ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಿತ್ತ ನಿವಾರಕ ಪಾನಕ

Last Updated 17 ಏಪ್ರಿಲ್ 2015, 19:30 IST
ಅಕ್ಷರ ಗಾತ್ರ

ಬೇಸಿಗೆ ಪ್ರಾರಂಭವಾಯಿತು. ತಡೆಯಲಾರದ ಉರಿ-ಧಗೆಗೆ ಸುಸ್ತು, ನಿದ್ರಾಹೀನತೆ ಇತ್ಯಾದಿ ಸಮಸ್ಯೆಗಳುಂಟಾಗುವುದು ಸಾಮಾನ್ಯ. ಇದರಿಂದಾಗಿ ಪಿತ್ತ ಪ್ರಕೃತಿಯವರಿಗೆ ಉಂಟಾಗುವ ತಲೆಸುತ್ತು ಹಾಗೂ ಆಯಾಸದ ಪರಿಹಾರಕ್ಕಾಗಿ ಮನೆಯಲ್ಲಿಯೇ ತಯಾರಿಸಬಹುದಾದ ಪಾನಕಗಳನ್ನು ಪರಿಚಯಿಸಲಾಗಿದೆ.

ಹುಣಸೆ ಹಣ್ಣಿನ ಪಾನಕ
ಸಾಮಗ್ರಿ: ಹುಣಸೆ ಹಣ್ಣಿನ ಪಲ್ಪ್ - ನಾಲ್ಕು ಚಮಚ, ಬೆಲ್ಲದ ಪುಡಿ - ಆರು ಚಮಚ, ಜೀರಿಗೆ - ಸುವಾಸನೆಗಾಗಿ.

ವಿಧಾನ: ಹುಣಸೆ ಹುಳಿಯನ್ನು ಚೆನ್ನಾಗಿ ನೆನೆಸಿ ಕಿವುಚಿ ಚರಟ ತೆಗೆಯಿರಿ. ನಂತರ ಇದಕ್ಕೆ ಬೆಲ್ಲದ ಪುಡಿ ಸೇರಿಸಿ ಚೆನ್ನಾಗಿ ಮಿಶ್ರಮಾಡಿ ಪಾನಕಕ್ಕೆ ಬೇಕಷ್ಟು ನೀರು ಸೇರಿಸಿ ಹದಮಾಡಿಕೊಳ್ಳಿ. ಈಗ ತಯಾರಾದ ಪಾನಕವನ್ನು ಸವಿಯಲು ಕೊಡುವಾಗ ಸುವಾಸನೆಗೆ ಬೇಕಿದ್ದರೆ ಜೀರಿಗೆ ಪುಡಿ ಸೇರಿಸಬಹುದು. ಈ ಪಾನಕದ ಸೇವನೆ ಪಿತ್ತ ಪ್ರಕೋಪದವರಿಗೆ ಬಹಳ ಪರಿಣಾಮಕಾರಿ.

ಮಜ್ಜಿಗೆಹುಲ್ಲಿನ ಪಾನಕ
ಸಾಮಗ್ರಿ: ನಾಲ್ಕು ಚಮಚ ಮಜ್ಜಿಗೆ ಹುಲ್ಲಿನ ರಸ, ನಾಲ್ಕು ಚಮಚ ಲಿಂಬೆರಸ, ಎರಡು ಚಮಚ ಜೇನುತುಪ್ಪ, ಎರಡು ಚಮಚ ಸಕ್ಕರೆ, ಏಲಕ್ಕಿಪುಡಿ - ಸುವಾಸನೆಗೆ ಬೇಕಿದ್ದರೆ.

ವಿಧಾನ: ಮಿಕ್ಸಿಂಗ್ ಬೌಲ್‌ಗೆ ಒಂದು ಕಪ್ ನೀರು ಹಾಕಿ ಇದಕ್ಕೆ ಮೇಲೆ ತಿಳಿಸಿದ ಎಲ್ಲಾ ಸಾಮಗ್ರಿಗಳನ್ನು ಸೇರಿಸಿ ಚೆನ್ನಾಗಿ ಮಿಶ್ರಮಾಡಿ. ಬೇಕಿದ್ದರೆ ಐಸ್‌ಪೀಸ್ ಸೇರಿಸಿ ಸರ್ವ್ ಮಾಡಬಹುದು. ಬಿಸಿಲಿನಿಂದ ದಣಿದು ಉಂಟಾಗುವ ಆಯಾಸ, ಚಕ್ಕರ್ ಬಂದಂತಾಗುವ ತೊಂದರೆಗಳಿಗೆ ಈ ಪಾನಕದ ಸೇವನೆ ಸಹಕಾರಿ.

ಹೇರಳೆಕಾಯಿ ಪಾನಕ
ಸಾಮಗ್ರಿ: ಎಂಟು ಚಮಚ ಹೇರಳೆಕಾಯಿ  (ಕಂಚುಹುಳಿ)ಯ ರಸ, ಹತ್ತು ಚಮಚ ಸಕ್ಕರೆ, ಏಲಕ್ಕಿ ಪುಡಿ - ಸುವಾಸನೆಗಾಗಿ.

ವಿಧಾನ: ಮಲೆನಾಡಿನಲ್ಲಿ ಸಿಗುವ ಕಂಚು ಹುಳಿಯ ರಸವನ್ನು ಸಕ್ಕರೆ ಹಾಕಿ ಕಲಕಿ ಬೇಕಷ್ಟು ನೀರು ಸೇರಿಸಿ ಪಾನಕದ ಹದ ತಯಾರು ಮಾಡಿಕೊಳ್ಳಿ. ಈಗ ತಯಾರಾದ ಪಾನಕಕ್ಕೆ ಚಿಟಿಕೆ ಏಲಕ್ಕಿ ಪುಡಿ ಸೇರಿಸಿ ಸವಿಯಲು ಕೊಡಿ. ಮಲೆನಾಡಿನಲ್ಲಿ ಕಂಚುಹುಳಿ ಸಿಗುವ ಸಮಯದಲ್ಲಿ ಸ್ಕ್ವಾಷ್ ಮಾಡಿ ಇಟ್ಟುಕೊಂಡರೆ ಬೇಸಿಗೆಕಾಲದಲ್ಲಿ ಈ ರೀತಿ ಪಾನಕ ತಯಾರಿಸಿಕೊಳ್ಳಬಹುದು.

ದೊಡ್ಡಪತ್ರೆಯ ಪಾನಕ
ಸಾಮಗ್ರಿ
: ನಾಲ್ಕು ಚಮಚ ದೊಡ್ಡಪತ್ರೆ ಸೊಪ್ಪಿನ ರಸ, ಹತ್ತು ನೆನೆಸಿದ ಒಣದ್ರಾಕ್ಷಿ , ಎರಡು  ನೆನೆಸಿದ ಖರ್ಜೂರ, ಎರಡು ಚಮಚ ಜೇನುತುಪ್ಪ, ಒಂದು ಚಮಚ ಲಿಂಬೆರಸ.

ವಿಧಾನ: ಒಣದ್ರಾಕ್ಷಿ ಮತ್ತು ಖರ್ಜೂರವನ್ನು ನುಣ್ಣಗೆ ರುಬ್ಬಿ ಪೇಸ್ಟು ಮಾಡಿಕೊಂಡು ಮಿಕ್ಸಿಂಗ್ ಬೌಲ್‌ಗೆ ಹಾಕಿ. ನಂತರ ಇದಕ್ಕೆ ಎರಡು ಕಪ್ ನೀರು ಹಾಗು ಮೇಲೆ ತಿಳಿಸಿದ ಎಲ್ಲಾ ಸಾಮಗ್ರಿಗಳನ್ನು ಒಂದೊಂದಾಗಿ ಸೇರಿಸಿ ಚೆನ್ನಾಗಿ ಮಿಶ್ರಮಾಡಿ ಸವಿಯಬಹುದು. ಬೇಸಿಗೆಯ ಉಷ್ಣದಿಂದುಂಟಾಗುವ ಶೀತ ಮತ್ತು ಕಾಡುವ ಗಂಟಲು ಕೆರೆತದ ಶಮನಕ್ಕೆ ಇದು ಸಹಕಾರಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT