ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾರಿಜಾತದ ಗೀರು

Last Updated 28 ನವೆಂಬರ್ 2015, 19:36 IST
ಅಕ್ಷರ ಗಾತ್ರ

ದೀಪಾವಳಿ ಕಥಾಸ್ಪರ್ಧೆ 2015-ತೀರ್ಪುಗಾರರ ಮೆಚ್ಚುಗೆ ಪಡೆದ ಕಥೆ.

ಭಾಗ–1
ಓ ನನ್ನ ಮುದ್ದು ಜಿಂಕೆಯೆ
    ಕನಸ ಕಾಡಲ್ಲಿ ಕಾಣೆಯಾಗಬೇಡ...
ಬಹಳ ಕಾಲದ ನಂತರ ನನ್ನನ್ನು ಹೀಗೆ ಬರೆಯುವಂತೆ ಮಾಡುತ್ತಿದ್ದೀಯ...
ಕತೆಯನ್ನು ಬಹಳ ಕಾಲದ ಹಿಂದೆ ಬರೆದಿದ್ದೆ. ಆಮೇಲೆ ಅಲ್ಲಿ ಇಲ್ಲಿ ಕತೆಯ ನಮೂನೆಯ ಬರಹವನ್ನು ಬರೆದೆ. ಕೆಲವು ಕವಿತೆಗಳನ್ನು ಬರೆದೆ. ಅವೆಲ್ಲ ಬಹುಶಃ ಈ ತೀವ್ರತೆಯಿಂದ ಬರೆದವುಗಳಲ್ಲ. ಈ ಮಧ್ಯೆ ಆಲಸಿಯಾಗಿ- ಆಲಸ್ಯವಲ್ಲ- ಬದುಕಿನಲ್ಲಿ ಒಂದು ರೀತಿಯ ಜಡ್ಡುಗಟ್ಟಿದ್ದೆ ಎನ್ನಬಹುದು. ಯಾವುದನ್ನು ನೋಡಿದರೂ ಓದಿದರೂ ಅದೊಂದು ಆನಂದವಾಗಿ, ಅನುಭವವಾಗಿ ಅಂತರಂಗವನ್ನು ಸೇರುತ್ತಿರಲಿಲ್ಲ. ಇದನ್ನು ವೈರಾಗ್ಯ ಎನ್ನಲಾರೆ. ಅದಲ್ಲದಿರುವ ಯಾವುದೊ ಮನಸ್ಥಿತಿ. ಮಾಡಬಹುದಾದ, ಮಾಡಬಾರದ ರಾಶಿ ಕೆಲಸ ಮಾಡಿದೆ! ‘ಅನೈತಿಕ’ ಎನ್ನಬಹುದಾದ ಕನಸನ್ನು ಕಂಡೆ. ಅವೆಲ್ಲ ಮುಷ್ಟಿಯಲ್ಲಿ ಧುಮಿಕಿ ಹೋದವು! ಈಗ ಇಳಿವಯಸ್ಸಿಗೆ ಇಳಿಯುತ್ತಿದ್ದೇನೆ ಎನ್ನುವಾಗ ಝಗ್ಗನೆ ಬೆಳಗಾದಂತೆ ನೀನು ಬಂದೆ.

ಎಲ್ಲ ಒಮ್ಮೊಮ್ಮೆ ಮಜಾ ಅನಿಸುತ್ತದೆ. ಬಾಲಿಶ ಎಂದೂ ಕಾಣುತ್ತದೆ. ಎಲ್ಲವನ್ನೂ ಹೀಗೇ ಕಾಣುತ್ತ ಹೋದರೆ ಅಡಿಗರು ಹೇಳಿದಂತೆ ಏನಿದೆ ಇಲ್ಲಿ, ‘ಕಣ್ಣ ಚುಚ್ಚುವ ಸೂಜಿ ಕೊಲುವ ಬಡಿಗೆ’. ಹೀಗಾಗಿ ಮತ್ತೆ ಹಸಿಯಾಗುತ್ತಿದ್ದೇನೆ. ಅರಳಲು ಯತ್ತಿಸುತ್ತಿದ್ದೇನೆ. ಎಲ್ಲ ಎಲ್ಲಿಂದ ಶುರುವಾಯಿತು ಎನ್ನುವುದನ್ನು ಹೇಗೆ ಹೇಳುವುದು. ಎಲ್ಲೋ ಮನದ ಮೂಲೆಯಲ್ಲಿ ಬಿಂದು ಬಿಂದುವಾಗಿ ಇದ್ದಿದ್ದಿರಬೇಕು. ಯಾವುದೋ ಸಮಯ ಸಂದರ್ಭದಲ್ಲಿ ಎದ್ದು ಬಂದಿದೆ. ಆದರೆ ನಮಗೆ ಎಷ್ಟು ಬೇಲಿಗಳಿವೆ, ಬಂಧನಗಳಿವೆ. ಅದರಲ್ಲಿ ಕೆಲವು ಹರಿಯಲಾರದ ಮುರಿಯಲಾದ ಬಂಧನಗಳಿವೆ. ಇದೆಲ್ಲ ಇಬ್ಬರಿಗೂ ಗೊತ್ತಿದ್ದರೂ ಅಡಿಯ ಹಿಂದೆ ಇಡಲಾಗುತ್ತಿಲ್ಲ.

ಆದರೆ ಇದೆಲ್ಲದರ ನಡುವೆ ಹಸಿರಾಗಿ ಹಬ್ಬುವುದು ಹೇಗೆ ಎಂದು ಯೋಚಿಸುತ್ತಿದ್ದೇನೆ. ಯಾಕೋ ಕೈ ಕಂಪಿಸುತ್ತಿದೆ. ಯಾವುದೋ ಆತಂಕ, ಚಡಪಡಿಕೆಯಿಂದ ಇರಬಹುದು. ಅಥವ ಬಹಳ ದಿನಗಳ ನಂತರ ಬರೆಯಲು ತೊಡಗಿದ್ದೂ ಇರಬಹುದು. ಆ ದಿನ ಮೂದಲ ಸಲ ನಿನ್ನ ಸ್ಪರ್ಶಿಸಿದಾಗಲೂ ಹೀಗೇ ಆಗಿತ್ತು. ಮುಗಿಲೇ ಮಗುಚಿದಂತಿದ್ದ ಆ ಸಂಭ್ರಮದಲ್ಲಿ ನನಗೆ ಗೊತ್ತಾಗಲಿಲ್ಲ. ಆಮೇಲೆ ನೀನು ಹೇಳಿದೆ, ನಿನ್ನ ಕೈ ನಡುಗುತ್ತಿತ್ತು ಎಂದು. ಈಗ ಇದನ್ನು ಬರೆಯುವಾಗಲೂ ಅದೇ ಗಾಳಿ ಬೀಸುತ್ತಿದೆ.

ಆರಂಭದಲ್ಲಿ, ‘ಮುದ್ದು ಜಿಂಕೆಯೇ’ ಎಂದು ಹೇಳಿದೆ. ಆ ಮಾತು ನಿನ್ನ ಕುರಿತಾಗಿ ನಾ ಬರೆದ ಕವಿತೆಯಲ್ಲಿ ತಾನುತಾನಾಗಿ ಬಂದುದು. ಅದನ್ನು ಪಾರಿಜಾತ ಎಂದು ಬದಲಾಯಿಸಬೇಕೆಂದು ನೋಡಿದೆ. ಪಾರಿಜಾತ ನಿನಗೆ ಬಹಳ ಇಷ್ಟವಾದ ಹೂ. ಮತ್ತು ನೀನು ಆ ಹೂವಿನಷ್ಟು ಹಗುರವಾಗಿ, ಪ್ರಿಯ ಪರಿಮಳವಾಗಿರುವವಳು. ಹಗುರ ಇದ್ದುದು ಆ ದಿನ ಒಮ್ಮೆ ನಿನ್ನ ಎತ್ತಿಕೊಂಡಾಗ ನೋಡಿದ್ದೆನಲ್ಲ! ಆದರೂ ಆ ಪದ ಬಳಸಲಿಲ್ಲ. ನಾನು ಚಿಕ್ಕಂದಿನಿಂದ ಪಾರಿಜಾತದ ಪರಿಸರದಲ್ಲಿ ಬೆಳೆದವನಲ್ಲ. ಮೇಲೆ ಅಕ್ಕ ಅಣ್ಣ ಕೆಳಗೆ ತಂಗಿ, ತಮ್ಮ– ಮಧ್ಯ ನಾನು! ನಿಜವಾಗಿಯೂ ನಾನು ಪಾರಿಜಾತವನ್ನು ನೋಡಿದ್ದು ದೊಡ್ಡವನಾದ ಮೇಲೆ.

ನಮ್ಮ ಹೊಸ ಮನೆ– ಅದೀಗ ಹಳೆ ಮನೆಯಾಗಿದೆ!– ಅಂಗಳದಾಚೆ ಮುಂಜಾನೆ ಸಣ್ಣ ಮರವೊಂದರ ಕೆಳಗೆ ಪುಟ್ಟ ಪುಟ್ಟ ಹೂಗಳು ಚೆಲ್ಲಿರುತ್ತಿದ್ದವು. ‘ಅದಾವ ಹೂ’ ಎಂದು ಕೇಳಿದೆ. ಅವರು ಪಾರಿಜಾತ ಎಂದಿದ್ದರು. ಆಗ ನನಗೆ ಅದು ಅಷ್ಟು ಗಮನ ಸೆಳೆಯಲಿಲ್ಲ. ಆಮೇಲೆ ಇದನ್ನು ಮತ್ತೆಲ್ಲೋ ನೋಡಿದ್ದೆ. ಆಗಲೂ ಮಲ್ಲಿಗೆ ದಂಡೆಯಷ್ಟು ಚೆಂದ ಕಾಣಲಿಲ್ಲ ಅದು. ಬಹುಶಃ ಆಗಲೇ ನಾನು ಅದನ್ನು ನೋಡಿ ರೋಮಾಂಚನಗೊಳ್ಳುವ ಮನಸ್ಸನ್ನು ಕಳೆದುಕೊಂಡಿದ್ದೆ. ಈಗ ನೀನು ‘ಒಮ್ಮೆಯಾದರೂ ಪಾರಿಜಾತವನ್ನು ಒಂದು ಬೊಗಸೆ ತಂದುಕೊಡು’ ಎಂದಿದ್ದಿ. ಹಂಬಲಿಸಿದೆ. ಈಗ ನಾನು ಪಾರಿಜಾತದ ಭಕ್ತ! ಹಾಗೆಯೇ, ನಿನಗೂ ಗೊತ್ತಿರಬಹುದಾದ ಪಾರಿಜಾತದ ಕುರಿತು ಇರುವ ಕತೆಯನ್ನು ಹೇಳುತ್ತೇನೆ ಕೇಳು. ‘ಹಿಂದೆ ಪಾರಿಜಾತ ಸೂರ್ಯನನ್ನು ಪ್ರೀತಿಸಿತ್ತಂತೆ.

ಮದುವೆಯಾಗಲು ಹಂಬಲಿಸಿತ್ತಂತೆ. ಆದರೆ ಅವನು, ನಾನು ಛಾಯೆಯನ್ನು ಮದುವೆಯಾಗಿದ್ದೇನೆ, ಆಗುವುದಿಲ್ಲ ಎಂದನಂತೆ. ಎಷ್ಟು ಕೇಳಿದರೂ ಆಗಲಿಲ್ಲ. ಸಿಟ್ಟು ಬಂದ ಅವಳು, ಹಾಗಿದ್ದರೆ ಇನ್ನು ನಾನು ನಿನ್ನ ಮುಖ ನೋಡುವುದಿಲ್ಲ ಎಂದು ಹೊರಟು ಹೋದಳಂತೆ. ಹೀಗಾಗಿ, ಪಾರಿಜಾತ ಸಂಜೆ ಮೊಗ್ಗಾಗಿ, ರಾತ್ರಿ ಅರಳಿ ಮುಂಜಾನೆ ಸೂರ್ಯ ಬರುವಲ್ಲಿವರೆಗೆ ಉದುರಿರುತ್ತದೆ’. ಇದು ಕತೆಯಾಗಿಯೇ ಉಳಿಯಲಿ. ನಾವಿಬ್ಬರೂ ಖುಷಿ ಪಡೋಣ!

ಈ ಜಿಂಕೆ ರಾಮಾಯಣದ ಜಿಂಕೆಯಲ್ಲ. ಬಹುಶಃ ದುಷ್ಯಂತ ಅಟ್ಟಿಸಿಕೊಂಡು ಹೋದ ಜಿಂಕೆ. ಹೆದರಬೇಡ, ನಾನು ದುಷ್ಯಂತ ಅಲ್ಲ! ನೀನು ಶಕುಂತಲೆಯೂ ಅಲ್ಲ. ಕೋಮಲತೆಯಲ್ಲಿ ನೀನು ಶಕುಂತಲೆಯನ್ನು ಹೋಲಬಹುದು. ಪೇಟೆಯ ಗದ್ದಲದಲ್ಲಿ, ಟಾರು ರೋಡಿನಲ್ಲಿ, ಎಲ್ಲೋ ಮೂಲೆಯ ತಂಪಾದ ಜಾಗದಲ್ಲಿ ಅರಳಿರುವ ಹೂವು ನೀನು. ನಿನ್ನ ಹಿಂದೆಯೂ ಬೆಚ್ಚಿ ಬೀಳಿಸುವ ನೆನಪುಗಳಿವೆಯೊ ಗೊತ್ತಿಲ್ಲ. ನಾನಾಗಿ ಆ ಯಾವ ವಿವರವನ್ನೂ ಕೇಳಿದಂತಿಲ್ಲ. ಎಲ್ಲೆಂದರಲ್ಲಿ ಫೋನಿನ ಮೂಲಕ ಗಂಟೆಗಟ್ಟಲೆ ಮಾತಾಡಿದ್ದೇವೆ.

ಏನು ಮಾತಾಡಿದ್ದೇವೆಯೊ ಹೇಗೆ ಮಾತಾಡಿದ್ದೇವೆಯೊ ವಿವರ ವಿವರವಾಗಿ ನೆನಪಿಲ್ಲ. ಅದು ಮುಖ್ಯವೂ ಆಗಿರಲಿಲ್ಲ. ದನಿಯ ಮೂಲಕ, ಅಕ್ಷರದ ಮೂಲಕ, ಭೇಟಿಯ ಮೂಲಕ ನಾವು ಒಂದಾಗಿಯೇ ಇರಬೇಕೆಂಬ ಹಂಬಲ ಅಲ್ಲಿ ಹರಿಯುತ್ತಿತ್ತು. ನಿನಗೆ ಹಳ್ಳಿ ಮೂಲೆಯಿಂದ ಬಂದವರ ಭಾಷೆ, ಮನಃಸ್ಥಿತಿ ಪೂರ್ತಿ ಅರಿವಿಲ್ಲ. ಒಮ್ಮೆ ಗೊತ್ತಿದ್ದರೂ ಅದು ನೀನು ಓದಿದ ಕತೆ ಕವನಗಳಲ್ಲಿ ಕಂಡ ಸಂಗತಿ ಮಾತ್ರ. ಮೃದುವಾದ, ರಮ್ಯವಾದ, ಒಲವನ್ನು ಬಸಿಯುವ ಕತೆ ಕವನಗಳ ಒಡನಾಟ ಮಾತ್ರ ನಿನಗಿದೆ ಎಂದುಕೊಂಡಿದ್ದೇನೆ. ಲಂಕೇಶರ ‘ಸಹಪಾಠಿ’ ಕತೆ ಓದಿದ್ದೀಯಾ. ಆ ಕತೆ ಓದುತ್ತ ಹೋದಂತೆ, ಭೀಕರವಾದ, ರುದ್ರ ಮನೋಹರ ಎನ್ನುತ್ತಾರಲ್ಲ ಅಂಥ ಮನುಷ್ಯ ಜಗತ್ತು ಎದುರಾಗುತ್ತದೆ.

ಅದನ್ನು ನೀನು ಕಲ್ಪಿಸಿಕೊಳ್ಳಲೂ ಸಾಧ್ಯವಿಲ್ಲ. ನಾನೂ ಅಂಥ ಜಗತ್ತನ್ನು ಎದುರಿಸಿ ಬಂದವನಲ್ಲದಿದ್ದರೂ ನಡುಗುತ್ತಲೆ ನೋಡಿದವನು. ಎಲ್ಲ ಪಾಪ, ನೈತಿಕತೆ, ಸುಳ್ಳು, ಸತ್ಯ ಒಂದರೊಳಗೊಂದು ಸೇರಿ ಏನೂ ಅರ್ಥವಾಗದ ಸ್ಥಿತಿ ಅದು. ನನ್ನ ಹತ್ತಿರದವರೊಬ್ಬನು ಇಂಥ  ಕೆಂಡ ಹಾದು ಬಂದಿದ್ದಾನೆ. ಇಲ್ಲಿಯವರೆಗೆ ನನಗೆ ಅವನು ಸರಿಯಾಗಿ ಅರ್ಥವಾಗಿರಲಿಲ್ಲ. ಅವನ ವರ್ತನೆ ಅಸಭ್ಯವಾಗಿ ಕಂಡಿತ್ತು. ನಮ್ಮನ್ನು ಜೀವಂತವಾಗಿರಿಸಿಕೊಳ್ಳಲು ಇಂಥದ್ದು ಏನೋ ಬೇಕಾಗುತ್ತದೆ ಎಂದು ಕಾಣುತ್ತದೆ. ನನಗೆ ಅವನಷ್ಟು ಧೈರ್ಯ ಇಲ್ಲದಿದ್ದರೂ ಹಾಗೆ ಮುಖಾಮುಖಿಯಾಗಬೇಕೆಂಬ ಬಯಕೆ ಉಂಟಾಗುತ್ತಿದೆ, ಬಹುಶಃ ನಿನ್ನಿಂದ!

ಆಶ್ಚರ್ಯ ನನಗೆ, ನೀನು ಚಿಟಿಕೆ ಹೊಡೆದರೆ ಚೀಲ ತುಂಬುವಷ್ಟು ಜನ ಸಿಗುವ ಹಾಗಿದ್ದಿ! ಇಂಥದ್ದರಲ್ಲಿ ನಾನು ನಿನಗೆ ಹೇಗೆ ಇಷ್ಟವಾದೆ ಎಂದು. ಹಾಗೆ ನೋಡಿದರೆ, ಕುರೂಪಿ ಅಲ್ಲದಿದ್ದರೂ ಚೆಂದ ಇಲ್ಲ. ‘ಒಳ್ಳೆಯವ’ ಎನ್ನುತ್ತಾರಲ್ಲ ಬಹುಶಃ ಅದೂ ಪೂರ್ತಿ ಅಲ್ಲ. ಸಂಭಾವಿತ, ಒಳ್ಳೆಯವ ಎಂದರೇನು ಎನ್ನುವುದರ ಕುರಿತು ಸ್ಪಷ್ಟತೆ ಇಲ್ಲ. ವಿಧೇಯ ಮಗನಾಗಿ, ಅಣ್ಣನಾಗಿ, ತಮ್ಮನಾಗಿ, ಒಬ್ಬಳಿಗೇ ಗಂಡನಾಗಿ ಯಾರಿಗೂ ಬೇಜಾರು ಮಾಡದೆ, ಪಿಟ್ ಎಂದು ಮಾತನಾಡದೆ... ಕೆಟ್ಟ ಬೋರು ಅದು. ಇದಲ್ಲದೇ, ಎಲ್ಲವನ್ನೂ ಹರಿದುಕೊಂಡು ತಾನುತಾನಾಗಿ, ತನಗಿಷ್ಟ ಬಂದಂತೆ ಇರುವುದೂ ಒಂದು ರೀತಿಯ ಅರಾಜಕ ಬದುಕು ಎನಿಸುತ್ತದೆ.

ಇನ್ನು ಅವಧೂತರಂತೆ, ಅದು ನಾನೆಲ್ಲ ಹೇಳಿದರೆ ನಗು ಬರುತ್ತದೆ. ಒಮ್ಮೆ ನೀನು, ‘ಹೀಗೆ ಮಾತುಕತೆಯಾಡುತ್ತಾ ಇದ್ದುಬಿಡೋಣ. ಅದಕ್ಕಿಂತ ಮುಂದಿನದು ಬೇಡ’ ಎಂದಿದ್ದೆ. ಆದರೆ ಅದು ಇಲ್ಲದಿದ್ದರೆ, ಕನಿಷ್ಠ ಪಕ್ಷ ಆ ಸಂದರ್ಭಕ್ಕಾಗಿ ಕಾಯುವುದೂ ಇಲ್ಲದಿದ್ದರೆ ಉಳಿದ ಯಾವುದಕ್ಕೂ ಜೀವ ಇರುವುದಿಲ್ಲ ಎನಿಸುತ್ತದೆ. ಅದಕ್ಕೆ ನೀನು ಬಾಯಿ ಮಾತಿಂದ ಒಪ್ಪದಿದ್ದರೂ ನಿನ್ನ ವರ್ತನೆಯಿಂದ ಒಪ್ಪಿದ್ದೆ.  ನಿನಗೆ ಇಂಥಹ ಸ್ಟೇಟ್‌ಮೆಂಟುಗಳೆಲ್ಲ ಇಷ್ಟವಿಲ್ಲ ಎಂದು ಗೊತ್ತಿದೆ. ನೀನು, ಕೆಟ್ಟ ಏಕತಾನತೆಯಲ್ಲೂ, ವಿಚಿತ್ರ ಒಂಟಿತನದಲ್ಲೂ ಜಿಂಕೆಯಂತೆ ಜಿಗಿಯುವವಳು, ಜಲಪಾತದಲ್ಲಿ ತಲೆಯೊಡ್ಡಿ ತಂಪಾಗಬಲ್ಲವಳು!

ಇನ್ನು ದೇಹದ ವರ್ಣನೆಯನ್ನು ಮಾಡಲು ಹೋಗುವುದಿಲ್ಲ. ಕೊಂಚ ವಯಸ್ಸೂ ಆಗಿರುವ– ನನ್ನಷ್ಟಲ್ಲದಿದ್ದರೂ– ನಿನಗೆ ಈ ತುಟಿ, ಕಟಿಗಳ ವರ್ಣನೆ ಅಂಥ ರೋಮಾಂಚನವನ್ನು ಉಂಟುಮಾಡಲಾರದು. ನನಗೂ ಅದನ್ನು ಹೇಳಲು ಬಾಯಿ ಕಟ್ಟುತ್ತದೆ. ನೀನು ಒಮ್ಮೆ ಹೇಳಿ ನಕ್ಕಿದ್ದೆ,  ಗೆಳೆಯನೊಬ್ಬ ನಿನ್ನ ಒಲಿಸಿಕೊಳ್ಳಲು, ಪದೇಪದೇ ‘ಯು ಆರ್ ಬ್ಯುಟಿಪುಲ್, ನಿನ್ನ ಚಿತ್ರ ಚಲೊ ಇದ್ದು’ ಎಂದು ಹೇಳುತ್ತಾನೆ ಎಂದು. ಬಹುಶಃ ನನಗೆ ಆ ಭಾಷೆಯೇ ಒದಗಿ ಬಂದಿಲ್ಲ. ಹದಿ ವಯಸ್ಸಲ್ಲೇ ಹೇಳಲಾಗದ ಮಾತನ್ನು ಈಗ ಹೇಳಲಾದೀತೇ. ಆದರೂ ಈಗೊಂದಿಷ್ಟು ದಿನಗಳಿಂದ ಚಂದ್ರ, ಬೆಳದಿಂಗಳು, ಚೈತ್ರ ಇತ್ಯಾದಿ ಪದಗಳನ್ನು ಬಳಸುತ್ತಿದ್ದೇನೆ.

ಅದಕ್ಕೆ ಅಂಥ ಜೀವವಿದ್ದಂತೆ ಕಾಣುವುದಿಲ್ಲ. ಆದರೂ ಹೇಳಬೇಕು ನಿನ್ನ ಚೆಂದದ ಚೈತನ್ಯದ ಕುರಿತು. ಆದರೂ ನಿನಗೆ ನಿನ್ನ ರೂಪ, ಯೌವನದ ಕುರಿತು, ಆತ್ಮ ರತಿ ಎನ್ನುತ್ತಾರಲ್ಲ, ಅದು ಇದ್ದಂತಿದೆ. ಹೀಗಾಗಿ ಒಮ್ಮೊಮ್ಮೆ ಸೊಕ್ಕು ಉಕ್ಕುವ ಹಾಗೆ ಕಾಣುತ್ತಿ. ನಿನ್ನನ್ನು ಯಾವ ಮಳ್ಳ ಹೊಗಳಿದರೂ ಖುಷಿ ಪಡುತ್ತಿ. ಜತೆಗೆ, ನೀ ಯಾವಾಗಲೂ ಎಲ್ಲಂದರಲ್ಲಿ ನಿನ್ನ ಫೋಟೊ ತೋರಿಸುತ್ತಿ. ಬೇರೆ ಚಿತ್ರ ತೋರಿಸಿದರೂ ಅದರಲ್ಲಿ ನೀನಿರಬೇಕು! ಕನ್ನಡಿ ಎದುರು ನಿಂತ ಎಷ್ಟು ಫೋಟೊ ನನಗೆ ಕಳಿಸಿದ್ದೀಯಾ. ನಾನು ಎಂಜಾಯ್ ಮಾಡಿದ್ದೇನೆ.

ಯಾವ ಗಾಢವಾದ ಪೂರ್ವಗ್ರಹವೂ ನಿನಗೆ ಇದ್ದಂತಿಲ್ಲ. ಎಲ್ಲವನ್ನೂ ಮಗುವಿನಂತೆ ನೋಡುವ ಗುಣ ನಿನಗಿದೆ. ಬೇರೆಯವರು ‘ಬೇರೆ’ ಉದ್ದೇಶ ಇಟ್ಟು ಮಾಡಿದ ಪ್ರತಿಕ್ರಿಯೆಯೆಗಳಿಗೂ ನೀನು ನೇರವಾಗಿ ಉತ್ತರಿಸುತ್ತಿ ಎಂದು ನಾನು ತಿಳಿದುಕೊಂಡಿದ್ದೇನೆ. ನಾನೇ ಕೆಲವೊಮ್ಮೆ ಆ ವಾಸನೆ ಇರುವ ಮಾತನ್ನು ನಿನ್ನ ಗಮನಕ್ಕೆ ತಂದಿದ್ದೆ. ಹಾಗಂತ ನಾನೇನು ಮಹಾ ಹುಷಾರ್ ಇದ್ದವನಲ್ಲ ಎನ್ನುವುದು ನಿನಗೆ ಗೊತ್ತಿದೆ. ಈ ಮುಗ್ಧ ಮನಸ್ಥಿತಿ ಇರುವುದರಿಂದಲೆ ನಿನಗೆ ಫ್ರೆಶ್ ಆಗಿ ಚಿತ್ರ ಬಿಡಿಸಲು ಸಾಧ್ಯವಾಗುತ್ತದೆ. ಮತ್ತು ಆ ಕಾರಣಕ್ಕಾಗಿಯೇ ನಾನು ನಿನಗೆ ಆಗಾಗ ಪುಟ್ಟಿ ಎಂದು ಕರೆಯುವುದು!

ಬಹುಶಃ ಇದು ಇಷ್ಟಕ್ಕೇ ನಿಂತುಹೋದರೆ ಗಾಢವಾಗಿ ಕಾಡುವ ಚಿತ್ರ ಬರೆಯಲು ಸಾಧ್ಯವಿಲ್ಲವೇನೊ. ಅದಿರಲಿ, ನಿನ್ನ ರೂಪ ಬಣ್ಣಿಸಲು ಹೊರಟವನು ನಾನು! ಆಳವಾದ ಸಮುದ್ರದಂತೆ ಇರುವ ನಿನ್ನ ಪುಟ್ಟ ಕಣ್ಣುಗಳು, ಏನೇನೊ ಆಕಾಂಕ್ಷೆಯನ್ನು ತೋರಿಸುವ ಮೂಗು, ಕಡಲ ಕಿನಾರೆಯಂಥ ತುಟಿಗಳು... ನಗಬೇಡ. ನನಗೇ ಒಂದು ನಮೂನೆಯಾಗುತ್ತಿದೆ! ಇದೆಲ್ಲದರ ಆಚೆ, ಯಾವುದೋ ಆಳದ ಆತ್ಮೀಯತೆ ನಾವು ಆಲಂಗಿಸಿಕೊಳ್ಳುವಂತೆ ಮಾಡಿದೆ. ಸದಾ ಕಾಲ ತೊಡೆಯ ಮೇಲೆ ಮಲಗಿಸಿಕೊಂಡು ಕೂದಲು ನೇವರಿಸಬೇಕು ಅನಿಸುತ್ತಿದೆ. ಒಮ್ಮೆ ಇದನ್ನೆಲ್ಲ ತಾಸುಗಟ್ಟಲೆ ಮಾಡಿದ್ದೆವಲ್ಲ. ಇದೆಲ್ಲ ಸದಾ ಸಾಧ್ಯವಿಲ್ಲ ಎನ್ನುವುದು ಗೊತ್ತಿದ್ದರೂ ಹಾಗೆ ಅನಿಸುತ್ತಿದೆ, ಏನು ಮಾಡಲಿ!

ಎಷ್ಟುಬೇಗ ತೆರದುಕೊಂಡೆ ಮಾರಾಯ್ತಿ! ಪೂರ್ಣವಾಗಿ ಒಂದಾಗಲು ಸಿದ್ಧಳಾದೆ. ಹೀಗೆ ಇದು ಇಷ್ಟು ಶೀಘ್ರದಲ್ಲಿ ಆಗಬಹುದು ಅಂದುಕೊಂಡಿರಲಿಲ್ಲ ನಾನು. ಬಹುಶಃ ನಾನೇ ಪೂರ್ತಿ ಮುಂದುವರಿಯಲಿಲ್ಲ. ಯಾವುದನ್ನು ಮಾತ್ರ ‘ನೈತಿಕತೆ’ ಎನ್ನುತ್ತಾರೊ ಅದರ ಸುದ್ದಿಗೆ ಹೋಗಲಿಲ್ಲ. ಬಹುಶಃ ಅವಕಾಶವೂ ಇರಲಿಲ್ಲ. ಹೀಗೆಲ್ಲ ಅನ್ನುವುದಕ್ಕಿಂತ ಅದು ನಮ್ಮ ಎಲ್ಲ ಉದ್ದೇಶ, ಬಯಕೆಯಾಗಿರಲಿಲ್ಲ. ನಿನಗೆ ಇತ್ತೋ ಇಲ್ಲವೋ ಎನ್ನುವುದು ನನಗೆ ಸರಿಯಾಗಿ ಗೊತ್ತಾಗಲಿಲ್ಲ. ‘ನಿನಗೆ ಇತ್ತೋ ಇಲ್ಲವೋ’ ಎಂದರೆ, ಬೇರೆ ಸಮಯದಲ್ಲಾದರೂ ಅದು ಬೇಕಾಗಿತ್ತು ಎಂದು ಅನಿಸಿದೆಯೋ ಇಲವೋ ಎಂದು.

ಯಾಕೆ ಈ ಸಮಜಾಯಿಸಿ ಕೊಟ್ಟೆ ಎಂದರೆ, ಮಾತಾಡ್ತ ಮಾತಾಡ್ತ ನೀನು ಯಾವುದೊ ಒಂದು ಪದ, ವಾಕ್ಯ ತೆಗೆದುಕೊಂಡು ಮೈ ಮೇಲೆ ಬರ್ತಿಯಾ! ನನಗಂತೂ ಅನೇಕ ಬಾರಿ ಅನಿಸಿದೆ; ನಾವಿಬ್ಬರೂ ತಬ್ಬಿಕೊಂಡು ಒಬ್ಬರಾಗಬೇಕು, ಹಗಲು ರಾತ್ರಿ ಒಂದಾಗಬೇಕು.... ನಾಚಿಕೆಯಾಗುತ್ತದೆಯೆ, ಎದುರು ಇದ್ದರೆ ‘ಹೋಗೊ ಮಳ್ಳ!’ ಎಂದು ಬಯ್ಸಿಕೊಂಡು ಸಂತೋಷ ಪಡಬಹುದಾಗಿತ್ತು! ಇದೆಲ್ಲ ಸಾಧ್ಯವಿಲ್ಲದಿದ್ದರೂ ಅಥವ ಯಾವಾಗಲೂ ಆಗದಿದ್ದರೂ ಅಂಥ ಒಂದು ಆಸೆ ನಮ್ಮೊಳಗೆ ಆಡುತ್ತಿರಬೇಕು. ಆಗ ನಮ್ಮ ಉಳಿದೆಲ್ಲ ಮಾತುಕತೆಗೆ ಹೊಸ ಜೀವ ಬರುತ್ತದೆ. ಅದು ನಮ್ಮಿಬ್ಬರಿಗೂ ಆಳದಲ್ಲಿ ಅಲೆಯುತ್ತಿರುವುದರಿಂದಲೇ ನಾವು ಇಷೆಲ್ಲ ಹೊತ್ತು ಮಾತನಾಡುವುದು.

ಅಲ್ಲದಿದ್ದರೆ ಒಮ್ಮೊಮ್ಮೆ ಎರಡು ಮೂರುಗಂಟೆ ಫೋನಿನಲ್ಲಿ ಮಾತಾಡಿದ್ದೇವೆ, ಕಡೆಗೂ ಒಲ್ಲದ ಮನಸ್ಸಿನಿಂದಲೇ ನಿಲ್ಲಿಸಿದ್ದೇವೆ. ನೀನೇ ಹೇಳಿದ್ದಿ, ನಾನು ಗಂಡನ ಜತೆ,  ಮದುವೆಯಾಗಿ ಹದಿನೈದು ವರ್ಷವಾದರೂ ಇಷ್ಟು ಮಾತಾಡಿರಲಿಲ್ಲ ಎಂದು. ಆಗ ನನಗೆ ಆದ ಖುಷಿಯ ಹೇಗೆ ಹೇಳಲಿ! ಮದುವೆಯಾಗಿ ಹತ್ತಾರು ವರ್ಷ ಕಳೆದ ಮೇಲೆ, ಇಬ್ಬರಿಗೂ ದೇಹದ ಎಲ್ಲ ಭಾಗಗಳು, ಮಾಡುವ ಕ್ರಿಯೆಗಳು, ಹೇಳುವ ಮಾತು ಎಲ್ಲ ಗಟ್ಟು ಹಾಕಿದ ಪದ್ಯದಂತಾಗುತ್ತದೆ. ಆನಂದ ರೋಮಾಂಚನಗಳೂ ಏಕತಾನತೆಯಲ್ಲಿ ಸೊರಗುತ್ತವೆ ಎಂದು ಕಾಣುತ್ತದೆ. ಅಲ್ಲದಿದ್ದರೆ, ದೂರದಿಂದ– ದೂರದಿಂದ ಮಾತ್ರವಲ್ಲ, ಹತ್ತಿರದಿಂದಲೂ– ಸುಂದರವಾದ ದಾಂಪತ್ಯ, ಪ್ರೀತಿಯ ಮಕ್ಕಳು, ಮನೆ, ತೊಂದರೆ ಇಲ್ಲದಷ್ಟು ಹಣ– ಎಲ್ಲ ಇದ್ದರೂ ಮನಸ್ಸು ನಿಸ್ತೇಜವಾಗಿ ಚಡಪಡಿಸುತ್ತದೆ.

ಅಡಿಗರು ಹೇಳಿದ ‘ಇರುವುದೆಲ್ಲವ ಬಿಟ್ಟು...’ ಇಲ್ಲಿ ಸರಿಯಾಗಿ ಹೊಂದಿಕೊಳ್ಳುವುದಿಲ್ಲ. ಇದು ಇರುವುದೆಲ್ಲವ ಇಟ್ಟುಕೊಂಡು ಇಲ್ಲದಿರುದನ್ನು ಅಥವ ಹೊಸದನ್ನು ಪಡೆಯಲು ಹೊರಟ ಪರಿ! ‘ಬಹುಶಃ’ ಈ ಪದವನ್ನು ರಾಶಿ ಸಲ ಬಳಸುತ್ತೇನೆ ಎಂದು ಕಾಣುತ್ತದೆ. ಕಾರಣ, ಇದೇ ಸತ್ಯ, ಇದು ಸರಿ, ಇದೇ ಕೊನೆಯ ಮಾತು ಎಂದು ನನಗೆ ಅನಿಸುವುದಿಲ್ಲ. ಎಲ್ಲದರಲ್ಲೂ ಏನೊ ಸಂದೇಹ, ಆತಂಕ ತೊಟ್ಟಿಕ್ಕುತ್ತದೆ ಯಾವಾಗಲೂ. ನೀನು ಏನು ಬಯಸಿದ್ದಿಯೊ ನಾನೇನು ಬರೆಯುತ್ತಿದ್ದೇನೆಯೊ ಗೊತ್ತಿಲ್ಲ. ಆ ದಿನ ನೀನು ‘ಏನಾದರೂ ಬರೆದು ಕೊಡು’ ಎಂದಾಗ ಅಡ್ಡಿಲ್ಲ ಎಂದು ಏನು ಬರೆಯಬೇಕು ಎನ್ನುವುದು ಗೊತ್ತಾಗದೆ, ‘ನೀನು ಏನು ಬರೆಯಬೇಕೆಂದು ಬಯಸುತ್ತಿ’ ಎಂದು ಕೇಳಿದಾಗ ‘ಮನಸಿಗೆ ಬಂದಾಂಗೆ ಬರೆ’ ಎಂದೆ.

ನಾ ಹೆಚ್ಚಾಗಿ ಯಾವಾಗ ಬರೆಯುವುದೂ ಹಾಗೆಯೇ! ಯಾವುದೊ ವಿಷಯ ಕೊಟ್ಟು ಇದರ ಮೇಲೆ ಬರೆದು ಕೊಡು ಎಂದರೆ ನನ್ನಷ್ಟು ನಿರ್ಜೀವವಾಗಿ ಬರೆಯುವವರು ಯಾರೂ ಇಲ್ಲ. ನೀನು ರಮ್ಯವಾದ, ಹೂವಿನ ಪಕಳೆಯ ಪದದಲ್ಲಿ ಪ್ರೀತಿ ಪ್ರೇಮಗಳ ಕುರಿತು ಹೇಳುತ್ತೇನೆ ಎಂದು ನಿರೀಕ್ಷಿಸಬೇಡ. ಬಹುಶಃ ನೀನು ಹಾಗೆ ನಿರೀಕ್ಷಿಸುವವಳೂ ಅಲ್ಲ. ಸಂವೇದನಾಶೀಲವಾದ, ವೈಚಾರಿಕವಾದ ಎಚ್ಚರ ನಿನಗಿದೆ. ಇದೂ ಒಂದು ಕಾರಣವಾಗಿರಬಹುದು ನಾ ನಿನ್ನ ಇಷ್ಟೆಲ್ಲ ಹಚ್ಚಿಕೊಳ್ಳಲು.

ಕೆಲವು ‘ಸಣ್ಣ’ ಸಂಗತಿಗಳು ನಮ್ಮ ಒಲವಿನ ಬಳ್ಳಿಯನ್ನು ಎಷ್ಟು ಚಿಗುರಿಸಬಲ್ಲದು! ಇವತ್ತು ಬೆಳಿಗ್ಗೆ ನನ್ನ ಯಾವುದೊ ಮೆಸೇಜಿಗೆ ‘ಧನ್ಯೆ’ ಎಂದು ಬರೆದೆ. ಆದರೆ ಈ ಮಾತನ್ನು ನಾನು ನಿನಗೆ ಹೇಳಬೇಕು. ನನ್ನ ಪ್ರೀತಿಗೆ ಎಷ್ಟೆಲ್ಲ ಕೊಡಲು ಸಿದ್ಧಳಾಗಿರುವೆ. ಆ ದಿನ ನಾನು ಶಿವಮೊಗ್ಗಕ್ಕೆ ಹೋಗುವಾಗ, ‘ಹೇಗೆ ಹೋಗ್ತೀರಿ, ಕಾರಿನಲ್ಲೊ ಬಸ್ಸಿನಲ್ಲೊ’ ಎಂದು ಕೇಳಿದೆ. ‘ಕಾರಿನಲ್ಲಿ’ ಎಂದಾಗ ‘ಡ್ರೈವ್ ಮಾಡುವವರು ಯಾರು?’ ಎಂದೆ. ನನಗೆ ಡ್ರೈವ್ ಮಾಡಲು ಸರಿಯಾಗಿ ಬರುವುದಿಲ್ಲ ಎನ್ನುವುದನ್ನು ನಾನು ಮೊದಲೆ ಹೇಳಿದ್ದೆ. ‘ಡ್ರೈವರ್ ಇದ್ದಾನೆ’ ಎಂದೆ. ಆಗ ನೀನು ‘ಉಷ್, ಈಗ ನಿರಾಳ’ ಎಂಬರ್ಥದ ಮಾತನಾಡಿದೆ. ನನಗೆ ಆ ಮೆಸೇಜು ನೋಡಿ ಕಣ್ಣು ಒದ್ದೆಯಾಯಿತು. ಬಹುಶಃ ನಾವು ಪುರುಷರು ಹೀಗೆ ಯೋಚಿಸುವುದಿಲ್ಲ ಎಂದು ಕಾಣುತ್ತದೆ.

ಮೇಲ್ನೋಟಕ್ಕೆ ಚೆಲ್ಲುಚೆಲ್ಲಾಗಿ ಕಾಣುವ ನಿನ್ನಾಳದಲ್ಲಿ ಎಂಥ ತಾಯ್ತನದ ಒರತೆಯಿದೆ. ಇಂಥ ಸುಮಾರು ಸಂದರ್ಭಗಳು ನಮ್ಮ ನಡುವೆ ಹಾದು ಹೋಗಿವೆ. ಇಲ್ಲ, ಇವಳಿಂದ ದೂರವಾಗುವುದು ಇನ್ನು ನನ್ನಿಂದ ಸಾಧ್ಯವಿಲ್ಲ ಎನ್ನುವುದು ಖಾತ್ರಿಯಾಯಿತು. ಆದರೆ ಆ ದಿನ, ಬೆಳಿಗ್ಗೆಯಿಂದ ಅವಕಾಶ ಸಿಕ್ಕಿದಾಗೆಲ್ಲ ಫೋನಿನಲ್ಲಿ ಮಾತಾಡುತ್ತ, ಮೆಸೇಜ್ ಮಾಡುತ್ತಾ ಇದ್ದವಳು, ರಾತ್ರಿ ನಾನು ತಪ್ಪಾಗಿ ಓದಿ, ಹೇಳಿದ ಒಂದು ಮಾತಿನಿಂದ ನೀನು ತಿರುಗಿ ಬಿದ್ದದ್ದನ್ನು ನೋಡಿ ಬೆಚ್ಚಿಬಿದ್ದೆ. ಮೈ ಮನವೆಲ್ಲ ಒಂದಾಗಿ, ಎಲ್ಲವನ್ನೂ ಯಾವ ಮುಚ್ಚು ಮರೆಯಿಲ್ಲದೆ ಹಂಚಿಕೊಂಡ ನೀನು ಒಮ್ಮೇಲೆ ಸ್ಫೋಟಿಸಿದೆ.

‘ನಿನ್ನ ಮನಸಿನ ಮೂಲೆಯಲ್ಲಿ ನನ್ನ ಕುರಿತಾಗಿ ಅಂಥದೊಂದು ಭಾವನೆ ಇದೆ, ಬಾಯಲ್ಲಿ ಹೇಳದಿದ್ದರೂ. ಅದರಿಂದಲೇ ನೀನು ಆ ಪದವನ್ನು ಹಾಗೆ ಓದಿದೆ’ ಎಂದು ಆರ್ಭಟಿಸಿದೆ. ಜುಳುಜುಳುವಿನಂಥ ನಿನ್ನ ಮಾತು ಎಷ್ಟು ರಪ್ಪನೆ ಹರಿಯಿತು. ‘ನಮ್ಮ ಸಂಬಂಧವನ್ನು ಇಲ್ಲಿಗೇ ನಿಲ್ಲಿಸೋಣ. ಮೊದಲಿನಂತೆ ಇರೋಣ’ ಎಂಬಲ್ಲಿಯವರೆಗೆ ಹೋದೆ. ನನಗೆ ಸರಿಯಾಗಿ ಸಮಜಾಯಿಷಿ ಕೊಡಲೂ ಬಿಡಲಿಲ್ಲ. ಆ ರಾತ್ರಿ ಹೇಗೆ ಕಳೆದೆ ಗೊತ್ತಾ. ನನ್ನ ಈವರೆಗಿನ ಜೀವನದಲ್ಲಿ ಒಂದು ಹೆಣ್ಣಿನ ಸಂದರ್ಭದಲ್ಲಿ, ಹೆಣ್ಣಿನ ಸಂದರ್ಭವೇನು ಯಾವ ಸಂದರ್ಭದಲ್ಲೂ ಇಂಥದ್ದೊಂದು ತಳಮಳಕ್ಕೆ ಒಳಗಾಗಿರಲಿಲ್ಲ. ಮಧ್ಯರಾತ್ರಿಯವರೆಗೆ ಕ್ಷಮೆಯಾಚಿಸುವ ಬಗೆಬಗೆಯ ಮೆಸೇಜ್ ಕಳಿಸಿದೆ. ಹಾಗೆ ನಿರ್ಧಾರ ತೆಗೆದುಕೊಳ್ಳಬೇಡ ಎಂದು ಗೋಗರೆದೆ. ನಂತರ ಮಲಗಿದರೂ ಸರಿಯಾಗಿ ನಿದ್ರೆ ಬರಲಿಲ್ಲ.

ನಿನಗೆ ಗೊತ್ತಿದೆ ನಾನು ಎಷ್ಟು ನಿದ್ರಾಪ್ರಿಯ ಎಂದು! ಸಾಮಾನ್ಯವಾಗಿ, ಏನಾದರೂ ಕಡೆಗೆ ನಿದ್ದೆ ಬರುತ್ತದೆ ನನಗೆ! ಆದರೆ ಆ ದಿನ ಬರಲಿಲ್ಲ. ಸ್ವಲ್ಪ ಜೊಂಪು ಹತ್ತಿದ ಹಾಗಾಗಿ ಮತ್ತದೇ ಯೋಚನೆ. ಕತ್ತಲಲ್ಲೇ ಎದ್ದು ಹೋಗಿ ಸೋಫಾsದ ಮೇಲೆ ಕೂರುತ್ತಿದ್ದೆ. ತುಸು ಸಮಯದ ಮೇಲೆ ಬಚ್ಚಲಿಗೆ ಹೋಗಿ ಬಂದು ನಿದ್ದೆ ಮಾಡಲು ಯತ್ನಿಸುತ್ತಿದ್ದೆ. ಹಾರ್ಟ್‌ ವೀಕ್‌ನೆಸ್ ಇದ್ದರೆ ಆ ದಿನ ಏನಾದರೂ ಆಗುತ್ತಿತ್ತೇನೊ. ನನಗೆ ಅದಿಲ್ಲ ಎನ್ನುವುದು ಆ ದಿನ ಖಾತ್ರಿಯಾಯಿತು! ಮುಂಜಾನೆ ನಾಲ್ಕು ಗಂಟೆಗೇ ಎದ್ದು ಬೆಳಗಾಗುವುದನ್ನು ಕಾಯತೊಡಗಿದೆ. ಕಣ್ಣು ಉರಿ, ಏನೊ ಸಂಕಟ. ಆಫೀಸು ಓಪನ್ ಆಗುವ ಮೊದಲೇ ಹೋದೆ. ಅಲ್ಲಿ ನಿನಗೆ ಫೋನ್ ಮಾಡಿದೆ. ನೀನು ರಾತ್ರಿ ಹೇಳಿದ್ದನ್ನೇ ಹೇಳಿ ಅಳಲು ಶುರು ಮಾಡಿದೆ. ನನಗೆ ಅಷ್ಡೇನು ಅಳು ಬರದಿದ್ದರೂ ಅದನ್ನು ಮೀರಿದ ದುಗುಡ ಆವರಿಸಿತ್ತು.

ನಾನು ಸಣ್ಣಗೆ ಅತ್ತೆ. ನಿನಗೆ  ಸಾಂತ್ವನ ಹೇಳುವ ಸ್ಥಿತಿಯಲ್ಲಿ ನಾನಿರಲಿಲ್ಲ ಮತ್ತು ಈ ಸಂಬಂಧ ಹೀಗೆಯೇ ಎಂದಾದರೆ ಹೇಳುವುದರಲ್ಲೂ ಅರ್ಥ ಇರಲಿಲ್ಲ. ಏನೇನೊ ಬಡಬಡಿಸಿದೆ. ದೇವರಲ್ಲಿ ಮೊರೆಯಿಟ್ಟೆ. ನಿನಗೆ ದೇವರ ಕುರಿತು ಅಂಥ ನಂಬಿಕೆ ಇಲ್ಲ ಎನ್ನುವುದು ಗೊತ್ತು. ಮಧ್ಯಾಹ್ನದ ಹೊತ್ತಿಗೆ ಬಂದ ನಿನ್ನ ಮೆಸೇಜು ತಂಪಾಗುವ ಸೂಚನೆ ನೀಡಿತು. ಸಂಜೆ ಮತ್ತದೇ ಹಟ. ಆದರೆ ಆಗ ನಿನ್ನ ಮಾತಿನಲ್ಲಿ ರಾತ್ರಿ ಬೆಂಕಿಯ ಇರಲಿಲ್ಲ. ಆದರೂ ಈ ಹುಡುಗಿ ಮತ್ತೆ ಯಾವ ಕ್ಷಣಕ್ಕೆ ಹೀಗೆ ಮಾಡುತ್ತಾಳೊ ಎಂಬ ಹೆದರಿಕೆ ಹೆಡೆಯಾಡುತ್ತಿತ್ತು. ತಿಳಿದುಕೊ, ಮಾತುಕತೆಯಲ್ಲಿ, ಕೆಲವೊಮ್ಮೆ ಕೃತಿಯಲ್ಲೂ ಒಮ್ಮೊಮ್ಮೆ ತಪ್ಪಾಗುತ್ತದೆ. ಅಷ್ಟಕ್ಕೇ ಇಡೀ ಸಂಬಂಧವನ್ನು ಹರಿದುಕೊಳ್ಳಲು ಮುಂದಾಗುವುದು ನನ್ನಿಂದ ಸಾಧ್ಯವಿಲ್ಲ, ಬಹುಶಃ ನಿನ್ನಿಂದಲೂ.

ಇದರ ನಂತರ ಒಂದಿಷ್ಟು ಮುದ ಕೊಡುವ ಸಂಗತಿಗಳು ನಡೆದಿವೆ. ಅವು ಹೀಗೇ ಪೋಣಿಸುತ್ತಲೇ ಹೋಗಲಿ! ಈಗ ನಮಗಿರುವ ಪ್ರಶ್ನೆ ಅದಲ್ಲ. ಇದನ್ನು ಹಸಿಹಸಿಯಾಗಿ ಇಟ್ಟುಕೊಂಡು ಬೇಳೆಸುವುದು ಹೇಗೆ? ಈಗಾಗಲೇ ಇರುವ ನಮ್ಮ ನಮ್ಮ ಸಂಬಂಧಗಳನ್ನು ಬಿಡದೇ, ಅವರಿಗೆ ಬೇಸರವಾಗದಂತೆ, ಬೇರೆಯವರೂ ಅಷ್ಟಾಗಿ ತಪ್ಪು ತಿಳಿಯದಂತೆ ಇಟ್ಟುಕೊಳ್ಳುವುದು ಹೇಗೆ? ಬಿಡಲಾಗದ ಮನಃಸ್ಥಿತಿಯಲ್ಲಿ ನಾವಿದ್ದೇವೆ ಎನ್ನುವುದನ್ನು ಆಗಲೇ ಹೇಳಿದ್ದೇನೆ. ಆದರೆ ಎಲ್ಲವನ್ನೂ ಆಗಿಸುವುದು ಹೇಗೆ? ಅದು ನಾವು ಎದುರಿಸಬೇಕಾದ ಅಗ್ನಿದಿವ್ಯ.

ನಾ ಹಿಂದೆ ಕೆಲವು ಕತೆಗಳನ್ನು ಬರದಿದ್ದೆ ಎಂದು ಆರಂಭದಲ್ಲೇ ಹೇಳಿದ್ದೆನಲ್ಲ. ಅವೆಲ್ಲ ಹೆಚ್ಚಾಗಿ ಹಿಂದಿನ ನೆನಪುಗಳಿಂದ ಎದ್ದು ಬಂದಿದ್ದವು. ಆದರೆ ಈಗ ಉರಿವ ವರ್ತಮಾನವನ್ನು ತೆರೆದಿಡುತ್ತಿದ್ದೇನೆ. ಅದೆಲ್ಲ ಇರಲಿ, ಒಂದಿಷ್ಟು ನಿನಗೆ ಮತ್ತು ನನಗೆ ಲೈಕಾಗುವ ಕವಿತೆಗಳಿವೆ, ಅದನ್ನು ಯಾವಾಗಲಾದರೂ ಇಬ್ಬರೂ ಒಟ್ಟಾಗಿ ಕುಳಿತು ಓದೋಣ, ಓಕೇ. ಈಗ ನನ್ನದೊಂದು ಕವಿತೆಯ ಪ್ರಯತ್ನ! ನೋಡು.

ಮಧ್ಯಾಹ್ನದ
ಬಿಸಿಲಲ್ಲಿ ಬಸವಳಿದ
ನನಗೆ ಅವಳು
ತಂಪು ನೀಡಿದ್ದಾಳೆ
ಅವಳ ನುಡಿ
ಮುತ್ತುಗಳು
ನನ್ನ ಒರಟು
ಕೆನ್ನೆಯ ಮೃದುವಾಗಿಸಿವೆ
ಚಿಗುರಿನಂಥ  ಅವಳ
ಪಾದಗಳು
ನನ್ನ ತುಟಿಯಲ್ಲಿದೆ!

ಆದರೂ
ಯಾವುದೊ
ಭೀತಿಯ
ಹೆಜ್ಜೆ ಸದ್ದು

ಓ ನನ್ನ
ಒಲವಿನ ಕೆಂಡ
ಸಂಪಿಗೆಯೆ
ಈ ಹಾಡು
ಹೀಗೆಯೆ ಹರಿಯುತ್ತಿರಲಿ.

ಹೀಗೆಲ್ಲ ಬಳ್ಳಿ ಬೆಳೆಯುತ್ತಿರುವಾಗ ಏನಾಗಿಹೋಯಿತು ಇದ್ದಕ್ಕಿದ್ದಂತೆ...

ಭಾಗ–2
ಪ್ರಿಯ ಸಮುದ್ರವೇ,
ಬಹುಶಃ ಸಮುದ್ರದಷ್ಟು ಆಳ ಇರುವವಳಲ್ಲ ನೀನು. ಆದರೆ ನದಿಗಳು ನಿನ್ನಲ್ಲಿ ಬಂದು ಸೇರುತ್ತವೆ! ಕೆಲ ಕಾಲದಲ್ಲಿ ಆವಿಯಾಗಿ, ಮೋಡವಾಗಿ, ಎಲ್ಲೊ ಮಳೆ ಹೊಯ್ಯುತ್ತದೆ. ನದಿಗೆ ಹೊಸ ಹುರುಪನ್ನು ತರುತ್ತಿ. ಸಮುದ್ರದ ಬಗೆಬಗೆಯ ಅಲೆಗಳು ನಿನ್ನಲ್ಲಿವೆ. ಅಲ್ಲದಿದ್ದರೆ ಇದೆಲ್ಲ ಇದ್ದಕ್ಕಿದ್ದಂತೆ ಯಾಕೆ ಬತ್ತಿ ಹೋಯಿತು?

ಏನೆಲ್ಲ ಆಡಿಕೊಂಡೆವು ಪೋನಿನಲ್ಲಿ, ವಾಟ್ಸ್ ಆಪಿನಲ್ಲಿ. ನನ್ನ ನಿನ್ನ ಎಲ್ಲ ಖಾಸಗಿ ಸಂಗತಿಗಳು, ದೈಹಿಕ ಬಯಕೆಗಳು ವಿನಿಮಯಗೊಂಡವು. ಅದರ ವಿವರ ಬರೆದರೆ ಅಶ್ಲೀಲ ಆಗುವಷ್ಟು ಮಾತಾಡಿಕೊಂಡೆವು. ನನಗಾಗ ಆಗುತ್ತಿದ್ದ ಖುಷಿ ಅಷ್ಟಿಷ್ಟಲ್ಲ. ಒಂದು ಹೆಣ್ಣಿನ ಜತೆ ಇಷ್ಟು ಫ್ರೀ ಆಗಿ ಮಾತನಾಡಬಹುದು ಎಂದು ಗೊತ್ತಿರಲಿಲ್ಲ. ಇಷ್ಟು ತೆರೆದುಕೊಳ್ಳುವ ಹೆಣ್ಣಿನ ಸಂಬಂಧ ನನಗೆ ಒದಗಿ ಬಂದದ್ದು ನನ್ನ ಭಾಗ್ಯವೆಂದು ಭಾವಿಸುವಷ್ಟು ಭಾವುಕನಾದೆ. ಇದಕ್ಕೆ ಪೂರಕವಾಗುವ ಹಾಗೆ ನಿನ್ನ ಬಗೆಬಗೆಯ ಭಂಗಿಯ ಫೋಟೊಗಳನ್ನು ಕಳಿಸಿದೆ. ಅರೆ ನಗ್ನ ಫೋಟೊಗಳೂ ಇದ್ದವು ಅದರಲ್ಲಿ. ‘ನೋಡಿ ಡಿಲಿಟ್ ಮಾಡಿ’ ಎಂದೆ. ನಾನು ಅದರಲ್ಲಿ ಕೆಲವನ್ನು ಇಟ್ಟುಕೊಂಡು ಡಿಲಿಟ್ ಮಾಡಿದೆ! ಆ ಫೋಟೊ ತೆಗೆದವರು ಯಾರು? ಎಂದು ಕೇಳಿದಾಗ ‘ಮಗ’ ಎಂದೆ. ನಾನು ಆಗಲೂ ಒಂದುಮಟ್ಟದಲ್ಲಿ ಅದನ್ನು ನಂಬಿದ್ದೇನೆ.

ಪ್ರಚೋದಿಸುವಂತೆ ಮಾತಾಡಿದೆ. ನಮ್ಮ ಮೊದಲ ಹತ್ತಿದ ಭೇಟಿ ನೆನಪಿದೆಯೆ? ಎಲ್ಲ ಮರೆತು ಹೋಗಿದೆ ಎನ್ನುತ್ತಿ, ಅದಕ್ಕಾಗಿ ಕೇಳಿದೆ. ಪುಸ್ತಕ ಕೊಡುವ ನೆಪದಲ್ಲಿ ಮನೆಗೆ ಬರಲು ಹೇಳಿದೆ. ನಾ ಸ್ವಲ್ಪ ಹಿಂದೇಟು ಹಾಕಿದಾಗ ‘ಬನ್ನಿ, ಸುಮ್ಮನೆ’ ಎಂದೆ. ಆ ದಿನ ನೀನು ಆಕರ್ಷಕವಾದ ಸೀರೆ ಉಟ್ಟಿದ್ದೆ. ಆಫೀಸಿನಲ್ಲಿ ‘ಎಲ್ಲಾದರೂ ಕಾರ್ಯಕ್ರಮ ಇದೆಯಾ’ ಕೇಳಿದರು ಎಂದು ಹೇಳಿದೆ. ಅಷ್ಟು ತಯಾರಿ ಮಾಡಿಕೊಂಡಿದ್ದೆ. ಆಮೇಲೆ ಅಲ್ಲಿ ನಡೆದದ್ದು ನೆನೆದರೆ ಮೈ ಜುಂ ಎನ್ನುತ್ತದೆ. ಮುದುಕರನ್ನೂ ಯುವಕರನ್ನಾಗಿಸುವ ಶಕ್ತಿಯಿದೆ ನಿನಗೆ. ನಾನು ನಿನ್ನ ಅಪ್ಪಿ ಮುದ್ದಾಡಿದೆ. ತುಟಿಯ ಮೇಲೆ ಕುಣಿದಾಡಿದೆ! ಎತ್ತಿ ಹಿಡಿದುಕೊಂಡೆ. ಕೊಪ್ಪರಿಗೆ ಚಿನ್ನ ಸಿಕ್ಕಂತಾಗಿತ್ತು ನನಗೆ! ಕೊನೆಗೆ ನೀನು ಫೋನಿನಲ್ಲಿ ಹೇಳಿದೆ, ತುಟಿಗೆ ಕೊರಳಿಗೆ ಗಾಯವಾಗಿದೆ, ಆಫೀಸಿನಲ್ಲಿ ಹಾಸ್ಯ ಮಾಡಿದರು ಎಂದು.

ಕಿಬ್ಬೊಟ್ಟೆ ಸವರಿದ್ದಕ್ಕೆ ರೋಮಾಂಚನಗೊಂಡೆ. ಎಲ್ಲ ಮುಗಿಸಿ ಹೊರಬಂದಾಗ ಮತ್ತೆ ಒಳಗೆ ಕರೆದು ಬಾಗಿಲು ಹಾಕಿ ಗಾಢವಾಗಿ ಆಲಂಗಿಸಿ ಮುತ್ತಿನ ಮಳೆಗೆರೆದೆ. ಅಂಥ ನಿನಗೆ ಆಮೇಲೆ ಒಮ್ಮಿಂದೊಮ್ಮೇಲೆ ಈ ಪ್ರಜ್ಞೆ ಹೇಗೆ ಜಾಗ್ರತವಾಯಿತು? ಹಾಗಿರಲಾರದು ಅಂದುಕೊಂಡಿದ್ದೇನೆ. ನಿನಗೆ, ಮನೆ, ಮಕ್ಕಳು ಇತ್ಯಾದಿ ತೊಂದರೆಗಳು ಇರಬಹುದು. ಒಮ್ಮೆ ನೀನು ಫೋನು ಮಾಡುತ್ತಿರುವಾಗ ಹೇಳಿದ್ದಿ, ‘ಅವರು ಗಮನಿಸುತ್ತಿದ್ದಂತೆ ಕಾಣುತ್ತಿದೆ, ಇಡ್ತೇನೆ, ಮೆಸೇಜು ಮಾಡ್ತೇನೆ’ ಎಂದು. ಗಂಡಾದ ನನಗೇ ಇದೆಲ್ಲ ಎದುರಾಗಿತ್ತು. ‘ಗಂಡಾದ’ ಎನ್ನುವಲ್ಲಿ ಪುರುಷ ಪೌರುಷ ಇಲ್ಲ! ಜನ ಬಳಸುವ ಭಾಷೆಯಲ್ಲಿ ಹೇಳಿದ್ದೇನೆ ಅಷ್ಟೆ. ಇದೆಲ್ಲ ಒಂದು ಮಟ್ಟದಲ್ಲಿ ವಿಚಾರ ಮಾಡಿಯೇ ನಾವು ಮುಂದುವರಿದಿದ್ದಲ್ಲವೆ. ನನ್ನ ಅಷ್ಡೆಲ್ಲ ಆವರಿಸಿಕೊಳ್ಳುವಾಗ ಇದೆಲ್ಲ ಇದ್ದಿದ್ದಿಲ್ಲ. ಆದರೂ ಏನಾಯಿತು?

ಎರಡನೆ ಸಲವೂ ಹಾಗೇ. ಫ್ರೀ ಇದ್ದ ಒಂದು ಮಧ್ಯಾಹ್ನ ಬರಲು ಹೇಳಿದೆ. ಆಗ ಎಲ್ಲದಕ್ಕೂ ಅವಕಾಶವಿತ್ತು. ಒಂದನ್ನು ಬಿಟ್ಟು ಉಳಿದೆಲ್ಲವನ್ನೂ ಮಾಡಿದೆವು. ರಾತ್ರಿ ಫೋನಿನಲ್ಲಿ ಮಾತಾಡುವಾಗ ಎಲ್ಲೋ ಮಾತಿನ ಮಧ್ಯದಲ್ಲಿ, ‘ಅದಕ್ಕೆಲ್ಲ ಎಷ್ಟೊತ್ತು ಬೇಕು’ ಎಂದು ಹೇಳಿದೆ. ನಾನು, ನಿನಗೆ ಟೈಯರ್ಡ್ ಆಗಿರಬಹುದು, ಹೇಗಿದ್ದರೂ ಸಿಗುತ್ತೀಯಲ್ಲ ಮತ್ತೆ’ ಎಂದು ಸುಮ್ಮನೆ ಬಂದಿದ್ದೆ. ಆ ದಿನ ನೀನು ಎಲ್ಲೋ ಪ್ರವಾಸಕ್ಕೆ ಹೋಗಿ ಬಂದಿದ್ದೆ. ನಿನ್ನದು ಕೇವಲ ದೈಹಿಕ ಬಯಕೆಯಾಗಿತ್ತೆ? ನನಗೆ ಅದಿಲ್ಲ ಎಂದಲ್ಲ, ಅದು ಒಂದು ಆಳದ ಆತ್ಮೀಯತೆಯಲ್ಲಿ ಅರಳಲಿ ಎಂದಿತ್ತು.

ಕ್ರಮೇಣ ನೀನು ಹಿಂದೆ ಸರಿಯಲು ಶುರು ಮಾಡಿದ ಅನುಮಾನಗಳು ಬರತೊಡಗಿದ್ದವು. ನೀನೇ ಹೇಳಿದ್ದೆ, ಹತ್ತಿರವಾದ ಗೆಳೆಯರನ್ನು ದೂರ ಮಾಡುವ ತಂತ್ರ ತನಗೆ ಗೊತ್ತಿದೆ ಎಂದು. ಅದನ್ನು ಹೇಗೆ ಮಾಡುತ್ತಿ ಎನ್ನುವುದನ್ನೂ ಹೇಳಿದ್ದಿ. ಅದನ್ನು ಕೊಂಚ ಬೇರೆ ರೀತಿಯಲ್ಲಿ ನನ್ನ ಮೇಲೆ ಪ್ರಯೋಗಿಸತೊಡಗಿದೆ. ಆಫೀಸಿಗೆ ಮೊದಮೊದಲು ಹೋದಾಗ ಎದ್ದು ಬಂದು ಮಾತಾಡುತ್ತಿದ್ದೆ. ನಂತರ, ಕುಳಿತಲ್ಲಿಂದಲೇ ಆಡತೊಡಗಿದೆ. ಫೋನು ಮಾಡಲು ಹೋದರೆ, ‘ನಾ ಬಿಜಿ ಇದ್ದೇನೆ, ಗಂಡ, ಮಕ್ಕಳೆಲ್ಲ ಇರುವಾಗ ಮಾತಾಡುವುದಿಲ್ಲ..’ ಎಂದು ಹೇಳತೊಡಗಿದೆ. ಮೆಸೇಜಿಗೆ ಚುಟುಕಾಗಿ ಉತ್ತರಿಸತೊಡಗಿದೆ. ಖರೆ ಹಕಿಕತ್ ಏನು ಎಂದು ಕೇಳಿದರೆ ನಿನ್ನ ಬಳಿ ಸರಿಯಾದ ಉತ್ತರವಿಲ್ಲ. ‘ನಾ ನಿಮಗೆ ಮೊದಲೇ ಹೇಳಿದ್ದೆ’ ಎಂದೆಲ್ಲ ಹೇಳಿದೆ.

ಇದರ ನಡುವೆ ಒಮ್ಮೆ ನಮ್ಮ ಮಾತುಕತೆ ಪ್ರವಾಹವಾಗಿದ್ದಾಗ, ‘ಹಿಂದಿನ ಗೆಳೆಯರ ಜೊತೆಯೂ ಇದೇ ರೀತಿಯ ಸಂಬಂಧ ಇತ್ತೆ?’ – ನಾನು ಕೇಳಿದಾಗ ಉರಿದು ಬಿದ್ದೆ. ‘ನಿಮಗೆ ನನ್ನ ಮೇಲೆ ಒಳಗಿನಿಂದ ಆ ಅನುಮಾನವಿದೆ. ಅಲ್ಲದಿದ್ದರೆ ಹೀಗೆ ಕೇಳುತ್ತಿದ್ದಿರೊ’ ಎಂದೆಲ್ಲ ಆರ್ಭಟಿಸಿದೆ. ಆರಂಭದಲ್ಲಿ ಇಂಥ ಮಾತುಗಳೆಲ್ಲ ಕುಶಾಲಿನ, ತಮಾಷೆಯದಾಗುತ್ತಿತ್ತು. ಆದರೆ ಈಗ ಅದು ನಿನ್ನ ರೋಷಕ್ಕೆ ಕಾರಣವಾಯಿತು. ನೀನೂ ಒಮ್ಮೆ ನನ್ನ ಮೊಬೈಲ್ ತಗೆದುಕೊಂಡು– ಆಗ ನಾವು ಅಷ್ಟು ಹತ್ತಿವಾಗಿದ್ದೆವು. ಇಬ್ಬರಲ್ಲಿ ಯಾರು ಯಾವುದನ್ನು ಬೇಕಾದರೂ ತೆಗೆದುಕೊಳ್ಳಬಹುದಿತ್ತು– ಅದರ ಗ್ಯಾಲರಿಯಲ್ಲಿರುವ ಫೋಟೊ ನೋಡುತ್ತ, ಅಲ್ಲಿದ್ದ ನನ್ನ ಗೆಳತಿಯೊಬ್ಬಳ ಸಂಬಂಧದ ಕುರಿತು ಕೊಂಕು ಮಾತನಾಡಿದೆ. ಆದರೆ ನಾನು, ನೀನು ನನ್ನ ಕುರಿತು ಅನುಮಾನ ಪಡುತ್ತಿ ಎಂದು ತಿಳಿಯಲಿಲ್ಲ.

ಬಹುಶಃ ನೀನೂ ಕೂಡ ಈ ಮಾತನ್ನು ತಪ್ಪು ತಿಳಿಯುತ್ತಿರಲಿಲ್ಲ. ನಿಜವಾಗಿ ಇಷ್ಟ ಪಡುವವನಿಗೆ, ತನ್ನ ಪ್ರೀತಿಯ ಹುಡುಗಿ ಹೀಗಿರುವುದು ಇಷ್ಟವಾಗುತ್ತದೆಯೇ? ಇಂಥದ್ದೊಂದು ಸಣ್ಣ ಸ್ವಾರ್ಥ ಇದ್ದರೆ ತಪ್ಪೆ? ಜೊತೆಗೆ ಇದು, ನಾನು ನಿನ್ನನ್ನು ಎಷ್ಟೆಲ್ಲ ಹಚ್ಚಿಕೊಂಡಿದ್ದೇನೆ ಎನ್ನುವುದನ್ನೂ ತೋರಿಸುವುದಿಲ್ಲವೆ? ಹಾಗೆ ನೋಡಿದರೆ, ನಮ್ಮದು ಸಮಾಜದ ದೃಷ್ಟಿಯಲ್ಲಿ ಅನೈತಿಕ ಸಂಬಂಧ. ಆದರೆ ನನಗೆ ಹಾಗನಿಸಲಿಲ್ಲ. ಯಾಕೊ ಇದರಲ್ಲಿಯೂ ಒಂದು ಪಾವಿತ್ರ್ಯ ಇದೆ ಎಂದೇ ಅನಿಸುತ್ತದೆ. ನಿನ್ನದು ಬರೀ ವ್ಯಾವಹಾರಿಕ ಪ್ರೇಮವಾಗಿತ್ತೇ. ಹಾಗಿರಲಾರದು ಎಂದು ಇಂದಿಗೂ ಅಂದುಕೊಂಡಿದ್ದೇನೆ. ಬಹುಶಃ ಮನೆ, ಮಕ್ಕಳು, ಗಂಡ ಏನಾದರೂ ಇರಬಹುದು. ನಾನು ಕೇವಲ ನನ್ನ ದೃಷ್ಟಿಯಲ್ಲಿ ನಿರ್ಧಾರಕ್ಕೆ ಬರುವುದು ತಪ್ಪು. ಮತ್ತು ನೈತಿಕ- ಅನೈತಿಕದ ವಿಷಯವೂ ಅಷ್ಟು ಸುಲಭದಲ್ಲಿ ತೀರ್ಮಾನಕ್ಕೆ ಬರುವ ಸಂಗತಿಯಲ್ಲ, ಅಲ್ಲವೇ?

ಹೋಗ್ಲಿ ಬಿಡು!
ಹಿಂದೆ ನೀನು ಕಳಿಸಿದ ಒಂದು ಪದ್ಯವನ್ನು ನೆನಪಿಸುತ್ತೇನೆ ಕೇಳು.
ಆತ ಮಾತು ಮಾತಿಗೆ
‘ಹೋಗ್ಲಿ ಬಿಡು’ ಅನ್ನುತ್ತಾನೆ
ಏನನ್ನು ಹೋಗಲು ಬಿಡಲಿ
ಬಿಡುವುದಾದರೆ ಹಿಡಿದಿದ್ದು ಯಾಕೆ
ಹೋಗುವುದೇ ಆದರೆ
ಬಂದಿದ್ದಾದರೂ ಏಕೆ
ನಗುತ್ತಾನೆ
ಮತ್ತು ನನ್ನ ನಗುವಿಗೆ ಲಗಾಮು ಹಾಕುತ್ತಾನೆ
ನೋಡುತ್ತಾನೆ ಮತ್ತು
ನನ್ನ ನೋಟವನ್ನು ಹಾಗೆ ತಪ್ಪಿಸುತ್ತಾನೆ...

ಮಳೆ ನಿಧಾನವಾಗಿ ರಭಸ ಕಳೆದುಕೊಂಡು ಹನಿಹನಿಯಾಗಿ... ನಿಂತಿದೆ ಎನ್ನಲಾರೆ. ನಾನು ಈ ವಿಷಯದಲ್ಲಿ ಆಶಾವಾದಿ! ನನಗೆ ಆದ ತಳಮಳ ನಿನಗೂ ಆಗಿರಬೇಕಲ್ಲವೆ? ಆಗುವುದಿಲ್ಲ ಎಂದಾದರೆ ಯೋಚಿಸಬೇಕಾದ ಸಂಗತಿ. ನೀನು ಫೇಸ್ ಬುಕ್ಕಿನಲ್ಲಿ ಫೋಟೊ ಬದಲಿಸಿದ ಹಾಗೆ ಸಂಬಂಧ ಬದಲಾಯಿಸುವವಳಲ್ಲ ಎಂದುಕೊಂಡಿದ್ದೇನೆ. ನಿನ್ನ ಕುರಿತು ಆಡುವವರೆಲ್ಲರೂ ‘ಅವಳು ಸರಿ ಇಲ್ಲ’ ಎಂಬರ್ಥದ ಮಾತನ್ನು ಹೇಳುತ್ತಿದ್ದರು. ನಾನು ಅದನ್ನು ಒಪ್ಪಿರಲಿಲ್ಲ. ಜೊತೆಗೆ, ನೀನು ಎಲ್ಲರಂತೆ ‘ಗರತಿ ಗೌರಮ್ಮ’ನಂತೆ ಇರುವುದು ಇಷ್ಟವಾದ ಸಂಗತಿಯೂ ಅಲ್ಲ. ಹಾಗಿಲ್ಲದಿರುವುದೂ ನನಗೆ ನೀನು ಲೈಕಾಗಲು ಒಂದು ಕಾರಣವಾಗಿರಬಹುದು.

ಕೊನೆಯದಾಗಿ, ನಾವು ಸಾಗರಕ್ಕೆ ಹೋಗಿ ಬಂದ ಸುಂದರ ನೆನಪು ಮಾಡಿಕೊಂಡು ಮುಗಿಸುತ್ತೇನೆ. ಯಾವುದೋ ಪ್ಲಾನ್ ಮಾಡಿ ನಾವಿಬ್ಬರೇ ಕಾರಿನಲ್ಲಿ ಸಾಗರಕ್ಕೆ ಹೋಗುವಂತೆ ಮಾಡಿದೆ. ನನ್ನ ಪಕ್ಕದಲ್ಲೆ ನೀನು. ನಾನು ಒಂದು ಕೈಲಿ ಸ್ಟೇರಿಂಗ್ ತಿರುಗಿಸುತ್ತ ನಿನ್ನ ಮೈ ಕೈಗಳನ್ನು ಸವರುತ್ತ ಹೋದೆ. ನೀನೂ ಎಂದಿನಂತೆ ಫ್ರೀ ಆಗಿ ಮಾತಾಡುತ್ತ ನನ್ನ ಬಳಸುತ್ತಿದ್ದೆ. ಮಧ್ಯದಲ್ಲಿ ಕಾರು ನಿಲ್ಲಿಸುತ್ತ ಮುತ್ತಿನ ವಿನಿಮಯ ಮಾಡಿಕೊಂಡೆವು. ಅಪ್ಪಿ ಮುದ್ದಾಡಿದೆವು. ನೋಡುವವರಿಗೆ ಹೊಟ್ಟೆಕಿಚ್ಚು ಆಗುವ ಹಾಗೆ ಆ ದಿನ ಇಡೀ ತಬ್ಬಿಕೊಂಡಂತೆ ಇದ್ದೆವು. ಇಂಥ ಸಣ್ಣ ಸಣ್ಣ ತೊರೆಗಳು ನಮ್ಮ ಮಧ್ಯೆ ಹರಿದುಹೋಗಿವೆ ಅನೇಕ ಬಾರಿ, ಅಲ್ಪ ವ್ಯತ್ಯಾಸದೊಂದಿಗೆ. ನೀನು ಈಗ ತನಗೆ ಯಾವುದೂ ನೆನಪಿಲ್ಲ ಎನ್ನುತ್ತಿ...

ಈಗ ನಿನಗೆ ವರ್ಗವೂ ಆಗಿ ಬೇರೆ ಊರಿಗೆ ಹೋಗಿದ್ದಿ ಎಂದು ಗೊತ್ತಾಗಿದೆ. ಎಲ್ಲವನ್ನೂ ಹೇಳುತ್ತಿದ್ದ ನೀನು ಏನೂ ಹೇಳದೆ ಹೊರಟು ಹೋದಿ, ನಿನ್ನ ರಸ ಉಕ್ಕುವ ನೆನಪನ್ನು ನನ್ನ ಉಡಿಯಲ್ಲಿ ಹಾಕಿ. ನನ್ನ ಒಂದು ಕವಿತೆಯಲ್ಲಿ ಹೇಳಿದ್ದೆನಲ್ಲ,

ಸೈಕ್ಲೋನ್ ಮಳೆಯಂತೆ
ಭರಭರನೆ ಹೊಯ್ದು
ತಂಪಾಗಿಸಿದಳು
ಬರಡಾದ ನನ್ನ ಚಿಗುರಿಸಿ
ಅರಳಿ ಕೂತಾಗ
ಬಿಸಿಲಾದಳು

ಅಷ್ಟು ಗಟ್ಟಿಯಾಗಿ
ಆಲಂಗಿಸಿದವಳು
ಇಷ್ಟು ಬೇಗನೆ ದಾರಿ
ಬದಲಿಸುವಳೆಂದು
ಗೊತ್ತಿರಲಿಲ್ಲ
ಒತ್ತಿದ ತುಟಿಗಳು
ಬತ್ತಿ ಹೋಗುವುದೆಂದು
ಭಾವಿಸಿರಲಿಲ್ಲ

ದುಂಬಿಯೇ ಅವಳು
ಮನದಲ್ಲಿ ದೊಂಬಿ
ಎಬ್ಬಿಸಿ ಹೋದಳು
ಮೇಲಕ್ಕೆ ಎತ್ತಿ
ದೊಪ್ಪನೆ ನೆಲಕ್ಕೆ
ಎಸೆದಳು
ಎಲ್ಲಿಯೇ ಹೋಗಲಿ
ಹೇಗೆಯೇ ಇರಲಿ
ನನ್ನ ಕನಸುಗಳು
ಅವಳ
ಕುರುಳ ನೇವರಿಸುತ್ತಿರಲಿ.


–ಇಂತೀ ನಿನ್ನವನಾಗಿದ್ದ ಇಂದ್ರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT