ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಿಎಚ್.ಡಿ ಮೌಲ್ಯ ಕುಗ್ಗಿಸಬೇಡಿ

Last Updated 29 ಏಪ್ರಿಲ್ 2014, 19:30 IST
ಅಕ್ಷರ ಗಾತ್ರ

ಪಿಎಚ್.ಡಿ ಪ್ರವೇಶ ನಿಯಮಗಳಿಗೆ ತಿದ್ದುಪಡಿ ಮಾಡಿ ವಿವಾದಕ್ಕೆ ಸಿಲು­ಕಿದ್ದ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ (ಕೆಎಸ್ಒಯು)  ಈಗ ತಿದ್ದುಪಡಿಗಳನ್ನು ಕೈಬಿಟ್ಟು ಹೊಸ ನಿರ್ಧಾರಗಳನ್ನು ಕೈಗೊಂಡಿದೆ. ಕೆ ಎಸ್ಓಯು ಆಡಳಿತ ಮಂಡಳಿ ಸಭೆಯಲ್ಲಿ ಈ ನಿರ್ಧಾರಗಳನ್ನು ಕೈಗೊಂಡಿ­ರುವುದು ಸರಿಯಾದ ಕ್ರಮ. ಅಧಿಕಾರದಲ್ಲಿರುವ ರಾಜಕಾರಣಿಗೆ ಪಿಎಚ್.ಡಿ. ನೀಡಲು ಅನುಕೂಲವಾಗುವಂತೆ ಒಂದು ವರ್ಷದ ಮಟ್ಟಿಗೆ ವಿಶ್ವವಿದ್ಯಾಲಯದ ನಿಯಮಗಳನ್ನೇ ತಿದ್ದುಪಡಿ ಮಾಡಿದ್ದು ಅಕ್ಷಮ್ಯ.

ವಿಶ್ವವಿದ್ಯಾಲಯ ಧನಸಹಾಯ ಆಯೋಗದ (ಯುಜಿಸಿ) ಕಟ್ಟುನಿಟ್ಟಿನ ನಿಯಮ­ಗಳನ್ನು ರಾಜಾರೋಷವಾಗಿ ಉಲ್ಲಂಘಿಸಿದ ಈ ಕ್ರಮ ಮುಕ್ತ ವಿಶ್ವ­ವಿದ್ಯಾಲಯದ  ಇತಿಹಾಸದಲ್ಲಿ ಕಳಂಕವಾಗಿ ಉಳಿದುಕೊಳ್ಳಲಿದೆ.  ರಾಜ್ಯದ ಕನ್ನಡ ಮತ್ತು ಸಂಸ್ಕೃತಿ ಸಚಿವೆ ಉಮಾಶ್ರೀ  ಅವರಿಗೆ ಅನುಕೂಲ ಮಾಡಿ­ಕೊಡಲು ಪ್ರಸಕ್ತ ವರ್ಷಕ್ಕಷ್ಟೇ  ಪಿಎಚ್‌. ಡಿ ನಿಯಮಾವಳಿಗಳಿಗೆ ತಿದ್ದುಪಡಿ ತರಲಾಗಿತ್ತು  ಎಂಬ ವಿಚಾರವಂತೂ ವಿಶ್ವವಿದ್ಯಾಲಯದ ಘನತೆ, ಗೌರವಕ್ಕೆ ಮಸಿ ಬಳೆಯುವಂತಹದ್ದು. ಪಿಎಚ್ ಡಿ ಮೌಖಿಕ ಪರೀಕ್ಷೆಗೆ ಅರ್ಹತೆ ಪಡೆ­ಯಲು ಪ್ರವೇಶ ಪರೀಕ್ಷೆಯಲ್ಲಿ ಪಡೆಯಬೇಕಾದಅಂಕಗಳ ಪ್ರಮಾಣವನ್ನು ಶೇ 50 ರಿಂದ ಶೇ 40ಕ್ಕೆ ಇಳಿಸಲಾಗಿತ್ತು.

ಇದಕ್ಕೆ ಕಾರಣ ಸಚಿವೆ ಉಮಾಶ್ರೀ ಅವರು ಪಡೆದ ಅಂಕಗಳು ಶೇ 43 ಆಗಿತ್ತು. ಹಾಗೆಯೇ ಯುಜಿಸಿ ನಿಯಮ­ಗಳ ಪ್ರಕಾರ, ಪಿಎಚ್. ಡಿ  ಅಭ್ಯರ್ಥಿಗಳು ಸ್ನಾತಕ ಹಾಗೂ ಸ್ನಾತಕೋತ್ತರ ಪದವಿಗಳನ್ನು ಪಡೆಯಬೇಕಾದುದು ಕಡ್ಡಾಯ. ಆದರೆ  ಉಮಾಶ್ರೀ  ಮುಕ್ತ ವಿಶ್ವವಿದ್ಯಾಲಯದಿಂದ ನೇರವಾಗಿ ಸ್ನಾತಕೋತ್ತರ ಪದವಿ ಪಡೆದವರಾಗಿ­ದ್ದಾರೆ. ಇದಕ್ಕಾಗಿ ಇದೊಂದು ವರ್ಷದ ಮಟ್ಟಿಗೆ  ನೇರ ಸ್ನಾತಕೋತ್ತರ ಪದವಿ ಪಡೆದವರಿಗೂ ಪಿಎಚ್.ಡಿ ಪ್ರವೇಶಕ್ಕೆ ಅರ್ಹತೆ ಕಲ್ಪಿಸಿದ್ದು ಎಷ್ಟರ ಮಟ್ಟಿಗೆ ಸರಿ ಎಂಬ ಪ್ರಶ್ನೆ ಕೇಳಿಬರುವುದು ಸಹಜವೇ.

‘ನ ಹಿ ಜ್ಞಾನೇನ ಸದೃಶಂ’ ಎಂಬಂತಹ ಸಂಸ್ಕೃತ ಸೂಕ್ತಿಯನ್ನು ಮರೆಯ­ಲಾದೀತೆ? ಜ್ಞಾನಕ್ಕೆ ಸಮನಾದುದು ಬೇರೊಂದಿಲ್ಲ. ಸಂಶೋಧನೆಯಿಂದ ಹೊಸ ಜ್ಞಾನದ ಸಂಪಾದನೆ ಸಾಧ್ಯವಾಗಬೇಕು. ಅಥವಾ ಈಗಿರುವ ಜ್ಞಾನ­ಸಂಪತ್ತಿನ ಹೊಸ ಹೊಸ ಆಯಾಮಗಳ ಅನ್ವೇಷಣೆ ಸಂಶೋಧನೆಗಳಿಂದ ಸಾಧ್ಯ­ವಾಗಬೇಕು. ಇಂತಹ ವಿಚಾರಗಳಲ್ಲಿ ರಾಜಕೀಯದ ಪ್ರವೇಶ, ಉನ್ನತ ಶಿಕ್ಷಣ ಹಾಗೂ ಸಂಶೋಧನೆಗಳ ಗುಣಮಟ್ಟ ಹಾಳುಗೆಡವುತ್ತದೆ. ಪಿಎಚ್.ಡಿ ಪದವಿಯ ಘನತೆ ಹಾಗೂ ಗಾಂಭೀರ್ಯವನ್ನು ಇದು ಕುಗ್ಗಿಸುತ್ತದೆ.

ಈಗಾ­ಗಲೇ ರಾಜ್ಯದ ಅನೇಕ ವಿಶ್ವವಿದ್ಯಾಲಯಗಳಲ್ಲಿ ಪಿಎಚ್.ಡಿ ಪಡೆಯುವುದು ಒಂದು ದಂಧೆ ಎಂಬ ಮಟ್ಟಕ್ಕೆ ಹೋಗಿರುವುದನ್ನು ಗಂಭೀರವಾಗಿ ಪರಿಗಣಿಸ­ಬೇಕು. ಮೌಲಿಕವಾದ ಸಂಪ್ರಬಂಧಗಳು ಭಾರತದ ವಿಶ್ವವಿದ್ಯಾಲಯಗಳಲ್ಲಿ ಇತ್ತೀಚಿನ ದಿನಗಳಲ್ಲಿ ಹೊರಬರುತ್ತಿಲ್ಲ ಎಂಬಂತಹ ಕೂಗು ಎದ್ದು ಬಹಳ ಕಾಲವಾಯಿತು. ಈ ಹೀನಾಯ ಸ್ಥಿತಿಯನ್ನು ಸರಿಪಡಿಸಲು ಪಿಎಚ್.ಡಿ  ಆಯ್ಕೆ ವ್ಯವಸ್ಥೆ ಹಾಗೂ ಮೌಲ್ಯಮಾಪನ ಕ್ರಮಗಳಲ್ಲಿ ಬದಲಾವಣೆಗಳಾಗಬೇಕು .

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT