ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾರಂಪರಿಕ ಕಟ್ಟಡಗಳಿಗೆ ಮಾನ್ಯತೆ ನೀಡಿಲ್ಲ

Last Updated 25 ಅಕ್ಟೋಬರ್ 2014, 20:01 IST
ಅಕ್ಷರ ಗಾತ್ರ

ಬೆಂಗಳೂರು: ವಿವಾದಕ್ಕೆ ತುತ್ತಾಗಿರುವ ಬಾಲಬ್ರೂಯಿಯೂ ಸೇರಿದಂತೆ ನಗರದ ಹಲವು ಕಟ್ಟಡಗಳನ್ನು ಇತಿಹಾಸತಜ್ಞರು ‘ಪಾರಂಪರಿಕ ಕಟ್ಟಡ’ಗಳೆಂದು ಗುರುತಿಸಿದ್ದರೂ ರಾಜ್ಯ ಸರ್ಕಾರ ಇವುಗಳಿಗೆ ಮಾನ್ಯತೆಯೇ ನೀಡಿಲ್ಲ.
ಕಾನೂನಿನ ರಕ್ಷಣೆಯಿಲ್ಲದ ಕಾರಣದಿಂದ ಇತಿಹಾಸದ ಜೊತೆ ಬೆರೆತಿರುವ ಕಟ್ಟಡಗಳನ್ನು ಯಾವಾಗ ಬೇಕಾದರೂ ಇತಿಹಾಸ ಪುಟ ಸೇರಿಸಲು ಅವಕಾಶವಿದೆ. ಈ ಅಂಶವನ್ನು ಕಾನೂನು ಇಲಾಖೆ ಸಹ ಸ್ಪಷ್ಟಪಡಿಸಿದೆ.

ಖಾಸಗಿಯವರು ಸಾಕಷ್ಟು ಕಟ್ಟಡಗಳನ್ನು ‘ಪಾರಂಪರಿಕ ಕಟ್ಟಡಗಳು’ ಎಂದು ಗುರುತಿಸಿ­ದ್ದಾರೆ. ಇದೇ ರೀತಿಯಲ್ಲಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ೫೧ನೇ ಸೆಕ್ಷನ್‌ ಅಡಿಯಲ್ಲಿ ಸರ್ಕಾರವೇ ಹಿರಿಯ ಐಎಎಸ್‌ ಅಧಿಕಾರಿ ಟಿ.ಪಿ. ಇಸ್ಸಾರ್‌ ಅವರ ಅಧ್ಯಕ್ಷತೆಯಲ್ಲಿ ನೇಮಿಸಿದ್ದ ‘ಬೆಂಗ­ಳೂರು ಅರ್ಬನ್‌ ಆರ್ಟ್‌ ಕಮಿಷನ್‌’ ೧೯೮೮ರಲ್ಲಿ ವರದಿ ರೂಪದಲ್ಲಿ ಗ್ರಂಥವನ್ನೇ ಹೊರ­ತಂದಿದೆ. ಇದರಲ್ಲಿ ನಗರದ ಪಾರಂಪರಿಕ ಕಟ್ಟಡಗಳ ಸಮಗ್ರ ಮಾಹಿತಿ ಇದೆ. ಈ ಕಟ್ಟಡಗಳ ರಕ್ಷಣೆಗೆ ಈ ಆಯೋಗ ನಿಯಮವನ್ನೂ ರೂಪಿಸಿದೆ.

ಈ ನಿಯಮದ ಅಡಿಯಲ್ಲಿ  ವಾಸ್ತುಶಿಲ್ಪಿಗಳು, ಇತಿಹಾಸಕಾರರು, ಪ್ರಾಚ್ಯವಸ್ತು ತಜ್ಞರು ಹಾಗೂ ಪರಿಸರವಾದಿಗಳನ್ನು ಸದಸ್ಯರನ್ನಾಗಿ ನೇಮಿಸಬ­ಹುದು. ಆದರೆ ೨೦೦೩ರಿಂದ ಈ ಸಮಿತಿ ಅಸ್ತಿತ್ವ­ದಲ್ಲೇ ಇಲ್ಲ. ಇಸ್ಸಾರ್‌ ಸಮಿತಿ ನೀಡಿದ್ದ ವರದಿ ಇಂದಿಗೂ ಸರ್ಕಾರಕ್ಕೆ ಮಾರ್ಗದರ್ಶನ ನೀಡು­ತ್ತಿದೆ. ಆದರೆ, ಇದಕ್ಕೆ ಕಾನೂನಿನ ಮಾನ್ಯತೆಯಿಲ್ಲ ಎಂದು ಕಾನೂನು ಇಲಾಖೆಯ ಮೂಲ ಹೇಳುತ್ತದೆ.
ನಗರದ ಪಾರಂಪರಿಕ ಕಟ್ಟಡಗಳ ಬಗ್ಗೆ ಲೋಕೋಪಯೋಗಿ ಇಲಾಖೆ ಅಧಿಕಾರಿ­ಗಳಲ್ಲಿ ಮಾಹಿತಿ ಕೇಳಿದರೆ ಅವರು ವಿವರ ನೀಡುವುದು ಈ ಪುಸ್ತಕದಿಂದಲೇ. ಚಾರಿತ್ರಿಕ ಮತ್ತು ಪಾರಂಪ­ರಿಕ ತಾಣಗಳ ರಕ್ಷಣೆ, ಇವುಗಳ ಪುನರುಜ್ಜೀವನಕ್ಕೆ ಧನಸಹಾಯ ಮಾಡಲು ಸರ್ಕಾರಕ್ಕೆ ಶಿಫಾರಸು ನೀಡುವುದು ಈ ಕಮಿಷನ್‌ನ ಕರ್ತವ್ಯವಾಗಿತ್ತು.

ಆದರೆ ಎಸ್‌.ಎಂ.ಕೃಷ್ಣ ಅವರ ಅವಧಿಯಲ್ಲಿ ವಿಕಾಸಸೌಧ ನಿರ್ಮಾಣಕ್ಕೆ ಈ ಸಮಿತಿಯು ಅನುಮತಿ ನೀಡಲಿಲ್ಲ. ಬದಲಿಗೆ ವಿಕಾಸಸೌಧದ ಜಾಗದಲ್ಲಿದ್ದ ಸರ್ಕಾರಿ ಮುದ್ರಣಾಲಯವನ್ನು ವಸ್ತುಸಂಗ್ರಹಾಲಯವನ್ನಾಗಿ ಉಳಿಸಬೇಕು ಎನ್ನುವ ಶಿಫಾರಸು ಮಾಡಿತ್ತು. ಇದನ್ನು ತಿರಸ್ಕರಿ­ಸಿದ ಕೃಷ್ಣ ಅವರು, ಕಮಿಷನ್‌ ಅನ್ನು ವಿಸರ್ಜಿಸಿ ವಿಕಾಸಸೌಧ ಕಟ್ಟುವ ನಿರ್ಧಾರ ತೆಗೆದು­ಕೊಂಡರು ಎಂದು ಕಮಿಷನ್‌ನ ಸದಸ್ಯರಾಗಿದ್ದ ಹಿರಿಯ ವಾಸ್ತುಶಿಲ್ಪಿ ನರೇಶ್‌ ವಿ.ನರಸಿಂಹನ್‌ ತಿಳಿಸಿದರು.

‘ಸರ್ಕಾರ ಬಾಲಬ್ರೂಯಿಯನ್ನು ಒಡೆಯು­ವುದಿಲ್ಲ ಎನ್ನುತ್ತಿರಬಹುದು. ಆದರೆ, ಇಂತಹ ಪಾರಂಪರಿಕ ಕಟ್ಟಡಗಳ ರಕ್ಷಣೆಗೆ ಕಾನೂನಿನ ಬಲಬೇಕು. ಇದಕ್ಕೆ ಸರ್ಕಾರ ಮನಸ್ಸು ಮಾಡ­ಬೇಕು’ ಎಂದು  ಅವರು ಒತ್ತಾಯಿಸಿದರು.

ಮುಂಬೈ, ಗೋವಾ, ನವದೆಹಲಿ, ಜೈಪುರ, ಹೈದರಾಬಾದ್‌ ಮತ್ತು ಅಹಮದಾಬಾದ್‌ ನಗರಗಳಲ್ಲಿ ಇರುವಂತೆ ‘ಬೆಂಗಳೂರು ಪಾರಂಪ­ರಿಕ ಕಟ್ಟಡ ನಿಯಂತ್ರಣಾ ಕಾಯ್ದೆ’ ಜಾರಿಯಾ­ಗಬೇಕು. ಇಲ್ಲವಾದರೆ ಪರಂಪರೆಗೆ ಧಕ್ಕೆಯಾಗು­ತ್ತದೆ ಎಂದು ಅವರು ಕಳವಳ ವ್ಯಕ್ತಪಡಿಸಿದರು.

೧೯೭೦ರ ದಶಕದಲ್ಲಿ ಅಠಾರ ಕಚೇರಿಯನ್ನು ಉರುಳಿಸಿ ಬಹುಮಹಡಿ ಕಟ್ಟಡ ಕಟ್ಟುವ ಪ್ರಸ್ತಾಪವಿತ್ತು. ಅದಕ್ಕೆ ವಿರೋಧ ಬಂದಿದ್ದ­ರಿಂದಲೇ ಹೈಕೋರ್ಟ್ ಕಟ್ಟಡವಾಗಿ ಅಠಾರ ಕಚೇರಿ ಉಳಿದಿದೆ. ಇಲ್ಲವಾದರೆ ಸರ್ಕಾರಿ ಮುದ್ರ­ಣಾಲಯದ ಪರಿಸ್ಥಿತಿಯೇ ಇದಕ್ಕೆ ಬರುತ್ತಿತ್ತು ಎಂದು ಅವರು ನೆನಪಿಸಿಕೊಂಡರು.

ಪಾರಂಪರಿಕ ಕಟ್ಟಡಗಳ ರಕ್ಷಣೆಗೆ ಸಂಬಂಧಿ­ಸಿದ ಕಾಯ್ದೆಯ ಕರಡನ್ನು ಬಿಬಿಎಂಪಿಯ ನಗರ ಯೋಜನಾ ವಿಭಾಗದ ನಿರ್ದೇಶಕರು ನಗರಾಭಿವೃದ್ಧಿ ಇಲಾಖೆಗೆ ಕಳುಹಿಸಿದ್ದಾರೆ. ಈ ಕಡತ ನಿದ್ರಿಸುತ್ತಿದೆ ಎಂದು ನಗರಾಭಿವೃದ್ಧಿ ಇಲಾಖೆಯ ಮೂಲಗಳು ತಿಳಿಸುತ್ತವೆ.

ಬಿಬಿಎಂಪಿಯಿಂದ ಪ್ರಯತ್ನವೇ ಆಗಿಲ್ಲ!: ಕೆಲವು ವರ್ಷಗಳ ಹಿಂದೆ ‘ಭಾರತೀಯ ಪಾರಂಪರಿಕ ಸಂರಕ್ಷಣಾ ಜಾಲ’ (ಐಎಚ್‌ಸಿಎನ್‌) ರಾಜ್ಯದ ೧೩ ಜಿಲ್ಲೆಗಳಿಗೆ ‘ಪಾರಂಪರಿಕ ನಗರಗಳು’ ಎಂಬ ಮಾನ್ಯತೆ ನೀಡಿದೆ. ಇದೇ ಸಂದರ್ಭದಲ್ಲಿ ಬೆಂಗಳೂರು ಮಹಾನಗರ ಪಾಲಿಕೆಯ ಜೊತೆಯಲ್ಲೂ ಒಪ್ಪಂದಕ್ಕೆ ಸಹಿ ಹಾಕಿದೆ. ಆದರೆ, ಬಿಬಿಎಂಪಿಯಿಂದ ಪಾರಂಪರಿಕ ಕಟ್ಟಡಗಳ ಉಳಿಸುವ ಪ್ರಯತ್ನ ಈ ವರೆಗೆ ಆಗಿಲ್ಲ.

‘ಒಡೆಯುವ ಉದ್ದೇಶ ಇಲ್ಲ’
‘ಬೆಂಗಳೂರು ನಗರದಲ್ಲಿನ ಬಾಲಬ್ರೂಯಿ ಅತಿಥಿ ಗೃಹ ಒಡೆದು, ಅಲ್ಲಿ ಶಾಸಕರಿಗೆ ಕ್ಲಬ್‌ ನಿರ್ಮಿಸುವ ಉದ್ದೇಶ ಸರ್ಕಾರದ ಮುಂದಿಲ್ಲ. ಈಗಿರುವ ಕಟ್ಟಡದಲ್ಲೇ ಕ್ಲಬ್‌ ಸ್ಥಾಪಿಸಬೇಕೆನ್ನುವುದು ಹಳೇ ಬೇಡಿಕೆ. ನಾನು ಕೂಡ ಇದಕ್ಕೆ ಈ ಹಿಂದೆಯೇ ₨ 10,000 ಶುಲ್ಕ ಪಾವತಿಸಿದ್ದೇನೆ’
– ಸಚಿವ ಟಿ.ಬಿ.ಜಯಚಂದ್ರ

ಕಟ್ಟಡ ಒಡೆಯಲ್ಲ
ಕ್ಲಬ್‌ಗಾಗಿ ಬಾಲಬ್ರೂಯಿ ಒಡೆಯುವ ಯಾವುದೇ ಪ್ರಸ್ತಾಪ ಸರ್ಕಾರದ ಮುಂದಿಲ್ಲ. ಶಾಸಕರಿಗಾಗಿ ಕಾನ್‌ಸ್ಟಿಟ್ಯೂಷನ್‌ ಕ್ಲಬ್‌ ಆರಂಭಿಸುವ ವಿಚಾರ ಹತ್ತು ವರ್ಷದಿಂದಲೂ ಇದೆ. ಆದರೆ ಇಂತಹ ಕಡೆಯೇ ಮಾಡುತ್ತೇವೆ ಎನ್ನುವ ವಿಚಾರ ಅಂತಿಮವಾಗಿಲ್ಲ. ಈ ವಿಚಾರದಲ್ಲಿ ಪ್ರತಿಭಟನೆಯೂ ಅನಗತ್ಯ.
– ಮುಖ್ಯಮಂತ್ರಿ ಸಿದ್ದರಾಮಯ್ಯ

‘ಕ್ಲಬ್‌ಗೆ ಕುಮಾರಕೃಪ ಸೂಕ್ತ’
ಬೆಂಗಳೂರಿನ ಆಕರ್ಷಣೀಯ ಸ್ಥಳ ಎನಿಸಿ­ರುವ ಪಾರಂ­ಪರಿಕ ಬಾಲ­ಬ್ರೂಯಿ ಕಟ್ಟಡ­ವನ್ನು ನೆಲ­ಸಮ ಮಾಡ­ಲಾ­ಗುತ್ತಿದೆ ಎಂಬ ಸುದ್ದಿ ಮಾಧ್ಯ­ಮಗಳಲ್ಲಿ ವರದಿಯಾ­ಗಿದೆ. ಶಾಸಕ­ರಿ­ಗಾಗಿ ಈ ಸ್ಥಳದಲ್ಲಿ ಕ್ಲಬ್‌ ಹೌಸ್‌ ನಿರ್ಮಿಸ­ಲಾ­ಗುತ್ತಿದೆ ಎಂಬ ವಿಷಯ ನನ್ನ ಮನಸ್ಸಿನಲ್ಲಿ ಗೊಂದಲ ಮೂಡಿಸಿದೆ. ಕಟ್ಟಡ ನೆಲಸಮ ಮಾಡುವ ವಿಷಯವೇ ಒಂದು ವದಂತಿ ಎಂಬುದು ನನ್ನ ನಂಬಿಕೆ. ಆದರೂ, ಕಟ್ಟಡ ನೆಲಸಮ ಮಾಡುವುದಕ್ಕೆ ವಿರೋಧ ವ್ಯಕ್ತ­ಪಡಿಸಿರುವ ಗೆಳೆಯರಾದ ನರೇಶ್‌ ನರ­ಸಿಂಹನ್‌, ರಾಮಚಂದ್ರ ಗುಹಾ, ಎಸ್‌.ಜಿ.­ವಾಸುದೇವ್‌ ಹಾಗೂ ಇತರರ ನಿಲುವಿಗೆ ನಾನು ಕೂಡ ಬದ್ಧ. ನಾನು ಕೂಡ ಹಲವು ವರ್ಷಗಳ ಕಾಲ ಶಾಸಕನಾಗಿ ಕಾರ್ಯ­ನಿರ್ವಹಿಸಿದ್ದೇನೆ. ಸದ್ಯದ ಪರಿಸ್ಥಿತಿ­ಯಲ್ಲಿ ಶಾಸ­ಕರಿಗಾಗಿ ವಿಶೇಷ ಕ್ಲಬ್‌ ಅಗತ್ಯ­ವಿದೆಯೇ ಎಂಬ ವಿಚಾರ ಮೂಡುತ್ತದೆ. ಅಕಸ್ಮಾತ್‌ ಅಗತ್ಯವಿದ್ದಲ್ಲಿ ಕುಮಾರ ಕೃಪಾ ಸೂಕ್ತ ಸ್ಥಳ.
–ಪ್ರೊ.ಬಿ.ಕೆ.ಚಂದ್ರಶೇಖರ್‌,
ಮಾಜಿ ಶಾಸಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT