ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾಕಿಸ್ತಾನ: ಪ್ರತೀಕಾರಕ್ಕೆ ಗುರಾಣಿಯಾದ ಮಕ್ಕಳು

Last Updated 20 ಡಿಸೆಂಬರ್ 2014, 19:30 IST
ಅಕ್ಷರ ಗಾತ್ರ

ಕಳೆದ ಬುಧವಾರ ಮಧ್ಯಾಹ್ನ 3 ಗಂಟೆ. ಪಾಕಿಸ್ತಾನದ ಪೆಶಾವರ ನಗರ ವಾಹನಗಳಿಂದ ತುಂಬಿಹೋಗಿತ್ತು. ರಸ್ತೆಗಳು ದೂಳುಮಯವಾಗಿದ್ದವು. ಅಲ್ಲಿನ ‘ಲೇಡಿ ರೀಡಿಂಗ್‌’ ಆಸ್ಪತ್ರೆಯ ಮುಖ್ಯ ವಾರ್ಡ್‌ನ ಒಳಗೆ ಹದಿಹರೆಯದ ಐವರು ಮುಸ್ಲಿಂ ಹುಡುಗರು ಜೀವನ್ಮರಣದ ನಡುವೆ ಹೋರಾಡುತ್ತಿದ್ದರು.

ಇತ್ತ ವಾರ್ಡ್‌ನ ಹೊರಗೆ ಗುಲಾಬಿ ಹೂಗುಚ್ಛ ಹಿಡಿದು ಬಂದ ಕ್ರೈಸ್ತ ಧರ್ಮೀಯನೊಬ್ಬನನ್ನು ಮಫ್ತಿಯಲ್ಲಿದ್ದ ಪೊಲೀಸ್‌ ಅಧಿಕಾರಿಯೊಬ್ಬರು ತಡೆದು ನಿಲ್ಲಿಸಿದರು. ‘ಒಳಗೆ ಪ್ರವೇಶಿಸುವಂತಿಲ್ಲ’ ಎಂದು ತಾಕೀತು ಮಾಡಿದರು. ‘ಆದರೆ, ಈ ಗುಲಾಬಿಗಳನ್ನು... ಮಕ್ಕಳು...’ ಎಂದು ಬಡಬಡಿಸುತ್ತಿದ್ದ ಆ ವ್ಯಕ್ತಿ ವಾರ್ಡ್‌ನ ಒಳಕ್ಕೆ ಬಿಡುವಂತೆ ಅಂಗಲಾಚುತ್ತಿದ್ದ. ‘ಈ ಹೂವನ್ನು ನನಗೆ ಕೊಟ್ಟಿರು’ ಎಂದು ಕೇಳಿ ಪಡೆದುಕೊಂಡ ಅಧಿಕಾರಿ ಆ ವ್ಯಕ್ತಿಗೆ ‘ಧನ್ಯವಾದ’ ಅರ್ಪಿಸಿದರು.

ಬಳಿಕ ನಮ್ಮತ್ತ ತಿರುಗಿದ ಅಧಿಕಾರಿ, ‘ನಿಮಗೆ ಗೊತ್ತೇ, ಶಾಲಾ ಮಕ್ಕಳು ಬಲಿಯಾದ ಘಟನೆಯ ಗೌರವಾರ್ಥವಾಗಿ ಕ್ರಿಶ್ಚಿಯನ್ನರು ಈ ಬಾರಿ ಕ್ರಿಸ್‌ಮಸ್‌ ಹಬ್ಬ ಆಚರಿಸದಿರಲು ನಿರ್ಧರಿಸಿದ್ದಾರೆ’ ಎಂದರು.

ತುರ್ತು ನಿಗಾ ಘಟಕದಲ್ಲಿ ಮಲಗಿದ್ದ 17 ವರ್ಷದ ಜುನೈನ್‌ನ ದೇಹದೊಳಗೆ ಆರು ಗುಂಡುಗಳು ಹೊಕ್ಕಿದ್ದವು. ತನ್ನ ಹಸಿರು ಕಣ್ಣುಗಳನ್ನಷ್ಟೇ ಹೊರಳಿಸಲು ಸಾಧ್ಯವಿದ್ದ ಆತ ಅವುಗಳನ್ನು ಪ್ರಯತ್ನಪೂರ್ವಕವಾಗಿ ಅರಳಿಸಿ ಗೋಡೆಯನ್ನೇ ದಿಟ್ಟಿಸುತ್ತಿದ್ದ. ಅವನ ತಾಯಿ ಮೆಹರುನ್ನೀಸಾ ಕ್ಯಾಡ್‌ಬರಿ ಚಾಕೊಲೇಟ್‌ ಅನ್ನು ಅವನ ಮುಖದತ್ತ ಆಡಿಸಿದಾಗ ಒಮ್ಮೆ ಕಣ್ಣುಗಳನ್ನು ಮಿಟುಕಿಸಿದ. ಅವನ ಕಾಲ್ಬೆರಳ ಉಗುರುಗಳಲ್ಲಿ  ಹೆಪ್ಪುಗಟ್ಟಿ ಒಣಗಿಹೋಗಿದ್ದ ರಕ್ತ ಮೆತ್ತಿಕೊಂಡಿತ್ತು.

ವಾರ್ಡ್‌ನ ಹೊರಗೆ ಭಾರಿ ಕವುದಿಗಳಿಂದ ಸುತ್ತಿದ್ದ ಶವಗಳನ್ನು ಆಚೆ ಸಾಗಿಸಲಾಗುತ್ತಿತ್ತು. ಅವುಗಳಲ್ಲಿ ತಮ್ಮ ಮಕ್ಕಳ ಶವಗಳನ್ನು ಗುರುತಿಸಲು ಪ್ರಯತ್ನಿಸುತ್ತಿದ್ದ ಸಂಬಂಧಿಕರು, ಸ್ಥಳದಲ್ಲಿದ್ದ ವರದಿಗಾರರಿಂದ ತಪ್ಪಿಸಿಕೊಳ್ಳಲು ಹವಣಿಸುತ್ತಿದ್ದರು.

‘ಇಂತಹ ದುರಂತದ ಬಗ್ಗೆ ನಿಮಗೆ ಏನನ್ನಿಸುತ್ತದೆ? ನಿಮ್ಮ ದೇಶದ ಬಗ್ಗೆ ನಿಮ್ಮ ಅಭಿಪ್ರಾಯವೇನು?’ ಎಂಬಂತಹ ಪ್ರಶ್ನೆಗಳನ್ನು ಸುದ್ದಿಗಾರರು ಕೇಳುತ್ತಿದ್ದರು. ಮೊಗಸಾಲೆಯಲ್ಲಿ ನಿಂತಿದ್ದ ಮೆಹರುನ್ನೀಸಾ ಕಣ್ಣುಗಳಿಂದ ಅಯಾಚಿತವಾಗಿ ನೀರು ಹರಿಯ ಲಾರಂಭಿಸಿತು. ಕ್ಯಾಮೆರಾ ಕಣ್ಣುಗಳು ಅತ್ತ ಹೊರಳಿದವು. ‘ನಾನು ಏನು ಹೇಳುತ್ತೇನೆಂದರೆ...’ ಎಂದ ಆಕೆ ‘ನನಗೀಗ ಹೇಳಲು ಏನೂ ಉಳಿದಿಲ್ಲ’ ಎನ್ನುತ್ತಾ ಬಿಕ್ಕಿದಳು. ಡಿಸೆಂಬರ್‌ 16ರ ಮಂಗಳವಾರ ಬೆಳಿಗ್ಗೆ ಸುಮಾರು 10 ಗಂಟೆಯ ಆಜುಬಾಜು. ಬಾಂಬ್‌ಗಳ ಜಾಕೆಟ್‌ ತೊಟ್ಟ ಉಗ್ರರು ಪೆಶಾವರದ ಸೇನಾ ಶಾಲೆಗೆ ನುಗ್ಗಿ 132 ಮಕ್ಕಳು ಸೇರಿದಂತೆ 145 ಜನರನ್ನು ನಿರ್ದಯವಾಗಿ ಕೊಂದು ಹಾಕಿದರು. ಶಿಕ್ಷಕಿಯೊಬ್ಬರ ಮೃತದೇಹವನ್ನು ವಶಕ್ಕೆ ತೆಗೆದುಕೊಂಡಾಗಲೂ ಆಕೆ ಕೈಯಲ್ಲಿ ಪೆನ್ನು ಹಿಡಿದುಕೊಂಡ ಸ್ಥಿತಿಯಲ್ಲೇ ಇದ್ದುದಾಗಿ ಪೊಲೀಸ್‌ ಅಧಿಕಾರಿಯೊಬ್ಬರು ಆಸ್ಪತ್ರೆಯಲ್ಲಿ ನಮಗೆ ತಿಳಿಸಿದರು.

ಈ ಪೈಶಾಚಿಕ ಕೃತ್ಯದ ಹೊಣೆ ಹೊತ್ತುಕೊಂಡಿರುವ ಪಾಕಿಸ್ತಾನದ ತಾಲಿಬಾನ್‌ ಸಂಘಟನೆ, ಯೋಧರ ಮಕ್ಕಳು ಕಲಿಯುತ್ತಿದ್ದ ಕಾರಣಕ್ಕೇ ಸೇನಾ ಶಾಲೆಯನ್ನು ದಾಳಿಗೆ ಗುರಿಯಾಗಿಸಿಕೊಂಡಿದ್ದಾಗಿ ಹೇಳಿದೆ.

ತನ್ನ ಕಾರ್ಯತಂತ್ರಗಳನ್ನು ಹೆಣೆಯುವುದಕ್ಕೆ ಬೇಕಾದ ‘ಅಗತ್ಯ’ಗಳ ಪೂರೈಕೆಗೆ ಹಲವಾರು ವರ್ಷಗಳಿಂದ ಆಯ್ದ ಇಸ್ಲಾಂ ಗುಂಪುಗಳಿಗೆ ಬೆಂಬಲ ನೀಡುತ್ತಾ ಬಂದಿದ್ದ ಪಾಕಿಸ್ತಾನದ ಸೇನೆ, 6 ತಿಂಗಳ ಹಿಂದಷ್ಟೇ ತನ್ನ ಕಾರ್ಯವಿಧಾನವನ್ನು ಬದಲಿಸಿಕೊಂಡಿತ್ತು.
80ರ ದಶಕದಲ್ಲಿ ಆಫ್ಘಾನಿಸ್ತಾನದ ಮುಜಾಹಿದ್ದೀನ್‌ಗೆ ಬೆಂಬಲ ನೀಡಿದ್ದ ಸೇನೆ, 90ರ ದಶಕದಲ್ಲಿ ಭಾರತದ ವಿರುದ್ಧ ಹೋರಾಡುತ್ತಿದ್ದ ಜಿಹಾದಿಗಳನ್ನು ಪೋಷಿಸಿತು. 9/11ರ ಅಮೆರಿಕ ದಾಳಿಯ ಸಂದರ್ಭದಲ್ಲಿ ‘ಒಳ್ಳೆಯ’ ತಾಲಿಬಾನೀಯರಿಗೆ ರಕ್ಷಣೆ ನೀಡಿತು. ಆದರೆ, ಕೊನೆಗೂ ‘ಕೆಟ್ಟ’ ತಾಲಿಬಾನೀಯರನ್ನು ನಾಶ ಮಾಡಲು ನಿರ್ಧರಿಸಿತು. ಇದಕ್ಕೆ ಪ್ರತೀಕಾರವಾಗಿ ಸೇನಾ ಶಾಲೆಯಲ್ಲಿ 132 ಮಕ್ಕಳು ಹೆಣವಾದರು.

ಈ ವಿಧ್ವಂಸಕ ಕೃತ್ಯ ದೇಶದಾದ್ಯಂತ ಭೀತಿ ಮೂಡಿಸಿದೆ. ಸಾಕಷ್ಟು ಹಿಂದಿನಿಂದಲೂ ತಮ್ಮ ನಡುವೆಯೇ ಭಯೋತ್ಪಾದನೆ ಇದ್ದರೂ ಒಂದು ರೀತಿಯಲ್ಲಿ ಅದರ ನಿರಾಕರಣದ ಸ್ಥಿತಿಯಲ್ಲೇ ಇಲ್ಲಿನ ಜನ ಬದುಕುತ್ತಾ ಬಂದಿದ್ದಾರೆ. 2013ರ ಜನವರಿ– ಫೆಬ್ರುವರಿಯಲ್ಲಿ ಬಲೂಚಿಸ್ತಾನದಲ್ಲಿ ಅವಳಿ ಬಾಂಬ್‌ ಸ್ಫೋಟಗೊಂಡು ಶಿಯಾ ಪಂಗಡದ 180 ಜನ ಅಸುನೀಗಿದ್ದರು. ಆಗ ‘ಅಲ್ಪಸಂಖ್ಯಾತರನ್ನು ಗುರಿಯಾಗಿಸಿ ನಡೆದ ಈ ದಾಳಿ ದುರದೃಷ್ಟಕರ’ ಎಂದು ಹೇಳಿ ಸರ್ಕಾರ ಕೈತೊಳೆದುಕೊಂಡಿತು.

ಇದಕ್ಕೆ ಮುನ್ನ, 2010ರ ಮೇ ತಿಂಗಳಲ್ಲಿ ಲಾಹೋರ್‌ನಲ್ಲಿ ಅಹಮದೀಯರ ಮಸೀದಿ ಸ್ಫೋಟಗೊಂಡಾಗ ಸುಮಾರು ನೂರು ಜನ ಬಲಿಯಾಗಿದ್ದರು. ಆಗಲೂ ಸರ್ಕಾರ ಇಂತಹುದೇ ಹೇಳಿಕೆ ನೀಡಿತ್ತು. 2012ರ ಅಕ್ಟೋಬರ್‌ನಲ್ಲಿ ಮಲಾಲಾ ಯೂಸುಫ್‌ ಝೈ (ಆಕೆ ಸಿ.ಐ.ಎ ಏಜೆಂಟ್‌ ಎಂದು ವ್ಯಾಪಕವಾಗಿ ಬಿಂಬಿಸಲಾಗಿತ್ತು) ಮೇಲೆ ಉಗ್ರರು ಗುಂಡಿನ ದಾಳಿ ನಡೆಸಿದಾಗ ‘ದಿಟ್ಟ ಶಾಲಾ ವಿದ್ಯಾರ್ಥಿನಿ ಮೇಲಿನ ಈ ದಾಳಿ ದುರ್ದೈವದ ಸಂಗತಿ’ ಎಂದು ಸರ್ಕಾರ ಹೇಳಿತ್ತು. ಈಗ 132 ಶಾಲಾ ಮಕ್ಕಳು ಕಗ್ಗೊಲೆಯಾಗಿದ್ದಾರೆ. ಈಗಲೂ ಸರ್ಕಾರದ ಪ್ರತಿಕ್ರಿಯೆ ಏನೆಂದು ವಿವರಿಸುವ ಅಗತ್ಯ ಇದೆಯೇ?

ಪಾಕಿಸ್ತಾನದಲ್ಲಿ ಭಯೋತ್ಪಾದನೆ ವಿರುದ್ಧದ ಜನಜಾಗೃತಿಗೆ ಇಲ್ಲಿನ ಪ್ರಮುಖ ರಾಜಕೀಯ ಮುಖಂಡರೇ ಅಡ್ಡಿ ಉಂಟು ಮಾಡುತ್ತಿದ್ದಾರೆ, ಭಯೋತ್ಪಾದನೆ ವಿರುದ್ಧ ರಾಷ್ಟ್ರೀಯ ಒಮ್ಮತ ಮೂಡುವ ಸಾಧ್ಯತೆಯನ್ನು ತಡೆಯಲು ಪಿತೂರಿ ಸಂಚಿನ ಕಥೆಗಳನ್ನು ಉದ್ದೇಶಪೂರ್ವಕವಾಗಿಯೇ ಉತ್ತೇಜಿಸುತ್ತಾ ಬಂದಿದ್ದಾರೆ ಎಂಬ ಆರೋಪಗಳಿವೆ.

ಸೇನೆ ಇತ್ತೀಚೆಗೆ ತನ್ನ ಕಾರ್ಯಾಚರಣೆ ಆರಂಭಿಸುವವರೆಗೂ, ಉಗ್ರರೊಂದಿಗೆ ಮಾತುಕತೆ ನಡೆಸಬೇಕಾದ ಅಗತ್ಯವಿದೆ ಎಂದೇ ಮಾಜಿ ಕ್ರಿಕೆಟಿಗ ಹಾಗೂ ವಿರೋಧ ಪಕ್ಷದ ಮುಖಂಡ ಇಮ್ರಾನ್‌ ಖಾನ್‌ ಪ್ರತಿಪಾದಿಸುತ್ತಾ ಬಂದರು. 2013ರ ಚುನಾವಣೆಯಲ್ಲಿ ಸೋಲುವ ಭೀತಿಯಿಂದ ಪ್ರಮುಖ ಪಕ್ಷಗಳು ಈ ಹೇಳಿಕೆಯನ್ನು ವಿರೋಧಿಸುವ ಗೋಜಿಗೇ ಹೋಗಲಿಲ್ಲ. ಈ ಮೂಲಕ ಖಾನ್‌, ದೇಶದ ಅತಿ ದೊಡ್ಡ ಅಪಾಯವನ್ನು ಕಡೆಗಣಿಸಿ ‘ಭ್ರಷ್ಟಾಚಾರ’ದ ವಿಷಯವನ್ನೇ ಹೆಚ್ಚು ಪ್ರಸ್ತಾಪಿಸುತ್ತಾ ಬಂದರು.

ಶಾಲಾ ದುರ್ಘಟನೆಯಾದ ಮರುದಿನ ಪ್ರಧಾನಿ ನವಾಜ್‌ ಷರೀಫ್‌, ಭಯೋತ್ಪಾದನೆ ಪ್ರಕರಣಗಳಲ್ಲಿ ಭಾಗಿಯಾ­ದವ­ರಿಗೆ ಮರಣದಂಡನೆ ಶಿಕ್ಷೆ ಮೇಲೆ ಹೇರಿದ್ದ ನಿಷೇಧವನ್ನು ರದ್ದುಪಡಿಸಿದರು. ಆಕ್ರೋಶಭರಿತರಾಗಿದ್ದ ಜನ ಇದನ್ನು ಕೇಳಿ ಅಚ್ಚರಿಪಟ್ಟರು. ಆದರೆ ಅವರ ಸರ್ಕಾರ ಇಂತಹ ತೋರುಗಾಣಿಕೆಯ ಕ್ರಮಗಳಿಗೆ ಹೆಸರುವಾಸಿ.

ಷರೀಫ್‌ ಅವರ ಪಕ್ಷ ಕೆಲವು ಗುಂಪುಗಳೊಂದಿಗೆ ಚುನಾವಣಾ ಪೂರ್ವ ಮೈತ್ರಿ ಮಾಡಿಕೊಂಡಿದೆ. ಭಯೋತ್ಪಾದನಾ ವಿರೋಧಿ ಕ್ರಮಗಳಿಗೆ ಮುಂದಾಗುವ ಅಥವಾ ಪೊಲೀಸ್‌ ಮತ್ತು ಭಯೋತ್ಪಾದನಾ ವಿರೋಧಿ ಕೋರ್ಟ್‌ಗಳನ್ನು ಬಲಪಡಿಸುವ ಯಾವುದೇ ಪ್ರಯತ್ನ ನಡೆದಿಲ್ಲ. ನಿಷೇಧಿತ ಉಗ್ರ ಸಂಘಟನೆಗಳ ಮುಖಂಡರು ದೇಶದ ನಗರಗಳಲ್ಲಿ ರಾಜಾರೋಷವಾಗಿ ಓಡಾಡಿ ಕೊಂಡಿದ್ದಾರೆ. ಸಾರ್ವಜನಿಕ ಸಭೆಗಳಲ್ಲಿ ಭಾಗವಹಿಸು ತ್ತಿದ್ದಾರೆ. ಶಾಲಾ ಪಠ್ಯ ಧಾರ್ಮಿಕ ಪ್ರವಚನಗಳಿಂದ ತುಂಬಿಹೋಗಿದೆ. ಅರಬ್‌ ರಾಷ್ಟ್ರಗಳಿಂದ ಮದರಸಾಗಳಿಗೆ ಹೇರಳವಾಗಿ ಹಣ ಹರಿದು ಬರುತ್ತಿದೆ.

‘ಮಂಗಳವಾರದ ಘಟನೆಯ ಹೊಣೆ ಹೊತ್ತುಕೊಂಡಿರುವ ತಾಲಿಬಾನ್‌ ಉಗ್ರರನ್ನು ಖಂಡಿಸುವಿರಾ’ ಎಂಬ ವರದಿಗಾರರ ಪ್ರಶ್ನೆಗೆ ‘ಅಲ್ಲಿನ ಸನ್ನಿವೇಶ ಇನ್ನೂ ಸ್ಪಷ್ಟವಾಗಿಲ್ಲ. ಮೊದಲು ಪೆಶಾವರಕ್ಕೆ ತೆರಳಿ ವಸ್ತುಸ್ಥಿತಿ ಅರಿತು ಬಳಿಕ ಪ್ರತಿಕ್ರಿಯಿಸುವೆ’ ಎಂದು ಇಮ್ರಾನ್‌ ಖಾನ್‌ ಹೇಳಿದ್ದರು.

ಹಾಗೆ ನೋಡಿದರೆ, ಪಾಕಿಸ್ತಾನದಲ್ಲಿನ ಸನ್ನಿವೇಶ ಯಾವತ್ತೂ ಸ್ಪಷ್ಟವಾಗಿಲ್ಲ. ‘ವಿದೇಶಿ ಶಕ್ತಿ’ಗಳಿಂದ ಆಂತರಿಕ ಭದ್ರತೆಗೆ ಆತಂಕ ಉಂಟಾಗುತ್ತಿದೆ, ನಮ್ಮ ಸಮಸ್ಯೆಗಳೆಲ್ಲ ಇತರರ ಪಿತೂರಿಯ ಭಾಗ ಮಾತ್ರ ಎಂಬ ಭ್ರಮೆಯಿಂದ ಪಾಕಿಸ್ತಾನ ಈಗಲಾದರೂ ಹೊರ ಬರಬೇಕಾಗಿದೆ. ತಾಲಿಬಾನೀಯರ ಜೊತೆ ಮಾತುಕತೆ ನಡೆಸಬೇಕಾದ ಅಗತ್ಯ ನಮ್ಮ ಸರ್ಕಾರಕ್ಕೆ ಇಲ್ಲ. ಅದೇನಿದ್ದರೂ ಅವರನ್ನು ಕೋರ್ಟ್ ಕಟಕಟೆಯಲ್ಲಿ ನಿಲ್ಲಿಸುವಂತಹ ಕ್ರಮಗಳಿಗೆ ಮುಂದಾಗಬೇಕಾಗಿದೆ.

ಮೀರಾ ಸೇಥಿ, ಶೆಹರ್‌ಬಾನು ತಸೀರ್‌
ದಿ ನ್ಯೂಯಾರ್ಕ್ ಟೈಮ್ಸ್‌

(ಮೀರಾ ಸೇಥಿ ಲೇಖಕಿ ಮತ್ತು ‘ವಾಲ್‌ ಸ್ಟ್ರೀಟ್‌ ಜರ್ನಲ್‌’ನ ಮಾಜಿ ಸಹಾಯಕ ಸಂಪಾದಕಿ. ಶೆಹರ್‌ಬಾನು ತಸೀರ್‌ ಅವರು ಪತ್ರಕರ್ತೆ. ಇಬ್ಬರೂ ಲಾಹೋರ್‌ ನಿವಾಸಿಗಳು)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT