ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೀಠೋಪಕರಣಗಳ ಕಾಡದಿರಲಿ ಮಳೆಗಾಲ

Last Updated 30 ಜೂನ್ 2016, 19:30 IST
ಅಕ್ಷರ ಗಾತ್ರ

ಹೊ ಹೊರಗೆ ಸುರಿಯುವ ಮಳೆ, ಇಷ್ಟಿಷ್ಟೇ ಏರುವ ಚಳಿ, ಬಿಸಿಬಿಸಿ ಟೀ/ ಕಾಫಿ ಜತೆಗೆ ಟೀಪಾಯಿ ಮೇಲಿನ ಕುರುಕಲು ತಿಂಡಿ ತಿಂದು ಬೆಚ್ಚಗಾಗುವ ಹಂಬಲ.
‘ಅರೆ! ಈ ಟೀಪಾಯಿಗೇನಾಯಿತು? ಒಂದು ಬದಿಗೆ ಉಬ್ಬಿಕೊಂಡು ಬೆಂಡಾಗಿದೆ!’ –ಟೀ ಹೀರುತ್ತಾ ಕುಂತ ನೀವು ಹೀಗಂದುಕೊಂಡರೆ ಅದಕ್ಕೆ ಕಾರಣ ಈ ಮಳೆಗಾಲವೇ.

ಮಳೆಗಾಲ ಬಂತೆಂದರೆ ತೇವ ನಿಮ್ಮನ್ನು ಮಾತ್ರ ಕಾಡುವುದಿಲ್ಲ, ನಿಮ್ಮ ಮನೆ/ ಕಚೇರಿಯ ಮರದ ಪೀಠೋಪಕರಣಗಳನ್ನೂ ಕಾಡುತ್ತದೆ. ನೇರವಾಗಿದ್ದ ಟೀಪಾಯಿ ಡೊಂಕಾಗುತ್ತದೆ, ನೆಟ್ಟಗಿದ್ದ ಮೇಜು ಸೊಟ್ಟಗಾಗುತ್ತದೆ, ಸರಿಯಾಗಿದ್ದ ಕುರ್ಚಿ ಒಂದು ಬದಿಗೆ ಕುಂಟಲು ಶುರು ಮಾಡುತ್ತದೆ. ಇದಕ್ಕೆಲ್ಲಾ ಕಾರಣ ಮಳೆಗಾಲದಲ್ಲಿ ಹೆಚ್ಚುವ ತೇವಾಂಶ.

ಮಳೆಗಾಲದಲ್ಲಿ ವಾತಾವರಣದ ತೇವಾಂಶ ಹೆಚ್ಚುವ ಜತೆಗೆ ಮನೆಯ ಕಿಟಕಿ, ಬಾಗಿಲುಗಳಿಂದ ಒಳಕ್ಕೆ ಸಿಡಿಯುವ ನೀರು ಮರದ ಪೀಠೋಕರಣಗಳ ಮೂಲರೂಪವನ್ನೇ ಬದಲಿಸಿ ಬಿಡುತ್ತದೆ. ಮಳೆಗಾಲದಲ್ಲಿನ ನಮ್ಮ ಕೆಲ ಅಭ್ಯಾಸಗಳ ಕಾರಣದಿಂದಲೂ ಮನೆಯಲ್ಲಿನ ಮರದ ಪೀಠೋಪಕರಣಗಳು ಹಾಳಾಗುತ್ತವೆ.

ಮಳೆಗಾಲದಲ್ಲಿ ತುಸು ಹೆಚ್ಚೇ ಕಾಳಜಿ ವಹಿಸದಿದ್ದರೆ ಸಾವಿರಾರು ರೂಪಾಯಿ ಕೊಟ್ಟು, ಇಷ್ಟಪಟ್ಟು ಖರೀದಿಸಿದ ಮರದ ಪೀಠೋಪಕರಣಗಳು ಮುಕ್ಕಾಗುವುದು ಮಾತ್ರ ಖಂಡಿತ. ಮಳೆಗಾಲದಲ್ಲಿ ನಿಮ್ಮ ಮನೆಯ ಮರದ ಪೀಠೋಪಕರಣಗಳು ಹಾಳಾದಂತೆ ಕಾಯಲು ಕೆಲವು ಸಲಹೆಗಳು ಇಲ್ಲಿವೆ:\

ಮಾಡಬಾರದ್ದೇನು?
*ಹಸಿ ಬಟ್ಟೆ ಹರಡಬೇಡಿ:
ಮಳೆಗಾಲದಲ್ಲಿ ಒಗೆದ ಬಟ್ಟೆಗಳನ್ನು ಒಣಗಿಸುವುದೊಂದು ದೊಡ್ಡ ತಲೆನೋವು. ಒಗೆದ ಬಟ್ಟೆಗಳನ್ನು ಮೇಜಿನ ಮೇಲೋ, ಕುರ್ಚಿಯ ಮೇಲೋ, ಮಂಚದ ಮೇಲೋ ಆರಲು ಹಾಕುವುದು ಸಾಮಾನ್ಯ ರೂಢಿ. ಹೀಗೆ ಮಾಡುವುದು ಕೂಡಾ ಪೀಠೋಪಕರಣಗಳು ಹಾಳಾಗಲು ಕಾರಣವಾಗುತ್ತದೆ. ಹಸಿಯಾದ ಬಟ್ಟೆಗಳನ್ನು ಪೀಠೋಪಕರಣಗಳ ಮೇಲೆ ಆರಲು ಹಾಕುವ ಅಭ್ಯಾಸ ಬಿಡಿ. ಹಸಿ ಬಟ್ಟೆ ಒಣಗಿಸಲು ಮನೆಯೊಳಗೇ ಒಂದು ಭಾಗದಲ್ಲಿ ಪ್ಲಾಸ್ಟಿಕ್‌ ಹಗ್ಗ ಕಟ್ಟಿ.

*ಗೋಡೆಗೆ ಒರಗಿಸಬೇಡಿ: ಮಳೆಗಾಲದಲ್ಲಿ ಗೋಡೆಗಳೂ ತೇವವಾಗುವುದು ಸಾಮಾನ್ಯ. ಗೋಡೆಗಳಿಗೆ ಒರಗಿಸಿ ಕುರ್ಚಿ, ಮೇಜು, ಪುಸ್ತಕದ ಕಪಾಟನ್ನು ಇಟ್ಟರೆ ಅವು ಕೂಡಾ ತೇವ ಹೀರುವ ಸಾಧ್ಯತೆ ಇರುತ್ತದೆ. ಹೀಗಾಗಿ ಮಳೆಗಾಲದಲ್ಲಿ ಮರದ ಪೀಠೋಪಕರಣಗಳನ್ನು ಗೋಡೆಗೆ ತಾಗುವಂತೆ ಇಡಬೇಡಿ. ಗೋಡೆಯಿಂದ ಕನಿಷ್ಠ ಎರಡು ಅಡಿ ಅಂತರದಲ್ಲಿ ಮರದ ಪೀಠೋಪಕರಣಗಳನ್ನು ಇಡಿ.

*ನವೀಕರಣ ಬೇಡ: ಮಳೆಗಾಲದಲ್ಲಿ ಮನೆಯ ನವೀಕರಣ ಅಥವಾ ದುರಸ್ತಿ ಮಾಡಿಸುವುದು ರೇಜಿಗೆಯ ಕೆಲಸ. ನವೀಕರಣಕ್ಕೆಂದು ಮನೆಯ ಪೀಠೋಪಕರಣಗಳನ್ನು ಹೊರಗಿಡಬೇಕಾಗುತ್ತದೆ. ಇಂಥ ಸಂದರ್ಭದಲ್ಲಿ ಪೀಠೋಪಕರಣಗಳು ಮಳೆಯಲ್ಲಿ ನೆನೆದು ಹಾಳಾಗಬಹುದು.

*ಕಿಟಕಿ, ಬಾಗಿಲು ಮುಚ್ಚಬೇಡಿ: ಮಳೆಗಾಲದಲ್ಲಿ ಚಳಿ ಹಾಗೂ ಮಳೆಗಾಳಿಯ ಕಾರಣಕ್ಕೆ ಮನೆಯ ಕಿಟಕಿ, ಬಾಗಿಲು ಮುಚ್ಚುವುದು ಸಾಮಾನ್ಯ. ಆದರೆ,  ಸಾಧಾರಣವಾಗಿರುವ ಮಳೆಯ ಸಂದರ್ಭದಲ್ಲೆಲ್ಲಾ ಕಿಟಕಿ, ಬಾಗಿಲುಗಳನ್ನು ತೆರೆದಿಡಿ. ಇದರಿಂದ ಮನೆಯೊಳಗೆ ಗಾಳಿಯಾಗಲು ಅನುಕೂಲವಾಗುತ್ತದೆ.  ಆಗಾಗ ಫ್ಯಾನ್‌ ಹಾಕಿ. ಈ ಅಭ್ಯಾಸ ಮನೆಯೊಳಗಿನ ತೇವ ಆರಲು ಸಹಕಾರಿ.

ಮಾಡಬೇಕಾದ್ದೇನು?
*ತೇವವಾಗದಿರಲಿ:
ಮರದ ಪೀಠೋಪಕರಣಗಳಿಗೂ ತೇವಕ್ಕೂ ಬದ್ಧ ವೈರ! ತೇವವಾದರೆ ಮರದ ಪೀಠೋಪಕರಣ ಅಂಕುಡೊಂಕಾಗುವ ಜತೆಗೆ ಅದರ ಗುಣಮಟ್ಟವೂ ಹಾಳಾಗುತ್ತದೆ. ಪ್ಲೈವುಡ್‌ ಬಳಸಿದ ಪೀಠೋಪಕರಣಗಳಂತೂ ತೇವ ಹಿಡಿದರೆ ಚಕ್ಕೆ ಏಳಲು ಶುರುಮಾಡುತ್ತವೆ. ಹೀಗಾಗಿ ಪೀಠೋಪಕರಣಗಳು ತೇವದಿಂದ ದೂರವಿರಬೇಕಾದ್ದು ಅತ್ಯಗತ್ಯ. ಮಳೆಗಾಲದಲ್ಲಿ ಮರದ ಪೀಠೋಪಕರಣಗಳು ತೇವವಾಗದಂತೆ ಆದಷ್ಟೂ ಎಚ್ಚರ ವಹಿಸಿ.

*ಕಿಟಕಿ, ಬಾಗಿಲಿಂದ ದೂರವಿರಲಿ: ಮಳೆಗಾಲದಲ್ಲಿ ಮರದ ಪೀಠೋಪಕರಣಗಳು ಕಿಟಕಿ, ಬಾಗಿಲಿಂದ ದೂರವಿದ್ದರೆ ಒಳಿತು. ಇದರಿಂದ ಕಿಟಕಿ, ಬಾಗಿಲಿಂದ ಸಿಡಿಯುವ ಮಳೆ ನೀರು ಪೀಠೋಪಕರಣಗಳ ಮೇಲೆ ಬೀಳದಂತೆ ತಡೆಯಬಹುದು.

*ಒಣಗಿದ ಬಟ್ಟೆಯಿಂದ ಒರೆಸಿ: ಮಳೆಗಾಲದಲ್ಲಿ ವಾತಾವರಣದ ತೇವಾಂಶವನ್ನು ಮರದ ಪೀಠೋಪಕರಣಗಳು ಹೀರುವ ಸಾಧ್ಯತೆ ಹೆಚ್ಚಾಗಿರುತ್ತದೆ. ಹೀಗಾಗಿ ಮಳೆಗಾಲದಲ್ಲಿ ಚೆನ್ನಾಗಿ ಒಣಗಿದ ಬಟ್ಟೆಯಿಂದ ಪೀಠೋಪಕರಣಗಳನ್ನು ಒರೆಸುವುದು ಒಳಿತು.

*ಉತ್ತಮ ಪಾಲಿಷ್‌ ಹಾಕಿಸಿ: ಮಳೆಗಾಲಕ್ಕೆ ಮುನ್ನವೇ ಪೀಠೋಪಕರಣಗಳಿಗೆ ವಾಟರ್‌ಪ್ರೂಫ್‌ ಪಾಲಿಷ್‌ ಹಾಕಿಸುವುದರಿಂದ ಅವು ತೇವಾಂಶದ ಕಾರಣದಿಂದ ಹಾಳಾಗದಂತೆ ತಡೆಬಹುದು. ಆದರೆ, ಮಳೆಗಾಲದಲ್ಲಿ ಪೀಠೋಪಕರಣಗಳಿಗೆ ಪಾಲಿಷ್‌ ಹಾಕಿಸಲು ಮುಂದಾಗುವುದು ಅಂಥ ಒಳ್ಳೆಯ ಅಭ್ಯಾಸವಲ್ಲ.

*ಕುಟ್ಟು ಹಿಡಿದಿಯೇ ಪರೀಕ್ಷಿಸಿ: ಮರದ ಪೀಠೋಪಕರಣಗಳಿಗೆ ಕುಟ್ಟು ಹಿಡಿಯುವ ಬಾಧೆ ಸಾಮಾನ್ಯ. ಮಳೆಗಾಲದಲ್ಲಿ ಕುಟ್ಟು ಹುಳುಗಳು ಮರದಲ್ಲಿ ಉತ್ಪತ್ತಿಯಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ. ಹೀಗಾಗಿ ಮರದ ಪೀಠೋಪಕರಣಗಳ ಎಲ್ಲಾ ಭಾಗಗಳನ್ನೂ ಸೂಕ್ಷ್ಮವಾಗಿ ಪರೀಕ್ಷಿಸಿ. ಕುಟ್ಟು ಪುಡಿ ಉದುರುತ್ತಿದ್ದರೆ ಆ ಪೀಠೋಪಕರಣಕ್ಕೆ ಸೀಮೆಎಣ್ಣೆ ಅಥವಾ ಕುಟ್ಟು ನಿರೋಧಕವನ್ನು ಬಳಿಯಿರಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT