ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾತ್ರದೊಳಗೆ ಪ್ರಜ್ವಲಿಸುತ್ತಾ

Last Updated 19 ಆಗಸ್ಟ್ 2015, 19:39 IST
ಅಕ್ಷರ ಗಾತ್ರ

ಸತತವಾಗಿ ಸಿನಿಮಾ ಮಾಡುತ್ತಿರುವ ಪ್ರಜ್ವಲ್ ದೇವರಾಜ್ ಇತ್ತೀಚೆಗೆ ‘ನೀನಾದೆ ನಾ’ ಎಂದು ತಮ್ಮ ಬಾಲ್ಯ ಅರಸಲು ಹೊರಟಿದ್ದರು. ಈಗ ‘ಅರ್ಜುನ’ನಾಗಿ ದೇವರಾಜ್ ಅವರೊಂದಿಗೇ ಜಿದ್ದಿಗೆ ಬಿದ್ದಿರುವ ಅವರು ‘ಭುಜಂಗ’ನಾಗಿ ಕಳ್ಳತನಕ್ಕೆ ಸಿದ್ಧರಾಗಿದ್ದಾರೆ. ‘ಸಿಕ್ಸರ್’ ಮೂಲಕ ಓಪನಿಂಗ್ ಮಾಡಿದ ಪ್ರಜ್ವಲ್,  ‘ಅರ್ಜುನ’ದಲ್ಲಿ ಶತಕ ಬಾರಿಸುವ ಉತ್ಸಾಹದಲ್ಲಿದ್ದಾರೆ. ಮುಂದೆ ಮಾನಸಿಗೆ ಮಾದನಾಗುವ ಭರದಲ್ಲಿರುವ ಅವರು ‘ಕಾಮನಬಿಲ್ಲು’ ಪ್ರಶ್ನೆಗಳಿಗೆ ನಗುತ್ತಲೇ ಪ್ರತಿಕ್ರಿಯಿಸಿದ್ದಾರೆ.

* ‘ಅರ್ಜುನ’ದಲ್ಲಿ ದೇವರಾಜ ಅವರೊಡನೆ ಗುದ್ದಾಡಿದ್ದೀರಂತೆ?
ಗುದ್ದಾಟ ಅಂದರೆ ದೈಹಿಕವಾಗಿ ಅಲ್ಲ. ಮಾತಿನ ಚಕಮಕಿ, ದೃಷ್ಟಿ ಯುದ್ಧಗಳಿವೆ. ನಾನಿಲ್ಲಿ ಒಬ್ಬ ಸಾಮಾನ್ಯ ಸರ್ಕಾರಿ ಉದ್ಯೋಗಿ. ಇಂಥ ಒಂದು ಪಾತ್ರ ನನಗಾಗಿ ಯಾರಾದರೂ ಸೃಷ್ಟಿ ಮಾಡುತ್ತಾರೆ ಎಂದುಕೊಂಡಿರಲಿಲ್ಲ. ಲವರ್ ಬಾಯ್, ಕಮರ್ಷಿಯಲ್... ಇಂಥ ಚಿತ್ರಗಳಲ್ಲೇ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದೆ. ಇಡೀ ಚಿತ್ರದಲ್ಲಿ ಸಾಕಷ್ಟು ಬೆಂಡೆತ್ತಿಸಿಕೊಂಡಿದ್ದೀನಿ. ಹೀರೊಯಿಸಂ ಇಲ್ಲ. ಯಾವಾಗಲೂ ಶಾಂತವಾಗಿರುವ ಈ ಪಾತ್ರದ ಒಳಗೆ ಕ್ರೌರ್ಯವಿದೆ.

* ಶಾಲಾ ದಿನಗಳಲ್ಲಿ ಅಪ್ಪನಿಂದ ಬೆಂಡೆತ್ತಿಸಿಕೊಂಡಿದ್ದು ನೆನಪಾಗಿರಬೇಕು?
ನಿಜ. ಒಮ್ಮೆ ಅಪ್ಪನೇ ನನ್ನ ಟ್ಯೂಷನ್‌ಗೆ ಡ್ರಾಪ್ ಮಾಡಿದ್ದರು. ನನಗೋ ಟ್ಯೂಷನ್ ಬೇಜಾರು. ಅಪ್ಪ ಅತ್ತ ಹೋಗುತ್ತಿದ್ದಂತೆ ನಾನು ಕಾಂಪೌಂಡ್ ಹಾರಿ ಹೊರಗೆ ಬಂದಿದ್ದೆ. ನನ್ನ ದುರದೃಷ್ಟಕ್ಕೆ ಟ್ರಾಫಿಕ್ ಜಾಮ್ ಆದ ಕಾರಣ ಅಪ್ಪ ಇನ್ನೂ ಅಲ್ಲೇ ಇದ್ದರು. ನಾನು ಸಿಕ್ಕಾಕ್ಕೊಂಡಿದ್ದೆ. ಗಾಡಿ ಹತ್ತಿಸಿಕೊಂಡು ಸೀದಾ ಮನೆಗೆ ಹೋದರು. ನಾನು ಹೇಳಿದ್ದೆಲ್ಲ ಕೇಳಿಸಿಕೊಂಡು ಕೈಗೆ ಬೆಲ್ಟ್ ಎತ್ತಿಕೊಂಡರು. ಭಯದಲ್ಲಿದ್ದೆ. ಆದರೆ ಒಂದು ಏಟೂ ನನಗೆ ಬೀಳಲಿಲ್ಲ. ಎಲ್ಲವೂ ಮಂಚಕ್ಕೆ, ನೆಲಕ್ಕೆ ಬಿದ್ದಿತ್ತು.

* ಸಿನಿಮಾದಲ್ಲಿ ಅಪ್ಪನೊಂದಿಗಿನ ಬೌದ್ಧಿಕ ಯುದ್ಧ ಚೆನ್ನಾಗಿತ್ತಾ?
ನನ್ನ ಸ್ನೇಹಿತರೆಲ್ಲ ಹೇಳುತ್ತಿದ್ದರು, ‘ಮಗಾ ನಿಮ್ ತಂದೆ ಎದುರು ನಟನೆ ಮಾಡಕ್ಕಾಗಲ್ಲ ಕಣೋ, ಕೈ ಕಾಲೆಲ್ಲ ನಡುಗುತ್ತೆ’ ಎಂದು. ನನಗೆ ಅದು ಯಾಕೆ ಅಂತ ಅರ್ಥ ಆಗಿರ್‍ಲಿಲ್ಲ. ಹಂಗೆಲ್ಲ ಏನೂ ಆಗೋದಿಲ್ಲ ಎಂದುಕೊಂಡಿದ್ದೆ. ಒಂದು ದೃಶ್ಯದಲ್ಲಿ ಅಪ್ಪನ ಎದುರು ನಾನು ಮೇಜು ಗುದ್ದಿ, ಕುರ್ಚಿ ಒದ್ದು ಆಕ್ರೋಶ ತೋರಬೇಕಿತ್ತು. ಮೊದಲ ಬಾರಿ ಅಪ್ಪನನ್ನು ಸೆಟ್‌ನಲ್ಲಿ ಡೈನಮಿಕ್ ಆಗಿ ನೋಡುತ್ತಿದ್ದೆ.

ನನಗೆ ಕೈ ಕಾಲು ಅದುರಲು ಆರಂಭವಾಗಿತ್ತು. ಸಂಭಾಷಣೆಗಳೇ  ಬರುತ್ತಿರಲಿಲ್ಲ. ಆದರೂ ಒಂದೇ ಟೇಕ್‌ಗೆ ಆ ಸೀನ್ ಓಕೆ ಆಗಿತ್ತು. ಅದಾದಮೇಲೂ ಕಾಲು ಗಂಟೆ ಕೈ ಕಾಲು ಹಿಡಿತಕ್ಕೆ ಬಂದಿರಲಿಲ್ಲ. ಅಪ್ಪನಿಗೆ ಗೊತ್ತಾಯ್ತು. ಅವರೇ ನನ್ನ ಹೆಗಲ ಮೇಲೆ ಕೈ ಹಾಕಿ ವಾಕ್‌ಗೆ ಕರೆದುಕೊಂಡು ಹೋಗಿ ಸಮಾಧಾನ ಮಾಡಿದರು.

* ‘ನೀನಾದೆ ನಾ’ದಲ್ಲಿ ನಿಜಕ್ಕೂ ನಿಮ್ಮ ಬಾಲ್ಯ ಸಿಕ್ಕಿತ್ತಾ?
ಖಂಡಿತ. ನಾನು ಶಾಲೆಗೆ ಹೋಗಬೇಕಾದರೆ ಇದ್ದಂಥದ್ದೇ ಯೂನಿಫಾರಂ ಅನ್ನು ಈ ಚಿತ್ರಕ್ಕಾಗಿ ಹೊಲಿಸಿಕೊಂಡಿದ್ದೆ. ತುಂಬ ಚಾಲೆಂಜಿಂಗ್ ಪಾತ್ರವದು. ಅದಕ್ಕಾಗಿ ಎಂಟ್ಹತ್ತು ಕಿಲೊ ತೂಕ ಇಳಿಸಿಕೊಂಡಿದ್ದೆ. ಶಾಲೆ ಹುಡುಗನಂತೇ ಕಾಣುತ್ತಿದ್ದೆ. ಮಜವಾಗಿತ್ತು.

* ‘ಭುಜಂಗ’ನಾಗಿ ಮತ್ತೆ ಲೂಟಿಗೆ ನಿಂತಿದ್ದೀರಲ್ಲ?
‘ಜಂಬೂ ಸವಾರಿ’ಯಲ್ಲಿ ಕದ್ದು ಶೋಕಿ ಮಾಡೋ ಒಂದು ಸ್ಟೈಲಿಷ್ ಪಾತ್ರ ಮಾಡಿದ್ದೆ. ಆದರೆ ‘ಭುಜಂಗ’ದಲ್ಲಿ ಕೊಳ್ಳೇಗಾಲದಲ್ಲಿನ ಒಬ್ಬ ಕಳ್ಳನ ಕಥೆ ಇದೆ. ಆತ ಹೇಗೆಂದರೆ, ‘ಧೂಮ್–3’ ಸಿನಿಮಾದಿಂದ ಪ್ರೇರೇಪಿತನಾದಂತಹ ಹಳ್ಳಿ ಕಳ್ಳ. ದೊಣ್ಣೆ ಇಟ್ಟುಕೊಂಡು ಪೋಲ್ ವಾಲ್ಟ್ ಮಾಡಿ ಮನೆ ಮಹಡಿಗೆ ಜಿಗಿದು ಅಲ್ಲಿಂದ ತನ್ನ ಕೈಚಳಕ ತೋರಿಸುತ್ತಾನೆ. ಅಂದಂದಿನ ಕುಡಿ–ತಿನ್ನುವ ವ್ಯವಹಾರಗಳಷ್ಟೇ ಆತನ ಕಾಳಜಿ. ಯಾರನ್ನೂ ಕ್ಯಾರೆ ಅನ್ನದ ವ್ಯಕ್ತಿ. ಆದರೆ ಪ್ರೀತಿಯಲ್ಲಿ ಬಿದ್ದರೆ ಹೇಗೆ ಬದಲಾಗಬಹುದು ಎಂಬುದನ್ನು ಹೇಳಲಾಗಿದೆ. ಸ್ವಲ್ಪ ಕೋಲು ವರಸೆ, ಪೋಲ್ ವಾಲ್ಟ್ ತರಬೇತಿ ಪಡೆದೆ. ಆದರೆ ಮತ್ತೆ ಸದ್ಯ ಕಳ್ಳನಾಗು ಎಂದರೆ, ‘ಇಲ್ಲ, ಒಂದಷ್ಟು ದಿನ ಒಳ್ಳೆಯವನಾಗಿಯೇ ಇರ್ತೀನಿ’ ಎಂತೀನಿ.

* ಚಿಕ್ಕವನಿದ್ದಾಗ ಕದ್ದು–ಬಿದ್ದ ಅನುಭವಗಳೆಲ್ಲ ಸಹಾಯಕ್ಕೆ ಬಂದಿರಬೇಕು?
ಚಿಕ್ಕವನಿದ್ದಾಗ ನಾನು ತುಂಬಾ ಸೈಲೆಂಟು. ‘ನೀನು ದೇವರ ಥರ ಇದ್ದೆ. ನಮಗೆ ಏನೂ ತೊಂದರೆ ಕೊಟ್ಟಿಲ್ಲ’ ಎನ್ನುತ್ತಾರೆ ಅಪ್ಪ–ಅಮ್ಮ. ದೊಡ್ಡವನಾಗುತ್ತಲೇ ಸ್ವಲ್ಪ ತೊಂದರೆ ಕೊಟ್ಟಿರಬಹುದೇನೋ.

* ‘ಮೆರವಣಿಗೆ’, ‘ಜಂಬೂ ಸವಾರಿ’ ಇಂಥ ಶೀರ್ಷಿಕೆಗಳೇ ಇಷ್ಟವೋ?
ಅದೊಂಥರ ಉತ್ಸವ. ಮೆರವಣಿಗೆ ಎಂದರೆ ಯಾವುದೋ ರಾಜನ ಮೆರವಣಿಗೆ ಆಗಬಹುದು, ಜಂಬೂ ಸವಾರಿ ಎಂದಾಕ್ಷಣ ಮೈಸೂರು ದಸರಾ ನೆನಪಾಗುತ್ತದೆ. ಹೀಗೆ ಶೀರ್ಷಿಕೆಯಲ್ಲೇ ಪಾಸಿಟಿವ್ ಫೀಲ್ ಇರುತ್ತೆ. ಆ ಕಾರಣಕ್ಕಾಗಿ ಅಂಥ ಶೀರ್ಷಿಕೆ ಇಷ್ಟವಾಗುತ್ತೆ.

* ಬೈಕ್ ಸಿಕ್ರೆ ಹೆಂಗೆಂಗೆಲ್ಲ ಓಡಿಸೋ ಆಸೆ ಆಗುತ್ತೆ?
ಬೈಕ್ ಅಂದ್ರೆ ಸಖತ್ ಕ್ರೇಜ್ ನಂಗೆ. ಸೈಕಲ್, ಸ್ನೇಹಿತರ ಬೈಕ್ ಓಡಿಸಿ ಬಿದ್ದು ಸಿಕ್ಕಾಪಟ್ಟೆ ಪೆಟ್ಟಾಗಿತ್ತು. ಅದಕ್ಕಾಗಿ ಮನೆಯಲ್್ಲಿ ಬೈಕ್ ಕೊಡಿಸಲು ಮುಂದಾಗಲಿಲ್ಲ. ನಾನು ಒಂದು ತಿಂಗಳು ಸರಿಯಾಗಿ ಊಟ ಮಾಡದೆ ಏನೇನೆಲ್ಲಾ ಕಾಟ ಕೊಟ್ಟಿದ್ದೆ. ಮೊನ್ನೆ ಹಾರ್ಲೆ ಡೇವಿಡ್ಸನ್ ಬೈಕ್ ತಗೊಂಡಾಗ ಹಳೇದನ್ನೆಲ್ಲ ನೆನಪಿಸಿ ಅಪ್ಪ ರೇಗಿಸ್ತಿದ್ರು. ಮೊದಲೆಲ್ಲ ಯಾರಾದರೂ ನಮಗಿಂತ ಮುಂದೆ ಹೋದರೆ ಓವರ್‌ಟೇಕ್ ಮಾಡದೇ ಇರ್ತಿರ್ಲಿಲ್ಲ. ಆದರೆ ಈಗ ಹಾಗೇನಿಲ್ಲ. ಹುಷಾರಾಗಿ ಓಡಿಸ್ತೀನಿ.

* ಇನ್ನೊಂದು ಮಾತಿದೆ. ಪಲ್ಸರ್ ಎಷ್ಟೇ ಸಿಸಿ ಬೈಕ್ ಆಗಿದ್ರೂ ಸ್ಕೂಟಿಯನ್ನ ಓವರ್‌ಟೇಕ್ ಮಾಡಕ್ಕಾಗಲ್ಲ ಅಂತ. ಬೈಕ್ ಕ್ರೇಜ್ ಇದ್ದ ಕಾಲಕ್ಕೂ ನಿಮಗೆ ಹೀಗೆಲ್ಲ ಆಗಿಲ್ವಾ?
ಊಹೂಂ. ನನಗೆ ತುಂಬ ನಾಚಿಕೆ ಸ್ವಭಾವ. ಸಾಕಷ್ಟು ಬಾರಿ ಹುಡುಗೀರೇ ಬಂದು ನನ್ನ ಕಾಫಿಗೆ ಕರೆಯುತ್ತಿದ್ದರು. ನನಗೆ ಒಂಥರಾ ಹೆದರಿಕೆ. ನಾನು ಹೋಗದಿದ್ದಾಗ, ‘ಥೂ ಏನಿವ್ನು, ಅರ್ಥಾನೇ ಆಗಲ್ಲ’ ಅಂತೆಲ್ಲ ಬೈದುಕೊಂಡಿದ್ದಿದೆ. ಸಿನಿಮಾಕ್ಕೆ ಬಂದ ನಂತರವೇ ಎಲ್ಲರೊಂದಿಗೆ ಬೆರೆಯೋಕೆ ಶುರು ಮಾಡಿದ್ದು.

* ಇಷ್ಟದ ಬಿರಿಯಾನಿಯಿಂದ ದೂರವಿದ್ದೀರಂತೆ?
ಹೌದು. ನನಗೆ ಬಿರಿಯಾನಿ ಅಂದ್ರೆ ತುಂಬಾ ಇಷ್ಟ. ಎಂಥ ಡಯೆಟ್ ಇದ್ರೂ ಬಿರಿಯಾನಿ ಎದುರು ಬಾಯಿಕಟ್ಟೋಕೆ ಆಗಲ್ಲ. ಆದರೆ ಈಗ ಗೋಧಿ ಅನ್ನದಲ್ಲೇ ಬಿರಿಯಾನಿ ಮಾಡಿಸ್ಕೋತಿನಿ. ಅಕ್ಕಿ ಬಿರಿಯಾನಿಯಷ್ಟು ರುಚಿ ಇಲ್ಲದಿದ್ರೂ ಪರ್ಯಾಯವಾಗಿ ಬಳಸಬಹುದು.
***
ನಾನು ಪ್ರೀತಿ ಗುಲಾಮ
ಒಂದುವೇಳೆ ನಾನು ಗುಲಾಮನಾಗುವ ಪರಿಸ್ಥಿತಿ ಬಂದರೆ ಅದು ಪ್ರೀತಿಗೆ. ಅಂದ್ರೆ ಯಾವ್ದೋ ಹುಡುಗಿ ಹೆಸರು ಅಂದ್ಕೋಬೇಡಿ. ನನ್ನ ಅಪ್ಪ–ಅಮ್ಮಂದು ಪ್ರೇಮ ವಿವಾಹ. ತುಂಬಾ ಖುಷಿ ಆಗಿರ್ತಾರೆ. ನಾನೂ ಪ್ರೀತಿಸಿಯೇ ಮದುವೆ ಆಗೋದು ಅಂತ ಫಿಕ್ಸ್ ಆಗ್ಬಿಟ್ಟಿದೀನಿ. ಅಮ್ಮನೂ, ಆ ಕೆಲಸ ನೀನೇ ಮಾಡಿಕೊ, ನಮಗೆ ಆ ಕಷ್ಟ ಬೇಡ ಅಂತಾರೆ. ಸದ್ಯ ಕೆಲಸ ಮತ್ತು ತಂದೆ–ತಾಯಿಗೆ ಗುಲಾಮ. ಮುಂದೆ ನಾನು ತುಂಬ ಪ್ರೀತಿಸೋ ಹುಡುಗಿಗೆ ಗುಲಾಮನಾಗಬಹುದು. ಸದ್ಯಕ್ಕಿನ್ನೂ ಹುಡುಕಾಟವೇ ‘ಸವಾಲ್’ ಆಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT