕ್ಕೆ ಪೂರಕವಾಗುವಂತೆ ಕಾರ್ಮಿಕ ಕಾನೂನಿನಲ್ಲಿ ಬದಲಾವಣೆ ಮಾಡಲಾಗಿದೆ ಎಂಬ ಮಾಧ್ಯಮ ವರದಿಗಳ ಕುರಿತು ಪ್ರಸ್ತಾಪಿಸಿದ ಅವರು, ‘ಬಿಜೆಪಿಯು ಸಿರಿವಂತರ ಪರವಾಗಿ­ದೆಯೇ ಹೊರತು ಬಡವರ ಪರ ಇಲ್ಲ’ ಎಂದು ಚುಚ್ಚಿದರು. ಖರ್ಗೆ ಅವರ ಈ ಹೇಳಿಕೆಗೆ ಆಡಳಿತ ಪಕ್ಷದ ಸದಸ್ಯರು ತೀಕ್ಷ್ಣ ಪ್ರತಿಕ್ರಿಯೆ ವ್ಯಕ್ತಪಡಿಸಿದರು.

ಪುಣೆಯಲ್ಲಿ ಇತ್ತೀಚೆಗೆ ನಡೆದ ಟೆಕ್ಕಿ ಹತ್ಯೆ ಕುರಿತು ಪ್ರಸ್ತಾಪಿಸಿದ ಅವರು,  ಮುಂದಿನ ದಿನಗಳಲ್ಲಿ ಸರ್ಕಾರ ಕಾನೂನು ಸುವ್ಯವಸ್ಥೆಯನ್ನು ಹೇಗೆ ನಿರ್ವಹಿಸುತ್ತದೆಂಬುದನ್ನು ಕಾದು ನೋಡಬೇಕು ಎಂದರು.

ಹಿಂದಿಯಲ್ಲಿ ಭಾಷಣ
ಖರ್ಗೆ ಅವರು ಹಿಂದಿಯಲ್ಲಿ ಮನಮುಟ್ಟುವ ರೀತಿಯಲ್ಲಿ 45 ನಿಮಿಷ­ಗಳ ಕಾಲ ಮಾತನಾಡಿದರು. ಖರ್ಗೆ ಅವರು ಮಾತು ಮುಗಿ­ಸಿದ ನಂತರ ಸೋನಿಯಾ ಮತ್ತು ರಾಹುಲ್‌ ಅವರ ಬಳಿಗೆ ತೆರಳಿ ಅಭಿನಂದಿಸಿದರು. ಸಮಾಜ­ವಾದಿ ಪಕ್ಷದ ಮುಖ್ಯಸ್ಥ ಮುಲಾಯಂ ಸಿಂಗ್‌ ಯಾದವ್‌ ಸೇರಿದಂತೆ ಇತರ ಹಲವು ಸದಸ್ಯರೂ ಅಭಿನಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT