ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುಸ್ತಕದ ಹುಳು

Last Updated 31 ಜುಲೈ 2014, 19:30 IST
ಅಕ್ಷರ ಗಾತ್ರ

ನಗರದಲ್ಲಿ ಅನೇಕ ಪುಸ್ತಕ ಮಳಿಗೆಗಳಿವೆ. ಒಂದೊಂದಕ್ಕೂ ಪ್ರತ್ಯೇಕ ಸಾಂಸ್ಕೃತಿಕ ಚಹರೆ. ಓದುಗಮಿತ್ರರು ಹಾಗೂ ಪುಸ್ತಕದ ಅಂಗಡಿಗಳ ನಡುವಿನ ಸಂಬಂಧ ಹಲವು ಕಥಾನಕಗಳನ್ನು ಒಳಗೊಂಡದ್ದು. ‘ಮೆಟ್ರೊ’ ವಾರಕ್ಕೊಮ್ಮೆ ಪುಸ್ತಕ ಮಳಿಗೆಯೊಂದರ ಮೇಲೆ ಬೆಳಕು ಚೆಲ್ಲಲಿದೆ. ಮೊದಲ ಕಂತಿನಲ್ಲಿ, ಎಂ.ಜಿ.ರಸ್ತೆಯ ಶೃಂಗಾರ್‌ ಕಾಂಪ್ಲೆಕ್ಸ್‌ನಲ್ಲಿರುವ ‘ಬುಕ್‌ವರ್ಮ್’.

ಅಂದು ಬೆಳಿಗ್ಗೆ ಎಂ.ಜಿ. ರಸ್ತೆಯ ಬುಕ್‌ವರ್ಮ್‌ಗೆ ಭೇಟಿ ನೀಡಿದಾಗ ಒಂದು ಕಡೆ ಸಾಲಾಗಿ ಜೋಡಿಸಿಟ್ಟ ತತ್ತ್ವಶಾಸ್ತ್ರದ ಪುಸ್ತಕಗಳು, ಮತ್ತೊಂದು ಕಡೆ ಇತಿಹಾಸಕ್ಕೆ ಸಂಬಂಧಿಸಿದ ಕೃತಿಗಳು, ಸ್ವಲ್ಪ ಮುಂದಿನ ರ್‍ಯಾಕ್‌ನಲ್ಲಿ ಭೈರಪ್ಪನವರ ಒಂದಷ್ಟು ಪುಸ್ತಕಗಳು ಅಲ್ಲಿ ಇಣುಕುತ್ತಿದ್ದವು.

ನಿಧಾನವಾಗಿ ಪುಸ್ತಕ ಪ್ರೇಮಿಗಳು ಅಲ್ಲಿ ಸೇರತೊಡಗಿದರು. ಯಾವುದೋ ಇಂಗ್ಲಿಷ್ ಪುಸ್ತಕದ ಹೆಸರು ಉಲಿಯುತ್ತ, ಕೈಯಲ್ಲಿ ಒಂದಷ್ಟು ಪುಸ್ತಕ ಹಿಡಿದು ಬಂದ ಹುಡುಗಿ­ಯೊಬ್ಬ­ಳನ್ನು ಅಲ್ಲಿದ್ದ ಮಾಲೀಕ ವಿನಯವಾಗಿ ಹಲೋ ಹೇಳುತ್ತಾ ಸ್ವಾಗತಿಸಿದರು. ಆಕೆ ಒಂದು ಮುಗುಳ್ನಗೆ ಬೀರಿ ಸೀದಾ ಒಂದು ರ್‍ಯಾಕ್ ಬಳಿ ಹೋದಳು. ಅಲ್ಲಿದ್ದ ಸಹಾಯಕ ಅವಳು ಕೇಳಿದ ಪುಸ್ತಕವನ್ನು ರೆಪ್ಪೆ ಮಿಟುಕಿಸುವುದರೊಳಗೆ ಅವಳ ಮುಂದಿಟ್ಟ. ಕೈಯಲ್ಲಿ ಹಿಡಿದಿದ್ದ ಪುಸ್ತಕವನ್ನು ಕೊಟ್ಟು ತನಗೆ ಬೇಕಾದ ಪುಸ್ತಕವನ್ನು ತೆಗೆದುಕೊಂಡು ಖುಷಿಯಿಂದ ಹೊರನಡೆದಳು.
ಆ ಪುಸ್ತಕದಂಗಡಿಯ ಹೆಸರು ಬುಕ್‌ವರ್ಮ್. ಅಲ್ಲಿ ಕುಳಿತಿದ್ದ ಮಾಲೀಕರ ಹೆಸರು ಕೃಷ್ಣ. ಮಳಿಗೆಗೆ ಭೇಟಿ ನೀಡಿದ ಪ್ರತಿ ಗ್ರಾಹಕರನ್ನು ಒಂದು ನಗುವಿನ ಮೂಲಕ ಸ್ವಾಗತಿಸಿ ಅವರು ಕೇಳಿದ ಪುಸ್ತಕಗಳನ್ನು ಕೊಡುತ್ತಾರೆ ಕೃಷ್ಣ.

ಇಂಗ್ಲಿಷ್ ಕಾದಂಬರಿಗಳು, ಮಕ್ಕಳ ಪುಸ್ತಕಗಳು, ಮ್ಯಾನೇಜ್‌ಮೆಂಟ್, ಸ್ಪೋರ್ಟ್ಸ್‌ಗೆ ಸಂಬಂಧಿಸಿದ ಹಳೆಯ ಪುಸ್ತಕಗಳು ಇವರ ಮಳಿಗೆಯಲ್ಲಿ ಸಿಗುತ್ತವೆ. ಓದುವ ಹವ್ಯಾಸ ಇರುವವರಿಗೆ ಬುಕ್‌ವರ್ಮ್‌ ಒಂದು ನೆಚ್ಚಿನ ತಾಣ.

ನಮಗೆ ಈ ಬುಕ್‌ವರ್ಮ್ ಬಗ್ಗೆ ತಿಳಿದಿರಲಿಲ್ಲ. ಒಂದು ಪುಸ್ತಕ ಹುಡುಕಿಕೊಂಡು ಸಾಕಷ್ಟು ಅಂಗಡಿ ಅಲೆದಿದ್ದೆವು. ಎಂ.ಜಿ.ರಸ್ತೆಗೆ ಯಾವುದೋ ಕಾರಣಕ್ಕೆ ಬಂದಾಗ ಈ ಪುಸ್ತಕದಂಗಡಿಗೆ ಒಳಹೊಕ್ಕೆವು. ನಾವು ಹುಡುಕುತ್ತಿದ್ದ ಪುಸ್ತಕ ಸಿಕ್ಕಿತು. ಅಂದಿನಿಂದ ಏನೇ ಪುಸ್ತಕ ಬೇಕಿದ್ದರೂ ನಾವಿಲ್ಲಿ ಹಾಜರ್. ತುಂಬಾ ಒಳ್ಳೆಯ ಪುಸ್ತಕ ಸಂಗ್ರಹ ಇಲ್ಲಿದೆ.
–ಐಶ್ವರ್ಯಾ, ಪಾರ್ವತಿ

ಈ ‘ಬುಕ್‌ವರ್ಮ್’ ಮಳಿಗೆಯನ್ನು ಆರಂಭಿಸುವುದಕ್ಕೆ ಕೃಷ್ಣ ಅವರ ಓದಿನ ಹಂಬಲವೇ ಮುಖ್ಯ ಕಾರಣವಂತೆ. ಓದುವ ಹವ್ಯಾಸವನ್ನು ನೆಚ್ಚಿಕೊಂಡ ಕೃಷ್ಣ ಅವರು ಚಿಕ್ಕವಯಸ್ಸಿನಲ್ಲಿಯೇ ಪುಸ್ತಕದೆಡೆಗೆ ಪ್ರೀತಿ ಬೆಳೆಸಿಕೊಂಡವರು. ಅವರ ಊರು ಮಂಡ್ಯದ ಸಮೀಪದ ರಂಗಸಮುದ್ರ. ಕೃಷಿಯನ್ನೇ ನೆಚ್ಚಿಕೊಂಡ ಕುಟುಂಬ ಅವರದು. ಮನೆಯಲ್ಲಿ ಬಡತನವಿದ್ದರೂ ಓದು ಮಾತ್ರ ನಿಂತಿರಲಿಲ್ಲ. ತರಕಾರಿ ವ್ಯಾಪಾರ ಮಾಡಿ ಅದರಲ್ಲಿ ಅಪ್ಪ–ಅಮ್ಮ ಕೊಟ್ಟ 50 ಪೈಸೆ  ಹಿಡಿದುಕೊಂಡು ಚುಟುಕು ಮತ್ತು ವಿಸ್ಡಂ ಪುಸ್ತಕ ಕೊಳ್ಳುತ್ತಿದ್ದರು. ಹಗಲು ಶಾಲೆ, ಸಂಜೆ ವ್ಯಾಪಾರ ರಾತ್ರಿ ಚುಟುಕು, ವಿಸ್ಡಂ ಪುಸ್ತಕಗಳು ಇವರಿಗೆ ಸಂಗಾತಿಗಳಾಗುತ್ತಿದ್ದವು.

ಅಲ್ಲಿಂದ ಮುಂದಿನ ವಿದ್ಯಾಭ್ಯಾಸಕ್ಕಾಗಿ ಕೃಷ್ಣ ಅವರು ಬೆಂಗಳೂರಿನ ಹಾದಿ ತುಳಿದರು. ಮನೆಯಲ್ಲಿ ಕಷ್ಟವಿತ್ತು. ಜತೆಗೆ ಏನಾದರೂ ಸಾಧನೆ ಮಾಡಬೇಕು ಎಂಬ ಕನಸು ಅವರ ಕಣ್ಣಂಚಲ್ಲಿತ್ತು. ಒಂದು ಪುಸ್ತಕದಂಗಡಿಯಲ್ಲಿ ಸೇಲ್ಸ್‌ಮ್ಯಾನ್‌ ಆಗಿ ಸೇರಿಕೊಂಡರು. ಸಂಜೆ ಕಾಲೇಜಿಗೆ ಸೇರಿಕೊಂಡು ವಿದ್ಯಾಭ್ಯಾಸ ಮುಗಿಸಿದರು. ಹಾಗೆಯೇ ಎಂ.ಬಿ.ಎ. ಕೂಡ ಆಯಿತು. ಪುಸ್ತಕದಂಗಡಿಯಲ್ಲಿ ಕೆಲಸ ಮಾಡುತ್ತಾ ಸಾಕಷ್ಟು ಪುಸ್ತಕ ಓದಿದರು. ಅದೇ ಅವರ ಪುಸ್ತಕದಂಗಡಿಗೆ ಬುನಾದಿ ಹಾಕಿತು. ಪುಸ್ತಕ ಮಾರಾಟಗಾರರೊಂದಿಗೆ ಸ್ನೇಹ ಬೆಳೆಯಿತು. ತಕ್ಕಡಿ ಹಿಡಿದ ಕೈ, ಪುಸ್ತಕ ಮಾರಾಟಕ್ಕೂ ಸೈ ಎಂದಿತು.

ಪುಸ್ತಕ ಪ್ರೀತಿಯಿಂದಲೇ ಕೃಷ್ಣ ಮತ್ತು ನನ್ನ ಸ್ನೇಹವಾಯಿತು. ವಿಜ್ಞಾನ, ಇತಿಹಾಸಕ್ಕೆ ಸಂಬಂಧಿಸಿದ ಕತೆಗಳು ನನಗೆ ತುಂಬ ಇಷ್ಟ. ಇಂತಹ ಪುಸ್ತಕಗಳು ಬಂದಾಗ ಅವರು ನನಗೆ ಫೋನ್ ಮಾಡಿ ಮಾಹಿತಿ ನೀಡುತ್ತಾರೆ.  ಅರ್ಥರ್ ಸಿ. ಕ್ಲಾರ್ಕ್ ಅವರು ಆಟೊಗ್ರಾಫ್ ಮಾಡಿದ ಪುಸ್ತಕವೊಂದು ಅವರ ಮಳಿಗೆಗೆ ಬಂದಾಗ ಕೃಷ್ಣ ಅವರು ನನಗೆ ಪೋನ್ ಮಾಡಿ ಹೇಳಿದ್ದರು. ಆಗ ತುಂಬ ಖುಷಿಯಾಗಿತ್ತು. ಆ ಪುಸ್ತಕ ಇನ್ನೂ ನನ್ನ ಬಳಿ ಇದೆ.
–ಗೌತಮ್ ಶೆಣೈ

ಯಾರ ಕೈಕೆಳಗೂ ಕೆಲಸ ಮಾಡುವುದು ಬೇಡವೆಂದುಕೊಂಡ ಮನಸ್ಸಿನಲ್ಲಿ ಹೊಸ ಕನಸೊಂದು ಬಿಚ್ಚಿಕೊಂಡಿತು. ಆ ಕನಸೇ ಎಂ.ಜಿ ರಸ್ತೆಯ ಶೃಂಗಾರ್ ಕಾಂಪ್ಲೆಕ್ಸ್‌ನಲ್ಲಿರುವ ಹಳೆಯ ಪುಸ್ತಕಗಳ ಮಾರಾಟ ಮಳಿಗೆ 'ಬುಕ್ ವರ್ಮ್'.  ಇವರಿಗೆ ಸಹಾಯಕರಾಗಿ ಪ್ರೀತಂ, ಮಹೇಂದ್ರ, ಮಹಾದೇವ, ಕೇಶವ ಎಂಬ ನಾಲ್ಕು ಜನ ಸಹಾಯಕರು ಕೂಡ ಇದ್ದಾರೆ. ಯಾವ ರ್‍ಯಾಕ್‌ನಲ್ಲಿ ಯಾವ ಪುಸ್ತಕಗಳಿವೆಯೆಂಬುದು ಇವರ ಬೆರಳುಗಳಿಗೆ ಚಿರಪರಿಚಿತ. 80-, 90ರ ದಶಕದಲ್ಲಿ ಬಿಡುಗಡೆಯಾದ ಇಂಗ್ಲಿಷ್ (ರೊಮ್ಯಾನ್ಸ್, ಸಸ್ಪೆನ್ಸ್) ಕಾದಂಬರಿಗಳು ಇಂದಿಗೂ ಇವರ ಮಳಿಗೆಯಲ್ಲಿ ಕುಳಿತು ಬೀಗುತ್ತವೆ. 125, 140 ವರ್ಷದ ಹಳೆ ಪುಸ್ತಕಗಳು ಇವರ ಪುಸ್ತದಂಗಡಿಯಲ್ಲಿವೆ.

‘ಎಲ್ಲೊಲ್ಲೊ ಹುಡುಕಿ ಕೊನೆಗೆ ಇಲ್ಲಿ ಬಂದು ತೆಗೆದುಕೊಂಡು ಹೋಗುತ್ತಾರೆ. ಪುಸ್ತಕ ಸಿಕ್ಕಿದಾಗ ಅವರ ಮುಖದಲ್ಲಿ ಒಂದು ಸಂಭ್ರಮದ ನಗು ತುಂಬಿರುತ್ತದೆ. ಅದೇ ನಮಗೆ ಮತ್ತಷ್ಟು ಪುಸ್ತಕಗಳನ್ನು ಸಂಗ್ರಹಿಸಲು ಸ್ಫೂರ್ತಿ ನೀಡುತ್ತದೆ’ ಎನ್ನುತ್ತಾರೆ ಕೃಷ್ಣ. ಯಾವ ಗ್ರಾಹಕರು ಯಾವ ಪುಸ್ತಕ ಕೊಳ್ಳುತ್ತಾರೆ ಎಂಬುದನ್ನು ಇವರು ನೆನಪಿನಲ್ಲಿಟ್ಟುಕೊಂಡಿರುತ್ತಾರೆ. ಹೀಗಾಗಿ ಪ್ರತೀ ಬಾರಿ ಗ್ರಾಹಕರ ಅಭಿರುಚಿಗೆ ತಕ್ಕಂತೆ ಪುಸ್ತಕಗಳನ್ನು ಶಿಫಾರಸು ಕೂಡ ಮಾಡುತ್ತಾರೆ. ಹೊಸ ಪುಸ್ತಕ ಬಂದಾಗ ಗ್ರಾಹಕರಿಗೆ ಇವರು ಮಾಹಿತಿ ನೀಡುತ್ತಾರೆ. 

ಇವರ ಪುಸ್ತಕದಂಗಡಿಯಲ್ಲಿಯೇ  ಪುಸ್ತಕಗಳನ್ನು ಖರೀದಿಸಿ, ಶೇ 50ಕ್ಕೆ ಪುಸ್ತಕವನ್ನು ಇವರಿಗೆ ಮಾರಬಹುದಾದ್ದರಿಂದ ಪುಸ್ತಕ ಪ್ರಿಯರಿಗೆ ಇದೊಂದು ಒಳ್ಳೆಯ ಅವಕಾಶವಾಗಿದೆ. ‘ಕೆಲವರು ಒಂದೇ ಬಾರಿಗೆ ಸಾಕಷ್ಟು ಪುಸ್ತಕಗಳನ್ನು ಕಡಿಮೆ ಬೆಲೆಯಲ್ಲಿ ಕೊಂಡೊಯ್ಯುತ್ತಾರೆ. ಓದಿದ ನಂತರ ಅರ್ಧದಷ್ಟು ಬೆಲೆಗೆ ಅದನ್ನು ನಮಗೇ ಮಾರುತ್ತಾರೆ’ ಎನ್ನುತ್ತಾರೆ ಕೃಷ್ಣ.

ಯುವಜನಾಂಗದವರು ನಿಮ್ಮ ಪುಸ್ತದಂಗಡಿಗೆ ಭೇಟಿ ನೀಡುತ್ತಾರಾ ಎಂದು ಕೇಳಿದರೆ, ‘ಬರುತ್ತಾರೆ. ಆದರೆ ಅವರ ಅಭಿರುಚಿಗಳು ಬೇರೆ ಇವೆ. ಕೆಲವರು ಸಾಹಿತ್ಯವನ್ನು ಮೆಚ್ಚಿದರೆ ಇನ್ನು ಕೆಲವರು ತತ್ವಶಾಸ್ತ್ರ ನೆಚ್ಚಿಕೊಂಡವರು. ಚೇತನ್ ಭಗತ್ ಮತ್ತು ಹ್ಯಾರಿಪಾಟರ್ ಪುಸ್ತಕಗಳನ್ನು ಹೆಚ್ಚು ತೆಗೆದುಕೊಳ್ಳುತ್ತಾರೆ. ಇದು ತಂತ್ರಜ್ಞಾನದ ಕಾಲ. ಈಗ ಯಾರೂ ಪುಸ್ತಕ ಓದುವುದಿಲ್ಲ. ಎಲ್ಲರೂ ಇ–ಬುಕ್ ಓದುತ್ತಾರೆ ಎಂಬಿತ್ಯಾದಿ ಮಾತುಗಳು ಕೇಳಿಬರುತ್ತಿದ್ದರು. ಕಾಲ ಅಷ್ಟೇನೂ ಬದಲಾಗಿಲ್ಲ. ಪುಸ್ತಕ ಪ್ರೀತಿ ಇರುವವರು ಎಲ್ಲಿದ್ದರೂ ಹುಡುಕಿಕೊಂಡು ಬಂದು ಓದುತ್ತಾರೆ’ ಎಂಬ ಕೃಷ್ಣ ಅವರ ಮಾತು ಪುಸ್ತಕ ಜಗತ್ತಿನ ಬಗ್ಗೆ ಆಶಾಭಾವನೆ ಮೂಡಿಸುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT