ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುರುಷಾಕಾರಂ...

ಅಂಕುರ
Last Updated 30 ಜನವರಿ 2015, 19:30 IST
ಅಕ್ಷರ ಗಾತ್ರ

‘ನಮಸ್ತೆ, ನನಗೀಗ 29 ವರ್ಷ. ಮದುವೆಯಾಗಿ 2 ವರ್ಷಗಳಾದವು. ಕಳೆದ ನಾಲ್ಕು ತಿಂಗಳಿಂದ ಗರ್ಭಧಾರಣೆಗೆ ಪ್ರಯತ್ನಿಸುತ್ತಿದ್ದೇವೆ. ನನ್ನ ಹೆಂಡತಿ ಗರ್ಭಿಣಿಯಾಗುತ್ತಿಲ್ಲ. ನನಗೆ ಸಣ್ಣ ಗಾತ್ರದ ವೃಷಣಗಳಿವೆ. ಈ ಗಾತ್ರದಿಂದಾಗಿ ನಾವು ಮಕ್ಕಳಾಗುವುದರಿಂದ ವಂಚಿತ ರಾಗುತ್ತಿದ್ದೇವೆಯೇ? ನಿಜವಾಗಿಯೂ ಸಣ್ಣ ಗಾತ್ರದ ವೃಷಣಗಳಿದ್ದರೆ ತಂದೆಯಾಗುವುದು ಕಷ್ಟವೇ?’

ಇಂಥ ಸಮಸ್ಯೆಯ ಹಲವಾರು ಇ ಮೇಲ್‌ಗಳು ಇತ್ತೀಚೆಗೆ ಬರುತ್ತಿವೆ. ಇವಕ್ಕೆಲ್ಲ ಒಂದು ವಿಸ್ತ್ರತ ಉತ್ತರ ಇಲ್ಲಿದೆ ನೋಡಿ:

ಸಣ್ಣ ಗಾತ್ರದ ವೃಷಣವಿದ್ದರೆ ಕಡಿಮೆ ವೀರ್ಯಾಣುಗಳ ಸಂಖ್ಯೆ ಎಂದು ಅರ್ಥವೇ?
ಪ್ರತಿಯೊಬ್ಬ ಪುರುಷನ ವೃಷಣದ ಗಾತ್ರವೂ ವಿಭಿನ್ನವಾಗಿರುತ್ತದೆ. ನೀವು ನಿಮ್ಮ ವೃಷಣದ ಗಾತ್ರವನ್ನು ಇನ್ನೊಬ್ಬರೊಂದಿಗೆ ಹೋಲಿಸಕೂಡದು. ಸಣ್ಣ ವೃಷಣಗಳೂ ಪುರುಷ ಹಾರ್ಮೋನ್‌ ಟೆಸ್ಟೊಸ್ಟರೋನ್‌ ಉತ್ಪಾದಿಸುವ ಸಾಮರ್ಥ್ಯ ಹೊಂದಿರುತ್ತವೆ. ಇದು ಲೈಂಗಿಕ ಕ್ರಿಯೆಯಲ್ಲಿ ತೊಡಗಿಸಿಕೊಳ್ಳಲು, ವೀರ್ಯಾಣು ಉತ್ಪಾದನೆ ಮಾಡಲು ಅತ್ಯಗತ್ಯವಾಗಿರುವ ಹಾರ್ಮೋನ್‌ ಆಗಿದೆ. ಒಂದು ವೇಳೆ  ಹುಡುಗನೊಬ್ಬ ಸಾಕಷ್ಟು ಎತ್ತರವಾಗಿದ್ದು, ಗಂಡಸಿನ ಎಲ್ಲ ಲಕ್ಷಣಗಳನ್ನೂ ತೋರುತ್ತಿದ್ದರೆ ಅವನ ವೃಷಣಗಳು ಸಮರ್ಪಕವಾಗಿ ಕಾರ್ಯ ನಿರ್ವಹಿಸುತ್ತಿವೆ ಎಂದರ್ಥ. ಒಂದು ವೇಳೆ ಪುರುಷನ ಲಕ್ಷಣಗಳು ನಿಧಾನವಾಗಿ ಕಂಡು ಬಂದು, ಲೈಂಗಿಕ ಲಕ್ಷಣಗಳೂ ನಿಧಾನವಾಗಿ ಕಂಡು ಬಂದರೆ ವೃಷಣಗಳು ಯಾವ ಗಾತ್ರದ್ದಾಗಿದ್ದರೂ ಅವು ಸಮರ್ಪಕವಾಗಿ ಕಾರ್ಯ ನಿರ್ವಹಿಸುತ್ತಿಲ್ಲ ಎಂದರ್ಥ.

ಸಣ್ಣ ವೃಷಣಗಳಿದ್ದರೆ ಮಗು ಪಡೆಯಲು ಕಷ್ಟವಾಗುತ್ತದೆಯೇ?
ಮಕ್ಕಳು ಪಡೆಯುವ ಸಾಮರ್ಥ್ಯಕ್ಕೂ ಸಣ್ಣ ಗಾತ್ರದ ವೃಷಣಗಳನ್ನು ಹೊಂದಿರುವುದಕ್ಕೂ ಯಾವುದೇ ಸಂಬಂಧಗಳಿಲ್ಲ. ಸಾಮಾನ್ಯವಾಗಿ ವ್ಯಕ್ತಿಯೊಬ್ಬನ ವೃಷಣಗಳು 5ಸಿಸಿಯಷ್ಟು ಇರುತ್ತದೆ. ಆದರೆ ಫಲವಂತಿಕೆಗೆ ಈ ಗಾತ್ರಕ್ಕಿಂತಲೂ ಅವರಲ್ಲಿ ಟೆಸ್ಟೊಸ್ಟೆರಾನ್‌ ಹಾಗೂ ಸ್ಪರ್ಮಟೊಜೊಯ್ಡ್ಸ್‌ ಉತ್ಪಾದನೆಯಾಗುತ್ತಿದೆಯೇ ಎಂಬುದೇ ಮಹತ್ವದ ವಿಷಯವಾಗಿರುತ್ತದೆ. ಇಷ್ಟಕ್ಕೂ ಮೀರಿ ನಿಮ್ಮ ಫಲವಂತಿಕೆಯ ಬಗ್ಗೆ ಆತಂಕಗಳಿದ್ದರೆ ನಿಮ್ಮ ವೀರ್ಯಾಣುವಿನ ಮಾದರಿಯನ್ನು ಆ್ಯಂಡ್ರೊಲಜಿ ಲ್ಯಾಬ್‌ನಲ್ಲಿ ವಿಶ್ಲೇಷಣೆಗೆ ನೀಡಬಹುದಾಗಿದೆ.

ಸಣ್ಣ ವೃಷಣಗಳು ಹಾಗೂ ನಿದ್ರಾಹೀನತೆ
ಸೌತರ್ನ್‌ ಡೆನ್ಮಾರ್ಕ್‌ ವಿಶ್ವವಿದ್ಯಾಲಯದ ಸಂಶೋಧಕರ ಪ್ರಕಾರ ನಿದ್ರಾಹೀನತೆಗೂ ಸಣ್ಣ ಗಾತ್ರದ ವೃಷಣಗಳನ್ನು ಹೊಂದಿರುವುದಕ್ಕೂ ವಿಶೇಷ ಸಂಬಂಧವಿರುವುದನ್ನು ಕಂಡು ಹಿಡಿದ್ದಾರೆ. ಗಾತ್ರದಲ್ಲಿ ಸಣ್ಣ ವೃಷಣಗಳಿರುವವರು ಸುಖನಿದ್ದೆಯನ್ನು ಮಾಡುವುದಿಲ್ಲ. ನಿದ್ರಾಹೀನ ಸಮಸ್ಯೆಯಿಂದ ಬಳಲುತ್ತಾರೆ. ರಾತ್ರಿ ಬಲುಹೊತ್ತಿನವರೆಗೂ ಎಚ್ಚರವಿರುತ್ತಾರೆ. ಸುದೀರ್ಘವಾದ ನಿದ್ದೆ ಇವರಿಂದಾಗದು.

ಉತ್ತಮ ಅಪ್ಪ: ಪಾಲಕರ ಅರ್ಹತೆ ಹಾಗೂ ಭೌತಿಕ ಅಂಶಗಳು ಕುರಿತ ಅಧ್ಯಯನವೊಂದು ಇಂಥ ಆಸಕ್ತಿಕರ ವಿಷಯವನ್ನು ಹೊರಹಾಕಿದೆ. ಸಣ್ಣ ಗಾತ್ರದ ವೃಷಣಗಳಿರುವವರು ತುಲನಾತ್ಮಕವಾಗಿ ಇತರ ಪುರುಷರಿಗಿಂತ ಉತ್ತಮ ಅಪ್ಪಂದಿರಾಗಿರುತ್ತಾರೆ. ದೊಡ್ಡ ಗಾತ್ರದ ವೃಷಣಗಳನ್ನು ಹೊಂದಿರುವವರಿಗಿಂತ ಸಣ್ಣಗಾತ್ರದ ವೃಷಣ ಹೊಂದಿರುವ ಪುರುಷರು ಉತ್ತಮ ಪಾಲಕತ್ವದ ಕೌಶಲಗಳನ್ನು ತೋರ್ಪಡಿಸುತ್ತಾರೆ. ಇದು ಬಹುತೇಕರಲ್ಲಿ ಅತಿ ದೊಡ್ಡ ಗಾತ್ರದಲ್ಲಿ ವಿಕಸಿತ ಹೊಂದಿರುವ ಪುರುಷರು ಸಾಮಾನ್ಯವಾಗಿ ಪೌರುಷದ ಅಹಂಕಾರವನ್ನೇ ಹೆಚ್ಚು ಹೊಂದಿರುತ್ತಾರೆ. ದೊಡ್ಡ ಗಾತ್ರದ ವೃಷಣಗಳಿದ್ದರೆ ಅತಿ ಹೆಚ್ಚು ಟೆಸ್ಟೊಸ್ಟರಾನ್‌ ಗ್ರಂಥಿಯು ಉತ್ಪತ್ತಿಯಾಗುತ್ತದೆ. ವೀರ್ಯಾಣುಗಳ ಸಂಖ್ಯೆಯೂ ಹೆಚ್ಚಿರುತ್ತದೆ. ಸಂಭೋಗಾಸಕ್ತಿಯೂ ಹೆಚ್ಚಾಗಿರುತ್ತದೆ. ಆದರೆ ಅಂಥವರಲ್ಲಿ ಮುರಿದ ಮದುವೆ ಅಥವಾ ವಿಚ್ಛೇದನೆಗಳೂ ಸಾಮಾನ್ಯವೆಂದು ಹೇಳಲಾಗುತ್ತದೆ.

ಈ ಅಧ್ಯಯನದ ಪ್ರಕಾರ ಪುರುಷನಿಗೆ ಸಾಮಾನ್ಯ ಗಾತ್ರಕ್ಕಿಂತಲೂ ಹೆಚ್ಚು ದೊಡ್ಡದಾದ ವೃಷಣಗಳಿದ್ದಲ್ಲಿ ಪಾಲಕತ್ವದ ಯಾವುದೇ ಅಂಶವನ್ನು ಅಂಥವರು ಅಭಿವ್ಯಕ್ತಿ ಪಡಿಸುವುದಿಲ್ಲ. ಮಗುವನ್ನು ಬೆಳೆಸುವುದರಲ್ಲಿ ಪರಿಣಾಮಕಾರಿಯಾಗಿ ಪಾಲ್ಗೊಳ್ಳುವುದಿಲ್ಲ. ಮಗುವಿಗೆ ಸ್ನಾನ ಮಾಡಿಸುವುದಾಗಲೀ, ನ್ಯಾಪಿ ಬದಲಿಸುವುದಾಗಲೀ ಇವರಿಂದಾಗದ ಕೆಲಸಗಳು. ದೈಹಿಕವಾಗಿ ಅತಿ ಸಮರ್ಥರೆನಿಸುವ ಪುರುಷರು ಉತ್ತಮ ಅಪ್ಪಂದಿರಾಗುವುದು ಕಠಿಣಕರ ಕೆಲಸವಾಗಿದೆ.

ಈ ಇಡೀ ಅಧ್ಯಯನ ಹೇಳುವುದೇನೆಂದರೆ ಮನುಷ್ಯರು ವಿಕಸನ ವಾದದ ತತ್ವದ ಮೇಲೆಯೇ ಬದುಕುತ್ತಿದ್ದಾರೆ. ಮಾನವ ಇತಿಹಾಸದ ಪರಿಣತರ ಪ್ರಕಾರ ಪುರುಷರು ಮಿಲನಕ್ಕಾಗಿ ಹಾಗೂ ಹೆಣ್ಣುಮಕ್ಕಳ ಫಲವಂತಿಕೆಗಾಗಿ ಹಾತೊರೆಯುತ್ತಾರೆ. ಇದಕ್ಕೆ ಹೊರತು ಪಡಿಸಿದರೆ ಮತ್ತೆ ಯಾವ ಸಹಾಯವನ್ನೂ ಅವರಿಂದ ನಿರೀಕ್ಷಿಸಲಾಗದು ಎನ್ನುವುದು ಅವರ ಅಭಿಮತವಾಗಿದೆ.

ಈ ಸಂಶೋಧನೆಯ ಮುಂದಾಳತ್ವವನ್ನು ವಹಿಸಿದ್ದ ಜಾರ್ಜಿಯಾದ ಅಟ್ಲಾಂಟಾದಲ್ಲಿರುವ ಎಮೊರಿ ವಿಶ್ವವಿದ್ಯಾಲಯದ ಮಾನವ ಶಾಸ್ತ್ರಜ್ಞ ಜೇಮ್ಸ್‌ ರಿಲ್ಲಿಂಗ್‌ ಪ್ರಕಾರ ಮಾನವರಲ್ಲಿ ಪುರುಷರು ಮಿಲನ ಹಾಗೂ ಪಾಲಕತ್ವದ ನಡುವೆ ವ್ಯವಹಾರಕ್ಕೆ ಇಳಿಯುವ ವರ್ತನೆಯನ್ನೇ ಹೆಚ್ಚು ತೋರಿಸುತ್ತಾನೆ ಎಂದು ಹೇಳುತ್ತಾರೆ.

ದೊಡ್ಡ ವೃಷಣಗಳು ಹೆಚ್ಚು ಹೃದಯ ಸಮಸ್ಯೆಗಳು: ದೊಡ್ಡ ವೃಷಣವಿರುವ ಪುರುಷರಲ್ಲಿ ಹೃದ್ರೋಗಗಳು ಕಾಣಿಸಿಕೊಳ್ಳುವ ಸಾಧ್ಯತೆಗಳು ಹೆಚ್ಚು ಎಂದು ಇತ್ತೀಚಿನ ಸಂಶೋಧನೆ ಹೇಳುತ್ತದೆ. 2800 ಪುರುಷರನ್ನು ಅಧ್ಯಯನಕ್ಕೆ ಒಳಪಡಿಸಲಾಗಿತ್ತು. 7 ವರ್ಷಗಳ ನಂತರ ಅವರನ್ನು ವಿಸ್ತೃತವಾಗಿ ತಪಾಸಣೆಗೆ ಒಳಪಡಿಸಿದಾಗ ದೊಡ್ಡ ವೃಷಣವಿದ್ದವರಲ್ಲಿ  ಹೃದಯ ಸಂಬಂಧಿ ಸಮಸ್ಯೆಗಳಿಗೆ ಒಳಗಾಗುವ ಸಾಧ್ಯತೆಗಳು ಹೆಚ್ಚಾಗಿ ಕಂಡು ಬಂದಿದ್ದವು. ಇದಕ್ಕೆ ಟೆಸ್ಟೊಸ್ಟರಾನ್‌ ಹಾರ್ಮೋನ್‌ ಲ್ಯುಟಿನೈಜಿಂಗ್‌ ಎಂದು ಕರೆಯಲಾಗುವ ಹಾರ್ಮೋನ್‌ ಅನ್ನು ಹೆಚ್ಚು ಉತ್ಪಾದಿಸುವುದು ಇವರಲ್ಲಿ ಸಹಜವಾಗಿರುತ್ತದೆ.

ಇದರಿಂದಾಗಿ ಇನ್ನಷ್ಟು ಟೆಸ್ಟಸ್ಟರಾನ್‌ ಬಿಡುಗಡೆಯಾಗುತ್ತದೆ. ವೈದ್ಯಕೀಯ ಸಂಶೋ ಧನೆ ಗಳು ಹೆಚ್ಚು ಟೆಸ್ಟಸ್ಟರಾನ್‌ ಹಾರ್ಮೋನ್‌ ಬಿಡುಗಡೆಗೂ ಹೃದ್ರೋಗಕ್ಕೂ ಸಂಬಂಧ ವಿ ರು ವು ದನ್ನು ಸಾಬೀತು ಪಡಿಸಿವೆ.

ವೃಷಣದ ಕ್ಯಾನ್ಸರ್‌: ಬಹುತೇಕ ಕೆಲವರಲ್ಲಿ ಮಾತ್ರ ದೊಡ್ಡ ವೃಷಣ ಹೊಂದಿದವರಲ್ಲಿ ವಿರಳಾತಿ ವಿರಳವಾಗಿ ಕ್ಯಾನ್ಸರ್‌ ಸಾಧ್ಯತೆಯೂ ಇರುತ್ತದೆ. ಕೆಲವೊಮ್ಮೆ ಒಂದು ಕಡೆ ಅಥವಾ ಎರಡೂ ಕಡೆಯ ವೃಷಣಗಳಿಗೆ ಕ್ಯಾನ್ಸರ್‌ ತಗುಲಬಹುದು. ವೃಷಣದ ಮೇಲೆ ಸಣ್ಣ ಗಾತ್ರದ ಗಡ್ಡೆಯಂಥದ್ದು ಕಾಣಿಸಿಕೊಳ್ಳಬಹುದು. ಕೆಳಹೊಟ್ಟೆ ಅಥವಾ ಕಿಬ್ಬೊಟ್ಟೆಯ ಬಳಿ ನೋವು ಕಾಣಿಸಿಕೊಳ್ಳ ಬಹುದು. ಶಿಶ್ನದ ಬಳಿ ದ್ರವದಂಥ ವಸ್ತು ಸಂಗ್ರಹವಾಗಬಹುದು. ಅದು ವೃಷಣದ ಮೇಲೆ ಗುಳ್ಳೆಯಂತೆ ಗಡ್ಡೆಯಂತೆ ಕಾಣಸಿಕೊಳ್ಳಬಹುದು. ವೃಷಣವು ವಿಸ್ತರಿಸಿದಂತೆಯೇ ಕಾಣಿಸಿಕೊಳ್ಳಬಹುದು.

ಪ್ರತಿಸಲವೂ ಸ್ನಾನ ಅಥವಾ ಶವರ್‌ ಸ್ನಾನದ ನಂತರ ನೀವೇ ನಿಮ್ಮನ್ನು ಪರೀಕ್ಷೆಗೆ ಒಳಪಡಿಸಬುದು. ಈ ಸ್ವಯಂ ಪರೀಕ್ಷೆಯ ಸೂಚನೆಗಳನ್ನು ಕ್ಲೆವ್‌ಲ್ಯಾಂಡ್‌ ಕ್ಲಿನಿಕ್‌ ನೀಡಿದೆ.

* ಪರೀಕ್ಷೆಗೆ ಮುನ್ನ ಬೆಚ್ಚನೆಯ ನೀರಿನಿಂದ ಸ್ನಾನ ಮಾಡಿ. ಇದು ಶಿಶ್ನದ ಚರ್ಮವನ್ನು ಮೃದುಗೊಳಿಸುತ್ತದೆ. ಏನಾದರೂ ಅಸಹಜವಾದುದು ಅಥವಾ ಅಸಾಮಾನ್ಯ ಎನಿಸುವುದು ಈಗ ಕೂಡಲೇ ಕಂಡು ಬರುತ್ತದೆ.

* ಪ್ರತಿ ವೃಷಣವನ್ನು ಪರಿಶೀಲಿಸಲೂ ಎರಡೂ ಕೈಗಳನ್ನು ಉಪಯೋಗಿಸಿ. ತೋರುಬೆರಳು ಹಾಗೂ ಮಧ್ಯದ ಬೆರಳಿನಿಂದ ಪ್ರತಿ ವೃಷಣದ ಕೆಳಭಾಗವನ್ನು ಆವರಿಸುವಂತೆ ನಿಮ್ಮ ಅಂಗೈ ಇರಲಿ. ಮೇಲ್ಭಾಗದಲ್ಲಿ ಹೆಬ್ಬೆರಳು ಬರುವಂತಿರಲಿ. ನಿಧಾನವಾಗಿ ವೃಷಣವನ್ನು ಬೆರಳುಗಳ ನಡುವೆ ಚಲಿಸುವಂತೆ ಸ್ಪರ್ಶಿಸಿ ನೋಡಿ. ಕೆಲವೊಮ್ಮೆ ಎರಡೂ ವೃಷಣಗಳ ಗಾತ್ರ ಬೇರೆಬೇರೆ ಆಗಿರಬಹುದು ಅಥವಾ ಎನಿಸಬಹುದು. ಅದು ಸಹಜ ಎನ್ನುವುದು ನೆನಪಿರಲಿ.

* ನಿಮ್ಮ ವೃಷಣದ ಸ್ಪರ್ಶ ನಿಮ್ಮ ಅನುಭವಕ್ಕೆ ಬರುವಾಗ ತಂತಿಯಂಥ ರಚನೆಯು ವೃಷಣದ ಮೇಲ್ಭಾಗದಲ್ಲಿ ಹಾಗೂ ಕೆಳಭಾಗದಲ್ಲಿ ಕೈಗೆ ತಾಕಬಹುದು. ಇದಕ್ಕೆ ಎಪಿಡಿಮಿಸ್‌ ಎಂದು ಕರೆಯಲಾಗುತ್ತದೆ. ಇಲ್ಲಿಯೇ ವೀರ್ಯ ಸಂಗ್ರಹವಾಗುವುದು ಮತ್ತು ಸ್ಖಲಿಸುವಾಗ ಇಲ್ಲಿಂದಲೇ ವೀರ್ಯಾಣುಗಳು ಚಲಿಸುವವು. ಇದನ್ನು ಗಡ್ಡೆಯೆಂದುಕೊಂಡು ಗೊಂದಲಕ್ಕೆ ಒಳಗಾಗದಿರಿ.

* ಒಂದುವೇಳೆ ಗಡ್ಡೆಯಂಥದ್ದು ಏನಾದರೂ ಕಂಡು ಬಂದರೆ, ಇದು ಸೇಂಗಾಕಾಳಿನಷ್ಟು ಅಥವಾ ಕಡಲೆಕಾಳಿನಷ್ಟು ಸಣ್ಣದಾಗಿರಬಹುದು. ಇಲ್ಲವೇ ದೊಡ್ಡದಾಗಿರಬಹುದು. ನೋವುರಹಿತವಾಗಿರಬಹುದು. ಅಂಥದ್ದೇನಾದರೂ ನಿಮ್ಮ ಸ್ಪರ್ಶಕ್ಕೆ ಸಿಕ್ಕಲ್ಲಿ ವೈದ್ಯರನ್ನು ಭೇಟಿ ಮಾಡಿ ಸಮಾಲೋಚಿಸಲೇಬೇಕು.

ಸಾಮಾನ್ಯವಾಗಿ ಎಡ ಮತ್ತು ಬಲ ವೃಷಣಗಳ ಗಾತ್ರ ಒಂದೇ ಸಮವಾಗಿರುವುದಿಲ್ಲ. ಬಲಗಡೆಯದ್ದು ಸಾಮಾನ್ಯವಾಗಿ ಮತ್ತು ಸಹಜವಾಗಿಯೇ ಎಡಗಡೆಗಿಂತ ದೊಡ್ಡದಾ ಗಿರು ತ್ತದೆ. ಎಡಗಡೆಯ ವೃಷಣ ಕೆಳಮಟ್ಟದಲ್ಲಿರುವಂತೆ ಕಾಣಿಸಿಕೊಳ್ಳುತ್ತದೆ. ಆದರೆ ವೃಷಣಗಳ ಗಾತ್ರದಲ್ಲಿ ಶೇ 20ಕ್ಕಿಂತಲೂ ಹೆಚ್ಚು ವ್ಯತ್ಯಾಸ ಕಂಡು ಬಂದಲ್ಲಿ ವೈದ್ಯರನ್ನು ಕಾಣುವುದು ಸುಲಭ.
ಮಾಹಿತಿಗೆ: info@manipalankur.com, 99450 48833

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT