ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾಕ್‌ ಜೊತೆ ಕ್ರಿಕೆಟ್‌ ಸರಣಿ ಸದ್ಯಕ್ಕಿಲ್ಲ

ದಾಳಿ ನಿಲ್ಲದ ಹೊರತು ಟೂರ್ನಿ ಆಯೋಜಿಸುವ ಮಾತಿಲ್ಲ: ಬಿಸಿಸಿಐ
Last Updated 27 ಜುಲೈ 2015, 19:30 IST
ಅಕ್ಷರ ಗಾತ್ರ

ನವದೆಹಲಿ/ಕೊಚ್ಚಿ (ಪಿಟಿಐ/ ಐಎಎನ್ಎಸ್‌):  ಗಡಿಯಲ್ಲಿ ಉಭಯ ದೇಶಗಳ ನಡುವೆ ಚಕಮಕಿ ನಡೆಯು ತ್ತಿರುವ ಕಾರಣ ಪಾಕಿಸ್ತಾನದ ಜೊತೆ ಸದ್ಯಕ್ಕೆ ಕ್ರಿಕೆಟ್ ಸರಣಿ ಆಯೋಜಿಸದಿರಲು ಭಾರತ ಕ್ರಿಕೆಟ್‌ ನಿಯಂತ್ರಣ ಮಂಡಳಿ ನಿರ್ಧರಿಸಿದೆ.

‘ಭಾರತ ಮತ್ತು ಪಾಕಿಸ್ತಾನ ತಂಡಗಳ ನಡುವೆ ಕ್ರಿಕೆಟ್‌ ಸರಣಿ ಆಯೋಜಿಸಿ ಎರಡು ದೇಶಗಳ ನಡುವಿನ ಬಾಂಧವ್ಯ ವೃದ್ಧಿಗೆ ವೇದಿಕೆ ಒದಗಿಸಿಕೊಡಬೇಕು ಎಂದು ಪಾಕಿಸ್ತಾನ ಕ್ರಿಕೆಟ್‌ ಮಂಡಳಿ ಬಿಸಿಸಿಐ ಬಳಿ ಕೇಳಿಕೊಂಡಿದೆ. ಸರಣಿ ಎಲ್ಲಿ  ನಡೆಸಬೇಕು ಹಾಗೂ ಯಾವಾಗ ಆಯೋಜಿಸಬೇಕು ಎನ್ನುವುದರ ಬಗ್ಗೆ ನಿರ್ಧಾರ ತೆಗೆದು ಕೊಂಡಿಲ್ಲ. ಸದ್ಯಕ್ಕೆ ಸರಣಿ ನಡೆಸುವ ಪ್ರಶ್ನೆಯೇ ಇಲ್ಲ’ ಎಂದು ಬಿಸಿಸಿಐ ಕಾರ್ಯದರ್ಶಿ ಅನುರಾಗ್ ಠಾಕೂರ್‌ ಮಾಧ್ಯದವರಿಗೆ ಸ್ಪಷ್ಟಪಡಿಸಿದರು.

‘ಗಡಿಯಲ್ಲಿ ಗುಂಡಿನ ದಾಳಿ ನಡೆಸುವ ಪಾಕಿಸ್ತಾನ, ಕ್ರಿಕೆಟ್‌ ಸರಣಿ ಆಯೋಜಿಸುವ ಮಾತನಾಡುತ್ತಿದೆ. ಉತ್ತಮ ಸ್ನೇಹ ಏರ್ಪಡದ ಹೊರತು ಸರಣಿ ನಡೆಸುವ ಮಾತಿಲ್ಲ. ನಮಗೆ ಆಟಗಾರರ ಸುರಕ್ಷತೆ ಮುಖ್ಯ. ಗುರದಾಸಪುರ ಬಳಿ ಉಗ್ರರು ನಡೆಸಿದ ದಾಳಿಯಲ್ಲಿ ಒಬ್ಬ ಪೊಲೀಸ್‌ ಅಧಿಕಾರಿ ಸೇರಿದಂತೆ ಆರು ಜನ ಮೃತಪಟ್ಟಿದ್ದಾರೆ. ನಮಗೆ ಪ್ರತಿಯೊಬ್ಬ ಭಾರತೀಯನ ಪ್ರಾಣದ ಬಗ್ಗೆಯೂ ಕಾಳಜಿಯಿದೆ’ ಎಂದು ಬಿಜೆಪಿ ಸಂಸದರೂ ಆದ ಠಾಕೂರ್‌ ನುಡಿದರು.  ಪಂಜಾಬ್‌ನ ದೀನಾನಗರದ ಬಳಿ ಉಗ್ರರ ದಾಳಿ ನಡೆದಿತ್ತು.

ಪಿಸಿಬಿ ಮುಖ್ಯಸ್ಥ ಶೆರ್ಹಾಯಾರ್‌ ಖಾನ್‌ ಉಭಯ ರಾಷ್ಟ್ರಗಳ ನಡುವೆ ಕ್ರಿಕೆಟ್‌ ಸರಣಿ ಆಯೋಜಿಸುವ ಕುರಿತು ಮಾತನಾಡಲು ಭಾರತಕ್ಕೆ ಬಂದಿದ್ದರು. ಅವರು ಬಿಸಿಸಿಐ ಅಧ್ಯಕ್ಷ ಜಗಮೋಹನ್ ದಾಲ್ಮಿಯ ಅವರನ್ನು ಭೇಟಿಯಾಗಿದ್ದರು. ಆದ್ದರಿಂದ ಇದೇ ವರ್ಷದ ಡಿಸೆಂಬರ್‌ನಲ್ಲಿ ಯುನೈಟೆಡ್ ಅರಬ್‌ ಎಮಿರೇಟ್ಸ್‌ನಲ್ಲಿ ಮೂರು ಟೆಸ್ಟ್‌, ಐದು ಏಕದಿನ ಮತ್ತು ಎರಡು ಟ್ವೆಂಟಿ–20 ಪಂದ್ಯಗಳನ್ನು ಆಯೋಜಿಸುವ ಬಗ್ಗೆ ಬಿಸಿಸಿಐ ಒಲವು ಹೊಂದಿತ್ತು. ಆದರೆ, ಈಗ ‘ಸರಣಿ ಸದ್ಯಕ್ಕಿಲ್ಲ’ ಎಂದು ಹೇಳಿದೆ.

2008ರಲ್ಲಿ ಮುಂಬೈನಲ್ಲಿ ಭಯೋತ್ಪಾದಕರ ದಾಳಿ ನಡೆದ ಬಳಿಕ ಪಾಕ್‌ ತಂಡ ಒಂದು ಸಲವಷ್ಟೇ ಭಾರತದಲ್ಲಿ  ಸರಣಿ ಆಡಿದೆ.
2012ರಲ್ಲಿ ನಡೆದ ಸರಣಿಯಲ್ಲಿ ಮೂರು ಏಕದಿನ ಮತ್ತು ಎರಡು ಟ್ವೆಂಟಿ–20 ಪಂದ್ಯಗಳು ನಡೆದಿದ್ದವು. ಆ ಬಳಿಕ  ಸರಣಿ ನಡೆಸಬೇಕೆಂದು ಪಿಸಿಬಿ ಒತ್ತಾಯಿಸುತ್ತಲೇ ಬಂದಿದೆ.
*
ಜಿಡಿಸಿಎ ಒಪ್ಪಿಗೆ
ಕೊಚ್ಚಿ (ಪಿಟಿಐ): ವೇಗದ ಬೌಲರ್‌ ಶ್ರೀಶಾಂತ್‌ಗೆ ಇಲ್ಲಿನ ಜವಾಹರ ಲಾಲ್‌ ನೆಹರು ಕ್ರೀಡಾಂಗಣದಲ್ಲಿ ಅಭ್ಯಾಸ ನಡೆಸಲು  ಅವಕಾಶ ಕೊಡುವುದಾಗಿ ಗ್ರೇಟರ್ ಕೊಚ್ಚಿ ಅಭಿವೃದ್ಧಿ ಪ್ರಾಧಿಕಾರ (ಜಿಡಿಸಿಎ) ಹೇಳಿದೆ.

‘ಅಭ್ಯಾಸ ನಡೆಸಲು ಅವಕಾಶ ನೀಡುವಂತೆ ಶ್ರೀಶಾಂತ್ ನಮ್ಮ ಬಳಿ ಕೇಳಿಲ್ಲ. ಒಂದು ವೇಳೆ ಅವರು ಕೇಳಿದರೆ ಖಂಡಿತವಾಗಿಯೂ ಒಪ್ಪಿಗೆ ಕೊಡುತ್ತೇವೆ. ಶ್ರೀಶಾಂತ್‌ ಭಾರತ  ಹಾಗೂ ಕೇರಳದ ಕ್ರಿಕೆಟ್‌ಗೆ ಸಾಕಷ್ಟು ಕೊಡುಗೆ ನೀಡಿದ್ದಾರೆ’ ಎಂದು ಜಿಡಿಸಿಎ ಮುಖ್ಯಸ್ಥ ಎನ್‌. ವೇಣುಗೋಪಾಲ್ ತಿಳಿಸಿದ್ದಾರೆ.
*
ನಿಷೇಧ ತೆರವಿಗೆ ಬಿಸಿಸಿಐನಲ್ಲಿಯೇ ಒಡಕು?
ಬೆಂಗಳೂರು: ಐಪಿಎಲ್ ಸ್ಪಾಟ್‌ ಫಿಕ್ಸಿಂಗ್‌ ಹಗರಣದಲ್ಲಿ ನಿರ್ದೋಷಿ ಗಳಾಗಿರುವ ಎಸ್‌. ಶ್ರೀಶಾಂತ್‌, ಅಜಿತ್‌ ಚಾಂಡಿಲಾ ಮತ್ತು ಅಂಕಿತ್‌ ಚವಾಣ್‌ ಮೇಲೆ ಬಿಸಿಸಿಐ ಹೇರಿರುವ  ಆಜೀವ ನಿಷೇಧ ಹಿಂದಕ್ಕೆ ಪಡೆದುಕೊಳ್ಳಬೇಕು ಎನ್ನುವ ಚರ್ಚೆ ಜೋರಾಗಿಯೇ ನಡೆ ಯುತ್ತಿದೆ. ಆದರೆ ಈ ವಿಷಯವಾಗಿ ಮಂಡಳಿಯಲ್ಲಿಯೇ ಒಡಕು ಉಂಟಾಗಿದೆ ಎಂದು ಗೊತ್ತಾಗಿದೆ.

ಫಿಕ್ಸಿಂಗ್‌ನಲ್ಲಿ ಭಾಗಿಯಾದ ಆರೋಪದ ಮೇಲೆ ರಾಜಸ್ತಾನ ರಾಯಲ್ಸ್ ತಂಡದ ಮೂವರು ಮಾಜಿ ಆಟಗಾರರನ್ನು ದೆಹಲಿ ಪೊಲೀಸರು ಬಂಧಿಸಿದ್ದರು. ಆದರೆ, ಅಗತ್ಯ ಸಾಕ್ಷಿ ಲಭಿಸದ ಕಾರಣ ದೆಹಲಿ ಹೈಕೋರ್ಟ್‌ ಅವರನ್ನು ಖುಲಾಸೆ ಮಾಡಿತ್ತು. ಆದ್ದರಿಂದ ಶ್ರೀಶಾಂತ್‌, ಅಂಕಿತ್‌ ಮತ್ತು ಅಜಿತ್‌  ಸ್ಪರ್ಧಾತ್ಮಕ ಕ್ರಿಕೆಟ್‌ಗೆ ಮರಳುವ ಯೋಚನೆಯಲ್ಲಿದ್ದಾರೆ.

‘ಇವರ ಮೇಲಿರುವ ನಿಷೇಧವನ್ನು ತೆರವು ಮಾಡಬೇಕು ಮತ್ತು ಕ್ರಿಕೆಟ್‌ ಆಡಲು ಅವಕಾಶ ಕೊಡಬೇಕು’ ಎಂದು ಕೇರಳ ಕ್ರಿಕೆಟ್ ಸಂಸ್ಥೆ ಅಧ್ಯಕ್ಷ ಟಿ.ಎಸ್‌. ಮ್ಯಾಥ್ಯೂ ಹೇಳಿದ್ದಾರೆ. ಇದಕ್ಕಾಗಿ ಬಿಸಿಸಿಐಗೆ  ಕೆಸಿಎ ಪತ್ರ ಬರೆದಿದೆ. ಆದರೆ, ಬಿಸಿಸಿಐ ಅಧ್ಯಕ್ಷ ಜಗಮೋಹನ್‌ ದಾಲ್ಮಿಯ ಮತ್ತು ಕಾರ್ಯದರ್ಶಿ ಅನುರಾಗ್‌ ‘ಠಾಕೂರ್ ನಿಷೇಧ ತೆರವು ಸದ್ಯಕ್ಕಿಲ್ಲ’ ಎಂದಿದ್ದಾರೆ. ಹೀಗಾಗಿ ಮಂಡಳಿ ಯಲ್ಲಿಯೇ ಭಿನ್ನಾಭಿಪ್ರಾಯ ವ್ಯಕ್ತವಾಗಿದೆ.

ಈ ಬಗ್ಗೆ ಬಿಸಿಸಿಐ ಸದಸ್ಯರೊಬ್ಬರು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದ್ದು,  ‘ನ್ಯಾಯಾಲಯದ ತೀರ್ಪನ್ನು ಗೌರವಿಸಿ ಮೂವರೂ ಕ್ರಿಕೆಟಿಗರಿಗೆ ಆಡಲು ಅವಕಾಶ ಕೊಡಲು ಬಿಸಿಸಿಐ ಒಲವು ಹೊಂದಿದೆ. ಆದರೆ, ದೆಹಲಿ ಪೊಲೀಸರು ಸುಪ್ರೀಂ ಕೋರ್ಟ್‌ ಮೆಟ್ಟಿಲೇರುವ ಸಾಧ್ಯತೆ ಇರುವ ಕಾರಣ ಬಿಸಿಸಿಐ ಸದ್ಯಕ್ಕೆ ಕಾದು ನೋಡುವ ತಂತ್ರ ಅನುಸರಿಸುತ್ತಿದೆ’ ಎಂದು ತಿಳಿಸಿದ್ದಾರೆ.

‘ಸ್ಟಾಟ್‌ ಫಿಕ್ಸಿಂಗ್‌ ಮತ್ತು ಬೆಟ್ಟಿಂಗ್‌ ಪ್ರಕರಣ ಬಯಲಾದ ಬಳಿಕ ಕ್ರಿಕೆಟ್ ಬಗ್ಗೆ ಜನರ ನಂಬಿಕೆ ಕಡಿಮೆಯಾಗಿದೆ. ಒಂದು ವೇಳೆ ಸುಪ್ರೀಂ ಕೋರ್ಟ್‌ನಲ್ಲಿ ಆಟಗಾರರಿಗೆ ಹಿನ್ನಡೆಯಾದರೆ ಬಿಸಿಸಿಐಗೆ ಮತ್ತೆ ಕಳಂಕ ಅಂಟಿ ಕೊಳ್ಳಲಿದೆ. ಆದ್ದರಿಂದ ಆತುರದ ನಿರ್ಧಾರ ಕೈಗೊಳ್ಳದಿರಲು ನಿರ್ಧರಿಸಿದೆ. ದೆಹಲಿ ಪೊಲೀಸರ ಮುಂದಿನ ನಡೆ ನೋಡಿಕೊಂಡು ನಿಷೇಧ ತೆರವಿನ ಕುರಿತು ಬಿಸಿಸಿಐ ತೀರ್ಮಾನ ಕೈಗೊಳ್ಳುತ್ತದೆ’ ಎಂದೂ ಅವರು ತಿಳಿಸಿದ್ದಾರೆ.
*
ಕ್ರಿಕೆಟ್‌ ಹಾಗೂ ಭಯೋತ್ಪಾದನೆ ಒಂದಾಗಲು ಸಾಧ್ಯವೇ? ಗಡಿಯಲ್ಲಿ ದಾಳಿ ನಿಲ್ಲುವ ತನಕ ಸರಣಿ ಆಯೋಜಿಸುವ ಮಾತಿಲ್ಲ.
-ಅನುರಾಗ್‌ ಠಾಕೂರ್, 
ಬಿಸಿಸಿಐ ಕಾರ್ಯದರ್ಶಿ
*
ಸ್ಪಾಟ್‌ ಫಿಕ್ಸಿಂಗ್‌ನಲ್ಲಿ ಆಟಗಾರರ ಪಾತ್ರವಿಲ್ಲ. ಎಲ್ಲಾ ಆರೋಪಗಳು ಸತ್ಯವಾಗಲು ಸಾಧ್ಯವಿಲ್ಲ. ಈ ಪ್ರಕರಣ ಆಟಗಾರರಿಗೆ ಏನೂ ಸಂಬಂಧವಿಲ್ಲ.
-ಸುರೇಶ್‌ ರೈನಾ,
ಭಾರತ ಕ್ರಿಕೆಟ್‌ ತಂಡದ ಆಟಗಾರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT