ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾಕ್‌ಗೆ ದಕ್ಕದು ಎಫ್‌–16

ಸೇನಾ ಸಹಾಯಧನ ನೀಡಲು ನಿರಾಕರಿಸಿದ ಅಮೆರಿಕ ಕಾಂಗ್ರೆಸ್‌
Last Updated 3 ಮೇ 2016, 19:30 IST
ಅಕ್ಷರ ಗಾತ್ರ

ವಾಷಿಂಗ್ಟನ್‌ (ಪಿಟಿಐ): ಎಫ್‌–16 ಯುದ್ಧ ವಿಮಾನಗಳ ಖರೀದಿಗೆ ಸಬ್ಸಿಡಿ ನೀಡಲಾಗದು, ಅವಶ್ಯ ಮೊತ್ತವನ್ನು ರಾಷ್ಟ್ರೀಯ ನಿಧಿಯಿಂದ  ಹೊಂದಿಸಿಕೊಳ್ಳಬೇಕು ಎಂದು  ಅಮೆರಿಕ ಸ್ಪಷ್ಟಪಡಿಸಿದ ಬೆನ್ನಲ್ಲೇ, ಪೂರ್ತಿ ಮೊತ್ತ ಪಾವತಿಸಲು ತನ್ನಿಂದ ಸಾಧ್ಯವಾಗದು ಎಂದು ಪಾಕಿಸ್ತಾನ ಹೇಳಿದೆ.

ಅಮೆರಿಕದಿಂದ ₹4.69 ಲಕ್ಷ ಕೋಟಿ ಮೊತ್ತದಲ್ಲಿ ಎಂಟು ಯುದ್ಧ ವಿಮಾನಗಳ ಖರೀದಿ ಸಂಬಂಧ ಒಡಂಬಡಿಕೆ ಮಾಡಿಕೊಂಡಿದ್ದ ಪಾಕಿಸ್ತಾನಕ್ಕೆ ಈ ಮೂಲಕ ಜಾಗತಿಕ ಮಟ್ಟದಲ್ಲಿ ಭಾರಿ ಮುಖಭಂಗವಾಗಿದೆ.

‘ಪಾಕ್‌ಗೆ ಎಂಟು ಎಫ್‌–16 ಯುದ್ಧ ವಿಮಾನಗಳನ್ನು ಮಾರಾಟ ಮಾಡುವ ಸಂಬಂಧ ಅಮೆರಿಕ ಕಾಂಗ್ರೆಸ್‌ ಒಪ್ಪಿಗೆ ನೀಡಿದೆ. ಆದರೆ ಕೆಲವು ಸೆನೆಟರ್‌ಗಳು ವಿದೇಶಿ ಸೇನೆಗೆ ಹಣಕಾಸು ನೆರವು (ಎಫ್‌ಎಂಎಫ್‌) ನೀಡುವುದನ್ನು ತೀವ್ರವಾಗಿ ವಿರೋಧಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಪಾಕ್ ತನ್ನ ರಾಷ್ಟ್ರೀಯ ನಿಧಿಯನ್ನು ಬಳಸಿ ಪೂರ್ತಿ ಮೊತ್ತವನ್ನು ಪಾವತಿಸಬೇಕು ಎಂದು ಸ್ಪಷ್ಟಪಡಿಸಿದ್ದೇವೆ’ ಎಂದು ವಿದೇಶಾಂಗ ವಕ್ತಾರ ಜಾನ್‌ ಕಿರ್ಬಿ ಅವರು ಸುದ್ದಿಗಾರರಿಗೆ ತಿಳಿಸಿದರು.

ಈ ನಿರ್ಧಾರ ತೆಗೆದುಕೊಂಡಿದ್ದು ಹಾಗೂ ಪಾಕಿಸ್ತಾನಕ್ಕೆ ಸೂಚನೆ ನೀಡಿದ್ದು ಯಾವಾಗ ಎಂಬ ಬಗ್ಗೆ ಅವರು ಮಾಹಿತಿ ನೀಡಲಿಲ್ಲ.

ಅಂದಾಜು 700 ಮಿಲಿಯನ್‌ ಅಮೆರಿಕನ್‌ ಡಾಲರ್‌ ಮೊತ್ತದ ಎಂಟು ಎಫ್‌–16  ಯುದ್ಧ ವಿಮಾನಗಳನ್ನು ಪಾಕಿಸ್ತಾನಕ್ಕೆ ಮಾರಾಟ ಮಾಡುವ ತೀರ್ಮಾನವನ್ನು ಅಮೆರಿಕವು ತನ್ನ ಸೆನೆಟರ್‌ಗಳ ಮುಂದೆ ಫೆಬ್ರುವರಿ 11ರಂದು ಪ್ರಕಟಿಸಿತ್ತು. ಭಾರತ ಇದನ್ನು ತೀವ್ರವಾಗಿ ವಿರೋಧಿಸಿತ್ತು. ಅಲ್ಲದೆ ಭಾರತದಲ್ಲಿನ ಅಮೆರಿಕದ ರಾಯಭಾರಿಗೆ ನೋಟಿಸ್‌ ಜಾರಿ ಮಾಡಿತ್ತು.

ಪಾಕಿಸ್ತಾನವು ಯುದ್ಧ ವಿಮಾನಗಳನ್ನು ಭಯೋತ್ಪಾದಕರ ವಿರುದ್ಧ ಬಳಸುವ ಬದಲು ಭಾರತದ ಮೇಲೆ ಪ್ರಯೋಗಿಸುವ ಸಾಧ್ಯತೆ ಹೆಚ್ಚಿದೆ ಎಂದು ಕಳೆದ ವಾರ ಅಮೆರಿಕ ಕಾಂಗ್ರೆಸ್‌ನಲ್ಲಿ ನಡೆದ  ವಿಚಾರಣೆ ವೇಳೆ ಕೆಲವು ಉನ್ನತ ಮಟ್ಟದ ಜನಪ್ರತಿನಿಧಿಗಳು ಆತಂಕ ವ್ಯಕ್ತಪಡಿಸಿದ್ದರು.

ಆದರೆ ಆಫ್ಘಾನಿಸ್ತಾನ ಮತ್ತು ಪಾಕಿಸ್ತಾನದ ವಿಶೇಷ ಪ್ರತಿನಿಧಿಗಳು ಹಾಗೂ ಪಾಕ್‌ ಸರ್ಕಾರ, ಭಯೋತ್ಪಾದಕರ ವಿರುದ್ಧದ ಕಾರ್ಯಾಚರಣೆಯಲ್ಲಿ ಎಫ್‌–16 ಪ್ರಮುಖ ಅಸ್ತ್ರವಾಗಲಿದೆ ಎಂದು ಪುನರುಚ್ಚರಿಸಿದ್ದವು.

ಮೇ ನಂತರ ದರ ಏರಿಕೆ
ಅಮೆರಿಕ ಮುಂದಿಟ್ಟಿರುವ ಹೊಸ ಪ್ರಸ್ತಾವಕ್ಕೆ ಪ್ರತಿಕ್ರಿಯಿಸಲು ಪಾಕ್‌ಗೆ ಮೇ ಕೊನೆಯವರೆಗಷ್ಟೇ ಕಾಲಾವಕಾಶವಿದೆ. ಒಂದು ವೇಳೆ ತನ್ನ ಅಂತಿಮ ನಿರ್ಧಾರವನ್ನು ಪ್ರಕಟಿಸಲು ಪಾಕಿಸ್ತಾನ ವಿಳಂಬ ಮಾಡಿದರೆ ಯುದ್ಧ ವಿಮಾನಗಳ ಬೆಲೆಯಲ್ಲಿ ಹೆಚ್ಚಳವಾಗಲಿದೆ ಎಂದು ಹೆಸರು ಹೇಳಲಿಚ್ಛಿಸದ ಪಾಕಿಸ್ತಾನದ ಅಧಿಕಾರಿಯೊಬ್ಬರು ಪಿಟಿಐಗೆ ಮಾಹಿತಿ ನೀಡಿದ್ದಾರೆ.

ಅಲ್ಲದೆ ಉಭಯ ದೇಶಗಳ ನಡುವಿನ ಒಪ್ಪಂದ ಯಥಾಸ್ಥಿತಿ ಮುಂದುವರಿಯಲಿದ್ದು ದೀರ್ಘ ಕಾಲ ವಿಳಂಬವಾಗಬಹುದು ಎಂದೂ ಅಧಿಕಾರಿ ಹೇಳಿದ್ದಾರೆ.

ಮುಖ್ಯಾಂಶಗಳು
* ಹಣ ಹೊಂದಿಸುವ ಶಕ್ತಿ ಇಲ್ಲವೆಂದ ಪಾಕ್‌
* ಯುದ್ಧ ವಿಮಾನ ಖರೀದಿ ಪ್ರಕ್ರಿಯೆ ಬಹುತೇಕ ಸ್ಥಗಿತ
* ಈ ತಿಂಗಳೊಳಗೆ ಅಂತಿಮ ನಿರ್ಧಾರ  ಪ್ರಕಟಿಸಬೇಕು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT