ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೂರ್ಣ ಸಾಮರ್ಥ್ಯ ಪ್ರದರ್ಶಿಸಿದೆವು: ದೋನಿ

Last Updated 22 ಏಪ್ರಿಲ್ 2014, 19:30 IST
ಅಕ್ಷರ ಗಾತ್ರ

ಅಬುದಾಭಿ (ಪಿಟಿಐ): ‘ಡೆಲ್ಲಿ ಡೇರ್‌ಡೆವಿಲ್ಸ್‌ ವಿರುದ್ಧದ ಪಂದ್ಯದಲ್ಲಿ ಪೂರ್ಣ ಸಾಮರ್ಥ್ಯದೊಂದಿಗೆ ಆಡಿದೆವು. ಇದು ನಮ್ಮ ತಂಡದ ನೈಜ ಶಕ್ತಿ’ ಎಂದು ಚೆನ್ನೈ ಸೂಪರ್‌ ಕಿಂಗ್ಸ್‌ ತಂಡದ ನಾಯಕ ಮಹೇಂದ್ರ ಸಿಂಗ್‌ ದೋನಿ ಹೇಳಿದರು.

ಇಲ್ಲಿ ಸೋಮವಾರ ನಡೆದ ಐಪಿಎಲ್‌ ಪಂದ್ಯದಲ್ಲಿ ದೋನಿ ಸಾರಥ್ಯದ ಚೆನ್ನೈ ಸೂಪರ್‌ ಕಿಂಗ್ಸ್ ತಂಡ ಡೇರ್‌ಡೆವಿಲ್ಸ್‌ ಎದುರು 93 ರನ್‌ ಗೆಲುವು ಸಾಧಿಸಿತು. ಮೊದಲು ಬ್ಯಾಟ್‌ ಮಾಡಿ ಸೂಪರ್‌ ಕಿಂಗ್ಸ್‌ ನೀಡಿದ್ದ 178 ರನ್‌ ಗುರಿಗೆ ಪ್ರತಿಯಾಗಿ ಡೆವಿಲ್ಸ್‌ 15.4 ಓವರ್‌ಗಳಲ್ಲಿ 84 ರನ್‌ ಕಲೆ ಹಾಕಿ ಆಲ್ಔಟ್‌ ಆಗಿತ್ತು. ಈ ಪಂದ್ಯದ ನಂತರ ದೋನಿ ಮಾತನಾಡಿದರು.

‘ಮೊದಲ ಪಂದ್ಯದಲ್ಲಿ ನಮ್ಮ ತಂಡದ ಬ್ಯಾಟಿಂಗ್‌ ಚೆನ್ನಾಗಿತ್ತು. ಆದರೆ, ಬೌಲರ್‌ ಗಳು ಹೆಚ್ಚು ರನ್‌ ಬಿಟ್ಟುಕೊಟ್ಟರು. ತಂಡದ ನಿಜವಾದ ಶಕ್ತಿ ಈ ಪಂದ್ಯದಲ್ಲಿ ಅನಾವರಣಗೊಂಡಿದೆ’ ಎಂದು ದೋನಿ ನುಡಿದರು.

‘ಇಲ್ಲಿನ ಪಿಚ್‌ ಕೊಂಚ ವೇಗದ ಬೌಲರ್‌ಗಳಿಗೆ ನೆರವಾಯಿತು. ನಮ್ಮ ತಂಡದ ಎಲ್ಲಾ ಬ್ಯಾಟ್ಸ್‌ಮನ್‌ಗಳು ಚೆನ್ನಾಗಿ ಆಡಿದರು. ನಾವು ಪ್ರತಿ ಪಂದ್ಯದಲ್ಲಿಯೂ ಫೀಲ್ಡಿಂಗ್‌ಗೆ ಹೆಚ್ಚು ಒತ್ತು ನೀಡುತ್ತೇವೆ’ ಎಂದು ‘ಮಹಿ’ ಹೇಳಿದರು.

ಸೂಪರ್‌ ಕಿಂಗ್ಸ್‌ ಎದುರು ತಮ್ಮ ತಂಡ ತೋರಿದ ಪ್ರದರ್ಶನದ ಬಗ್ಗೆ ಡೆವಿಲ್ಸ್‌ ನಾಯಕ ದಿನೇಶ್ ಕಾರ್ತಿಕ್‌ ಬೇಸರ ವ್ಯಕ್ತಪಡಿಸಿದ್ದಾರೆ. ‘ಎದುರಾಳಿ ತಂಡ ನೀಡಿದ್ದ ಗುರಿಯನ್ನು ಮುಟ್ಟಬಹುದಾಗಿತ್ತು. ಆದರೆ ಅದು ಸಾಧ್ಯವಾಗಲಿಲ್ಲ. ಮುಂದಿನ ಪಂದದಲ್ಲಿ ಈ ತಪ್ಪು ಮರುಕಳಿಸದಂತೆ ಎಚ್ಚರಿಕೆ ವಹಿಸುತ್ತೇವೆ’ ಎಂದು ವಿಕೆಟ್‌ ಕೀಪರ್‌ ಬ್ಯಾಟ್ಸ್‌ಮನ್‌ ಕಾರ್ತಿಕ್‌ ಹೇಳಿದರು.

ಶ್ರೇಷ್ಠ ಫೀಲ್ಡಿಂಗ್‌: ‘ನನ್ನ ಬೌಲಿಂಗ್‌ಗಿಂತ ನಮ್ಮ ತಂಡದ ಫೀಲ್ಡಿಂಗ್‌ ಚುರುಕಾಗಿತ್ತು.  ಉತ್ತಮ ಫೀಲ್ಡಿಂಗ್‌ ಮಾಡಿದ್ದರಿಂದ ಪ್ರತಿ ಎಸೆತವನ್ನೂ ಕರಾರುವಾಕ್ಕಾಗಿ ಹಾಕಲು ಸಾಧ್ಯವಾಯಿತು’ ಎಂದು ಸೂಪರ್‌ ಕಿಂಗ್ಸ್‌ ಪರ ಮೊದಲ ಪಂದ್ಯವನ್ನಾಡಿದ ಈಶ್ವರ್‌ ಪಾಂಡೆ ಹೇಳಿದರು. ಅವರು ಸೋಮವಾರದ ಪಂದ್ಯದಲ್ಲಿ ಎರಡು ವಿಕೆಟ್‌ ಪಡೆದು ಗಮನ ಸೆಳೆದರು. ಪಾಂಡೆ ಬೌಲಿಂಗ್‌ ಬಗ್ಗೆ ದಿನೇಶ್‌ ಕಾರ್ತಿಕ್‌ ಕೂಡಾ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT